ಕಾರಣವಿಲ್ಲದೆ ಕಾರ್ಯವಿಲ್ಲ....

ಸಂತಾನಭಾಗ್ಯಕ್ಕಾಗಿ ಹಂಬಲಿಸಿ ಅದಕ್ಕಾಗಿ ಪ್ರಯತ್ನ ಪಡುವ ಎರೆಯಂಗದೇವನಿಗೆ ಪುಷ್ಪಗಿರಿಯ ಮಠದ ಸ್ವಾಮಿಗಳು ದತ್ತಾತ್ರೇಯರ ಪೀಠಕ್ಕೆ ಹೋಗಿ ಸೇವೆ ಸಲ್ಲಿಸಿ ಬರಲು ಹೇಳುತ್ತಾರೆ.ಚಂದ್ರ ದ್ರೋಣ ಪರ್ವತದ ತಪ್ಪಲಿನಲ್ಲಿ ಇರುವ ಆ ಪೀಠಕ್ಕೆ ಎಲ್ಲರೂ ಉತ್ಸಾಹದಿಂದ ಹೊರಡುತ್ತಾರೆ. ಮಲೆನಾಡಿನ ದಾರಿಯನ್ನು ಎಂದೂ ಕಾಣದ ಬಯಲು ನಾಡಿನ  ಏಚಲೆ ಅಲ್ಲಿಯ ಹಾವಿನಂತೆ ಸುತ್ತಿ ಹರಿಯುವ ಮಣ್ಣಿನ ದಾರಿ, ಹೆಮ್ಮರಗಳ ಕಾಡು, ಕಾಡಿನಾಳದ ಸದ್ದು ಕೇಳಿ ಭೀತಿಗೊಳ್ಳುತ್ತಾಳೆ. ಅವಳನ್ನು ಇನ್ನಷ್ಟು ಕಾಡಿಸಲು ಎರೆಯಂಗ ದೇವ ನೋಡು ಗುರುಗಳು ಶಿಲಾರೂಪವಾಗಿಯಷ್ಟೇ ಅಲ್ಲಾ ವ್ಯಾಘ್ರರೂಪರಾಗಿಯೂ ವಾಸವಾಗಿದ್ದಾರೆ ಅನ್ನುವ ಮಾತು ಕೇಳಿ ಭೀತಿಯಲ್ಲಿ ನಡುಗುತ್ತಲೇ ಪೂಜೆಮುಗಿಸಿ ವಾಪಾಸಾಗುತ್ತಾರೆ.

ಕೆಲವು ಮಾಸಗಳ ನಂತರ ಗರ್ಭ ಧರಿಸಿ ಬಲ್ಲಾಳನಿಗೆ ಜನ್ಮ ನೀಡುತ್ತಾಳೆ ಏಚಲೆ. ಅಪರೂಪದ ಸಂತಾನ ಅದೂ ಗಂಡು ಸಂತಾನ ಎಂದು ಖುಷಿ ಪಡುವ ಸಮಯದಲ್ಲೇ ಮಗು ವ್ಯಾಧಿಗೆ ತುತ್ತಾಗುತ್ತದೆ. ತೊಟ್ಟಿಲಲ್ಲಿ ಮಲಗಿದ್ದ ಮಗು ಇದ್ದಕ್ಕಿದ್ದ ಹಾಗೆ ಮೆಟ್ಟಿ ಬಿದ್ದು ಹೆದರಿ  ಚೀರುವುದು,  ಆ ಭಯಕ್ಕೆ ಚಳಿಜ್ವರ ಆರಂಭವಾಗುವುದು ಮಾಮುಲಾಗುತ್ತದೆ. ನೂರಾರು ಜನ ವೈದ್ಯರು ಬಂದು ಮದ್ದು ನೀಡಿದರೂ ಗುಣವಾಗದೇ ಎಲ್ಲರೂ ಕೈ ಚೆಲ್ಲುತ್ತಾರೆ. ಆಗ ಪುನ: ಸ್ವಾಮೀಜಿಗಳನ್ನ  ಕರೆಸುವ ರಾಜಮಾತೆ ಕಾಪಾಡುವಂತೆ ಬೊಗಸೆಯೊಡ್ದುತ್ತಾಳೆ. ಅವನನ್ನು ಮಡಿಲಲ್ಲಿ ಎತ್ತಿಕೊಂಡು ಧ್ಯಾನಿಸುವ ಸ್ವಾಮಿಗಳು ಪೂಜೆ ಯಾವುದೇ ಲೋಪವಿಲ್ಲದೆ ಜರುಗಿತೇ ಎಂದು ಪ್ರಶ್ನಿಸುತ್ತಾರೆ.

