ನನ್ನಿ

ಯಾರದ್ದೋ ಅನಾರೋಗ್ಯ ಹಣಕ್ಕಾಗಿ ಸಹೃದಯರ ಸಹಾಯ ಯಾಚಿಸಿದ್ದರು ಒಬ್ಬರು. ಒಳ್ಳೆಯ ವ್ಯಕ್ತಿ ಅನ್ನೋ ಹೆಸರಿದ್ದ ಕಾರಣ ತುಂಬಾ ಜನರೂ ತಮ್ಮ ಕೈಲಾದಷ್ಟು ನೀಡಿದ್ದರು. ಕೊನೆಯಲ್ಲಿ ನೋಡಿದಾಗ ಸಂಗ್ರಹವಾಗಿದ್ದ ಕಾಲುಭಾಗದಷ್ಟೂ ಹಣವೂ ಸೇರಬೇಕಾಗಿದ್ದವರ ಪಾಲಿಗೆ ಸೇರಿರಲಿಲ್ಲ. ವಿಚಾರಿಸಿದಾಗ ಸಹಾಯ ಮಾಡುವ ನೆಪದಲ್ಲಿ ಇವರ ಜೇಬು ತುಂಬಿಸಿಕೊಳ್ಳುವ ಪ್ರಕ್ರಿಯೆ ಸದಾ ನಡೆಯುತ್ತದೆ ಎಂದು ಗೊತ್ತಾದಾಗ ಬೆಚ್ಚಿಬಿದ್ದಿದ್ದೆ. ಸೇವೆಯ ಇನ್ನೊಂದು ಮುಖದ ಅನಾವರಣ ಆಗಿ ಶಾಕ್ ಕೂಡಾ ಆಗಿತ್ತು.

ಕರಣಂ ಪ್ರಸಾದ್ ಅವರ ನನ್ನೀ ಕಾದಂಬರಿ ಓದುವಾಗ ಇವೆಲ್ಲವೂ ನೆನಪಾಗಿತ್ತು. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬ  ಹಾಡು ನೆನಪಾಗಿ ಈಗ ಸೇವೆ ಎಂಬುದು ಇಳಿದಿರುವ ಮಟ್ಟ ನೋಡಿ ಮನಸ್ಸಿಗೆ ಕಸಿವಿಸಿಯ ಜೊತೆಗೆ ವಿಷಾದ ಕೂಡ. ಇಲ್ಲಿಯೂ ನನ್ ಒಬ್ಬಳ ಬದುಕಿನ ಕತೆಯಿದೆ. ಅವಳು ಸತ್ಯಾನೇಷ್ವಣೆಗೆ ಹೊರಡುವ ಚಿತ್ರಣವಿದೆ. ಮತಾಂತರದ ವಿಶ್ವರೂಪ ದರ್ಶನವಿದೆ. ಅಸಹಾಯಕತೆ ಹೇಗೆ ಬಂಡವಾಳವಾಗುತ್ತದೆ ಎನ್ನುವುದರ ಕರಾಳ ಅನಾವರಣ ಇದೆ. ಹಾಗಾದರೆ ಅದು ಕೇವಲ ಅವರ ಕತೆಯಾ ಉಹೂ ಓದುತ್ತಾ ಓದುತ್ತಾ ಹೋದ ಹಾಗೆ ನಮ್ಮೊಳಗೂ ಅನ್ವೇಷಣೆ ನಡೆಯುತ್ತಾ ಹೋಗುವುದರ ಜೊತೆಗೆ ಭ್ರಮೆಯನ್ನು ಕಳೆದು ವಾಸ್ತವವನ್ನು ಪರಿಚಯಿಸುತ್ತಾ ಹೋಗುತ್ತದೆ. ಸತ್ಯದ ಬೆಳಕು ಗೋಚರಿಸುತ್ತದೆ.

