ಮಳೆಗಾಲದ ತಯಾರಿ. (ಹನಿ ಕಡಿಯದ ಮಳೆ)

ಮೇ ತಿಂಗಳ ಕೊನೆಯ ಹೊತ್ತಿಗೆಲ್ಲಾ ಮಳೆಯ ದಿಬ್ಬಣ ಅಡಿಯಿಡುತಿತ್ತು. ದಿಬ್ಬಣವೆಂದರೆ ಗೌಜಿ ಗದ್ದಲ ಇಲ್ಲದೆ ಇದ್ದರೆ ಆಗುತ್ತದೆಯೇ? ಹಾಗಾಗಿ ಗುಡುಗು ಸಿಡಿಲುಗಳ ಆರ್ಭಟ, ಕೋರೈಸುವ ಮಿಂಚು, ಭೋರೆಂದು ಬೀಸುವ ಗಾಳಿ, ತನ್ನ ಆವೇಶವನ್ನೆಲ್ಲಾ  ಒಮ್ಮೆಗೆ ಹೊರ ಹಾಕುವಂತೆ ಧೋ ಎಂದು ಸುರಿಯುವ ಮಳೆ. ಒಂದಕ್ಕೊಂದು ಜೊತೆಯಾಗುತ್ತಾ, ಹಾಗೆ ಜೊತೆಯಾಗುತ್ತಲೇ ಜೊತೆಯಾಗಿಸುತ್ತಾ ಬರುತಿದ್ದ ಮಳೆರಾಯ ಥೇಟ್ ದಿಬ್ಬಣದ ಬೀಗರಂತೆ ಖುಷಿಯ ಜೊತೆ ಜೊತೆಗೆ ಆತಂಕ, ಏನಾಗಬಹುದು ಅನ್ನೋ ಅವ್ಯಕ್ತ ಭಯ, ಸುಸೂತ್ರವಾಗಿ ಜರುಗಿದರೆ ಸಾಕಪ್ಪ ಅನ್ನುವ ಆಸೆ ಎಲ್ಲವೂ ಮೂಡುವ ಹಾಗೆ ಮಾಡುತಿದ್ದ.

ದಿಬ್ಬಣ ಬರುವ ಮುನ್ನ ಎಷ್ಟೆಲ್ಲಾ ತಯಾರಿಗಳು ಆಗಬೇಕು, ಎಷ್ಟೊಂದು ಕೆಲಸ. ಬೀಗರನ್ನು ಎದುರುಗೊಳ್ಳುವುದೆಂದರೆ ಅದೇನು ಅಷ್ಟು ಸುಲಭವೇ. ಅದೆಷ್ಟು ಜಾಗ್ರತೆ, ಅದೆಷ್ಟು ತಯಾರಿ ಮಾಡಲೇ ಬೇಕು. ಒಮ್ಮೆ ಬೀಗರು ಅಡಿಯಿಟ್ಟ ಮೇಲೆ ಮುಗಿಯಿತು. ಅವರನ್ನು ಉಪಚರಿಸಲು ಎಷ್ಟೊಂದು ಕೆಲಸ ಆಗಿರಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಲು ಇರುವಾಗಲೇ ಹಪ್ಪಳ ಸಂಡಿಗೆ ಮಾಡಿ ಅದನ್ನು ಡಬ್ಬದಲ್ಲಿ ತುಂಬಿಟ್ಟುಕೊಳ್ಳಬೇಕು. ಅದೂ ತರಾವರಿ ಹಪ್ಪಳಗಳು ಇದ್ದರೂ ಹಲಸಿನ ಹಪ್ಪಳಕ್ಕೆ ಅಗ್ರಸ್ಥಾನ. ರಾಜ ಅದು. ಉಳಿದ ಮಂತ್ರಿ ಮಂಡಲದಂತೆ ಅಕ್ಕಿ ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು ಹೀಗೆ ಉಳಿದವರು ಇರುತಿದ್ದರು. ಆಮೇಲೆ  ಉಪ್ಪಿನಕಾಯಿ ಅದೂ ಮಿಡಿ ಮಾವಿನ ಉಪ್ಪಿನಕಾಯಿ, ಸ್ವಲ್ಪ ನಿಂಬೆಕಾಯಿ ಉಪ್ಪಿನಕಾಯಿ, ತೋಟದಲ್ಲಿ ಬಿಟ್ಟ ದೊಡ್ಲೆ ಕಾಯಿ, ಕಂಚಿಕಾಯಿ ಎಲ್ಲವನ್ನೂ  ಮಾಡಿ ಜಾಡಿಗೆ ಹಾಕಿ ಅದಕ್ಕೊಂದು ಬಿಳಿ ಪಂಚೆಯನ್ನು ಗಟ್ಟಿಯಾಗಿ ಕಟ್ಟಿ ಅಟ್ಟದ ಮೂಲೆಯಲ್ಲಿ ಬೆಚ್ಚಗೆ ಇಡಬೇಕು. ಜೊತೆಗೆ  ದಿಂಡಿನ ರಸ, ಜೀರಿಗೆ ಮೆಣಸು ಹೀಗೆ ಎಲ್ಲವನ್ನೂ ಬಿಗಿಯಾಗಿ ಕಟ್ಟಿ ಅಟ್ಟದ ಮೇಲೆ ಇಟ್ಟರೆ ಮಳೆಗಾಲದಲ್ಲಿ ಭಯವಿಲ್ಲ. ಅವುಗಳಿಗೂ ಬೇಸರವಿಲ್ಲ.

