ಮೌನವಾಗಿದ್ದೇನೆ ಎಂದರೆ ಹೆದರಿದ್ದೇನೆ ಅಂದಲ್ಲ.. ನಿನಗೆ ಉತ್ತರಿಸುವ ಅಗತ್ಯವಿಲ್ಲ ಎಂದೂ ಆಗಬಹುದು. ಮಾತಲ್ಲೂ ನೂರಾರು ಅರ್ಥ ಹುಡುಕುವ ನೀನು ನನ್ನ ಮೌನವನ್ನು ಅರ್ಥ ಮಾಡಿಕೊಳ್ಳಲು ಪಡುವ ಪರಿದಾಟ ನೋಡಬೇಕು. ನಂಗೊತ್ತು, ನೀನು ಸುಮ್ಮನಿರಲಾರೆ. ಆಕ್ಷಣಕ್ಕೆ ನಿನಗೊಂದು ಅರ್ಥಬೇಕು ಅದಕ್ಕೆ ಉತ್ತರಿಸಬೇಕು, ನನ್ನ ರೊಚ್ಚಿಗೆಬ್ಬಿಸಬೇಕು ಅನ್ನುವ ನಿನ್ನ ಆಸೆ ಅರ್ಥವಾಗದ್ದೇನಲ್ಲ.
ಮೌನವಾಗಿದ್ದೇನೆ ಅಂದ್ರೆ ಉತ್ತರವಿಲ್ಲ ಎಂದಲ್ಲ... ನಿನ್ನ ಬಗೆಗಿನ ದಿವ್ಯ ನಿರ್ಲಕ್ಷ್ಯವೂ ಆಗಿರಬಹುದು. ಮಾತನ್ನು ನಿರೀಕ್ಷಿಸಿ ನನ್ನ ಹಣಿಯಲು ಯತ್ನಿಸುತ್ತಿರುವ ನಿನ್ನ ಪ್ರಯತ್ನಕ್ಕೆ ಬೆಲೆಯೇ ಕೊಡದ ನನ್ನ ಮೌನ ನಿನ್ನ ಅದ್ಯಾವ ಪರಿ ಕಾಡಬಹುದು ಅನ್ನುವುದು ನೋಡಬೇಕು.
ಮೌನವಾಗಿದ್ದೇನೆ ಅಂದ್ರೆ ತಪ್ಪು ನನ್ನದೆಂದು ಕೊಂಡಿದ್ದೇನೆ ಎಂದಲ್ಲ . ಯಾರಿಗೋ ಸಮರ್ಥನೆ ಕೊಡಬೇಕು ಅನ್ನುವ ಅನಿವಾರ್ಯತೆ ಇಲ್ಲದಿರಬಹುದು. ನನ್ನ ಉತ್ತರಕ್ಕೆ ಏನು ಪ್ರತ್ಯುತ್ತರ ಕೊಡಬಹುದು ಎಂಬ ನಿನ್ನ ಲೆಕ್ಕಾಚಾರ ನಿರಂತರ ಜಾರಿಯಲ್ಲಿರಲಿ ಅನ್ನೋ ಬಯಕೆಯೂ ಇರಬಹುದು.
ಮೌನವಾಗಿದ್ದೇನೆ ಎಂದರೆ ಅಸಹಾಯಕಳಾಗಿದ್ದೇನೆ ಎಂದಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇಕೆ ಎಂಬ ಸಾಮಾನ್ಯ ಜ್ಞಾನವೂ ಆಗಿರಬಹುದು. ಯಾವುದನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಅನ್ನುವ ಅರಿವಿದ್ದವ ಮಾತ್ರ ಬುಧ್ಹಿವಂತ ಅನ್ನೋದು ನಿಂಗೆ ಗೊತ್ತಾಗೋದಾದರೂ ಹೇಗೆ ಬಿಡು.
ಮೌನವಾಗಿದ್ದೇನೆ ಎಂದರೆ ಕಳೆದುಕೊಳ್ಳುವ ಭಯವಿದೆ ಎಂದಲ್ಲ. ದಕ್ಕಿದ ಪ್ರತಿಯೊಂದೂ ಒಂದು ದಿನ ಕಳೆದು ಹೋಗಲೇ ಬೇಕು ಅನ್ನೋದರ ಅರಿವಿನಿಂದ ವಿದಾಯ ಹೇಳಿದ್ದೇನೆ ಅನ್ನುವುದೂ ಆಗಿರಬಹುದು. ಬದುಕು ಸದಾ ಪಡೆಯುತ್ತಾ, ನೀಡುತ್ತ ಕೆಲವೊಮ್ಮೆ ಆಕಸ್ಮಿಕವಾಗಿ ಕಳೆದುಕೊಳ್ಳುತ್ತಾ, ಹಲವೊಮ್ಮೆ ನೂಕಿ ತಳ್ಳುತ್ತಾ ಹರಿಯುವ ನದಿಯಂತೆ.
ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮಾತನ್ನೇ ಅರ್ಥೈಸಿಕೊಳ್ಳದ ನೀನು ಮೌನಕ್ಕೆ ವ್ಯಾಖ್ಯಾನ ಕೊಡಲು ಸೋಲುತ್ತಿ ಅನ್ನುವುದರ ಅರಿವಿದ್ದೂ ಸುಮ್ಮನಿರುತ್ತೇನೆ. ಯಾಕೆಂದರೆ ಬದುಕಿಗೆ ಏನು ಬೇಕು, ಯಾರು ಬೇಕು ಅನ್ನುವುದು ಕೇವಲ ನನಗಷ್ಟೇ ಗೊತ್ತಿರುವುದರಿನ ಮತ್ತದು ನನ್ನ ಬದುಕಾದ್ದರಿಂದ .

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...