ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತಿದ್ದ ಮನೋಹರ್ ತಂದೆ ಡ್ಯೂಟಿ ಮಾಡುತ್ತಿರುವಾಗಲೇ ದುಷ್ಕರ್ಮಿಗಳಿಗೆ ಬಲಿಯಾದಾಗ ಮನೋಹರ್ ಇನ್ನೂ ಚಿಕ್ಕವನು. ಸಂಸಾರ ರಥ ಎಳೆಯುವ ಕೈ ಸ್ತಬ್ಧವಾದಾಗ ದುಡಿಯುವ ಅನಿವಾರ್ಯತೆ ವಯಸ್ಸನ್ನು ಗಮನಿಸುವುದಿಲ್ಲ. ಅಂತೂ ಹೋರಾಟದ ಬಳಿಕ ತಂದೆಯ ಕೆಲಸ ಮಗನಿಗೆ ಸಿಕ್ಕಿ ನಿಟ್ಟುಸಿರು ಬಿಡುವ ಮೊದಲೇ ಉಸಿರುಗಟ್ಟುವ ಹಾಗಾಗಿದ್ದು ಮನೋಹರನಿಗೂ ಗುಂಡು ಬಿದ್ದಾಗಲೇ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಕಂಡು ಯಾರೋ ದಾರಿಹೋಕರು ಸುದ್ದಿ ಮುಟ್ಟಿಸಿದಾಗ ಬಂದ ಅಧಿಕಾರಿಗಳು ಅದೇ ಜೀಪ್ ನಲ್ಲಿ ಅವನನ್ನು ಹಾಕಿಕೊಂಡು ಮೂರುಗಂಟೆ ಪ್ರಯಾಣಮಾಡಿ  ಮಂಗಳೂರಿನ  ಆಸ್ಪತ್ರೆಯೊಂದಕ್ಕೆ ಸೇರಿಸಿ ತಾಯಿಗೆ ಸುದ್ದಿ ಮುಟ್ಟಿಸಿ ಕೈ ತೊಳೆದುಕೊಂಡರು. ಆತಂಕದಲ್ಲಿ ಧಾವಿಸಿದ ತಾಯಿಯ ಬಳಿ ನೋಡಮ್ಮಾ ಮಾನವಿಯತೆಯ ನೆಲೆಯಲ್ಲಿ ಟ್ರೀಟ್ಮೆಂಟ್ ಮಾಡಿದ್ದೀವಿ, ಅವರು ಒಂದು ಪೈಸೆಯನ್ನೂ ಕೊಟ್ಟಿಲ್ಲ, ಆಪರೇಷನ್ ಮಾಡ್ಬೇಕು ದುಡ್ಡು ಕಟ್ಟಿದರೆ ಮಾಡ್ತಿವಿ ಅಂತ ಹೇಳಿದ ಮಾತು ಕೇಳಿ ಏನೂ ಮಾಡಲೂ ತೋಚದೆ ಇದ್ದ ಒಂದು ಮನೆಯನ್ನೂ ಅಡವಿಟ್ಟು ಬಂದ ಕೆಲವು ಸಾವಿರಗಳ ಹಣವನ್ನು ತಂದು ಕಟ್ಟುತ್ತಾರೆ.

ಮತ್ತೂ ಆಪರೇಷನ್ ಆಗಬೇಕು ಆದರೆ ಅವರ ಬಳಿ ಹಣವಿಲ್ಲ. ಹಣವಿಲ್ಲದ ಯಾವ ಜೀವಕ್ಕೂ ಇಲ್ಲಿ ಬೆಲೆಯಿಲ್ಲ. ಹಾಗಾಗಿ ಮನೋಹರ್ ಅವರನ್ನು ಮನೆಗೆ ತಂದು ಬಿಡುತ್ತಾರೆ. ಆ ಸಮಯದಲ್ಲಿ ಶಾನುಭಾಗ್ ಬಳಿಗೆ ಬಂದು ತನ್ನ ಸಂಕಟ ಹೇಳಿಕೊಂಡು ನ್ಯಾಯ ಕೊಡಿಸಿ ಅಂದವರ ಜೊತೆಗೆ ಬಂದವರಿಗೆ ಕಂಡದ್ದು ಓಡಾಡಲೂ, ಮಗ್ಗುಲು ಬದಲಿಸಲೂ ಆಗದ ಮೂಳೆಚಕ್ಕಳವಾದ ಮನೋಹರ್. ತಕ್ಷಣ ಹಾಸ್ಪಿಟಲ್ ಗೆ ಸೇರಿಸಿ x ray ಮಾಡಿದಾಗ ಕಂಡದ್ದು ದೇಹದೊಳಗೆ ಪ್ರವೇಶಿಸಿದ್ದ 30 ಕ್ಕೂ ಹೆಚ್ಚು ಪೆಲೆಟ್ ಗಳು. ಅದು ಸೆಪ್ಟಿಕ್ ಆದರೆ ಕಷ್ಟ ತಕ್ಷಣ ಆಪರೇಷನ್ ಮಾಡಬೇಕು ಒಂದು ನಾಲ್ಕೈದು ಲಕ್ಷವಾದರೂ ಆಗಬಹ್ದು ಅಂದ ಡಾಕ್ಟರ್ ಮಾತು ಕೇಳಿ ಹಣಕ್ಕಾಗಿ ಮನವಿ ಮಾಡುತ್ತಾರೆ ಶಾನುಭಾಗ್.

