ಅನಾವರಣ

ಯಾವುದೊ ಸಂಸ್ಥೆಯ ಸಹಾಯಕ್ಕಾಗಿ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಕೈಲಾದಮಟ್ಟಿಗೆ ಅದರಲ್ಲಿ ಪಾಲ್ಗೊಳ್ಳುವ ಎಂದು ಭಾಗವಹಿಸಿದ್ದೆ. ಎಲ್ಲವೂ ಚೆಂದವಾಗಿಯೇ ನಡೆದಿತ್ತು. ಬಂದವರು ತಮ್ಮ ಕೈಲಾದ ದೇಣಿಗೆ ನೀಡಿದ್ದರು. ಒಬ್ಬರಂತೂ ತಮ್ಮ ಹೆಸರು ಹೇಳುವುದಿರಲಿ ಮುಖವನ್ನೂ ಸರಿಯಾಗಿ ತೋರಿಸದೆ ಜೇಬಲ್ಲಿದ್ದ ಅಷ್ಟೂ ಹಣವನ್ನು ಟೇಬಲ್ ಮೇಲಿಟ್ಟು ಕರೆಯುತ್ತಿದ್ದರೂ ಕೇಳಿಸದಂತೆ ಹೋಗಿದ್ದರು. ಇನ್ನೂ ಯುವಕ. ಕಣ್ಣು ತುಂಬಿ ಬಂದಿತ್ತು. ವೇದಿಕೆಯಲ್ಲಿ ಕೈ ಮುಗಿದು ನಿಂತಿದ್ದ ಮಕ್ಕಳ ನೋಡಿ ಇಂಥವರೇ ಅವರ ಕಣ್ಣಿನ ಬೆಳಕಾಗುವವರು ಎಂಬ ತೃಪ್ತಿ ಮೂಡಿತ್ತು.   ಆಮೇಲೆ ಅಲ್ಲಿ ಒಟ್ಟಾದ ಹಣಕ್ಕಾಗಿ ನಡೆದ ಮೇಲಾಟ, ಹೆಸರಿಗಾಗಿ ಒಬ್ಬರ ಮೇಲೊಬ್ಬರು ನಡೆಸಿದ ಕೆಸರಾಟ, ಕೊನೆಗೂ ಯಾರಿಗೂ ಸೇರದೆ ಉಳಿದುಹೋದ ಒಂದಷ್ಟು ಹಣಕ್ಕಾಗಿ ಆದ ಕಚ್ಚಾಟ ನೋಡಿ ಮಾಡಿದರೆ ವೈಯುಕ್ತಿಕ ಸಹಾಯ ಮಾಡಬೇಕೆ ಹೊರತು ಯಾವುದೋ ಬ್ಯಾನರ್ ಅಡಿಯೋ, ಇನ್ಯಾವುದೋ ಹೆಸರಿನ ಅಡಿಯಲ್ಲೋ ಅಲ್ಲಾ ಎನ್ನುವ ಜ್ಞಾನೋದಯದ ಜೊತೆಗೆ ಸೇವೆಯ ಹೆಸರಿನ ಕರಾಳ ಮುಖದ ಪರಿಚಯವೂ ಆಗಿ ಬೆಚ್ಚಿ ಬಿದ್ದಿದ್ದೆ.

ಕೊಡಗಿನ ಪ್ರಾಕೃತಿಕ ವಿಕೋಪ ಕಂಗೆಡಿಸಿದ್ದು, ಅನಾವರಣ ಗೊಳಿಸಿದ್ದು ಏನೇನು ನೋಡುತ್ತಾ ಹೋದರೆ ಹೀಗೆ ಬೆಚ್ಚಿ ಬೀಳಿಸುವ ಅನೇಕ ಸತ್ಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಿದೆ. ಜಗತ್ತಿನಲ್ಲಿ ಆಲೋಚಿಸುವ ಶಕ್ತಿ ಮನುಷ್ಯನಿಗೆ ಮಾತ್ರ ಅನ್ನೋದು ಇಷ್ಟು ದಿನ ಹೆಮ್ಮೆಯ ವಿಷಯವಾಗಿತ್ತು. ಆದರೆ ಹೇಗೆ ಆಲೋಚಿಸಬೇಕು ಅನ್ನೋದು ಕಲಿಯಲೇ ಇಲ್ಲವೇನೋ ಎನ್ನುವ ದುಃಖ ಈಗ ಕಾಡುತ್ತಿದೆ. ಎಲ್ಲವನ್ನೂ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ, ಹೊಸ ಹೊಸತನ್ನು ಅನ್ವೇಷಿಸಲು ಕಲಿತ ಅವನು ಅದನ್ನು ಉಳಿಸಿಕೊಳ್ಳುವುದು ಮಾತ್ರ ಕಲಿಯಲೇ ಇಲ್ಲ. ಮುಂದಿನ ಪೀಳಿಗೆಗೆ ಉಳಿಸಿಹೋಗುವ ಜವಾಬ್ದಾರಿ ಇದೆ ಅನ್ನೋದು ಅರ್ಥಮಾಡಿಕೊಳ್ಳಲೆ ಇಲ್ಲ.

