Posts

Showing posts from 2017
ಅಷ್ಟು ದೂರದಿಂದಲೇ ಭೋರ್ಗೆರೆಯುವ ಸದ್ದು ಕೇಳುತಿದ್ದ ಹಾಗೆ ಮೈ ಮನವೆಲ್ಲಾ ಪುಳಕ ಆವರಿಸಿತು. ಕಣ್ಣು  ಸಾಧ್ಯವಾದಷ್ಟೂ ಅಗಲವಾಗಿ ತೆರೆದರೆ ಆಕಾಶವನ್ನು ಚುಂಬಿಸುವ ಕಡಲು ಕಾಣಿಸಿತು. ಈ ಕಡಲು ಅದೆಷ್ಟು ಕಾಡುತ್ತೆ ನನ್ನ ಅನ್ನೋದು ಮಾತಲ್ಲಿ ಹೇಳೋದಕ್ಕೆ ಆಗುವುದಿಲ್ಲ. ಅವನೆಡೆಗೆ ಮೊದಲಿಂದಲೂ ಮುಗಿಯದ ಸೆಳೆತ, ತೀರಲಾಗದ ವ್ಯಾಮೋಹ. ನೋಡಿದಷ್ಟೂ ತಣಿಯದ ದಾಹ. ಕಣ್ಣು ಬೇರೆಡೆತಿರುಗಿಸಲಾಗದಷ್ಟು ಮೋಹ.. ಅದೂ ಮೊರೆಯುತ್ತಿತ್ತು, ಕರೆಯುತಿತ್ತು. ಅಪ್ಪಳಿಸಿ ಬಂದು ಅಪ್ಪಲು ಪ್ರಯತ್ನಿಸುತ್ತಿತ್ತು. ಕಡಲು ಸದಾ ಅಚ್ಚರಿ. ಅದೇನು ಸೆಳೆತವೋ ಅವನಲ್ಲಿ, ಸಣ್ಣ ಪುಟ್ಟ, ತೊರೆ, ಹಳ್ಳ, ನದಿಗಳೆಲ್ಲವುದರ ಗುರಿ ಗಮ್ಯ ಒಂದೇ.  ಕಾಣದ ಕಡಲನ್ನು ಕಾಣುವುದು, ಹಾಗೂ ಕೂಡುವುದು. ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಸರಿಯೇ ಅವನನ್ನು ಸೇರಲೇಬೇಕು ಅನ್ನುವ ತಪನೆ ಹುಟ್ಟಿಸುವ ಅವನ ಆಕರ್ಷಣೆಯಾದರೂ ಏನು ಅನ್ನುವುದಕ್ಕೆ ಆಲೋಚಿಸಿದಾಗಲೆಲ್ಲ ಹೊಳೆಯುವುದು ಪ್ರೀತಿ ಒಂದೇ. ಅವನದೋ ವಿಶಾಲ ಹೃದಯ. ಬಂದವರನ್ನೆಲ್ಲಾ ಕೈ ಚಾಚಿ ಆಹ್ವಾನಿಸುವ, ಬಾಚಿ ತಬ್ಬಿ ತನ್ನೊಳಗೆ ಒಂದಾಗಿ ಕರಗಿಸಿಕೊಳ್ಳುವ ಶಕ್ತಿ. ಬರುವವರು ಲೆಕ್ಕವಿಲ್ಲದಷ್ಟು ಅವರೆಲ್ಲರನ ಅಸ್ತಿತ್ವ ಮರೆಸಿ ತಾನೇ ಆಗಿಬಿಡುವ ಅವನ ದೈತ್ಯ ಶಕ್ತಿ ಬಗ್ಗೆ ಹೆಮ್ಮೆಯ ಜೊತೆ ಅಸೂಯೆ ಕೂಡ. ಬಂದವರಾರಿಗೂ ಪ್ರತ್ಯೇಕ ಅಸ್ತಿತ್ವವೇ ಇಲ್ಲದಂತೆ ಅದು ಅವರ್ಯಾರಿಗೂ ಕಾಡದಂತೆ ತಾನೇ ತಾನಾಗಿ ಆವರಿಸಿ ಹಬ್ಬುವ ಅವನ ಚತುರತೆಗೆ ಖುಷಿ ಪಡಬ
ಭಾನುವಾರ ಬಂತೆಂದರೆ ಅದು ಅಭ್ಯಂಜನದ ಸಮಯ.ನಿಧಾನಕ್ಕೆ ಎದ್ದು ತಿಂಡಿ ತಿಂದು ಹೊರಗೆ ಆಡಲು ಹೋಗಬೇಕು ಅಂತ ರೆಡಿಯಾಗುವಾಗಲೇ ಹೊಂಚು ಹಾಕಿ ಹಿಡಿಯುವ ಬೇಟೆಗಾರನಂತೆ ಅಜ್ಜಿ ಪ್ರತ್ಯಕ್ಷಳಾಗುತ್ತಿದ್ದಳು. ಬಿಲ್ಲಿನ ಬದಲು ಎಣ್ಣೆಯ ಬಟ್ಟಲು ಹಿಡಿದು. ಮಂದವಾದ ಹರಳೆಣ್ಣೆಯನ್ನು ಒಂದು ಹನಿಯೂ ನೆಲಕ್ಕೆ ಜಾರದಂತೆ ಬೊಗಸೆಯಲ್ಲಿ ಸುರಿದು ಅಷ್ಟೇ ನಾಜೂಕಾಗಿ ನೆತ್ತಿಗೆ ಒತ್ತಿ ತನ್ನ ಪುಟ್ಟದಾದ ಕೈಯಿಂದ ಹದವಾಗಿ ತಿಕ್ಕುತ್ತಿದ್ದರೆ ಅದು ಮಳೆಗಾಲದ ನೀರಿನಂತೆ ಜಾಗ ಮಾಡಿಕೊಂಡು ತೊರೆಯಾಗಿ, ಜಲಪಾತವಾಗಿ ಇಳಿದು ಮುಖಕ್ಕೆ ಮುತ್ತಿಕ್ಕುತ್ತಿತ್ತು. ವಾರಕ್ಕೊಂದು ಸಾರಿ ನೆತ್ತಿಗೆ ಎಣ್ಣೆ ಬೀಳದಿದ್ದರೆ ಕಣ್ಣುರಿ ಬರುತ್ತೆ. ನೆತ್ತಿ ಕಾಯಿಸಬಾರದು. ನೋಡು ಹೇಗೆ ಸುಡ್ತಾ ಇದೆ. ಹಾಳಾದವಳು ಬಿಸಿಲಿಗೆ ಹೋಗಬೇಡಾ ಅಂದ್ರೂ ಮೂರ್ಹೊತ್ತೂ ಅಲ್ಲೇ ಸಾಯ್ತಿ ಅಂತ ಬೈಯುತ್ತಿದ್ದರೆ ಒಳಗೆ ನಿಧಾನಕ್ಕೆ ಇಳಿಯುತ್ತಿದ್ದ ಹರಳೆಣ್ಣೆಯ ತಂಪಿಗೆ ಅದು ಜೋಗುಳದಂತೆ ಭಾಸವಾಗಿ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತಿತ್ತು. ನೆತ್ತಿಗೆ ಬಡಿದು ಅಷ್ಟೂ ಎಣ್ಣೆಯನ್ನು ಇಳಿಸಿದ ಮೇಲೆ ಒಂದು ಬಟ್ಟಲಿಗೆ ಎಳ್ಳೆಣ್ಣೆಯನ್ನು ಸುರಿದು ಹೋಗು ಮೈಗೆಲ್ಲಾ ಹಚ್ಚಿಕೊಂಡು ಓಲೆ ಉರಿ ಮುಂದೆ ಮಾಡು ಎಂದು ಆ ಏಕಾಂತದಿಂದ ಎಬ್ಬಿಸಿ ಬಚ್ಚಲಿಗೆ ಅಟ್ಟುತ್ತಿದ್ದರೆ ಅವಳನ್ನು ಬೈದುಕೊಳ್ಳುತ್ತಲೇ ಬಿಡಲಾರೆ ಅನ್ನೋ ರೆಪ್ಪೆಗಳನ್ನು ಬಲವಂತವಾಗಿ ಬೇರ್ಪಡಿಸಿ ಹೆಜ್ಜೆ ಎತ್ತಿಡುತ್ತಿದ್ದೆ. ಅಭ್ಯಂಜನ ಅಂದರೆ ಅವತ್ತು ಬಚ್ಚಲ ಒ
ಶ್ರಾವಣ ಮಾಸದಲ್ಲಿ ಜರುಗುವ ಪುರಾಣ ವಾಚನ ಸಂದರ್ಭದಲ್ಲಿ ಚನ್ನ ಬಸವ ಪುರಾಣ ಕೇಳಿದ ಜನಗಳು ಉಕ್ಕಿ ಬಂದ ಭಕ್ತಿಯ ಭಾವದಲ್ಲಿ ತಮಗೂ ಲಿಂಗಧಾರಣೆ ಮಾಡಬೇಕು ಎಂದು ಕೇಳಿದ ಸ್ವಾಮಿಗಳು ಒಪ್ಪಿ ಲಿಂಗಧಾರಣೆ ಮಾಡಿ ಇಂದಿನಿಂದ ಶಿವಭಕ್ತರಾದಿರಿ ಇನ್ನು ಮೇಲೆ ಒಳ್ಳೆಯ ಕೆಲಸವನ್ನೇ ಮಾಡಿ ಶಿವಕೃಪೆಗೆ ಪಾತ್ರರಾಗಿ ಎಂದು ಆಶೀರ್ವಾದ ಮಾಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತಾರೆ. ಮೊದಲೇ ದಂಡಿನ ಜನ, ಉತ್ಸಾಹ, ಆವೇಶ ಎರಡೂ ಜಾಸ್ತಿಯೇ. ಭಕ್ತಿಗೆ ಮರುಳಾದಂತೆ ವೇಶ್ಯೆಯ ಮೋಹಕ್ಕೂ ಮರುಳಾಗಿ ಅವಳ ಕೋರಿಕೆಯಂತೆ ಧರಿಸಿದ್ದ ಲಿಂಗವನ್ನು ಅವಳಿಗೆ ಒಪ್ಪಿಸಿ ಮೈ ಮರೆಯುತ್ತಾರೆ. ನೀನು ಕಟ್ಟಿಸಿಕೊಳ್ಳಲು ಲಾಯಕ್ಕಿಲ್ಲ ಅಂದ ಗುರುವಿನ ಮಾತಿನಿಂದ ಅವಮಾನಿತಳಾದ ಅವಳು ಅಷ್ಟೂ ಲಿಂಗವನ್ನು ಅವರ ಎದರು ಹಿಡಿದು ಸವಾಲು ಹಾಕಿ ಅವಮಾನಿಸುತ್ತಾಳೆ. ಸಿಡಿದ ಗುರು ಇಂಥ ಕೆಲಸ ಮಾಡಿದವರಿಗೆ ನೀರು ಬೆಂಕಿ ಕೊಡಬೇಡಿ ಅಂತ ಕಟ್ಟು ಮಾಡಿ ಅಜ್ನಾಪಿಸುತ್ತಾರೆ. ಗುರುಶಾಪ ಕೇಳಿ ಕಂಗಾಲಾದ ದಂಡಿನ ಜನ ನಾಯಕರು ಊರಿಗೆ ಬಂದಾಗ ಅವರೆದುರು ಕ್ಷಮೆಗಾಗಿ ತಮ್ಮ ಅಹವಾಲು ಸಲ್ಲಿಸುತ್ತಾರೆ. ದಂಡಿನ ಜನರ ಬಲ, ಹಾಗೂ ಬಲಹೀನತೆ ಎರಡೂ ಅರಿತಿದ್ದ ನಾಯಕ ಅವರಿಗಾಗಿ ಮರುಗಿ ಅಭಯ ನೀಡುತ್ತಾನೆ. ಅದರಂತೆ ಗುರುಮನೆಗೆ ಆ ವಿಷಯದ ಬಗ್ಗೆ ಮಾತಾಡಲು ಬರುವ ನಾಯಕ ಅವರನ್ನು ಕ್ಷಮಿಸಲು ಕೇಳಿದಾಗ ತಪ್ಪು ಯಾರೇ ಮಾಡಿದರೂ ಒಂದೇ ಸಾದ್ಯವೇ ಇಲ್ಲಾ ಎಂದು ಗಟ್ಟಿಯಾಗಿ ನಿಲ್ಲುವ ಗುರುಗಳು,  ಅರಸನಾಗಿ ಪ್ರಾರ್ಥಿಸುತ್ತಿದ್
ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ, ಮಾಡುವ ಪ್ರತಿ ಕೆಲಸದಲ್ಲೂ ದೇಹದ ಜೊತೆ ಮನಸ್ಸನ್ನೂ ಸಂಯೋಗಿಸಿ ಮಾಡುವ ಕ್ರಿಯೆ. ಸೃಷ್ಟಿಯ ರಚನೆ ಎಷ್ಟು ಅದ್ಭುತ ಹಾಗೂ ಸುಂದರವಾಗಿದೆ ಎಂದರೆ ಪ್ರತಿಯೊಂದೂ ತನ್ನ ಕೆಲಸವನ್ನು ತಾನು ಶ್ರದ್ದೆಯಿಂದ ಹಾಗೂ ಶಿಸ್ತಿನಿಂದ ನಡೆಸಿಕೊಂಡು ಹೋಗುತ್ತದೆ. ನಮ್ಮ ದೇಹದ ಅಂಗಗಳ ಕಾರ್ಯ ವೈಖರಿಯನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ನಾವು ಗಮನಿಸುತ್ತಿಲ್ಲ ಎಂದು ಯಾವ ಅಂಗವೂ ಅಸಹಿಷ್ಣುತೆಯ ನೆಪವೊಡ್ಡಿ ತನ್ನ ಕಾರ್ಯ ನಿಲ್ಲಿಸಿ ಮುಷ್ಕರ ಹೂಡಿಲ್ಲ.ಯಾವುದೇ ಕೆಲಸವನ್ನಾಗಲಿ ಗಮನವಿಟ್ಟು ಮಾಡಿದಾಗ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಿಗುವ ಫಲಿತಾಂಶ ಹಾಗೂ ಕಾಟಾಚಾರಕ್ಕೆ ಮಾಡಿದಾಗ ಸಿಗುವ ಪಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ತನ್ನನ್ನು ಸರಿಯಾಗಿ ಅರಿಯದೆ ಇನ್ನೊಬ್ಬರನ್ನು ತಿಳಿಯಲು ಸಾದ್ಯವಿಲ್ಲ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಮಾರ್ಗವೇ ಯೋಗ. ಹೊರ ಪ್ರಪಂಚವನ್ನು ನಮಗೆ ಅನುಕೂಲಕರವಾಗಿ ನಿರ್ಮಿಸಿಕೊಳ್ಳುವ ನಾವು ನಮ್ಮೊಳಗಿನ ಪ್ರಪಂಚವನ್ನು ಮರೆತೇ ಬಿಟ್ಟಿರುತ್ತೇವೆ. ಉದಾಸೀನ ಮಾಡಿರುತ್ತೇವೆ. ಪ್ರತಿಯೊಂದು ಭಾವದ ಜನ್ಮವೂ ಒಳ ಪ್ರಪಂಚದಲ್ಲೇ, ಬದುಕಿನ ಆರಂಭವೂ ಅಲ್ಲೇ. ಹಾಗಾಗಿ ನಮ್ಮ ಗಮನ ಜಾಸ್ತಿ ಇರಬೇಕಾಗಿದ್ದೂ ಅಲ್ಲೇ. ಹೊರಗಿನ ಘಟನೆಗಳನ್ನು ನಾವು ನಿಯಂತ್ರಿಸಲಾರೆವು, ಆದರೂ ಪ್ರಯತ್ನಿಸುತ್ತೇವೆ, ನಿರಾಶರಾಗುತ್ತೇವೆ. ನಮ್ಮೊಳಗಿನ ಸಾಮ್ರಾಜ್ಯ ನಮ್ಮಧೀನ ಆದರೆ ಮರೆತು ಅರಾಜಕತೆ ಸೃಷ್ಟಿಸುತ

