ವಿಷಮ ಭಿನ್ನರಾಶಿ

"ಅಪಸ್ವರ ಅನ್ನೋದು ಬರೀ ಸಂಗೀತದಲ್ಲಿಯಷ್ಟೇ ಇರಲ್ಲ, ಬದುಕಲ್ಲೂ ಇರುತ್ತೆ."

ಇದೊಂದು ಕತೆಗಳ ಸಂಗ್ರಹ ಅನ್ನಿಸಲೇ ಇಲ್ಲಾ. ಎದುರಿಗೆ ಕೂತು ಆತ್ಮೀಯರೊಬ್ಬರು ಮಾತಾಡುತ್ತಿದ್ದಾರೆನೋ ಅನ್ನಿಸಿ ಗದ್ದಕ್ಕೆ ಕೈಕೊಟ್ಟು ಮೈಯೆಲ್ಲಾ ಕಿವಿಯಾಗಿ ಆಲಿಸುವ ಹಾಗಿನ ಭಾವವೊಂದು ಮೊದಲಿನಿಂದ ಕೊನೆಯವರೆಗೂ ಕಾಡಿತು. ಮಾತುಕತೆ ಎಂದರೆ ಕಡಲಿನಂತೆ. ಉಬ್ಬರ, ಇಳಿತ, ಭೋರ್ಗೆರೆತ, ಕಚಗುಳಿ, ನೇವರಿಕೆ, ಕಾಲಬೆರಳ ಸಂದಿನಿಂದ ಮರುಳು ಸರಿಯುವಂತೆ ಜಾರುವಿಕೆ, ತೊಯ್ಯುವಿಕೆ, ಅಂಟುವಿಕೆ. ಏನಿದೆ? ಏನಿಲ್ಲ? ಕಡಲನ್ನು ಅರಿತವರಾರು. ಹಾಗೆ ಮನಸ್ಸನ್ನು ತಿಳಿದವರಾರು..

ಹೇಳಿಕೊಳ್ಳುವುದು ಸುಲಭವಾ... ಉಹೂ ಅದರಷ್ಟು ಕಷ್ಟ ಇನ್ನೊಂದಿಲ್ಲ. ಯಾವುದನ್ನೂ ಮುಚ್ಚಿಡದೆ ನಿರ್ವಿಕಾರವಾಗಿ ಅಷ್ಟೇ ಸಹಜವಾಗಿ ಪ್ರಾಮಾಣಿಕವಾಗಿ ಹೇಳುವುದಕ್ಕೆ ಧೀ ಶಕ್ತಿ ಬೇಕು. ಯಾರು ಏನು ಅಂದು ಕೊಳ್ಳುತ್ತಾರೋ ಅನ್ನೋ ಅಂಜಿಕೆಯಲ್ಲಿ ಬಣ್ಣ ಹಚ್ಚುವುದನ್ನ ಬಿಟ್ಟು ಇದ್ದ ಹಾಗೆ ಹೇಳಬೇಕು. ಹಾಗೆ ಹೇಳುವಾಗ ದನಿಯಲ್ಲಿನ ಪ್ರಾಮಾಣಿಕತೆ ಎದುರಿನ ವ್ಯಕ್ತಿಯನ್ನು ತಾಗಬೇಕು. ಹಗುರಾಗಬೇಕೆ ವಿನಃ ಹೊಸತೊಂದು ಭಾರ ಕಟ್ಟಿ ಕೊಳ್ಳುವ ಹಾಗಿರಬಾರದು.

ಅಪಸ್ವರ ಅರ್ಥವಾಗೋಕೆ ಸಂಗೀತ ಗೊತ್ತಿರಲೇ ಬೇಕು ಅಂತೇನಿಲ್ಲ, ಮಗ್ನವಾಗಿ ಕಿವಿಗೊಟ್ಟು ಆಲಿಸಿದರೆ ಸಾಕಾಗುತ್ತದೆ. ಬದುಕಿನ ಸಂಗೀತದಲ್ಲೂ ಹಾಗೆಯೇ..ಧ್ಯಾನಿಸಿದರೆ, ಒಂಚೂರು ಏಕಾಗ್ರವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಶ್ರುತಿ ತಪ್ಪದ ಬದುಕು ಉಂಟೇ.. ಎಲ್ಲಿ ತಪ್ಪಿತು ಅಂತ ಅರ್ಥವಾದಾಗ ಮತ್ತೊಮ್ಮೆ ಎಚ್ಚರವಾಗಿರಬಹುದು, ತುಸು ಜಾಗ್ರತೆಯಲ್ಲಿ ಹಾಡಬಹುದು ಅಷ್ಟೇ. ಮತ್ತೊಬ್ಬರ ಅಪಸ್ವರ ಗುರುತಿಸಿದಷ್ಟೇ ನಮ್ಮ ಅಪಸ್ವರಗಳೂ ಕಿವಿಗೆ ಕೇಳಿದಾಗ, ಅರ್ಥವಾದಾಗ ಮಾತ್ರ ಬದುಕು ಮತ್ತೆ ಶ್ರುತಿಗೆ ಸೇರುತ್ತದೆ.

