ಅಡಿಕೆ ಹಾಳೆ

ನಾಳೆ ಬೆಳಿಗ್ಗೆ ಇಬ್ರು ಜನ ಬರ್ತಾರೆ ಬೇಗ ತಿಂಡಿ ಕಾಫಿ ಮಾಡಿಕೊಡು, ಹಾಳೆಹೊರೆ ಕಟ್ಟಲು ಹೋಗಬೇಕು ಅನ್ನೋ ಧ್ವನಿ ಕಿವಿಗೆ ಬಿದ್ದರೆ ಬೆಳಗಾಗುವುದನ್ನೇ ಕಾಯುವ ತವಕ. ಕಾಡಿನ ತಪ್ಪಲಲ್ಲಿ ಇದ್ದ ತೋಟಕ್ಕೆ ಹೋಗುವುದು ಖುಷಿ ಕೊಟ್ಟರೆ ಅದಕ್ಕಿಂತ ಸಂಭ್ರಮ ಅಂದರೆ ಹೋದಾಗ ಆರಿಸಿ ಒಂದು ನಾಲ್ಕು ಹಾಳೆ ತಂದು ಕೊಟ್ಟರೆ ಒಂದು ವಾರ ನೆಮ್ಮದಿಯಾಗಿ ಆಡಬಹುದು ಅನ್ನೋ ಲೆಕ್ಕಾಚಾರ.

ವರಾಹಿಯ ಮಡಿಲಲ್ಲಿ ಇದ್ದ ಸಂಪಗೋಡು ಎಂಬ ಊರಿನಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮನೆಗಳಾದರೂ ಮಕ್ಕಳು ಹಾಗೂ ಆಡಲೆಂದು ಇದ್ದ ಆಟಗಳು ಬಹಳಷ್ಟು. ಅದರಲ್ಲಿ ಮುಖ್ಯವಾದದ್ದು ಈ ಹಾಳೆ ಎಳೆಯೋ ಆಟ. ತೋಟದಿಂದ ತಂದ ಅಗಲವಾದ ಹಸಿ ಹಾಳೆಯ ಮೇಲೆ ಒಬ್ಬರು ಕುಳಿತರೆ ಅದರ ಸೋಗೆಯನ್ನು ಹಿಡಿದು ಇನ್ನೊಬ್ಬರು ಎಳೆಯ ಬೇಕು. ಕುಳಿತಿರುವವರ ಭಾರದ ಅನುಪಾತಕ್ಕೆ ತಕ್ಕಂತೆ ಎಳೆಯುವವರ ಸಂಖ್ಯೆ ನಿರ್ಧಾರವಾಗುತ್ತಿತ್ತು. ಹಾಗೆ ಎಳೆದುಕೊಂಡು ಹೋಗುತಿದ್ದರೆ ಕುಳಿತವರ ಮುಖದಲ್ಲಿ ರಾಜ ಗಾಂಭೀರ್ಯ. ಯಾವ ರಾಜನ ಆನೆಯ ಮೇಲಿನ ಅಂಬಾರಿಯ ಸವಾರಿಗೆ ಕಡಿಮೆಯಿತ್ತು ಆ ಮೆರವಣಿಗೆ. ತಮ್ಮ ಸರದಿಗಾಗಿ ಹಿಂಬಾಲಿಸುತ್ತಾ ಬರುವವರು ರಾಜ ಪರಿವಾರದಂತೆ ಭಾಸವಾಗಿ ಇನ್ನಷ್ಟು ಉಬ್ಬಿ ಗಟ್ಟಿಯಾಗಿ ಹಿಡಿದುಕೊಂಡು ಕೂರುತ್ತಿದ್ದೆವು.