ಕಸ್ತೂರಿ ಕಂಕಣ.

ಸರಾಗವಾಗಿ ಹರಿಯುತಿದ್ದ ನದಿಯೊಂದಕ್ಕೆ ಅಡ್ಡಲಾಗಿ ಬಂದ ಮರದ ತುಂಡಿನಂತೆ ಇದ್ದಕ್ಕಿದ್ದ ಹಾಗೆ ಬರುವ ಸೀರ್ಯದ ಪತ್ರ, ಮದುವೆಯ ಬಗೆಗಿನ ಅಪೇಕ್ಷೆ ತಿಳಿನೀರ ಕೊಳದಲ್ಲಿ ಬಿದ್ದ ಕಲ್ಲಿನಂತೆ ಅಲೆಯನ್ನು ಎಬ್ಬಿಸುತ್ತದೆ. ಯಾವ ಅಲೆಯ ಭಾವ ಯಾವುದು ಎಂದು ಗುರುತಿಸುವುದು ಹೇಗೆ? ಅದರಲ್ಲೂ ಹಾವಿನ ಹೆಡೆಯ ಕೆಳಗೆ ಕುಳಿತಿರುವವ ಮೈಯೆಲ್ಲಾ ಕಣ್ಣಾಗಿರಬೇಕು, ಕಿವಿಯಾಗಿರಬೇಕು. "ಅಕಾರಣ ಮೈತ್ರಿ, ಅಕಾರಣ ಪ್ರಶಂಸೆ, ಅಕಾರಣ ಆಶ್ವಾಸನೆಗಳೆಲ್ಲವೂ ಸಂದೇಹಕ್ಕೆ ಕಾರಣವಾಗುವ ವಿಷಯಗಳೇ ಅನ್ನುವ ನಾಯಕನ ಮಾತು ಮೇಲ್ನೋಟಕ್ಕೆ ಅಕಾರಣ ಎನ್ನಿಸುವ ಎಲ್ಲದರಲ್ಲೂ ಒಂದು ಗಹನವಾದ ಕಾರಣ ಇದ್ದೆ ಇರುತ್ತದೆ ಅನ್ನುವುದುದನ್ನ ಸೂಚಿಸುತ್ತದೆ. ಪ್ರಕೃತಿಯಲ್ಲಿ ಯಾವುದೂ ಅಕಾರಣವಲ್ಲ ಅನ್ನುವ  ಮತ್ತದೇ ನಂಬಿಕೆಗೆ ಬಂದು ನಿಲ್ಲುತ್ತೇನೆ ನಾನು. ಶತ್ರುವನ್ನು ಶತ್ರುವಾಗಿಯೇ ನೇರವಾಗಿ ಎದುರಿಸಲು ಅಸಾಧ್ಯವಾದಾಗ ಹೊಳೆಯುವ ಆಲೋಚನೆಯೇ ಮಿತ್ರರಂತೆ ನಟಿಸಿ ಇರಿಯುವುದು. ಬದುಕಿನ ದೊಡ್ಡ ಭೀತಿ ಎಂದರೆ ಅದು ಶತ್ರುವಲ್ಲ ಹಿತಶತ್ರು. ಬೆನ್ನಿಗೆ ಕಣ್ಣಿಲ್ಲ ಅನ್ನುವುದನ್ನ ಅರಿತು ಅದನ್ನು ಉಪಯೋಗಿಸಿಕೊಳ್ಳುವ ಇವರ ಕ್ರೌರ್ಯ ಜಗತ್ತಿನ ಅತಿ ದೊಡ್ಡ ಕ್ರೌರ್ಯ ಅನ್ನಿಸುತ್ತದೆ ಯಾವಾಗಲೂ. ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಬಹಳಷ್ಟು ಸಫಲವಾಗುವ ಸೀರ್ಯ, ಹಾಗೂ ತರಿಕೇರಿ ಕುಟಿಲತನಕ್ಕೆ ಉತ್ಕೃಷ್ಟ ಉದಾಹರಣೆಯಾಗಿ ನಿಲ್ಲುತ್ತಾರೆ. ಒಮ್ಮೆ ಬದುಕಿನತ್ತ ದೃಷ್ಟಿ ಹರಿಸಿ ಸಿಹಿಯ ಹೆಸರಿನ ಸ

ವಿಜಯೋತ್ಸಾಹ

ಯುದ್ಧವೂ ಬೇಡಾ, ಸಾವು ನೋವೂ ಬೇಡಾ ಅಂತ ಮನಸ್ಸಿಗೆ ಅರ್ಥಮಾಡಿಸುವ, ರಣೋತ್ಸಾಹಕ್ಕಾಗಿ ತುಡಿಯುವ ಮನಸ್ಸನ್ನು ಸಮಾಧಾನ ಪಡಿಸುವ ಕಾರ್ಯದಲ್ಲಿದ್ದಾಗಲೇ ಆಗಮಿಸುವ ಸೀರ್ಯದ ವಕೀಲರು ಆಗಮಿಸಿ ಹೊಯ್ದಾಡುವ ದೀಪಕ್ಕೆ ಇನ್ನಷ್ಟು ಗಾಳಿ ಬೀಸಿದ ಹಾಗಾಗುತ್ತದೆ. ತಮ್ಮ ಬಲವನ್ನು ಪ್ರಚುರ ಪಡಿಸುವ, ನೆಲೆಯನ್ನು ಭದ್ರಗೊಳಿಸುವ ಆಶಯದೊಂದಿಗೆ ದುರ್ಗವನ್ನು ವಶಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು ಅನ್ನುವ ನೀರಿಕ್ಷೆಯಲ್ಲಿ ತಮ್ಮ ಉಳಿವಿಗಾಗಿ ಇನ್ನೊಬ್ಬರ ಸ್ವಾಭಿಮಾನವನ್ನು ಒತ್ತೆಯಾಗಿಸಿ ಕೊಳ್ಳುವ ಪ್ರಯತ್ನಕ್ಕೆ ಮುನ್ನುಡಿಯಾಗುತ್ತದೆ.  ನಮ್ಮ ಬಲ ಜಗತ್ತಿಗೆ ತಿಳಿಯಬೇಕಾದರೆ ಇನ್ಯಾರೋ ಬಲವಂತ ನಮ್ಮ ಅಡಿಯಾಗಬೇಕು. ಎಳೆಯ ಬಾಳು ವ್ಯವಸ್ಥಿತವಾಗಿ ಬೆಳೆಯುವುದಕ್ಕೆ ಶಿಸ್ತು ಎಷ್ಟು ಅಗತ್ಯವೋ, ಮುಂದೆ ಬಾಳಿನ ಹೋರಾಟಗಳನ್ನು ಎದುರಿಸಬೇಕಾದರೆ ಚಿಕ್ಕಂದಿನಿಂದಲೇ ನಿರ್ಭಯವೂ ಅಭ್ಯಾಸವಾಗಿರಬೇಕು ಅನ್ನುವ ನಾಯಕನ ಮಾತು ಮಕ್ಕಳ ಬೆಳವಣಿಗೆ ಹೇಗಿರಬೇಕು ಅನ್ನುವುದನ್ನ ವಿವರಿಸುತ್ತದೆ. ಇಂದು ತಂದೆ ತಾಯಿಗೆ ಹೆದರಿದ ಮಕ್ಕಳು ನಾಳೆ ನೆರಳಿಗೂ ಹೆದರುವ ಅಂಜುಬುರುಕರಾಗಿರುತ್ತಾರೆ ಅನ್ನುವುದು ಎಷ್ಟು ಸತ್ಯವೋ ಇಂದು ತಂದೆ ತಾಯಿಗೆ ಗೌರವ ಕೊಡದ ಮಕ್ಕಳು ನಾಳೆ ಯಾರಿಗೂ ಗೌರವ ಕೊಡಲಾರರು ಅನ್ನೋದೂ ಅಷ್ಟೇ ಸತ್ಯ. ತನ್ನದನ್ನು ತಾನು ಉಳಿಸಿಕೊಂಡು ತನ್ನ ಗೌರವವನ್ನು ರಕ್ಷಿಸಿಕೊಂಡು ಬದುಕಬೇಕೆನ್ನುವ ಮನುಷ್ಯ ಕತ್ತಿಯನ್ನು ಹಿಡಿದೇ ಬದುಕಬೇಕು ಅನ್ನುವ ಮಾತು ಈ ಕ್ಷಣಕ್ಕೂ ಪ್ರಸ್ತುತ,

