ಮೃಗವಧೆ



ಊರಿಗೆ ಕಾಲಿಡುತ್ತಿದ್ದಂತೆ ಕೈ ಬೀಸಿ ಕರೆಯೋದು ದೇವಸ್ಥಾನ. ಹಗ್ಗ ಕಳಚಿದ ಕರುವಿನ ಹಾಗೆ ಮನಸ್ಸು ಧಾವಿಸುತ್ತದೆ. ಕಣ್ಣು ಗಡಿಯಾರದ ಕಡೆಗೆ ಹೊರಳುತ್ತದೆ. ಅಲ್ಲಿಗೆ ಹೋಗಲು ಸಮಯವೂ ಮುಖ್ಯ. ಬೆಳಿಗ್ಗೆ ಇಲ್ಲಾ ಸಂಜೆ ಹೋದರೆ ನಿಶಬ್ಧದಲ್ಲಿ ತಣ್ಣಗೆ ಕುಳಿತಿರುವ ಅಪ್ಪ ಮಗ ಇಬ್ಬರ ಜೊತೆಯೂ ನೆಮ್ಮದಿಯ ಮಾತುಕತೆ ಹೊತ್ತಿನ ಪರಿವೆಯಿಲ್ಲದೆ ನಡೆಸಬಹುದು. ಹನ್ನೊಂದರ ನಂತರ ವಿಪರಿತ ಬ್ಯುಸಿ ಆಗುವ ಅವರು ಕೆಲವೊಮ್ಮೆ ನೋಡಲು ಸಿಗೋದು ಕಷ್ಟವೇ. ಸೋಮವಾರ, ಶನಿವಾರ, ಹಬ್ಬ ಹರಿದಿನಗಳೆಂದರೆ ಮುಗಿದೇ ಹೋಯ್ತು ಜನಜಂಗುಳಿಯ ನಡುವೆ ಅವನ ದರ್ಶನ ಅಲಭ್ಯ. ಉತ್ತಮವಾದದ್ದು ತಮಗಷ್ಟೇ ಸಿಗಬೇಕು ಅನ್ನೋದು ಮನುಷ್ಯ ಸಹಜಗುಣ ಹಾಗಾಗಿ ಅಡ್ಡಡ್ಡೆಲಾಗಿ ನಿಂತು ನೋಡುವ ಭರದಲ್ಲಿ ಉಳಿದವರಿಗೆ ಕಾಣುವುದಾದರೂ ಹೇಗೆ?
ಆವರಣದೊಳಗೆ ಕಾಲಿಡುತ್ತಿದ್ದಂತೆ ಒಮ್ಮಿಂದೊಮ್ಮಿಗೆ ಇಷ್ಟಿಷ್ಟೇ ಆವರಿಸುವ ನಿರಾಳ ಭಾವ ಮೆಟ್ಟಿಲಿಳಿದು ಬ್ರಾಹ್ಮೀ ಹತ್ತಿರವಾಗುತ್ತಿದ್ದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಹರಿವಿದ್ದರೆ ಬ್ರಾಹ್ಮಿಯದು ತಂಪಿನ ಒಡಲು. ಒಂದಿಷ್ಟು ನೀರು ಬೊಗಸೆಯಲ್ಲಿ ಎತ್ತಿಕೊಂಡು ಹಾಗೆ ಮುಖಕ್ಕೆ ತೋಕಿಕೊಂಡರೆ ಅವಳ ತಂಪು ನಿದಾನಕ್ಕೆ ಮೈಯೊಳಗೆ ಇಳಿಯುವುದು ಅನುಭವವಾಗುತ್ತದೆ. ಸದ್ದಿಲ್ಲದೇ ಹರಿಯುವ ಅವಳು ಒದ್ದೆಯಾಗಿಸುತ್ತಾ ಹೊಸ ಚಿಗುರಿಗೆ ಮುನ್ನುಡಿ ಬರೆಯುತ್ತಾ ಹರಿಯುತ್ತಾಳೆ. ಮೊನ್ನೆಯಷ್ಟೇ ಬಿದ್ದ ಮಳೆಯಿಂದಾಗಿ ಪಂಪ್ ಸೆಟ್ ಗಳಿಗೆ ವಿಶ್ರಾಂತಿ ದೊರಕಿತ್ತು. ಅವುಗಳ ವಿಶ್ರಾಂತಿಯಿಂದಾಗಿ ಅವುಗಳ ರಕ್ಕಸ ದಾಹದಿಂದ ಬ್ರಾಹ್ಮಿಗೂ ಮುಕ್ತಿ ದೊರಕಿದ್ದರಿಂದ ಅವಳು ನೆಮ್ಮದಿಯಾಗಿ ಜುಳುಜುಳು ಹಾಡುತ್ತಾ ಹರಿಯುತ್ತಿದ್ದಳು.