ಮಹಾಭಾರತದಲ್ಲಿ ಒಂದು ಘಟನೆ ಬರುತ್ತದೆ. ಆಸ್ಥಾನದಲ್ಲಿ ಕುಳಿತಿದ್ದ ಧರ್ಮಜನ ಬಳಿ ಬಡ ಬ್ರಾಹ್ಮಣನೊಬ್ಬ ಕೋರಿಕೆಯನ್ನು ತಂದನಂತೆ. ಕೇಳಿದ ಧರ್ಮಜ ನಾಳೆ ಅದನ್ನು ಈಡೆರಿಸುತ್ತೇನೆ ಏನು ಆಶ್ವಾಸನೆ ಕೊಟ್ಟನಂತೆ. ಅದನ್ನು ಕೇಳಿದ ಭೀಮಸೇನ ತಕ್ಷಣ ಎದ್ದು ಹೊರಗೆ ಹೋಗಿ ಆಸ್ಥಾನದ ಎದುರು ಕಟ್ಟಿದ ಘಂಟೆಯನ್ನು ಬಾರಿಸಿದನಂತೆ. ಅಚ್ಚರಿಗೊಂಡ ಧರ್ಮಜ ಏನಾಯಿತು ಎಂದು ವಿಚಾರಿಸಿದಾಗ ನೀನು ಮರಣವನ್ನು ಗೆದ್ದಿದ್ದಿ ಅನ್ನೋದು ಖುಷಿಯ ವಿಷಯವಲ್ಲವೇ ಅಣ್ಣ,  ಅದನ್ನು ತಿಳಿಸಲೋಸುಗ ಹೀಗೆ ಮಾಡಿದೆ ಎಂದನಂತೆ. ಗಲಿಬಿಲಿಯಾದ ಧರ್ಮಜ ವಿಚಾರಿಸಿದಾಗ  ನಮಗೆ ಸಾವು  ಯಾವ ಕ್ಷಣದಲ್ಲಿ ಬರುವುದು ಗೊತ್ತಿಲ್ಲ, ಆದರೆ ನೀನು ಅದೆಷ್ಟು ನಂಬಿಕೆಯಿಂದ ನಾಳೆ ಈಡೇರಿಸುವೆ ಎಂದೇ,  ಅಂದರೆ ಅಲ್ಲಿಗೆ ನೀನು ಮರಣವನ್ನು ಗೆದ್ದ ಹಾಗೆ ಅಲ್ಲವೇ... ಆ  ನಂಬಿಕೆಯಿಂದ ತಾನೇ ನೀನು ಆ ಬ್ರಾಹ್ಮಣನಿಗೆ ನಾಳೆ ಸಹಾಯ ಮಾಡುವೆ ಎಂದಿದ್ದು ಅಂದನಂತೆ. ನಾಚಿದ ಧರ್ಮಜ ಆ ತಕ್ಷಣವೇ ಆ ಬಡ ಬ್ರಾಹ್ಮಣನ ಕೋರಿಕೆ ಈಡೇರಿಸಿದನಂತೆ.

