Posts

Showing posts from January, 2018

ವಿಷಮ ಭಿನ್ನರಾಶಿ

"ಅಪಸ್ವರ ಅನ್ನೋದು ಬರೀ ಸಂಗೀತದಲ್ಲಿಯಷ್ಟೇ ಇರಲ್ಲ, ಬದುಕಲ್ಲೂ ಇರುತ್ತೆ." ಇದೊಂದು ಕತೆಗಳ ಸಂಗ್ರಹ ಅನ್ನಿಸಲೇ ಇಲ್ಲಾ. ಎದುರಿಗೆ ಕೂತು ಆತ್ಮೀಯರೊಬ್ಬರು ಮಾತಾಡುತ್ತಿದ್ದಾರೆನೋ ಅನ್ನಿಸಿ ಗದ್ದಕ್ಕೆ ಕೈಕೊಟ್ಟು ಮೈಯೆಲ್ಲಾ ಕಿವಿಯಾಗಿ ಆಲಿಸುವ ಹಾಗಿನ ಭಾವವೊಂದು ಮೊದಲಿನಿಂದ ಕೊನೆಯವರೆಗೂ ಕಾಡಿತು. ಮಾತುಕತೆ ಎಂದರೆ ಕಡಲಿನಂತೆ. ಉಬ್ಬರ, ಇಳಿತ, ಭೋರ್ಗೆರೆತ, ಕಚಗುಳಿ, ನೇವರಿಕೆ, ಕಾಲಬೆರಳ ಸಂದಿನಿಂದ ಮರುಳು ಸರಿಯುವಂತೆ ಜಾರುವಿಕೆ, ತೊಯ್ಯುವಿಕೆ, ಅಂಟುವಿಕೆ. ಏನಿದೆ? ಏನಿಲ್ಲ? ಕಡಲನ್ನು ಅರಿತವರಾರು. ಹಾಗೆ ಮನಸ್ಸನ್ನು ತಿಳಿದವರಾರು.. ಹೇಳಿಕೊಳ್ಳುವುದು ಸುಲಭವಾ... ಉಹೂ ಅದರಷ್ಟು ಕಷ್ಟ ಇನ್ನೊಂದಿಲ್ಲ. ಯಾವುದನ್ನೂ ಮುಚ್ಚಿಡದೆ ನಿರ್ವಿಕಾರವಾಗಿ ಅಷ್ಟೇ ಸಹಜವಾಗಿ ಪ್ರಾಮಾಣಿಕವಾಗಿ ಹೇಳುವುದಕ್ಕೆ ಧೀ ಶಕ್ತಿ ಬೇಕು. ಯಾರು ಏನು ಅಂದು ಕೊಳ್ಳುತ್ತಾರೋ ಅನ್ನೋ ಅಂಜಿಕೆಯಲ್ಲಿ ಬಣ್ಣ ಹಚ್ಚುವುದನ್ನ ಬಿಟ್ಟು ಇದ್ದ ಹಾಗೆ ಹೇಳಬೇಕು. ಹಾಗೆ ಹೇಳುವಾಗ ದನಿಯಲ್ಲಿನ ಪ್ರಾಮಾಣಿಕತೆ ಎದುರಿನ ವ್ಯಕ್ತಿಯನ್ನು ತಾಗಬೇಕು. ಹಗುರಾಗಬೇಕೆ ವಿನಃ ಹೊಸತೊಂದು ಭಾರ ಕಟ್ಟಿ ಕೊಳ್ಳುವ ಹಾಗಿರಬಾರದು. ಅಪಸ್ವರ ಅರ್ಥವಾಗೋಕೆ ಸಂಗೀತ ಗೊತ್ತಿರಲೇ ಬೇಕು ಅಂತೇನಿಲ್ಲ, ಮಗ್ನವಾಗಿ ಕಿವಿಗೊಟ್ಟು ಆಲಿಸಿದರೆ ಸಾಕಾಗುತ್ತದೆ. ಬದುಕಿನ ಸಂಗೀತದಲ್ಲೂ ಹಾಗೆಯೇ..ಧ್ಯಾನಿಸಿದರೆ, ಒಂಚೂರು ಏಕಾಗ್ರವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಶ್ರುತಿ ತಪ್ಪದ ಬದುಕು ಉಂಟೇ.. ಎ
ಅಮ್ಮಾ ನಿಂಗೆ ನಂಗಿಂತ ಅವನಿ ಕಂಡ್ರೆ ಇಷ್ಟ, ನನ್ನ ದೂರ ಮಾಡ್ತಾ ಇದ್ದಿ ನೀನು ಅಂತ ಫೀಲ್ ಆಗುತ್ತೆ ಅಂತ ಅಹಿ ಕಣ್ಣಲ್ಲಿ, ಮೂಗಲ್ಲಿ ನೀರು ಸುರಿಸುತ್ತಾ ಮೂತಿ ಉದ್ದ ಮಾಡಿ ಹೇಳುತ್ತಿದ್ದರೆ ನಗು, ಸಂಕಟಗಳ ಸಮ್ಮಿಶ್ರ ಭಾವ. ಯಾಕೆ ನಿಂಗೆ ಹಾಗನ್ನಿಸ್ತು ಅಂದ್ರೆ ಗೊತ್ತಿಲ್ಲ ಅಮ್ಮಾ ಬೇಜಾರಾಯ್ತು ಅಂತ ಇನ್ನೂ ಜೋರಾಗಿ ಅಳುವವಳನ್ನು ತಬ್ಬಿಕೊಂಡೆ. ಆಲಾಪ ಮಂದ್ರದಿಂದ ಶುರುವಾಗಿ ಪ್ರಸ್ತಾರವನ್ನು ವಿಸ್ತರಿಸಿ ಹಾಗೆ ಹೋಗುತ್ತಾ ಹೋಗುತ್ತಾ ತಾರಕ್ಕಕ್ಕೆ ಮುಟ್ಟಿ ಅಲ್ಲಿಂದ ಮತ್ತೆ ನಿಧಾನವಾಗಿ ಇಳಿಯುತ್ತಾ ಸಹಜ ಸ್ವರಕ್ಕೆ ಬಂದು ಮುಟ್ಟಿತು. ಇಡೀ ವಾತಾವರಣದಲ್ಲಿ ಒಂದು ನಿಶಬ್ದ ಆವರಿಸುವವರೆಗೂ ತಲೆ ನೇವರಿಸುತ್ತಾ ಸುಮ್ಮನಿದ್ದು ಬಿಟ್ಟೆ. ಒಳಗಿನ ಭೋರ್ಗೆರೆತ ಮುಚ್ಚಿಡುತ್ತಾ... ಅಪ್ಪ ಕೈ ಬಿಡಿಸಿಕೊಂಡು ನಡೆದಾಗ ಆ ಆಲೋಚನೆಗಳನ್ನೆಲ್ಲಾ ಅವನ ಜೊತೆಗೆ ಕೊಂಡು ಹೋಗಿದ್ದಾನೇನೋ ಅನ್ನುವಂತೆ ಸುಮ್ಮನಾಗಿ ಬಿಟ್ಟಿದ್ದೆ. ಮನಸ್ಸಿನೊಳಗೆ ಇಂಥಹ ಆಲೋಚನೆ ಹುಟ್ಟದಂತೆ ಬಂಡೆಯೆಳೆದು ನಾನೂ ಕಲ್ಲೇ ಅಂತ ಭಾವಿಸಿದ್ದವಳಿಗೆ ಆ ಕಲ್ಲು ಸರಿಸಿ ಒರೆತೆ ಚಿಮ್ಮುವಹಾಗೆ ಮಾಡಿದ್ದು ಆಂಟಿ. ಅವರೊಬ್ಬರ ಜೊತೆಗೆ ಈ ವಿಷಯಕ್ಕೆ ಕೋಪ ಅಳು ಎಲ್ಲವನ್ನೂ ನಡೆಸಿದ್ದೆ. ಮತ್ತುಳಿದಂತೆ ಬಂಡೆ ಸ್ವಲ್ಪವೂ ಜರುಗಡೆ ಗಟ್ಟಿಯಾಗಿ ನಿಂತಿತ್ತು. ಅಹಿ ಈ ಪ್ರಶ್ನೆ ಎತ್ತುವವರೆಗೂ... ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಪ್ರಶ್ನೆಯಲ್ಲೇ, ಗೊಂದಲದಲ್ಲೇ ಇಲ್ಲಾ ಹೇಳಿಕೆಯಲ್ಲೇ ಉತ್ತರವಿರುತ್ತದೆ. ಆದ