ಒಂದು ನಾಣ್ಯಕ್ಕೆ ಎರಡು ಮುಖವಿದೆ ಅನ್ನೋದು ಪ್ರಸಿದ್ದ ನಾಣ್ನುಡಿ. ಕೇವಲ ನಾಣ್ಯಕ್ಕೆ ಮಾತ್ರವಲ್ಲ ಪ್ರಕೃತಿಯ ಪ್ರತಿಯೊಂದಕ್ಕೂ ಎರಡು ಮುಖವಿದೆ. ಅದರಲ್ಲೂ ಯಾವುದೋ ಸ್ವಾರ್ಥದ ಉದ್ದೇಶ ಇಟ್ಟುಕೊಂಡು ಮಾಡುವ ಪ್ರತಿಯೊಂದು ಕಾರ್ಯದ ಹಿಂದೆಯೂ  ಒಂದು ಕರಾಳ ಮುಖವಿರುತ್ತದೆ. ಸತ್ಯ ಎಂದರೇನು ಹಾಗಿದ್ದರೆ.. ಅದು ಸಾರ್ವತ್ರಿಕ ಎಂದರೂ ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕಾದದ್ದು ಅದು. ಅವರವರ ದಾರಿ ಅವರವರೆ ನಡೆದು ಕಂಡುಕೊಂಡಾಗ ಮಾತ್ರ ಅದರ ಸ್ವರೂಪ ಅರ್ಥವಾಗುತ್ತದೆ. ಹಾಗೆ ಸಾಗುವ ದಾರಿಯಲ್ಲಿ ನಿರಾಶೆ, ಭ್ರಮ ನಿರಸನ, ನೋವು, ಕಷ್ಟ ಎಲ್ಲವೂ ಇವೆ. ಅವೆಲ್ಲವನ್ನೂ ದಾಟಿಕೊಂಡು ನಿರ್ಲಿಪ್ತ ಸ್ಥಿತಿಗೆ ತಲುಪಿದಾಗ, ಮನಸ್ಸು ಮಾಗಿದಾಗ ಸತ್ಯದ ದರ್ಶನವಾಗುತ್ತದೆ. ಇಲ್ಲವಾದಲ್ಲಿ ಅದರ ಪ್ರಖರತೆಗೆ ಬದುಕು ಸುಟ್ಟು ಹೋಗುತ್ತದೆ. ಸತ್ಯ ಸೂರ್ಯನಂತೆ.

ಆದರೆ ಈ ಸೇವೆ ಅನ್ನೋದು ಹೆಸರಿಗಾಗಿ, ಯಾವುದೋ ಸಿದ್ಧಾಂತದ ಅಥವಾ ಮತದ ಪ್ರಚಾರದ ಉದ್ಧೇಶ ಹೊತ್ತು ಬಂದಾಗ  ಅಲ್ಲಿ ಎಲ್ಲವೂ ತೋರಿಕೆಯದಾಗುತ್ತದೆ. ತ್ಯಾಗಕ್ಕಿಂತ ವಿಧೇಯತೆ ಮುಖ್ಯ ಎನ್ನುವ ಧ್ಯೇಯ ಹೊಂದಿದ ಸಂಸ್ಥೆಗಳಲ್ಲಿ ಸೇವೆ ನಿಜವಾಗಲೂ ನಡೆಯುತ್ತದೆಯೇ? ಹಾಗಾದರೆ ಸೇವೆ ಎಂದರೆ ಏನು? ಯಾರಿಗೆ ಯಾವ ಸಮಯದಲ್ಲಿ ಏನು ಆವಶ್ಯಕವೋ ಅದನ್ನು ನೀಡುವುದು. ಕೊಡುವುದು ಎಂದಾಗ ಅಲ್ಲೊಂದು ಹಮ್ಮಿದೆ, ಪ್ರತಿಫಲದ ಅಪೇಕ್ಷೆ ಸುಪ್ತವಾಗಿರುತ್ತದೆ. ನೀಡುವುದು ಎಂದಾಗ ಅಲ್ಲಿ ಕೃತಜ್ಞತೆಯಿದೆ. ಋಣ ತೀರಿಸಿಕೊಳ್ಳುವ ಧನ್ಯತೆಯಿದೆ.  ಅಲ್ಲಿ ಬಾಹ್ಯಪ್ರತಿಫಲದ ನಿರೀಕ್ಷೆಯಿಲ್ಲ. ಅಂತರ್ಯಕ್ಕೆ ಏನು ದೊರೆಯುತ್ತದೆ ಅನ್ನೋದು ತಿಳಿಸುವ ಅಗತ್ಯವಿಲ್ಲ. ಅದು ಕೇವಲ ಅನುಭವಕ್ಕೆ ದಕ್ಕುವ ತನ್ನಷ್ಟಕ್ಕೆ ತಾನು ಅನುಭವಿಸುವ ದಿವ್ಯ ಅನುಭೂತಿ ಅಷ್ಟೇ. ಅದು ಅಷ್ಟು ಸುಲಭವಾ... ಆಗೆಲ್ಲಾ ಈ ಪದ್ಯ ನೆನಪಾಗುತ್ತದೆ ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನ ಗಣಿಯೋ.

