ಸಹಜ ಖುಷಿ

ಸಹಜ ಖುಷಿ ಅನ್ನೋ ಟೈಟಲ್ ಕಾಣಿಸುತಿದ್ದ ಹಾಗೆಯೇ ಖುಷಿಯಿಂದಲೇ ಎತ್ತಿಕೊಂಡಿದ್ದೆ. ಪುಟ್ಟ ಅಂಗೈ ಅಗಲದ  ಪುಸ್ತಕ ಹಿಡಿದುಕೊಳ್ಳಲು ಅಪ್ಯಾಯಮಾನ ಫೀಲ್ ಕೊಟ್ಟಿತ್ತು. ಚಳಿಯ ಸಂಜೆ ಹಬೆಯಾಡುವ ಕಾಫಿಯನ್ನು ಮಗ್ ಗೆ ಸುರಿದುಕೊಂಡು ಬಂದು ಮಡಿಲಲ್ಲಿ ಎತ್ತಿಕೊಂಡು ಓದಲು ಶುರುಮಾಡಿ ಕೆಳಗಿಡುವ ಹೊತ್ತಿಗೂ ಖುಷಿ ಅನ್ನೋದು ಮರೆಯಾಗಿತ್ತು.

ಎಲ್ಲವೂ ಕ್ಷಣಿಕ ಮತ್ತು ನೀರಮೇಲಿನ ಗುಳ್ಳೆ ಅನ್ನುವ ಫಿಲಾಸಫಿ ನಿಜವಾಗುವುದು ಮದುವೆ ಮನೆಗಳಲ್ಲೇ.. ಅನ್ನೋ ಪ್ರಾರಂಭದ ಸಾಲು ಓದಿನ ವೇಗಕ್ಕೆ ಗುಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿತ್ತು. ಹೊಸ ಬದುಕಿನ ಮುನ್ನುಡಿ ಶುರುವಾಗೋದೇ ಮದುವೆಯೆಂಬ ಮಾಂತ್ರಿಕ ಕ್ಷಣಗಳಲ್ಲಿ. ಈಗಿನ ಕಾಲದ ತಲ್ಲಣಗಳನ್ನು ಹೇಳುತ್ತಲೇ ತಟ್ಟನೆ ಹಳೆಯ ಕಾಲದ ನೆನಪುಗಳಿಗೆ ಕರೆದೊಯ್ಯುವ ಜಾದೂ ಜೋಗಿಯ ಬರಹಕ್ಕಿದೆ. ಎಲ್ಲೋ ಸಾಗುತ್ತಿದ್ದವರನ್ನು ಅನಾಮತ್ತಾಗಿ ಇನ್ಯಾವುದೋ ಕಾಲಘಟ್ಟಕ್ಕೆ ಎತ್ತಿ ಹಾಕಿ ಭಾವಗಳನ್ನು ಅಲ್ಲೋಲ್ಲಕಲ್ಲೋಲ್ಲಗೊಳಿಸುತ್ತಲೇ ತಿಳಿಯಾಗುವ ಮುನ್ನ ಒಂದು ಸ್ಪಷ್ಟತೆ ಸಿಗುವ ಹಾಗೆ ಮಾಡುವ ಶಕ್ತಿಯೂ ಇದೆ.

ಯಾವುದೇ ವಿಷಯದ ಬಗ್ಗೆ ಬರೆದರೂ ಯಾವುದೋ ಸಾಲಿನ ನಡುವೆ ಧುತ್ತೆಂದು ಎದುರಾಗುವ ಪುರಾಣದ ಪಾತ್ರಗಳು ಅವು ಕೇವಲ ಕಥೆಯಲ್ಲ ಬದುಕಿನ ಗತಿ ಅನ್ನೋದನ್ನ ಸಶಕ್ತವಾಗಿ ಪರಿಚಯಿಸುವ ಜೋಗಿಯ ಚಾತುರ್ಯ ತುಂಬಾ ಇಷ್ಟ. ಪುರಾಣದ ಜೊತೆ ಹೆಜ್ಜೆ ಹಾಕುವುದರಲ್ಲಿ ಇನ್ಯಾವುದೋ ಭಾಷೆಯ ಅದ್ಯಾವುದೋ ಹೆಸರು ಉಚ್ಚರಿಸಿ ಅನಾಮತ್ತಾಗಿ ಮತ್ತೆಲ್ಲೋ ತಂದುಬಿಟ್ಟು ಅಚ್ಚರಿ ಮೂಡಿಸುತ್ತಾರೆ. ವಾಸ್ತವವನ್ನು, ನಮ್ಮ ಪೊಳ್ಳುತನವನ್ನು ನೇರವಾಗಿ ಬಿಚ್ಚಿಡುತ್ತಾ ಒಳಗನ್ನು ಬಯಲಾಗಿಸುತ್ತಾ ಹೋಗಿ ಬಯಲು ಭಯವಾಗಿ ಮತ್ತೇನನ್ನೋ ಕಂಡು ಕೊಳ್ಳುವ ಹಾಗೆ ಮಾಡೋದು ಸುಲಭವಲ್ಲ. ಈ ವಿಷಯದಲ್ಲಿ ಜೋಗಿಯ ಬಗ್ಗೆ ನಂಗೆ ಸದಾ ಹೊಟ್ಟೆಕಿಚ್ಚು.