ಶಿವ ಅಭಿಷೇಕ ಪ್ರಿಯ. ನೀವೆಷ್ಟೇ ನೀರು ಸುರಿದರೂ ಇನ್ನೊಂದ್ ಚೂರು ಕೊಟ್ಟಿದ್ರೆ ಅಂತ ಚಾಕೊಲೇಟ್ ಗಾಗಿ ಆಸೆಯಿಂದ ಕಣ್ಣರಳಿಸುವ ಮಗುವಿನಂತವನು. ಹಾಗಾಗಿ ಗಂಗೆಯನ್ನು ಜಟೆಯಲ್ಲಿ ಧರಿಸಿ ಪಾರ್ವತಿಯ ಕೋಪಕ್ಕೂ ನಸುನಗು ಬೀರುವ ಶಕ್ತಿ ಅವನಿಗೆ. ಬದುಕು ಎಷ್ಟೇ ಬೆಂದರೂ ಬಸವಳಿದರೂ ತಂಪಿನ ಅನುಭವ ಕೊಡುವ ಭಾವವೊಂದು ಸದಾ ತಲೆಯಲ್ಲಿ ಜೀವಂತವಾಗಿರಬೇಕು ಅನ್ನೋದನ್ನ ಸೂಚಿಸಲು ಹಾಗೆ ಮಾಡಿದನಾ...ರುದ್ರಕೋಪಿಯನ್ನೂ ತಣ್ಣಗಾಗಿಸುವುದು ಎಷ್ಟು ಸುಲಭ ನೋಡಿ.ಬದುಕಲ್ಲೂ ಇಂಥದೊದಂದು ಭಾವ ಜೊತೆಯಾಗಬೇಕಿತ್ತು ಅಂತ ಅನ್ನಿಸದೇ ಇರದು.
ತೋಯ್ದು ಮೇಲಕ್ಕೆ ಬಂದು ಕಂಬದ ಗಣಪತಿಯ ಎದುರು ಕುಳಿತರೆ ಸಮಯ ಸದ್ದಿಲ್ಲದೇ ಸರಿಯುವುದರ ಜೊತೆಗೆ ತನ್ನ ಛಾಪನ್ನು, ನಿರಾಳ ನೆಮ್ಮದಿಯ ಭಾವವನ್ನು ತುಂಬುತ್ತಾ ಸಾಯುತ್ತದೆ. ಕಣ್ಮುಚ್ಚಿ ಜಗತ್ತಿಗೆ ಬೆನ್ನಾಗುತ್ತಿದ್ದಂತೆ ಶತಮಾನಗಳಿಂದ ರಿಂಗಣಿತವಾದ ವೇದಘೋಷ ಅಲ್ಲೆಲ್ಲಾ ಪಸರಿಸಿ ಅವ್ಯಕ್ತ ಭಾವ ತುಂಬಿಕೊಳ್ಳುತ್ತಾ ಭಾರ ಇಷ್ಟಿಷ್ಟೇ ಕಳಚಿಕೊಳ್ಳುತ್ತಾ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ದೇವಸ್ಥಾನಗಳು ಕೇವಲ ಭಕ್ತಿ ಕೇಂದ್ರ ಮಾತ್ರವಲ್ಲ ಸಮಯ ಕೊಲ್ಲಲು ಇರುವ ಮಾರ್ಗವೂ ಅಲ್ಲ ಅದು ಶಕ್ತಿ ಸಂಚಯ ಕ್ಷೇತ್ರ ಅನ್ನೋದನ್ನ ಮೌನವಾಗಿಯೇ ಪರಿಚಯಿಸುತ್ತದೆ. ಹಾಗಾಗಿಯೇ ನಮ್ಮ ಹಿಂದಿನವರು ದೇವಸ್ಥಾನಗಳ ನಿರ್ಮಾಣ ಕಾರ್ಯದಲ್ಲಿ ತುಂಬು ಎಚ್ಚರ ವಹಿಸುತ್ತಿದ್ದರು. ಜಾಗ, ವಾಸ್ತು ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಅಷ್ಟೇ ಶ್ರದ್ಧೆಯಿಂದ ವಾತಾವರಣದ ಪವಿತ್ರತೆಯನ್ಮು ಕಾಪಾಡಿಕೊಳ್ಳುತ್ತಿದ್ದರು. ಆಸ್ತಿಕನೋ, ನಾಸ್ತಿಕನೋ ಪ್ರವೇಶಿಸಿದ ಪ್ರತಿಯೊಬ್ಬರಲ್ಲೂ ಹೊಸತನ ತುಂಬಿ ಹಗುರಾಗುವ ಹಾಗೇ ಆಗುತ್ತಿದ್ದಂತೂ ಸತ್ಯ.

