ಪೆಟ್ಲು ಕಾಯಿ



ಶ್ರಾವಣ ಅಂದ್ರೆ ಸಂಭ್ರಮ. ಒಂದೇ ಸಮನೆ ಶ್ರುತಿ ಹಿಡಿದು ಸುರಿಯುತ್ತಿದ್ದ ಮಳೆಯೂ ಸ್ವಲ್ಪ ವಿರಾಮ ತೆಗೆದುಕೊಂಡ ಹಾಗೆ ಅನ್ನಿಸೋ ಕಾಲ. ಅದಕ್ಕಿಂತ ಹೆಚ್ಚು ಸಾಲು ಸಾಲು ವ್ರತಗಳು, ಹಬ್ಬಗಳು. ವ್ಯವಸಾಯದ ಬಹಳಷ್ಟು ಕೆಲಸಗಳು ಮುಗಿದು ದೇಹಕ್ಕೆ ವಿರಾಮದ ಸಮಯ. ಮನಸ್ಸಿಗೆ ಸಂಭ್ರಮ ಸಡಗರ ತುಂಬುವ ಸಮಯ.
ರಜೆಗಳ ಸಾಲು ಖುಷಿ ಕೊಟ್ಟರೂ ಆಗ ನಮಗೆ ಹೆಚ್ಚು ಸಂಭ್ರಮ ಕೊಡುತ್ತಿದ್ದ ಸಂಗತಿಯೆಂದರೆ ದಾರಿಯ ಇಕ್ಕೆಲಗಳಲ್ಲಿ, ಕಾಡಿನ ಒಡಲಲ್ಲಿ ಬಿಟ್ಟಿರುತ್ತಿದ್ದ ಪೆಟ್ಲುಕಾಯಿ ಹಾಗೂ ಅದರ  ಘಮ. ಆ ಘಮ ಗಾಳಿಗೂ ಹುಚ್ಚು. ಹಾಗಾಗಿ ಅದನ್ನು ನೇವರಿಸಿ ಅದರ ಘಮವನ್ನು ತನ್ನ ಮೈಗೆ ಪೂಸಿಕೊಳ್ಳುತಿತ್ತು. ಅದು ಸುಳಿದ ಕಡೆ ಮೂಗು ಅರಳುತಿತ್ತು. ಚಿಕ್ಕ ಚಿಕ್ಕ ಕಾಯಿಗಳನ್ನು ಒಡಲ ತುಂಬಾ ತುಂಬಿಕೊಂಡು ತುಂಬು ಗರ್ಭಿಣಿಯಂತೆ ಕಾಣುತಿದ್ದ ಅರಳುಮರಳು ಅನ್ನೋ ಹೆಸರಿನ ಗಿಡ ನಮಗೆ ಮರುಳು ಹಿಡಿಸುತ್ತಿದ್ದದಂತೂ ನಿಜ.
ಹೀಗೆ ಬಿಟ್ಟ ಕಾಯಿಗಳನ್ನು ತಂದು ಪೆಟ್ಲು ಹೊಡೆಯುವ ಆಸೆ ನಮ್ಮದಾದರೆ  ಎಳೆಯ ಕಾಯಿಗಳನ್ನು ಕೊಯ್ದು ತಂದು  ಹೇರಳವಾಗಿ ಬಿಟ್ಟಿರುತ್ತಿದ್ದ ನಿಂಬೆಯ ಜೊತೆ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಿತ್ತಿಲಲ್ಲಿ ಬೆಳೆದ ಮಾವಿನ ಶುಂಟಿ ಕಿತ್ತು ತಂದು ಸಣ್ಣಗೆ ಹೆಚ್ಚಿ ಎಲ್ಲವನ್ನೂ ಸೇರಿಸಿ ಉಪ್ಪಿನಕಾಯಿ ತಯಾರಿಸುವ ಸಡಗರ. ಬಾಳೆಎಲೆಯ ಮೇಲೆ ಬಿಸಿ ಅನ್ನ ಹಾಕಿಕೊಂಡು ಕಡೆದ ಮಜ್ಜಿಗೆಯನ್ನೋ, ಗಟ್ಟಿ ಮೊಸರನ್ನೋ ಕಲೆಸಿಕೊಂಡು ಎಲೆಯ ತುದಿಗೆ ಹಾಕಿದ ಈ ಉಪ್ಪಿನಕಾಯಿ ನೆಂಚಿಕೊಂಡು ತಿಂದರೆ ಹೊಟ್ಟೆ ತುಂಬಿದ್ದು ಗೊತ್ತಾಗುತ್ತಲೇ ಇರಲಿಲ್ಲ. ತಿಂದ ಎಷ್ಟೋ ಹೊತ್ತಿನ ತನಕ ಕೈಯಲ್ಲಿ ಆ ಘಮ ಉಳಿದಿರುತ್ತಿತ್ತು. ರುಚಿ ನಾಲಿಗೆಯ ತುದಿಯಲ್ಲಿ ಮಲಗಿರುತಿತ್ತು.