ಒಮ್ಮೆ ಮಳೆಗಾಲ ಶುರುವಾದರೆ ಇಡೀ ಊರು ತನ್ನೆಲ್ಲಾ ಸಂಪರ್ಕ ಕಳೆದುಕೊಳ್ಳುತಿತ್ತು. ಹಾಗಾಗಿ ಮಳೆ ಬರುವ ಮುನ್ನವೇ ಅಕ್ಕಿ ಮಾಡಿಸಿ ಇಟ್ಟುಕೊಳ್ಳಬೇಕು. ಕಣಜದಲ್ಲಿ ಇದ್ದ ಭತ್ತವನ್ನು ಚೀಲಕ್ಕೆ ತುಂಬುವಾಗಲೇ ಲೆಕ್ಕಾಚಾರ ಶುರುವಾಗುತ್ತಿತ್ತು. ಎಷ್ಟು ಅಕ್ಕಿ ಬೇಕು, ಎಷ್ಟು ಹಿಟ್ಟು ಮಾಡಿಸಬೇಕು, ಜೊತೆಗಿಷ್ಟು ಉಪ್ಪಿಟ್ಟು, ಉಂಡೆ ಕಡುಬು ಮಾಡಲು ರವೆ, ಹಬ್ಬ ಹರಿದಿನಗಳಿಗೆ ಬೇಕಾದ ಅವಲಕ್ಕಿ. ಒಂದು ಸಲ ಹೋಗುವಾಗ ಎಲ್ಲವನ್ನೂ ನೆನಪು ಮಾಡಿಕೊಂಡು ಮಾಡಿಸಿಕೊಂಡು ಬರಬೇಕು. ಮರೆತರೆ ಮತ್ತೆ ಮಾಡಿಸುವುದು ಸುಲಭವಲ್ಲ. ಮೈಲುಗಟ್ಟಲೆ ದೂರದಲ್ಲಿ ಇರುವ ಮಿಲ್ಲಿಗೆ ಹೋಗಲು ಎತ್ತಿನ ಗಾಡಿಯನ್ನು ರೆಡಿ ಮಾಡಿ ಭತ್ತದ ಚೀಲವನ್ನು ಹಾಕಿಕೊಂಡು ಹೋಗಿ ಬರುವುದು ಇಡೀ ಒಂದು ದಿನದ ಕೆಲಸ.