ಕಾರಣವಿಲ್ಲದೆ ಕಾರ್ಯವಿಲ್ಲ.... ಸಂತಾನಭಾಗ್ಯಕ್ಕಾಗಿ ಹಂಬಲಿಸಿ ಅದಕ್ಕಾಗಿ ಪ್ರಯತ್ನ ಪಡುವ ಎರೆಯಂಗದೇವನಿಗೆ ಪುಷ್ಪಗಿರಿಯ ಮಠದ ಸ್ವಾಮಿಗಳು ದತ್ತಾತ್ರೇಯರ ಪೀಠಕ್ಕೆ ಹೋಗಿ ಸೇವೆ ಸಲ್ಲಿಸಿ ಬರಲು ಹೇಳುತ್ತಾರೆ.ಚಂದ್ರ ದ್ರೋಣ ಪರ್ವತದ ತಪ್ಪಲಿನಲ್ಲಿ ಇರುವ ಆ ಪೀಠಕ್ಕೆ ಎಲ್ಲರೂ ಉತ್ಸಾಹದಿಂದ ಹೊರಡುತ್ತಾರೆ. ಮಲೆನಾಡಿನ ದಾರಿಯನ್ನು ಎಂದೂ ಕಾಣದ ಬಯಲು ನಾಡಿನ  ಏಚಲೆ ಅಲ್ಲಿಯ ಹಾವಿನಂತೆ ಸುತ್ತಿ ಹರಿಯುವ ಮಣ್ಣಿನ ದಾರಿ, ಹೆಮ್ಮರಗಳ ಕಾಡು, ಕಾಡಿನಾಳದ ಸದ್ದು ಕೇಳಿ ಭೀತಿಗೊಳ್ಳುತ್ತಾಳೆ. ಅವಳನ್ನು ಇನ್ನಷ್ಟು ಕಾಡಿಸಲು ಎರೆಯಂಗ ದೇವ ನೋಡು ಗುರುಗಳು ಶಿಲಾರೂಪವಾಗಿಯಷ್ಟೇ ಅಲ್ಲಾ ವ್ಯಾಘ್ರರೂಪರಾಗಿಯೂ ವಾಸವಾಗಿದ್ದಾರೆ ಅನ್ನುವ ಮಾತು ಕೇಳಿ ಭೀತಿಯಲ್ಲಿ ನಡುಗುತ್ತಲೇ ಪೂಜೆಮುಗಿಸಿ ವಾಪಾಸಾಗುತ್ತಾರೆ. ಕೆಲವು ಮಾಸಗಳ ನಂತರ ಗರ್ಭ ಧರಿಸಿ ಬಲ್ಲಾಳನಿಗೆ ಜನ್ಮ ನೀಡುತ್ತಾಳೆ ಏಚಲೆ. ಅಪರೂಪದ ಸಂತಾನ ಅದೂ ಗಂಡು ಸಂತಾನ ಎಂದು ಖುಷಿ ಪಡುವ ಸಮಯದಲ್ಲೇ ಮಗು ವ್ಯಾಧಿಗೆ ತುತ್ತಾಗುತ್ತದೆ. ತೊಟ್ಟಿಲಲ್ಲಿ ಮಲಗಿದ್ದ ಮಗು ಇದ್ದಕ್ಕಿದ್ದ ಹಾಗೆ ಮೆಟ್ಟಿ ಬಿದ್ದು ಹೆದರಿ  ಚೀರುವುದು,  ಆ ಭಯಕ್ಕೆ ಚಳಿಜ್ವರ ಆರಂಭವಾಗುವುದು ಮಾಮುಲಾಗುತ್ತದೆ. ನೂರಾರು ಜನ ವೈದ್ಯರು ಬಂದು ಮದ್ದು ನೀಡಿದರೂ ಗುಣವಾಗದೇ ಎಲ್ಲರೂ ಕೈ ಚೆಲ್ಲುತ್ತಾರೆ. ಆಗ ಪುನ: ಸ್ವಾಮೀಜಿಗಳನ್ನ  ಕರೆಸುವ ರಾಜಮಾತೆ ಕಾಪಾಡುವಂತೆ ಬೊಗಸೆಯೊಡ್ದುತ್ತಾಳೆ. ಅವನನ್ನು ಮಡಿಲಲ್ಲಿ ಎತ್ತಿಕೊಂಡು ಧ್ಯಾನಿಸುವ ಸ್ವಾಮಿ
ಇತಿಹಾಸ ಅನ್ನೋದು ಯಾವತ್ತೋ ಆಗಿಹೋದ ಘಟನೆ ಮಾತ್ರವಲ್ಲ ಮತ್ತದು ಅನುಕ್ಷಣ ಮರುಕಳಿಸುತ್ತಲೇ ಇರುತ್ತದೆ. ಯಾವುದೂ ಹೊಸತಲ್ಲ ಅನ್ನೋದನ್ನ ಪುನ ಪುನ ನೆನಪು ಮಾಡಿಸುತ್ತೆ. ಈ ನೆಲದಲ್ಲಿ ಅಧ್ಯಾತ್ಮ ಅದೆಷ್ಟು ಹಾಸು ಹೊಕ್ಕಾಗಿತ್ತು ಅನ್ನೋದನ್ನ ನೋಡಲು, ಅನುಭವಿಸಲು ಇತಿಹಾಸ ಸಹಾಯ ಮಾಡುತ್ತೆ.  ಅದರಲ್ಲೂ ತ.ರಾ.ಸು ಬರೆದ ಇತಿಹಾಸ ಓದುತ್ತಿದ್ದರೆ ಒಳಗಿನಿಂದ ಹೆಮ್ಮೆ ಅರಳುವುದರ ಜೊತೆಗೆ  ಬೆಳಕು ಮೂಡುತ್ತದೆ. ಹೊಯ್ಸಳ ವಂಶದ ಬಿಟ್ಟಿದೇವ ವಿಷ್ಣುವರ್ಧನನಾಗುವ ಮುಂಚಿನ ಕತೆಯನ್ನು, ಸಿಡಿಲು ಬೆಳಕಾಗುವ ಮುನ್ನಿನ ಕತೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ ಅಂದರೆ ಈ ನೆಲವನ್ನು ಆಳಿ ಹೋದವರ ಧೈರ್ಯ, ಆತ್ಮಾಭಿಮಾನ , ಕೆಚ್ಚು ಮನದೊಳಗೆ ತಾಕಲಾಡಿ ಅಲ್ಲೊಂದು ಆತ್ಮವಿಮರ್ಶೆಯ ಸಿಡಿಲು ಮೊರೆದು ಬೆಳಕಾಗುತ್ತದೆ. ಆ ಬೆಳಕು  ಬದುಕಿನ ದಾರಿ ನಿಚ್ಚಳವಾಗುವ ಹಾಗೆ ಮಾಡುತ್ತದೆ. ಅದು ಕೇವಲ ಕತೆಯಾ, ಇತಿಹಾಸವಾ ಉಹೂ ಅಲ್ಲಾ ... ಪ್ರತಿ ಸಾಲುಗಳಲ್ಲೂ ಬದುಕಿನ ದರ್ಶನವಿದೆ. ಗೊಂದಲಗಳಿಗೆ ಉತ್ತರವಿದೆ, ಏನು ಮಾಡಬೇಕು, ಏನು ಮಾಡಬಾರದು ಅನ್ನೋದಕ್ಕೆ ನಿದರ್ಶನವಿದೆ, ಹೇಗೆ ನಡೆಯಬೇಕು ಅನ್ನುವುದಕ್ಕೆ ಮಾರ್ಗದರ್ಶನವಿದೆ. ವಿಷಾದಕ್ಕೆ ಮದ್ದಿದೆ, ಗರ್ವಕ್ಕೆ ಆಣೆಕಟ್ಟು ಇದೆ. ಬಾಗುವಿಕೆಗೆ ಫಲವಿದೆ. ಒಂದು ಘಟನೆ, ಒಬ್ಬರ ಅನುಭವ ಹಲವರ ಭಾವವಾಗುವುದಕ್ಕೆ, ಅನುಭೂತಿಯಾಗುವುದಕ್ಕೆ ಸಾಧ್ಯವೇ ಅನ್ನೋ ಗೊಂದಲಕ್ಕೆ ತೆರೆಯಿದೆ. ಎಲ್ಲವೂ ಇಲ್ಲಿಂದಲೇ, ಮತ್ತಿಲ್ಲಿಗೆ ಕೊನ

