Posts

Showing posts from June, 2018

ಹಂಪಿ

ಜೂನ್ ನಲ್ಲಿ ಬಂದರೆ ಇಷ್ಟೊಂದು ಜನರೂ ಇರೋಲ್ಲ, ಒಂದೆರೆಡು ಮಳೆ ಬಿದ್ದಿದ್ದರೆ ನೆಲವೂ ತಂಪಾಗಿ ಹಸಿರು ಚಿಗುರಿರುತ್ತದೆ. ನಿಧಾನವಾಗಿ ನಿರಾಳವಾಗಿ ನೋಡಬಹುದು ಎಂಬ ಗೈಡ್ ಮಾತು ಅಲ್ಲಿಗೆ ಮರೆತು ಹೋಗದೆ ಒಳಗೆ ಸಿಂಬೆ ಸುತ್ತಿದ ಹಾವಿನಂತೆ ಮಲಗಿತ್ತು. ಸಮಯಕ್ಕಾಗಿ ಕಾಯುತ್ತಿತ್ತು. ಹಂಪಿ ಅನ್ನೋ ಹೆಸರೇ ಸಾಕು ಮೈ ರೋಮಾಂಚನಗೊಳ್ಳಲು. ಮೊದಲ ಸಲ ಹೋದಾಗ ಹಾಳು ಹಂಪಿ ಅನ್ನುವುದು ಅದೆಷ್ಟು ಅನ್ವರ್ಥಕವಾಗಿದೆ ಎನ್ನುವ ವಿಷಾದ, ಕ್ರೋಧ ಎಲ್ಲವೂ ಸೇರಿ ಒಂದು ರೀತಿಯ ಅಶಾಂತಿ ಮನಸ್ಸಿಗೆ ಕವಿದಿತ್ತು. ಯಾವುದೇ ಆದರೂ ಯಾವುದರಿಂದ ಆರಂಭವಾಗುತ್ತದೋ ಅಲ್ಲಿಂದಲೇ ಮುಕ್ತಾಯವಾಗುತ್ತದೆ ಅನ್ನೋದು ತ.ರಾ.ಸು ಮಾತು. ವಿಜಯನಗರ ಸಾಮ್ರಾಜ್ಯ ಶುರುವಾಗಿದ್ದು ಕಾಕತೀಯ ವಂಶದವರಿಂದ. ಕೊನೆಯ ರಾಜನೆಂದೆ ಉಲ್ಲೇಖಿಸಲ್ಪಟ ರಾಮರಾಯ ಸೇರಿದ್ದು ಅದೇ ಕಾಕತೀಯ ವಂಶಕ್ಕೆ. ಇತಿಹಾಸವೆಂದರೆ ಚಕ್ರ ಅದು ತಿರುಗುತ್ತಲೇ ಇರುತ್ತದೆ ಇದರ ಬಗ್ಗೆ ಸಂಶೋಧನೆ ಮಾಡಿ ಈ ತರಹದ ತುಂಬಾ ಉದಾಹರಣೆ ಕೊಟ್ಟಿದ್ದಾರೆ ನನ್ನ ಫ್ರೆಂಡ್ ಅನ್ನೋ ಅಣ್ಣನ ಮಾತು ಕೇಳಿದಾಗ  ಅರಿವಿಗೆ ಬಂದಾಗ ಒಂದು ಕ್ಷಣ ರೋಮಾಂಚನವಾಗಿತ್ತು. ಅದೊಂದು ಅಧಿಕಾರದ  ಕೇಂದ್ರ ಸ್ಥಾನ ಮಾತ್ರವಲ್ಲ, ಸಾಂಸ್ಕೃತಿಕ ಕೇಂದ್ರ ಸ್ಥಾನವೂ ಹೌದು. ನೈಸರ್ಗಿಕವಾಗಿ ದುರ್ಭ್ಯೇಧವಾದ ಜಾಗ. ಒಳಗಿನವರ ಸಹಾಯವಿಲ್ಲದೆ ಹೊರಗಿನವರಿಗೆ ಕಿಂಚಿತ್ತೂ ಜಾಗ ಕೊಡದ ಸ್ಥಳ. ಅಲ್ಲಿಂದ ಕಣ್ಣು ಹಾಯಿಸಿದರೆ ಸುಮಾರು ಮುನ್ನೂರು ಕಿ.ಮಿ ಗಳವರೆಗೂ ಹರಡಿದ ಕಲ್ಲು