ಹೇಗಿದ್ದರೂ ಗಾಡಿ ಹೋಗಿದೆ ಹಾಗಾಗಿ ಮಳೆಗಾಲ ಕಳೆಯುವವರೆಗೆ ಬೇಕಾಗುವಷ್ಟು ಬೇಳೆ, ಎಣ್ಣೆ, ಮೆಣಸು, ಹಸುಗಳಿಗೆ ಹಿಂಡಿ, ಎತ್ತಿಗೆ ಹುರುಳಿ  ಹಾಗೂ  ಇತರ ಸಾಮಾನುಗಳನ್ನು ಒಂದು ಬೆಂಕಿ ಪೊಟ್ಟಣ ಕೂಡ ಬಿಡದಂತೆ ಕೊಂಡುಕೊಂಡು ಅದೇ ಗಾಡಿಗೆ ಹಾಕಿದರೆ ಅಲ್ಲಿಗೆ ಅರ್ಧಕೆಲಸ ಮುಗಿದಂತೆ. ಸ್ವಲ್ಪ ನಿರಾಳ. ಇನ್ನು ಮಳೆಗಾಲ ನೆಮ್ಮದಿಯಾಗಿ ಕಳೆಯಬಹುದು.  ಆಗೀಗ ಮಳೆ ಸ್ವಲ್ಪ ಹಳುವಾದರೂ ಆ ಮಳೆಯಲ್ಲಿ, ಗೊಚ್ಚೆಯಲ್ಲಿ ಇಂಬಳಗಳಿಂದ ಕಚ್ಚಿಸಿಕೊಂಡು ನೆನೆದುಕೊಂಡು ಪೇಟೆಗೆ ನಡೆದುಕೊಂಡು  ಹೋಗುವುದಕ್ಕಿಂತ ಮನೆಯಲ್ಲಿ ಕುಳಿತಿರುವುದು ಒಳ್ಳೆಯದು ಅನ್ನಿಸುತಿತ್ತು. ಅನಿವಾರ್ಯವಿರದ ಹೊರತು ಪೇಟೆ ಸೆಳೆಯುತ್ತಿರಲಿಲ್ಲ. ಪೇಟೆಯ ಮೋಹವನ್ನು ಧಿಕ್ಕರಿಸಿ ಬದುಕುತ್ತಿದ್ದವರ ಸ್ಥೈರ್ಯ ಅದೆಷ್ಟಿರಬಹುದು ಎಂದು ಈಗ ನೋಡಿದಾಗ ಅನ್ನಿಸುತ್ತದೆ.

ಇನ್ನು  ತೋಟಕ್ಕೆ ಹೋಗಿ ಬಿದ್ದ ಸೋಗೆಯನ್ನು ಆರಿಸಿ ಒಂದು ಕಡೆ ಹಾಕಿಟ್ಟರೆ ಬೆಳಿಗ್ಗೆ ಒಂದಿಬ್ಬರು ಆಳನ್ನು ಕರೆದುಕೊಂಡು ಹೋದರೆ ಅದನ್ನೆಲ್ಲಾ ಕಡಿದು ಹಾಳೆಯನ್ನು ಬೇರೆ ಮಾಡಿ ಸೋಗೆಯನ್ನು ಬೇರೆ ಹೊರೆ ಮಾಡಿ ಮನೆಗೆ ತಂದು ಹಾಕುತ್ತಾರೆ. ಅದರಿಂದ ಕೊಟ್ಟಿಗೆಯ ಮಾಡು ಹೊದೆಸಿ ಮಳೆಹನಿ ಒಳಗೆ ಬಾರದಂತೆ ಮಾಡಬೇಕು. ಕೊಟ್ಟಿಗೆಯಲ್ಲೂ ಹಲವಾರು ವಿಧ. ಮುಖ್ಯವಾಗಿ ದನದ ಕೊಟ್ಟಿಗೆ, ಆಮೇಲೆ ಸೌದೆ ಕೊಟ್ಟಿಗೆ, ಅಡಿಕೆ ಬೇಯಿಸುವ ಕೊಟ್ಟಿಗೆ. ಮನೆ ಚಿಕ್ಕದಾದರೂ ಪರವಾಗಿಲ್ಲ. ಕೊಟ್ಟಿಗೆಯ ಜಾಗ ಮಾತ್ರ ಕಡಿಮೆ ಆಗಬಾರದು. 