ಕೃಷ್ಣ

ಹೊಟ್ಟೆಯೊಳಗೆ ಜೀವವೊಂದು ಪಡಿಮೂಡುವ ಹೊತ್ತಿನಲ್ಲಿ ಭಾಗವತ ಓದು ಅನ್ನುವ ಸಲಹೆಯೊಂದು ಬಂದೇ ಬರುತ್ತದೆ. ತಾಯಿಯ ಉಸಿರನ್ನೇ ಉಸಿರಾಗಿಸಿಕೊಂಡು, ತಿಂದಿದ್ದನ್ನೇ ರಸವಾಗಿಸಿಕೊಂಡು, ಅವಳ ರಕ್ತ ಮಾಂಸಗಳನ್ನೇ ಹಂಚಿಕೊಂಡು ಒಳಗೆ ಬೆಳೆಯುವ ಮಗು ಅವಳ ಭಾವವನ್ನೂ ಜೀರ್ಣಿಸಿಕೊಳ್ಳುತ್ತದೆ. ಆಹಾರವೆಂದರೆ ಕೇವಲ ತಿಂದಿದ್ದು ಮಾತ್ರವಲ್ಲ, ಬೆಳವಣಿಗೆಯಾಗೋದು ಕೇವಲ ಆ ಆಹಾರದಿಂದ ಮಾತ್ರವಲ್ಲ, ಪಂಚೇಂದ್ರಿಯಗಳು ಸಂಗ್ರಹಿಸುವ ಪ್ರತಿಯೊಂದೂ ಆಹಾರವೇ. ಹಾಗಾಗಿ ನೋಡಿದ್ದು, ಕೇಳಿದ್ದು, ಸ್ಪರ್ಶಿಸಿದ್ದು, ಗ್ರಹಿಸಿದ್ದು, ಘ್ರಾಣಿಸಿದ್ದು ಎಲ್ಲವೂ ಆಹಾರವೇ ಹಾಗೂ ಅವೆಲ್ಲವೂ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತ್ತದೆ. ಹಾಗಾಗಿಯೇ ಸೃಷ್ಟಿಗೊಳ್ಳುವ ಜೀವದ ಬಗ್ಗೆ ಕಾಳಜಿ, ಆ ಕಾಲದಲ್ಲಿ ಎಚ್ಚರ ಎಲ್ಲವೂ ಅಗತ್ಯ ಅನಿವಾರ್ಯ. ತಾಯಿಯ ಒಡಲು ಕೇವಲ ಸುರಕ್ಷತೆ ಮಾತ್ರವಲ್ಲ ಸಂಸ್ಕಾರವನ್ನೂ ಕೊಡಬೇಕು. ಒಳಗಿನ ಗೂಡುಕಟ್ಟುವ ಸಮಯದಲ್ಲಿ ಅಮ್ಮಾ ಭಾಗವತವನ್ನು ಒಂದೊಂದಾಗಿ ಜೋಡಿಸಿ ಇಡುತಿದ್ದಳು. ಪ್ರತಿ ತಾಯಿಯೂ ಬಯಸುವುದು ಕೃಷ್ಣನಂತಹ ಮಗುವನ್ನ. ಯಶೋದೆ ಕೇವಲ ಒಂದು ಜೀವವಲ್ಲ ಅವಳು ಪ್ರತಿ ಹೆಣ್ಣಿನ ಕನಸು. ಗರ್ಭದೊಳಗೆ ಕುಳಿತ ಕೃಷ್ಣನ ಕತೆಯನ್ನು ಕೇಳದೆ ಹೊರಬರುವ ಯಾವ ಮಗುವೂ ಇಲ್ಲವೇನೋ ಅನ್ನುವಷ್ಟು ಕೃಷ್ಣ ಜೀವಂತ, ಜೀವ ತುಂಬುವಂತವನು. ಹೊಟ್ಟೆಯನ್ನು ನೇವರಿಸಿದಷ್ಟೇ ಮೃದುವಾಗಿ ಭಾಗವತವನ್ನು ನೇವರಿಸಿ ಮಡಿಲಲ್ಲಿ ಎತ್ತಿಕೊಂಡು ಪುಟ ತಿರುಗಿಸಿದವಳಿಗೆ ಕೃಷ್ಣನಂತ ಮಗ ಹುಟ್ತಾನೆ ದ
ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತಿದ್ದ ಮನೋಹರ್ ತಂದೆ ಡ್ಯೂಟಿ ಮಾಡುತ್ತಿರುವಾಗಲೇ ದುಷ್ಕರ್ಮಿಗಳಿಗೆ ಬಲಿಯಾದಾಗ ಮನೋಹರ್ ಇನ್ನೂ ಚಿಕ್ಕವನು. ಸಂಸಾರ ರಥ ಎಳೆಯುವ ಕೈ ಸ್ತಬ್ಧವಾದಾಗ ದುಡಿಯುವ ಅನಿವಾರ್ಯತೆ ವಯಸ್ಸನ್ನು ಗಮನಿಸುವುದಿಲ್ಲ. ಅಂತೂ ಹೋರಾಟದ ಬಳಿಕ ತಂದೆಯ ಕೆಲಸ ಮಗನಿಗೆ ಸಿಕ್ಕಿ ನಿಟ್ಟುಸಿರು ಬಿಡುವ ಮೊದಲೇ ಉಸಿರುಗಟ್ಟುವ ಹಾಗಾಗಿದ್ದು ಮನೋಹರನಿಗೂ ಗುಂಡು ಬಿದ್ದಾಗಲೇ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಕಂಡು ಯಾರೋ ದಾರಿಹೋಕರು ಸುದ್ದಿ ಮುಟ್ಟಿಸಿದಾಗ ಬಂದ ಅಧಿಕಾರಿಗಳು ಅದೇ ಜೀಪ್ ನಲ್ಲಿ ಅವನನ್ನು ಹಾಕಿಕೊಂಡು ಮೂರುಗಂಟೆ ಪ್ರಯಾಣಮಾಡಿ  ಮಂಗಳೂರಿನ  ಆಸ್ಪತ್ರೆಯೊಂದಕ್ಕೆ ಸೇರಿಸಿ ತಾಯಿಗೆ ಸುದ್ದಿ ಮುಟ್ಟಿಸಿ ಕೈ ತೊಳೆದುಕೊಂಡರು. ಆತಂಕದಲ್ಲಿ ಧಾವಿಸಿದ ತಾಯಿಯ ಬಳಿ ನೋಡಮ್ಮಾ ಮಾನವಿಯತೆಯ ನೆಲೆಯಲ್ಲಿ ಟ್ರೀಟ್ಮೆಂಟ್ ಮಾಡಿದ್ದೀವಿ, ಅವರು ಒಂದು ಪೈಸೆಯನ್ನೂ ಕೊಟ್ಟಿಲ್ಲ, ಆಪರೇಷನ್ ಮಾಡ್ಬೇಕು ದುಡ್ಡು ಕಟ್ಟಿದರೆ ಮಾಡ್ತಿವಿ ಅಂತ ಹೇಳಿದ ಮಾತು ಕೇಳಿ ಏನೂ ಮಾಡಲೂ ತೋಚದೆ ಇದ್ದ ಒಂದು ಮನೆಯನ್ನೂ ಅಡವಿಟ್ಟು ಬಂದ ಕೆಲವು ಸಾವಿರಗಳ ಹಣವನ್ನು ತಂದು ಕಟ್ಟುತ್ತಾರೆ. ಮತ್ತೂ ಆಪರೇಷನ್ ಆಗಬೇಕು ಆದರೆ ಅವರ ಬಳಿ ಹಣವಿಲ್ಲ. ಹಣವಿಲ್ಲದ ಯಾವ ಜೀವಕ್ಕೂ ಇಲ್ಲಿ ಬೆಲೆಯಿಲ್ಲ. ಹಾಗಾಗಿ ಮನೋಹರ್ ಅವರನ್ನು ಮನೆಗೆ ತಂದು ಬಿಡುತ್ತಾರೆ. ಆ ಸಮಯದಲ್ಲಿ ಶಾನುಭಾಗ್ ಬಳಿಗೆ ಬಂದು ತನ್ನ ಸಂಕಟ ಹೇಳಿಕೊಂಡು ನ್ಯಾಯ ಕೊಡಿಸಿ ಅಂದವರ ಜೊತೆಗೆ
ಭಾರತವನ್ನು ಒಂದುಗೊಳಿಸುವ ನಿಟ್ಟಿನಲ್ಲಿ ಕುಸಿಯುತಿದ್ದ ಅಧ್ಯಾತ್ಮವನ್ನು ಮೇಲಕ್ಕೆ ಎತ್ತಿಹಿಡಿಯುವಲ್ಲಿ ಒಟ್ಟಿನಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಮಹತ್ಕಾರ್ಯದಲ್ಲಿ ಶಂಕರಾಚಾರ್ಯರ ಪಾತ್ರ ತುಂಬಾ ಮಹತ್ವದ್ದು. ಅವರ ಕೊಡುಗೆ ಬೆಲೆಕಟ್ಟಲಾಗದ್ದು. ಕಾಲಟಿಯಲ್ಲಿ ಹುಟ್ಟಿ ಬರಿಗಾಲಿನಲ್ಲಿ ದೇಶಾದ್ಯಂತ ಸಂಚರಿಸಿ ಹೋದಲೆಲ್ಲಾ ಭಾರತೀಯತೆಯನ್ನು ಪುನರುಜ್ಜೀವನಗೊಳಿಸುತ್ತಾ ಸಾಗಿದ ಅವರ ಸಾಧನೆ ಅದ್ವಿತೀಯ. ಮೊಸಳೆಯ ಬಾಯಿಂದ ಬಿಡಿಸಿಕೊಂಡು ಸನ್ಯಾಸ ದೀಕ್ಷೆ ಪಡೆಯಲು ಸೂಕ್ತ ಗುರುವನ್ನು ಅರಸುತ್ತಾ ಅವರು ಬಂದಿದ್ದು ಮಧ್ಯಪ್ರದೇಶದ ನರ್ಮದಾ ನದಿಯ ತೀರಕ್ಕೆ.  ಓಂಕಾರೇಶ್ವರನ ದೇಗುಲದ ಸಮೀಪದ  ಗುಹೆಯೊಂದರಲ್ಲಿ ತಪೋನಿರತರಾಗಿದ್ದ ಗುರು ಗೋವಿಂದಪಾದರ ಹತ್ತಿರಕ್ಕೆ ಬರುವ ವೇಳೆಗೆ ನರ್ಮದೆಗೆ ಹುಚ್ಚು ಉನ್ಮಾದ. ಸೊಕ್ಕಿನಿಂದ ಉಕ್ಕಿ ಹರಿಯುತಿದ್ದ ನರ್ಮದೆಯ ಪ್ರವಾಹ ಎಲ್ಲಿ ಗುರುಗಳ ತಪಸ್ಸನ್ನು ಭಂಗ ಪಡಿಸುತ್ತದೋ ಎಂದು ವ್ಯಾಕುಲಗೊಂಡ  ಶಂಕರರು ಭಕ್ತಿಭಾವದಿಂದ ನರ್ಮದೆಯನ್ನು ಸ್ತುತಿಸತೊಡಗುತ್ತಾರೆ. ಅವರ ಭಕ್ತಿಗೆ, ಸರಸ್ವತಿಯೇ ಗಂಟಲಿನಲ್ಲಿ ಕುಳಿತು ಹಾಡುತಿದ್ದಾಳೇನೋ ಅನ್ನೋ ಭಾವಕ್ಕೆ ಮನಸೋತ ನರ್ಮದೆ ಬಾಲ ಶಂಕರರ  ಕಮಂಡಲುವಿನಲ್ಲಿ ಬಂಧಿಯಾಗುತ್ತಾಳೆ. ಧ್ಯಾನ ಮುಗಿಸಿ ಕಣ್ಣು ಬಿಟ್ಟ ಗುರುವು ತನ್ನೆದೆರು ನಿಂತವನನ್ನು ಯಾರು ಎಂದು ಪ್ರಶ್ನಿಸುತ್ತಾರೆ. ನಾನು ಸಚ್ಚಿದಾನಂದ ಸ್ವರೂಪ ಎಂದು  ಉತ್ತರಿಸಿದವನ ಜ್ಞಾನಕ್ಕೆ, ಶಕ್ತಿಗೆ ಬೆರಗಾದ ಗುರು  ದೀಕ್ಷೆಯನ್ನ