ತಾನು, ಮಕ್ಕಳು, ಮೊಮ್ಮಕ್ಕಳು ಹೀಗೆ ತಲೆಮಾರುಗಳು ಕುಳಿತು ಉಂಡರೂ ಕರಗದಷ್ಟು ಆಸ್ತಿ ಮಾಡಿಯೂ ಇನ್ನಷ್ಟು ಮಾಡುವ, ಅದಕ್ಕಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡುವವರನ್ನು ನೋಡಿದಾಗಲೆಲ್ಲ ಈ ಕಥೆ ನೆನಪಾಗುತ್ತದೆ.  ಮಕ್ಕಳು ಸುಖವಾಗಿರಬೇಕು ಎಂದು ಅಸ್ತಿ ಮಾಡಿಡಲು ಯೋಚಿಸುವಷ್ಟು ನಾವು ಅವರು ಬದುಕ ಬೇಕಾದ ಭೂಮಿಯನ್ನು ಸೂಕ್ತ ರೀತಿಯಲ್ಲಿ ಉಳಿಸುವ ಯೋಚನೆ ಯಾಕೆ ಮಾಡುವುದಿಲ್ಲ ಅನ್ನೋದು ನನ್ನನ್ನು ಕಾಡುವ ಯಕ್ಷ ಪ್ರಶ್ನೆ. ಏನನ್ನೂ ಕೊಂಡು ಹೋಗಲಾರೆವು ಅಂತ ಗೊತ್ತಿದ್ದೂ ಎಲ್ಲವನ್ನೂ ಸಂಗ್ರಹಣೆ ಮಾಡುವ ನಾವು ಹೋಗುವಾಗ ಕೊಂಡು ಹೋಗುವ ಹಾಗಿದ್ದರೆ ಎಂದು ಯೋಚಿಸಿದಾಗ ಮೈ ನಡುಗುತ್ತದೆ. ಗೊತ್ತಿರೋದೇ ಬೇರೆ ಅರ್ಥವಾಗೋದೇ ಬೇರೆ ಅಂತ ಅರಿವಿಗೆ ಬಂದಿದ್ದು ಇಂಥ ಕ್ಷಣದಲ್ಲೇ.

ಮನುಷ್ಯನನ್ನು ಜಾತಿ, ಮತ, ಧರ್ಮಗಳಿಂದ ಒಗ್ಗೂಡಿಸುವ ಶಕ್ತಿ ಇರೋದು ಪ್ರಕೃತಿಗೆ ಮಾತ್ರ. ಅದು ಮೊನ್ನೆಯ ಘಟನೆಯಲ್ಲಿ ಮತ್ತೆ ಸಾಬಿತಾಗಿದೆ. ಆದರೆ ಅಸ್ತಿತ್ವ ಇರುವ ಪ್ರತಿಯೊಂದಕ್ಕೂ ಎರಡು ಮುಖವಿರುತ್ತದೆ ಅನ್ನೋದೂ ಪುನಃ ಪುನಃ ಸಾಬೀತು ಆಗುತ್ತಲೇ ಇರತ್ತದೆ. ಎಲ್ಲೆಲ್ಲಿಂದಲೋ ಸಹಾಯ ಪ್ರವಾಹ ರೂಪದಲ್ಲಿ ಹರಿದುಬಂದು ಅಲ್ಲಿದ್ದ ಪ್ರವಾಹವನ್ನೂ ಮೀರಿಸಿತು. ಮಾನವೀಯತೆ ಗೆದ್ದಿತು. ಅಂತಿಮವಾಗಿ ಅದಷ್ಟೇ ಸತ್ಯ ಎಂದು ನಿಟ್ಟುಸಿರು ಬಿಟ್ಟು ಸಮಾಧಾನ ಮಾಡಿಕೊಳ್ಳುವ ವೇಳೆಗೆ ಇನ್ನೊಂದು ಮುಖ ಅನಾವರಣ ಆಗುತ್ತಿದೆ. ಅದರ ಕ್ರೂರತೆ ಬೆಚ್ಚಿ ಬೀಳುವ ಹಾಗೆ ಮಾಡುತ್ತಿದೆ. ಮನೆ ಉರಿಯುವಾಗ ಗಳ ಹಿರಿದು ಚಳಿ ಕಾಯಿಸಿಕೊಂಡರಂತೆ ಅನ್ನೋ ಗಾದೆಯ ಅರ್ಥ ಮತ್ತಷ್ಟು ಆಗುತ್ತಿದೆ.

