ಅಮ್ಮಾ ನಿಂಗೆ ನಂಗಿಂತ ಅವನಿ ಕಂಡ್ರೆ ಇಷ್ಟ, ನನ್ನ ದೂರ ಮಾಡ್ತಾ ಇದ್ದಿ ನೀನು ಅಂತ ಫೀಲ್ ಆಗುತ್ತೆ ಅಂತ ಅಹಿ ಕಣ್ಣಲ್ಲಿ, ಮೂಗಲ್ಲಿ ನೀರು ಸುರಿಸುತ್ತಾ ಮೂತಿ ಉದ್ದ ಮಾಡಿ ಹೇಳುತ್ತಿದ್ದರೆ ನಗು, ಸಂಕಟಗಳ ಸಮ್ಮಿಶ್ರ ಭಾವ.

ಯಾಕೆ ನಿಂಗೆ ಹಾಗನ್ನಿಸ್ತು ಅಂದ್ರೆ ಗೊತ್ತಿಲ್ಲ ಅಮ್ಮಾ ಬೇಜಾರಾಯ್ತು ಅಂತ ಇನ್ನೂ ಜೋರಾಗಿ ಅಳುವವಳನ್ನು ತಬ್ಬಿಕೊಂಡೆ. ಆಲಾಪ ಮಂದ್ರದಿಂದ ಶುರುವಾಗಿ ಪ್ರಸ್ತಾರವನ್ನು ವಿಸ್ತರಿಸಿ ಹಾಗೆ ಹೋಗುತ್ತಾ ಹೋಗುತ್ತಾ ತಾರಕ್ಕಕ್ಕೆ ಮುಟ್ಟಿ ಅಲ್ಲಿಂದ ಮತ್ತೆ ನಿಧಾನವಾಗಿ ಇಳಿಯುತ್ತಾ ಸಹಜ ಸ್ವರಕ್ಕೆ ಬಂದು ಮುಟ್ಟಿತು. ಇಡೀ ವಾತಾವರಣದಲ್ಲಿ ಒಂದು ನಿಶಬ್ದ ಆವರಿಸುವವರೆಗೂ ತಲೆ ನೇವರಿಸುತ್ತಾ ಸುಮ್ಮನಿದ್ದು ಬಿಟ್ಟೆ. ಒಳಗಿನ ಭೋರ್ಗೆರೆತ ಮುಚ್ಚಿಡುತ್ತಾ...

ಅಪ್ಪ ಕೈ ಬಿಡಿಸಿಕೊಂಡು ನಡೆದಾಗ ಆ ಆಲೋಚನೆಗಳನ್ನೆಲ್ಲಾ ಅವನ ಜೊತೆಗೆ ಕೊಂಡು ಹೋಗಿದ್ದಾನೇನೋ ಅನ್ನುವಂತೆ ಸುಮ್ಮನಾಗಿ ಬಿಟ್ಟಿದ್ದೆ. ಮನಸ್ಸಿನೊಳಗೆ ಇಂಥಹ ಆಲೋಚನೆ ಹುಟ್ಟದಂತೆ ಬಂಡೆಯೆಳೆದು ನಾನೂ ಕಲ್ಲೇ ಅಂತ ಭಾವಿಸಿದ್ದವಳಿಗೆ ಆ ಕಲ್ಲು ಸರಿಸಿ ಒರೆತೆ ಚಿಮ್ಮುವಹಾಗೆ ಮಾಡಿದ್ದು ಆಂಟಿ. ಅವರೊಬ್ಬರ ಜೊತೆಗೆ ಈ ವಿಷಯಕ್ಕೆ ಕೋಪ ಅಳು ಎಲ್ಲವನ್ನೂ ನಡೆಸಿದ್ದೆ. ಮತ್ತುಳಿದಂತೆ ಬಂಡೆ ಸ್ವಲ್ಪವೂ ಜರುಗಡೆ ಗಟ್ಟಿಯಾಗಿ ನಿಂತಿತ್ತು. ಅಹಿ ಈ ಪ್ರಶ್ನೆ ಎತ್ತುವವರೆಗೂ...

ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಪ್ರಶ್ನೆಯಲ್ಲೇ, ಗೊಂದಲದಲ್ಲೇ ಇಲ್ಲಾ ಹೇಳಿಕೆಯಲ್ಲೇ ಉತ್ತರವಿರುತ್ತದೆ. ಆದರೆ ನೀರಿಕ್ಷೆ ಅದರಿಂದಾದ ಬೇಸರ ಕಣ್ಣು ಮಂಜಾಗಿಸಿ ದೃಷ್ಟಿ ಮಂಕಾಗಿಸಿರುತ್ತದೆ ಅಷ್ಟೇ. ಯಾವ ಸಂಬಂಧವೂ ಯಾವುದನ್ನೂ ರಿಪ್ಲೇಸ್ ಮಾಡಲು ಆಗುವುದಿಲ್ಲ ಅನ್ನೋ ಸತ್ಯವನ್ನು ಮರೆಯೋ ಹಾಗೆ ಮಾಡುತ್ತದೆ. ಇವಳು/ನು ನನ್ನ ತಂಗಿ ತರಹ, ಅಣ್ಣ, ತಮ್ಮನ ತರಹ, ತಾಯಿ ತರಹ ಅಂತ ಹೇಳ್ತಿವೆಯೇ ಹೊರತು ಇವ್ರು ನಮ್ಮ ಅಮ್ಮಾ ಅಂತ ಹೇಳೋಕೆ ಸಾದ್ಯವೇ ಇಲ್ಲ. ಅದಕ್ಕೆನೇ ತಾರ್ಕಿಕ ಕಾರಣ ಕೊಟ್ಟರೂ ಒಮ್ಮೆ ಆಳವಾಗಿ ಆಲೋಚಿಸಿದರೆ ಅಂತರಾತ್ಮವೂ ಒಪ್ಪಿರುವುದಿಲ್ಲ.

ಯಾವ ಗರ್ಭದಲ್ಲಿ  ರೂಪುಗೊಂಡು ನವಮಾಸಗಳನ್ನು ಕಳೆದು ಅವಳದೆ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದರೂ ಅವಳೇ ತಾಯಿ ಅನ್ನೋದು ನಮ್ಮ ಅರಿವಿಗೆ ಹೇಗೆ ಬರುತ್ತೆ? ಹಾಗೆ ಹೇಳಬೇಕಾದರೆ ಗರ್ಭವಾಸದ ಅರಿವಿರಬೇಕು. ಅದರ ಅರಿವು ಕರುಳಬಳ್ಳಿ ಕಡಿಯುವಾಗಲೇ ಕಡಿದುಹೋಗಿರುತ್ತದೆ. ಆದರೂ ತಾಯಿಯ ಸ್ಪರ್ಶವಾಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಮಗು ಅಳು ನಿಲ್ಲಿಸುವುದು ಯಾಕೆ? ಸುರಕ್ಷಿತ ಭಾವ ಹೊಂದುವುದು ಯಾಕೆ? ನೆಮ್ಮದಿಯಾಗಿ ಮಲಗುವುದು ಯಾಕೆ? ಬಹುಶಃ ಇದಕ್ಕೆ ಕಾರಣ ಅಂತಃಕರಣ. ಅದೇ ದಾರಿ ತೋರಿಸುತ್ತದೆ. ಕಣ್ಣಿಗೆ ಕಾಣದಿದ್ದರೂ ಕರುಳಿಗೆ ಅರಿವಾಗುತ್ತದೆ ಅನ್ನೋ ಗಾದೇ ಮಾತು ಎಷ್ಟು ಸತ್ಯ ಅನ್ನೋದು ಅರಿವಾಗೋದು ಇಂಥಹ ಕ್ಷಣಗಳಲ್ಲೇ. ..

ಹಾಗಾಗಿ ಯಾರೋ ಯಾರನ್ನೋ ರಿಪ್ಲೇಸ್ ಮಾಡ್ತಾರೆ ಅನ್ನೋದು ಭ್ರಮೆ ಅಷ್ಟೇ.. ಯಾರೋ ಇನ್ಯಾರೋ ತರಹ ಅನ್ನಿಸಬಹುದು, ಆಗಬಹುದೇ ಹೊರತು ಅವರೇ ಆಗಲು ಸಾದ್ಯವಿಲ್ಲ, ಹಾಗೆ ಹೇಳುವ ವ್ಯಕ್ತಿಯೂ ಅದನ್ನ ಒಪ್ಪಿಕೊಳ್ಳುವುದಿಲ್ಲ. ಒಂದು ಭ್ರಮೆ ಇಬ್ಬರನ್ನೂ ಆವರಿಸಿ ಅದನ್ನು ನಂಬುವ ಹಾಗೆ ಮಾಡುತ್ತದೆ ಅಷ್ಟೇ. ಭ್ರಮೆ ಹರಿದಾಗ ಎಲ್ಲವೂ ನಿಚ್ಚಳ.. ಪ್ರತಿ ಸಂಬಂಧವೂ ತನ್ನದೇ ಆದ ಸ್ಥಾನ ಹೊಂದಿದೆ. ಮತ್ತದನ್ನು ಯಾರೂ ಯಾವುದೂ ಬದಲಾಯಿಸಲು ಸಾದ್ಯವಿಲ್ಲ. ಆ ಎರಡು ಸಂಬಂದಗಳ ನಡುವಿನ ಅಪ್ಯಾಯತೆ ಕಡಿಮೆಯಾಗಬಹುದು ಆದರೆ ಸ್ಥಾನ......

