ಜೋಗಿ ಬರೆದ ಮದುವೆ ಎಂಬ ರಿಯಾಲಿಟಿ ಷೋ ಅನ್ನೋ ಅಂಕಣ ಓದುತಿದ್ದೆ. ವಾಸ್ತವವನ್ನು ನೇರವಾಗಿ ಹೇಳುತಿದ್ದ ಅವರ ಸಾಲುಗಳಲ್ಲಿನ ಪ್ರತಿ ಅಕ್ಷರವೂ ಮನಸ್ಸಿನಲ್ಲಿ ಗುರುತು ಮೂಡಿಸುತ್ತಾ ಹೋಗುತಿತ್ತು. ಇದೇ ಕಾರಣಕ್ಕೆ ನಂಗೆ ಮದುವೆ ಮನೆಗಳಿಗೆ ಹೋಗುವುದೆಂದರೆ ಅಲರ್ಜಿ. ಅದರಲ್ಲೂ ಸಿಟಿಯಲ್ಲಿ ನಡೆಯುವ ಮದುವೆಗಳಿಂದ ಮಾರು ದೂರವೇ ಉಳಿಯುತ್ತೇನೆ.

ಇಂತಹದೊಂದು ಬೇಸರದ, ನಾಟಕೀಯ ಪ್ರಪಂಚದ, ಕೃತಕ ವಾತಾವರಣ ಆಚೆಗೂ ಕೆಲವು ನವಿರಾದ ಭಾವನೆಗಳನ್ನು ಹುಟ್ಟುಹಾಕುವ, ಬದುಕಿಗೊಂದಿಷ್ಟು ನೆನಪಿನ ಬುತ್ತಿ ಕಟ್ಟಿಕೊಡುವ ಜೀವಗಳು ಇವೆ ಅನ್ನೋದನ್ನ ಮತ್ತೆ ನಿರೂಪಿಸಿದ್ದು ಪುಟ್ಟು ಮದುವೆ. ಬಹಳ ವರ್ಷಗಳ ನಂತರ ಕಳೆದೇಹೋಗಿದೆಯೇನೋ ಅನ್ನೋ ಸಂದರ್ಭಗಳನ್ನ, ಮಧುರ ಕ್ಷಣಗಳನ್ನ ಮತ್ತೆ ಸಿಗುವ ಹಾಗೆ ಮಾಡಿದ್ದೂ ಅದೇ. ಆರವಿಂದಣ್ಣನ ಮದುವೆಯ ನಂತರ ಪೂರ್ಣವಾಗಿ ನನ್ನನ್ನೇ ತೊಡಗಿಸಿಕೊಂಡು ಪ್ರತಿ ಕ್ಷಣವನ್ನೂ ತೀವ್ರವಾಗಿ ಕಳೆದಿದ್ದು, ಪಡೆದುಕೊಂಡಿದ್ದು ಮತ್ತಿಲ್ಲೇ.

ಹಾಸಿಗೆಗೆ ಹಾಸುವ bedsheet ನಿಂದ ಹಿಡಿದು ಪ್ರತಿಯೊಂದನ್ನೂ ಹುಡುಕಿ ಆರಿಸಿ ಚೆಂದವಾದದ್ದು ಜೋಡಿಸಿ ಇದು ಮದುವೆಮನೆಗೆ ಅಂತ ಎತ್ತಿಡುವ , ಅದಾಗಬೇಕು, ಇದಾಗಬೇಕು ಅಂತ ಯೋಚಿಸಿ, ನೆನಪಿಸಿಕೊಂಡು ಮಾಡುವ ಆಂಟಿಯ ಉತ್ಸಾಹ, ಶ್ರದ್ಧೆ, ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಏನೋ ಒಂದು ಕೆಲಸವನ್ನು ಮಾಡುತ್ತಾ ಇರುವ ಅವರ ಚುರುಕುತನ, ಪ್ರತಿ ಸಣ್ಣ ಸಂಗತಿಯಲ್ಲೂ ಅವರು ತೋರಿಸುತಿದ್ದ ಆಸಕ್ತಿ, ಗುಬ್ಬಿ ಗೂಡುಕಟ್ಟುವ ತೆರದಿ ಒಂದೊಂದನ್ನೇ ಜೋಡಿಸಿ ಸಜ್ಜು ಮಾಡುವ ರೀತಿ, ಆಯಾಸವನ್ನೇ ಸ್ವಲ್ಪವೂ ತೋರದೇ ನಗುವನ್ನು ಕಾಪಾಡಿಕೊಳ್ಳುವ ಪರಿ ಬದುಕಿನ ಬಗೆಗೆ  ನನ್ನ ದೃಷ್ಟಿಕೋನ  ಬದಲಾಗುವ ಹಾಗೆ ಮಾಡಿದ್ದು ಸುಳ್ಳಲ್ಲ.