ತೆಂಗಿನ ಮರದಷ್ಟೇ ಅಡಿಕೆಯ ಮರವೂ ಉಪಯೋಗವೇ. ಅದ್ಯಾಕೆ ಕೇವಲ ತೆಂಗಿನ ಮರವನ್ನು ಮಾತ್ರ ಕಲ್ಪವೃಕ್ಷ ಅಂತಾರೋ ಅಂತ ಸಿಟ್ಟಿಗೇಳುವ ಕಾಲವೂ ಒಂದಿತ್ತು. ಮತ್ತು ಅದಕ್ಕೆ ನಮ್ಮದೇ ಆದ ಸಮರ್ಥನೆಗಳೂ ಸಾಕಷ್ಟಿದ್ದವು. ಎತ್ತರದಲ್ಲಿ ತೆಂಗಿನ ಮರಕ್ಕೆ ಸಮ ಸಮವಾಗಿ ಬೆಳೆಯುತಿದ್ದ ಅಡಿಕೆ ಮರವೂ ಎತ್ತರದಲ್ಲಿ ಕೊನೆಯನ್ನು ಬಿಟ್ಟು ಸಾಹಸಿಗಳಿಗೆ ಮಾತ್ರ ಅಂತ ಸವಾಲು ಹಾಕುತಿತ್ತು. ಕೊನೆ ತೆಗೆಯುವುದು ಒಂದು ಸಾಹಸವೇ ಬಿಡಿ. ಅದರಲ್ಲೂ ತೆಂಗಿನ ಮರಕ್ಕಿಂತ ಸ್ವಲ್ಪ ತೆಳುವಾದ ಮೈಯುಳ್ಳ ಈ ಮರ ಗಾಳಿಗೆ ತೊಯ್ಯುವಾಗ ಮೇಲೆ ಕುಳಿತು ಒಂದು ಕೈಯಲ್ಲಿ  ಬ್ಯಾಲೆನ್ಸ್ ಮಾಡುತ್ತಾ ಇನ್ನೊಂದು ಕೈಯಲ್ಲಿ ದೋಟಿ ಹಿಡಿದು ಕೊನೆ ತೆಗೆಯುವುದು ಅಷ್ಟು ಸುಲಭವಲ್ಲ. ಒಲಂಪಿಕ್ ಸ್ಪರ್ದೆಯಲ್ಲಿ ಈ ಕೊನೆ ತೆಗೆಯೋದು ಒಂದು ಸ್ಪರ್ಧೆ ಇರಬೇಕಿತ್ತು ನೋಡು ಅಂತ ತಿಪ್ಪ ಹೇಳುವಾಗ ಹೌದಲ್ಲಾ ಅನ್ನಿಸುತಿತ್ತು.  ಮೈಕೈ ತುರಿಸಿಕೊಳ್ಳಲು ಸಮಯ ಕೊಡದ ಅಡಿಕೆ ಕುಯ್ಲು ಸಮಯದ ಬಗ್ಗೆ ಬರೆದರೆ ಅದೊಂದು ಕಾದಂಬರಿಯೇ ಆಗಬಹುದಾದಷ್ಟು ಸರಕು. ಇಂಥ ಯಾವ ಒಂದು ಸಂಭ್ರಮ ಯಾವ  ತೆಂಗಿನ ಮರ ಕೊಡುತ್ತೆ ಅಂತ ನಮ್ಮಲ್ಲಿ ಮಾತಾಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು.

ತೋಟವೆಂದರೆ ಕೇವಲ ಒಬ್ಬರ ತೋಟ ಮಾತ್ರ ಇರುತ್ತಿರಲಿಲ್ಲ. ಅದೊಂದು ಕೋಗಿನಲ್ಲಿ ಊರಿನ ಎಲ್ಲರ ತೋಟವೂ ಇರುತಿತ್ತು. ಅದ್ಹೇಗೆ ಇಲ್ಲಿಂದ ನಮ್ಮ ತೋಟ ಅಂತ ಹೇಳ್ತಾರೋ ಅಂತ ಚಿಕ್ಕಂದಿನಲ್ಲಿ ಯಾವಾಗಲೂ ಕಾಡುವ ಗೊಂದಲ. ನಮಗೆ ಅದರ ಹಂಗಿಲ್ಲದೆ ಎಲ್ಲಿ ಬೇಕೋ ಅಲ್ಲಿ ತಿರುಗಿ ಏನು ಬೇಕು ಅದನ್ನು ತೆಗೆದುಕೊಂಡು ಬರುವುದು ಅಭ್ಯಾಸವಾಗಿತ್ತು. ಸಹಜವೂ ಆಗಿತ್ತು. ಮಕ್ಕಳಿಗೆ ಗಡಿಯ ಹಂಗೇಕೆ? ಇಂಥ ತೋಟದಲ್ಲಿ ಬೆಳೆದು ಹಳದಿಯಾದ ಮೇಲೆ ಉದುರುವ ಎಲೆಗಳಂತೆ  ಅಡಿಕೆಯ ಎಲೆಯೂ ಉದುರುತಿತ್ತು. ಇಷ್ಟುದ್ದದ್ದ ಅದರ ಬುಡದಲ್ಲಿ ಅಗಲವಾದ ಹಾಳೆಯೂ ಇರುತ್ತದೆ. ಅದನ್ನು ಸೋಗೆ ಎನ್ನುತ್ತಾರೆ.