ನಮಗೋ ಮನೆಯವರನ್ನೋ, ದನಕಾಯಲು ಬರುತ್ತಿದ್ದ ಚಿನ್ನನಾಯ್ಕ್ನನನ್ನೋ ಪೂಸಿ ಹೊಡೆದು, ಕಾಡಿ ಬೇಡಿ ಪೆಟ್ಲು ಮಾಡಿಸಿಕೊಳ್ಳುವ ತವಕ. ಅವರು ಮರೆತಷ್ಟೂ ನಾವು ಬೆಂಬಿಡದ ಬೇತಾಳ. ನಮ್ಮ ಕಾಟಕ್ಕೆ ಬೇಸತ್ತು ಹದವಾದ ಬಿದಿರನ್ನು ಹುಡುಕಿ ಸೊಂಟಕ್ಕೆ ನೇತು ಹಾಕಿಕೊಂಡ ಕತ್ತಿಯಲ್ಲಿ ಕೆತ್ತಿ  ಅದಕ್ಕೊಂದು ಸುಂದರ ರೂಪ ಕೊಟ್ಟು ತಂದು ಭಾರದ ಬೇತಾಳವನ್ನು ಇಳಿಸಿ ನಿಟ್ಟುಸಿರು ಬಿಟ್ಟು ನಿರಾಳವಾಗುತ್ತಿದ್ದರು. ನಾವು ಕಾಯಿ ಕೊಯ್ಯಲು ಗಿಡವನ್ನು ಅರಸಿಕೊಂಡು ಹೋಗುತ್ತಿದ್ದೆವು.
ಹೀಗೆ ತಯಾರಾದ ಪೆಟ್ಲು ಒಂದು ಸ್ಕೂಲ್ ಬ್ಯಾಗ್ ಅಲ್ಲಿ ಇನ್ನೊಂದು ಮನೆಯಲ್ಲಿ ಪ್ರತಿಷ್ಟಾಪನೆಯಾಗುತ್ತಿತ್ತು. ಅಜ್ಜಿ ಹುಡುಕಿ ಹುಡುಕಿ ಆರಸಿ ತಂದ ಪೆಟ್ಲು ಕಾಯಿ ಕದ್ದೂ ಸಹಸ್ರನಾಮಾರ್ಚನೆ, ಕೆಲವೊಮ್ಮೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಕಾರ್ಯಕ್ರಮವೂ ಸಾಂಗವಾಗಿ ನೆರವೇರಿದರೂ ಪೆಟ್ಲು ಕೋಲು ಹಿಡಿದು ಡಂ ಅನ್ನಿಸುವ ಭರದಲ್ಲಿ ಎಲ್ಲವೂ ಮರೆತು ಹೋಗುತ್ತಿತ್ತು. ಎಲ್ಲಾ ಗಿಡಗಳು ಕಾಯಿಗಳೂ ಒಂದೇ ತರಹ ಕಂಡರೂ ಅದರಲ್ಲೂ ರುಚಿ, ಹದ, ಬಾಳಿಕೆ ಎಲ್ಲವೂ ಬೇರೆ ಬೇರೆ. ಅದನ್ನು ಅನುಭವದ ಕಣ್ಣಲ್ಲಿ ಗುರುತಿಸುವ ಚಾಕಚಕ್ಯತೆ ಅಜ್ಜಿಗಿತ್ತು. ಚೂರು ವ್ಯತ್ಯಾಸವಾದರೂ ಹದ ತಪ್ಪುತ್ತದೆ. ಉಪ್ಪಿನಕಾಯಿ ಹಾಳಾಗುತ್ತದೆ.   ಹಾಗಾಗಿ ಅದನ್ನು ತಪ್ಪಿಸುವ ನಮ್ಮ ಮೇಲೆ ಅಜ್ಜಿಯ ಹದ್ದಿನ ಕಣ್ಣು ಯಾವಾಗಲೂ ಎಚ್ಚರವಾಗಿರುತ್ತಿತ್ತು. ಇದ್ಯಾವುದೂ ಅರ್ಥವಾಗದ ನಮಗೆ ಎಲ್ಲಾ ಪೆಟ್ಲು ಕಾಯಿಯೂ ಒಂದೇ ಆದರೂ ಇತ್ತ ಚಿಗುರೂ ಅಲ್ಲದ ಅತ್ತ ತುಂಬಾ ಬೆಳೆಯದ ಕಾಯಿಯ ಮೇಲೆಯೇ ಕಣ್ಣು.