ಸೇವೆಯ ಕನಸು ಹೊತ್ತು ನನ್ ಆದ ರೋಣಳನ್ನು ಇದು ಕೊನೆಯ ತನಕ ಕಾಡುತ್ತದೆ. ಬಹುತೇಕ ಸೇವಾಸಂಸ್ಥೆಗಳಿಗೆ ಪ್ರಚಾರ ಹೇಗೆ ಪಡೆಯಬೇಕು ಅನ್ನೋದು ಮುಖ್ಯವೇ ಹೊರತು ಪ್ರಚಾರಕ್ಕಾಗಿ ಏನು ಮಾಡಿದ್ದೇವೆ ಅನ್ನೋದಲ್ಲ. ಮತ ಪ್ರಚಾರದ ಮುಸುಗಿನಲ್ಲಿ ಸಹಾಯ ಅನ್ನುವ ನಾಟಕ ನಡೆಯುತ್ತದೆ. ನೊಂದವರ, ಸಂಕಷ್ಟ ಪರಿಸ್ಥಿತಿಯಲ್ಲಿರುವವರ ಮನಸ್ಸು ಗೊಂದಲದಲ್ಲಿರುತ್ತದೆ. ಅವರನ್ನು ಬದಲಾಯಿಸುವುದು ಬಹು ಸುಲಭ. ಹಾಗಾಗಿಯೇ ಪ್ರವಾಹ ಪೀಡಿತರ, ರೋಗಿಗಳ, ಬಡವರ ಸೇವೆಯ ಹೆಸರಿನಲ್ಲಿ ಸೇವೆಯೆಂಬ ವ್ಯಾಪಾರ ನಡೆಯುತ್ತದೆ. ಅದಕ್ಕಾಗಿ ಹಣವೂ ಹರಿದುಬರುತ್ತದೆ. ಅಲ್ಲಿದ್ದು ಇದನ್ನು ಒಪ್ಪಿಕೊಳ್ಳಲಾಗದೆ, ಬಿಟ್ಟೂ ಹೋಗಲಾಗದೆ ಸತ್ಯವನ್ನು ಕಂಡುಕೊಳ್ಳಲು ರೋಣ ಮಾಡುವ ಹೋರಾಟ ಸೇವೆಯ ಇನ್ನೊಂದು ಕರಾಳ ಮುಖವನ್ನು ಪರಿಚಯಿಸುತ್ತಾ ಸಂತ ಎಂಬ ಹಣೆಪಟ್ಟಿಯ ಹಿಂದಿನ ಭಯಾನಕ ಸತ್ಯವನ್ನು ಬಿಚ್ಚಿಡುತ್ತಾ ಹೋಗುತ್ತದೆ.