ಹಳೆಯ ಮೇಲಿನ ಸೋಗೆ ಅಥವಾ ಹುಲ್ಲು ತೆಗೆದು ಹೊಸದು ಹೊದೆಸಬೇಕು. ಮಾಡಿನ ಮೇಲೆ ಕುಳಿತು ಏಣಿಯಲ್ಲಿ ಹೊತ್ತು ತರುವ ಹೊರೆಯನ್ನು ಇಳಿಸಿಕೊಂಡು ಅದನ್ನು ಹೊಚ್ಚುವುದು ಆ ಜನಜಂಗುಳಿ ನೋಡಲು ಬಿಸಿಲಲ್ಲೂ ನಮ್ಮ ವಾನರರ ಹಿಂಡು ಕಾಯುತ್ತಿತ್ತು. ಉಳಿದ ಸೋಗೆಯನ್ನು ಗೋಡೆಗೆ ಈಸಲು ಹನಿ ತಾಗದಂತೆ ಮರೆ ಕಟ್ಟಿದರೆ ಮಳೆ ಎಷ್ಟು ಹೊಯ್ದರೂ ಗೋಡೆ ನೆನೆಯುತ್ತಿರಲಿಲ್ಲ. ಥಂಡಿ ತಾಗುತ್ತಿರಲಿಲ್ಲ.  ಚಪ್ಪರ ತೆಗೆದ ಮೇಲೆ ಜೋಡಿಸಿಟ್ಟ ದಬ್ಬೆಗಳಿಗೆ ಹೊಚ್ಚಿ ನೀರು ಇಳಿಯದಂತೆ ನೋಡಿಕೊಳ್ಳಬೇಕು. ಮತ್ತೂ ಉಳಿದರೆ ಅದನ್ನೆಲ್ಲಾ ಕಡಿದು ತೋಟಕ್ಕೆ ಹಾಸಿದರೆ ಆಯಿತು. ಒಳ್ಳೆಯ ಗೊಬ್ಬರ.

ಕಡಿದ ಹಾಳೆ ಒಣಗಿದ ಅಡಿಕೆ ಸಿಪ್ಪೆಗಳನ್ನು ಒಟ್ಟುಗೂಡಿಸಿ ತಂದು ಕೊಟ್ಟಿಗೆಯ ಒಂದು ಮೂಲೆಯಲ್ಲಿ ರಾಶಿ ಮಾಡಿದರೆ ಬಚ್ಚಲ ಒಲೆಯ ಹಸಿವಿಗೆ ಒಂದು ದಾರಿಯಾದಂತೆ. ಕಟ್ಟಿಗೆ ಕಡಿಯಲು ಜನ ಮಾಡಬೇಕು. ಕಟ್ಟಿಗೆ ಒಂದು ಕಡೆ ಕುಂಟೆಯನ್ನು ಒಂದು ಕಡೆ ಜೋಡಿಸಿ ಇಡಬೇಕು. ಮನೆಗೆ ಬಚ್ಚಲಿಗೆ, ಮುರುವಿನ ಒಲೆಗೆ ಅಡಿಕೆ ಬೇಯಿಸಲು ಹೀಗೆ ಕಟ್ಟಿಗೆಯನ್ನೂ ಬೇರೆ ಬೇರೆ ಮಾಡಬೇಕು. ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಕಟ್ಟಿಗೆ ಜೋಡಿಸುವಾಗ ತಂದು ತಂದು ಕೈ ನೋಯುವಾಗ ಸಿಟ್ಟು ಬಂದರೂ ಚಳಿ ಕಾಯಿಸುವಾಗ ಮಾತ್ರ ಹಾಯೆನಿಸುತಿತ್ತು. ಅಷ್ಟಲ್ಲದೇ ಹೇಳಿದ್ದಾರ, ಕಷ್ಟ ಪಟ್ಟರೆ ಸುಖ ಉಂಟು ಎಂದು.

