ಅಭ್ಯಂಜನ.

ಭಾನುವಾರ ಬಂತೆಂದರೆ ಅದು ಅಭ್ಯಂಜನದ ಸಮಯ.ನಿಧಾನಕ್ಕೆ ಎದ್ದು ತಿಂಡಿ ತಿಂದು ಹೊರಗೆ ಆಡಲು ಹೋಗಬೇಕು ಅಂತ ರೆಡಿಯಾಗುವಾಗಲೇ ಹೊಂಚು ಹಾಕಿ ಹಿಡಿಯುವ ಬೇಟೆಗಾರನಂತೆ ಅಜ್ಜಿ ಪ್ರತ್ಯಕ್ಷಳಾಗುತ್ತಿದ್ದಳು. ತಪ್ಪಿಸಿಕೊಳ್ಳಲು ಆಗದಂತೆ ಮಾಡುತ್ತಿದ್ದಳು. ಬಿಲ್ಲಿನ ಬದಲು ಎಣ್ಣೆಯ ಬಟ್ಟಲು ಹಿಡಿದು. ಅಲ್ಲಿಗೆ ಎಲ್ಲಾ ದಾರಿಗಳೂ ಮುಚ್ಚಿ  ಇನ್ನು ಚಟ್ಟೆಮುಟ್ಟೆ ಹಾಕಿ ಕೂರುವುದೊಂದೇ ಬಾಕಿ  ಉಳಿಯುತ್ತಿತ್ತು. ಮಂದವಾದ ಹರಳೆಣ್ಣೆಯನ್ನು ಒಂದು ಹನಿಯೂ ನೆಲಕ್ಕೆ ಜಾರದಂತೆ ಬೊಗಸೆಯಲ್ಲಿ ಸುರಿದು ಅಷ್ಟೇ ನಾಜೂಕಾಗಿ ನೆತ್ತಿಗೆ ಒತ್ತಿ ತನ್ನ ಪುಟ್ಟದಾದ ಕೈಯಿಂದ ಹದವಾಗಿ ತಿಕ್ಕುತ್ತಿದ್ದರೆ ಅದು ಮಳೆಗಾಲದ ನೀರಿನಂತೆ ಜಾಗ ಮಾಡಿಕೊಂಡು ತೊರೆಯಾಗಿ, ಜಲಪಾತವಾಗಿ ಇಳಿದು ಮುಖಕ್ಕೆ ಮುತ್ತಿಕ್ಕುತ್ತಿತ್ತು.
ವಾರಕ್ಕೊಂದು ಸಾರಿ ನೆತ್ತಿಗೆ ಎಣ್ಣೆ ಬೀಳದಿದ್ದರೆ ಕಣ್ಣುರಿ ಬರುತ್ತೆ. ನೆತ್ತಿ ಕಾಯಿಸಬಾರದು. ನೋಡು ಹೇಗೆ ಸುಡ್ತಾ ಇದೆ. ಹಾಳಾದವಳು ಬಿಸಿಲಿಗೆ ಹೋಗಬೇಡಾ ಅಂದ್ರೂ ಮೂರ್ಹೊತ್ತೂ ಅಲ್ಲೇ ಸಾಯ್ತಿ ಅಂತ ಬೈಯುತ್ತಿದ್ದರೆ ಒಳಗೆ ನಿಧಾನಕ್ಕೆ ಇಳಿಯುತ್ತಿದ್ದ ಹರಳೆಣ್ಣೆಯ ತಂಪಿಗೆ ಅದು ಜೋಗುಳದಂತೆ ಭಾಸವಾಗಿ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತಿತ್ತು. ನೆತ್ತಿಗೆ ಬಡಿದು ಅಷ್ಟೂ ಎಣ್ಣೆಯನ್ನು ಇಳಿಸಿದ ಮೇಲೆ ಒಂದು ಬಟ್ಟಲಿಗೆ ಎಳ್ಳೆಣ್ಣೆಯನ್ನು ಸುರಿದು ಹೋಗು ಮೈಗೆಲ್ಲಾ ಹಚ್ಚಿಕೊಂಡು ಓಲೆ ಉರಿ ಮುಂದೆ ಮಾಡು ಎಂದು ಆ ಏಕಾಂತದಿಂದ ಎಬ್ಬಿಸಿ ಬಚ್ಚಲಿಗೆ ಅಟ್ಟುತ್ತಿದ್ದಳು. ಅವಳನ್ನು ಬೈದುಕೊಳ್ಳುತ್ತಲೇ ಬಿಡಲಾರೆ ಅನ್ನೋ ರೆಪ್ಪೆಗಳನ್ನು ಬಲವಂತವಾಗಿ ಬೇರ್ಪಡಿಸಿ ಹೆಜ್ಜೆ ಎತ್ತಿಡುತ್ತಿದ್ದೆ. ಮುಂಗೈಯಿಂದ ಹರಳೆಣ್ಣೆಯನ್ನು ಒರೆಸಿಕೊಳ್ಳುತ್ತಾ.