"ರಕ್ತ ಸಂಬಂಧವೆನ್ನುವುದು ಅಷ್ಟು ಸುಲಭವಾಗಿ ಕಡಿದುಕೊಳ್ಳುವಂತಹುದಲ್ಲ" ಅನ್ನುವ ಫಣಿರಾಜ ಬದುಕಿನ ಗತಿಗೆ ದಿಕ್ಸ್ಚೂಚಿಯಾಗುತ್ತಾನೆ. ಏನೇ ಅಸಮಾಧಾನ, ವೈಷಮ್ಯ, ಅಸಹನೆ ಇದ್ದರೂ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವೇ ಇಲ್ಲ. ಕಡಿದುಕೊಂಡೆವು ಅನ್ನೋದು ಭ್ರಮೆ ಅಷ್ಟೇ. ಗುಣ, ಸ್ವಭಾವ, ರೂಪ, ವರ್ತನೆಗಳಲ್ಲಿ ಹರಿದು ಬಂದು ವಂಶವಾಹಿನಿಯ ತಂತುಗಳನ್ನು ಕಳೆದುಕೊಳ್ಳುವುದಾದರೂ ಹೇಗೆ? ಒಂದು ಅಂತರವನ್ನು ಕಾಪಾಡಿಕೊಳ್ಳಬಹುದು ಅಷ್ಟೇ ಹೊರತು ನಿರಾಕರಿಸಲಾರೆವು. ನೀರಿಗಿಂತಲೂ ರಕ್ತ ಗಟ್ಟಿ ಅನ್ನೋದು ಅದಕ್ಕೆ ಏನೋ?

"ಸತ್ಯವನ್ನು ಬಚ್ಚಿಟ್ಟು ಸಂಬಂಧ ಶುರು ಮಾಡೋದು ಬೇಡಾ" ಎನ್ನುವ ಪರಿಮಳಳ ಮಾತು ಬದುಕು ಸರಾಗವಾಗಿ ಸಾಗಬೇಕಾದರೆ ತೆಗೆದುಕೊಳ್ಳುವ ಜಾಗ್ರತೆ ಹೇಗಿರಬೇಕು ಅನ್ನುವುದನ್ನ ಒಂದೇ ವಾಕ್ಯದಲ್ಲಿ ಹೇಳಿ ಬಿಡುತ್ತದೆ. ಮುಚ್ಚಿಟ್ಟು ಸರಾಗವಾಗಿ ವ್ಯವಹರಿಸಲಾರೆವು, ಅಳುಕು ಸದಾ ಜೊತೆಯಾಗಿರುವ ಸಂಬಂಧವನ್ನು ಹೆಚ್ಚು ದಿನ ಬಾಳಲಾರದು. ಒಂದು ಅಪನಂಬಿಕೆ, ಅನುಮಾನದ ತಂತು ಉಳಿದ ತಂತುಗಳನ್ನು ಅರಿವಿಲ್ಲದೆ ಸಡಿಲಗೊಳಿಸಿ ಬದುಕೆಂಬ ಬಟ್ಟೆಯನ್ನು ಜಾಳಾಗಿಸಿ ಬಿಡುತ್ತದೆ. ಬದುಕಿಗೆ ಕಾಟಿನ್ಯವಿಲ್ಲದೇ ಹೋದರೂ ಹರಿಯುವಿಕೆಗೆ ಗುರಿ ಇಲ್ಲದಂತಾಗುತ್ತದೆ.