ತ್ರಿಕಾಲ ಪೂಜೆ ಪಡೆಯುವ ಮಲ್ಲಿಕಾರ್ಜುನ ಜಾಗಕ್ಕೆ ಪೌರಾಣಿಕ ಹಿನ್ನಲೆಯೂ ಇದೆ. ಪಿತೃವಾಕ್ಯ ಪರಿಪಾಲನೆಗಾಗಿ ಅರಣ್ಯವಾಸಕ್ಕೆ ಹೊರಟ ಶ್ರೀರಾಮ ಅವನನ್ನು ಅನುಸರಿಸಿ ಹೊರಟ ಸೀತೆ ಲಕ್ಷ್ಮಣರು ಸಂಚರಿಸುತ್ತಾ ಪಂಚವಟಿಗೆ ಬಂದು ನೆಲೆಸುತ್ತಾರೆ. ಶೂರ್ಪನಖಿಯ ಹೀಗಳಿಕೆ, ವ್ಯಂಗ್ಯದ ಮಾತುಗಳಿಂದ ಕ್ರೋಧಗೊಂಡಿದ್ದ ರಾವಣ ಮಾರೀಚನನ್ನು ಕರೆದು ರಾಮ ಲಕ್ಷ್ಮಣರನ್ನು ವಧಿಸುವಂತೆ ಆಜ್ನಾಪಿಸುತ್ತಾನೆ. ಮಾರಿಚನಿಗೋ ವಿಶ್ವಾಮಿತ್ರರ ಯಾಗಕ್ಕೆ ಭಂಗತರಲು ಹೋದಾಗ ರಾಮನ ಬಾಣಕ್ಕೆ ಸಿಕ್ಕಿ ಅದೃಷ್ಟವಶಾತ್ ಬದುಕುಳಿದ ಘಟನೆ ಮರೆಯುವ ಮುನ್ನವೇ ದೊರೆತ ಆದೇಶದಿಂದಾಗಿ ಭಯಭೀತನಾಗಿ ಅವನಿಗೆ ರಾಮನ ಶಕ್ತಿ ಸಾಮರ್ಥವನ್ನು ಪರಿಚಯಿಸುತ್ತಾನೆ.

ಕ್ರೋಧಗೊಂಡ ಮನಸ್ಸಿಗೆ ಆಲೋಚನಾ ಶಕ್ತಿಯಾಗಲಿ, ಕೇಳಿಸಿಕೊಳುವ ವ್ಯವಧಾನವಾಗಲಿ ಇರುವುದಿಲ್ಲ. ಅದೊಂದು ರೀತಿಯ ಕುರುಡು ಮನಸ್ಥಿತಿ. ಹಾಗಾಗಿ ಹೊರಡುವೆಯೋ ಇಲ್ಲಾ ನನ್ನ ಕೈಯಲ್ಲಿ ಹತನಾಗುವೆಯೋ ಎಂಬ ರಾವಣನ ಮಾತಿಗೆ ಹತಾಶನಾದ ಮಾರೀಚ ಇವನ ಕೈಯಲ್ಲಿ ಮರಣವನ್ನಪ್ಪುವುದಕ್ಕಿಂತ ರಾಮನ ಬಾಣಕ್ಕೆ ಸಿಲುಕಿ ವೀರ ಮರಣ ಹೊಂದುವುದೇ ಶ್ರೇಯಸ್ಕರ ಎಂದು ಭಾವಿಸಿ ಚಿನ್ನದ ಬಣ್ಣದ ಜಿಂಕೆಯ ವೇಷ ಧರಿಸಿ ಸೀತಾರಾಮರು ತಂಗಿದ್ದ ಕುಟೀರದ ಎದುರು ಸುಳಿದಾಡುತ್ತಾನೆ. ಅ ಮಾಯಾಮೃಗದ ಮೋಹಕ್ಕೆ ಒಳಗಾಗುವ ಸೀತೆ ಅದನ್ನು ಬಯಸಿ ರಾಮನನ್ನು ಯಾಚಿಸುತ್ತಾಳೆ.