ಬೀಳುವ ಸೋಗೆಯದ್ದು ಇನ್ನೊಂದು ಕತೆ. ಪಟ್ಟೆ ಪಟ್ಟೆ ತಿರುಗಿ ಅದನ್ನು ಹೆರಕಿ ಒಂದು ಕಡೆ ಅಟ್ಟಣಿಗೆ ಹಾಕುವಾಗ ಕೋಪ ಬಂದರೂ ಅದನ್ನು ಕಡಿದು ಹೊರೆ ಮಾಡಿ ತಂದು ಕೊಟ್ಟಿಗೆಗೆ ಹೊದಿಸುವಾಗ ಮಾತ್ರ ಸಂಭ್ರಮ. ಹಂಚು ಬರುವವರೆಗೂ ತಲೆಗೆ ಸೂರಾಗಿ ರಕ್ಷಣೆ ಕೊಟ್ಟಿದ್ದು ಇದೆ ಸೋಗೆಯೇ ಅಲ್ಲವೇ. ಬೇಸಿಗೆಯಲ್ಲಿ ಗಾಳಿ ಚಲಿಸಲು ಸಣ್ಣಗಿನ ದಾರಿ ಮಾಡಿಕೊಟ್ಟು, ಚಳಿಗಾಲದಲ್ಲಿ ಬೆಚ್ಚಗೆ ಮಾಡುತಿದ್ದ ಸೋಗೆಯ ಮಾಡು ನ್ಯಾಚುರಲ್ ಹವಾನಿಯಂತ್ರಿತ. ಉಳಿದರೆ ಮಳೆಗಾಲದ ಹನಿಯ ಇರುಚಲು  ಗೋಡೆಯನ್ನು ಒದ್ದೆಯಾಗಿಸದಂತೆ ತಡೆಗೋಡೆಯಾಗಿ ಮನೆಯ ಮುಂದೆ ತಟ್ಟಿಕೆಯಾಗಿ ನಿಲ್ಲುತ್ತಿತ್ತು. ಇಡೀ ಮಳೆಗಾಲ ಮನೆಯನ್ನು ಕಾಯುತ್ತಿತ್ತು. ಥಂಡಿ ಜಾಸ್ತಿಯಾಗದಂತೆ ರಕ್ಷಣೆ ಕೊಡುತ್ತಿತ್ತು. ಹೊಚ್ಚಿದ ಸೋಗೆಯ ಒಳಗೆ ಒಂದು ಬೆಚ್ಚನೆಯ ಕಾವು ಇರುತಿತ್ತು. ಹಾಗಾಗಿ ಮಾಡಿನಲ್ಲಿ ಹಾವು, ಹುಳ ಹುಪ್ಪಟೆಗಳೂ ಇರುತ್ತಿದ್ದವು. ಮನುಷ್ಯ, ಪ್ರಾಣಿ, ಪಕ್ಷಿ, ಕೀಟ ಎನ್ನದೆ ಎಲ್ಲರನ್ನೂ ಸಮಾನವಾಗಿ ರಕ್ಷಣೆ ಕೊಡುತ್ತಿದ್ದ ಸೋಗೆ ಮಾತ್ರ ಮಳೆ, ಬಿಸಿಲು, ಚಳಿ ಗಾಳಿಗೆ ಮೈಯೊಡ್ಡಿ ನಿಲ್ಲುತ್ತಿತ್ತು.