ಇದಿಷ್ಟು ಮನುಷ್ಯರ ಆವಶ್ಯಕತೆಯಾದರೆ ಹಸುಗಳ ಪಾಡೂ ನೋಡಬೇಕಲ್ಲ. ಮಳೆಗಾಲದಲ್ಲಿ ಸೊಪ್ಪು ಹೇರಳವಾಗಿ ಸಿಕ್ಕರೂ ದರಗು ಇರುವಾಗ ಯಾಕೆ ಸೊಪ್ಪು ಕಡಿಯಬೇಕು? ಹಾಗಾಗಿ ಕಾಡಿಗೆ ಹೋಗಿ ಹಾಸಿಗೆ ಹಾಸಿದಂತೆ ಬಿದ್ದಿರುತಿದ್ದ  ದರಗು ಗುಡಿಸಿ ತಂದರೆ ಆಯಿತು. ಗುಡಿಸಿದಷ್ಟೂ ದರಗು ಸಿಗುತಿತ್ತು. ಹಾಗಾಗಿ ಅದನ್ನು ತಂದು ಕುತ್ತರಿ ಹಾಕಿದರೆ ಆಯಿತು. ಪ್ರತಿ ಕುತ್ತರಿಯೂ ಅಗಲವಾಗಿ ವೃತ್ತಾಕಾರದಲ್ಲಿ ಶುರುವಾಗಿ ಕೊನೆಗೆ ತ್ರಿಭುಜದ ಬಿಂದುವಿನಂತೆ ಚೂಪು ಆಗಿ ಮುಗಿಯುತ್ತಿತ್ತು. ತುದಿಯಲ್ಲಿ ಹುಲ್ಲೋ, ಸೋಗೆಯೋ ಹೊದಿಸಿದರೆ ಮಳೆ ನೀರು ನುಗ್ಗುತ್ತಿರಲಿಲ್ಲ. ಹಳು ಸವರಿದ ಸೊಪ್ಪು ತರಲು ಆಗದಿದ್ದಾಗ,  ತೀರಾ ಮಳೆ ಬೀಳುವಾಗ, ಗದ್ದೆ ಕೆಲಸದಲ್ಲಿ ಮುಳುಗಿದಾಗ ಕೊಟ್ಟಿಗೆಗೆ ದರಗು ಹಾಕಿದರೆ ಮುಗಿಯಿತು. ದನಗಳೂ ಬೆಚ್ಚಗೆ ಮಲಗುತ್ತಿದ್ದವು.

ಮಳೆ ಬರುವ ಮುನ್ನ ಗೊಬ್ಬರವನ್ನು ತೆಗೆದು ಗದ್ದೆಗೆ ಹಾಕಬೇಕು. ಆಮೇಲೆ ಗಾಡಿ ಇರಲಿ ಮನುಷ್ಯರೇ ಓಡಾಡಲು ಕಷ್ಟವಾಗುವ ದಾರಿ. ಅವತ್ತು ಮಾತ್ರ ಜಾತ್ರೆಯೇ. ಎರಡೋ ಮೂರೋ ಎತ್ತಿನಗಾಡಿಗಳು ಬೆಳಕು ಮೂಡುವಾಗಲೇ ಗೊಬ್ಬರದ ಗುಂಡಿಯ ಬಳಿ ನಿಂತಿರುತ್ತಿದ್ದವು. ಒಂದಷ್ಟು ಜನ. ಮೊದಲು ಕೊಟ್ಟಿಗೆಯ ಗೊಬ್ಬರ ತೆಗೆದು ಹೆಡಿಗೆಯಲ್ಲಿ ಅದನ್ನು ತುಂಬಿ ಒಬ್ಬರು ಹೊರಿಸಿದರೆ ಉಳಿದವರು ಅದನ್ನು ಹೊತ್ತುಕೊಂಡು ಹೋಗಿ ಗಾಡಿಗೆ ತುಂಬುತ್ತಿದ್ದರು. ಗಾಡಿ ತುಂಬಿದ ಮೇಲೆ ಅದು ಗದ್ದೆಯ ಕಡೆ ಹೋಗುತಿತ್ತು. ಅದರ ಹಿಂದೆ ನಮ್ಮ ಮೆರವಣಿಗೆಯೂ ಸಾಗುತಿತ್ತು. ಅಲ್ಲಿ ಗದ್ದೆಗೆ ಹಾಕಿದ ಮೇಲೆ ಸಿಂಹಾಸನವೆರುವ ರಾಜನಂತೆ ನಾವೂ ಗಾಡಿಯೇರುತ್ತಿದ್ದೆವು. ಅಲ್ಲಿಂದ ಮತ್ತೆ ಮೆರವಣಿಗೆ ಮನೆಯ ಕಡೆ ಬರುತಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ಅದೇ ಪುನಾರಾವರ್ತನೆ. ಸಂಜೆ ಒಳಗೆ ಬರುವಾಗ ಗೊಬ್ಬರ ಗುಂಡಿಗೂ ನಮಗೂ ಯಾವ ವ್ಯತ್ಯಾಸವೂ ಕಾಣಿಸದಷ್ಟು ಏಕೀ ಭಾವ.