ಕಾವು ದೇಹವನ್ನು ಒಣಗಿಸುತ್ತದೆ ದುಃಖ ಮನಸನ್ನು ಬೆಂಗಾಡು ಮಾಡಿಬಿಡುತ್ತದೆ. ಹಾಗಾಗಿ ತಂಪು ಮಾಡಬೇಕು. ಹಾಗಂತ ತೀರಾ ತಂಪು ಒಳ್ಳೆಯದಲ್ಲ, ಸಮತೋಲನ ಕಾಪಾಡಿಕೊಳ್ಳಬೇಕು. ಬಿಸಿಲು, ಮಣ್ಣು, ಮಳೆಗೆ ತೆರೆದ ಚರ್ಮವನ್ನು ಮತ್ತೆ ಮೃದುವಾಗಿಸಲು ಅದಕ್ಕೆ ಎಣ್ಣೆ ಹಚ್ಚಬೇಕು. ಒರಟುತನ ಯಾರಿಗೂ ಪ್ರಿಯವಲ್ಲ. ಸ್ವತಃ ತನಗೂ ಒಳ್ಳೆಯದಲ್ಲ. ಹಾಗಾಗಿ ಎಣ್ಣೆಯನ್ನು ಹಚ್ಚಿ ಉಜ್ಜುತ್ತಾ ಚರ್ಮ ಮತ್ತೆ ತನ್ನ ಮೃದುತನ ಹೊಳಪು ಪಡೆದುಕೊಳ್ಳುತಿತ್ತು. ಮನಸ್ಸು ಅಜ್ಜಿಯ ಸ್ಪರ್ಶಕ್ಕೆ ಮೆತ್ತಗಾಗುತಿತ್ತು.  
ಒಲೆಯ ಉರಿಗೋ ನನ್ನಂತೆ ನಿದ್ರಾ ಸೆಳೆತ. ಕುಗುರುತ್ತಿದ್ದ ಅದಕ್ಕೆ ಕಟ್ಟಿಗೆಯನ್ನು ಪೇರಿಸಿ ಎಚ್ಚರಿಸಿ ಎಣ್ಣೆ ಹಚ್ಚಿಕೊಳ್ಳುವ ವೇಳೆಗೆ ಮತ್ತೆ ಪ್ರತ್ಯಕ್ಷಳಾಗುತ್ತಿದ್ದ ಅವಳು ಸೀಗೆಯ ಬಟ್ಟಲನ್ನು ತಂದಿಟ್ಟು, ಸರಿಯಾಗಿ ಹಚ್ಕೊ ಅಂತ ಇನ್ನೊಮ್ಮೆ ಅರ್ಚನೆ ಮಾಡಿ ಕುಕ್ಕರುಗಾಲಲ್ಲಿ ಕೂರಿಸಿ ಬೆನ್ನಿಗೆ ಎಣ್ಣೆ ಸುರಿದು ಹದವಾಗಿ ನೀವುತ್ತಿದ್ದರೆ ಅಲ್ಲೇ ಉರಿಗೆ ಒಡ್ಡಲು ಇಟ್ಟಿರುತ್ತಿದ್ದ ಹಾಳೆಯನ್ನೇ ಹಾಸಿಕೊಂಡು ಮಲಗುವ ಮನಸ್ಸಾಗುತ್ತಿತ್ತು. ಎಣ್ಣೆ ಹಚ್ಚಿದ ಕೂಡಲೇ ಸ್ನಾನ ಮಾಡೋ ಹಾಗಿಲ್ಲ ಅದು ಮೈಗೆ ಹತ್ತಬೇಕು. ಇಳಿದು ಒರಟಾದ ಚರ್ಮವನ್ನು ಮೃದುವಾಗಿಸ ಬೇಕು. ಮೃದುವಾಗಿಸುವುದು ಎಷ್ಟು ಕಷ್ಟದ ಕೆಲಸ ಅಂತ ಗೊತ್ತಾಗುತ್ತಿದ್ದದ್ದು ಆಗಲೇ ನೋಡಿ.  