ತಿರುಗುಬಾಣ

ರಕ್ತರಾತ್ರಿ ಓದಿ ಕೆಳಗಿಡುವ ಹೊತ್ತಿಗೆ ಮೈಯ ರಕ್ತವೂ ಕುದಿದು ನೆತ್ತರಿನ ದಾಹ ಉಂಟಾಗುತ್ತದೆ. ಅಷ್ಟರಮಟ್ಟಿಗೆ ತ.ರಾ.ಸು ನಮ್ಮನ್ನು ಕತೆಯೊಳಗೆ ಎಳೆದುಕೊಂಡು ಅರಿವಿಲ್ಲದಂತೆ ನಾವೂ ಪಾತ್ರವಾಗುವ ಹಾಗೆ ಮಾಡುತ್ತಾರೆ. ಮನುಷ್ಯನ ಮೂಲಭೂತ ಗುಣವೇ ಈ ಗುರುತಿಸಿಕೊಳ್ಳುವಿಕೆ ಅನ್ನಿಸುತ್ತದೆ. ನಾವು ಗೊತ್ತಿಲ್ಲದೇ ಯಾವುದಾದರೂ ಒಂದರ ಜೊತೆ ಗುರುತಿಸಿಕೊಂಡು ಬಿಡುತ್ತೇವೆ. ಹಾಗೆ ಗುರುತಿಸಿ ಕೊಂಡ ಕ್ಷಣದಿಂದ ಅದರ ಸಂಬಂಧಿ ರಾಗ ದ್ವೇಷಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅಸಲಿಗೆ ಹಾಗೆ ಗುರುತಿಸಿಕೊಳ್ಳುವುದು ಅನಿವಾರ್ಯಾವಾ? ಇನ್ನೊಬ್ಬರನ್ನು ಪ್ರಶ್ನಿಸಿದಷ್ಟು ಸರಳವಲ್ಲ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವುದು. ದುಃಖದ ಕಣ್ಣೀರು ಪ್ರತಿಕಾರದ ಬೆಂಕಿಯನ್ನು ಹೊತ್ತಿಸುವುದೇ ಸೋಜಿಗ. ಈ ವಿಷಯದಲ್ಲಿ ಮಾತ್ರ ನೀರು ಬೆಂಕಿ ಅಪ್ಪಟ ಸ್ನೇಹಿತರಂತೆ ವರ್ತಿಸುತ್ತದೆ. ಹೀಗೆ ಪ್ರತೀಕಾರದ ಬೆಂಕಿಯಲ್ಲಿ ಬೇಯುವ ಮೊದಲ ವ್ಯಕ್ತಿ ಗಿರಿಜೆ. ಬೆಂಕಿಯದು ಹಬ್ಬುವ ಗುಣ. ನಿಯಂತ್ರಣವಿಲ್ಲದೇ ಹೋದರೆ ಅದು ಹಬ್ಬುತ್ತಾ ಸಿಕ್ಕಿದ್ದನ್ನು ತನ್ನೊಡಲಿಗೆ ಎಳೆದು ಕೊಳ್ಳುತ್ತಾ ಹೋಗುತ್ತದೆ. ಹೀಗೆ ಸಿಲುಕುತ್ತಾ ಹೋಗುವವರು ಪರಶುರಾಮಪ್ಪ, ಭರಮಣ್ಣ, ಊರ ಗೌಡರು ಸಾಲಿಗೆ ಸೇರುವುದು ಕಲ್ಲುಮಠದ ಸ್ವಾಮಿಗಳು ಸಹ. ದುಷ್ಟರಿಗಿಂತ ಅಪಾಯಕಾರಿ ಆ ದುಷ್ಟತನವನ್ನು ವಿರೋಧಿಸದೆ ಮೌನವಾಗಿ ಇರುವವರು ಅನ್ನೋದನ್ನ ಇಡೀ ಪುಸ್ತಕ ಬಿಡಿಸಿಡುತ್ತಾ ಹೋಗುತ್ತದೆ. ನಮ್ಮ ನಮ್ಮ ನೆಲೆಯಲ

ಹೊಸ ಹಗಲು.

ರಾತ್ರಿ ನಿದ್ದೆಯೆಂಬ ಮರಣವನ್ನು ಕಳೆದು ಮುಂಜಾವಿನ ಪ್ರತಿ ಉದಯವೂ ಒಂದು ಹೊಸ ಹಗಲೇ. ದಳವಾಯಿಯ ಅಂತ್ಯದೊಂದಿಗೆ ಕರಾಳ ರಾತ್ರಿ ಮುಗಿದು ಹಾಗೆಯೇ ದುರ್ಗಕ್ಕೂ ಹಗಲಾಗಿತ್ತು. ಹೊಸನಾಯಕನ ಬರುವನ್ನು ಕಾಯ್ದ, ದುರ್ಗದ ಅಭಿವೃದ್ಧಿಯ, ಕನಸಿನ ಹೊಸ ಹಗಲು. ಅತ್ತ ಬಿಸಿಲಿನ ಧಗೆಯಲ್ಲಿ ಕಣ್ಣಲ್ಲಿ ಕತ್ತಲೆಯನ್ನು ತುಂಬುವ ಬೆಳಕಿನಲ್ಲಿದ್ದ ಭರಮಣ್ಣನಿಗೂ ಅದು ಹೊಸಹಗಲಿಗೆ ನಾಂದಿಯಾಗಿತ್ತು. ಕತ್ತಲೆಯಲ್ಲೂ ಕಣ್ಣು ಕಾಣದು, ಅತಿ ಬೆಳಕಲ್ಲೂ ಕಣ್ಣು ತೋರದು. ಎರಡೂ ದೃಷ್ಟಿಯನ್ನು ಮಂಕಾಗಿಸುತ್ತದೆ. ದುರ್ಗದ ಬೆಟ್ಟದಷ್ಟೇ ದುರ್ಗಮ ಕನಸು ಅವನದು. ಅದನ್ನು ನನಸಾಗಿಸಿ ಕೊಳ್ಳುವಲ್ಲೇ ಅವನ ಪ್ರಯತ್ನ. ಯಾವುದೇ ಕನಸನ್ನು ಪೂರ್ಣ ಪ್ರಮಾಣದ ಶಕ್ತಿಯನ್ನು ವ್ಯಯಿಸಿ ಕಿಂಚಿತ್ತೂ ಸಂದೇಹವಿಲ್ಲದೆ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಭರಮಣ್ಣ ಸಾಕ್ಷಿಯಾಗಿ ನಿಲ್ಲುತ್ತಾನೆ. ನನ್ನಿಂದ ಆಗುತ್ತಾ ಅನ್ನೋ ಸಣ್ಣ ಸಂದೇಹ ಹಡಗಿನ ಸಣ್ಣ ಕಿಂಡಿಯಂತೆ ಮುಳುಗಿಸಿ ಬಿಡುತ್ತದೆ. ನಿದ್ದೆಯಲ್ಲಿ ನಾಯಕನಾಗುವ ಕನಸು, ಎದ್ದಾಗ ಎದುರಿನಲ್ಲಿ ಸ್ವಾಮಿಗಳು, ಗೊಂದಲದ ಮನಸ್ಥಿತಿಯಲ್ಲಿ ಭರಮಣ್ಣ, ಕನಸುಗಳು ವಿಚಿತ್ರವಾಗಿ, ಅದ್ಭುತವಾಗಿ, ಅಲೌಕಿಕವಾಗಿ ಇದ್ದ ಮಾತ್ರಕ್ಕೆ ಅದು ಸುಳ್ಳಾಗಲಾರದು, ಇಂದು ಕಂದ ಕನಸು ಎಚ್ಚತ್ತಾಗಿನ ಮನದ ಬಯಕೆಯ ಪ್ರತಿಬಿಂಬವೋ, ನಾಳೆ ಬರಲಿರುವ ಘಟನೆಯ ಮುಂಗುರುಹೂ ಆಗಿರಬಹುದು ಅನ್ನುವ ಸ್ವಾಮಿಗಳು ಕನಸು ಸುಳ್ಳಲ್ಲ, ಒಳಗಿರುವುದೇ ಹೊರಬರುವುದು ಅನ್ನು

ರಕ್ತರಾತ್ರಿ.