ಸಂಕಷ್ಟದ ಸಮಯದಲ್ಲಿ ಪ್ರಾರ್ಥನೆಗಿಂತಲೂ ಮುಖ್ಯವಾಗಿ ಬೇಕಾಗುವುದು ಸಹಾಯ. ಆದರೆ ಎಲ್ಲವೂ ಅವನಿಗೆ ತಿಳಿದಿದೆ ಅವನನ್ನು ಪ್ರಾರ್ಥಿಸೋಣ ಎನ್ನುವುದು ಪಲಾಯನವಾದ. ಪ್ರಯತ್ನದ ಜೊತೆ ಜೊತೆಗೆ ಪ್ರಾರ್ಥನೆಗೆ ಅದ್ಭುತ ಶಕ್ತಿ ಇದೆ. ಪ್ರಾರ್ಥಿಸುವುದಷ್ಟೇ ನಮ್ಮ ಕೆಲಸ ಎನ್ನುವ ಮದರ್  ಮಾತು ಬೆನ್ನುಹುರಿಯಲ್ಲಿ ಸಣ್ಣನೆಯ ನಡುಕ ಹುಟ್ಟಿಸುತ್ತದೆ. ತಣ್ಣನೆಯ ಕ್ರೌರ್ಯ ಅನ್ನುವ ಪದದ ಅರ್ಥ ಮಾಡಿಸುತ್ತದೆ.

ಪಡೆದುಕೊಳ್ಳುವುದು ಸುಲಭ, ಕಳೆದುಕೊಳ್ಳುವುದು ಉಹೂ ಅಲ್ಲಿ ಮನಸ್ಸು ಮಾಗಬೇಕು. ಅದರಲ್ಲೂ ಪ್ರಸಿದ್ಧಿಯ ಹೆಸರು ಕಳೆದುಕೊಳ್ಳುವುದು ಸಾಧ್ಯವೇ ಇಲ್ಲ. ಇಲ್ಲೂ ನಿಯಂತ್ರಿಸುವ ಕಾಣದ ಕೈಗಳಿವೆ. ಹುಲ್ಲು ಕೊಟ್ಟು ಹಾಲು ಪಡೆದುಕೊಳ್ಳುವ ಲೆಕ್ಕಾಚಾರವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮುಗ್ಧ ಮನಸ್ಸುಗಳನ್ನು ಬಳಸಿಕೊಂಡು ಮೇಲೇರುವ ಚಾಣಾಕ್ಷತೆ ಇದೆ. ನಿಜವಾದ ಸೇವೆಯಲ್ಲಿ ಇವೆಲ್ಲವೂ ಇವೆಯಾ... ಅಲ್ಲಿ ಅವಮಾನಗಳಿವೆ, ಸಂಕಷ್ಟಗಳಿವೆ. ಲಾಭವಿಲ್ಲದ ಯಾವುದರಲ್ಲೂ ವ್ಯಾಪಾರ ಜರುಗುವುದಿಲ್ಲ. ವ್ಯಾಪಾರವಿಲ್ಲದೆಡೆ ಹಣ ಹರಿಯುವುದಿಲ್ಲ. ಹೆಸರು ಇಣುಕಿಯೂ ನೋಡುವುದಿಲ್ಲ. ಇವೆಲ್ಲವನ್ನೂ ಮೀರಿ ಸೇವೆ ಮಾಡಲು  ಬದುಕಿನ ಸ್ತರ ಇನ್ನೊಂದು ಮಟ್ಟಕ್ಕೆ ಏರಬೇಕು. ಹಾಗೆ ಏರುವ, ಮಾಗುವ ಪ್ರಕ್ರಿಯೆಯೇ ಅನ್ವೇಷಣೆಯಾ....  ಆ ದಾರಿ ಕ್ಲಿಷ್ಟಕರವೆಂದೇ ಇನ್ಯಾವುದೋ ಅಡ್ಡದಾರಿ ಹಿಡಿಯುತ್ತೆವಾ... ಭ್ರಮೆಗಳು ಕೊಡುವ ಕ್ಷಣಿಕ ನೆಮ್ಮದಿಗೆ ಬಲಿಯಾಗುತ್ತೆವಾ... ಭ್ರಮೆ ನಿವಾರಿಸುವುದಕ್ಕಿಂತ ಭ್ರಮೆ ಹುಟ್ಟಿಸುವುದೇ ಸುಲಭವೆಂದು ಅದರಲ್ಲೇ ಹೋಗುತ್ತೇವಾ..  ಹಾಗೆ ಹೋಗುತ್ತಾ ಹೋಗುತ್ತಾ ಅದನ್ನೇ ನಿಜವೆಂದು ನಂಬಿ ಬಿಡುತ್ತೇವಾ.. ಹಾಗೆ ನಂಬಿಸಲೆಂದೇ ಸಂಸ್ಥೆಗಳ ಹೆಸರಿನಲ್ಲಿ ಸೇವೆಯ ಮುಖವಾಡ ಧರಿಸಿಬಿಡುತ್ತೇವಾ...

