ಎಲ್ಲೋ ಕೇದಿಗೆ ಹೂ ಬಿಟ್ಟಿದೆ ನೋಡು ಹೇಗೆ ಘಂ ಅಂತಾ ಇದೆ ಅಂತ ಅಜ್ಜಿ ಹೇಳುತಿದ್ದರೆ ಸಣ್ಣದೊಂದು ಪುಳಕ ಶುರುವಾಗುತ್ತಿತ್ತು. ಯಾರಿಗೆ ತಂದು ಕೊಡಲು ಹೇಳೋದು ಅನ್ನೋ ಲೆಕ್ಕಾಚಾರ ಕೂಡ. ನಾವ್ಯಾರು ಹೋಗಿ ಸುಲಭಕ್ಕೆ ಕಿತ್ತು ತರುವ ಹಾಗಿರಲಿಲ್ಲ ಅದು. ಅಸಲಿಗೆ ಅದು ಹೂವಾ... ಬೆಳಂದಿಗಳನ್ನ ಕುಡಿದ ಬೆಳೆದ ಹಾಳೆಯಂತೆ ಕಂಡರೂ ಹಾಳೆಯಂತೆ ಸುಲಭವಾಗಿ ಮುಟ್ಟುವ ಹಾಗಿರಲಿಲ್ಲ. ಬದಿಯಲ್ಲಿದ್ದ ಮುಳ್ಳುಗಳು ಮೊದಲು ಕೈಯನ್ನು ಚುಂಬಿಸುತ್ತಿದ್ದವು.

ಆ ಕಾಲದಲ್ಲಿ ಹೂ ಮುಡಿಯುವುದೆಂದರೆ ಎಲ್ಲರಿಗೂ ಸಂಭ್ರಮವೇ. ಹೊರಗೆ ಹೋಗುವಾಗ ತಲೆಯಲ್ಲಿ ಯಾವುದಾದರೂ ಹೂವಿದ್ದರೆ ಮಾತ್ರ ಅದಕ್ಕೊಂದು ಘನತೆ. ಹಾಗಾಗಿ ಕಾಲಕ್ಕೆ ತಕ್ಕ ಹಾಗೆ ಡೇರೆ, ಗುಲಾಬಿ, ಸೀತಾಳೆ, ಮಲ್ಲಿಗೆ, ಕೇದಿಗೆ ಹೀಗೆ ಯಾವುದೋ ಒಂದು ತಲೆಯನ್ನು ಅಲಂಕರಿಸಿ ನಗುತ್ತಿದ್ದವು. ನಾವೂ ಕಿರೀಟ ಧರಿಸಿದ ರಾಜರಂತೆ ತಲೆಯೆತ್ತಿ ಹೆಮ್ಮೆಯಿಂದ  ಮುನ್ನುಗ್ಗುತ್ತಿದ್ದೆವು. ಅದ್ಯಾವಾಗ ಹೂ ಮುಡಿಯುವುದು ಗೊಡ್ಡು ಅನ್ನಿಸಿತೋ ಆ ದೇವರೇ ಬಲ್ಲ. ನಿಮ್ಮ ತಲೆಯಲ್ಲಿ ನಲುಗುವ ಆ ಎಣ್ಣೆಯದೋ, ಶಾಂಪೂವಿನದೋ ಘಾಟು ಸಹಿಸಿ ಉಸಿರುಗಟ್ಟುವ ಕೆಲಸವಿಲ್ಲ ಅಂತ ಅವೂ ನೆಮ್ಮದಿಯ ಉಸಿರುಬಿಟ್ಟವಾ, ಇಲ್ಲಾ ನೊಂದವಾ ಯಾರಿಗೆ ಪುರುಸೊತ್ತು ಕೇಳೋಕೆ, ನೋಡೋಕೆ...