 ಇಷ್ಟಾಗಿ ಹೊರಗೆ ಬರುವ ವೇಳೆಗೆ ಚಪ್ಪರ ಕಾಣಿಸುತ್ತಿತ್ತು. ಅದನ್ನು ತೆಗೆಯಬೇಕು. ಒಂದೊಂದಾಗಿ ದಬ್ಬೆ ಇಳಿಸಿ ಅದನ್ನು ಕೊಟ್ಟಿಗೆಯ ಮೂಲೆಯಲ್ಲಿ ಜೋಡಿಸಿ ಇಡಬೇಕು. ಮತ್ತೆ ಮುಂದಿನವರ್ಷಕ್ಕೆ ಹಾಕಲು ಬೇಕಾಗುವುದರಿಂದ ಅದನ್ನು ಜಾಗೃತೆಯಾಗಿ ಕಾಪಾಡಿಕೊಳ್ಳಬೇಕು. ಅದ್ಯಾಕೆ ಈ ಬೇಸಿಗೆಯಲ್ಲಿ ರಜೆ ಕೊಡ್ತಾರೋ ಮಾಡಿದಷ್ಟೂ ಮುಗಿಯದ ಕೆಲಸ ಅಂತ ಬೈದು ಕೊಳ್ಳುತ್ತಲೇ ಸಹಾಯ ಮಾಡಲು ಹೊರಡುತ್ತಿದ್ದೆವು. ಅದಕ್ಕಿಂತಲೂ ಸಿಟ್ಟು ಬರುತ್ತಿದ್ದದ್ದು ಹುಲ್ಲು ಕೂಡುವಾಗ. ಒಕ್ಕಿ ಕುತ್ತರಿ ಹಾಕಿದ್ದ ಹುಲ್ಲು ಮಳೆಗಾಲದಲ್ಲಿ ತೆಗೆದರೆ ನೀರು ನುಗ್ಗುವ ಅವಕಾಶ ಇದ್ದಿದ್ದರಿಂದ ಹಾಗೂ ಮಳೆಯಲ್ಲಿ ಹೋಗಿ ತರುವುದು ಕಷ್ಟವಾದ್ದರಿಂದ ಸ್ವಲ್ಪ ಹುಲ್ಲನ್ನು ತಂದು ಕೊಟ್ಟಿಗೆಯ ಅಟ್ಟದಲ್ಲಿ ಕೂಡಿಡುತ್ತಿದ್ದರು. ಹಾಗೆ ಹುಲ್ಲಿನ ಹೊರೆ ತರುವಾಗ ಅದು ಮೈಕೈ ಗೆ ತಾಗಿ ಉರಿ ಶುರುವಾಗುತ್ತಿತ್ತು. ಗಾಯಕ್ಕೆ ಉಪ್ಪು ಸುರಿದ ಹಾಗೆ ಆ ಉರಿ ಬಿಸಿಲಿಗೆ ಬೆವರು ಇಳಿದು ಮೈ ಕೈಯೆಲ್ಲಾ ಉರಿ ಹತ್ತಿ ತಾಂಡವ ನೃತ್ಯ ಮಾಡುವ ಹಾಗಾಗುತ್ತಿತ್ತು. ಯಾಕಾದ್ರೂ ಶಾಲೆಗೇ ರಜೆ ಬಂತೋ ಅಂತ ಶಾಪ ಹಾಕದೆ ಹುಲ್ಲು ಕೂಡುವ ಕೆಲಸ ಮುಗಿಯುತ್ತಲೇ ಇರಲಿಲ್ಲ.