ಧರ್ಮ ಅನ್ನೋದು ಜಗತ್ತಿನ ಎಲ್ಲಾ ಅಮಲಿಗಿಂತ ಹೆಚ್ಚು ಭಯಂಕರವಾದ ಅಮಲು. ಇದರ ಬಲೆಗೆ ಬಿದ್ದವರು ಸುಲಭವಾಗಿ ಅದರಿಂದ ಬಿಡಿಸಿಕೊಂಡು ಬರಲಾರರು. ಇದರ ಸೆಳೆಯುವ ಶಕ್ತಿ ಅಯಸ್ಕಾಂತಕ್ಕಿಂತಲೂ ಜಾಸ್ತಿ. ಮನುಷ್ಯ ಎಷ್ಟೇ ಆಧುನಿಕತೆ, ವೈಜ್ಞಾನಿಕತೆ ಎಂದರೂ ಪಾಪ ಪುಣ್ಯಗಳ ಭಯದಿಂದ ಹೊರಬಂದಿಲ್ಲ. ಈ ದೌರ್ಬಲ್ಯನ್ನೇ ಶಕ್ತಿಯನ್ನಾಗಿಸಿಕೊಂಡೆ ಮತಾಂತರವನ್ನು ಮಾಡಲು ಮಿಷನರಿಗಳು ಕೆಲಸ ನಿರ್ವಹಿಸುತ್ತವೆ. ಬಡತನ ಇನ್ನೊಂದು ಶಕ್ತಿ. ಹಸಿವನ್ನು ತಣಿಸಲು ಮತಾಂತರ ಶಕ್ತಿಶಾಲಿ ಆಯುಧವಾಗಿ ಉಪಯೋಗಿಸಲ್ಪಡುತ್ತದೆ. ಆಗೆಲ್ಲಾ ಒಂದು ಇಂಗ್ಲಿಷ್ ಗಾದೇ ನೆನಪಾಗುತ್ತದೆ.

