ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು...

ಡೆಲ್ಲಿಗೆ ಹೋದಾಗ ಗಾಡಿಯಲ್ಲಿ ಎಲ್ಲಾದರೂ ಹೋಗೋದು ನನ್ನ ಹಾಗೂ ಸೀಮಾಳ ಪ್ರೀತಿಯ ಹವ್ಯಾಸ. ಹಾಗೆ ಒಂದು ದಿನ ಎಲ್ಲೋ ಹೋಗಿ ಬರುತ್ತಿರುವಾಗ ಸಿಗ್ನಲ್ ಗಾಗಿ ಕಾಯುತ್ತಿದ್ದೆವು.ಸಮುದ್ರ ಅಲೆಯೋಪಾದಿಯಲ್ಲಿ ಸಾಲಾಗಿ ನಿಂತು ಯಾವ ಕ್ಷಣದಲ್ಲಾದರೂ ಹಸಿರಿನ ಗುಂಡು ಹೊಡೆಯಬಹುದು ಓಡಬೇಕು ಅನ್ನೋ ಧಾವಂತದಲ್ಲಿದ್ದ ವಾಹನಗಳು, ಹಾರನ್ನಿನ ಕಿವಿಗಿಡಚಿಕ್ಕುವ ಸದ್ದು, ಮುಸುಕು ಬೆಳಕು, ಅಸಹನೀಯ ಧಗೆ,   ಬೋರ್ ಅನ್ನಿಸಿ ಪಕ್ಕಕ್ಕೆ ತಿರುಗಿದೆ. ಅದಾಗಲೇ ರಾತ್ರಿ ತನ್ನ ಕಳ್ಳ ಹೆಜ್ಜೆಯಿಟ್ಟು ಬೆಳಕನ್ನು ಇಷ್ಟಿಷ್ಟೇ ಆವರಿಸುತಿತ್ತು. ಬೆಳಕೂ ಅದರ ಆಲಿಂಗನದಲ್ಲಿ ಮೈಮರೆತು ಅಷ್ಟಷ್ಟೇ ಕರಗುತ್ತಿತ್ತು. ಇವರಿಬ್ಬರ ಸಂಭ್ರಮ ಕಂಡು ಅಲ್ಲೆಲ್ಲೋ ಉರಿಯುತಿದ್ದ ದೀಪದ ಮಸುಕು ಬೆಳಕಿನಲ್ಲಿ ಕತ್ತಲಲ್ಲಿ ಗಿಜಿಗುಡುವ ರಸ್ತೆಯ ಬದಿಯಲ್ಲಿ  ಗುರುತು ಸಿಗದ ಮರದ ನೆರಳಲ್ಲಿ ಒಂದು ಡೇರೆಯಿತ್ತು.

ಅದೇ ಗಿಜಿಗುಡುವ ರಸ್ತೆಯ ಬದಿಯಲ್ಲಿ ಎಲ್ಲಿಂದಲೋ ಆರಿಸಿಕೊಂಡು ತಂದ ನಾಲ್ಕು ಕಟ್ಟಿಗೆಯನ್ನು ಮೂರು ಕಲ್ಲುಗಳ ನಡುವೆ ಇಟ್ಟು ಹೊತ್ತಿಸಿ ಅದರ ಮೇಲೆ ಕತ್ತಲೆಗಿಂತಲೂ ಕಪ್ಪಾಗಿದ್ದ ಹೆಂಚು ಇಟ್ಟು ರೊಟ್ಟಿ ತಟ್ಟುತಿದ್ದಳು