ಇನ್ನು ಬಿದ್ದ  ವಯಸ್ಸಾದ ಅಡಿಕೆ ಮರಗಳನ್ನು ಕಡಿದು, ಸೀಳಿ ದಬ್ಬೆಯನ್ನಾಗಿಸಿ ಮನೆಯ, ಕೊಟ್ಟಿಗೆಯ ಮಾಡು ಮಾಡಿದರೆ, ಗಟ್ಟಿಯಾದ ರೌಂಡ್ ಆಗಿರೋ ಮರಗಳು ಅದರ ಭಾರವನ್ನು ಸುತ್ತಲೂ ನಿಂತು ಹೊರುತಿದ್ದವು. ಉಳಿದ ದಬ್ಬೆಗಳು ಮಳೆಗಾಲ ಮುಗಿಯುತಿದ್ದಂತೆ ಚಳಿಯನ್ನು ಕಳೆದುಕೊಳ್ಳಲು ಶಿಸ್ತಾಗಿ ಜೋಡಿಸಿಕೊಂಡು ಚಪ್ಪರವಾಗಿ ಬಿಸಿಲು ಕಾಯಿಸುತ್ತಿದ್ದವು. ತಮ್ಮ ಮಡಿಲಲ್ಲಿ ಅಡಿಕೆ, ಮೆಣಸು, ಸೀಗೆ, ಅಂಟುವಾಳ ಹೀಗೆ ನೂರಾರು ವಸ್ತುಗಳಿಗೆ ಒಣಗಲು ಅನುವು ಮಾಡಿಕೊಡುತ್ತಿತ್ತು. ಬೇಸಿಗೆಯಲ್ಲಿ ಅಂಗಳ ಕಾಯದಂತೆ ಒಳಗೆ ಧಗೆ ತಟ್ಟದಂತೆ ಕಾಪಾಡುತಿತ್ತು. ಮಳೆಗಾಲ ಶುರುವಾಗುವ ಮುನ್ನ ಇಳಿದು ಒಂದು ಕಡೆ ಹೋಗಿ ಸೋಗೆಯ ಹೊದ್ದಿಕೆಯನ್ನು ಹೊದ್ದು ಮಳೆಗಾಲ ಮುಗಿಯುವವರೆಗೆ  ಬೆಚ್ಚಗೆ ಮಲಗಿ ಬಿಡುತ್ತಿದ್ದವು.

ಸೋಗೆಯದ್ದು ಈ ಕತೆಯಾದರೆ ಹಾಳೆಯದ್ದು ಮತ್ತೊಂದು ಕತೆ. ಹಸಿಯಾದ, ಅಗಲವಾದ ಒಳ್ಳೆಯ ಹಾಳೆಯನ್ನು ಆರಿಸಿ ಹಾಳೆಟೊಪ್ಪಿ ಮಾಡಲು ಉಪಯೋಗಿಸುತಿದ್ದರು. ಕಿರೀಟದಂತೆ ತಲೆಯನ್ನು ಅಲಂಕರಿಸುತ್ತಿದ್ದ ಅದು ತನ್ನ ಮೇಲೆ ಬಿದ್ದ ಎಷ್ಟೇ ಭಾರವನ್ನಾದರೂ ಹೊರುತಿತ್ತು. ಬಿಸಿಲಿಗೆ ರಕ್ಷಣೆಯಾಗಿ, ಹೊರುವ ಭಾರದಿಂದ ತಲೆಗೆ ರಕ್ಷಣೆಯಾಗಿ ಎಲ್ಲಕ್ಕಿಂತ ಹೆಚ್ಚು ಮಲೆನಾಡಿಗರ ಬದುಕಿನ ಅವಿಭಾಜ್ಯ ಅಂಗವಾಗಿ, ಹೆಮ್ಮೆಯ ಪ್ರತೀಕವಾಗಿ ತಲೆಯ ಮೇಲೆ ಮೆರೆಯುತಿತ್ತು. ರಾಜನಂತೆ ಬೀಗುತ್ತಿತ್ತು. ಕೈಯಲ್ಲೊಂದು ಕತ್ತಿ ಹಿಡಿದು, ತಲೆಗೊಂದು ಹಾಳೆ ಟೊಪ್ಪಿ ಧರಿಸಿ ಹೊರಟ ಯಾರನ್ನು ಹಿಡಿದು  ನಿಲ್ಲಿಸಲು ಸಾಧ್ಯವಿತ್ತು ಮಲೆನಾಡಿನಲ್ಲಿ.