ಈ ಪ್ರಶ್ನೆ ಕೇಳಿ ಎಲ್ಲರಂತೆ ಸಿಡಿದೇಳುವ ರಾಜಮಾತೆ ಮನುಷ್ಯ ಮಾತ್ರರು ತಿಳಿಯದೆ ತಪ್ಪು ಮಾಡಿದರೆ ಶಿಕ್ಷೆ ವಿಧಿಸುವಷ್ಟು ನಿಷ್ಠೂರಿಯೇ ದೇವರು? ಹಾಗೂ ಶಿಕ್ಷೆ ವಿಧಿಸಬೇಕಾದರೆ ತಪ್ಪು ಮಾಡಿದ ನಮಗೆ ವಿಧಿಸಬೇಕೆ ಹೊರತು ಏನೂ ಅರಿಯದ ಹಸುಗೂಸಿಗೆ ವಿಧಿಸುವುದು ಎಲ್ಲಿಯ ನ್ಯಾಯ ಎನ್ನುತ್ತಾಳೆ. ಅರೆ ಇದೆ ಪ್ರಶ್ನೆ ನಮ್ಮ ಬದುಕಲ್ಲೂ ಹುಟ್ಟಿಯೇ ಇರುತ್ತದೆ ಅಲ್ಲವಾ... ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಇದನ್ನು ಕೇಳಿಕೊಂಡು ಸಮರ್ಪಕ ಉತ್ತರ ಸಿಗದೇ ಬೆಂದಿರುತ್ತಾರಲ್ಲ ಅನ್ನಿಸಿ ಉಸಿರು ಬಿಗಿ ಹಿಡಿದು ಮುಂದುವರಿಸಿದೆ. ಇಂಥ ಪ್ರಶ್ನೆ ಕೇಳಿದಾಗ ಥಟ್ಟನೆ ಹಾಗೆಲ್ಲಾ ಮಾತಾಡಬಾರದು ಅನ್ನೋ ಹಿರಿಯರ ತರಹವೇ ಏಚಲೆಯೂ ಹೆದರಿ ತನ್ನ ಅತ್ತೆಯನ್ನು ತಡೆಯಲು ಯತ್ನಿಸುವಾಗ ಗುರುಗಳು ಹೇಳುವ ಮಾತು ಕೇಳಿ.

"ಮನುಷ್ಯರ ಸುಖ ದುಃಖಗಳೆರೆಡೂ ವಾಗ್ರೂಪವಾಗಿ ಹೊರಬಂದು ಮುಗಿಯಬೇಕಂಬುದು ಭಗವಂತನ ನಿಯಮ. ಅದರಲ್ಲಿ ದೋಷವೇನೂ ಇಲ್ಲಾ.." ಇದೆ ತರಹದ ಮಾತು ಚಕ್ರೆಶ್ವರಿಯಲ್ಲೂ ಬರುತ್ತದೆ. ಹೇಳಬೇಕಾಗಿದ್ದನ್ನು ಹೇಳಬೇಕು ಮಗು ಹೊಟ್ಟೆಯಲ್ಲಿ ಅಡಗಿಸಿಟ್ಟು ಕೊಳ್ಳಬಾರದು ಆ ಕಿಚ್ಚು ಇನ್ಯಾವತ್ತೋ ಇನ್ನೆಲ್ಲೋ ಜಾಗದಲ್ಲಿ ಪ್ರಕಟವಾಗಿ ದಹಿಸಿಬಿಡುತ್ತದೆ. ಆಡಬೇಕಾದ ಮಾತನ್ನು ಆಡಬೇಕಾದ ಜಾಗದಲ್ಲಿ ಆಡಿಬಿಡಬೇಕು. ಅದು ಕಿಚ್ಚಿನಂತೆ. ಒಳಗಿಟ್ಟುಕೊಂಡರೆ ಕಾಡ್ಗಿಚ್ಚೂ ಆಗಬಹುದು. ಬಿದಿರು ಮೆಳೆಯ ಕಿಚ್ಚಿನಂತೆ ತನ್ನನಲ್ಲದೆ ಕಾಡನ್ನೂ ದಹಿಸಬಹುದು.