ಮಳೆಗಾಲದ ಮಳೆ

ಮಳೆಯಿಲ್ಲ ಅಂತ ಬೈಕೊಂಡಿದ್ದು ಕೇಳಿಸ್ತೇನೋ ಕಣೆ ಒಂದೇ ಸಮನೆ ಸುರಿದು ಸಿಟ್ಟು ತೀರಿಸಿಕೊಳ್ತಾ ಇದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈ ಗಾಳಿ ನೋಡು, ರಾಮಮಂಟಪ ಮುಳುಗಬಹುದೇನೋ ಬರ್ತಿಯಾ ಮನೆಗೆ ಅಂತ ಚಿಕ್ಕಿ ಬೆಳ್ಬೆಳಿಗ್ಗೆ ಫೋನ್ ಮಾಡಿದ್ರೆ ರೆಕ್ಕೆ ಇರಬಾರದಿತ್ತ ಅನ್ನಿಸಿಬಿಡ್ತು. ಮಲೆನಾಡಿನ ಮಳೆ ಅನ್ನೋದು ಮರೆಯಾಗೆ ಬಿಡ್ತಾ ಅಂತ ಬೇಸರಿಸಿಕೊಳ್ಳುವ ವೇಳೆಗೆ ಸುರಿಯುತ್ತಿದೆ ಮಳೆ ಧಾರಾಕಾರವಾಗಿ. ಎಲ್ಲವನ್ನೂ ಕೊಚ್ಚಿ ಹೊಸತನ ತುಂಬಲು. ಬಾಲ್ಯ ಅಂದ್ರೆ ಊರು, ಊರು ಅಂದ್ರೆ ಮಳೆ. ಬದುಕಿನಲ್ಲಿ ಮಳೆ ಬೆಸೆದುಕೊಂಡಷ್ಟು ಇನ್ಯಾವುದೂ ಬೆಸೆದುಕೊಂಡಿಲ್ಲ. ಎದೆಯನ್ನು ಹಸನುಗೊಳಿಸಿ ನಳನಳಿಸ ಹಾಗೆ ಮಾಡೋದು ಮಳೆ ಮಾತ್ರ. ತನ್ನೆಲ್ಲಾ ಒಲವನ್ನು ಸುರಿಸುವ ಆಕಾಶ ಸುಮ್ಮನಾಗುತ್ತಿದ್ದಂತೆ ಒಮ್ಮೆ ಇಳೆಯನ್ನು ನೋಡಿ. ಪ್ರಸವಿಸಿ ಬೀಗುತ್ತಿರುತ್ತಾಳೆ. ಮಕ್ಕಳೋ ಚಿನ್ನಾಟವಾಡುತ್ತಾ ಇಡಿ ಪ್ರಕೃತಿಗೆ ಬಣ್ಣ ತುಂಬಿ ಮನೋಹರವಾಗಿಸಿರುತ್ತಾರೆ. ಅದರಲ್ಲೂ ಮಲೆನಾಡಿನ ಮಳೆಯ ಸೊಬಗೆ ಬೇರೆ, ಅದೊಂದು ತರಹ ರುದ್ರ ಮನೋಹರ. ಮಲೆನಾಡಿನ ಮಳೆಯೆಂದರೆ ಮಂದ್ರದಿಂದ ಶುರುವಾಗಿ ತಾರಕ್ಕೆರುವ ಸಂಗೀತದಂತೆ. ಎಲ್ಲಿಯೂ ಶ್ರುತಿ ತಪ್ಪುವುದಿಲ್ಲ, ಬದುಕಿನ ಶ್ರುತಿ ಮಾತ್ರ ಆಗಾಗ ಹದ ತಪ್ಪುತ್ತದೆ ಅಷ್ಟೇ. ಇಡೀ ವಾತಾವರಣಕ್ಕೆ ಸೋಮಾರಿತನದ ಕಳೆ ಕಳೆಗಟ್ಟುತ್ತದೆ. ಚಳಿಗೆ ಬೆದರಿ ಇನ್ನಷ್ಟು ಒಲೆಯ ಬದಿಗೆ ಸರಿದು ಮುದುರಿ ಮಲಗುವ ನಾಯಿಯಿಂದ ಹಿಡಿದು ಮನುಷ್ಯರವರೆಗೂ ಒಂದೇ ತರಹ.