ಸಹಜ ಖುಷಿ

ಸಹಜ ಖುಷಿ ಅನ್ನೋ ಟೈಟಲ್ ಕಾಣಿಸುತಿದ್ದ ಹಾಗೆಯೇ ಖುಷಿಯಿಂದಲೇ ಎತ್ತಿಕೊಂಡಿದ್ದೆ. ಪುಟ್ಟ ಅಂಗೈ ಅಗಲದ  ಪುಸ್ತಕ ಹಿಡಿದುಕೊಳ್ಳಲು ಅಪ್ಯಾಯಮಾನ ಫೀಲ್ ಕೊಟ್ಟಿತ್ತು. ಚಳಿಯ ಸಂಜೆ ಹಬೆಯಾಡುವ ಕಾಫಿಯನ್ನು ಮಗ್ ಗೆ ಸುರಿದುಕೊಂಡು ಬಂದು ಮಡಿಲಲ್ಲಿ ಎತ್ತಿಕೊಂಡು ಓದಲು ಶುರುಮಾಡಿ ಕೆಳಗಿಡುವ ಹೊತ್ತಿಗೂ ಖುಷಿ ಅನ್ನೋದು ಮರೆಯಾಗಿತ್ತು. ಎಲ್ಲವೂ ಕ್ಷಣಿಕ ಮತ್ತು ನೀರಮೇಲಿನ ಗುಳ್ಳೆ ಅನ್ನುವ ಫಿಲಾಸಫಿ ನಿಜವಾಗುವುದು ಮದುವೆ ಮನೆಗಳಲ್ಲೇ.. ಅನ್ನೋ ಪ್ರಾರಂಭದ ಸಾಲು ಓದಿನ ವೇಗಕ್ಕೆ ಗುಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿತ್ತು. ಹೊಸ ಬದುಕಿನ ಮುನ್ನುಡಿ ಶುರುವಾಗೋದೇ ಮದುವೆಯೆಂಬ ಮಾಂತ್ರಿಕ ಕ್ಷಣಗಳಲ್ಲಿ. ಈಗಿನ ಕಾಲದ ತಲ್ಲಣಗಳನ್ನು ಹೇಳುತ್ತಲೇ ತಟ್ಟನೆ ಹಳೆಯ ಕಾಲದ ನೆನಪುಗಳಿಗೆ ಕರೆದೊಯ್ಯುವ ಜಾದೂ ಜೋಗಿಯ ಬರಹಕ್ಕಿದೆ. ಎಲ್ಲೋ ಸಾಗುತ್ತಿದ್ದವರನ್ನು ಅನಾಮತ್ತಾಗಿ ಇನ್ಯಾವುದೋ ಕಾಲಘಟ್ಟಕ್ಕೆ ಎತ್ತಿ ಹಾಕಿ ಭಾವಗಳನ್ನು ಅಲ್ಲೋಲ್ಲಕಲ್ಲೋಲ್ಲಗೊಳಿಸುತ್ತಲೇ ತಿಳಿಯಾಗುವ ಮುನ್ನ ಒಂದು ಸ್ಪಷ್ಟತೆ ಸಿಗುವ ಹಾಗೆ ಮಾಡುವ ಶಕ್ತಿಯೂ ಇದೆ. ಯಾವುದೇ ವಿಷಯದ ಬಗ್ಗೆ ಬರೆದರೂ ಯಾವುದೋ ಸಾಲಿನ ನಡುವೆ ಧುತ್ತೆಂದು ಎದುರಾಗುವ ಪುರಾಣದ ಪಾತ್ರಗಳು ಅವು ಕೇವಲ ಕಥೆಯಲ್ಲ ಬದುಕಿನ ಗತಿ ಅನ್ನೋದನ್ನ ಸಶಕ್ತವಾಗಿ ಪರಿಚಯಿಸುವ ಜೋಗಿಯ ಚಾತುರ್ಯ ತುಂಬಾ ಇಷ್ಟ. ಪುರಾಣದ ಜೊತೆ ಹೆಜ್ಜೆ ಹಾಕುವುದರಲ್ಲಿ ಇನ್ಯಾವುದೋ ಭಾಷೆಯ ಅದ್ಯಾವುದೋ ಹೆಸರು ಉಚ್ಚರಿಸಿ ಅನಾಮತ್ತಾಗಿ ಮತ್ತೆಲ್ಲೋ ತಂದುಬ
ಜೋಗಿ ಬರೆದ ಮದುವೆ ಎಂಬ ರಿಯಾಲಿಟಿ ಷೋ ಅನ್ನೋ ಅಂಕಣ ಓದುತಿದ್ದೆ. ವಾಸ್ತವವನ್ನು ನೇರವಾಗಿ ಹೇಳುತಿದ್ದ ಅವರ ಸಾಲುಗಳಲ್ಲಿನ ಪ್ರತಿ ಅಕ್ಷರವೂ ಮನಸ್ಸಿನಲ್ಲಿ ಗುರುತು ಮೂಡಿಸುತ್ತಾ ಹೋಗುತಿತ್ತು. ಇದೇ ಕಾರಣಕ್ಕೆ ನಂಗೆ ಮದುವೆ ಮನೆಗಳಿಗೆ ಹೋಗುವುದೆಂದರೆ ಅಲರ್ಜಿ. ಅದರಲ್ಲೂ ಸಿಟಿಯಲ್ಲಿ ನಡೆಯುವ ಮದುವೆಗಳಿಂದ ಮಾರು ದೂರವೇ ಉಳಿಯುತ್ತೇನೆ. ಇಂತಹದೊಂದು ಬೇಸರದ, ನಾಟಕೀಯ ಪ್ರಪಂಚದ, ಕೃತಕ ವಾತಾವರಣ ಆಚೆಗೂ ಕೆಲವು ನವಿರಾದ ಭಾವನೆಗಳನ್ನು ಹುಟ್ಟುಹಾಕುವ, ಬದುಕಿಗೊಂದಿಷ್ಟು ನೆನಪಿನ ಬುತ್ತಿ ಕಟ್ಟಿಕೊಡುವ ಜೀವಗಳು ಇವೆ ಅನ್ನೋದನ್ನ ಮತ್ತೆ ನಿರೂಪಿಸಿದ್ದು ಪುಟ್ಟು ಮದುವೆ. ಬಹಳ ವರ್ಷಗಳ ನಂತರ ಕಳೆದೇಹೋಗಿದೆಯೇನೋ ಅನ್ನೋ ಸಂದರ್ಭಗಳನ್ನ, ಮಧುರ ಕ್ಷಣಗಳನ್ನ ಮತ್ತೆ ಸಿಗುವ ಹಾಗೆ ಮಾಡಿದ್ದೂ ಅದೇ. ಆರವಿಂದಣ್ಣನ ಮದುವೆಯ ನಂತರ ಪೂರ್ಣವಾಗಿ ನನ್ನನ್ನೇ ತೊಡಗಿಸಿಕೊಂಡು ಪ್ರತಿ ಕ್ಷಣವನ್ನೂ ತೀವ್ರವಾಗಿ ಕಳೆದಿದ್ದು, ಪಡೆದುಕೊಂಡಿದ್ದು ಮತ್ತಿಲ್ಲೇ. ಹಾಸಿಗೆಗೆ ಹಾಸುವ bedsheet ನಿಂದ ಹಿಡಿದು ಪ್ರತಿಯೊಂದನ್ನೂ ಹುಡುಕಿ ಆರಿಸಿ ಚೆಂದವಾದದ್ದು ಜೋಡಿಸಿ ಇದು ಮದುವೆಮನೆಗೆ ಅಂತ ಎತ್ತಿಡುವ , ಅದಾಗಬೇಕು, ಇದಾಗಬೇಕು ಅಂತ ಯೋಚಿಸಿ, ನೆನಪಿಸಿಕೊಂಡು ಮಾಡುವ ಆಂಟಿಯ ಉತ್ಸಾಹ, ಶ್ರದ್ಧೆ, ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಏನೋ ಒಂದು ಕೆಲಸವನ್ನು ಮಾಡುತ್ತಾ ಇರುವ ಅವರ ಚುರುಕುತನ, ಪ್ರತಿ ಸಣ್ಣ ಸಂಗತಿಯಲ್ಲೂ ಅವರು ತೋರಿಸುತಿದ್ದ ಆಸಕ್ತಿ, ಗುಬ್ಬಿ ಗೂಡುಕಟ್ಟುವ