ಕಾಯಿ ಕೊಯ್ಯೋದು ಒಂದು ಹದವಾದರೆ ಪೆಟ್ಲುವಿನ ಬಾಯಿಗೆ ಹೊಂದಿಕೆ ಆಗುವ ಕಾಯಿ ಆರಿಸೋದು ಇನ್ನೊಂದು ದೊಡ್ಡ ಕೆಲಸ. ತೀರಾ ಚಿಕ್ಕದಾದರೆ ಒಳಗೆ ಬಿದ್ದುಹೋಗಿ ಸರಾಗವಾಗಿ ಹೊರಗೆ ಬಂದು ಬಿಡುತ್ತದೆ. ತೀರಾ ದೊಡ್ಡದು ಹಿಡಿಯುವುದಿಲ್ಲ. ಜಾಸ್ತಿ ಬಲವಂತ ಮಾಡಿದರೆ ಒಡೆದು ಹೋಗುತ್ತದೆ ಹೊರತು ಸದ್ದು ಬರುವುದಿಲ್ಲ. ಸರಿಯಾದ ಅಳತೆಯ ಕಾಯಿ ಬೇಕು. ಬದುಕಿಗೆ ಸರಿಯಾದ ಜೊತೆಗಾರರು ಬೇಕು. ಹೊಡೆದಾಗ ಸದ್ದು ಜೋರಾಗಿ ಬರಬೇಕು. ಸದ್ದೇ ಬರದ ಪೆಟ್ಲು ಏನು ಪ್ರಯೋಜನ . ಇದ್ದೂ ಇಲ್ಲದಂತಿರುವ ಮನುಷ್ಯರಿಂದೆನು ಉಪಯೋಗ?  ಅಲ್ಲೂ ಅಘೋಷಿತ ಸ್ಪರ್ಧೆ ಇರುತಿತ್ತು. ಕೆಲವೊಮ್ಮೆ ಕಾಯಿಗಾಗಿ ಹೊಡೆದಾಟ, ದೈನ್ಯ, ಕೋಪ, ಬೇಡಿಕೆ, ರಾಜಿ, ಶಾಂತಿ ಸಂಧಾನ ಹೀಗೆ ನವರಸಗಳ ಪ್ರದರ್ಶನವೂ ಜರಗುತಿತ್ತು. 
ಪುಸ್ತಕಗಳಿಗಿಂತ ಬೇರೆಯದೇ ವಸ್ತುಗಳ ಮ್ಯೂಸಿಯಂ ಆಗಿರುತ್ತಿದ್ದ ಬ್ಯಾಗ್ ಅಲ್ಲಿ ಬೆಚ್ಚಗೆ ಜಾಗ ಪಡೆದಿರುತ್ತಿದ್ದ ಪೆಟ್ಲು ನ್ನು   ದಾರಿಯುದ್ದಕ್ಕೂ ಹೊಡೆಯುತ್ತಾ ಸದ್ದು ಮಾಡುತ್ತಾ ಹೋಗುತ್ತಿದ್ದರೆ ಗಡಿಯಾರದ ಮುಳ್ಳಿಗೂ ಯಮವೇಗ. ದಾರಿಗೂ ಬೇಗ ನಿಲ್ದಾಣ ತಲುಪುವ ಆತುರ.ಯಾವುದೋ ಧ್ಯಾನದಲ್ಲಿ ಹೋಗುವವರ ಬೆನ್ನಿಗೆ ಗುರಿಯಿಟ್ಟು ಹೊಡೆದು ಅವರು ಬೆಚ್ಚಿ ಬೀಳುವ ಹಾಗೆ ಮಾಡುವುದೂ ಒಂದು ಆಟ. ಎಷ್ಟಾದರೂ ಹಿಂದಿನಿಂದ ಹೊಡೆಯೋದು ಸುಲಭ ತಾನೇ.. ಕಂಗಾಲಾಗುವುದು ಹಿಂದಿನಿಂದ ಪೆಟ್ಟು ಬಿದ್ದಾಗಲೇ ಅಲ್ಲವೇ.