ಮಷೀನ್ ಅನ್ನು ಆಗಾಗ ಆಯಿಲ್ ಮಾಡುವಂತೆ ದೇಹಕ್ಕೂ ಮಾಡಬೇಕು. ಆಗ ಮಾತ್ರ ಕೀಲುಗಳು ಮೊಂಡು ಹಿಡಿಯದೆ ಸರಾಗವಾಗಿ ಕೆಲಸ ಮಾಡುತ್ತವೆ. ಕೀಲುಗಳು ಸರಾಗವಾಗಿದ್ದಾಗ ಮಾತ್ರ ಚಲನೆ ಸುಲಭ. ಸಂಬಂಧಗಳೂ ಹೀಗೆ ಕೆಲವೊಮ್ಮೆ ಮೊಂಡು ಹಿಡಿಯುತ್ತದೆ, ತುಕ್ಕು ಅಂಟಿಕೊಳ್ಳುತ್ತದೆ. ಆಗ ಹೀಗೆ ಎಣ್ಣೆಯನ್ನು ಹಚ್ಚಿದರೆ ಹದವಾಗಿ ನೀವಿದರೆ ಮತ್ತೆ ಹೊಸ ಉತ್ಸಾಹ ತುಂಬಿಕೊಂಡು ದುಪ್ಪಟ್ಟು ಜೀವಂತಿಕೆಯಿಂದ ನಳನಳಿಸುತ್ತವೆ. ಹಾಗಾಗಿ ಜಿಡ್ಡು ಒಳ್ಳೆಯದು. ಹಾಗಂತ ಅತಿಯಾದ ಜಿಡ್ಡು ಬಳಸಿದರೆ ಜಾರುತ್ತದೆ. ಹಿಡಿಯಲೂ ಸಾದ್ಯವಿಲ್ಲದಂತೆ ಕೆಳಗೆ ಬಿದ್ದು ಒಡೆಯುತ್ತದೆ.
ಇಂಥಹ ಮಂಪರಿನಲ್ಲಿ ಇರುವಾಗಲೇ ನೀರು ಬಿಸಿಯಾಗಿ ಸುಯ್ಯೆಂಬ ಗಾನ ಹಾಡುತ್ತಿರುತ್ತಿತ್ತು. ಅದರ ಶ್ರುತಿ ಹಿಡಿದೂ ಅವಳೂ ಬರುತ್ತಿದ್ದಳು ಒಮ್ಮೆ ತಣ್ಣೀರು ಉರಿ ಎರಡನ್ನೂ ತನ್ನ ಹದ್ದಿನ ಕಣ್ಣಿಂದ ಗಮನಿಸಿ ಕೂರಿಸಿ ತಂಬಿಗೆ ಹಿಡಿದು ಬಿಸಿ ಬಿಸಿ ನೀರನ್ನು ಎತ್ತಿ ಹೊಯ್ಯಲು ಶುರುಮಾಡಿದರೆ ಅದೊಂದು ತರಹ ಮಂಪರು. ಅತಿಯಾದ ಬಿಸಿ, ತಣ್ಣಗೆ ಎರಡೂ ಉಪಯೋಗವಿಲ್ಲ. ಎರಡೂ ಸೇರಿದ ಹದವಾದ ಉಷ್ಣತೆ ಮಾತ್ರ ಹಿತ. ಅತಿಯಾದ ಒಳ್ಳೆಯತನ, ಕೆಟ್ಟತನ ಎರಡೂ ಪ್ರಯೋಜನವಿಲ್ಲ. ಚೂರು ನಿರ್ದಯತೆಯೂ ಬದುಕಿಗೆ ಅನಿವಾರ್ಯ. ಹಾಗೆ ಅವಳು ಸುರಿಯುವಾಗ  ಎಲ್ಲಿದ್ದಿನಿ ಅನ್ನೋದು ಮರೆತು ಹೋಗುವ ಭಾವ. ಹಾಗೆ ಕಳೆದುಹೋಗುವ ಮುನ್ನವೇ ಕುಗುರುವ ಮೊದಲೇ  ತಣ್ಣನೆ ಹಾವು ಹರಿದಂತೆ ನೆತ್ತಿಯಿಂದ ಮತ್ತಿಯಗುಳ ಇಳಿದು ಬೆನ್ನಿನಿಂದ ಜಾರಿ ಕಚಗುಳಿಯಿಟ್ಟು ಎಬ್ಬಿಸುತ್ತಿತ್ತು. ಮತ್ತಿ ಸೊಪ್ಪು ತಂದು ಅದನ್ನು ಹದವಾಗಿ ಜಜ್ಜಿ ತಣ್ಣೀರಲ್ಲಿ ಕಲೆಸುತ್ತಿದ್ದರೆ ನಿಧಾನವಾಗಿ ಗುಳ ಬಿಟ್ಟುಕೊಂಡು ಮಂದವಾಗುತ್ತದೆ. ಅದು ದೇಹಕ್ಕೆ ನೆತ್ತಿಗೆ ತಂಪು ಮಾತ್ರವಲ್ಲ ಕೂದಲಿಗೆ ಟಾನಿಕ್ ಕೂಡಾ. ಅನಂತರದ್ದೆ ಭಯಂಕರ ಶಿಕ್ಷೆ.