ಕಾಡು, ಊರು, ಬಾಲ್ಯ ಇವು ಮೂರು ಬದುಕಿನಲ್ಲಿ ಕಾಡುವಷ್ಟು, ಮುಂದಿನ ಹೆಜ್ಜೆ ಸಹನೀಯವಾಗಿಸುವಷ್ಟು, ಇಳಿ ಸಂಜೆಯಲ್ಲಿ ಮೆಲುಕುಹಾಕುತ್ತಾ ನಿರಾಳವಾಗುವ ಹಾಗೆ ಮಾಡುವಷ್ಟು ಇನ್ಯಾವುದೂ ಮಾಡುವುದಿಲ್ಲ. ಈ ಮೂರು ಕಾರಣಗಳಿಗಾಗಿಯೇ ಜೋಗಿ ಇಷ್ಟವಾಗೋದು, ಆಪ್ತವಾಗೋದು. ಈ ಮೂರರ ಛಾಯೆ ಅವರ ಬರಹದಲ್ಲಿ ಗಾಢವಾಗಿರುತ್ತದೆ. ಹಾಗಾಗಿಯೇ ಆ ಬರಹ ನನ್ನದು ಅನ್ನೋ ಆಪ್ತ ಭಾವ, ಅರೆ ನನ್ನ ಮಾತುಗಳೇ ಅಲ್ವಾ ಅನ್ನೋ ಅಪ್ಯಾಯತೆ, ಎದೆಗಿಳಿಸಿಕೊಳ್ಳುವ ಹಾಗೆ ಮಾಡುತ್ತೆ. ಭಾವ ಪ್ರಪಂಚದಲ್ಲಿ ಮುಳುಗಿ ಕಳೆದು ಹೋಗುತ್ತಿರುವಾಗಲೇ ಮತ್ತೊಬ್ಬರ ಸಾವು, ಮತ್ತೊಬ್ಬರ ನೋವು ನಮ್ಮನ್ನು ಅಷ್ಟು ಸುಲಭವಾಗಿ ತಟ್ಟುವುದಿಲ್ಲ ಎಂದು ಹೇಳಿ ಒಮ್ಮೆಗೆ ಪ್ರಪಾತಕ್ಕೆ ಇಳಿಯೋ ಹಾಗೆ ಮಾಡುತ್ತಾರೆ.

ಒಂದು ಸಾವು, ನಮಗೆ ಸಂಬಂಧವೇ ಇಲ್ಲದ ಒಂದು ಸಾವು, ನಮ್ಮನ್ನು ಎಷ್ಟೆಲ್ಲಾ ಕದಡಬಲ್ಲದು. ನಮ್ಮ ಅಂತರಂಗದ ಕಲ್ಮಷಗಳನ್ನು ಹೇಗೆ ಎಲ್ಲರಿಗೂ ಕಾಣುವಂತೆ ಮಾಡಬಲ್ಲದು. ಸಾವಿಗೆ ಘನತೆಯೇ ಇಲ್ಲವೇ ಅನ್ನುವ ಪ್ರಶ್ನೆ  "ಮರಣಾಂತಾನಿ ವೈರಾಣಿ " ಸಾವಿನೊಂದಿಗೆ ವೈರವೂ ಕೊನೆಯಾಗುತ್ತದೆ ಅನ್ನುವ ಮಾತಿನಿಂದ ಸಾವಿನಿಂದಲೇ ವೈರವೂ ಶುರುವಾಗುತ್ತದೆ ಅನ್ನೋ ಕಾಲಘಟ್ಟಕ್ಕೆ ಬಂದು ಬಿಟ್ಟಿದ್ದೇವಾ ಅನ್ನೋ ಸಂದೇಹ ಕಾಡುವ ಹಾಗೆ ಮಾಡುತ್ತದೆ.