ಇದ್ಯಾವುದೋ ಮಾಯೆ ಇರಬೇಕೆಂಬ ರಾಮ ಲಕ್ಷ್ಮಣರ ಮಾತಿಗೆ ಕಿವಿಗೊಡದ ಆಕೆ ಬೇಕೆ ಬೇಕೆಂದು ಹಠ ಹಿಡಿದಾಗ ಯಾವುದನ್ನೂ ಕೇಳದ ಮಡದಿಯ ಈ ವಿಲಕ್ಷಣ ಬೇಡಿಕೆಗೆ ರಾಮ ಮಣಿಯುತ್ತಾನೆ. ಮೋಹಕ್ಕೆ ಒಳಗಾದಾಗ ಮನಸ್ಸು ಹೇಗೆ ವಿವೇಚನೆ ಕಳೆದುಕೊಳ್ಳುತ್ತದೆ ಅನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಈ ಘಟನೆ ನಿಲ್ಲುತ್ತದೆ. ಪ್ರತಿಯೊಬ್ಬರ ಬಾಳಲ್ಲೂ ಕೆಟ್ಟ ಕ್ಷಣಗಳು ಹೇಗೆ ಬದುಕಿನ ದಿಕ್ಕನ್ನೇ ಬದಲಾಗುವ ಹಾಗೆ ಮಾಡು ತ್ತದೆ ಅನ್ನೋದಕ್ಕೆ ಸಹ ಇದು ನಿದರ್ಶನ. ಅದನ್ನ ಬೆನ್ನಟ್ಟಿ ಹೋದ ರಾಮನನ್ನು ಬಹುದೂರ ಹೋಗುವಂತೆ ಮಾಡುವಲ್ಲಿ ಸಫಲನಾಗುವ ಮಾರೀಚ ಅವನು ಬಿಟ್ಟ ಬಾಣಕ್ಕೆ ಧರಶಾಯಿಯಾಗುತ್ತಾನೆ. ಆಗ ಅವನ ತೊಡೆಯಲ್ಲಿದ್ದ ಶಿವಲಿಂಗವನ್ನು ತೆಗೆದು ರಾಮ ಅದನ್ನು ಪ್ರತಿಷ್ಟಾಪಿಸಿ ಮೊದಲ ಪೂಜೆಗೆಯ್ಯುತ್ತಾನೆ. ಮೃಗದ ರೂಪದ ಮಾರೀಚವಧೆಯಾದ ಜಾಗವೇ ಮೃಗವಧೆ. ಅವನ ತೊಡೆಯಿಂದ ಬಿಡುಗಡೆಗೊಂಡು ರಾಮನಿಂದ ಪ್ರತಿಷ್ಟಾಪನೆಯಾದ ಲಿಂಗವೇ ಮಲ್ಲಿಕಾರ್ಜುನ. ಮೋಹ, ಹಾಗೂ ತನ್ನದಲ್ಲದ ವಸ್ತುವಿಗೆ ಆಸೆ ಪಟ್ಟು ಅದನ್ನು ದಕ್ಕಿಸಿಕೊಳ್ಳಲು ಹೋದರೆ ಏನಾಗಬಹುದು ಅನ್ನೋದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ.
ಇದೊಂದು ತರಹ ದೇವಸ್ಥಾನಗಳ ಊರು ಅನ್ನೋದರಲ್ಲಿ ಸಹ ತಪ್ಪೇನಿಲ್ಲ. ಶಿವನನ್ನೇ ಹಿಡಿದು ಪಾರ್ವತಿಯ ತಪಸ್ಸಿಗೆ ಮೆಚ್ಚಿ ಅವನನ್ನು ಬಿಟ್ಟು ಅಲ್ಲೇ ಹಿಂದೆ ನಿಂತ ಶನೀಶ್ವರ, ಅವನೆದುರು ಶನಿ ಮುಕ್ತನಾದ ಶಂಕರೇಶ್ವರ, ಆಂಜನೇಯ ಹೀಗೆ ಎಲ್ಲರೂ ಮಲ್ಲಿಕಾರ್ಜುನನ ಸೇವೆಗೆ ಸಿದ್ದರಾಗಿ ನಿಂತಿದ್ದಾರೆ. ಹಾಗಾಗಿ ಇಲ್ಲಿ ಶನಿವಾರದಂದು ಜನಜಾತ್ರೆ. ಇಲ್ಲಿ ಬಂದು ದರ್ಶನ ಮಾಡಿದರೆ ಶನಿದೇವ ಸಂಪ್ರೀತನಾಗಿ ಹರಸುತ್ತಾನೆ ಅನ್ನುವ ನಂಬಿಕೆ. ಬದುಕಿಗೆ ನಂಬಿಕೆಯೇ ಮೂಲಾಧಾರ. ಕೆಳದಿಯ ಅರಸರು ಕಟ್ಟಿಸಿದರು ಅನ್ನೋ ಐತಿಹ್ಯವುಳ್ಳ ದೇವಸ್ಥಾನ ನಿರ್ಮಿತವಾಗಿದ್ದು ಕಲ್ಲಿಂದಲೇ. ಬಾಗಿಲಲ್ಲ್ಲೇ ಎದುರಾಗುವ ಪ್ರಥಮ ವಂದಿತ ಗಣಪ, ಶಿವನ ವಾಹನ ಸದಾ ಸಿದ್ದ ಸ್ಥಿತಿಯಲ್ಲೇ ಇರುವ ನಂದಿ, ಅರೆ ಬೆಳಕಿನ ಗರ್ಭಗುಡಿ ನೀಲಾಂಜನದ ಬೆಳಕಲ್ಲಿ ನಗುವ ಮಲ್ಲಿಕಾರ್ಜುನ. ಕತ್ತಲೆಯಲ್ಲಿ ಹೇಗೂ ಕಾಣುವುದಿಲ್ಲ, ಅತಿಯಾದ ಬೆಳಕೂ ಕಣ್ಣು ಚುಚ್ಚುತ್ತದೆ. ನೆಮ್ಮದಿಯಿಂದ ಸ್ಪಷ್ಟವಾಗಿ ನೋಡಬೇಕು, ಇನ್ನಷ್ಟು ದಿಟ್ಟಿಸಬೇಕು, ಎದೆಗಿಳಿಸಿಕೊಳ್ಳಬೇಕು ಅಂದರೆ ಅರೆಬೆಳಕು ಇರಬೇಕು.