ಹಂಸಗೀತೆ

ಕೋಟೆಎಂದರೆ ಬರೀ ಅಧಿಕಾರದ ಪ್ರತೀಕವಾ...ಈಗಿನ ರಾಜಕೀಯ ವೈಖರಿಯನ್ನು ನೋಡಿದಾಗ ಅಷ್ಟೇ ಅನ್ನಿಸುತ್ತೆ. ಆಗಿನ ಕಾಲದಲ್ಲಿ ರಾಜರು ಅಧಿಕಾರಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು, ಕಲೆಗೂ, ಸಂಸ್ಕೃತಿಗೂ, ಧರ್ಮಕ್ಕೂ ಕೊಟ್ಟಿದ್ದರು. ಪ್ರತಿಯೊಂದು ಒಂದಕ್ಕೊಂದು ಪೂರಕವಾಗಿಯೇ ಬೆಳೆದು ಬಂದಿತ್ತು. ಕೋಟೆ ಅಂದಕೂಡಲೇ ನೆನಪಾಗೋದು ಮೊದಲಿಗೆ ಚಿತ್ರದುರ್ಗ ಕೋಟೆಯೇ. ಕೊಟೆಯೆಂದರೆ ಕಲ್ಲು ಕಟ್ಟಡವಲ್ಲ ಅದು ಮಲಗಿ ನಿದ್ರಿಸುತ್ತಿರುವ ಇತಿಹಾಸ, ಪ್ರತಿಯೊಂದು ಕಲ್ಲಿಗೂ ತನ್ನದೇ ಆದ ಕತೆಯಿದೆ, ಮಿಡಿವ ಮೂಕ ಮನಸ್ಸಿದೆ, ಕೇಳುವ ಕಿವಿಗಾಗಿ ಕಾಯುವ ತಪಸ್ಸಿದೆ, ಮೌನವಾಗಿ ನಿಲ್ಲುವ ಧೀ ಶಕ್ತಿಯಿದೆ, ಆದರೆ ವ್ಯಥೆಯನ್ನು ಮೌನವಾಗಿ ಹೊದ್ದು ಮಲಗಿದೆ ಅನ್ನೋದು ಅರ್ಥವಾಗಬೇಕಾದರೆ ತ.ರಾ. ಸು ಬರೆದ ಕಾದಂಬರಿಗಳನ್ನು ಓದಲೇ ಬೇಕು. ಬದುಕು ತೀರಾ ಲೆಕ್ಕಾಚಾರದ ಹಿಂದ ಬಿದ್ದಾಗ ಪ್ರತಿಯೊಂದನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತೇವೆ. ಉಪಯೋಗವಿದ್ದದ್ದಷ್ಟಕ್ಕೆ ಮಾತ್ರ ಗಮನ ಕೊಡುತ್ತೇವೆ. ಉಳಿದೆಲ್ಲವು ನಗಣ್ಯವೆನಿಸುತ್ತದೆ. ಒಟ್ಟಿನಲ್ಲಿ ಯಾವುದು ಏನಾದರಾಗಲಿ ನಾನು ಮಾತ್ರ ಬದುಕಬೇಕು ಅನ್ನುವ ಸ್ವಭಾವ ಬದುಕಿಗೊಂದು ಪರಿಮಿತಿಯನ್ನು ಸೃಷ್ಟಿಸುತ್ತದೆ. ಆ ಪರಿಮಿತಿಯನ್ನು ಮೀರಿದಾಗ ಮಾತ್ರ ಮನಸ್ಸು ಕಾಲದ ಕಟ್ಟನ್ನು ಮೀರಿ ಗತಕಾಲದ ಗರ್ಭ ಪ್ರವೇಶಿಸುತ್ತದೆ. ಅರಸುತ್ತದೆ, ತಿಳಿದುಕೊಳ್ಳಲು ಪ್ರಯತ್ನಿಸುತ್ತದೆ. ಅಪೂರ್ವವಾದದ್ದು ಯಾವಾಗಲೂ ಆಳದಲ್ಲಿ ಮಾತ್ರ ಅಡಗಿ