ಕಂಬನಿ ತುಂಬಿ ಮಬ್ಬಾದ ಕಣ್ಣುಗಳಿಂದಲೇ ಎತ್ತಿಕೊಂಡಿದ್ದು ರಕ್ತರಾತ್ರಿ. ಹೆಸರೇ ಭೀಭತ್ಸ ಅನ್ನಿಸೋ ಹಾಗಿತ್ತು. ರಾತ್ರಿ ಇರೋದೇ ವಿಶ್ರಾಂತಿಗೆ ಅನ್ನಿಸಿದರು ಯಾವ್ಯಾವುದಕ್ಕೆಲ್ಲಾ ವಿಶ್ರಾಂತಿ ಸಿಗುತ್ತೆ ಅನ್ನೋದರ ಲೆಕ್ಕ ಹಾಕಿದರೆ ಕೆಲವೊಮ್ಮೆ ಮೈ ಜುಮ್ ಅನ್ನುತ್ತೆ. ತ.ರಾ.ಸು ವೈಶಿಷ್ಟ್ಯವೇ ಅವರು ಇಡುವ ಹೆಸರುಗಳು. ಇಡೀ ಪುಸ್ತಕದ ಆಶಯವನ್ನು, ಹೂರಣವನ್ನು ಒಂದು ಪದದಲ್ಲಿ ಹೇಳುವುದಿದೆಯಲ್ಲ ಅದು ಸುಲಭ ಸಾಧ್ಯವಲ್ಲ. ಅಲ್ಲಿ ಶುರುವಾದ ನೆತ್ತರಿನ ದಾಹ ಇಲ್ಲೂ ಮುಂದುವರಿಯುತ್ತದೆಯೇನೋ  ಅನ್ನೋ ಭಾವದಲ್ಲೇ ಪುಸ್ತಕ ಬಿಡಿಸಿದೆ. ಏನೇ ಘಟಿಸಿದರೂ ಪ್ರಕೃತಿ ಎಷ್ಟು ಸಹಜವಾಗಿ ತೆಗೆದುಕೊಂಡು ತನ್ನ ಪಾಡಿಗೆ ತಾನು ತನ್ನ ಕೆಲಸ ನಿರ್ವಹಿಸುತ್ತದೆ. ಯೋಚಿಸುವ, ಬುದ್ಧಿ ಇರುವ ಮನುಷ್ಯ ಮಾತ್ರ ಆಗಿ ಹೋಗಿದ್ದಕ್ಕೆ ಕೊರಗುತ್ತಾನೆ, ಹಳಹಳಿಸುತ್ತಾನೆ, ಕೆಲವೊಮ್ಮೆ ತನ್ನ ಕರ್ತವ್ಯವನ್ನೂ ಮರೆತುಬಿಡುತ್ತಾನೆ. ಒಣ ವೇದಾಂತವನ್ನು ಧರಿಸಿ ಕುರುಡನಾಗುತ್ತಾನೆ. ಜಗತ್ತಿನಲ್ಲಿ ಕಣ್ಣಿಲ್ಲದ ಕುರುಡರಿಗಿಂತ ಕಣ್ಣಿರುವ ಕುರುಡರೇ ಜಾಸ್ತಿಯೇನೋ. ಅಂಥಹ ಕುರುಡುತನದಿಂದ, ದುಃಖಕ್ಕೆ ವೇದಾಂತದ ಹೊದಿಕೆ ಹೊಚ್ಚಿ ಕುಳಿತ ಲಿಂಗಣ್ಣ ನಾಯಕನೂ ಎಚ್ಚರವಾಗುವ ಅನಿವಾರ್ಯತೆ ಎದುರಾಗುತ್ತದೆ. ಮನಸ್ಸಿನಲ್ಲಿ ಅದುಮಿಟ್ಟ ಯಾವ ಬಯಕೆಗಳೂ ಸಾಯುವುದಿಲ್ಲ. ಅದು ಸಮಯಕ್ಕಾಗಿ ಕಾಯುತ್ತದೆ. ಅಲ್ಲಿಯವರೆಗೂ ಅದು  ನಮ್ಮ ನಿರೀಕ್ಷೆಯನ್ನೂ ಮೀರಿ ಬೆಳೆದಿರುತ್ತದೆ. ಯಾವದೂ ಒಳಗೆ ಉಳಿಯುವುದಿಲ್ಲ ಒಂದ

ಕಂಬನಿಯ kuyilu

ದುರ್ಗದ ಬೆಟ್ಟ ಇಳಿಯುವಾಗಲೇ ನಿರ್ಧರಿಸಿದ್ದೆ. ಇದರ ಕುರಿತು ಬಂದಿರುವ ಅಷ್ಟೂ ಕಾದಂಬರಿ ಓದಲೇ ಬೇಕು ಅಂತ. ಕಲ್ಲುಗಳಿಗೆ ಮಾತು ಬರಬಾರದಿತ್ತಾ ಅಂತ ಯೋಚಿಸುತ್ತಾ ಬಂದವಳಿಗೆ ಅವುಗಳಿಗೆ ದನಿಯಾದ ತ.ರಾ.ಸು ಸಿಕ್ಕಿದ್ದು. ಮೊದಲ ಪುಸ್ತಕವೇ ಕಂಬನಿಯ ಕುಯಿಲು. ಎತ್ತಿಕೊಳ್ಳುವಾಗಲೇ ಏನೋ ಸಂಕಟ, ಅವ್ಯಕ್ತ ವೇದನೆ. ಮಧ್ಯಾನ ಕೆಲಸ ಮುಗಿಸಿ ಹಿಡಿದವಳು ಪುಟ ತಿರುಗಿಸಿ ಕೆಳಗಿಟ್ಟಾಗ ಕತ್ತಲಾಗಿತ್ತು, ಹೊರಗೂ ಒಳಗೂ... ಶುರುವಾಗೋದೇ ಕಂಬನಿಯ ಮಳೆಯಿಂದ.ಇದ್ದಕ್ಕಿದ್ದಂತೆ ಸುಳಿವೇ ಕೊಡದೇ ಆಕ್ರಮಣ ಮಾಡಿ ನಾಯಕರ ಮೇಲೆ ವಿಜಯ ಸಾಧಿಸುವ ಸಾವು, ಆ ಸಾವು ಮೂಡಿಸುವ ದುಗುಡದ ಕಾರ್ಮೋಡ, ಕವಿಯುವ ಮಬ್ಬು, ಸುರಿಯುವ ದುಃಖದ ಆಶ್ರುಗಳ ಧಾರೆ, ಮೊಳಕೆಯೊಡೆಯುವ ಅಧಿಕಾರದ ಆಸೆಯ ಹೆಮ್ಮರ. ಬದುಕಿನ ವೈಚಿತ್ರ್ಯವೇ ಅದೇನೋ.. ಒಂದು ಸಾವು ಮುಗಿಯುತ್ತಿದ್ದಂತೆ ದೇಹವನ್ನು ಮೊದಲು ದಹಿಸುವುದೇ ಅಧಿಕಾರದ ಜ್ವಾಲೆ.. ಉತ್ತರಾಧಿಕಾರಿಯ ಹುಟ್ಟು.  ಸಿಂಹಾಸನವೆಂದರೆ ಕೇದಿಗೆಯ ಹೂ ಇದ್ದಂತೆ.  ಕುಟಿಲತೆಯ ಪೊದೆಗಳ ನಡುವೆ, ಮುಳ್ಳುಗಳ ಹಂದರದಲ್ಲಿ, ಅಧಿಕಾರದಾಸೆಯ ಸರ್ಪದೊಡಲಿನ ಸುತ್ತ ನಗುವ ಹೂ ಅದು. ರಕ್ತದಲ್ಲಿ ಕಟ್ಟಿದ ಕೋಟೆ ರಕ್ತದಲ್ಲಿ ಮುಳುಗುತ್ತದೆ, ಕತ್ತಿಯಲ್ಲೇ ಬಿತ್ತಿದುದು ಕತ್ತಿಯಲ್ಲೇ ಕೊಯಿಲಾಗುತ್ತದೆ ಅನ್ನುವ ನಾಯಕರ ಮಾತು ಅದೆಷ್ಟು ಸೂಚ್ಯ. ಯಾವುದರಿಂದ ಆರಂಭಿಸುತ್ತೆವೋ, ಎಲ್ಲಿಂದ ಶುರುವಾಗುತ್ತೋ ಅಲ್ಲಿಗೆ ತಂದು ನಿಲ್ಲಿಸುತ್ತದೆ ಪ್ರಕೃತಿ. ಚಕ್ರದ ಚಲನೆಯೇ ಹಾಗ

ಮರಳು ಸೇತುವೆ.