ದೇವಸ್ಥಾನದ ಸುತ್ತಲೂ ಇರುವ ಚಂದ್ರಶಾಲೆ ಒಂದಷ್ಟು ಹೊತ್ತು ಕುಳಿತು ತನ್ನೊಳಗೆ ತಾನು ಇಳಿಯಲು ಅವಕಾಶ ಮಾಡಿಕೊಡುತ್ತದೆ. ತಣ್ಣಗೆ ಹರಿಯುವ ಬ್ರಾಹ್ಮಿಯಿಂದ ಸವೆದು ನುಣುಪಾದ ಮೆಟ್ಟಿಲು ಹತ್ತಿ ನೀರು ತರುವ ಹೆಜ್ಜೆಯ ಸದ್ದು, ಇನ್ನಷ್ಟು ಕಿವಿಯನ್ನು ಏಕಾಗ್ರಗೊಳಿಸಿದರೆ ಹನಿಹನಿಯಾಗಿ ಅವನ ಮೇಲೆ ಬೀಳುವ ಅಭಿಷೇಕದ ಸದ್ದು, ನಿಧಾನವೂ ಅಲ್ಲದ, ಜೋರು ಇಲ್ಲದ ಕಂಚಿನ ಕಂಠದಲ್ಲಿ ಸ್ಪಷ್ಟವಾಗಿ, ಸ್ವರಬದ್ಧವಾಗಿ ಹೊಮ್ಮುವ ಮಂತ್ರದ ನಾದ ಅಲ್ಲೆಲ್ಲಾ ಆವರಿಸುವುದು ಮಾತ್ರವಲ್ಲ ಕಿವಿಯೋಳಗಿನಿಂದ ಮನದಾಳಕ್ಕೆ ಇಳಿದು ಮನಸ್ಸಿಗೆ ಅವ್ಯಕ್ತ ಆನಂದ, ಶಾಂತತೆ ತುಂಬುತ್ತದೆ. ಧನ್ಯತೆ ತಾನೇ ತಾನಾಗಿ ಜೊತೆಗೂಡುತ್ತದೆ. ಶತಮಾನಗಳಿಂದ ರಿಂಗುಣಿತಗೊಂಡ ಮಂತ್ರಗಳು ನಾದದಲೆಗಳಾಗಿ ಸುತ್ತೆಲ್ಲಾ ಹರಡಿದಂತ ಭಾವ. ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ನಾದಕ್ಕಲ್ಲದೆ ಇನ್ಯಾವುದಕ್ಕಿದೆ.
ಪ್ರತಿಬಾರಿ ಹೋದಾಗಲು ಇಂಥಹುದೇನೋ ಹೊಸ ಅನುಭವ ಕಟ್ಟಿಕೊಡುವ, ನೋಡುವ ದೃಷ್ಟಿಯನ್ನೂ ಆಲೋಚಿಸುವ ಮನಸ್ಸನೂ ವಿಶಾಲಗೊಳಿಸುವ, ಹೊತ್ತಿರುವ ಭಾರವನ್ನು ಗೊತ್ತಿಲ್ಲದೇ ಇಳಿಸಿಕೊಂಡು ಹಗುರತೆಯನ್ನು ತುಂಬಿಕೊಡುವ, ಬದುಕನ್ನು ಇನ್ನಷ್ಟು ಅರ್ಥವಾಗಿಸಿ ಮತ್ತಷ್ಟು ಪ್ರೀತಿಸುವ ಹಾಗೆ ಮಾಡುವ, ಇಡುವ ಹೆಜ್ಜೆ ಹಗುರಾಗಿಸಿ ಗಾವುದ ದೂರ ನಡೆಯುವ ಕಸುವು ತುಂಬುವ ಇಂದಿಗೂ ತನ್ನ ಪಾವಿತ್ರ್ಯತೆ ಉಳಿಸಿಕೊಂಡ ಜಾಗ ಅಂದರೆ ಮೃಗವಧೆಯ ದೇವಸ್ಥಾನ. ಕೇಳುವ ಕಿವಿ, ಒರಗುವ ಹೆಗಲು, ದಾರಿ ತೋರುವ ಬೆಳಕು, ಸಂತೈಸುವ ತಂದೆ, ಮಡಿಲಲ್ಲಿ ಕುಳ್ಳಿರಿಸಿಕೊಂಡು ಹಗುರಾಗಿಸುವ ಮಾತೃತ್ವ, ಜಗಳವಾಡುವ ಗೆಳೆತನ ಎಲ್ಲವೂ ಧಾರಾಳವಾಗಿ ದೊರಕುವ ಜಾಗ.