ಇಲ್ಲಿರುವ 25 ಅಧ್ಯಾಯಗಳೂ ಕೇವಲ ಓದಿಸಿಕೊಂಡು ಹೋಗದೆ ನಮ್ಮೊಳಗನ್ನು ಬಗೆದು ನೋಡುವ ಹಾಗೆ ಮಾಡುತ್ತದೆ. ಹಾಗೆ ಅಗೆಯುತ್ತಾ ಹೋದಾಗಲೇ ಆಳದಲಿ ಏನೇನಿದೆ ಅನ್ನೋದು ಅರ್ಥವಾಗೋದು, ಅರಿವಿಗೆ ದಕ್ಕೋದು. ಹಾಗೆ ಅರಿವಿಗೆ ದಕ್ಕಿದಾಗಲೇ ಮುಂದಿನ ದಾರಿ ನಿಚ್ಚಳವಾಗೋದು. ಖುಷಿ ಅನ್ನೋದು ಮರೆತುಹೋಗಿ ಸಣ್ಣದೊಂದು ವಿಷಾದ, ಹೇಳಲಾಗದ ನಾಚಿಕೆ ಕಾಡೋದು. ಏನು ಬದಲಾಗಬೇಕು ಅಂತ ಗೊತ್ತಾದಾಗ ಮಾತ್ರ ಬದಲಾವಣೆ ಸಾಧ್ಯ.

ಹಾಗಾಗಿ ಕೆಳಗಿಡುವ ಮುನ್ನ ಮರೆಯಾಗುವ ಖುಷಿ ನಮ್ಮೊಳಗನ್ನು ಬಗೆಯುವಾಗ, ಕಸ ಕಡ್ಡಿಗಳನ್ನು, ಕಲ್ಮಷಗಳನ್ನು ಎಸೆದು ಸ್ವಚ್ಛಗೊಳಿಸುವಾಗ ಸದ್ದಿಲ್ಲದಂತೆ ಯಾವುದೋ ಕಲ್ಲಿನ ನಡುವೆಯಲ್ಲಿ ಒಸರುವ ಜಲದಂತೆ ಖುಷಿ ಚಿಮ್ಮಲು ಶುರುವಾಗುತ್ತದೆ. ಎಷ್ಟು ಆಳಕ್ಕೆ ಅಗಿದಿದ್ದಿವಿ ಅನ್ನುವುದರ ಪಾತ್ರದ ಮೇಲೆ ತುಂಬಿಕೊಳ್ಳುತ್ತಾ ಹೋಗುತ್ತದೆ.

ಹುಡುಕಾಟ ನಡೆದಷ್ಟೂ ದಾರಿ ದೊರಕುತ್ತಾ ಹೋಗುತ್ತದೆ, ನಡೆದಷ್ಟೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಅವರದೇ ಮಾತುಗಳಲ್ಲಿ ಹೇಳಬೇಕಾದರೆ "ನಾವು ಸುಮ್ಮನೆ ಆತುರಕ್ಕೆ ಬಿದ್ದು, ನಮ್ಮ ಕಾಲದ ಹುಚ್ಚಿಗೆ ಬಲಿಯಾಗಿ ಏನೆಲ್ಲಾ ಕಳಕೊಳ್ಳುತ್ತೇವೆ ಅಂತ ಗೊತ್ತಾಗುವುದೇ ಇಲ್ಲಾ" ಇದನ್ನ ಓದಿದ ಮೇಲೆ ಕಳೆದುಕೊಳ್ಳುತ್ತಿರುವುದು ಏನೇನು ಅನ್ನೋದು ಸ್ವಲ್ಪವಾದರೂ ಅರಿವಿಗೆ ದಕ್ಕಬಹುದು, ದಕ್ಕಿದ ಮೇಲೆ ಬದುಕು ಬದಲಾಗಬಹುದು. ಬದಲಾದ ಮೇಲೆ ಖುಷಿಯ ಒರತೆ ಚಿಮ್ಮಬಹುದು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...