ಒಬ್ಬಳು ತಾಯಿ. ಕತ್ತಲೆಯ ಸೆರಗಿನಲ್ಲಿ ಬೆಳಕಿನ ಗೆರೆಯೊಂದು ಮಿಂಚಿದಂತೆ, ಎಲ್ಲವೂ ಸ್ತಬ್ಧವಾಗಿ ಹೋದಂತೆ   ತದೇಕಚಿತ್ತಳಾಗಿ ಅವಳನ್ನೇ ದಿಟ್ಟಿಸುತಿದ್ದೆ. ಆಗಾಗ ಉರಿಯನ್ನು ಹೆಚ್ಚು ಕಡಿಮೆ ಮಾಡುತ್ತಾ ಆಯ್ದು ತಂದ ಕಟ್ಟಿಗೆಯೆಂಬ ಪುಟ್ಟ ಪುಟ್ಟ ಕೋಲು, ಕಡ್ಡಿಗಳನ್ನು ಒಡ್ಡುತ್ತಾ  ಹದವಾಗಿ ಬೇಯಿಸುತ್ತಾ ರೊಟ್ಟಿ ತಟ್ಟುವುದರಲ್ಲಿ ಜಗವನ್ನೇ ಮರೆತಹಾಗಿತ್ತು. ಆ ಕತ್ತಲೆಯಲ್ಲೂ ನನ್ನ ಸೆಳೆದಿದ್ದು ಅವಳ ಮುಖದಲ್ಲಿದ್ದ ನಗೆಯ ಮಿಂಚು. ಈ ಜಗತ್ತು, ಅದರ ಗಜಿಬಿಜಿ, ವೇಗ, ಉದ್ವೇಗ  ದುಃಖ ದುಮ್ಮಾನ ಯಾವುದರ ಅರಿವಿಲ್ಲದಂತೆ  ಯಾವುದೋ ಹಾಡೋ, ರಾಗವೋ ಗುನುಗುತ್ತಾ ಏಕಾಗ್ರವಾಗಿ ರೊಟ್ಟಿ ಮಾಡುವುದರಲ್ಲೇ ಮಗ್ನಳಾಗಿದ್ದಳು. ಟ್ರಾಫಿಕ್ ನ ಗಿಜಿಗಿಜಿ, ವಾಹನಗಳ ಅರಚಾಟ ಎಲ್ಲವಕ್ಕೂ ಕಿವುಡಾಗಿದ್ದಳು. ಬಡತನವೆಂದರೆ ದೀನತೆ ಎನ್ನುವ ನಮ್ಮ  ಮೌಡ್ಯವನ್ನು ಅಣಕಿಸುವಂತೆ, ನಮ್ಮ ಅಜ್ಞಾನವನ್ನು ಹರಿಯುವ ದೇವತೆಯಂತೆ ಆಕೆ ಕುಳಿತಿದ್ದಳು. ಇದ್ದಷ್ಟರಲ್ಲೇ ಖುಷಿಯಾಗಿರು ಎನ್ನುವ ಮಾತಿಗೆ ನಿದರ್ಶನವಾಗಿ ಆಕೆ ಕಂಡಳು.  ನೋಡುತ್ತಲೇ ಇರಬೇಕು, ಆ ನಗುವನ್ನು ಕಣ್ಣು, ಮನಸಿನ ತುಂಬಾ ತುಂಬಿಕೊಳ್ಳಬೇಕು ಎನ್ನುವ ಮೋಹ ಹುಟ್ಟುತ್ತಿತ್ತು. ದೃಷ್ಟಿ ಬೇರತ್ತ ಹರಿಯಲು ಮುಷ್ಕರ ಹೂಡಿತ್ತು.