ಆದಷ್ಟು ಮಾಡಿ ಬಂದ ಮೇಲೆ ನೆನಸಿಟ್ಟ ಹೆಸರು ಬೇಳೆಯನ್ನು ಕಲ್ಲಿನಲ್ಲಿ ಬೆಲ್ಲ ಸೇರಿಸಿ ರುಬ್ಬಿ ಮಾಡಿದ ಪಾನಕ ಸಿಗುತಿತ್ತು. ತಣ್ಣನೆಯ ಪಾನಕ ಒಳಗೆ ಇಳಿಯುತ್ತಿದ್ದಂತೆ ಶಕ್ತಿಯ ಸಂಚಾರವಾಗಿ ಸಮಾಧಾನವಾಗಿ ಮರೆತು ಹೋದರೂ ಸ್ನಾನಕ್ಕೆ ಹೋಗಿ  ಹಂಡೆಯಿಂದ ಬಿಸಿನೀರು ಮೈ ಮೇಲೆ ಬಿದ್ದ ಕೂಡಲೇ ಶಿವನೂ ನಾಚುವಂತೆ ನೃತ್ಯ ಶುರುವಾಗಿ ಮತ್ತೆ ಕೋಪ ಉಕ್ಕುತಿತ್ತು. ಹೊರಗೆ ಕೆಂಪಾಗಿ ಬರುತಿದ್ದದ್ದು ಕೋಪದಿಂದಲೋ, ಬಿಸಿನೀರಿನ ಪ್ರಭಾವದಿಂದಲೋ ಯಾರಿಗೆ ಗೊತ್ತು.

ಏನೇ ಮೊದಲು ಮಾಡಿದರೂ, ಎಷ್ಟೇ ನೆನಪಿಸಿಕೊಂಡರೂ ದಿಬ್ಬಣ ಬರುವವರೆಗೂ ಕೆಲಸ ಗಡಿಬಿಡಿ ನಿಲ್ಲುವುದೇ ಇಲ್ಲ. ಕಾದ ನೆಲವೆಲ್ಲಾ ತಂಪಾಗಿ, ಹಸಿಯಾಗಿ, ಹಿತವಾಗಿ, ಹದವಾಗುವ ವೇಳೆಗೆ ಶಾಲೆಯ ಬಾಗಿಲು ತೆರೆಯುತ್ತಿತ್ತು. ತನ್ನದೆಯ ಮೇಲೆ ಪುಟು ಪುಟು ಹೆಜ್ಜೆಯಿಟ್ಟು ಹೋಗುವ ಪುಟಾಣಿಗಳ ಪಾದ ನೋಯದಿರಲಿ ಎಂದು ರಸ್ತೆಯೂ ಮೃದುವಾಗಿ ಕಾಯುತ್ತಿತ್ತು. ಶಾಲೆಗೆ ಹೋಗುವುದೂ ಒಂದು ಸಂಭ್ರಮವೇ ಆಗ. ಮೊದಲ ದಿನ ಬರಲೇ ಬೇಕೆನ್ನುವ ಆಗ್ರಹವೂ ಇಲ್ಲದ ಕಾಲ. ಹೆಗಲಿಗೊಂದು ಪಾಟಿ ಚೀಲ ಏರಿಸಿಕೊಂಡು, ದಂಡು ಕಟ್ಟಿಕೊಂಡು ಆಟವಾಡುತ್ತಾ, ನೀರು ಚಿಮ್ಮಿಸುತ್ತಾ, ಎರಚುವ ಹನಿಗೆ ಬೊಗಸೆಯೊಡ್ದುತ್ತಾ, ಗಾಳಿಗೆ ತಿರುಗು ಮುರುಗಾಗುವ ಕೊಡೆಯನ್ನು ನೋಡಿ ಕೇಕೆ ಹಾಕುತ್ತಾ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ.