ತಮ್ಮ ವೈಯುಕ್ತಿಕ ನೋವುಗಳನ್ನು, ನಷ್ಟವನ್ನು, ತೊಂದರೆಗಳನ್ನು ಮರೆತು ಒಂದು ಕಡೆ ಜನ ಇನ್ನೊಬ್ಬರ ನೆರವಿಗೆ ಧಾವಿಸುತ್ತಿದ್ದರೆ ಕೆಲವರು  ಯಾವುದೋ ಜಾತ್ರೆಗೆ ಹೋದಂತೆ ಹೋಗಿದ್ದಲ್ಲದೇ ಪರಿಹಾರ ಕಾರ್ಯದಲ್ಲಿ ತೊಡಗಿದವರನ್ನು  ಕೆಣಕಿ ಜಗಳವಾಡುವ ಹಾಗೆ ಮಾಡಿ ಅದನ್ನು ವೀಡಿಯೊ ಮಾಡಿ ಹರಿಯಬಿಡುವ ಕೆಲಸವನ್ನೂ ಮಾಡಿದರು. ಅಲ್ಲೆಲ್ಲೋ ನಾಯಿಯೊಂದು ಮರಿಯನ್ನು ಎತ್ತಿಕೊಂಡು ಪ್ರವಾಹದಿಂದ ಪಾರು ಮಾಡುವ ದೃಶ್ಯ ನೋಡಿದವರಿಗೆ ಇವರನ್ನು ನೋಡಿ ಮನುಷ್ಯರೆಂದು ಹೇಳಲಾಗದೆ, ಪ್ರಾಣಿಗಳು ಎಂದು ಕರೆಯಲಾಗದೆ ಏನು ಹೇಳಬೇಕು ತೋಚದೆ ಮೂಕರಾಗುವ ಹಾಗಿತ್ತು. ಪ್ರಾಣಿಗಳು ತಮಗೆ ತೊಂದರೆಯಾದಾಗ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಮಾತ್ರ ಎದುರಿಸುತ್ತವೆ, ಕ್ರೂರತನ ಪ್ರದರ್ಶಿಸುತ್ತವೆ. ಏನೂ ಇಲ್ಲದ ಇನ್ನೊಬ್ಬರ ಸಂಕಷ್ಟದ ಸಮಯದಲ್ಲೂ ಚಾಳಿ ತೋರಿಸುವ ಇವರನ್ನು ಗುರುತಿಸುವುದಾದರೂ ಹೇಗೆ? ಕರೆಯುವುದಾದರೂ ಏನೆಂದು?

ಒಂದೆಡೆ ಗುರುತು ಪರಿಚಯವೂ ಇಲ್ಲದ ಜನರಿಗಾಗಿ ಮರುಗಿ ಆಹಾರ, ಉಳಿದ ಆವಶ್ಯಕ ವಸ್ತುಗಳನ್ನು ಸಿದ್ಧಪಡಿಸಿ, ಅವರ ನೆರವಿಗಾಗಿ ಧಾವಿಸುವ ಜನ ಒಂದು ಕಡೆಯಾದರೆ,  ಸಿಕ್ಕಿದ್ದೇ ಸಮಯ ಅನ್ನುವ ಹಾಗೆ ಹಣವನ್ನು ದೋಚಲು ಸೇವೆಯ ಹೆಸರು ಹೊತ್ತ ಜನಗಳು ಒಂದುಕಡೆ. ಕೊನೆಪಕ್ಷ ನಮಗೆ ಹೋಗಲು ಆಗದಿದ್ದರೂ ಈ ವಸ್ತುಗಳಾದರೂ ಅವರಿಗೆ ತಲುಪಲಿ ಎಂದು ತಮ್ಮ ಕೈಲಾದ ವಸ್ತುಗಳನ್ನು ಹೊಂದಿಸಿ ಕೊಟ್ಟರೆ ಅವುಗಳನ್ನು ಲಾರಿಗಳಲ್ಲೋ ಟೆಂಪೋಗಳಲ್ಲೋ ತುಂಬಿಕೊಂಡು ಯಾವುದೋ ರೆಸ್ಟೋರೆಂಟ್ ಗೋ ಹೋಟೆಲ್ ಗೋ ಮಾರುವ ಜನ ಇನ್ನು ಕೆಲವು ಕಡೆ. ಇರುವುದರಲ್ಲಿ ಒಂದಷ್ಟನ್ನು ಕೊಟ್ಟು ಆ ಕ್ಷಣಕ್ಕೆ ಸಹಾಯ ಮಾಡುವವರು ಒಂದು ಕಡೆಯಾದರೆ, ಯಾವುದೋ ಸುಳ್ಳು ಆಮಿಷವನ್ನೇ ನಂಬಿ ಕೊಟ್ಟವರನ್ನು ಜರಿಯುವವರು ಇನ್ನೊಂದು ಕಡೆ. ಮೌನವಾಗಿ ತಮ್ಮ ಕೈಲಾದ್ದು ಕೊಟ್ಟು ಇರುವವರ ನಡುವೆ ಏನೂ ಮಾಡೇ ಇಲ್ಲ ಅಂತ ಟೀಕಿಸುವವರು ಮತ್ತೊಂದು ಕಡೆ.

