hampi

ಜಗತ್ತಿನ ಇತಿಹಾಸದಲ್ಲೇ ಸುವರ್ಣಯುಗ ಎಂದು ಕರೆಸಿಕೊಂಡಿದ್ದು ವಿಜಯನಗರ ಸಾಮ್ರಾಜ್ಯ. ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ, ಶಿಲ್ಪಕಲಾ ಎಲ್ಲದರಲ್ಲೂ ವೈಭವದ ತುತ್ತತುದಿಯನ್ನು ಮುಟ್ಟಿದ ಕಾಲವದು.  ರಸ್ತೆಯ ಇಕ್ಕೆಲಗಳಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂದರೆ ಆಗಿನ ವೈಭವ ಹೇಗಿದ್ದೀರಬಹುದು ಎಂದು ಊಹಿಸಿಕೊಳ್ಳಲು ಸಹಾಯ ಮಾಡಬಹದು.

ಕೊನೆಯ ಯುದ್ಧದ ನಂತರ ಗೆದ್ದು ಮತ್ತರಾದ ಸುಲ್ತಾನರ ಪಡೆ ವಿಜಯನಗರಕ್ಕೆ ಮುತ್ತಿಗೆ ಹಾಕಿ ಅದನ್ನು ನಾಶ ಪಡಿಸಲು ತೆಗೆದುಕೊಂಡ ಕಾಲ ಬರೋಬ್ಬರಿ ಆರು ತಿಂಗಳು ಎಂದರೆ ಅದರ ವೈಭವ ಹೇಗಿದ್ದಿರಬಹುದು. ಒಂದೇ ಒಂದು ಕುರುಹೂ ಇಲ್ಲದಂತೆ ರಾಜ ಪ್ರಾಕಾರವನ್ನು ಸುಟ್ಟು ಬೂದಿಮಾಡಿ, ಸಂಪತ್ತನ್ನು ಕೊಳ್ಳೆ ಹೊಡೆದು ವಿಗ್ರಹಗಳನ್ನು ನಾಶ ಮಾಡಿ ತಮ್ಮ ಕ್ರೌರ್ಯದ ಪರಮಾವಧಿ ಮೆರೆದರು. ವೈಭವ, ಕ್ರೌರ್ಯ ಎರಡೂ  ಶಿಖರದ ತುತ್ತತುದಿಯೇರಿದ್ದನ್ನ ಅನುಭವಿಸಿದ ಏಕೈಕ ಸಾಮ್ರಾಜ್ಯ ಇದೆ ಏನೋ...

ಕೇವಲ ಸುಲ್ತಾನರು ಮಾತ್ರ ಇದನ್ನು ಹಾಳುಗೆಡವಿದ್ದಾ? ಉಹೂ ನಂತರದ ಕಾಲದಲ್ಲಿ ಇತಿಹಾಸದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ, ತಿಳಿಯಬೇಕು ಎನ್ನುವ ಆಸಕ್ತಿಯೂ ಇಲ್ಲದ ಮುಂದಿನ ಪೀಳಿಗೆ ಅಳಿದುಳಿದ ಕಟ್ಟಡಗಳನ್ನೇ ಮನೆಯಾಗಿಸಿಕೊಂಡು, ಬಿದ್ದ ಕಲ್ಲುಗಳನ್ನು ಉಪಯೋಗಿಸಿಕೊಂಡು, ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೋ ಹಾಗೆ ಬಳಸಿಕೊಂಡು ಹಾಳುಮಾಡಿದ್ದು ಅದಕ್ಕೂ ಹೆಚ್ಚಿನ ಕ್ರೌರ್ಯ ಅನ್ನಿಸಿದ್ದು ಸುಳ್ಳಲ್ಲ. ನಮ್ಮ ಘನತೆಯ ಕುರುಹಾಗಿ ಉಳಿಯಬೇಕಿದ್ದ ಸ್ಥಳ ನಮ್ಮದೇ ಅನಾಸಕ್ತಿಗೆ, ಅನಾದರಕ್ಕೆ ಸಿಲುಕಿ ನರಳಿತ್ತು. ಹಾಳು ಹಂಪೆ ಎನ್ನುವುದಕ್ಕೆ ಅನ್ವರ್ಥಕವಾಗಿ ನಿಂತಿತ್ತು.