ಕೇದಿಗೆ ಬೆಳೆಯುತ್ತಿದ್ದದ್ದು ಪೊದೆಗಳ ನಡುವೆ. ಎಲೆಯ ಅಂಚಿನಲ್ಲೂ ಸಾಲಾಗಿ ಶಿಸ್ತಿನ ಸಿಪಾಯಿಯಂತೆ ಮುಳ್ಳುಗಳು ನಿಂತಿರುತಿದ್ದವು. ಆ ಮುಳ್ಳಿನ ಪೊದೆಯನ್ನು ಹೇಗೋ ದಾಟಿದರೂ ಇನ್ನೊಂದು ಸುತ್ತಿನ ಅಪಾಯವನ್ನು ಎದುರಿಸಬೇಕಿತ್ತು. ಅರಳಿದ ತಕ್ಷಣ ಮಾರು ದೂರದವರೆಗೂ ಹಬ್ಬುತ್ತಿದ್ದ ಅದರ ಘಮಕ್ಕೆ ನಾಗರಗಳು ಕೊಳಲಿನ ನಾದಕ್ಕೆ ಮರುಳಾದ ದನಗಳಂತೆ ಧಾವಿಸುತ್ತಿದ್ದವು. ಅಂತ ಮುಳ್ಳಿನ ಪೊದೆಯ ನಡುವಿನ ಆ ಹೂವಿಗಾಗಿ ಹೋಗುತಿದ್ದ ಅವುಗಳ ಮೋಹ ಇವತ್ತಿಗೂ ಆಶ್ಚರ್ಯವೇ. ಹಾಗಾಗಿ ತುಂಬಾ ಹುಷಾರಾಗಿ ಅವುಗಳ ಕಣ್ಣಿಗೆ ಬೀಳದಂತೆ ಅದನ್ನು ಕಿತ್ತು ತರುವುದು ಸಾಹಸವೇ. ವಿಶಿಷ್ಟವಾದದ್ದು ಸುಲಭಕ್ಕೆ ದಕ್ಕುವುದಾದರೂ ಹೇಗೆ?

ಹಾಗೆ ತಂದದ್ದನ್ನು ಮುಡಿಯುವುದು ಒಂದೂ ಕಲೆ. ಅದನ್ನು ಮಡಚಿ, ಮುಳ್ಳುಗಳು ತಲೆಗೆ ಚುಚ್ಚದಂತೆ ಹುಷಾರಾಗಿ ಹಾಳಾಗದಂತೆ ಜಾಗರೂಕವಾಗಿ ಇಟ್ಟರೆ ಥೇಟ್ ಕಿರೀಟದಂತೆ ಬೀಗುತ್ತಿತ್ತು ಕೇದಿಗೆ. ಬೇರೆ ಹೂಗಳಾದರೂ ಹಂಚಿಕೊಂಡು ಮುಡಿಯಲು ಬಾರದ ಗಂಡನಂತೆ. ಕೇದಿಗೆ ಹಾಗಲ್ಲ ಅದನ್ನು ಸೀಳಿ ಎಷ್ಟು ಭಾಗವಾದರೂ ಮಾಡಿಕೊಳ್ಳಬಹುದು. ಹಾಗಾಗಿ ಕೇದಿಗೆ ಹೆಣ್ಣು ಅನ್ನಿಸುತಿತ್ತು. ಹೇಗಾದರೂ ಬಳಸಿಕೊಳ್ಳಿ, ನಾನು ಕೇವಲ ಪರಿಮಳ ಮಾತ್ರ ಬೀರುತ್ತೇನೆ, ಏನೇ ಆದರೂ ನನ್ನ ಸ್ವಭಾವ ಬದಲಾಗದು ಅಂತ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುತ್ತಿತ್ತು.