ಕೃಷ್ಣನಿಗೆ ಪ್ರಿಯವಾದ ಆಟವೆಂದು ಹಿರಿಯರೂ ಗದರಿಸುತ್ತಿರಲಿಲ್ಲ. ದನಕಾಯಲು ಹೋಗುವಾಗ ಕೃಷ್ಣ ತನ್ನ ಗೆಳೆಯರ ಜೊತೆಗೆ ಇದನ್ನು ಆಡುತ್ತಿದ್ದನಂತೆ. ಮೊದಲೇ ಗೊಲ್ಲ ಬಾಲ, ಪ್ರಕೃತಿಯೇ ಆಟದ ಸಾಮಾನು.  ಬುತ್ತಿಯನ್ನು ಹೆಗಲಿಗೆ ನೇತುಹಾಕಿಕೊಂಡು ಪೆಟ್ಲು ಹೊಡೆಯುತ್ತಾ ಗೆಳೆಯರೊಂದಿಗೆ ಆಡುತ್ತಾ ಬರುತಿದ್ದ ಕೃಷ್ಣನನ್ನು ನೋಡಿ ಆ ಬ್ರಹ್ಮನೂ ಅಸೂಯೆ ಪಡುತ್ತಿದ್ದಂತೆ. ಪ್ರಕೃತಿಯಲ್ಲಿ ದೊರಕುವ ಸಣ್ಣ ಪುಟ್ಟ ಸಂಗತಿಗಳನ್ನೂ  ಆಸ್ವಾದಿಸುವುದನ್ನು ಹೇಳಿಕೊಡಲೆಂದೇ ಕೃಷ್ಣ ಭೂಮಿಗೆ ಬಂದನಾ.... ಬಾಲ್ಯ ಹೇಗಿರಬೇಕು ಎಂದು ತಿಳಿಸಲೆಂದೇ ಹುಟ್ಟಿದನಾ... ಚಿಕ್ಕ ಚಿಕ್ಕ ಸಂಗತಿಗಳೂ, ಹೊಂದಿಕೊಂಡು ಆಡುವುದು ಎಷ್ಟು ಸುಂದರ ಎಂದು ಹೇಳಿಕೊಟ್ಟು ಮರೆಯಾದನಾ? ಉಡುಪಿಯಲ್ಲಿ ಜನ್ಮಾಷ್ಟಮಿಯ ದಿನದಲ್ಲಿ ಇದನ್ನು ಈಗಲೂಆಡುತ್ತಾರೆ ಎಂದು ಕೇಳಿದ ನೆನಪು.

ಬಿದಿರನ್ನು ನಾದವಾಗಿಸುವ ಶಕ್ತಿ ಉಸಿರಿಗೆ ಇಲ್ಲವಾದ ನಾವುಗಳು ಅದನ್ನು ಹೀಗೆ ಉಪಯೋಗಿಸಿ ನಾವೂ ಕೃಷ್ಣನ ಗೆಳೆಯರು ಎಂದು ಸಂತೋಷಿಸುತ್ತಿದ್ದ ಕಾಲವದು. ಅವನು ಆಡಿದ ಆಟಗಳಲ್ಲಿ ಕೆಲವನ್ನಾದರೂ ಆಡಿ ಅವನದೊಂದು ಭಾಗವಾಗಲು ಪ್ರಯತ್ನ ಪಡುತಿದ್ದ ಕ್ಷಣಗಳವು. ಕೊಳವೆಗೆ ಹಿಡಿಸುವ, ಜಾಸ್ತಿ ಶಬ್ದ ಮಾಡುವ ಪೆಟ್ಲು ಕಾಯಿ ಆರಿಸುವುದೂ ಅಷ್ಟು ಸುಲಭವಲ್ಲ. ಬಿದ್ದ ರಾಶಿಯಲ್ಲಿ ಅವುಗಳು ಹೆಚ್ಚು ಇರುತ್ತಲೂ ಇರಲಿಲ್ಲ.  ಯಾವುದು ಸೂಕ್ತವೋ ಅದನ್ನು ಮಾತ್ರ ಆರಿಸಿಕೋ ಅನ್ನೋದು ಪೆಟ್ಲು ಕಲಿಸುತಿತ್ತಾ ಗೊತ್ತಿಲ್ಲ. ಆರಿಸದೇ ಇದ್ದರೆ ಉಪಯೋಗವಿಲ್ಲ ಅನ್ನೋದು ಹೇಳುತಿತ್ತಾ... ಸಂಖ್ಯೆ ಮುಖ್ಯವಲ್ಲ ಜೊತೆಯಾಗುವುದು ಮುಖ್ಯ ಅನ್ನೋದು ಆ ರಾಶಿ ತಿಳಿಸುತಿತ್ತಾ..  ಆದರೆ ಆರಿಸುವುದನ್ನು ಮಾತ್ರ ಶ್ರದ್ಧೆಯಿಂದ ಮಾಡುತ್ತಿದ್ದದ್ದು ಸುಳ್ಳಲ್ಲ. ಏನೇ ಹೇಳಿ ಕಾಯಿ ಆರಿಸಿದಷ್ಟು ಸುಲಭವಲ್ಲ ಮನುಷ್ಯರನ್ನು ಗುರುತಿಸುವುದು.