ಆದರೆ ಗಡಿಯಾರ ಓಡುತ್ತಿತ್ತು,  ಹಸಿರು ದೀಪ ಹತ್ತುವ ಹೊತ್ತು, ಇನ್ನು ನಿಲ್ಲಲಾಗದು ಅಲ್ಲಿ ಹೊರಡಲೇ ಬೇಕು. ಆದರೆ ಅಲ್ಲಿಂದ ಹೊರಡುವ ಮನಸ್ಸಿಲ್ಲ, ತಡೆದು ನಿಲ್ಲಿಸಿದ್ದು ಏನು? ಅರ್ಥವೂ ಆಗಿರಲಿಲ್ಲ, ಆಗಲೂ ಬೇಕಿರಲಿಲ್ಲ. ಅಲ್ಲೊಂದು ಸಂವಹನ ಸದ್ದಿಲ್ಲದೇ ನಡೆಯುತ್ತಿತ್ತು.  ಅಲ್ಲಿಯವರೆಗೂ ನನ್ನಂತೆ ಮೌನವಾಗಿದ್ದ ಗಾಡಿಯ ಕಿವಿ ತಿರುಪಿದ ಸದ್ದು ಕೇಳಿಸಿತು, ಅಯ್ಯೋ ಹೊರಡಲೇಬೇಕಾ ಎಂದು ಕಳವಳಿಸುವ ಹೊತ್ತಿಗೆ ತಲೆಯೆತ್ತಿದ ಅವಳು  ನೋಡಿದ್ದು ಕಣ್ಣೆವೆ ಮುಚ್ಚದೆ ಅವಳನ್ನೇ ನೋಡುತಿದ್ದ ನನ್ನನ್ನೇ.. ಇಬ್ಬರ ದೃಷ್ಟಿ ಸಂಧಿಸಿದ ಕ್ಷಣದಲ್ಲೇ ಅಲ್ಲೊಂದು ನಗೆಯ ಮಿಂಚು ಮಿಂಚಿ ಪಕ್ಕನೆ ಬೆಳಕಾಗಿ ಇಬ್ಬರ ಮುಖದಲ್ಲೂ ಹರಡಿತು. ಜನ್ಮಾಂತರದ ಗೆಳತಿಯರು ವಿದಾಯ ಹೇಳುತ್ತಿದ್ದರೆನೋ ಎಂಬಂತೆ ಇಬ್ಬರ ಕಣ್ಣುಗಳೂ ಮಾತಾಡಿಕೊಂಡವು, ಇಬ್ಬರ ಕೈಗಳೂ ಒಮ್ಮೆಲೇ ಮೇಲಕ್ಕೆ ಬಂದವು. ಕೆಳಗಿಸುವ ಹೊತ್ತಿಗೆ ಗಾಡಿ ಒಂದೇ ಉಸಿರಿಗೆ ಮುಂದಕ್ಕೆ ಚಲಿಸಿಯಾಗಿತ್ತು. ಬೆವರುತ್ತಿದ್ದ ಮನಸ್ಸಿಗೆ ತಂಗಾಳಿ ನೇವರಿಸಿದ ಹಾಗಾಗಿತ್ತು.

ಬಹುಶಃ ರಜೆ ಮುಗಿಸಿ ಕಾಲೇಜ್ ಗೆ ಹೋಗುತ್ತಿದ್ದೆ. ಆಗುಂಬೆ ಘಾಟಿಯ ಒಂದೊಂದೇ ತಿರುವನ್ನು ನಮ್ಮನ್ನೂ ತಿರುಗಿಸುತ್ತಾ ಬಸ್ ಇಳಿಯುತ್ತಿತ್ತು. ಕಂಬಿ ಹಿಡಿದು ಓಲಾಡುತ್ತಾ ಬೀಳದ ಹಾಗೆ ನಿಂತವಳ ಕುದುರೆ ಜುಟ್ಟಿನಲ್ಲಿ ಕುಂಕುಮ ಇಡಿಸಿ ಆಂಟಿ ಮುಡಿಸಿದ ಮಲ್ಲಿಗೆ ಹೂವಿತ್ತು. ಹೆಬ್ರಿ ಬರುವ ಹೊತ್ತಿಗೆ ಸಿಕ್ಕ ಸೀಟ್ ಅಲ್ಲಿ ಕೂರಬೇಕು ಎನ್ನುವಾಗ ಯಾವುದೋ ಕೈಯೊಂದು ಏನನ್ನೋ ಹೆಕ್ಕಿಕೊಂಡ ಹಾಗೆ ಅನ್ನಿಸಿ ಅರೆ ತಿರುಗಿದರೆ ಹಿಂದೆ ನಿಂತಿದ್ದ ಹುಡುಗನೊಬ್ಬ ಮುಡಿಯಿಂದ ಬಿದ್ದ ಮಲ್ಲಿಗೆ ಹೂ ಎತ್ತಿ ಮೃದುವಾಗಿ ಜೋಬಿಗೆ ಇಳಿಸಿದ್ದು ಕಾಣಿಸಿತು. ಪುಳಕದ ನಗು ಕ್ಷಣವರಳಿ  ಬೆಚ್ಚಗಿನ ನೆನಪೊಂದು ಮನಸ್ಸಿನಲ್ಲಿ ಬಂಧಿಯಾಯಿತು. ತಿರುಗಿ ನೋಡಿದ್ದರೆ ಈ ಭಾವ ಇಷ್ಟು ವರ್ಷಗಳು ಕಳೆದರೂ ಅಷ್ಟೇ ಮೋಹಕವಾಗಿ ಉಳಿಯುತ್ತಿತ್ತಾ...