ಆಗ ಉತ್ತರಿಸುತ್ತಾರೆ ಗುರುಗಳು. ಕಾರವಿಲ್ಲದೆ ಕಾರ್ಯವಿಲ್ಲ. ಅಖಂಡ ಪೃಥ್ವಿ ಚಕ್ರದ ಭ್ರಮಣೆಗೂ ಈ ಕಾರ್ಯ ಕಾರಣ ಶಕ್ತಿಯೇ ಪ್ರಚೋದನೆ. ಅದಿಲ್ಲದೇ ಏನೂ ನಡೆಯುವುದಿಲ್ಲ. ಹಾಗೇ ಎಲ್ಲಾ ಕಾರ್ಯಕ್ಕೂ ಕಾರ್ಯದ ಹಿಂದಿನ ಕಾರಣ ಕಾಣದೆ ಅನುಕೂಲವಾದಾಗ ಹಿಗ್ಗುವುದು, ಅನಾನುಕೂಲವಾದರೆ ಕುಗ್ಗುವುದು ಮಾನವ ಸ್ವಭಾವ. ಸಮಾಧಾನವಾಗಿ ಕುಳಿತು ದೌರ್ಬಲ್ಯವನ್ನು ನಿಗ್ರಹಿಸಿ ಆಲೋಚನೆ ಮಾಡಿದಾಗ ಇವಿಷ್ಟೂ ತೋರುತ್ತದೆ. ನಮಗೆ ಏನೋ ಲಾಭವಾಗಬೇಕೆಂದು ನಾವು ದೇವರ ಸೇವೆ ಮಾಡುತ್ತೇವೆಯೇ ಹೊರತು ದೇವರ ಉದ್ದಾರಕ್ಕಲ್ಲ. ನಿಷ್ಕಾಮವಾಗಿ ಆರಾಧನೆ ಮಾಡುವಾಗ ಭಗವಂತನನ್ನು ಮನದಲ್ಲಿ ಸ್ಮರಿಸಿದರೂ ಸಾಕು, ಹಾಗಲ್ಲದೆ ಸಕಾಮವಾಗಿ, ಯಾವುದೋ ಒಂದು ನಿರ್ಧಿಷ್ಟ ಉದ್ದೇಶ ಸಾಧನೆಗಾಗಿ ಭಗವಾರಾಧನೆ ಮಾಡುವಾಗ ಅದರ ಮಂತ್ರ, ತಂತ್ರ ಕ್ರಮದಲ್ಲಿ ಲೋಪವಾಗದಂತೆ ನಡೆದುಕೊಳ್ಳಬೇಕು. ಅದರಲ್ಲಿ ಲೋಪವಾದಾಗ ಉದ್ದೇಶ ಸಾಧನೆಯಾಗುವುದಿಲ್ಲ. ಲೋಪದ ಪ್ರಮಾಣಕ್ಕೆ ಅನುಗುಣವಾಗಿ ಸಿದ್ಧಿಯಲ್ಲಿ ವ್ಯತ್ಯಾಸವಾಗುತ್ತದೆ.

ನಮ್ಮ ಅರಿವಿನ ಮಿತಿ ಸಣ್ಣದೆಂದು ಎಲ್ಲವನ್ನೂ ಸೀಮಿತ ದೃಷ್ಟಿಯಲ್ಲಿ ನೋಡುವ ಬದುಕಿಗೆ ಕಪಾಳಕ್ಕೆ ಬಾರಿಸಿದ ಹಾಗಾಯಿತು. ನನಗೆ ಗೊತ್ತಿದ್ದಷ್ಟೇ ಸತ್ಯ ನಿಜ, ಗೊತ್ತಿಲ್ಲವೆಂದ ಮಾತ್ರಕ್ಕೆ ಉಳಿದದ್ದು ಇಲ್ಲವೆಂದೋ, ಮಿಥ್ಯವೆಂದೋ ಭಾವಿಸುವ, ಸಾರಿ ಹೇಳುವ ನಮ್ಮ ಅಹಂ ನ ಬಲೂನಿಗೆ ಪಿನ್ನು ಚುಚ್ಚಲು ಇಂಥಹ ಓದು ಓದಬೇಕು. ಇತಿಹಾಸ ಅರಿಯಬೇಕು.

ಆಗ ತ.ರಾ.ಸು ಕೇವಲ ಸಾಹಿತಿಯೋ, ಇತಿಹಾಸಕಾರರೋ, ಆಗದೆ ಬೆಳಕು ನೀಡುವ ಗುರುವಾಗುತ್ತಾರೆ. ಗುರು ಸಿಕ್ಕ ಮೇಲೆ ದಾರಿಯ ಭಯವೇಕೆ??

#ಸಿಡಿಲುಮೊಗ್ಗು 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...