ಪ್ರತಿ ಸಂಬಂಧಕ್ಕೂ ತನ್ನದೇ ಆದ ಹಕ್ಕಿದೆ, ಕರ್ತವ್ಯವಿದೆ. ಅದನ್ನು ಅವರು ಮಾಡದೆ ಇನ್ಯಾರೋ ಮಾಡಿದರೆ ಅದು ಸಹಾಯವಾಗಬಲ್ಲದೇ ವಿನಃ ಕರ್ತವ್ಯ ನಿಭಾಯಿಸಿದ ಹಾಗೆ ಆಗುವುದಿಲ್ಲ. ಆ ಕ್ಷಣಕ್ಕೆ ಹಗುರವೆನಿಸಿದರೂ ಇನ್ನಷ್ಟು ಋಣದ ಭಾರ ಬದುಕು ಹೊರುತ್ತದೆ. ಭಾರವನ್ನು ಕಳೆದುಕೊಳ್ಳದೆ ಬದುಕು ಹಗುರಾಗುವುದಿಲ್ಲ. ಹಗುರಾಗದೆ ನಿರಾಳವಿಲ್ಲ. ಏನೇ ಪ್ರೀತಿ ತೋರಿದರೂ, ಎಷ್ಟೇ ಹತ್ತಿರವೆನಿಸಿದರೂ ಅಲ್ಲೊಂದು ಅಂತರ ಸದಾ ಇದ್ದೇ ಇರುತ್ತದೆ. ಇದು ಅರ್ಥವಾದ ದಿನ ಯಾವ ಬಂಧವೂ ಕಟ್ಟಿ ಹಾಕುವುದಿಲ್ಲ, ಅಲುಗಾಡಿಸುವುದಿಲ್ಲ.

ಪ್ರೀತಿ ಅನ್ನೋದು ಡಿಮ್ಯಾಂಡ್ ಮಾಡಿ ಪಡೆದುಕೊಳ್ಳುವುದಲ್ಲ, ಹಾಗೆ ಪಡೆದುಕೊಂಡಿದ್ದು ಉಳಿಯುವುದೂ ಇಲ್ಲ. ನಮ್ಮ ಸ್ಥಾನ ನಮ್ಮದೇ ಆದರೂ ಅದನ್ನು ಉಳಿಸಿಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು. ಉಳಿಸಿಕೊಂಡಿಲ್ಲ ಅಂದರೆ ನಾವು ಅರ್ಹತೆ ಕಳೆದುಕೊಂಡಿದ್ದೆವೆಯೇ ಹೊರತು ಇನ್ಯಾರು ಗಳಿಸಿಕೊಂಡಿದ್ದಾರೆ ಅಂತ ಕೊರಗುವುದರಲ್ಲಿ ಅರ್ಥವಿಲ್ಲ. ಅದು ನಮ್ಮ ಸೋಲು ಮತ್ತದನ್ನು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಂಡಾಗಲೆ ಗಳಿಸುವ ಮಾರ್ಗ ಕಾಣಿಸೋದು ...

ಅರೆ ಇದನ್ನು ಅಹಿಗೆ ಹೇಳ್ತಾ ಇದಿನಾ ನನಗೆ ನಾನೇ ಸ್ಪಷ್ಟವಾಗುತ್ತಿದ್ದೆನಾ ಅನ್ನೋ ಗೊಂದಲದಲ್ಲಿ ಅವಳ ಕಡೆಗೆ ನೋಡಿದೆ. ನಾನೊಬ್ಳೇ ನಿನ್ನ ಹೊಟ್ಟೆಲಿ ಹುಟ್ಟಿರೋದು ಯಾರೂ ರಿಪ್ಲೇಸ್ ಮಾಡೋಕೆ ಆಗೋಲ್ಲ ನೀನು ಏನಾದರೂ ಮಾಡ್ಕೋ ಅಂತ ಚಿತ್ರ ಬಿಡಿಸ್ತಾ ಇತ್ತು. ಅದನ್ನು ಚೆಂದವಾಗಿ ಮಾಡಿಸಿ ಟು ಡಿಯರ್ ಅಮ್ಮಾ ಅಂತ ಬರೆದು ಲವ್ ಯು ಅಂತ ಸೈನ್ ಮಾಡಿತ್ತು.

ಹೇಳಿದ್ದು ಅಹಿಗಾದರೂ ಸ್ಪಷ್ಟವಾಗಿದ್ದು ನಂಗೆ ಅನ್ನೋದರ ನಿದರ್ಶನವಾಗಿ ಅದನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ.

Comments

Popular posts from this blog

ಕೇಪಿನ ಡಬ್ಬಿ.

ಮೇಲುಸುಂಕ.