ಅಡಿಕೆ ಹಾಳೆ

Image
ನಾಳೆ ಬೆಳಿಗ್ಗೆ ಇಬ್ರು ಜನ ಬರ್ತಾರೆ ಬೇಗ ತಿಂಡಿ ಕಾಫಿ ಮಾಡಿಕೊಡು, ಹಾಳೆಹೊರೆ ಕಟ್ಟಲು ಹೋಗಬೇಕು ಅನ್ನೋ ಧ್ವನಿ ಕಿವಿಗೆ ಬಿದ್ದರೆ ಬೆಳಗಾಗುವುದನ್ನೇ ಕಾಯುವ ತವಕ. ಕಾಡಿನ ತಪ್ಪಲಲ್ಲಿ ಇದ್ದ ತೋಟಕ್ಕೆ ಹೋಗುವುದು ಖುಷಿ ಕೊಟ್ಟರೆ ಅದಕ್ಕಿಂತ ಸಂಭ್ರಮ ಅಂದರೆ ಹೋದಾಗ ಆರಿಸಿ ಒಂದು ನಾಲ್ಕು ಹಾಳೆ ತಂದು ಕೊಟ್ಟರೆ ಒಂದು ವಾರ ನೆಮ್ಮದಿಯಾಗಿ ಆಡಬಹುದು ಅನ್ನೋ ಲೆಕ್ಕಾಚಾರ. ವರಾಹಿಯ ಮಡಿಲಲ್ಲಿ ಇದ್ದ ಸಂಪಗೋಡು ಎಂಬ ಊರಿನಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮನೆಗಳಾದರೂ ಮಕ್ಕಳು ಹಾಗೂ ಆಡಲೆಂದು ಇದ್ದ ಆಟಗಳು ಬಹಳಷ್ಟು. ಅದರಲ್ಲಿ ಮುಖ್ಯವಾದದ್ದು ಈ ಹಾಳೆ ಎಳೆಯೋ ಆಟ. ತೋಟದಿಂದ ತಂದ ಅಗಲವಾದ ಹಸಿ ಹಾಳೆಯ ಮೇಲೆ ಒಬ್ಬರು ಕುಳಿತರೆ ಅದರ ಸೋಗೆಯನ್ನು ಹಿಡಿದು ಇನ್ನೊಬ್ಬರು ಎಳೆಯ ಬೇಕು. ಕುಳಿತಿರುವವರ ಭಾರದ ಅನುಪಾತಕ್ಕೆ ತಕ್ಕಂತೆ ಎಳೆಯುವವರ ಸಂಖ್ಯೆ ನಿರ್ಧಾರವಾಗುತ್ತಿತ್ತು. ಹಾಗೆ ಎಳೆದುಕೊಂಡು ಹೋಗುತಿದ್ದರೆ ಕುಳಿತವರ ಮುಖದಲ್ಲಿ ರಾಜ ಗಾಂಭೀರ್ಯ. ಯಾವ ರಾಜನ ಆನೆಯ ಮೇಲಿನ ಅಂಬಾರಿಯ ಸವಾರಿಗೆ ಕಡಿಮೆಯಿತ್ತು ಆ ಮೆರವಣಿಗೆ. ತಮ್ಮ ಸರದಿಗಾಗಿ ಹಿಂಬಾಲಿಸುತ್ತಾ ಬರುವವರು ರಾಜ ಪರಿವಾರದಂತೆ ಭಾಸವಾಗಿ ಇನ್ನಷ್ಟು ಉಬ್ಬಿ ಗಟ್ಟಿಯಾಗಿ ಹಿಡಿದುಕೊಂಡು ಕೂರುತ್ತಿದ್ದೆವು. ತೆಂಗಿನ ಮರದಷ್ಟೇ ಅಡಿಕೆಯ ಮರವೂ ಉಪಯೋಗವೇ. ಅದ್ಯಾಕೆ ಕೇವಲ ತೆಂಗಿನ ಮರವನ್ನು ಮಾತ್ರ ಕಲ್ಪವೃಕ್ಷ ಅಂತಾರೋ ಅಂತ ಸಿಟ್ಟಿಗೇಳುವ ಕಾಲವೂ ಒಂದಿತ್ತು. ಮತ್ತು ಅದಕ್ಕೆ ನಮ್ಮದೇ ಆದ ಸಮರ್ಥನೆಗಳ
ಡಿಯರ್ ಸಿದ್ದರಾಮಯ್ಯ... ತಾಯಿಯೊಬ್ಬಳ ಕರುಳಿನ ಸಂಕಟವನ್ನು ನಿಮ್ಮೆದೆರು ಹೇಳಬೇಕು ಅಂತ ಯೋಚಿಸಿ ಬರೆಯುತಿದ್ದೇನೆ. ಸದ್ಯಕ್ಕೆ ನಾಡಿನ ಚುಕ್ಕಾಣಿ ನಿಮ್ಮ ಕೈಯಲ್ಲಿ ಇರುವುದರಿಂದ ಇಷ್ಟವಿಲ್ಲದಿದ್ದರೂ ಕಿವಿಯಾಗಲೇ ಬೇಕಾದ ಅನಿವಾರ್ಯತೆ ನಿಮ್ಮದು, ನೋವನ್ನು ಹೊರಹಾಕಿ ಸ್ವಲ್ಪವಾದರೂ ಹಗುರವಾಗುವ ಬಯಕೆ ನನ್ನದು. ಯಾವುದೇ ಬದುಕಿಗೆ ಜೀವ ತುಂಬುವುದು ಸುಲಭವಲ್ಲ. ಅದಕ್ಕೊಂದು ರೂಪು ಕೊಟ್ಟು ಒಡಲಲ್ಲಿ ಹೊತ್ತು ರಕ್ತ ಮಾಂಸ, ಅಸ್ಥಿ ಉಸಿರು ಕೊಟ್ಟು ಹೊರತರುವುದೆಂದರೆ ಸತ್ತು ಬದುಕುವುದು. ನಿಮಗೆ ಹೇಗೂ ವೈಜ್ಞಾನಿಕ ಹಿನ್ನಲೆ ಹುಡುಕುವವರಾದ್ದರಿಂದ ಪ್ರಸವದ ಸಮಯದಲ್ಲಿ ಅವಳು ಅನುಭವಿಸುವ ನೋವಿನ ತೀವ್ರತೆ ಎಷ್ಟಿರುತ್ತದೆ ಅನ್ನೋದು ನೋಡಿ ಆಗ ಅರ್ಥವಾಗುತ್ತೆ ಹೇಗೆ ಸತ್ತು ಒಂದು ಜೀವವನ್ನು ಜಗತ್ತಿಗೆ ಕೊಡ್ತೀವಿ ಅಂತ. ಅಮ್ಮಂದಿರ ಎರಡನೆಯ ಬದುಕು ಅಂದರೆ ಅದು ಮಕ್ಕಳಿಗಾಗಿ ಮುಡಿಪಿಟ್ಟ ಬದುಕು. ತನ್ನ ಸಮಯ, ಕನಸು, ಆಸೆ ಎಲ್ಲವನ್ನೂ ಮಗುವಿಗಾಗಿ ಧಾರೆಯೆರೆದು ಅವರ ಬೆಳವಣಿಗೆಯಲ್ಲಿ, ಅವರ ಉನ್ನತಿಯಲ್ಲಿ ಮರೆಯುವ ಕಾಲ ಅದು. ಹಾಗಂತ ಏನೋ ತ್ಯಾಗ ಮಾಡ್ತಾ ಇದೀನಿ ಅಂತ ಕನಸಲ್ಲೂ ಯೋಚಿಸೋಲ್ಲ, ಯಾಕೆಂದರೆ ಅದು ಕರುಳಿನ ತುಂಡು. ಭುವಿಗೆ ಬಂದ ಕ್ಷಣದಿಂದ ಎಲ್ಲವನ್ನೂ ಕಲಿಸಿ ಅವರನ್ನು ಸಶಕ್ತರನ್ನಾಗಿ ಮಾಡುವ ಸಮಯದಲ್ಲಿ ನಮ್ಮ ಬದುಕಲ್ಲಿ ಇಳಿ ಸಂಜೆ ಕಾಲಿಟ್ಟುರುತ್ತದೆ. ಮೈ ಹಾಗು ಮನಸ್ಸು ಊರುಗೋಲಿಗಾಗಿ ಹಂಬಲಿಸುತ್ತದೆ. ಯಾವುದೋ ನಿರ್ಜಿವ ಕಟ್ಟಿಗೆಯ ತುಂಡಿನ ಬ