ಮೀನು ಹಿಡಿಯಲು ಕಲಿಸಿ ಅವನ ಹಸಿವನ್ನು ಅವನೇ ತಣಿಸಿಕೊಳ್ಳುತ್ತಾನೆ ಅನ್ನೋ ಅರ್ಥದ ಗಾದೇ ಅದು. ಹಸಿದವನಿಗೆ ಆಹಾರ ಕೊಡುವುದು ಸೇವೆಯೇ ಹೊರತು ಆಹಾರ ಗಳಿಸುವುದನ್ನ ಹೇಳಿಕೊಡುವುದಲ್ಲ ಎನ್ನುವ ನಿರ್ಧಾರಕ್ಕೆ ನಾವು ಬಂದಿದ್ದೇವೆ. ಒಮ್ಮೆ ಗಳಿಸಿಕೊಳ್ಳಲು ಕಲಿಸಿದ ದಿನ ನಾವು ಅಪ್ರಸ್ತುತರಾಗುತ್ತೇವೆ. ಹಾಗೆ ಅಪ್ರಸ್ತುತರಾಗಲು ನಮ್ಮ ಅಹಂ ಒಪ್ಪುವುದಿಲ್ಲ. ನಮ್ಮ ಸಿದ್ಧಾಂತ ಅವಕಾಶಕೊಡುವುದಿಲ್ಲ. ಹಣ ಹರಿದುಬರುವುದಿಲ್ಲ. ಹಾಗಾಗಿ ಅವರು ಹಸಿವಿನಿಂದ ನಾವು ಕೊಡುವ ಆಹಾರಕ್ಕಾಗಿ ಕಾಯುವಷ್ಟು ಹೊತ್ತು ನಮ್ಮ ಅಸ್ತಿತ್ವ, ನಮ್ಮ ಹೆಸರು, ನಮ್ಮ ಪ್ರತಿಷ್ಠೆ. ಹಾಗಾಗಿ ಅದನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳೂ ನಡೆಯುತ್ತವೆ. ಅದಕ್ಕೆ ಎದುರು ಹೋಗುವುದು ಎಂದರೆ ಪ್ರವಾಹಕ್ಕೆ ಎದುರಾಗಿ ಈಜಿದಂತೆ.  ಅಡ್ಡಬಂದವರನ್ನು ನಿವಾರಿಸಿಕೊಳ್ಳುವ ಶಕ್ತಿಯನ್ನೂ ಬೆಳೆಸಿಕೊಂಡಿರುತ್ತಾರೆ. ಬೆಳಕಿಗೆ ಕಾಣುವ ಒಂದು ಮುಖ ಝಗಮಗಿಸುತ್ತಿದ್ದರೆ ಆಕಡೆಯ ಮುಖ ಕತ್ತಲಿನ ಕರಾಳಕೂಪದಲ್ಲಿ ಅಡಗಿ ಮರೆಯಾಗಿರುತ್ತದೆ.

ವರ್ಗಭೇಧ, ವರ್ಣಬೇಧ ಯಾರನ್ನೂ ಬಿಟ್ಟಿಲ್ಲ. ನನ್ ಗಳ ನಡುವೆಯೂ ನಡೆಯುವ ಈ ಭೇಧ, ಅವರನ್ನು ಶೋಷಿಸುವ ರೀತಿ, ಅಲ್ಲಿಯ ಲೈಂಗಿಕ ಹಗರಣಗಳು ಯಾವವೂ ಸುದ್ದಿಯಾಗಲು ಬಿಡದಂತೆ ಅವರು ಗೌಪ್ಯತೆ ಕಾಪಾಡಿಕೊಳ್ಳುವ ರೀತಿ, ಅಸಹಜ ಬದುಕು, ಎದುರಿಸುವ ತಲ್ಲಣಗಳು, ಭಾವನೆಗಳ ತೊಳಲಾಟ,  ಮಾನವೀಯತೆಯನ್ನು ಮೀರಿದ ಕರ್ತವ್ಯ ಪ್ರಜ್ಞೆ, ಎಷ್ಟೇ ವಿದ್ಯಾವಂತರಾದರೂ ಧರ್ಮಗ್ರಂಥವನ್ನು ಅನುಸರಿಸುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಗರ್ಭಪಾತಕ್ಕೆ ಕ್ರಿಸ್ತ ಒಪ್ಪಿಗೆ ಕೊಡುವುದಿಲ್ಲ ಎನ್ನುವ ಒಂದೇ ಕಾರಣದಿಂದ ನಾವು ಕೊಡುವುದು ಪ್ರೀತಿ ಅಷ್ಟೇ ಚಿಕಿತ್ಸೆ ಅಲ್ಲ ಎನ್ನುವ ಸಂತ ಪದವಿ ಪಡೆದ ಮದರ್ ಒಬ್ಬರ ಮಾತು ಅಲ್ಲಿಯ ಮೂಲತತ್ವವನ್ನು ಬಿಚ್ಚಿಡುತ್ತದೆ. ಬೆಚ್ಚಿ ಬೀಳಿಸುತ್ತದೆ.

