ತೋರಿಸಿ ಕೊಂಡು ಅವರು ಕೊಟ್ಟ ಔಷಧಿ ಕೊಟ್ಟರೂ ಅಹಿಯ  ನೋವು ಮಾತ್ರ ಕಡಿಮೆಯಾಗಲೇ ಇಲ್ಲ. ಜೊತೆಗೆ ವೊಮಿಟ್. ಕೊನೆಗೆ ಬೇರೆ ದಾರಿ ಕಾಣದೆ ಮತ್ತೆ ಕರೆದುಕೊಂಡು ಹೋದರೆ ಇಂಜೆಕ್ಷನ್ ಕೊಟ್ಟು ಒಂದೆರೆಡು ಗಂಟೆ ನೋಡೋಣ, ಮೋಶನ್ ಆದ್ರೆ ಸರಿ ಹೋಗಬಹುದು ಅಂತ ಹೇಳಿ ಅಡ್ಮಿಟ್ ಮಾಡ್ಕೊಂಡ್ರು. ಅದಾಗಲೇ ನೋವು ಶುರುವಾಗಿ ದಿನವಾಗಿತ್ತು. ತೀರಾ ಸುಸ್ತಾಗಬಾರದು ಅಂತ ಡ್ರಿಪ್ ಕೂಡ ಹಾಕಿದ್ದಾಯ್ತು. ಅಬ್ಬರದ ಅಲೆಗಳಿಗೆ ಸುಸ್ತಾಯಿತೇನೋ ಎಂಬಂತೆ ಬಡಿಯುವುದು ನಿಧಾನಕ್ಕೆ ಒಂದು ಹದಕ್ಕೆ ಬರತೊಡಗಿತು.

 ಡ್ರಿಪ್ ಹನಿ ಒಳಕ್ಕೆ ಇಳಿಯುತಿದ್ದಂತೆ ಅವಳೂ ಸ್ವಲ್ಪ ನಿರಾಳವಾಗುತ್ತಿದ್ದಳು. ಆದರೂ ಏನೋ ಆತಂಕ. ಆಗಾಗ ಒಮ್ಮೆ ಹಿಂಡಿದಂತೆ ಬರುವ ನೋವು ಅವಳಿಗೆ ಸುಧಾರಿಸಿಕೊಳ್ಳಲೇ ಸಮಯ ಹಿಡಿಯುವ ಹಾಗೆ ಮಾಡಿತ್ತು. ಸದ್ಯ ಹಾಸ್ಪಿಟಲ್ ಒಳಗೆ ಇದ್ದೇವೆ ಅನ್ನೋ ನಂಬಿಕೆ ಒಂದೇ ಆ ಕ್ಷಣಕ್ಕೆ ಧೈರ್ಯ ತುಂಬುತ್ತಿತ್ತು. ಹನಿ ಹನಿಯಾಗಿ ಇಳಿಯುವ ಅದನ್ನೇ ಗಮನಿಸುತ್ತಾ ಇದ್ದೆ  ನೀರವ ರಾತ್ರಿಯಲಿ ಟಪ್ ಟಪ್ ಬೀಳುವ ಡ್ರಿಪ್ ಸಹ ಇಷ್ಟು ಸದ್ದು ಮಾಡಬಲ್ಲದಾ ಹೊರಗಿನ, ಒಳಗಿನ  ಗೌಜಿನಲ್ಲಿ ಕೇಳದೆ ಹೋಗುವ ಸದ್ದುಗಳೆಷ್ಟು? ಕೈ ಅಲುಗಾಡಿಸದೆ ನಿದ್ದೆ ಹತ್ತುವ ಹಾಗಿದ್ದ ಅವಳ ಮುಖವನ್ನೇ ಆಗಾಗ ದಿಟ್ಟಿಸುವ, ಹನಿ ಹನಿಯಾಗಿ ಇಳಿಯುವ ಡ್ರಿಪ್ ಅನ್ನು ಎಣಿಸುವ ವಿನಃ ಮತ್ತೇನು ತಾನೇ ಸಾಧ್ಯವಿತ್ತು.