ಅಲ್ಲಲ್ಲಿ ಉಗುಳುವ, ಅವಶೇಷಗಳ ಮೇಲೆ ಅಡುಗೆ ಮಾಡುವ, ಒಂದೊಂದೇ ಕಲ್ಲನ್ನು ಜಾರಿಸಿ ಮನೆಗೆ ಬಳಸಿಕೊಳ್ಳುವ, ಕಟ್ಟಡಗಳ ಬದಿಯಲ್ಲೇ ಮೂತ್ರ ಮಾಡುವ, ಆವರಣದಲ್ಲೇ ತಿಂದು ಅಲ್ಲೇ ಬಹಿರ್ದೆಸೆಗೆ ಕೂರುವ  ಜನರನ್ನು ನೋಡಿದಾಗಲೆಲ್ಲ ಹಂಪೆ ಪೂರ್ಣ ನಾಶವಾಗಿ ಹೋಗಬಾರದಿತ್ತಾ ಅನ್ನಿಸಿದ್ದು ಅದೆಷ್ಟು ಸಲವೋ...  ನೋಡಿ ವಾಪಾಸ್ ಬರುವಾಗ ಹೆಮ್ಮೆಯ ಬದಲಾಗಿ ವಿಷಾದವನ್ನೇ ಅವರಿಸುತಿತ್ತು. ನಮ್ಮ ಇತಿಹಾಸ ಪ್ರಜ್ಞೆಯ ಬಗ್ಗೆ ಕ್ರೋಧವೂ...

ಮೊನ್ನೆ ಮತ್ತೆ ಹಂಪಿಗೆ ಹೋದಾಗ ಸುತ್ತಲೂ ಗೋಡೆಯನ್ನು ಕಟ್ಟುತಿದ್ದರು. ಮತ್ತೇನು ಅನಾಹುತವೋ ಎಂದು ಗಾಬರಿಯಲ್ಲೇ ಗೈಡ್ ಅನ್ನು ಪ್ರಶ್ನಿಸಿದರೆ ಮೇಡಂ ಹಂಪಿಗೆ ಒಳ್ಳೆಯ ಕಾಲ ಬರುತ್ತಿದೆ. ಇದನ್ನು ರಕ್ಷಣೆ ಮಾಡುವ ಸಲುವಾಗಿಯೇ ಸುತ್ತಲೂ ಗೋಡೆ ಕಟ್ಟುತ್ತಿದ್ದಾರೆ, ಅಷ್ಟೇ ಅಲ್ಲ ಸಂಶೋಧನೆಗಳೂ, ಉತ್ಖನನ ಎಲ್ಲವೂ ವೇಗವಾಗಿ ನಡೆಯುತ್ತಿದೆ. ಎಷ್ಟೊಂದು ಹೊಸ ಅವಶೇಷಗಳೂ ಆಗಿನ ಕಾಲದ ನೀರಿನ ಪೈಪ್ ಗಳೂ ಸಿಕ್ಕಿವೆ ಗೊತ್ತಾ...

ಇದಕ್ಕಾಗಿಯೇ ಮೊತ್ತ ಮೊದಲ ಬಾರಿಗೆ ಅನುದಾನ ಸಿಕ್ಕಿದೆ ಹಾಗೂ ಕಮಿಟಿಯೂ ರೂಪುಗೊಂಡಿದೆ. ಹಂಪಿಯ ಇತಿಹಾಸದಲ್ಲೇ ಇದು ಮೊದಲು ಮೇಡಂ... ಎಲ್ಲಾ ನರೇಂದ್ರ ಮೋದಿಯ ಕೃಪೆ. ಇಲ್ನೋಡಿ ನೋಟಿನಲ್ಲೂ ಹಂಪಿಯ ಕಲ್ಲು ರಥ ಅಂತ ಗೈಡ್ ಉತ್ಸಾಹದಿಂದ ವಿವರಿಸುತ್ತಿದ್ದರೆ ಅಲ್ಲಿಯವರೆಗೂ ಕೋಪ, ವಿಷಾದದಿನ ಮಂಕಾಗಿದ್ದ ಅಹಿಯ ಮುಖದಲ್ಲೂ ನಗೆ ಚಿಮ್ಮಿ ಅದು ಅಲ್ಲಿಂದ ಹರಿದು ಬಂದು ನನ್ನ ಮುಖದಲ್ಲೂ ಪ್ರತಿಫಲಿಸಿತು.

ನಮ್ಮತನದ ಬಗ್ಗೆ ಗೌರವಿದ್ದವರು ಮಾತ್ರ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡ್ತಾರೆ.  ನಮ್ಮತನ ನಮ್ಮ ಹೆಮ್ಮೆ ಆಗಬೇಕೇ ಹೊರತು ಇನ್ಯಾವುದೋ ಅಲ್ಲ. ಹಾಗಾಗಬೇಕಾದರೆ ನಿಜವಾದ ಇತಿಹಾಸ ತಿಳಿಯಬೇಕು. ಹಾಗೆ ತಿಳಿಯಬೇಕಾದರೆ ಅದರ ಪಳೆಯುಳಿಕೆಗಳನ್ನೂ ಉಳಿಸಿಕೊಳ್ಳಬೇಕು. ಇತಿಹಾಸ ಉಳಿದರೆ ನಾವೂ ಉಳಿದಂತೆ. ಆ ವಿಷಯದಲ್ಲಿ ಸದ್ದಿಲ್ಲದೇ ಪ್ರಯತ್ನಿಸುತ್ತಿರುವ ವ್ಯಕ್ತಿ ನರೇಂದ್ರ ಮೋದಿ.

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.