ಕೆಲವು ಭಾವಗಳೇ ಹಾಗೇ... ಎಲ್ಲಿ, ಹೇಗೆ, ಯಾಕೆ ಹುಟ್ಟುತ್ತವೆ ಅನ್ನೋದಕ್ಕೆ ಕಾರಣ ನಮಗೆ ಗೊತ್ತಿರುವುದಿಲ್ಲ. ದಾರಿಯ ತಿರುವಿನಲ್ಲಿ ಅಚಾನಕ್ಕಾಗಿ ಸಿಕ್ಕ ಗೆಳೆಯ, ಹೋಗುವಾಗ ಗೊತ್ತಿಲ್ಲದೇ  ಮೃದುವಾದ ಕೈ ತಗುಲಿಸಿ ಬೊಚ್ಚು ಬಾಯಿ ತೆರೆದು ನಕ್ಕ ಮಗು, ತಲೆಯ ನೇವರಿಸಿ ದೃಷ್ಟಿ ತೆಗೆವ ಯಾವುದೋ ಅಪರಿಚಿತ ಅಜ್ಜಿ, ಓಡುವ ಕಾರಿನಲ್ಲಿ ಕೈಯಾಡಿಸಿ ನಗುವ ಹುಡುಗಿ, ಸಣ್ಣ ಸಹಾಯ ಮಾಡಿ ನಕ್ಕು ಮುಂದೆ ಸಾಗುವ ವ್ಯಕ್ತಿ, ರಸ್ತೆ ದಾಟಲು ಪರದಾಡುವಾಗ ವೇಗದ ಕಾರಿಗೆ ಬ್ರೇಕ್ ಹಾಕಿ ನಿಲ್ಲಿಸಿ ಮುಂದಕ್ಕೆ ಹೋಗಲು ಅನುವುಮಾಡಿಕೊಟ್ಟ ಯುವಕ, ಬಿದ್ದ ಹಣವನ್ನು ಬಗ್ಗಿ ಎತ್ತಿಕೊಡುವ ವಯಸ್ಕ, ಗಾಡಿಗಳ ಮಧ್ಯೆ ಸಿಲುಕಿ ಹೋದ ವಾಹನವನ್ನು ಈಚೆಗೆ ಎಳೆದುಕೊಡುವ ಅಪರಿಚಿತ, ಚೆಂದದ ನಗು ಬಿಸಾಕಿ ಹೋಗುವ ಹುಡುಗ, ಕಣ್ಣು ತುಂಬಾ ನೀರು ತುಂಬಿಕೊಂಡು ವಿದಾಯ ಹೇಳುವ ಗೆಳತಿ    ಹೀಗೆ ಬದುಕಿನ ದಾರಿಯಲ್ಲಿ ಅಪ್ರಯತ್ನವಾಗಿ, ಆಕಸ್ಮಿಕವಾಗಿ ಎದುರಾಗಿ ಒಂದು ಸುಂದರ ನೆನಪು ಕಟ್ಟಿ ಕೊಡುತ್ತಾರೆ.  ಆ ಕ್ಷಣಕ್ಕೆ ಮನಸ್ಸಿಗೆ ನೆಮ್ಮದಿಯನ್ನೂ, ಸಂತೋಷವನ್ನೂ ಪ್ರೇಮವನ್ನೂ ಮೂಡಿಸಿಯೂ ಇರುತ್ತಾರೆ. ಆದರೆ ಭಾವ ಶಾಶ್ವತವಾ.....  ಅಲ್ಲ. ಇನ್ನೊಮ್ಮೆ ಅದೇ ವ್ಯಕ್ತಿಯೊಂದಿಗೆ, ಅದೇ ಸ್ಥಳದಲ್ಲಿ ಆ ಭಾವವೇ ಹುಟ್ಟುತ್ತದೆ ಅನ್ನೋದೂ ಸತ್ಯವಲ್ಲ, ಸಾಧ್ಯವೂ ಇಲ್ಲ. ಅದು ಆ ಕ್ಷಣದ  ಅನುಭವ, ಅದಷ್ಟೇ ಸತ್ಯ. ಅದೊಂದು ಮಾಯಾ ಜಿಂಕೆಯಂತೆ, ಮರಳುಗಾಡಿನ ಮರೀಚಿಕೆಯಂತೆ. ಮತ್ತದನ್ನು ಹುಡುಕಬಾರದು. ಅದು ಕಾಪಿಟ್ಟ ನೆನಪಾಗಬೇಕು ಅಷ್ಟೇ.