ಆಗಾಗ ಸುರಿಯುವ ಮಳೆಯಂತೆ ಬರುವ ನೋವಿನ ಕಾರಣ ಹುಡುಕಲು ಸ್ಕ್ಯಾನ್ ಮೊರೆ ಹೋಗಿದ್ದಾಯಿತು. ಮೈಲ್ಡ್ ಅಪೆಂಡಿಕ್ಸ್ ಅನ್ನೋ ಷರಾ ಹೊತ್ತು ತಂದ ಕಾಗದದಕ್ಕೆ ಒಂದು ಕ್ಷಣ ಬದುಕನ್ನೇ ಅಲ್ಲಾಡಿಸಿ ಹಾಕುವ ಶಕ್ತಿ ಇದೆ ಎಂದರೆ ಬೇರೆ ಸಮಯದಲ್ಲಿ ನಂಬಲಾದರೂ ಸಾಧ್ಯವೇ. ಬದುಕು ತಂದು ಹಾಕುವ ಅನಿರೀಕ್ಷಿತ ತಿರುವುಗಳು ಅದೆಷ್ಟು ಕಂಗಾಲಾಗಿಸಿ ಶಕ್ತಿಯನ್ನು ನುಂಗಿ ನಿಸ್ಸಾಹಯಕ ಸ್ಥಿತಿಗೆ ತಂದು ಬಿಡುತ್ತದೆ. ಬೇರೆಲ್ಲಾ ಸಂಗತಿಗಳಷ್ಟು ಸುಲಭವಾಗಿ ಮಕ್ಕಳಿಗೆ ಆಗುವ ತೊಂದರೆಗಳನ್ನ ಜೀರ್ಣಿಸಿಕೊಳ್ಳಲು ಆಗುವುದೇ ಇಲ್ಲ. ಇದ್ಯಾವ ಸೆಳೆತ...  ಬದುಕಲ್ಲಿ ಸಮಾಧಾನ ಮಾಡುವುದು ಸುಲಭ. ಯಾರು ಬೇಕಾದರೂ ಎಷ್ಟು ಜನ ಬೇಕಾದರೂ ಮಾಡಬಹುದು. ಆದರೆ ಸಮಾಧಾನವಾಗಬೇಕಾಗಿದ್ದು ಮಾತ್ರ ನಾನು. ಹಾಗೇ convince ಮಾಡಿ ಅಣಿ ಮಾಡುವ ಸಾಮರ್ಥ್ಯ ಇರೋದು ಮನಸ್ಸಿಗೆ ಮಾತ್ರ.

ಆ ಕ್ಷಣದಲ್ಲಿ ಕೇಳಿಸಿಕೊಳ್ಳುವ ಎಲ್ಲಾ ಮಾತುಗಳೂ ನಾವ್ಯಾವತ್ತೋ ಇನ್ಯಾರಿಗೋ ಹೇಳಿದ ಮಾತುಗಳೇ. ಅವೆಷ್ಟು ಅರ್ಥಹೀನ, ಯಾಂತ್ರಿಕ ಅನ್ನೋದು ಅರ್ಥವಾಗತೊಡಗಿತ್ತು. ಮುಂದೇನು ಅನ್ನುವ ಹೊತ್ತಿಗೆ ಸರ್ಜನ್ ಬಂದಿದ್ದರು. ಬಂದು ಅಹಿಯನ್ನು ಪರೀಕ್ಷೆ ಮಾಡಿ ಹೋದವರು ಅವಳ ಡಾಕ್ಟರಿಗೆ ಫೋನ್ ಮಾಡುತ್ತಿದ್ದರು.  ಇನ್ನೂ 24 ಗಂಟೆ ಗಮನಿಸೋಣ ಅವಳಿಗೆ ಎಲ್ಲಿ ಪೈನ್ ಬರಬೇಕೋ ಅಲ್ಲಿ ಬರ್ತಾ ಇಲ್ಲಾ ಅದರ ಆಪೋಸಿಟ್ ಬರ್ತಾ ಇದೆ. ಒಂದು ಹನಿ ನೀರು ಕೊಡದೆ ಡ್ರಿಪ್ ಅಲ್ಲೇ ಇರ್ಲಿ ಮತ್ತೆ ನೋಡೋಣ  ಸ್ಕ್ಯಾನ್ ರಿಪೋರ್ಟ್ ನೋಡಿ ತಕ್ಷಣ ಏನೂ  decision ತಗೋಳೋದು ಬೇಡಾ ಅಂದ್ರು. ನೀರು ತರಲು ಹೋದವಳಿಗೆ ಕೇಳಿದ ಮಾತುಗಳಿಂದ ಅಬ್ಬಾ ಇನ್ನೂ ಮಾನವೀಯತೆ ಉಳಿದಿದೆ ಅನ್ನಿಸ್ತು.