ಸರಿಮಾಡಲು ಎಣ್ಣೆ ಆವಶ್ಯಕವಾದರೂ ಅದು ಜಿಡ್ಡು. ಹಾಗೆ ಬಿಟ್ಟರೆ ಜಾರುತ್ತದೆ. ಇಲ್ಲಾ ಶೀತವಾಗುತ್ತೆ. ಹಾಗಾಗಿ ಅದನ್ನು ತೊಳೆಯಬೇಕು.  ಜಿಡ್ಡು ತೊಳೆಯುವುದು ಸುಲಭವಲ್ಲ. ಕೆಲವೊಮ್ಮೆ ಸರಿಮಾಡಲು ಬಂದವರೇ ಕಂಟಕವಾಗುವ ಹಾಗೆ ಇದೂ ಕೂಡಾ. ಹಾಗಾಗಿ ಅದಕ್ಕೆ ಬಿಸಿನೀರು ಹಾಗೂ ಸೀಗೆಯ ಸಾಂಗತ್ಯ ಬೇಕು. ಸೀಗೆ ಘಾಟು. ಆ ಘಾಟಿಗೆ ಹೆದರಿ ಜಿಡ್ಡು ಓಡುತ್ತಿತ್ತು. ಬದುಕಿಗೂ ಘಾಟು ಎಷ್ಟು ಆವಶ್ಯಕ ಅನ್ನೋದು ಆಗ ತಿಳಿಯದೆ ಅದನ್ನು ಶಪಿಸುತ್ತಿದ್ದೆ. ಅವಳೋ  ಅಂಗೈಯ್ಯಲ್ಲಿ ಸೀಗೆಪುಡಿ ಹಿಡಿದು ತಲೆಯನ್ನು ಗಸಗಸ ಉಜ್ಜುತ್ತಿದ್ದರೆ ತಲೆಯ ಕೊಳೆಯೆಲ್ಲಾ ಜಿಡ್ಡಿನ ಸಮೇತ ಗಂಟುಮೂಟೆ ಕಟ್ಟಿಕೊಂಡು ಓಡುವ ರಭಸದಲ್ಲಿ ಕಣ್ಣಿಗೆ, ಬಾಯಿಗೆ ಜಾರಿಬೀಳುವ ಪರಿಗೆ ಕಣ್ಣು ಉರಿಯುತ್ತಿತ್ತು. ಅಭ್ಯಂಜನದ ದಿನ ಸೋಪು ನಿಷಿದ್ಧ. ಜಿಡ್ಡು ಶರಣಾಗುತ್ತಿದ್ದದ್ದು ಸೀಗೆಪುಡಿಯ ಘಾಟಿನ ಎದುರು ಮಾತ್ರ. ಅಷ್ಟರೊಳಗೆ ಸುಸ್ತಾಗಿರುತ್ತಿದ್ದ ನಾನು ಅಜ್ಜಿಗೆ ಸಂಪೂರ್ಣ ಶರಣಾಗಿಬಿಡುತ್ತಿದ್ದೆ. ಅವಳು  ಮೈಯೆಲ್ಲಾ ಉಜ್ಜಿ  ಮತ್ತಷ್ಟು ನೀರು ಸುರಿದು ಅವತ್ತಿನ ದಿನಕ್ಕೆಂದೇ ಎತ್ತಿಟ್ಟ ಅಜ್ಜನ ಪಾಣಿ ಪಂಚೆಯಿಂದ ತಲೆ ಮೈ ಒರೆಸುತ್ತಿದ್ದರೆ ನಿದ್ರಾದೇವಿ ತನ್ನ ತೋಳುಗಳನ್ನು ಚಾಚಿ ಅಪ್ಪುತ್ತಿದ್ದಳು.