ಪ್ರತಿ ಘಟನೆಗೂ ಎರಡು ವ್ಯಕ್ತಿಗಳು ಹೇಗೆ ಮುಖ್ಯವೋ ಆ ಘಟನೆ ನಡೆಯುವಾಗಿನ ಸಮಯ, ಸಂದರ್ಭ, ಮನಸ್ಥಿತಿ, ಪರಿಸ್ಥಿತಿ ಎಲ್ಲವೂ ಅಷ್ಟೇ ಮುಖ್ಯ. ಪ್ರತಿಕ್ಷಣದ ಅಂತ್ಯ ಜರುಗುವ ಹಾಗೆಯೇ ಇನ್ನೊಂದು ಕ್ಷಣದ ಆರಂಭವೂ ಆಗುವುದು ಪ್ರಕೃತಿ ನಿಯಮ. ಅದರ ಚಲನೆ ನಿರಂತರ. ಹಾಗಾಗಿ ಮತ್ತೆ ಅವೆಲ್ಲವೂ ಹಾಗೆ ಒಂದಾಗಿ ಘಟಿಸುವುದು ಸಾಧ್ಯವಿಲ್ಲದ ಮಾತು. ಕಾಲದ ಜೊತೆಗೆ ಭಾವವೂ ಚಲಿಸಿರುತ್ತದೆ.ಹುಡುಕಿದಾಗ ಮತ್ತೆ ಅದೇ ದೊರೆಯದೆ ನಿರಾಸೆಯೋ, ಕೋಪವೋ ಇನ್ಯಾವುದೋ ಕಾಡಿ ಮೊದಲಿನ ಮಧುರ ಅನುಭವ ಸಹ ಕಹಿಯಾಗಿ ಹೋಗಿಬಿಡುತ್ತದೆ. ಒಂದೇ ನೀರನ್ನು ಎರಡು ಬಾರಿ ಮುಟ್ಟಲು ಅದ್ಹೇಗೆ ಸಾಧ್ಯ?

ಹುಟ್ಟುವ ಪ್ರತಿಯೊಂದಕ್ಕೂ ಸಾವಿದೆ ಅನ್ನೋದು ಅಕ್ಷರಶಃ ಸತ್ಯ. ಹಾಗಾಗಿ ಭಾವನೆಗಳಿಗೂ, ಅಭಿಪ್ರಾಯಗಳಿಗೂ ಸಾವಿದೆ. ಮನಸ್ಸು ಚಂಚಲ ಅಂತಾರೆ. ಮನುಷ್ಯ ನಿಂತರೂ ಮನಸ್ಸು ನಿಲ್ಲುವುದಿಲ್ಲ. ಅದರ ಚಲನೆ ನಿರಂತರ. ಹಾಗಾಗಿ  ಇವತ್ತು ತೀವ್ರವಾಗಿ ಕಾಡಿದ ಭಾವವೊಂದು ನಾಳೆಗೆ ಇಷ್ಟೇನಾ ಅನ್ನಿಸಬಹುದು. ಅದಕ್ಕಾಗಿ ಇಷ್ಟು ತಪನೆಪಟ್ಟನಾ ಅನ್ನಿಸಬಹುದು. ಮೊದಲ ದಿನ ಹಿಂಸೆ ಅನಿಸಿದ ವಿದಾಯವೊಂದು ಮರುದಿನಕ್ಕೆ ಸಹ್ಯವಾಗಬಹುದು. ಯಾವುದೋ ಮುನಿಸು ನಗು ಹುಟ್ಟಿಸಬಹುದು. ದ್ವೇಷವೊಂದು ಅನಾವಶ್ಯಕ ಅನ್ನಿಸಬಹುದು. ಖುಷಿ ಕೊಟ್ಟಿದ್ದ ಪ್ರೀತಿಯೊಂದು ಉಸಿರುಗಟ್ಟಿಸಬಹುದು. ಹತ್ತಿರವಿರಬೇಕು ಅನಿಸಿದವರ ಮಧ್ಯೆ ಒಂದು ಅಂತರಕ್ಕಾಗಿ ಹಾತೊರೆಯಬಹದು. ಕುದಿಯುವ ದ್ವೇಷವೂ ತಣ್ಣಗಾಗಬಹದು. ರೋಮಾಂಚನವೆನ್ನಿಸಿದ್ದೂ ಅಸಹ್ಯವೆನಿಸಬಹುದು. ಯಾವ ಭಾವವೂ ಸ್ಥಿರವಲ್ಲ. ಯಾವುದೂ ಶಾಶ್ವತವಲ್ಲ. ಯಾಕೆಂದರೆ ಯಾವುದೂ ನಿಲ್ಲುವುದಿಲ್ಲ. ಚಲಿಸುತ್ತಿರುವಷ್ಟು ಹೊತ್ತು ಪ್ರತಿಯೊಂದು ಹೊಸದೇ. ನಿಂತ ಮರುಕ್ಷಣ ಸಾವೇ...

ಬದುಕು ಚಲಿಸುತ್ತಿರಬೇಕು. ಹಳೆಯದನ್ನು ಬಿಟ್ಟು ಮುಂದಕ್ಕೆ ಹೋದಾಗ ಮಾತ್ರ ಹೊಸದು ದಕ್ಕುತ್ತದೆ. ಪಡೆದುಕೊಳ್ಳಲು ಕಲಿಯುವ ಹಾಗೆ ಬಿಟ್ಟು ಕೊಡುವುದು ಕಲಿತಾಗ ಮಾತ್ರ ನೆಮ್ಮದಿ. ಬದುಕು ವರ್ತಮಾನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಅದರ ಅಗಾಧತೆ ಅರಿವಾಗುತ್ತದೆ, ಅರ್ಥಪೂರ್ಣವಾಗುತ್ತದೆ. ಭವಿಷ್ಯಕ್ಕೊಂದು ಸುಂದರ ನೆನಪು ಉಳಿಯುತ್ತದೆ  ಆ ಕ್ಷಣವಷ್ಟೇ ಸತ್ಯ. ಅನುಭವಿಸಬೇಕು. ಕಳೆದುಹೋದ ಮೇಲೆ ಅದು ನೆನಪಷ್ಟೇ. ಕಾಲಚಕ್ರ ಮುಂದಕ್ಕೆ ಹೋಗುವಾಗ ನಾವಲ್ಲೇ ನಿಲ್ಲಬಾರದು. ಪ್ರತಿಯೊಬ್ಬರೂ ಪ್ರತಿಯೊಂದು ಚಲಿಸುತ್ತಲೇ ಇರುತ್ತದೆ. ಅಲ್ಲೇ ನಿಂತು ಕಾಯುವುದು ನೋಯುವುದು ನಮ್ಮ ಮೂರ್ಖತನವೆ ಹೊರತು ಮುಂದಕ್ಕೆ ಹೊರಟವರದ್ದಲ್ಲ. ಮತ್ತದೇ ಜಾಗಕ್ಕೆ ಹೋದರೂ ಸಮಯ ಹಿಂದುರುಗಿ ಹೋಗುವುದಿಲ್ಲ. ಹಾಗಾಗಿ ಈ ಕ್ಷಣವಷ್ಟೆ ಸತ್ಯ, ಅದಷ್ಟೇ ನಿತ್ಯ.   ಹೀಗೆಂದು ಕೊಳ್ಳುವಾಗಲೆಲ್ಲ  ಕುವೆಂಪು ಕವನದ ಈ ಸಾಲು ನೆನಪಾಗುತ್ತದೆ.

ಎಲ್ಲಿಯೂ ನಿಲ್ಲದಿರು,
ಕೊನೆಯನೆಂದು ಮುಟ್ಟದಿರು...







Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...