ಮತಾಂತರ ಪ್ರಕ್ರಿಯೆ, ಅದಕ್ಕೆ ಒಳಗಾದವರು ತಮ್ಮ ಹಳೆಯ ಆಚರಣೆ ಬಿಡಲಾಗದೆ, ನಿಯಮ ಮೀರಲಾಗದೆ ತೊಳಲಾಡುವ ಬಗೆ, ನಡೆಯುವ ತಪ್ಪುಗಳನ್ನು ನೋಡುತ್ತಾ,  ತಪ್ಪುಗಳೇ ಇಲ್ಲ ಎನ್ನೋದು ಭ್ರಮೆ, ಕೊನೆಯ ಪಕ್ಷ ನಮ್ಮನ್ನು ನಾವು ನೀತಿವಂತರಾಗಿಟ್ಟು ಕೊಳ್ಳಲು ಕಲಿಯಬೇಕು ಎನ್ನುವ ರೋಣಳ ಮಾತು ಎಲ್ಲರಿಗೂ ಅನ್ವಯವಾಗುವಂತಹ ಮಾತು.
ಮೂಲತಃ  ಮನುಷ್ಯನೂ ಪ್ರಾಣಿಯೇ. ಆದರೆ ಜಗತ್ತಿನ ಯಾವ ಜೀವಿಗೂ ಇರದ ವಿವೇಚನಾ ಗುಣ ಮನುಷ್ಯನಿಗಿದೆ. ಇದರಿಂದ ಅವನು ಮೇಲಕ್ಕೇರಬಲ್ಲ.  ಸಾಧನೆಗೆ ಲಿಂಗಭೇಧವಿಲ್ಲ, ಹಾಗೆ ಅಸಹಜತೆಗೂ, ಕ್ರೌರ್ಯಕ್ಕೂ.. ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ, ಅದೇ ಮನುಷ್ಯನೇ ಹುಲಿಯನ್ನು ಕೊಂದರೆ ಶೌರ್ಯ. ಇಲ್ಲಿ ಎಲ್ಲವೂ ತನ್ನ ಲಾಭ, ನಷ್ಟ ಸುಖದ ಮೇಲೆಯೇ ಲೆಕ್ಕಾಚಾರ ತೀರ್ಪು. ಅದನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಎಲ್ಲಾ ಪ್ರಯತ್ನ.

ಸೇವೆಯ ಹೆಸರಿನ ಮಾಫಿಯಾ, ಅಲ್ಲಿನ ಸತ್ಯವನ್ನು ಬಯಲು ಮಾಡಲು ಯತ್ನಿಸುವವರ ಮೌನವಾಗಿಸುವ ಹುನ್ನಾರ, ನಡೆಯುವ ವ್ಯಾಪಾರ, ಹರಿಯುವ ಹಣದ ಪ್ರವಾಹ,  ಜರುಗುವ ಸಂಘರ್ಷ, ವಯಸ್ಸಾದಂತೆ ಕಾಡುವ ಅಭದ್ರತೆ, ಅದು ತಂದು ಒಡ್ಡುವ ಅಸಹಾಯಕತೆ, ಕಾಮನೆಗಳ ಅದುಮಿಟ್ಟುಕೊಳ್ಳಲಾಗದೆ ಅಸಹಜ ರೀತಿಯಲ್ಲಿ ವ್ಯಕ್ತವಾಗುವ ರೀತಿ, ವಯಸ್ಸಾಗುತ್ತಾ ಬಂದ ಹಾಗೆ ಕಾಡುವ ಅಭದ್ರತೆ, ಅದಕ್ಕಾಗಿ ತಪ್ಪೆಂದು  ಗೊತ್ತಿದ್ದರೂ ಮೀರಲಾಗದ ಅಸಹಾಯಕತೆ,  ಎರಿಕ್ ಬರ್ಗ್ ಮಾಡುವ ಬದುಕಿನ ವಿಶ್ಲೇಷಣೆ ಎಲ್ಲವೂ ಇಲ್ಲಿದೆ. ಸಹಜವಾಗಿ ಭಾವ ವಿಕಾರವಿಲ್ಲದೆ ಹೇಳುತ್ತಾ ಹೋಗಿದ್ದಾರೆ ಕರಣಂ. ನಮ್ಮ ಅರಿವಿಗೆ ದಕ್ಕಿದಷ್ಟು ನಾವು ಪಡೆದುಕೊಳ್ಳಬೇಕು ಅಷ್ಟೇ.