ಹಾಗಿದ್ದರೆ ನಾವು ಮಾಡುವುದು ಸಹಾಯವಾ...ಅದು ತೋರಿಕೆಯಾಗಬೇಕಾ?  ಉಹೂ ಯಾಕೋ ಒಪ್ಪಲು ಮನಸ್ಸು ಬರುವುದಿಲ್ಲ. ಅದು ಸಹಾಯವಲ್ಲ ಋಣ ತೀರಿಸಿಕೊಳ್ಳುವ ಪ್ರಕ್ರಿಯೆ. ಪ್ರತಿಯೊಬ್ಬರ ಬದುಕು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಹಲವರ ಕೊಡುಗೆಯ ಮೇಲೆ ಅಧಾರ ಪಟ್ಟಿರುತ್ತದೆ. ಆ ಋಣದ ಭಾರ ನಮ್ಮ ಮೇಲಿರುತ್ತದೆ. ಆ ಭಾರವನ್ನು ಇಳಿಸಿಕೊಳ್ಳಲು ಇಂಥ ಸಮಯಗಳು ನಮಗೆ ಸಹಾಯ ಮಾಡುತ್ತದೆಯೇ ಹೊರತು ನಾವು ಅವರಿಗೆ ಸಹಾಯ ಮಾಡುವುದಲ್ಲ, ಕೊಡುವುದೂ ಅಲ್ಲ. ಕೊಡುವುದು ಎಂದಾಗ ಅಲ್ಲೊಂದು ಹಮ್ಮಿದೆ, ತೆಗೆದುಕೊಳ್ಳುವವರಲ್ಲಿ ಅದು ದೀನತೆಯನ್ನು ಹುಟ್ಟಿಸುತ್ತದೆ. ಇದು ಕೃತಜ್ಞತೆ. ಪಡೆದುಕೊಂಡ ಭಾರವನ್ನು ಕಳೆದುಕೊಂಡು ನಾವು ಹಗುರಾಗಲು ದಕ್ಕಿದ ಅವಕಾಶ. ಇಲ್ಲಿ ನಾವು ಋಣಿಯಾಗಿರಬೇಕೆ ಹೊರತು ಅವರು ನಮಗೆ ಋಣಿಯಾಗಿರಲಿ, ಕೃತಜ್ಞತೆ ತಿಳಿಸಲಿ ಎಂದಲ್ಲ.