ಯಾವೊಂದು ಆಚರಣೆಯನ್ನು ಬಿಡದೆ  ಸಂಪ್ರದಾಯ ಪ್ರಕಾರವೇ ನಡೆದಿದ್ದು ಎಲ್ಲರೂ ಪಾಲ್ಗೊಳ್ಳುವ ಹಾಗೆ ಮಾಡಿತ್ತು. ನಮ್ಮ ಆಚರಣೆಗಳ ವೈಶಿಷ್ಟ್ಯವೇ ಅದು. ಅಲ್ಲಿ ಹಿರಿಕಿರಿಯರಾದಿಯಾಗಿ ಎಲ್ಲರಿಗೂ ಒಂದಿಲ್ಲೊಂದು ಪ್ರಮುಖ ಕೆಲಸ ಇದ್ದೆ ಇರುತ್ತದೆ. ಅವರಿಲ್ಲದೆ ಅದು ಅಪೂರ್ಣ ಅನ್ನಿಸೋ ಹಾಗೆ, ಬಂದವರಿಗೆ ತಾನೂ ಮುಖ್ಯ ಅನ್ನೋ ಫೀಲ್ ಕಾಡೋ ಹಾಗೆ. ಮಂತ್ರ ಹೇಳುತ್ತಾ ಅದರ ಅರ್ಥವನ್ನು ವಿವರಿಸುತಿದ್ದ ಪುರೋಹಿತರೂ ಸಹ ಅದರ ಮಹತ್ವ ತಿಳಿದುಕೊಳ್ಳುವ ಹಾಗೆ ಮಾಡಿ ಇನ್ನಷ್ಟು ಖುಷಿಯಿಂದ ಅದರಲ್ಲಿ ನಿಮಗ್ನರಾಗುವ ಹಾಗೆ ಮಾಡುತಿದ್ದರು.

ಮಾತು, ಕತೆ, ಹಾಸ್ಯ, ಕಾಲೆಳೆತ, ಕೆಲಸ, ಓಡಾಟ, ಸಮ್ಮಿಲನ ಯಾವುದಕ್ಕೂ ಕೊರತೆಯಾಗದಂತೆ, ಅಯ್ಯೋ ಇದು ಮಿಸ್ ಆಯ್ತಾ ಅನ್ನೋ ಭಾವ ಕಾಡದಂತೆ ನಾಲ್ಕೈದು ದಿನಗಳ ಕಾರ್ಯಕ್ರಮ ಸಾಂಗವಾಗಿ ನಡೆದು ಸಂತೃಪ್ತ ಭಾವ ನೆಲಸಿತ್ತು. ಎಲ್ಲಕ್ಕಿಂತ ಹೆಚ್ಚು ಆಕರ್ಷಿಸಿದ್ದು ಮಾತ್ರ ಆಂಟಿಯ ಶ್ರದ್ಧೆ, ಅವರ ಜೀವನೋತ್ಸಾಹ. ಪ್ರತಿ ಸಣ್ಣ ಕೆಲಸದಲ್ಲೂ ಅವರ ಅಚ್ಚುಕಟ್ಟುತನ, ತನ್ನನ್ನು ತಾನು ಪೂರ್ಣವಾಗಿ ತೊಡಗಿಸಿಕೊಂಡು ಶ್ರದ್ಧೆಯಿಂದ ಅದನ್ನು ಮಾಡುವ ಪರಿ, ಹೆಜ್ಜೆ ಹೆಜ್ಜೆಯಲ್ಲೂ ಚಿಮ್ಮುತಿದ್ದ ನಗು, ತನ್ನ ಸುತ್ತಲಿದ್ದವರನ್ನು ಆವರಿಸುತಿದ್ದ ಅವರ ಪ್ರೀತಿ.