ಮರಳು ಸೇತುವೆ ಅಂದಾಗಲೇ ಕೈ ಅದರೆಡೆಗೆ ಹೋಗಿ ಬಾಚಿ ಎತ್ತಿಕೊಂಡಿತ್ತು. ಈ ತ.ರಾ.ಸು ಕಾದಂಬರಿಯ ಹೆಸರುಗಳೇ ಹಾಗೆ ಕಣ್ಣನ್ನು ತಕ್ಷಣ ಸೆಳೆಯೋದು ಮಾತ್ರವಲ್ಲ ಇಡೀ ಪುಸ್ತಕದ ವಿಸ್ತಾರವನ್ನು ಸೂಕ್ಷ್ಮವಾಗಿ ಹೇಳಿಬಿಡುತ್ತದೆ. ಇದು ಅರ್ಥವಾಗಿದ್ದು ಬಿಡುಗಡೆಯ ಬೇಡಿ ಪುಸ್ತಕದ ಕುರಿತು ಬರೆದ ಅನಿಸಿಕೆಯಲ್ಲಿ ಮಾಲಿನಿ ಅಕ್ಕ ಹೆಸರೇ ಹಾಗಿದೆ ನೋಡು ಅಂದಾಗ. ಅರೆ ಹೆಸರು ಇಷ್ಟವಾಗಿತ್ತು ಆದ್ರೆ ಇಡೀ ಪುಸ್ತಕದ ಆಶಯ ಹೇಗೆ ಬಿಂಬಿತವಾಗಿದೆ ಅನ್ನೋದು ಗಮನಿಸಿಯೇ ಇರ್ಲಿಲ್ಲ ಅಂತ ಆಶ್ಚರ್ಯದ ಜೊತೆಗೆ ಮಾಲಿನಿ ಅಕ್ಕನ ಸೂಕ್ಷ್ಮತೆ ಬಗ್ಗೆ ಬೆರಗು ಸಹ. "ಎಲ್ಲವುದಕ್ಕೂ ಮುಕ್ತಾಯವಿರುವಂತಯೇ, ಒಂದು ಆರಂಭವೂ ಇದೆ ಅನ್ನೋ ಸಾಲಿಂದಲೇ ಶುರುವಾಗುವ ಕಾದಂಬರಿ ಮುಂದೆ ಓದದಂತೆ ಒಂದು ಕ್ಷಣ ತಡೆ ಹಿಡಿದಿದ್ದು ಹೌದು. ಅರೆ ಹೌದಲ್ವಾ ನಂಗೆ ಯಾಕೆ ಹೀಗಾಗುತ್ತೆ ಅನ್ನೋ ಎಷ್ಟೋ ಪ್ರಶ್ನೆಗಳಿಗೆ ಇದೊಂದು ಸಾಲು ಉತ್ತರ ಕೊಡುತ್ತಲ್ವಾ, ಯಾವುದೋ ತಿರುವಿನಲ್ಲಿ ನಿಂತು ಕಂಗಾಲಾಗುವ ಮುನ್ನ ಆರಂಭವನ್ನು ಒಮ್ಮೆ ಅವಲೋಕಿಸಿದರೆ ಮುಂದಿನ ದಾರಿ ನಿಚ್ಚಳವಾಗಬಹುದೇನೋ, ಅಥವಾ ಕೊನೆಪಕ್ಷ ನಡೆಯಲು ಕಾಲಿಗೆ ಕಸುವಾದರೂ ತುಂಬಬಹುದೇನೋ. ಯಾಕೆಂದರೆ ಬದುಕು ಅನಿರೀಕ್ಷಿತ ತಿರುವಿನಲ್ಲಿ ತಂದು ನಿಲ್ಲಿಸಿಬಿಡುತ್ತದೆ,  ವಿನಾಕಾರಣ ಅನುಭವಿಸವ ಹಾಗೆ ಮಾಡುತ್ತೆ ಅನ್ನೋ ನಮ್ಮ ಯೋಚನೆಯೇ ತಪ್ಪು, ಅಕಾರಣವಾಗಿ ಯಾವುದೂ ಜರುಗುವುದಿಲ್ಲ  ಅನ್ನೋದಕ್ಕೆ ಪುನಃ ಪುನಃ ಇಂಥ ಹಲವಾರು ಕಾರಣಗಳು ಪುಷ್ಟಿ ಕೊಟ್ಟ
ತೋರಿಸಿ ಕೊಂಡು ಅವರು ಕೊಟ್ಟ ಔಷಧಿ ಕೊಟ್ಟರೂ ಅಹಿಯ  ನೋವು ಮಾತ್ರ ಕಡಿಮೆಯಾಗಲೇ ಇಲ್ಲ. ಜೊತೆಗೆ ವೊಮಿಟ್. ಕೊನೆಗೆ ಬೇರೆ ದಾರಿ ಕಾಣದೆ ಮತ್ತೆ ಕರೆದುಕೊಂಡು ಹೋದರೆ ಇಂಜೆಕ್ಷನ್ ಕೊಟ್ಟು ಒಂದೆರೆಡು ಗಂಟೆ ನೋಡೋಣ, ಮೋಶನ್ ಆದ್ರೆ ಸರಿ ಹೋಗಬಹುದು ಅಂತ ಹೇಳಿ ಅಡ್ಮಿಟ್ ಮಾಡ್ಕೊಂಡ್ರು. ಅದಾಗಲೇ ನೋವು ಶುರುವಾಗಿ ದಿನವಾಗಿತ್ತು. ತೀರಾ ಸುಸ್ತಾಗಬಾರದು ಅಂತ ಡ್ರಿಪ್ ಕೂಡ ಹಾಕಿದ್ದಾಯ್ತು. ಅಬ್ಬರದ ಅಲೆಗಳಿಗೆ ಸುಸ್ತಾಯಿತೇನೋ ಎಂಬಂತೆ ಬಡಿಯುವುದು ನಿಧಾನಕ್ಕೆ ಒಂದು ಹದಕ್ಕೆ ಬರತೊಡಗಿತು.  ಡ್ರಿಪ್ ಹನಿ ಒಳಕ್ಕೆ ಇಳಿಯುತಿದ್ದಂತೆ ಅವಳೂ ಸ್ವಲ್ಪ ನಿರಾಳವಾಗುತ್ತಿದ್ದಳು. ಆದರೂ ಏನೋ ಆತಂಕ. ಆಗಾಗ ಒಮ್ಮೆ ಹಿಂಡಿದಂತೆ ಬರುವ ನೋವು ಅವಳಿಗೆ ಸುಧಾರಿಸಿಕೊಳ್ಳಲೇ ಸಮಯ ಹಿಡಿಯುವ ಹಾಗೆ ಮಾಡಿತ್ತು. ಸದ್ಯ ಹಾಸ್ಪಿಟಲ್ ಒಳಗೆ ಇದ್ದೇವೆ ಅನ್ನೋ ನಂಬಿಕೆ ಒಂದೇ ಆ ಕ್ಷಣಕ್ಕೆ ಧೈರ್ಯ ತುಂಬುತ್ತಿತ್ತು. ಹನಿ ಹನಿಯಾಗಿ ಇಳಿಯುವ ಅದನ್ನೇ ಗಮನಿಸುತ್ತಾ ಇದ್ದೆ  ನೀರವ ರಾತ್ರಿಯಲಿ ಟಪ್ ಟಪ್ ಬೀಳುವ ಡ್ರಿಪ್ ಸಹ ಇಷ್ಟು ಸದ್ದು ಮಾಡಬಲ್ಲದಾ ಹೊರಗಿನ, ಒಳಗಿನ  ಗೌಜಿನಲ್ಲಿ ಕೇಳದೆ ಹೋಗುವ ಸದ್ದುಗಳೆಷ್ಟು? ಕೈ ಅಲುಗಾಡಿಸದೆ ನಿದ್ದೆ ಹತ್ತುವ ಹಾಗಿದ್ದ ಅವಳ ಮುಖವನ್ನೇ ಆಗಾಗ ದಿಟ್ಟಿಸುವ, ಹನಿ ಹನಿಯಾಗಿ ಇಳಿಯುವ ಡ್ರಿಪ್ ಅನ್ನು ಎಣಿಸುವ ವಿನಃ ಮತ್ತೇನು ತಾನೇ ಸಾಧ್ಯವಿತ್ತು. ಆಗಾಗ ಸುರಿಯುವ ಮಳೆಯಂತೆ ಬರುವ ನೋವಿನ ಕಾರಣ ಹುಡುಕಲು ಸ್ಕ್ಯಾನ್ ಮೊರೆ ಹೋಗಿದ್ದಾಯಿತು. ಮೈಲ್ಡ್
ಅಮ್ಮಾ ಹೊಟ್ಟೆನೋವುತ್ತೆ ಅಂತ ಬೆಳಗಿನ ಜಾವವೇ ಎಬ್ಬಿಸಿದವಳಿಗೆ ನೀರು ಕುಡಿದು ಮಲಕ್ಕೋ ಕಂದ ಹೋಗುತ್ತೆ ಅಂತ ಹೊಟ್ಟೆಗೆ ತುಪ್ಪ ಹಚ್ಚಿ ಹೊದಿಕೆ ಹೊದ್ದಿಸಿದವಳಿಗೆ ಮತ್ತೆ ನಿದ್ದೆ ಬರಲಿಲ್ಲ. ಹೂ ಅಂದು ತಿರುಗಿ ಮಲಗಿದವಳನ್ನೇ ದಿಟ್ಟಿಸುತಿದ್ದೆ. ನಿನ್ನೆ ಸ್ಕೂಲ್ ಡೇ ಲೇಟ್ ಆಗಿ ತಿಂದಿದಕ್ಕೆ ಎಲ್ಲೋ ಗ್ಯಾಸ್ ಫಾರಂ ಆದ ಆಗಿರಬಹುದಾ... ಇನ್ನೇನು ಆಗಿರಬಹುದು ಅನ್ನೋ ಯೋಚನೆಗಳು ಅಪ್ಪಳಿಸಲು ತೊಡಗುತಿದ್ದಂತೆ ಮನದ ಕಡಲಲ್ಲಿ ಉಬ್ಬರ ಶುರುವಾಗಿತ್ತು. ಯಾಕೋ ಎಂದಿನಂತೆ ಸಮಾಧಾನವಾಗಲೇ ಇಲ್ಲ. ಮಲಗಿದ್ದಲ್ಲೇ ನಿಧಾನವಾಗಿ ಮುಲುಕುತಿದ್ದಳು ಅವಳು. ನೀನು ಉಸಿರಾಡೋದು ಚೂರು ವ್ಯತ್ಯಾಸ ಆದರೂ ನಂಗೆ ಗೊತ್ತಾಗುತ್ತೆ ಕಣೆ ಅಂತ ಅನ್ನುತ್ತಿದ್ದವಳು ನಾನು ನನ್ನ ನೋವು ಜಾಸ್ತಿ ಆಗ್ತಾ ಇದೆ ಅಂತ ಅಮ್ಮಂಗೆ ಗೊತ್ತಾಗ್ತಾ ಇದೆಯಾ ಅಂತ ತಿರುಗಿ ನೋಡಿದ್ಲಾ... ಆಗಲೇ ನನಗೂ ಹೊಟ್ಟೆಯೊಳಗೆ ಸಂಕಟ ಶುರುವಾಗಿತ್ತು. ಭಾನುವಾರ ಯಾವ ಡಾಕ್ಟರ್ ಸಹ ಇರೋಲ್ಲ ಏನು ಮಾಡೋದು ಒಬ್ಬರಾದರೂ ಸಿಗಲಿ ದೇವ್ರೇ ಅಂತ ಮನಸ್ಸು ಒಂದೇ ಸಮನೆ ಪ್ರಾರ್ಥಿಸುತಿತ್ತಾ? ಆ ಅಬ್ಬರದಲ್ಲಿ ಯಾವ ಅಲೆಯದು ಯಾವ ಭಾವ ಗುರುತಿಸುವರಾರು? ಗಡಿಯಾರವನ್ನೇ ದಿಟ್ಟಿಸಿದೆ. ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಸ್ವಲ್ಪ ಬೇಗ ಹೋಗಬಾರದಾ ಅಂತ ಮನಸ್ಸಲ್ಲೇ ಬೈದುಕೊಂಡೆ. ಬೇರೆ ಸಮಯದಲ್ಲಿ ಕೇಳಿಸದ ಈ ಟಿಕ್ ಟಿಕ್ ಸಹ ಇಷ್ಟು ನಿಧಾನ ಹಾಗೂ ಕರ್ಕಶ ಅನ್ನೋದು ನಿಧಾನಕ್ಕೆ ಅರ್ಥವಾಗತೊಡಗಿತ್ತು. ಒಂಬತ್ತು ತಿಂಗಳು ಹೊಟ
Image
ಎಲ್ಲೋ ಕೇದಿಗೆ ಹೂ ಬಿಟ್ಟಿದೆ ನೋಡು ಹೇಗೆ ಘಂ ಅಂತಾ ಇದೆ ಅಂತ ಅಜ್ಜಿ ಹೇಳುತಿದ್ದರೆ ಸಣ್ಣದೊಂದು ಪುಳಕ ಶುರುವಾಗುತ್ತಿತ್ತು. ಯಾರಿಗೆ ತಂದು ಕೊಡಲು ಹೇಳೋದು ಅನ್ನೋ ಲೆಕ್ಕಾಚಾರ ಕೂಡ. ನಾವ್ಯಾರು ಹೋಗಿ ಸುಲಭಕ್ಕೆ ಕಿತ್ತು ತರುವ ಹಾಗಿರಲಿಲ್ಲ ಅದು. ಅಸಲಿಗೆ ಅದು ಹೂವಾ... ಬೆಳಂದಿಗಳನ್ನ ಕುಡಿದ ಬೆಳೆದ ಹಾಳೆಯಂತೆ ಕಂಡರೂ ಹಾಳೆಯಂತೆ ಸುಲಭವಾಗಿ ಮುಟ್ಟುವ ಹಾಗಿರಲಿಲ್ಲ. ಬದಿಯಲ್ಲಿದ್ದ ಮುಳ್ಳುಗಳು ಮೊದಲು ಕೈಯನ್ನು ಚುಂಬಿಸುತ್ತಿದ್ದವು. ಆ ಕಾಲದಲ್ಲಿ ಹೂ ಮುಡಿಯುವುದೆಂದರೆ ಎಲ್ಲರಿಗೂ ಸಂಭ್ರಮವೇ. ಹೊರಗೆ ಹೋಗುವಾಗ ತಲೆಯಲ್ಲಿ ಯಾವುದಾದರೂ ಹೂವಿದ್ದರೆ ಮಾತ್ರ ಅದಕ್ಕೊಂದು ಘನತೆ. ಹಾಗಾಗಿ ಕಾಲಕ್ಕೆ ತಕ್ಕ ಹಾಗೆ ಡೇರೆ, ಗುಲಾಬಿ, ಸೀತಾಳೆ, ಮಲ್ಲಿಗೆ, ಕೇದಿಗೆ ಹೀಗೆ ಯಾವುದೋ ಒಂದು ತಲೆಯನ್ನು ಅಲಂಕರಿಸಿ ನಗುತ್ತಿದ್ದವು. ನಾವೂ ಕಿರೀಟ ಧರಿಸಿದ ರಾಜರಂತೆ ತಲೆಯೆತ್ತಿ ಹೆಮ್ಮೆಯಿಂದ  ಮುನ್ನುಗ್ಗುತ್ತಿದ್ದೆವು. ಅದ್ಯಾವಾಗ ಹೂ ಮುಡಿಯುವುದು ಗೊಡ್ಡು ಅನ್ನಿಸಿತೋ ಆ ದೇವರೇ ಬಲ್ಲ. ನಿಮ್ಮ ತಲೆಯಲ್ಲಿ ನಲುಗುವ ಆ ಎಣ್ಣೆಯದೋ, ಶಾಂಪೂವಿನದೋ ಘಾಟು ಸಹಿಸಿ ಉಸಿರುಗಟ್ಟುವ ಕೆಲಸವಿಲ್ಲ ಅಂತ ಅವೂ ನೆಮ್ಮದಿಯ ಉಸಿರುಬಿಟ್ಟವಾ, ಇಲ್ಲಾ ನೊಂದವಾ ಯಾರಿಗೆ ಪುರುಸೊತ್ತು ಕೇಳೋಕೆ, ನೋಡೋಕೆ... ಕೇದಿಗೆ ಬೆಳೆಯುತ್ತಿದ್ದದ್ದು ಪೊದೆಗಳ ನಡುವೆ. ಎಲೆಯ ಅಂಚಿನಲ್ಲೂ ಸಾಲಾಗಿ ಶಿಸ್ತಿನ ಸಿಪಾಯಿಯಂತೆ ಮುಳ್ಳುಗಳು ನಿಂತಿರುತಿದ್ದವು. ಆ ಮುಳ್ಳಿನ ಪೊದೆಯನ್ನು ಹೇಗೋ ದಾಟಿದರೂ
ಅದೊಂದು ಹೂವಿಗಾಗಿ ಎಷ್ಟು ಹಂಬಲಿಕೆ ಬಾಲ್ಯದಲ್ಲಿ ಅಸಲಿಗೆ ಅದು ಹೂವಾ  ಉದ್ದನೆಯ ಹಾಳೆಯ ತರಹದ ಅದು ಬೆಳಂದಿಗಳನ್ನ ಕುಡಿದು ಬೆಳದಿತ್ತೇನೋ ಅನ್ನೋ ಹಾಗೆ ಇರುತಿತ್ತು. ಮಾರು ದೂರದವರೆಗೆ ಅದರ ಘಮ ಹರಡುತಿತ್ತು. ಅದಕ್ಕೆ ಮರುಳಾಗದವರೇ ಇಲ್ಲಾ, ಹಾಗಾಗಿ ಅದು ಮನುಷ್ಯರಿಗಷ್ಟೇ ಅಲ್ಲಾ ಹಾವಿಗೂ ಪ್ರಿಯ. ಕೇದಿಗೆ ಅನ್ನೋ ಆ ಘಮ ನನ್ನ ಈಗಲೂ ಕಾಡುತ್ತೆ. ಅಂತಹ ಕೇದಿಗೆ ವನ ಅನ್ನೋ ಪುಸ್ತಕವನ್ನು  ಕಳಿಸಿ,  ತ.ರಾ.ಸು ಇನ್ನಷ್ಟು ಆಳವಾಗಿ ಎದೆಯೊಳಗೆ ಇಳಿಯಲು ಅವಕಾಶ ಮಾಡಿಕೊಟ್ಟವರು,  ಷಣ್ಮುಖಮ್ ಸರ್. ಫೇಸ್ಬುಕ್ ಆಪ್ತವಾಗೋದೆ ಇಂಥಹ ಕಾರಣಕ್ಕೆ. ಕಥಾ ನಾಯಕ ರಾಜಶೇಖರನಿಗೆ ಗೊಂದಲದ ಪರಿಸ್ಥಿತಿ. ಬದುಕು ಕೆಲವೊಮ್ಮೆ ಅಚ್ಚರಿಯ ತಂದಿಟ್ಟು ತಮಾಷೆ ನೋಡುತ್ತದೆ ಅಂದ್ಕೊತಿವಿ. ಉಹೂ ಅದು ನಮ್ಮ ದೃಢತೆಯನ್ನು ಅಳೆಯುತ್ತದೆ. ಯಾವುದೋ ತಿರುವಿನಲ್ಲಿ ತಂದು ನಿಲ್ಲಿಸಿ ಹೇಗೆ ಸಾಗಬೇಕು ಅನ್ನುವುದರ ಬಗ್ಗೆ ಆಲೋಚನೆ ಹುಟ್ಟುವ ಹಾಗೆ ಮಾಡುತ್ತೆ. ಅಂಥಾ ಪರಿಸ್ಥಿತಿಯಲ್ಲಿ ಮನಸ್ಸು ಹೇಗಿರುತ್ತೆ ಅನ್ನೋದನ್ನ ತ.ರಾ.ಸು ಎಷ್ಟು ಚೆಂದವಾಗಿ ಹೇಳಿದ್ದಾರೆ ನೋಡಿ. "ಟಗರುಗಳೆರೆಡರ ಕಾಳಗದ ನಡುವೆ ಸಿಕ್ಕ ಗಿಡದಂತೆ"  ಆ ಸಂಕಟ, ಗೊಂದಲ, ಅಸಹಾಯಕತೆ, ಕೆಲವೊಮ್ಮೆ ನನ್ನ ತಪ್ಪೇನು ಅನ್ನೋ ಪ್ರಶ್ನೆ ಇವೆಲ್ಲವನ್ನೂ ಒಂದು ಸಾಲಿನಲ್ಲಿ ಕಟ್ಟಿ ಕೊಡುವ ಅವರ ಭಾಷೆ. ಮೃದು ಸ್ವಭಾವ, ಮುಗ್ಧ , ಲೋಕವನ್ನು ಅರಿಯದವ ಅಂತಲೇ ಜಗತ್ತು ಗುರುತಿಸಿದ ರಾಜಶೇಖರನಿಗೆ ಕಾಲೇಜ್ ಗೆ ಬರುವವರೆ
ಮೌನವಾಗಿದ್ದೇನೆ ಎಂದರೆ ಹೆದರಿದ್ದೇನೆ ಅಂದಲ್ಲ.. ನಿನಗೆ ಉತ್ತರಿಸುವ ಅಗತ್ಯವಿಲ್ಲ ಎಂದೂ ಆಗಬಹುದು. ಮಾತಲ್ಲೂ ನೂರಾರು ಅರ್ಥ ಹುಡುಕುವ ನೀನು ನನ್ನ ಮೌನವನ್ನು ಅರ್ಥ ಮಾಡಿಕೊಳ್ಳಲು ಪಡುವ ಪರಿದಾಟ ನೋಡಬೇಕು. ನಂಗೊತ್ತು, ನೀನು ಸುಮ್ಮನಿರಲಾರೆ. ಆಕ್ಷಣಕ್ಕೆ ನಿನಗೊಂದು ಅರ್ಥಬೇಕು ಅದಕ್ಕೆ ಉತ್ತರಿಸಬೇಕು, ನನ್ನ ರೊಚ್ಚಿಗೆಬ್ಬಿಸಬೇಕು ಅನ್ನುವ ನಿನ್ನ ಆಸೆ ಅರ್ಥವಾಗದ್ದೇನಲ್ಲ. ಮೌನವಾಗಿದ್ದೇನೆ ಅಂದ್ರೆ ಉತ್ತರವಿಲ್ಲ ಎಂದಲ್ಲ... ನಿನ್ನ ಬಗೆಗಿನ ದಿವ್ಯ ನಿರ್ಲಕ್ಷ್ಯವೂ ಆಗಿರಬಹುದು. ಮಾತನ್ನು ನಿರೀಕ್ಷಿಸಿ ನನ್ನ ಹಣಿಯಲು ಯತ್ನಿಸುತ್ತಿರುವ ನಿನ್ನ ಪ್ರಯತ್ನಕ್ಕೆ ಬೆಲೆಯೇ ಕೊಡದ ನನ್ನ ಮೌನ ನಿನ್ನ ಅದ್ಯಾವ ಪರಿ ಕಾಡಬಹುದು ಅನ್ನುವುದು ನೋಡಬೇಕು. ಮೌನವಾಗಿದ್ದೇನೆ ಅಂದ್ರೆ ತಪ್ಪು ನನ್ನದೆಂದು ಕೊಂಡಿದ್ದೇನೆ ಎಂದಲ್ಲ . ಯಾರಿಗೋ ಸಮರ್ಥನೆ ಕೊಡಬೇಕು ಅನ್ನುವ ಅನಿವಾರ್ಯತೆ ಇಲ್ಲದಿರಬಹುದು. ನನ್ನ ಉತ್ತರಕ್ಕೆ ಏನು ಪ್ರತ್ಯುತ್ತರ ಕೊಡಬಹುದು ಎಂಬ ನಿನ್ನ ಲೆಕ್ಕಾಚಾರ ನಿರಂತರ ಜಾರಿಯಲ್ಲಿರಲಿ ಅನ್ನೋ ಬಯಕೆಯೂ ಇರಬಹುದು. ಮೌನವಾಗಿದ್ದೇನೆ ಎಂದರೆ ಅಸಹಾಯಕಳಾಗಿದ್ದೇನೆ ಎಂದಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇಕೆ ಎಂಬ ಸಾಮಾನ್ಯ ಜ್ಞಾನವೂ ಆಗಿರಬಹುದು. ಯಾವುದನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಅನ್ನುವ ಅರಿವಿದ್ದವ ಮಾತ್ರ ಬುಧ್ಹಿವಂತ ಅನ್ನೋದು ನಿಂಗೆ ಗೊತ್ತಾಗೋದಾದರೂ ಹೇಗೆ ಬಿಡು. ಮೌನವಾಗಿದ್ದೇನೆ ಎಂದರೆ ಕಳೆದುಕೊಳ್ಳುವ ಭಯವಿದೆ ಎಂದಲ್ಲ.

ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು...

ಡೆಲ್ಲಿಗೆ ಹೋದಾಗ ಗಾಡಿಯಲ್ಲಿ ಎಲ್ಲಾದರೂ ಹೋಗೋದು ನನ್ನ ಹಾಗೂ ಸೀಮಾಳ ಪ್ರೀತಿಯ ಹವ್ಯಾಸ. ಹಾಗೆ ಒಂದು ದಿನ ಎಲ್ಲೋ ಹೋಗಿ ಬರುತ್ತಿರುವಾಗ ಸಿಗ್ನಲ್ ಗಾಗಿ ಕಾಯುತ್ತಿದ್ದೆವು.ಸಮುದ್ರ ಅಲೆಯೋಪಾದಿಯಲ್ಲಿ ಸಾಲಾಗಿ ನಿಂತು ಯಾವ ಕ್ಷಣದಲ್ಲಾದರೂ ಹಸಿರಿನ ಗುಂಡು ಹೊಡೆಯಬಹುದು ಓಡಬೇಕು ಅನ್ನೋ ಧಾವಂತದಲ್ಲಿದ್ದ ವಾಹನಗಳು, ಹಾರನ್ನಿನ ಕಿವಿಗಿಡಚಿಕ್ಕುವ ಸದ್ದು, ಮುಸುಕು ಬೆಳಕು, ಅಸಹನೀಯ ಧಗೆ,   ಬೋರ್ ಅನ್ನಿಸಿ ಪಕ್ಕಕ್ಕೆ ತಿರುಗಿದೆ. ಅದಾಗಲೇ ರಾತ್ರಿ ತನ್ನ ಕಳ್ಳ ಹೆಜ್ಜೆಯಿಟ್ಟು ಬೆಳಕನ್ನು ಇಷ್ಟಿಷ್ಟೇ ಆವರಿಸುತಿತ್ತು. ಬೆಳಕೂ ಅದರ ಆಲಿಂಗನದಲ್ಲಿ ಮೈಮರೆತು ಅಷ್ಟಷ್ಟೇ ಕರಗುತ್ತಿತ್ತು. ಇವರಿಬ್ಬರ ಸಂಭ್ರಮ ಕಂಡು ಅಲ್ಲೆಲ್ಲೋ ಉರಿಯುತಿದ್ದ ದೀಪದ ಮಸುಕು ಬೆಳಕಿನಲ್ಲಿ ಕತ್ತಲಲ್ಲಿ ಗಿಜಿಗುಡುವ ರಸ್ತೆಯ ಬದಿಯಲ್ಲಿ  ಗುರುತು ಸಿಗದ ಮರದ ನೆರಳಲ್ಲಿ ಒಂದು ಡೇರೆಯಿತ್ತು. ಅದೇ ಗಿಜಿಗುಡುವ ರಸ್ತೆಯ ಬದಿಯಲ್ಲಿ ಎಲ್ಲಿಂದಲೋ ಆರಿಸಿಕೊಂಡು ತಂದ ನಾಲ್ಕು ಕಟ್ಟಿಗೆಯನ್ನು ಮೂರು ಕಲ್ಲುಗಳ ನಡುವೆ ಇಟ್ಟು ಹೊತ್ತಿಸಿ ಅದರ ಮೇಲೆ ಕತ್ತಲೆಗಿಂತಲೂ ಕಪ್ಪಾಗಿದ್ದ ಹೆಂಚು ಇಟ್ಟು ರೊಟ್ಟಿ ತಟ್ಟುತಿದ್ದಳು ಒಬ್ಬಳು ತಾಯಿ. ಕತ್ತಲೆಯ ಸೆರಗಿನಲ್ಲಿ ಬೆಳಕಿನ ಗೆರೆಯೊಂದು ಮಿಂಚಿದಂತೆ, ಎಲ್ಲವೂ ಸ್ತಬ್ಧವಾಗಿ ಹೋದಂತೆ   ತದೇಕಚಿತ್ತಳಾಗಿ ಅವಳನ್ನೇ ದಿಟ್ಟಿಸುತಿದ್ದೆ. ಆಗಾಗ ಉರಿಯನ್ನು ಹೆಚ್ಚು ಕಡಿಮೆ ಮಾಡುತ್ತಾ ಆಯ್ದು ತಂದ ಕಟ್ಟಿಗೆಯೆಂಬ ಪುಟ್ಟ ಪುಟ್ಟ ಕೋಲು, ಕಡ್ಡಿಗಳನ್ನು ಒಡ
ಒಂದು ದೇಶದ ಇತಿಹಾಸವನ್ನು ತಿರುಚಿ ಬರೆಯುವದಕ್ಕಿಂತ ದೊಡ್ಡ ಬ್ಲಂಡರ್ ಇನ್ನೊಂದಿಲ್ಲ ಅನ್ನ್ನಿಸೋದು ಟಿಪ್ಪುವಿನ ಬಗೆಗಿನ ಸತ್ಯಗಳು ಅರಿವಾದಾಗ. ಒಂದಿಡೀ ಜನಾಂಗವನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಗೊತ್ತಿದ್ದೂ ಗೊತ್ತಿದ್ದೂ ಮಾಡುವ ಇತಿಹಾಸಕಾರರನ್ನು ನೋಡಿದಾಗ ಅವರಿಗೆ ಮನಃಸಾಕ್ಷಿ ಅನ್ನೋದು ಇರಲೇ ಇಲ್ಲವಾ ಅನ್ನೋ ಪ್ರಶ್ನೆಯೂ ಕಾಡುತ್ತೆ. ಎಷ್ಟರಮಟ್ಟಿಗೆ ಅವರು ನೈತಿಕವಾಗಿ ಅಧಃಪತನಕ್ಕೆ ಇಳಿದಿದ್ದರು ಅನ್ನೋದು ಗೊತ್ತಾದಾಗ ಅವರಿಗೆ ಯಾವತ್ತೂ ಆತ್ಮಸಾಕ್ಷಿ ಅನ್ನೋದು ಪ್ರಶ್ನಿಸಲೇ ಇಲ್ಲವಾ ಅನ್ನೋ ಗೊಂದಲ. ಬಹುಶಃ ಇದು ಕಾಡುವುದು ಮನುಷ್ಯರಿಗೆ ಮಾತ್ರ ಮನುಷ್ಯ ರೂಪಿ ಜೀವಕ್ಕಲ್ಲ. ಅವನ ಕ್ರೌರ್ಯ, ಮತಾಂತರ ಮಾಡಲು ಅವನು ನಡೆಸಿದ ಮಾರಣ ಹೋಮ, ಜಿಹಾದ್ ಗಾಗಿ ಅವನು ಪಟ್ಟ ಶ್ರಮ, ನೋಡಿದಾಗ ಅವನು ದಕ್ಷಿಣದ ಔರಂಗಜೇಬ್ ಅಂತ ಹೇಳುವುದರಲ್ಲಿ ಸಂದೇಹವೇ ಇಲ್ಲ. ಟಿಪ್ಪು ಸ್ವತಃ ಬರೆದ ಅನೇಕ ಪತ್ರಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಕೊಡಗಿನಲ್ಲಿ ಅವನು ನಡೆಸಿದ ಮಾರಣ ಹೋಮ ಜಲಿಯನ್ ವಾಲ್ ಬಾಗ್ ನಡೆದ ಕ್ರೌರ್ಯವನ್ನೂ ಮೀರಿಸುತ್ತದೆ. ಶಾಂತಿ ಸಂಧಾನಕ್ಕಾಗಿ ಅವರನ್ನು ಆಹ್ವಾನಿಸಿ ನಂಬಿ ನಿಶಸ್ತ್ರರಾಗಿ ಬಂದ ಕೊಡವರನ್ನು ಅವಿತುಕೊಂಡು ಧಾಳಿ ಮಾಡಿ ಕೊಂದಿದ್ದು 35 ಸಾವಿರಕ್ಕೂ ಹೆಚ್ಚು ಜನರನ್ನ. ಮತಾಂತರವಾಗಲು ತಿರಸ್ಕರಿಸಿದ ಮೇಲುಕೋಟೆಯ 700 ಕ್ಕೂ ಹೆಚ್ಚು ಅಯ್ಯಂಗಾರರನ್ನು ಹಿಡಿದು ಅವರನ್ನು ದೀಪಾವಳಿಯ ನರಕ ಚತುರ್ದ
 ಚಕ್ರೇಶ್ವರಿಯಿಂದಲೇ  ತ. ರಾ. ಸು ಓದಲು ಶುರುಮಾಡಿದ್ದು ನಾನು. ಚಿತ್ರದುರ್ಗಕ್ಕೆ ಹೋಗಿ ಬಂದ ಮೇಲೆ ಓದಿದ್ದು ದುರ್ಗಾಸ್ತಮಾನ. ಆಮೇಲೆ ಅದರ ಸರಣಿ ಕೃತಿಗಳು ಇವೆ ಅಂತ ಗೊತ್ತಾಗಿ ಅದನ್ನ ಓದಿದ ಮೇಲೆ ಇನ್ನೊಮ್ಮೆ ಅದನ್ನ ಓದಬೇಕು ಅಂತ ಅಂದ್ಕೊಂಡ್ ಸುಮ್ಮನಾಗಿರುವಾಗಲೇ ಸ್ನೇಹಿತರ ಮನೆಯಲ್ಲಿ ಮೊದಲ ಪುಟ ಕಿತ್ತು ಜೀರ್ಣಾವಸ್ಥೆಗೆ ತಲುಪಿದ ಪುಸ್ತಕವೊಂದು ಕಣ್ಣಿಗೆ ಬಿಟ್ಟು. ಮೊದಲಿಂದಲೂ ಈ ಜೀರ್ಣಾವಸ್ಥೆ ತಲುಪಿದ ಯಾವುದೇ ಆಗಲಿ ಅದರ ಬಗ್ಗೆ ನನಗೊಂದು ಕುತೂಹಲ, ಆಸಕ್ತಿ. ಯಾವುದು ಅಂತ ನೋಡಲು ಹೋದವಳಿಗೆ ಶೀರ್ಷಿಕೆಯೇ ಇಷ್ಟವಾಗಿ ಬಿಡ್ತು. ಬಿಡುಗಡೆಯ ಬೇಡಿ. ಮತ್ತದನ್ನ ಬರೆದಿದ್ದು ತ. ರಾ. ಸು. ಈ ಬದುಕು ಮತ್ತು ಬಂಧನ ಅವಳಿ ಜವಳಿಗಳೇನೋ ಅನ್ನಿಸುತ್ತಿರುತ್ತದೆ ನಂಗೆ. ಮನುಷ್ಯನಲ್ಲಿ ಯಾವುದನ್ನೂ ಮೀರುವ, ಹೊರಬರುವ ಪ್ರಯತ್ನ ಕೊನೆಯ ಉಸಿರಿನ ತನಕವೂ ಚಾಲನೆಯಲ್ಲಿರುತ್ತೆ. ಅದು ಅರಿವಿಗೆ ಬಂದಿರಬಹುದು ಬರದಿರಲೂ ಇರಬಹುದು. ಈ ನೆಲದ ಮುಖ್ಯ ಗುಣವೂ ಅದೇ ಈ ದೇಹದಿಂದ ಬಿಡುಗಡೆ, ಆಥವಾ ಮುಕ್ತಿಗಾಗಿ ಪ್ರಯತ್ನ ಪಡೋದು. ಇಡೀ ಬದುಕಿನ ಗಮ್ಯವೇ ಬಿಡುಗಡೆ ಅಲ್ವಾ ಅಂತ ಅನ್ನಿಸಿ ಬೆರಗು, ಬೇಜಾರು ಎರಡೂ ಆಗುತ್ತೆ ಒಂದೊಂದುಸಲ. ಮುಖ್ಯ ಪಾತ್ರಧಾರಿ ಪ್ರಭಾವತಿ, ಅವಳಿಗೋ ಯಾವುದೋ ಬಲೆಯಲ್ಲಿ ಸಿಲುಕಿಕೊಂಡ ಭಾವ, ಆ ಉಸಿರುಗಟ್ಟಿಸುವ ಪರಿಸರದಿಂದ ಬಿಡಿಸಿಕೊಳ್ಳುವ ಬಯಕೆ. ಪಂಜರದಿಂದ ಬಿಡಿಸಿಕೊಂಡು ಸ್ವಚ್ಚಂದವಾಗಿ ಹಾರಾಡುವ ಬಯಕೆ. ಆದರೆ ಅವಳಿಗೆ ಪ್ರತಿಯೊಂದು ಪಂಜರ
ಮೋವಿಯ ಇನ್ಸಿಡೆಂಟ್ ಆದ ನಂತರ ನಾಯಿಗಳ ಬಗ್ಗೆ ಅಟ್ಯಾಚ್ಮೆಂಟ್ ಬೆಳಸಿಕೊಳ್ಳುವುದನ್ನೇ ಬಿಟ್ಟಿದ್ದೆ. ಅಹಿಗೋ ಅವುಗಳೆಂದರೆ ವಿಪರಿತ ಪ್ರೀತಿ. ಅದಕ್ಕೆ ಸರಿಯಾಗಿ ಮುತ್ತಜ್ಜಿ ಮನೆಯಲ್ಲಿ ನಾಯಿಮರಿ ತಂದು ಸಾಕಿದ್ದರು. ಪ್ರತಿ ಸಲ ಫೋನ್ ಮಾಡಿದಾಗಲೂ ಅವಳು ಮೊದಲು ಕೇಳೋದೇ ಪಾಂಡು ಬಗ್ಗೆ. ಊರಿಗೆ ಹೋಗುವುದೆಂದರೆ ಅವಳ ಸಂಭ್ರಮ್ಮಕ್ಕೆ ಮುಖ್ಯ ಕಾರಣ ನಾಯಿ ಹಾಗೂ ದನಗಳು. ಹೋದ ದಿವಸ ಪರಿಚಯವಿಲ್ಲದ್ದಕ್ಕೆ ಬೊಗಳುತ್ತಲೇ ಸ್ವಾಗತಿಸಿದ್ದ ಪಾಂಡುವನ್ನು ಗಂಟೆಗಳು ಕಳೆಯುವ ಮೊದಲೇ ಫ್ರೆಂಡ್ ಮಾಡಿಕೊಂಡು  ಬಿಟ್ಟಿದ್ದಳು. ಅವಳಿಗೆ ಆಟಕ್ಕೆ, ಮಾತಿಗೆ, ಸುತ್ತಾಟಕ್ಕೆ ಎಲ್ಲವಕ್ಕೂ ಜೊತೆಯಾಗಿ ಪಾಂಡುವೇ. ಮೊದಮೊದಲು ಬಿಂಕ ತೋರಿಸುತ್ತಿದ್ದ ಅದು ಬಹಳ ಬೇಗ ಅವಳಿಗೆ ಹೊಂದಿಕೊಂಡು ಬಿಟ್ಟಿತ್ತು. ಅವಳ ಬಳಿ ಬೈಸಿಕೊಳ್ಳುತ್ತಾ, ಅವಳು ಅವನನ್ನು ಮರೆತು ತಿಂದು ಕುಡಿದು ಮಾಡಿದರೆ ಅವಳಿಗೆ ಹೆದರಿಸುತ್ತಾ ಇದ್ದ ಪಾಂಡು ಕೊನೆ ಕೊನೆಗೆ ಎಷ್ಟು ಹಚ್ಚಿಕೊಂಡಿತ್ತು ಅಂದರೆ ಅವಳು ಎಲ್ಲಿ ಹೋದರೂ ಅವಳ ಜೊತೆ ಇರುತಿತ್ತು. ಹೋದ ಸ್ವಲ್ಪ ಹೊತ್ತು ಮನೆಯ ಒಳಗೆ, ಕೊಟ್ಟಿಗೆ ಓಡಾಡಿ ಎಲ್ಲವನ್ನೂ ನೋಡಿದ ಮೇಲೆ ಅವಳ ಕಾರ್ಯಕ್ಷೇತ್ರ ಮೆಲ್ಲಗೆ ಗದ್ದೆ ಅಲ್ಲಿಂದ ಆಚೆಮನೆ ಕಡೆ ವಿಸ್ತಾರ ಆಗುತ್ತಿದ್ದಂತೆ ಅಲ್ಲಿಯವರೆಗೂ ಹಿಂಬಾಲಿಸುತಿದ್ದ ಅವನು ಆಮೇಲೆ ಲೀಡ್ ಮಾಡಲು ಶುರುಮಾಡಿದ್ದ. ಯಾವತ್ತೋ ಒಂದು ಸಲ ಬರೋ ಪೇಟೆ ಹುಡುಗಿಗೆ ಏನು ಗೊತ್ತು ಹಳ್ಳಿ ಬಗ್ಗೆ ಅಂತ ಅವಳಿಗೆ ಮುಂದೆ ಹೋಗಲು ಬಿಡದೆ ತ