ಪ್ರತಿಯೊಬ್ಬರೂ ಬದುಕು ಬೇರೆ ಬೇರೆಯಾದಂತೆ ಅನ್ವೇಷಣೆಯ ಮಾರ್ಗವೂ ಬೇರೆ ಬೇರೆ. ಹಾಗೆ ಮಾರ್ಗ ಬೇರೆ ಬೇರೆಯಾಗುವುದಕ್ಕೆ ಸತ್ಯವೂ ಬೇರೆ ಬೇರೆ ಅನ್ನಿಸುತ್ತದಾ.. ಹಾಗಾಗ ಬೇಕಾದರೆ ನಮ್ಮ ಹಮ್ಮು ಬಿಮ್ಮುಗಳನ್ನೂ ಕಳೆದುಕೊಳ್ಳಬೇಕಾ... ಹಾಗೆ ಕಳೆದುಕೊಳ್ಳುವ ಪ್ರಕ್ರಿಯೆಗೆ ನಾವು ಸಿದ್ಧರಾಗಿದ್ದೆವಾ.. ಯಾವ ಭಾವ ವಿಕಾರವೂ ಇಲ್ಲದೆ ಕಳಚಿಕೊಳ್ಳಲು ತಯಾರಾಗಿದ್ದೆವಾ...  ನಿನ್ನ ಕರ್ತವ್ಯವನ್ನು ಮಾಡು ಫಲಾಫಲಗಳನ್ನೂ ನನಗೆ ಬಿಡು ಎನ್ನುವ ವಾಕ್ಯವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸ್ಥಿತಿಗೆ ಏರಬಲ್ಲೆವಾ.. ಹಾಗೆ ಏರುವ ಕಸುವು ಗಳಿಸಿಕೊಂಡಿದ್ದೆವಾ..  ಇದ್ಯಾವುದೂ ಬರದೇ ಸತ್ಯದ ದಾರಿ ಕಾಣಿಸುವುದಿಲ್ಲವಾ..  ಒಮ್ಮೆ ಅರಿವಾದ ಮೇಲೆ ಮಾತ್ರ ಸತ್ಯ ಒಂದೇ ಹಾಗೂ ಅಂತಿಮವೆನ್ನಿಸುತ್ತದಾ...

ಒಮ್ಮೆ ನನ್ನಿಯನ್ನು ಓದಬೇಕು... ಸಣ್ಣ ಕಿಡಿಯೊಂದು ಹುಟ್ಟಬಹುದು..


Comments

  1. ತುಂಬಾ ಅರ್ಥಪೂರ್ಣ ಕಾದಂಬರಿ ನನ್ನಿ....
    ರೋಣ ಎಂಬ ಹೆಣ್ಣಿನ ಪಾತ್ರದ ಮೂಲಕ...ಹೆಣ್ಣಿನ ಮನಸ್ಸಿನ ತುಮಲಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.. ಕರನಮ್ ಪ್ರಸಾದ್.

    ಅವರ ಬರಹ ದ ರೀತಿಯಲ್ಲಿಯೇ ನೀವು ವೈಚಾರಿಕತೆ ಯಿಂದ ಬರೆದಿರುವ ನಿಮ್ಮ ಅನುಭದದಿಂದ ಕೂಡಿರುವ ಬರವಣಿಗೆಯ ಸತ್ಯ...ಚಿಂತನೆ ಹುಟ್ಟಿಸುತ್ತೆ🙏🙏

    ReplyDelete

Post a Comment

Popular posts from this blog

ಮಾತಂಗ ಪರ್ವತ

ಮೃಗವಧೆ