ಆಮೇಲಿನದು ಮಾತ್ರ ನರಕ. ಏನಾದರೂ ಮಾಡಬೇಡಿ ಅಂದಾಗ ಮನಸ್ಸು ಅದನ್ನು ಮುರಿಯಲು ಅದೆಷ್ಟು ಬಲವಾಗಿ ಪ್ರಯತ್ನಿಸುತ್ತೇ ಅನ್ನೋದನ್ನ ಬದುಕು ಕಲಿಸಿದ ಕ್ಷಣ. ತಿನ್ನಲು ಇಂಥದು ಬೇಕು ಎಂದು ಯಾವತ್ತೂ ಕೇಳದ ಅಹಿ ಅಮ್ಮಾ ಹಸಿವು ಇದು ತಿನ್ನಬೇಕು ಅನ್ಸುತ್ತೆ, ಅದು ಕುಡಿಯಬೇಕು ಅನ್ಸುತ್ತೆ ಅಂತ ಶುರು ಮಾಡಿದಾಗ ಹಿಂಸೆ ಆಗಲು ಶುರುವಾಗಿತ್ತು. ಅಮ್ಮಾ ಒಂದು ಗುಟುಕು ನೀರಾದ್ರೂ ಕೊಡೇ ಎಂದಾಗ ಮಾತ್ರ ಅಯ್ಯೋ ಬದುಕೇ ಅನ್ನಿಸಿಬಿಟ್ಟಿತ್ತು. ಅವಳ ಜೊತೆಗೆ ನನ್ನದೂ ಸತ್ಯಾಗ್ರಹ. ಅವಳೆದರು ನೀರು ಕುಡಿಯಲೂ ಮನಸ್ಸು ಬಾರದೇ ಕುಳಿತಿದ್ದೆ. ಮೊತ್ತ ಮೊದಲ ಬಾರಿಗೆ ಅಹಿಗೆ ಬದುಕಿನ ಬಗ್ಗೆ, ಅದನ್ನ ಹೇಗೆ ನಾವೇ ಎದುರಿಸಬೇಕು ಅನ್ನೋದರ ಬಗ್ಗೆ, ಮನಸ್ಸಿನ ಶಕ್ತಿಯ ಬಗ್ಗೆ ಗೀತೋಪದೇಶ ಮಾಡಿದ್ದೆ. ಅಷ್ಟನ್ನೂ ಮೌನವಾಗಿ ಕೇಳಿಸಿಕೊಂಡ ಅವಳು ಮರುದಿನ ಮಧ್ಯಾನ ಡಾಕ್ಟರ್ ಬಂದು ಏನಾದರೂ ಕೊಡಿ ಈಗ ಅನ್ನುವವರೆಗೂ ಹನಿ ನೀರನ್ನು ಕೇಳಲಿಲ್ಲ.

ನಶ್ವರತೆ, ಧೀಶಕ್ತಿ , ನನ್ನ ಬದುಕು ನಡೆಯಬೇಕಾಗಿದ್ದು ಕೇವಲ ನಾನು ಮಾತ್ರ ಅನ್ನೋ ಅರಿವು,
ಧೈರ್ಯ, ಕಲಿಸಲು ಆಸ್ಪತ್ರೆಗಿಂತ ಬೇರೆ ಜಾಗ ಇಲ್ಲ.......