ಯಾವುದನ್ನೇ ಆಗಲಿ  ಕಳೆದುಕೊಂಡಾಗ ಒಂದು ರೀತಿಯ ನಿಸ್ಸಾರ, ಸುಸ್ತು ಆವರಿಸಿಕೊಳ್ಳುತ್ತದೆ. ಹಾಗಾಗಿ ಅಲ್ಲೊಂದು ಜೊತೆ ಬೇಕು, ಭಾವಾನಾತ್ಮಕ ಸಂಬಂಧ ಬೇಕು. ಅದು ಅಜ್ಜನ ಪಾಣಿಪಂಚೆಯೋ ಅಜ್ಜಿಯ ಹತ್ತಿ ಸೀರೆಯ ಭಾಗವೋ  ಆಗಬೇಕು. ಅದನ್ನು ಒತ್ತಿಕೊಂಡಾಗ ಹಿತವೆನಿಸಬೇಕು, ನೀರು ಹೀರಬೇಕು. ಭಾವಗಳನ್ನು ಒರೆಸಿತೆಗೆಯಬೇಕು. ತಲೆ ಮೈಯೆಲ್ಲಾ ಒಣಗಿ ಹೊಸತನ ಮೈಯಲ್ಲಿ ತುಂಬಿಕೊಳ್ಳಬೇಕು. ಎಲ್ಲವೂ ಹೀರಿಕೊಳ್ಳುವುದಿಲ್ಲ ಅನ್ನೋದು ಅದೆಷ್ಟು ಸತ್ಯ. ಹಾಗೆ ಹೀರಿಕೊಂಡಿದ್ದು ಆಪ್ತವಾಗುವುದು ಅಷ್ಟೇ ನಿತ್ಯ. ಒಳಗೆ ಬರುತ್ತಿದ್ದ ಹಾಗೆ ಒಂದು ಲೋಟ ನೀರು ಮಜ್ಜಿಗೆಯನ್ನೋ, ಕರಾವು ಚೆನ್ನಾಗಿದ್ದರೆ ಹಾಲನ್ನೋ, ಮಳೆಗಾಲವಾದರೆ ಕಾಫಿಯನ್ನೋ ಕೊಟ್ಟು ಅವಳು ನಡೆಯುತ್ತಿದ್ದರೆ ನಾವೋ ಮುಚ್ಚುವ ಕಣ್ಣುಗಳನ್ನು ಬಲವಂತವಾಗಿ ತೆರೆಸುತ್ತಾ ಚನ್ನೆಮಣೆಯೋ, ಪಗಡೆಯನ್ನೋ ಆಡುತ್ತಾ ನಿದ್ದೆಯನ್ನು ಓಡಿಸಲು ಪ್ರಯತ್ನದಲ್ಲಿರುತ್ತಿದ್ದೆವು. ಕಳೆದುಕೊಂಡು ಬಂದಮೇಲೆ ಶಕ್ತಿ ತುಂಬಬೇಕು. ಇಲ್ಲವಾದಲ್ಲಿ ನಿಶಕ್ತಿ ಬದುಕನ್ನು ಹಿಂಡಿಹಿಪ್ಪೆ ಮಾಡಿಬಿಡುತ್ತದೆ.