ಅರಿಸಿನ ಶಾಸ್ತ್ರ.

ಈ ಸಲ ಮಾತ್ರ ಯಾವುದೇ ಕಾರಣಕ್ಕೂ ಯಾವ ಸಣ್ಣ ಘಳಿಗೆಯನ್ನೂ ಮಿಸ್ ಮಾಡಿಕೊಳ್ಳದೆ ಸಂಪೂರ್ಣವಾಗಿ ಅನುಭವಿಸಬೇಕು, ನೆನಪುಗಳ ಬಾಚಿ ಕಟ್ಟಿಕೊಳ್ಳಬೇಕು ಅಂತಾನೇ ಪುಟ್ಟು ಮದುವೆಗೆ ಹೊರಟಿದ್ದೆ. ಹೊರಡುವ ವೇಳೆಗೆ ಅಹಿಗೆ ವಿಪರಿತ ಜ್ವರ ಶುರುವಾಗಿತ್ತು. ಏನೂ ಆಗೋಲ್ಲ ಕಣೆ ಅಕ್ಕಾ ನಾಳೆ ಡಾಕ್ಟರ್ ಹತ್ರ ನಾನು ಕರ್ಕೊಂಡ್ ಹೋಗ್ತೀನಿ ಗಟ್ಟಿ ಮನಸ್ಸು ಮಾಡಿ ಹೊರಟುಬಿಡು ಅನ್ನೋ ರಾಕೆಟ್ ಧ್ವನಿ ಧೈರ್ಯ ಕೊಟ್ಟಿತ್ತು. ಮದುವೆ ಮನೆ ಅಂದ್ರೆ ಜಗತ್ತಿನ ಗದ್ದಲ, ಸಂಭ್ರಮ, ಟೆನ್ಶನ್, ಗಡಿಬಿಡಿ, ಉಲ್ಲಾಸ, ಎಲ್ಲವನ್ನೂ ತಂದು ಗುಡ್ಡೆ ಹೊಯ್ದ ಹಾಗೆ. ಬೆಳಿಗ್ಗೆ ಸ್ವಲ್ಪ ಬೇಗ ಎದ್ದು ರೆಡಿ ಆಗಿಬಿಡು, ಅರಿಸಿನ ಶಾಸ್ತ್ರ ಬೇಗನೆ ಶುರುಮಾಡೋಣ ಅಂತ ಆಂಟಿ ಹೇಳಿದಾಗ ನನಗಿಂತ ಎಕ್ಸೈಟ್ ಆಗಿದ್ದು ಅಹಿ. ಅವಳಿಗೆ ಈ ಆಚರಣೆ, ಸಂಪ್ರದಾಯ ಅಂದರೆ ಎಲ್ಲಿಲ್ಲದ ಉತ್ಸಾಹ. ಎಲ್ಲರಿಗಿಂತ ಮುಂದೆ ನಾನು ಮಾಡ್ತೀನಿ ಅಂತ ನಿಂತು ಬಿಡ್ತಾಳೆ. ಹಾಗಾಗಿ ಅಮ್ಮಾ ಬೆಳಗಾಯ್ತಾ ಅಂತ ರಾತ್ರಿಯೆಲ್ಲಾ ತಲೆ ತಿಂದು ಊರಿಗೆ ಮುಂಚೆ ಎಬ್ಬಿಸಿ ಸ್ನಾನ ಮಾಡಿ ರೆಡಿ ಆಗಿ ಲೇಟ್ ಆಯ್ತು ಎಲ್ಲರನ್ನೂ ಗಡಿಬಿಡಿ ಮಾಡುತ್ತಿದ್ದಳು. ನಮ್ಮ ಹಿರಿಯರು ಮಾಡಿದ ಪ್ರತಿ ಸಂಪ್ರದಾಯ ಆಚರಣೆಯಲ್ಲೂ ಅವರು ಕಟ್ಟಿಕೊಟ್ಟ ಜೀವನ ಸೂಕ್ಷ್ಮಗಳು, ಸಂಬಂಧಗಳನ್ನು ಜೋಡಿಸುವ ರೀತಿ ನನ್ನಲ್ಲೊಂದು ಸದಾ ಬೆರಗನ್ನು ಹುಟ್ಟಿಸುತ್ತಲೇ ಇರುತ್ತದೆ. ಇಲ್ಲೂ ಹಾಗೆ ಅರಿಸಿನ ಶಾಸ್ತ್ರಕ್ಕೆ ಮುಖ್ಯವಾಗಿ ಬೇಕಾಗಿದ್ದು ಮದುಮಗನ ತಂಗಿ ಅಥವಾ ಅಕ