ಇಲ್ಲೊಂದೆರೆಡು ಹಾಳೆ ನೋಡಿ ಹಾಕು ಅಂತ ಅಜ್ಜಿ ಕತ್ತಿ ಹಿಡಿದು ಬರುತ್ತಿದ್ದಳು. ಆಚೀಚೆ ತುದಿಯನ್ನು ಕೊಯ್ದು ಮಟ್ಟಸವಾಗಿ ಆಯತಾಕಾರದ ಹಾಳೆಗಳನ್ನು ಕತ್ತರಿಸಿ ಜೋಡಿಸಿ ಒಂದು ಕಡೆಯಿಟ್ಟರೆ ಇನ್ನೊಂದು ಆರು ತಿಂಗಳು ಅಂಗಳ, ಅಡುಗೆ ಮನೆ, ಕೊಟ್ಟಿಗೆ ಬಳಿಯಲು ನಿಶ್ಚಿಂತೆ. ಸಗಣಿ ಹಾಕಿ ಅಂಗಳ ಸಾರಿಸಿದರೆ ಅದೆಷ್ಟು ಸ್ವಚ್ಚವಾಗಿ ಕಂಗೊಳಿಸುತ್ತಿತ್ತು ಅದು. ಹಿತ್ತಲಿನ ಬಾಗಿಲಿನ ಬದಿಯಲ್ಲಿ ಒಂದು ಮುದ್ದೆ ಸಗಣಿ ಅದರ ಪಕ್ಕದಲ್ಲಿ ಬಳಿಯುವ ಹಾಳೆ ಇಲ್ಲದ ಯಾವ ಮನೆಯಿತ್ತು ಊರಲ್ಲಿ. ಇನ್ನು ಕೆಲವು ಮರೆಮಾಡಲು ಪಕ್ಕದಲ್ಲಿ ಆಯ್ದು, ಉಳಿದವನ್ನು ಹೊರೆ ಮಾಡಿ ಒಲೆಗೆ ಹಾಕಲು  ಇಡುತಿದ್ದರೆ ಇದರ ಮಧ್ಯದಲ್ಲಿ ಹೋಗಿ ಒಂದಷ್ಟು ಹಾಳೆಯನ್ನು ಆರಿಸಿ ಕೊಟ್ಟಿಗೆಯ ಮೂಲೆಯಲ್ಲಿ ಬಚ್ಚಿಡುತಿದ್ದೆವು. ಅದು ನಮ್ಮ ಆಟದ ಸಂಪತ್ತು.

ಮಧ್ಯಾನದ ಊಟ ಮುಗಿಸಿ ಎಲ್ಲರೂ ನಿದ್ದೆ ಹೋಗುತ್ತಿದ್ದರೆ ಸದ್ದಿಲ್ಲದೇ ಎದ್ದು ಹೋಗುತಿದ್ದ ನಾವು ಬಚ್ಚಿಟ್ಟಿದ್ದ ಹಾಳೆಯನ್ನು ತೆಗೆದುಕೊಂಡು ಕಣಕ್ಕೋ ಇಲ್ಲಾ ರಸ್ತೆಗೋ ಹೋಗುತಿದ್ದೆವು. ಅಲ್ಲಿ ನಡೆಯುತ್ತಿದ್ದದ್ದೆ ನಮ್ಮ ಶಕ್ತಿ ಪ್ರದರ್ಶನ. ಹಾಳೆಯಲ್ಲಿ ಕೂತವರನ್ನು ಎಷ್ಟು ವೇಗವಾಗಿ ಎಷ್ಟು ದೂರದವರೆಗೂ ಎಳೆದುಕೊಂಡು ಹೋಗುತ್ತೀವಿ ಅನ್ನುವುದರ ಮೇಲೆ ನಮ್ಮ ಶೌರ್ಯದ ನಿರ್ಧಾರವಾಗುತ್ತಿತ್ತು. ಹಾಗೆ ಎಳೆಯುವಾಗ ಹೇಗೆ ಕೂರ್ತಾರೆ ಅನ್ನೋದು ಜಾಣ್ಮೆಯನ್ನ ಪರಿಚಯಿಸುತಿತ್ತು. ಚಟ್ಟೆಮುಟ್ಟೆ ಹಾಕಿ ಸೋಗೆಯನ್ನು ಭದ್ರವಾಗಿ ಹಿಡಿದು ಕುಳಿತರೆ ಎಳೆಯುವ ರಭಸಕ್ಕೆ ಕಲ್ಲು ಮಣ್ಣುಗಳ ಚುಂಬನಕ್ಕೆ ತುತ್ತಾದ ಹಾಳೆ ಹರಿದು ಜೊತೆಗೂ ಬಟ್ಟೆಯೂ ಹರಿದು ಪರಚಿಕೊಂಡ  ಮೈ ಕೈ  ಮೇಲೆಲ್ಲಾ ಇಳೆಯ ಪ್ರೀತಿಯ ಕುರುಹು ಮೂಡುತ್ತಿತ್ತು, ಕೆಲವೊಮ್ಮೆ ರಕ್ತಾಭಿಷೇಕವೂ ಸಾಂಗವಾಗಿ ನಡೆಯುತ್ತಿತ್ತು.