ಅಂತೂ 24 ಗಂಟೆಗಳ ಗಡುವು ಮುಗಿದಿತ್ತು. ಬಂದ ಡಾಕ್ಟರ್ ಅವಳನ್ನು ಪರೀಕ್ಷಿಸಿ , ಪ್ರಶ್ನಿಸಿ ನೋವಿದೆಯಾ ಎಂದರೆ ನೀವು ಒತ್ತಿದರೆ ಮಾತ್ರ ನೋವಾಗುತ್ತೆ ಇಲ್ಲಾಂದ್ರೆ ಇಲ್ಲಾ ಅಂದ್ಲು. ಕೊನೆಗೆ ಮೋಶನ್ ಆಗಲು ಮೆಡಿಸಿನ್ ಹಾಕಿ ಹಾಗೂ ಊಟ ಕೊಡಿ. ಊಟ ಮಾಡಿದ ಮೇಲೆ ನೋವು ಬಂತು ಅಂದ್ರೆ, ಮೋಶನ್ ಆಗಿಲ್ಲ ಅಂದ್ರೆ ಇನ್ನೊಮ್ಮೆ ಸ್ಕ್ಯಾನ್ ಮಾಡೋಣ, ರಿಪೋರ್ಟ್ ಬಂದ ಮೇಲೆ ಮತ್ತೆ ಯೋಚಿಸೋಣ ಅಂದ್ರು.

ಸದ್ಯಕ್ಕೆ ಎದೆಯಿಂದ ದೊಡ್ಡ ಹೆಬ್ಬಂಡೆ ಸರಿದರೂ ಕಟ್ಟಿದ ಉಸಿರು ಇನ್ನೂ ಸರಾಗವಾಗಿರಲಿಲ್ಲ. ಬೆಳಿಗ್ಗೆ ಬಂದ ಪೂಜಕ್ಕ ಬಿಸಿಯಾಗಿ, ಮೆದುವಾಗಿ ಅನ್ನಮಾಡಿ ಒಂದಷ್ಟು ಮೊಸರು ತಂದಿದ್ದರಿಂದ ಒಂದೇ ಉಸಿರಿಗೆ ಓಡಿ ಹೋಗಿ ಮಾಡಿಕೊಂಡು ತರುವ ಗಡಿಬಿಡಿಯಿಲ್ಲದೆ ಒಂದಷ್ಟು ನಿರಾಳವಾಗಿತ್ತು. ಮೆದುವಾಗಿ ಕಲಸಿ ಇಷ್ಟಿಷ್ಟೇ ತುತ್ತು ಮಾಡಿ ಗುಬ್ಬಿ ಬಾಯಲ್ಲಿ ಇಡುತ್ತಿದ್ದರೆ ಅವಳು ಅನ್ನವನ್ನು ಕಂಡ ಸಂಭ್ರಮದಲ್ಲಿ ಕೆಲವು ಸಲ ಅಗಿಯುವುದು ಮರೆತು ನುಂಗುತಿದ್ದಳು. ಮನಸ್ಸು ಎಷ್ಟು ರೆಬೆಲ್ ಅಲ್ವಾ ಅನ್ನಿಸುತಿತ್ತು. ಬೇಡಾ ಎಂದಿದ್ದನ್ನು ಮಾಡುವ, ಮೀರುವ ಆಸೆ ಇರುವಷ್ಟು ಮಾಡಲಿ ಬಿಡು  ಎನ್ನುವುದಕ್ಕೆ ಇರುವುದಿಲ್ಲ. ಬದುಕಿಗೆ ಒಂದು ಚೌಕಟ್ಟು ಇದ್ದಾಗ ಮಾತ್ರ ಅದನ್ನು ಮೀರಿ ಬೆಳೆಯಲು ಸಾಧ್ಯವೇನೋ ಇಲ್ಲದಿದ್ದರೆ ಅದು ಸೋಮಾರಿ ಆಗಬಹುದೇನೋ....