ನಾಚಿಕೆಯಿಲ್ಲದೆ ಯಾರೋ ಮೂಡಿದ ಕೇದಿಗೆಯನ್ನು ಕೇಳಿ ಒಂಚೂರು ಸೀಳಿ ತಲೆಗೆ ಏರಿಸಿಕೊಳ್ಳುವುದು ಯಾವತ್ತೂ ಅವಮಾನ ಅನ್ನಿಸುತ್ತಲೇ ಇರಲಿಲ್ಲ. ಕೊಡುವವರಿಗೆ ಹೆಮ್ಮೆ, ಕೇಳುವವರಿಗೆ ನಾಚಿಕೆ ಎರಡೂ ಬಾರದಂತೆ ಅದ್ಹೇಗೆ ನಿಭಾಯಿಸುತ್ತಿದಳು ಈ ಕೇದಿಗೆ ಅನ್ನೋದು ಇವತ್ತಿಗೂ ಉತ್ತರ ದೊರಕದ ಪ್ರಶ್ನೆಯೇ. ಮನುಷ್ಯರಿಗೆ ಮಾತ್ರವಲ್ಲ ನಾಗನನ್ನೂ ಆಕರ್ಷಿಸುವ, ಪಡೆಯಬೇಕಾದರೆ ಒಂದಷ್ಟು ಕಷ್ಟಪಡು ಅಂತ ಚಾಲೆಂಜ್ ಮಾಡುವ, ಸುತ್ತಲೂ ಅಭೇದ್ಯ ಕೋಟೆ ಕಟ್ಟಿಕೊಂಡರೂ ನಗುವ, ಗಾವುದ ದೂರದವರೆಗೂ ತನ್ನ ಅಸ್ತಿತ್ವ ಪ್ರಚುರ ಪಡೆಸುವ, ಎಷ್ಟೇ ಸೀಳಿದರೂ ಸ್ವಭಾವದಲ್ಲಿ ಕಿಂಚಿತ್ತೂ ಬದಲಾಗದ ಈ ಬೆಳಂದಿಗಳ ಬಾಲೆ ಬದುಕಿನ ದೊಡ್ಡ ಅಚ್ಚರಿ.

ಘಾಟು ಅಂತ ಮೂಗು ಮುರಿಯುವವರು ಒಮ್ಮೆಯಾದರೂ ಆಸ್ವಾದಿಸುವ ಹಾಗೆ ಮಾಡುವ ಮಾಂತ್ರಿಕ ಶಕ್ತಿ ಅವಳಿಗೆ. ದೇವರೋ, ಮನುಷ್ಯರೋ ಯಾರ ಮುಡಿಗಾದರೂ ಒಂದೇ ರೀತಿಯಲ್ಲಿ ಏರುವ ನಿಶ್ಚಲತೆಯಿದೆ. ತನ್ನ ಸ್ವಭಾವವನ್ನು ಯಾವ ಕ್ಷಣದಲ್ಲೂ ಬಿಡದ ದೃಢತೆಯಿದೆ. ತನ್ನ ಅಸ್ತಿತ್ವವನ್ನು ಪ್ರಕಟಗೊಳಿಸುವ ಧೀ ಶಕ್ತಿಯಿದೆ. ಮುಳ್ಳುಗಳ ನಡುವೆ ಮುಳ್ಳನ್ನೇ ಹೊಂದಿದ್ದರೂ ಸಾಹಸಿಗೆ ಒಲಿಯುವ ಗುಣವಿದೆ. ಎಷ್ಟೇ ಸೀಳಿದರೂ ತಲೆಯೆತ್ತಿ ನಿಲ್ಲುವ ಆತ್ಮವಿಶ್ವಾಸ ಇದೆ. ತಾನೂ ಬೀಗಿ, ತನ್ನ ಧರಿಸಿದವರನ್ನು ಬೀಗುವ ಹಾಗೆ ಮಾಡುವ ಕೇದಿಗೆ ಅಚ್ಚರಿ ಮಾತ್ರವಲ್ಲ ಹೆಮ್ಮೆ ಕೂಡಾ..

ತ. ರಾ. ಸು ಈ ಸಾಲು ಎಷ್ಟು ಅರ್ಥಪೂರ್ಣ...

ಕೇದಿಗೆಯ ವನದಲ್ಲಿ ಸಂಚರಿಸದಿರು ಚೆಲುವೆ...
ಕೆಂಪಿನಾಗರವಲ್ಲ.... ಸರ್ಪದೊಡಲು 

Comments

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...