ಕೊಯ್ದಷ್ಟು ಮತ್ತಷ್ಟು ಬಿಟ್ಟು ಪೆಟ್ಲು ಗಿಡ ನಮಗೆ ಸವಾಲು ಹಾಕುತಿತ್ತು. ನಾವೂ ಜಿದ್ದಿಗೆ ಬಿದ್ದಂತೆ ಗಿಡ ಖಾಲಿ ಆಗುವವರೆಗೂ ಪೆಟ್ಲು ಹೊಡೆಯುತ್ತಿದ್ದವು. ಅದೂ ಬಾಲ್ಯದ ಒಂದು ಮುಖ್ಯ ಆಟವಾಗಿತ್ತು. ಜೊತೆ ಸೇರಿ ನಲಿಯುವ ಸಮಯವಾಗಿತ್ತು. ಈಗ ಬಿದಿರಿನ ಬಹುತೇಕ ಜಾಗ ಅಕೇಶಿಯಾ ಆಕ್ರಮಿಸಿಕೊಂಡಿದೆ. ಪೆಟ್ಲು ಮಾಡಲು ಬರುತಿದ್ದ ಹಿರಿಯ ತಲೆಗಳು ತೆರೆಮರೆಗೆ ಹೋಗಿದ್ದಾರೆ. ಕಿರಿಯರಿಗೆ ಅದು ಮರೆತುಹೊಗುತ್ತಿದೆ. ಇದ್ದ ಬಿದಿರಿಗೂ ಕೊಳೆ ಬಂದಿದೆ. ಮಾಡಲು ಗೊತ್ತಿದ್ದವರು ಆಡುವವರು ಇಲ್ಲದೇ ಕೈ ಚೆಲ್ಲಿ ಕುಳಿತಿದ್ದಾರೆ. ಇಂದಿಗೂ ದಾರಿಯ ಬದಿಯಲ್ಲಿ ಪೆಟ್ಲು ಗಿಡ ಮೈತುಂಬಾ ಕಾಯಿ ಬಿಟ್ಟು ಪ್ರಸವಕ್ಕಾಗಿ ಕೊಯ್ಯುವ ಕೈ ಗಳಿಗೆ ಕಾಯುತ್ತಿದೆ. ಚಿಕ್ಕವರಿಗೆ ಸಮಯವಿಲ್ಲ. ಅಡುಗೆ ಮನೆಯಲ್ಲಿ ಅಂಗಡಿಯಿಂದ ತಂದ ಉಪ್ಪಿನಕಾಯಿ ಶಿಸ್ತಾಗಿ ಕೂತಿದೆ. ಚಿನ್ನ ನಾಯ್ಕ ಈಗ ಕೃಷ್ಣನಿಗೆ ಪೆಟ್ಲು ಮಾಡಿ ಕೊಡುತ್ತಿರಬಹುದಾ ಎಂದು ಆಕಾಶವನ್ನೇ ದಿಟ್ಟಿಸುತ್ತೇನೆ.

ಕಳೆದುಕೊಳ್ಳುವುದು ಎಷ್ಟು ಸುಲಭ ನೋಡಿ..... 

Comments

Popular posts from this blog

ಕೇಪಿನ ಡಬ್ಬಿ.

ಮೇಲುಸುಂಕ.