"ಕಗ್ಗಂಟು ಬಿಡಿಸುವುದು ಅಂಥಹ ಸುಲಭದ ಕೆಲಸವೇನಲ್ಲ. ಅದಕ್ಕೊಂದು ಜಾಣತನ ಬೇಕು". ಯಾವ ಗಂಟು ಹೇಗೆ ಬಿಡಿಸಬೇಕು ಅನ್ನೋ ಲೆಕ್ಕಾಚಾರ ಸರಿಯಿರಬೇಕು. ಸಿಕ್ಕಾದರೂ ತಾಳ್ಮೆವಹಿಸಬೇಕು, ಪುನಃ ಪ್ರಯತ್ನಿಸುವ ಮನಸ್ಸು ಬೇಕು. ಒಂದೆರೆಡು ಗಂಟು ಬಿಚ್ಚುವರೆಗೆ ಸ್ವಲ್ಪ ಕಷ್ಟವೆನಿಸಿದರೂ ಆಮೇಲೆ ಅದೇ ಬಿಚ್ಚುವ ದಾರಿ ತೋರಿಸಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಗಂಟುಗಳನ್ನು ಕಳೆದುಕೊಂಡು ಸ್ವತಂತ್ರವಾಗುತ್ತದೆ. ಬದುಕಿನ ಗಂಟುಗಳು ಹಾಗೆ ಅಲ್ಲವಾ.... ಬದುಕಿನ ಮಿತಿಯನ್ನು ಮೀರಬೇಕು ನಿಜ ಹಾಗೆ ಮಿತಿಯನ್ನು ಮೀರುವಾಗ ನಿಯಮವನ್ನು ಮೀರಬಾರದು ಅನ್ನುವ ಅರಿವಿರಬೇಕು.

ಇಲ್ಲಿಯವರೆಗೆ ಒಂದು ತರಹ ಓದಿಸಿಕೊಂಡು ಹೋದ ಪುಸ್ತಕ ಎರಡನೇ ಭಾಗ ಛೇಧದಲ್ಲಿ ಹೆಸರಿಗೆ ತಕ್ಕ ಹಾಗೆ ಎದೆಯನ್ನು ಛೇಧಿಸುತ್ತಲೇ ಹೋಗುತ್ತದೆ. ಗೇ (ಪದ ಬಳಸಲು ಇಷ್ಟವಿಲ್ಲದಿದ್ದರೂ ಅದಕ್ಕೆ ಸಮಾನಾರ್ಥಕ ಪದ ಗೊತ್ತಿಲ್ಲದೇ ಇರುವುದರಿಂದ ಅದನ್ನೇ ಬಳಸುತ್ತಿದ್ದೇನೆ.) ಒಬ್ಬರ ತಲ್ಲಣ, ಅನುಭವಿಸು ಅವಮಾನ, ಒಂಟಿತನ, ಎದುರಿಸುವ ಕುಹಕ ನೋಟವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ನಮ್ಮ ಮಡಿವಂತಿಕೆಯ ಹೆಸರಿನಲ್ಲಿನ ಅಮಾನುವಿಯತೆಯನ್ನು ಬಿಡಿಸಿಟ್ಟು ಬೆತ್ತಲಾಗಿಸುತ್ತಾರೆ. ಬೆತ್ತಲು ಭಯ ಹುಟ್ಟಿಸುತ್ತದೆ. ಬಯಲಾದಾಗಲೇ ವಿಶಾಲತೆಯ ಅರಿವಾಗುವುದು ಅನ್ನುವ ಸತ್ಯ ಕಣ್ಣಿಗೆ ರಾಚಿದಾಗ ಭಯದ ಪರದೆಯ ಆಚೆ ಬೆಳಕು ಕಾಣುತ್ತದೆ. ವ್ಯಕ್ತಿಯನ್ನು ವ್ಯಕ್ತಿಯಾಗೆ ನೋಡಬೇಕು ಅನ್ನುವ ಭಾವವೊಂದು ಹುಟ್ಟಿ ಕಣ್ಣಿಗೆ ಹರಿದಿದ್ದ ಮಂಜು ಕರಗಿಸಿದೆ.

ಓದಿ ಕೆಳಗಿಟ್ಟಾಗ ಮೋಹನ ಸ್ವಾಮಿಯ ಪಕ್ಕ ಕೂತು ಅವನ ಕೈಯನ್ನು ಬೊಗಸೆಯಲ್ಲಿ ಹಿಡಿದು ಸುಮ್ಮನೇ ಕೂರಬೇಕಿನಿಸಿತು. ನನ್ನೊಳಗಿನ ಮಾನವೀಯತೆಯನ್ನು ಜೀವಂತಗೊಳಿಸಲು, ಮನುಷ್ಯಳಾಗೇ ಉಳಿಯಲು. ಎದುರಿಗಿರುವ ಜೀವಿಯನ್ನು ಇದ್ದ ಹಾಗೇ ನೋಡಲು.ಇರುವುದನ್ನ ಇದ್ದ ಹಾಗೆ ನೋಡುವುದು ಬಿಟ್ಟು ಅದೆಷ್ಟು ವಿಶೇಷಣಗಳ, ಪೂರ್ವಾಗ್ರಹಗಳ  ಕನ್ನಡಕ ಧರಿಸುತ್ತೇವೆ ಅನ್ನೋದು ಅರ್ಥವಾಗಬೇಕಾದರೆ ವಿಷಮ ಭಿನ್ನರಾಶಿಯನ್ನು ಓದಲೇ ಬೇಕು.






Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...