ಒಂದು ವಾತಾವರಣ  ಸುತ್ತಲಿದ್ದವರನ್ನು ಹೇಗೂ ಬದಲಾಯಿಸಬಹುದು ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಕಂಡಿದ್ದು ಈ ಮದುವೆ ಮನೆ. ಬಂದ ಪ್ರತಿಯೊಬ್ಬರೂ ಅದೆಷ್ಟು ಉತ್ಸಾಹದಿಂದ ಪ್ರತಿ ಕ್ಷಣವನ್ನೂ ಶ್ರೀಮಂತಗೊಳಿಸುತ್ತಿದ್ದರು ಅಂದ್ರೆ ಅಯ್ಯೋ ಮದುವೆಮನೆ ಮುಗಿದೇ ಹೋಯ್ತಾ ಅನ್ನೋ ಬೇಜಾರು ಕಾಡುವಷ್ಟು. ಮದುವೆ ಮನೆಯೆಂದರೆ ಕೇವಲ ಎರಡು ಜೀವಗಳ ಸಮ್ಮಿಲನ ಅಲ್ಲ , ಎರಡು ಕುಟುಂಬಗಳ ಮಿಲನ ಅಲ್ಲ ಅದು ಬಂದ ಪ್ರತಿಯೊಬ್ಬರ ನಡುವಿನ ಸಂಬಂಧಗಳ ಬೆಸುಗೆ. ಯಾವುದೋ ಮುನಿಸಿನ, ಮತ್ಯಾವುದೋ ಬೇಜಾರಿನ ತೊಳೆಯುವಿಕೆ.

ಬದುಕಿನ ಪರದೆಯ ಮೇಲಿನ ಧೂಳನ್ನು ನವಿರಾಗಿ ಜಾಡಿಸಿ ಫಳಫಳಿಸುವ ಹಾಗೆ ಮಾಡುವ ಮಾಂತ್ರಿಕತೆ ಇದಕ್ಕೆ. ಬದುಕಿನಾಗಸದಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಮೂಡಿಸುವ ಜಾದುಗಾರ ಇದು. ಯಾಂತ್ರಿಕತೆಯನ್ನು ತೊಡೆದು ನವಿರಾದ ಭಾವದ ಮೊಳಕೆಯೊಡಿಸುವ ಮಾಯಾವಿ ಇದು. ಯಾವುದೋ ತಿರುವಿನಲ್ಲಿ ಕಂಗಾಲಾಗಿ ನಿಂತಾಗ ಪಕ್ಕನೆ ನೆನಪಾಗಿ ಸಣ್ಣದೊಂದು ನಗೆಯರಳುವ ಹಾಗೆ ಮಾಡಿ ಆ ನಿರಾಳತೆಯಲ್ಲಿ ಮುಂದೆ ನಡೆಯುವ ಕಸುವ ತುಂಬುವ ಶಕ್ತಿ ಇದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಮನುಷ್ಯರಾಗಿ ಮಾಡುವ, ಮನುಷ್ಯರಾಗೆ ಉಳಿಯುವ ಹಾಗೆ ಮಾಡುವ ದಿವ್ಯ ಸ್ಪರ್ಶ ಇದಕ್ಕಿದೆ.

ಮದುವೆಯೆಂದರೆ ಕೇವಲ ಎರಡು ಬದುಕುಗಳ ಅರಳುವಿಕೆ ಮಾತ್ರವಲ್ಲ.....
ಸಾಕ್ಷಿಯಾದ ಪ್ರತಿ ಬದುಕೂ ನಳನಳಿಸುವ ಹಾಗೆ ಮಾಡುವ ದಿವ್ಯಶಕ್ತಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...