ಅಂಟುವಾಳ

ಹೇಗಿದ್ರೂ ರಜೆ ಇವತ್ತು ಮೊದ್ಲು ಆ ಗೆಜ್ಜೆ ಬಿಚ್ಚಿ ತೊಳಿ, ಜಗತ್ತಿನ ಎಲ್ಲಾ ಗಲೀಜು ಅದರಲ್ಲೇ ಇರೋ ಹಾಗಿದೆ ಅಂತ ಅಜ್ಜಿ ಅಂಟುವಾಳ ಕಾಯಿಯನ್ನು ಎದುರಿಗಿಟ್ಟು  ಗದರಿಸುತ್ತಾ ಒಳಗೆ ಹೋದರೆ ನಾನು ತದೇಕಚಿತ್ತಳಾಗಿ ಕಾಲಿನ ಗೆಜ್ಜೆಯನ್ನೂ, ಪಕ್ಕದಲ್ಲಿದ್ದ ಅಂಟುವಾಳ ಕಾಯನ್ನೂ ದಿಟ್ಟಿಸುತ್ತಾ ಕೂರುತಿದ್ದೆ. ಹೆಜ್ಜೆಯಿಟ್ಟ ಕ್ಷಣದಲ್ಲೆಲ್ಲಾ ಘಲ್ ಘಲ್ ಎನ್ನುತ್ತಾ ಹಿಂಬಾಲಿಸುವ ಅದೆಂದರೆ ಪ್ರೀತಿ, ಸಾಂಗತ್ಯ ಕೊಡುವ ಅದರ ಬಗ್ಗೆ ಅಪ್ಯಾಯತೆ. ಸದ್ದಿಲ್ಲದ ಬದುಕು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಹಾಗೆ ಮೈ ಮರೆತು ಕಳೆದು ಹೋಗುವವಳನ್ನ ಬಚ್ಚಲಲ್ಲಿ ಬಿಸಿ ನೀರಿದೆ ನೋಡು ಅನ್ನೋ ಅವಳ ಧ್ವನಿ ಅಡುಗೆ ಮನೆಯಿಂದ ತೂರಿ ಬಂದು ಬಡಿದು ಎಬ್ಬಿಸುತಿತ್ತು. ಎದ್ದು ಅಲ್ಲೇ ಅಂಗಳದ ಮೂಲೆಯಲ್ಲಿ ಬಿದ್ದಿರುತಿದ್ದ ಕಲ್ಲನ್ನು ಎತ್ತಿಕೊಂಡು ಆ ಅಂಟುವಾಳ ಕಾಯಿಯನ್ನು ಜಜ್ಜಿ ಅದನ್ನು ಬೊಗಸೆಯಲ್ಲಿ ಎತ್ತಿಕೊಂಡು ಬಂದು ಬಟ್ಟಲಿನಲ್ಲಿ ಹಾಕಿ ಬಿಸಿ ನೀರಿನ ಅಭಿಷೇಕ ಮಾಡಿದರೆ ಅದು ನಾಚಿ ಕರಗಿ ನೊರೆಯಿಂದ ಮೈ ಮುಚ್ಚಿಕೊಳ್ಳುತಿತ್ತು. ಹಾಗೆ ನೊರೆ ಬಿಡುತಿದ್ದ ಅದರಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಗೆಜ್ಜೆಯನ್ನು ಮುಳುಗಿಸಿದರೆ ಜಗತ್ತಿಗೆ ನಿಶಬ್ಧ ಆವರಿಸಿತೇನೋ ಅನ್ನೋ ಭಾವ ಕಾಡುತಿತ್ತು. ಶಬ್ದಗಳನ್ನ ಎದುರಿಸಬಹುದು ಈ ನಿಶಬ್ದ ಉಹೂ ಉಸಿರುಗಟ್ಟಿಸುತ್ತೆ. ವಿಪರಿತ ದೃಢತೆ ಬೇಡುತ್ತೆ. ಹಾಗಾಗಿ ಆ ನಿಶಬ್ಧ ಎದುರಿಸುವ ಧೈರ್ಯವಿಲ್ಲದೇ ಹಳೆಯ ಬ್ರಷ್ ಅರಸಿ ಹೊರಡುತಿದ್ದೆ. ಹತ್ತು ನಿ

ಮೃಗವಧೆ

ಊರಿಗೆ ಕಾಲಿಡುತ್ತಿದ್ದಂತೆ ಕೈ ಬೀಸಿ ಕರೆಯೋದು ದೇವಸ್ಥಾನ. ಹಗ್ಗ ಕಳಚಿದ ಕರುವಿನ ಹಾಗೆ ಮನಸ್ಸು ಧಾವಿಸುತ್ತದೆ. ಕಣ್ಣು ಗಡಿಯಾರದ ಕಡೆಗೆ ಹೊರಳುತ್ತದೆ. ಅಲ್ಲಿಗೆ ಹೋಗಲು ಸಮಯವೂ ಮುಖ್ಯ. ಬೆಳಿಗ್ಗೆ ಇಲ್ಲಾ ಸಂಜೆ ಹೋದರೆ ನಿಶಬ್ಧದಲ್ಲಿ ತಣ್ಣಗೆ ಕುಳಿತಿರುವ ಅಪ್ಪ ಮಗ ಇಬ್ಬರ ಜೊತೆಯೂ ನೆಮ್ಮದಿಯ ಮಾತುಕತೆ ಹೊತ್ತಿನ ಪರಿವೆಯಿಲ್ಲದೆ ನಡೆಸಬಹುದು. ಹನ್ನೊಂದರ ನಂತರ ವಿಪರಿತ ಬ್ಯುಸಿ ಆಗುವ ಅವರು ಕೆಲವೊಮ್ಮೆ ನೋಡಲು ಸಿಗೋದು ಕಷ್ಟವೇ. ಸೋಮವಾರ, ಶನಿವಾರ, ಹಬ್ಬ ಹರಿದಿನಗಳೆಂದರೆ ಮುಗಿದೇ ಹೋಯ್ತು ಜನಜಂಗುಳಿಯ ನಡುವೆ ಅವನ ದರ್ಶನ ಅಲಭ್ಯ. ಉತ್ತಮವಾದದ್ದು ತಮಗಷ್ಟೇ ಸಿಗಬೇಕು ಅನ್ನೋದು ಮನುಷ್ಯ ಸಹಜಗುಣ ಹಾಗಾಗಿ ಅಡ್ಡಡ್ಡೆಲಾಗಿ ನಿಂತು ನೋಡುವ ಭರದಲ್ಲಿ ಉಳಿದವರಿಗೆ ಕಾಣುವುದಾದರೂ ಹೇಗೆ? ಆವರಣದೊಳಗೆ ಕಾಲಿಡುತ್ತಿದ್ದಂತೆ ಒಮ್ಮಿಂದೊಮ್ಮಿಗೆ ಇಷ್ಟಿಷ್ಟೇ ಆವರಿಸುವ ನಿರಾಳ ಭಾವ ಮೆಟ್ಟಿಲಿಳಿದು ಬ್ರಾಹ್ಮೀ ಹತ್ತಿರವಾಗುತ್ತಿದ್ದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಹರಿವಿದ್ದರೆ ಬ್ರಾಹ್ಮಿಯದು ತಂಪಿನ ಒಡಲು. ಒಂದಿಷ್ಟು ನೀರು ಬೊಗಸೆಯಲ್ಲಿ ಎತ್ತಿಕೊಂಡು ಹಾಗೆ ಮುಖಕ್ಕೆ ತೋಕಿಕೊಂಡರೆ ಅವಳ ತಂಪು ನಿದಾನಕ್ಕೆ ಮೈಯೊಳಗೆ ಇಳಿಯುವುದು ಅನುಭವವಾಗುತ್ತದೆ. ಸದ್ದಿಲ್ಲದೇ ಹರಿಯುವ ಅವಳು ಒದ್ದೆಯಾಗಿಸುತ್ತಾ ಹೊಸ ಚಿಗುರಿಗೆ ಮುನ್ನುಡಿ ಬರೆಯುತ್ತಾ ಹರಿಯುತ್ತಾಳೆ. ಮೊನ್ನೆಯಷ್ಟೇ ಬಿದ್ದ ಮಳೆಯಿಂದಾಗಿ ಪಂಪ್ ಸೆಟ್ ಗಳಿಗೆ ವಿಶ್ರಾಂತಿ ದೊರಕಿತ್ತು. ಅವುಗಳ ವಿ