ನೆನಪೇ ಸಂಗೀತ
ಪ್ರತಿಬಾರಿ ಸ್ಕೂಲ್ ಡೇ ಬಂದರೂ ಹೊಸ ಮಕ್ಕಳು ಬಂದರೂ ಈ ಪಿಳ್ಳಂಗೋವಿಯ ಚೆಲ್ವಕೃಷ್ಣನ ಹಾಡು ಅದಕ್ಕೆ ಡಾನ್ಸ್ ಮಾತ್ರ ಬದಲಾಗುತ್ತಲೇ ಇರಲಿಲ್ಲ. ಆ ಹಾಡು ಬಂದ ಕೂಡಲೇ ಮಾತು ನಿಲ್ಲಿಸಿ ನೋಡುವ ಪೋಷಕರೂ ಬದಲಾಗಿರಲಿಲ್ಲ. ಯಾವುದೇ ಶಾಲೆಯಲ್ಲಾಗಲಿ ಈ ಹಾಡು ಬರದೆ ಕಾರ್ಯಕ್ರಮವೂ ಸಂಪನ್ನವಾದ ಉದಾಹರಣೆಯಿರಲಿಲ್ಲ. ಹಾಡು ಅದರಲ್ಲೂ ದಾಸರ ಹಾಡು ಅಂದರೆ ವಿದ್ಯಾಭೂಷಣ ತೀರ್ಥ ಸ್ವಾಮೀಜಿಗಳು ಎಂದೇ ಪ್ರಸಿದ್ಧಿಯಾಗಿದ್ದ ಕಾಲವದು. ಬೆಳಿಗ್ಗೆ ಎದ್ದ ಕೂಡಲೇ ಟೇಪ್ ರೆಕಾರ್ಡರ್ ಗೆ ಕ್ಯಾಸೆಟ್ ತುರುಕಿ ಸುಪ್ರಭಾತ ಹಾಕುವ ಜಮಾನದಲ್ಲಿ ಕಪಾಟಿನ ಬಹುಭಾಗ ಜಾಗ ಆಕ್ರಮಿಸಿಕೊಂಡಿದ್ದು ಇವರ ಕ್ಯಾಸೆಟ್ ಗಳೇ. ಹೀಗೆ ಇವರ ಹಾಡು ಕೇಳುತ್ತಾ, ಅದನ್ನೇ ಡಾನ್ಸ್ ಮಾಡುತ್ತಾ, ಸ್ಪರ್ಧೆಗಳಲ್ಲಿ ಹಾಡಿ ಬಹುಮಾನ ಗೆಲ್ಲುತ್ತಾ ಹೈ ಸ್ಕೂಲ್ ಮೆಟ್ಟಿಲು ಹತ್ತಿದವಳಿಗೆ ಧ್ವನಿ ಮಾತ್ರವಲ್ಲ ಇವರೂ ಚೆಂದ ಅನ್ನಿಸಿತ್ತು. ಹಾಡು ಕೇಳುವಾಗ ಅವರು ಕಣ್ಮುಚ್ಚಿ ತನ್ಮಯರಾಗಿ ಹಾಡುತ್ತಿದ್ದಾರೆನೋ ಅನ್ನಿಸುತಿತ್ತು. ಹೀಗಿರುವಾಗ ಒಂದು ದಿನ ಮನೆಯಲ್ಲಿ ಗುಸು ಗುಸು ಪಿಸು ಮಾತು ಶುರುವಾಗಿತ್ತು. ಕಳ್ಳ ಹೆಜ್ಜೆ ಇಟ್ಟು ಒಳಗೆ ಹೋದರೆ ಆಚೆ ಹೋಗಿ ಓದೋದು ಆಡೋದೋ ಏನಾದರೂ ಮಾಡಿಕೊಳ್ಳಿ ಅನ್ನೋ ಗದರುವಿಕೆ ಕೇಳಿ ಹೊರಗೆ ಬಂದರೂ ಕಿವಿಗೆ ಅವರು ಮಾತು ಕೇಳಿಸಿತ್ತು. ಸ್ವಾಮೀಜಿಗಳು ಮದುವೆ ಆದರಂತೆ ಅನ್ನೋ ಆತಂಕದ, ಮುಂದೆ ಏನಾಗುತ್ತೋ ಅನ್ನೋ ಭಯದ ಮಾತುಗಳು ಅವು. ಇನ್ನೂ ನನ್ನಿಚ್ಚೆ, ನನ್ನಿಷ್ಟ ಎನ್ನುವ...