ಹದ್ದಿನಂತೆ ಬಂದು ಎರಗಿದ ಅಪಾಯ ಈಗಷ್ಟೇ ಮುಗಿದಿದೆ. ಯುದ್ಧ ಮುಗಿದ ರಣಾಂಗಣವನ್ನು ನೆಲಸಿದ ಜಾಗ ನೆನಪಿಸುತ್ತಿದೆ. ಕಳೆದುಕೊಂಡಿದ್ದು ಏನೇನು ಅದು ಲೆಕ್ಕಕ್ಕೇ ನಿಲುಕಲಾರದ್ದು. ಆಲೋಚನೆಗೂ ಮೀರಿದ್ದು. ಹೊಸತಾಗಿ ಸೃಷ್ಟಿಸುವ ಕೆಲಸ ಸುಲಭದ್ದೂ ಅಲ್ಲ, ತಕ್ಷಣಕ್ಕೆ ಜರುಗುವುದೂ ಅಲ್ಲ. ಆದರೆ ಪ್ರವಾಹದ ರೂಪದಲ್ಲಿ ಬಂದ ಧನ, ವಸ್ತುಗಳು ಸೂಕ್ತವಾಗಿ ನಿರ್ವಹಣೆ ಆಗುತ್ತದೆಯೇ ಅನ್ನೋದು ಮಾತ್ರ ಈ ಕ್ಷಣಕ್ಕೆ ನಮ್ಮೆದೆರು ಇರುವ ಪ್ರಶ್ನೆ. ಇಲ್ಲವಾದಲ್ಲಿ ಅದಕ್ಕಿಂತ ಭೀಕರ ಅಪಾಯ ಇದಾಗುವುದರಲ್ಲಿ ಸಂದೇಹವೇ ಇಲ್ಲ. ಹುಚ್ಚುಮುಂಡೆ ಮದ್ವೇಲಿ ಉಂಡೋನೇ ಜಾಣ ಅನ್ನೋ ಗಾದೆಯ ಮಾತಿನಂತೆ ಇಲ್ಲೂ ರಣಹದ್ದುಗಳು ಕಾದುಕುಳಿತಿರುವ ಅಪಾಯ ಇಲ್ಲದಿಲ್ಲ.

ಲಕ್ಷ್ಮಿ ಯಾರಿಗೆ ತಾನೇ ಪ್ರಿಯವಲ್ಲ. ಅದರಲ್ಲೂ ಸುಲಭವಾಗಿ ಸಿಕ್ಕಿದ್ದು ಬಿಡುವವರು ಯಾರು. ಹಾಗಾಗಿ ಕಟ್ಟುವ ಪ್ರಯತ್ನ ಎಷ್ಟು ಆವಶ್ಯಕವೋ ಸದ್ಭಳಕೆ ಆಗುವ ಹಾಗೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಯಾರಿಗೆ ಸೇರಬೇಕೋ ಅವರಿಗೆ ಸೇರುವ ಹಾಗೆ ಮಾಡುವುದೂ ಕೂಡಾ ಅತ್ಯಗತ್ಯ. ಬಂದ ಒಂದು ಪೈಸೆಯೂ ವ್ಯರ್ಥವಾಗದೆ ಸರಿಯಾದ ರೀತಿಯಲ್ಲಿ ಬಳಕೆಯಾದಾಗ ಸ್ವಲ್ಪ ಮಟ್ಟಿನ ಸ್ವಾಂತನ ಸಹಕಾರ ದೊರಕಿದ ಹಾಗೆ ಆಗುತ್ತದೆ. ಅವರು ಮನೆ, ಜಾಗ, ಭೂಮಿ ಕಳೆದುಕೊಂಡಿದ್ದಾರೆ ನಾವು ಮಾನವೀಯತೆ ಕಳೆದುಕೊಳ್ಳದೆ ಇರೋಣ. ದೇವರಾಗಲು ಸಾಧ್ಯವಿಲ್ಲ ನಾವು ಹುಲುಮಾನವರು. ರಾಗದ್ವೇಷಗಳನ್ನು ಸುಲಭವಾಗಿ ಮೀರಲಾಗದವರು. ಕೊನೆಪಕ್ಷ ದಾನವರಾಗದೆ ಇರೋಣ ಅನ್ನೋದು ಸರಿಯಾದ ಪದ ಬಳಕೆಯಲ್ಲ ಅನ್ನಿಸುತ್ತೆ. ದಾನವರು ಎಂದೂ ತಮ್ಮವರಿಗೆ ಮೋಸ ಮಾಡಿದವರಲ್ಲ. ಹಾಗಾಗಿ ಮನುಷ್ಯರಾಗೋಣ... ಇಲ್ಲವಾದಲ್ಲಿ ಸುಮ್ಮನಿರೋಣ. ಅಮಾನುವೀಯರಾಗದೆ ಇರುವುದು ಸದ್ಯದ ಅನಿವಾರ್ಯವಾಗಿದೆ.

ಯಾವುದೂ ಶಾಶ್ವತವಲ್ಲ.... ಯಾರೂ ಅನಿವಾರ್ಯರಲ್ಲ... ಅನ್ನೋದು ಅರ್ಥವಾದ ದಿನ ಬದುಕು ಉತ್ತಮವಾಗಬಹುದಾ....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...