ಅದೂ ಎಂಥಾ ದಾರಿ? ಗಮ್ಯದೆಡೆಗಿನ ಯಾವ ದಾರಿಯೂ ನೇರವಲ್ಲ, ಸರಳವಂತೂ ಅಲ್ಲವೇ ಅಲ್ಲ. ಕಾಡಿನ ನಡುವೆ ಸಾಗಿ ಹೋಗುವ ಕಾಲುದಾರಿ, ಹೆಜ್ಜೆ ತಪ್ಪದಂತೆ, ದೇಹ ಓಲಾಡದಂತೆ ಜಾಗೃತೆಯಾಗಿ ಸಾಗಬೇಕಾದ ಗದ್ದೆಯಂಚು, ಇದ್ದಕ್ಕಿದ ಹಾಗೆ ಸೃಷ್ಟಿಯಾಗಿ ಹರಿಯುವ ನೀರ ಹಾದಿ, ಇಟ್ಟ ಹೆಜ್ಜೆಯನ್ನು ಜಾರುವ ಹಾಗೆ ಮಾಡುವ ಪಾಚಿನೆಲ, ಏರುವ ಗುಡ್ಡ, ಇಳಿಯುವ ಕೊರಕಲು, ಕಲ್ಲು ಎದ್ದು ಚಿಮ್ಮುವ ಮಣ್ಣ ಹಾದಿ, ಶಾಲೆ ಹತ್ತಿರವಾಗುತ್ತಿದ್ದಂತೆ ಎದುರಾಗುವ ನುಣುಪಾದ ಟಾರು ರಸ್ತೆ. ಗಮ್ಯದ ಹತ್ತಿರವಾಗುತ್ತಿದ್ದಂತೆ ಆಯಾಸವನ್ನು ಮರೆಸುವ ಸಲೀಸಾದ ಹಾದಿಯ ಆಚೆ ಬದಿಯೇ ತಲೆಯೆತ್ತಿನಿಂತಿರುವ ಶಾಲೆ, ದಿನದ ಗಮ್ಯ.

ಆ ಗಮ್ಯವಾದರೂ ಎಷ್ಟು ಚೆಂದ. ಅದಾಗಲೇ ಬಂದು ಸೂರಿನಿಂದ ಸುರಿಯುವ ಮಳೆಗೆ ಕೈಯೊಡ್ಡಿ ಆಟವಾಡುವವರು, ಅರ್ಧಂಬರ್ಧ ನೆನೆದಾಗಿದೆ ಇನ್ನೇನು ಎಂದು ಮಳೆಗೆ ಮೈಯೊಡ್ಡಿದವರು, ನೆಂದ ಗುಬ್ಬಚ್ಚಿಯಂತೆ ಮೂಲೆಯಲ್ಲಿ ಮುದುರಿ ಕುಳಿತವರು, ಬೈಯಲಾರದೆ, ಸರಿದ ಕಾಲವನ್ನೇ ದೂಷಿಸುತ್ತಿದ್ದಾರೆನೋ ಎಂದು ಕೈಯಲ್ಲೊಂದು ಕೋಲು ಹಿಡಿದು ಮೌನವಾಗಿ ನಿಂತ ಶಿಕ್ಷಕರು. ಎಲ್ಲರೂ ಸೇರಿ ಮಳೆಯ ಸದ್ದನ್ನೇ ಅಡಗಿಸಿ ತಮ್ಮದೇ ಲೋಕ ಸೃಷ್ಟಿಸಿಕೊಂಡು ಬಿಡುತ್ತಿದ್ದರು. ಮಳೆ ಜೋರಾದಷ್ಟೂ ಖುಷಿಯೇ..

ಹೆಗಲಿಗೊಂದು ಬಾರದ ಚೀಲ ಏರಿಸಿಕೊಂಡು ಸಣ್ಣಗೆ ಮುಖ ಮಾಡಿಕೊಂಡು ಬಸ್ ಹತ್ತುವ ಮಕ್ಕಳನ್ನು, ಅಡಿಯಿಟ್ಟ ಜೂನ್ ಅನ್ನು ನೋಡಿದಾಗ ಕಾಲ ತಿರುಗಬಾರದೇ ಅನ್ನಿಸುತ್ತಿದೆ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...