ಅಷ್ಟರವರೆಗೂ ಡ್ರಿಪ್ ಬೇಡಿಗೆ ಒಳಗಾಗಿ ಹಾಸಿಗೆಯಲ್ಲೇ ಮಲಗಿದ್ದ ಅವಳಿಗೆ ಬಿಡುಗಡೆ ಸಿಕ್ಕ ಹಾಗಿತ್ತು. ಒಂದರ್ಧ ಘಂಟೆ ಓಡಾಡುವ ವೇಳೆಗೆ ಔಷಧಿಯ ಪ್ರಭಾವವೋ, ಊಟ ಮಾಡಿದಕ್ಕೋ ಅಂತೂ ಮೋಶನ್ ಕೂಡ ಹೋಗಿ ಅವಳಿಗೆ ಹೊಟ್ಟೆ ಹಗುರವೆನಿಸಲು ಶುರುವಾಗಿತ್ತು. ಪ್ರತಿಯೊಂದು ಕೆಲಸವೂ ಸರಾಗವಾಗಿ ನಡೆದಾಗ ಮಾತ್ರ ಬದುಕು ನಿರಾಳ. ಚಿಕ್ಕದೋ, ದೊಡ್ಡದೋ ಪ್ರತಿಯೊಂದು ಅನಿವಾರ್ಯ ಹಾಗೂ ಅಷ್ಟೇ ಪ್ರಾಮುಖ್ಯ ಅನ್ನೋದು, ಅವುಗಳ ಬೆಲೆ ಅರ್ಥವಾಗೋದು ಕೆಲಸ ನಿಲ್ಲಿಸಿದಾಗಲೇ. ಬೆಲೆ ಕೊಡುವುದನ್ನು ಅನಾರೋಗ್ಯ ಹೇಗೆ ಕಲಿಸುತ್ತದೆ ಅಲ್ವಾ ಅಂತ ನಗುವೂ ಬಂತು. ಪ್ರಕೃತಿಯಲ್ಲಿ ಪ್ರತಿಯೊಂದು ಪಾಠ ಕಲಿಸುತ್ತೆ. ಮನುಷ್ಯನಿಗೆ ಕಲಿಯುವುದಷ್ಟೇ ಕೆಲಸ...

ತಿಂದ ಊಟವೂ ಮುಷ್ಕರ ಮಾಡದೆ ಜೊತೆಗೆ ಜ್ಯೂಸು ಅನ್ನೂ ಜೊತೆಗೆ ಸೇರಿಸಿಕೊಂಡು ಹೊಟ್ಟೆ ತನ್ನ ಹೋರಾಟವನ್ನು ಹಿಂದೆಗೆದುಕೊಂಡು ಮತ್ತೆ ತನ್ನ ಕೆಲಸಕ್ಕೆ ವಾಪಾಸಾಗಿತ್ತು. ಉಫ್ ಅಂದು ಉಸಿರು ಬಿಟ್ಟು ಟಿ.ವಿ ಹಾಕಿದರೆ ನಾಳೆ ಮತ್ತೆ ವೈದ್ಯರ ಮುಷ್ಕರ ಅನ್ನೋ ಸುದ್ದಿ ಬಿತ್ತರವಾಗುತಿತ್ತು. ಜೊತೆಗೆ ಸಾವು ನೋವುಗಳ ವರದಿಯೂ. ನಾಲ್ಕು ದಿನಗಳ ನಂತರ ಅಹಿ ನೆಮ್ಮದಿಯಾಗಿ ನಿದ್ದೆ ಹೋಗಿದ್ದಳು. ಬೆಳಿಗ್ಗೆ ಬಂದ ಡಾಕ್ಟರ್ ಏನೂ ತೊಂದರೆಯಿಲ್ಲ ಮನೆಗೆ ಕರ್ಕೊಂಡ್ ಹೋಗಿ ಕೆಲವೊಮ್ಮೆ ಕರುಳಿನ ಊತ ಕೂಡ ಆಗಿರುತ್ತೆ. ಹಾಗಾಗಿ 24 ಗಂಟೆ ಏನೂ ಕೊಡದೆ ಅದಕ್ಕೆ ರೆಸ್ಟ್ ಕೊಡೋಣ ಅಂದಿದ್ದು. ಆಗ ಅದು ರೆಲಕ್ಷ ಆಗುತ್ತೆ ಹಾಗೂ ಸರಿಹೋಗುತ್ತೆ ಅಂತ. ಅವಳಿಗೆ ಈಗ ನೋವಿಲ್ಲವಲ್ಲ, ಜೊತೆಗೆ ಮೋಶನ್ ಸಹ ಆಯ್ತಲ್ಲ ನೋ ಪ್ರಾಬ್ಲಮ್ ಅಂದ್ರು. ಬೇಕಿದ್ರೆ ಇನ್ನೊಂದು ಸ್ವಲ್ಪ ದಿನ ಬಿಟ್ಟು ಸ್ಕ್ಯಾನ್ ಮಾಡಿಸಿ ನಿಮ್ಮ ಸಮಾಧಾನಕ್ಕೆ otherwise ನೋ ಪ್ರಾಬ್ಲಮ್ ಅಂದ್ರು.