ಬಿದ್ದೋ, ಇಲ್ಲಾ ಸುಸ್ತಾಗಿಯೋ ನಾನು ನಾಳೆ ಎಳಿತೀನಿ ಅಂದ್ರೆ ಸಾಕಿತ್ತು ಮೂರನೆಯ ಮಹಾಯುದ್ಧದ ಘೋಷಣೆಯಾಗಲು. ಕಷ್ಟವೋ ಸುಖವೋ ಒಮ್ಮೆ ಸವಾರಿ ಮಾಡಿದ ಮೇಲೆ ಇನ್ನೊಮ್ಮೆ ಚಾಲಕನಾಗಲೇ ಬೇಕಿತ್ತು. ಕೆಲವೊಮ್ಮೆ ಒಬ್ಬರು ಇಬ್ಬರು ಮೂವರು ಸೇರಿ ಎಳೆಯುವುದು ಇತ್ತು. ಜೋರಾಗಿ ಹೋಗಬೇಕು ಅಂದರೆ ಜನ ಜಾಸ್ತಿ ಬೇಕು ಎಳೆಯಲು. ಟಿ.ವಿ. ಮೊಬೈಲ್ ಹೋಗಲಿ ಕರೆಂಟ್ ಕೂಡಾ ಇಲ್ಲದ ಆ ಊರಿನಲ್ಲಿ ಹೀಗೆ ಬಯಲಿಗೆ ಬಂದು ಆಡುವುದು ಬಿಟ್ಟು ಇನ್ಯಾವ ಆಕರ್ಷಣೆಗಳೂ ಇರಲಿಲ್ಲ.  ಅದರಲ್ಲೂ ಉಬ್ಬಿನಲ್ಲಿ ಕೂರಿಸಿ ಕೆಳಕ್ಕೆ  ಎಳೆದು ಕೊಂಡು ಓಡುವಾಗ ಚಾಲಕ, ಪ್ರಯಾಣಿಕ ಇಬ್ಬರೂ ಆಯತಪ್ಪಿ  ಉರುಳಿ ಹಾಳೆಗಿಂತ ವೇಗವಾಗಿ ಕೆಳಗೆ ಸೇರುವ ಪ್ರಮೆಯಗಳೂ ಸಾಕಷ್ಟು ಇರುತಿದ್ದವು. ನೋವಿನಲ್ಲಿ ನಗು, ನಗುವಿನಲ್ಲಿ ಅಳು ಎಲ್ಲವನ್ನೂ ಒಂದೇ ಆಟ ಅದೆಷ್ಟು ಚೆಂದವಾಗಿ ಕಲಿಸುತಿತ್ತು ಅನ್ನೋದು ನೆನಪಿಸಿಕೊಂಡಾಗಲೆಲ್ಲ ಈಗಲೂ ಸಣ್ಣ ನಗುವೊಂದು ಸಣ್ಣಗೆ ಅರಳುತ್ತದೆ.