ದಿಂಡಿನಕಾಯಿ...

ಮಾವಿನ ಹಣ್ಣು ಧಾರಾಳವಾಗಿ ಸಿಕ್ಕಿದ್ರೂ ಮಿಡಿ ಮಾವಿನಕಾಯಿಯ ಮರ ಮಾತ್ರ ವಿರಳ. ಬೆಲೆ ಬಾಳುವಂತದ್ದು ಯಾವಾಗಲೂ ವಿರಳವೇ. ಎಲ್ಲೋ ಒಂದು ಇದ್ದರೆ ಅದಕ್ಕೆ ರಾಜ ಮರ್ಯಾದೆ. ಅದಕ್ಕಾಗಿ ಎಷ್ಟೊಂದು ಜನರ ಬೇಡಿಕೆ. ಉಪ್ಪಿನಕಾಯಿಯ ರುಚಿ ನಿರ್ಧಾರ ಆಗ್ತಾ ಇದ್ದಿದ್ದೇ ಅದರ ಘಮದ ಮೇಲೆ. ಮಲೆನಾಡಿಗರ ಊಟದ ಎಲೆಯ ತುದಿಯಲ್ಲಿ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಇಲ್ಲದಿದ್ದರೆ ಎಂಥ ಮೃಷ್ಟಾನ್ನ ಭೋಜನವೂ ಸಪ್ಪೆಯೇ. ಅದರಲ್ಲೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಅಂದರೆ ಮುಗಿಯಿತು ಅದರ ಗತ್ತೇ ಬೇರೆಯಾಗಿರುತ್ತಿತ್ತು. ಊಟಮಾಡಿ ಕೈ ತೊಳೆದರೂ ಮಾವಿನ ಘಮ ಬೆರಳ ತುದಿಯಲ್ಲಿಯೇ ಇರುತಿತ್ತು. ಸುರಿಯುವ ಮಳೆಗೆ ತರಕಾರಿ ಬೆಳೆಯುವುದು ದೂರದ ಮಾತು. ಪೇಟೆಯಿಂದ ತರಕಾರಿ ತರಬೇಕು ಅಂದರೆ ಯಾರೋ ಅಪರೂಪದ ನೆಂಟರು ಬರಬೇಕು. ಅಲ್ಲಿಗಾದರೂ ಬೆಳೆದು ಬರುವುದು ಎಲ್ಲಿಂದ. ಮಲೆನಾಡಿನ ಮಳೆಯೆಂದರೆ ಹಾಗೆ ಶ್ರುತಿ ಹಿಡಿದ ಸಂಗೀತಗಾರನಂತೆ. ಲಹರಿ ಬಂದಹಾಗೆ ಸುರಿಯುತ್ತಿರುವುದಷ್ಟೇ ಕೆಲಸ. ಹಾಗಾಗಿ ಶ್ರಾವಣ ಮುಗಿಯುವವರೆಗೆ ತರಕಾರಿ ಬೀಜ ಹಾಕಿದರೆ ಅದು ಹರಿದು ಯಾವ ನದಿಯ ಮಡಿಲು ಸೇರುತಿತ್ತೋ ಬಲ್ಲವರು ಯಾರು. ಹಾಗಾಗಿ ಮಳೆಗಾಲಕ್ಕೆಂದೇ ಕೆಲವು ತರಕಾರಿಗಳು ನಿರ್ಧಾರಿತವಾಗಿರುತಿದ್ದವು. ಜಗಲಿಯಲ್ಲೋ ಊಟದ ಹಾಲಿನಲ್ಲೋ  ಮಾಡಿನ ಜಂತಿಗೆ  ಸಾಲಾಗಿ ಬಾಳೆಪಟ್ಟಿಯಲ್ಲಿ ಕಟ್ಟಿದ್ದ ಬಣ್ಣದ ಸೌತೆ, ಬೂದುಕುಂಬಳ, ಕೆಸುವಿನ ಸೊಪ್ಪು, ಮುರುವಿನ ಒಲೆಯನೇರಿ ಕುದಿಯುವ ಹುರಳಿ ಸಾರು, ಪಾತ್ರೆಯ ಒಳಗೆ ನೆನೆ
ತುಂಬಾ ದಿನಗಳಿಂದ ಸೇತುರಾಂ ಅವರ ನಾವಲ್ಲ ಕಥಾಸಂಕಲನ ಓದಬೇಕು ಅಂದ್ಕೊಂಡಿದ್ದೆ. ಎರಡು ಸಲ ಹೋದಾಗಲೂ ಸಪ್ನಾದಲ್ಲಿ ಇಲ್ಲಾ ಅನ್ನೋ ಮಾತು ಕೇಳಿ ಬೇಜಾರೂ ಆಗಿತ್ತು. ಅಂತೂ ನಿನ್ನೆ ಪುಸ್ತಕ ಸಿಕ್ಕಿ ಇವತ್ತು ಅದನ್ನು ಹಿಡಿದವಳು ಓದಿಯೇ ಕೆಳಗೆ ಇಟ್ಟಿದ್ದು. ಅವರ ಧಾರವಾಹಿ ಎಲ್ಲೋ ಒಂದು ಎಪಿಸೋಡ್ ನೋಡಿದ್ದು ಅಷ್ಟೇ ಅದರಲ್ಲಿ ಅವರ ಹರಿತವಾದ ಮಾತಿಗಿಂತ ಭಾಷೆ ಮತ್ತು ಪ್ರಾಕ್ಟಿಕಲ್ ಮನೋಭಾವ ಒಂಥರಾ ಇಷ್ಟವಾಗಿತ್ತು. ಮಾತು ಹೇಗೆ ಪ್ರಾಮಾಣಿಕ ಮತ್ತು ನೇರವಾಗಿರಬೇಕೋ ಅಷ್ಟೇ ಪ್ರಾಕ್ಟಿಕಲ್ ಸಹ ಆಗಿದ್ದಾಗ ಮಾತ್ರ ಅದಕ್ಕೊಂದು ಪೂರ್ಣತೆ.ನಂಗೆ ಇವರ ಮಾತಲ್ಲಿ ಆ ಪೂರ್ಣತೆ ತಟ್ಟಿದ್ದರಿಂದಲೋ ಏನೋ ಅವರನ್ನು ನೋಡದಿದ್ದರೂ, ವೈಯುಕ್ತಿಕವಾಗಿ ತಿಳಿಯದಿದ್ದರೂ ಇಷ್ಟವಾಗ್ತಾರೆ. ಆರು ಕತೆಗಳ ಪುಸ್ತಕ ಇದು, ಆ ಆರು ಕತೆಗಳು ಬಿಚ್ಚಿಡೋ ಭಾವಗಳು ಮಾತ್ರ ಹಲವಾರು. ವ್ಯಕ್ತಿತ್ವಗಳ ಸೋಗಲಾಡಿತನವನ್ನು ಬಿಚ್ಚಿಡುವಷ್ಟೇ ಸಹಜವಾಗಿ ದೃಢವ್ಯಕ್ತಿತ್ವಗಳನ್ನೂ ಕಟ್ಟಿ ಕೊಡುವ ಚಾಣಕ್ಷತೆ ಇವರಲ್ಲಿದೆ. ಅದರಲ್ಲೂ ಹೆಣ್ಣಿನ ಮೃದುತನ ಮತ್ತು ಗಟ್ಟಿತನ ಎರಡನ್ನೂ ತುಂಬಾ ಸುಂದರವಾಗಿ ಚಿತ್ರಿಸುತ್ತಾ ಭಾವನೆಗಳ ಹೊಯ್ದಾಟದ ನಡುವೆಯೇ ಬದುಕುವ ಛಲ ಹೇಗೆ ಗುರಿ ತಲುಪುವ ಹಾಗೆ ಮಾಡಬಲ್ಲದು ಅನ್ನೋದನ್ನ ತುಂಬಾ ಮನೋಜ್ಞವಾಗಿ ಹೇಳಿದ್ದಾರೆ.  ಅಧಿಕಾರ, ಪೀಠ  ಇವು ಕಣ್ಣಿಗೆ ಕಾಣುವಷ್ಟು ಸುಲಭವೂ ಅಲ್ಲಾ, ಸಹ್ಯವೂ ಅಲ್ಲಾ. ಗೊಂದಲ, ಆತ್ಮವಂಚನೆ ಹೊಯ್ದಾಟ ಅನಿವಾರ್ಯತೆ ಇವು ಆ ಸ್ಥಾನದ ನಾಲ್ಕು