ಹರಳೆಣ್ಣೆಯನ್ನುತೊಳೆಯುವ ಶಕ್ತಿ ಶಾಂಪೂವಿಗಿಲ್ಲ, ಮತ್ತಿಸೊಪ್ಪು ಹುಡುಕುವ ತಾಳ್ಮೆ ಈಗ ಯಾರಿಗೂ ಇಲ್ಲ. ಸಮಯವಂತೂ ಮೊದಲೇ ಇಲ್ಲಾ. ಹಾಗಾಗಿ ನೆತ್ತಿ ಕಾಯುವುದು ನಿಲ್ಲಿಸಲು ಆಗುವುದಿಲ್ಲ. ನೆತ್ತಿ ಕಾದಷ್ಟೂ ಬದುಕು ಕಾಯುತ್ತದೆ. ಅಭ್ಯಂಜನ ಅನ್ನೋದು ಈಗ ವಿಪರೀತ ಕಾಸ್ಟ್ಲಿ. ಸಿಗೇಪುಡಿ ಘಾಟು ಮೂಗಿಗೆ ಅಲರ್ಜಿ. ಅಷ್ಟು ಸಮಯ ಒಂದು ಸ್ನಾನಕ್ಕಾಗಿ ಉಪಯೋಗಿಸುವುದು ಸಹ ವ್ಯರ್ಥ ಅನ್ನೋದು ಬದುಕಿನ ಭಾಗವಾಗಿದೆ. ಬದುಕು ಬರಡಾಗುತ್ತಾ ಬಂದ ಹಾಗೆ ಈಗ ಎಣ್ಣೆಯ ಮಹತ್ವ ಅರಿವಾಗಿದೆ. ಹಾಗಾಗಿ ಗಲ್ಲಿಗೊಂದು ಸ್ಪಾ ಗಳು, ಆಯುರ್ವೇದಿಕ್ ಪಾರ್ಲರ್ ತಲೆಯೆತ್ತಿವೆ. ಸೀಗೆಪುಡಿ, ಗುಳಗಳು ಹೊಸರೂಪವನ್ನು ಹೊತ್ತು ಪ್ಯಾಕೆಟ್ ಗಳಲ್ಲಿ ಬಂದಿವೆ. ಅಮ್ಮನೋ, ಅಜ್ಜಿಯೋ ಬದಲಾಗಿ ಅವರ ಜಾಗದಲ್ಲಿ ಇನ್ಯಾರೋ ಅಪರಿಚಿತರು ಬಂದು ನಿಂತಿದ್ದಾರೆ.  ಆದರೆ ಅಷ್ಟೇ ನೈಸರ್ಗಿಕತೆ, ಸಹಜತೆ ಆಪ್ತತೆ ಉಳಿಸಿಕೊಂಡಿದೆಯಾ... 

80ರ ಹರೆಯದಲ್ಲೂ ಅಲ್ಲೊಂದು ಇಲ್ಲೊಂದು ಇಣುಕುವ ಬೆಳ್ಳಿ ಕೂದಲು ನೋಡುತ್ತಾ ಅಮ್ಮಾ ಇನ್ಮೇಲೆ ನಂಗೆ ಶಾಂಪೂ ಬೇಡಾ, ಗುಳ ಹಾಕೆ ಸ್ನಾನ ಮಾಡ್ಸು. ನಮ್ಮನೆ ಟೆರಸ್ ಅಲ್ಲಿ ಮಣ್ಣು ಹಾಕಿ ಆ ಮರ ನೆಡೋಣ. ನಂಗೂ ಮುತ್ತಜ್ಜಿ ತರಹ ಕೂದ್ಲುಬೇಕು ಅಂತ ಮಗಳು ಅಪ್ಪಣೆ ಮಾಡಿದ್ಲು. ಹರೆಯದಲ್ಲೇ ಸುಕ್ಕುಗಟ್ಟುವ ನೆರೆಯುವ ಕೂದಲು, ಚರ್ಮ ಪಡೆಯುವ ನಮ್ಮ ಆಧುನಿಕತೆಯ ಕಂಡು  ನಕ್ಕಿದ್ದು ದಾರಿಯ ಬದಿಯಲ್ಲಿದ್ದ ಮತ್ತಿಯ ಚಿಗುರಾ...  ಸೀಗೆಬಳ್ಳಿಯಾ ಕೇಳೋಣವೆಂದರೆ ಅಜ್ಜಿ ಇಲ್ಲ. ಅಜ್ಜನ ಪಾಣಿಪಂಚೆ ಹರಿದು ಯಾವುದೋ ಕಾಲವಾಗಿದೆ. ಈಗ ಅಮ್ಮನ ಸೀರೆಯ ತುಂಡನ್ನು ಹುಡುಕಬೇಕಿದೆ. ಅಹಿಯ ನೆತ್ತಿ ತಂಪಾಗಿರುವಂತೆ ನೋಡಿಕೊಳ್ಳಬೇಕಿದೆ. ಎಲ್ಲಕ್ಕಿಂತ ಮೊದಲು ಊರಿಗೆ ಹೋಗಿ ಒಂಟಿಯಾಗಿ ನಿಂತ ಮತ್ತಿ ಮರವನ್ನೊಮ್ಮೆ ಮುಟ್ಟಿ ಮಾತಡಿಸಬೇಕಾಗಿದೆ. ಅಂದಹಾಗೆ ನೀವು ಅಭ್ಯಂಜನ ಮಾಡಿದ್ರಾ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...