ಮನೋಹರ್ ಪರಿಸ್ಥಿತಿ ವಿವರಿಸಿ  ಅವರು ಕೇಳಿದ್ದು ಸಹಾಯವಲ್ಲ, ಸಾಲ. ಹರಿದು ಬಂದ ಧನ ಸಹಾಯದಿಂದ ಚಿಕಿತ್ಸೆ ನಡೆದು ಅದು ಫಲಕಾರಿಯಾಗಿ, ಹೋರಾಟದಲ್ಲಿ ಮನೋಹರ್ ಗೆ ಜಯವಾಗಿ ಅವನ ಚಿಕಿತ್ಸಾ ವೆಚ್ಹ ಡಿಪಾರ್ಟ್ಮೆಂಟ್ ಭರಿಸಲು ಆದೇಶವಾಗಿ ಹಣ ಮನೋಹರ್ ಕೈ ಸೇರುತ್ತದೆ. ಅದನ್ನು ಹಿಡಿದು ಮನೋಹರ್ ಹೋಗಿದ್ದು ನೇರವಾಗಿ ಶಾನುಭಾಗ್ ಬಳಿ. ಹಣ ಬಂದಿದೆ ಏನ್ಮಾಡ್ತಿ ಈಗ ಅಂದು ಪ್ರಶ್ನಿಸಿದವರಿಗೆ ಯಾರ್ಯಾರು ನಂಗೆ ಹಣ ಕಳಿಸಿದ್ದರೋ ಅವರಿಗೆ ಕಳಿಸಿಬಿಡಿ ಅಂತ ಹೇಳಿದರಂತೆ.

ಶಾನುಭಾಗ್ ತಯಾರು ಮಾಡುವುದು ಇಂಥ ಸ್ವಾಭಿಮಾನಿ ಬಳಗವನ್ನು. ಬದುಕಿಗೆ ಬೇಡಿ ತಿನ್ನುವುದನ್ನ ಕಲಿಸಬಾರದು, ದುಡಿದು ತಿನ್ನುವುದನ್ನ, ಸ್ವಾಭಿಮಾನದಿಂದ ಬದುಕುವುದನ್ನ ಕಲಿಸಬೇಕು ಅಂತ ಶಾನುಭಾಗ್ ಹೇಳುತಿದ್ದರೆ ಆನಂದಭಾಷ್ಪದೊಂದಿಗೆ ಮನಸ್ಸು ತುಂಬಿ ಬಂದಿತ್ತು. ಈ ಕ್ಷಣಕ್ಕೆ ಸಮಾಜಕ್ಕೆ ಬೇಕಾಗಿರೋದು ಸ್ವಾಭಿಮಾನದ ಪಾಠವೇ ಹೊರತು ದೈನ್ಯತೆಯ ಬದುಕಲ್ಲ. ಬದುಕು ಯಾರದೋ ಹಂಗಿಗೆ ಒಳಗಾಗಬಾರದು, ತನ್ನದಲ್ಲದ್ದನ್ನು ಇಟ್ಟುಕೊಳ್ಳಬಾರದು ಅನ್ನೋ ಪಾಠವನ್ನು ಕತೆಯ ಮೂಲಕ ಹೇಳುತ್ತಿದ್ದ ಹಿರಿಯರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವುದು ಕಲಿಸುತ್ತಿರುವುದು ರವೀಂದ್ರನಾಥ್ ಶಾನುಭಾಗ್.

ಉಚಿತವಾಗಿ ಸಿಕ್ಕಿದ ಯಾವುದೂ ಬದುಕನ್ನ ಬೆಳಸುವುದಿಲ್ಲ... ಕೊಳೆಸುತ್ತದೆ.

ಈ ಕ್ಷಣಕ್ಕೆ ಇದನ್ನು ಹೇಳಲೇಬೇಕನಿಸಿತು...... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...