ಅದೆಷ್ಟೇ ಬಿದ್ದರೂ, ಗಾಯ ಮಾಡಿಕೊಂಡರೂ ಆ ಆಟ ಮಾತ್ರ ನಮ್ಮ ಪ್ರಯಾರಿಟಿಯ ಮೊದಲ ಸ್ಥಾನವನ್ನು ಕೊನೆಯವರೆಗೂ ಉಳಿಸಿಕೊಂಡಿತ್ತು. ಗುಂಡಯ್ಯನ ಮನೆಯ ಏರಿನಿಂದ ಅಶ್ವತ್ಥ ಮರದ ಬುಡದವರೆಗಿನ ರಸ್ತೆ ನಮ್ಮ ರೇಸ್ ನ ಜಾಗವಾಗಿತ್ತು. ಒಂದು ಕ್ರಿಕೆಟ್ ಟೀಂ ಮಾಡಬಹುದಾಗಿದಷ್ಟು ಮಕ್ಕಳಿದ್ದ ನಮಗೆ ಇಡೀ ಊರೇ ಆಟದ ಮೈದಾನವಾಗಿತ್ತು. ಅಲ್ಲೊಂದು ಇಲ್ಲೊಂದು ಸೈಕಲ್ ಇದ್ದ ಮನೆಗಳು ಆದ್ದರಿಂದ ಅಲ್ಲಿನ ರಸ್ತೆಗಳು ಯಾವ ವಾಹನವನ್ನೂ ಇನ್ನೂ ಕಾಣದ್ದರಿಂದ ಯಾವ ಹೆದರಿಕೆಯೂ ಇಲ್ಲದೆ ಆಡುತ್ತಿದ್ದೆವು. ಎಷ್ಟು ಆಡಿದರೂ ಬೋರ್ ಹೊಡೆಸದ ಮತ್ತೆ ಮತ್ತೆ ಸೆಳೆಯುತಿದ್ದ ಆ ಆಟ ಒಂದು ರೀತಿಯ ಗರಡಿಮನೆಯ ಕಸರತ್ತಿನಂತೆ ದೈಹಿಕವಾಗಿ ಬಲವಾಗಲು ಸಹಾಯ ಮಾಡುತಿತ್ತು. ತೋಟದಲ್ಲಿ ಸಾಕಷ್ಟು ಬೀಳುತಿದ್ದ ಹಾಳೆ ಯಾವತ್ತೂ ಖಾಲಿಯಾಯ್ತು ಅನ್ನೋ ಭಾವನೆ ಕಾಡದ ಹಾಗೆ ಕಾಯುತ್ತಿತ್ತು.

ಸಂಪಗೋಡಿನಂತೆ ವರಾಹಿಯಲ್ಲಿ ಮುಳುಗಿ ಹೋಗಿದ್ದ ಇದು ಊರು ಬಿಟ್ಟ ಬಂದ ಮೇಲೆ ಮರೆತೂ ಹೋಗಿತ್ತು. ಒಟ್ಟಾಗಿ ಬೆಳೆದವರು ಒಂದೊಂದು ದಿಕ್ಕಿಗೆ ಹೋದಮೆಲಂತೂ ಆಡಲು ಯಾರೂ ಜೊತೆಯಿಲ್ಲದೆ ನೆನಪಾಗಲು ಹೇಗೆ ಸಾಧ್ಯ. ನೆನಪಾದರೂ ಸಂಪಗೋಡಿನ ನೆನಪು ಹಿಂದಕ್ಕೆ ಜಗ್ಗುತಿತ್ತು. ಮತ್ತೆ  ನೆನಪಾಗಿದ್ದು ಇಶಾನ್ ನ ಈ ಫೋಟೋ ನೋಡಿದಾಗ. ದೇಸಿಯ ಆಟಗಳು ನಮ್ಮನ್ನು ಪ್ರಕೃತಿಯ ಜೊತೆ ಜೊತೆಗೆ ಬೆಳೆಯುವ ಹಾಗೆ ಮಾಡುತಿದ್ದವು. ಒಂದಾಗಿ ಬೆಳೆಯುವುದು, ಜೊತೆಗೂಡಿ ಆಡುವುದು ಅದೆಷ್ಟು ಸಹಜವಾಗಿ ಬದುಕಿನಲ್ಲಿ ಮಿಳಿತವಾಗುತಿತ್ತು ಅನ್ನೋದನ್ನ ಯೋಚಿಸಿದಾಗ ಮೊಬೈಲ್ ಹಿಡಿದು ಆಡುವ ಮಕ್ಕಳ ಬಗ್ಗೆ ಕನಿಕರ ಹುಟ್ಟುತ್ತದೆ. ಅದನ್ನು ಕಿತ್ತುಕೊಂಡ ನಮ್ಮ ಬಗ್ಗೆ ಸಿಡಿಮಿಡಿ ಹೊಗೆಯಾಡುತ್ತದೆ.

ಬಂಧನದಿಂದ ಬಯಲಿಗೆ ಬರುವುದು ಅಷ್ಟು ಸುಲಭವೇ....




Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...