ಮಷೀನ್ ಅದರ ಕೆಲಸವಷ್ಟೇ ಮಾಡುತ್ತೆ. ಅದು ತೋರಿಸಿದ್ದನ್ನು ಸರಿಯಾಗಿ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮನುಷ್ಯನ ತಿಳುವಳಿಕೆ, ಅನುಭವ ಹಾಗೂ   ಧೈರ್ಯದ ಮೇಲೆ ಅವಲಂಬಿಸಿರುತ್ತದೆ. ಈ ಕ್ಷಣಕ್ಕೂ ಆ ಇಬ್ಬರು ಡಾಕ್ಟರ್ ನನ್ನ ಪಾಲಿಗೆ ದೇವರಂತೆ ಭಾಸವಾಗುತ್ತಾರೆ. ಸ್ಕ್ಯಾನ್ ರಿಪೋರ್ಟ್ ನೋಡಿಯೂ ಗಡಿಬಿಡಿ ಮಾಡದೆ, ನಮ್ಮನ್ನು ಹೆದರಿಸದೆ ದುಡ್ಡಿಗಾಗಿ ಯೋಚಿಸದೆ ಟ್ರೀಟ್ ಮಾಡಿ ಮಾನವೀಯತೆ ಮೆರೆದ ಅವರಿಬ್ಬರೂ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಎಷ್ಟೋ ಘಟನೆಗಳನ್ನ ನೋಡಿ, ಕೇಳಿ ಗೊತ್ತಿದ್ದ ಅದರಲ್ಲೂ ಬೆಂಗಳೂರಿನ ನರ್ಸಿಂಗ್ ಹೋಂ ಎಂದರೆ ಬೆಚ್ಚಿ ಬೀಳುವ ಹಾಗಿನ ಕಾಲದಲ್ಲಿ ಇಂಥವರು ನಿಜವಾಗಲು ನಾರಾಯಣರೇ ಅನ್ನಿಸಿ ಬಿಡುತ್ತಾರೆ.

ಯಾವುದೋ ಅಪರಿಚಿತ ನಂ ಅನ್ನು ಎತ್ತಿ ಸ್ಪಂದಿಸಿದ ಡಾಕ್ಟರ್ ದೇವರೇ,
 ಮನೆಯ ಬಳಿ ಹೋದರೂ ಎಮರ್ಜೆನ್ಸಿ ಅಂದರೂ ನೋಡದ ಡಾಕ್ಟರ್ ಸಹ ದೇವರೇ...
ಒಬ್ಬರು ನಾರಾಯಣನಾದರೆ ಇನ್ನೊಬ್ಬರು ಯಮಧರ್ಮ ಅಷ್ಟೇ....

#ಆಸ್ಪತ್ರೆ_ಡೈರಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...