ಅವನೆದುರು ಕುಳಿತಾಗ ಹೊತ್ತು ಸರಿಯುವುದು ಅರಿವಿಗೆ ಬಾರದು ಅನ್ನೋ ಸತ್ಯ ಅರ್ಥವಾಗಿದ್ದು ಎದ್ದು ಹೊರಗೆ ಬಂದಾಗಲೇ. ಅದಾಗಲೇ ಕತ್ತಲು ಹೆಜ್ಜೆಯಿಟ್ಟಾಗಿತ್ತು. ಜೊತೆಗೆ ಮೋಡವೂ. ತಲೆಯೆತ್ತಿದರೆ ನಕ್ಷತ್ರಗಳೂ ರಜೆಯಲ್ಲಿದ್ದವು. ರಸ್ತೆಯ ಅಕ್ಕಪಕ್ಕದ ಮರಗಳು ಕತ್ತಲ ಗುಪ್ಪೆಯಂತೆ ಭಾಸವಾಗುತಿತ್ತು. ತಣ್ಣಗೆ ಬೀಸುತಿದ್ದ ಗಾಳಿ ಅಲ್ಲೆಲ್ಲೋ ಮಳೆ ಸುರಿಯುವ ಸುದ್ದಿಯನ್ನು ಪಿಸುಗುಡುತಿತ್ತು. ಇಲ್ಲಿ ಯಾವ ಕ್ಷಣದಲ್ಲಾದರೂ ಮಳೆ ಸುರಿಯಬಹುದು ಅನ್ನೋ ಸೂಚನೆಯನ್ನೂ ಕೊಡುತಿತ್ತು. ಅಹಿ ಕದ್ದಿಂಗಳ, ಕಗ್ಗತ್ತಲ, ಕಾರ್ಗಲದ ರಾತ್ರಿ ಎಂದರೇನು ಗೊತ್ತಾ ಅಂದೆ. ಅಮ್ಮಾ ಗಾಡಿ ಲೈಟ್ ಆಫ್ ಮಾಡು ಒಂದು ಕ್ಷಣ ಅಂದ್ಲು.

ಅರೆಗಳಿಗೆಯ ನಂತರ ಹೊರಡುವಾಗ ನಮ್ಮಿಬ್ಬರನ್ನು ತೋಯ್ಯಿಸಿದ್ದು ಮಳೆಯಾ, ಮಿಂಚಿದ ಬೆಳಕಾ, ಇಲ್ಲಾ ಶಿವಭಾವವ ಯಾರಿಗೆ ಗೊತ್ತು. ಆ ಮೌನದಲ್ಲೂ ಇಬ್ಬರ ತುಟಿಗಳು ಗುಣುಗುಣಿಸುತ್ತಿದ್ದದ್ದು ಮಾತ್ರ......

ತ್ವಮೇವ ಮಾತಾಚ, ಪಿತಾ ತ್ವಮೇವ,
ತ್ವಮೇವ ಬಂಧುಶ್ಚ , ಸಖಾ ತ್ವಮೇವ,
ತ್ವಮೇವ ವಿದ್ಯಾಂ ದ್ರವಿಣಂ ತ್ವಮೇವ,
ತ್ವಮೇವ ಸರ್ವಂ ಮಮ ದೇವ ದೇವ....
ಅನ್ನೋ ಸಾಲುಗಳನ್ನ.......




Comments

Popular posts from this blog

ಮಾತಂಗ ಪರ್ವತ

ನನ್ನಿ