ಶಿಲೆಗಳಲ್ಲಡಗಿದ ಸತ್ಯ.

ಜಗತ್ತಿನ ಉಳಿದ ಕಡೆ ನಾಗರಿಕತೆ ಇನ್ನೂ ಕಣ್ಣು ಬಿಡದ ಹೊತ್ತಿನಲ್ಲಿ ಭಾರತದಲ್ಲಿ ಅದು ತನ್ನ ತುತ್ತ ತುದಿಯನ್ನು ಮುಟ್ಟಿತ್ತು. ಹಾಗಾಗಿಯೇ ಇದನ್ನು ನಾಗರಿಕತೆಗಳ ತೊಟ್ಟಿಲು ಎಂದು ಕರೆದರು ಎಂದು ಶಾಲೆಯಲ್ಲಿ ಪಾಠ ಮಾಡುವಾಗ ಮೇಷ್ಟ್ರು ಹೇಳಿದ್ದು ಕೇಳಿ ಆಶ್ಚರ್ಯವೇನೂ ಆಗಿರಲಿಲ್ಲ. ಯಾಕೆಂದರೆ ದಶಾವತಾರದ ಕತೆ ಕೇಳುತ್ತಾ, ಹಾಡು ಹೇಳುತ್ತಾ ಬೆಳೆದ ನಮಗೆ ಇದು ಕಲಿಕಾಲ ಕೊನೆಯ ಕಾಲ ಹಾಗಾಗಿ ಅದರಲ್ಲೇನು ವಿಶೇಷ ಎಂದೇ ಅನ್ನಿಸಿತ್ತು.

ಯಾವುದೇ ವಿಷಯವನ್ನು ತಿಳಿಯದೆ ಏನು ಬೇಕಾದರೂ ಮಾತಾಡಬಹುದು, ಧಿಕ್ಕರಿಸಬಹುದು. ತಿಳಿಯುವಿಕೆ ಸಮಯ ಶ್ರಮ ಎರಡನ್ನೂ ಬೇಡುತ್ತದೆ. ತಿಳಿದ ಮೇಲೆ ವಿನಯ ಹಾಗೂ ಮೌನ ಆವರಿಸುತ್ತದೆ. ಜಗತ್ತಿಗೆ ಅಧ್ಯಾತ್ಮವನ್ನು ಪರಿಚಯಿಸಿದ ದೇಶ ನಮ್ಮದು. ಅಧ್ಯಾತ್ಮ, ಧರ್ಮ ಬೇರೇನಲ್ಲ ಜೀವನ ಪದ್ದತಿ ಎಂದು ಸಾರಿದ ಮೊಟ್ಟ ಮೊದಲ ದೇಶವೂ ನಮ್ಮದೇ. ಹಾಗಾಗಿಯೇ ಇಲ್ಲಿನ ಅಂತಶಕ್ತಿ ಕುಗ್ಗಿಸುವ ಏಕೈಕ ಮಾರ್ಗವೆಂದರೆ ಇಲ್ಲಿನ ಆ ಪದ್ದತಿಯ ಬದಲಾವಣೆ ಎಂದು ತಿಳಿದು ಅದನ್ನು ಸಮರ್ಥವಾಗಿ ನಿರ್ವಹಿಸಿ ಅಂದು ದೈಹಿಕವಾಗಿ, ಇಂದು ಮಾನಸಿಕವಾಗಿ ನಮ್ಮನ್ನು ಆಳುತ್ತಿರುವುದು ಪಾಶ್ಚ್ಯಾತ್ಯ ದೇಶದವರು.

ಇಲ್ಲಿ ನಡೆದ ಪ್ರತಿಯೊಂದು ಘಟನೆಗೂ ಸಮಯವಿದೆ, ಒಂದಕ್ಕೊಂದು ಕೊಂಡಿಯಿದೆ. ಇಲ್ಲಿ ಯಾವುದೂ ಹೊಸದಲ್ಲ, ಯಾವುದೂ ತಕ್ಷಣಕ್ಕೆ ಘಟಿಸಿದ್ದೂ ಅಲ್ಲ ಎಂದು ಅರ್ಥವಾಗುವುದು ಸದ್ಯೋಜಾತ ಭಟ್ಟರ ಶಿಲೆಗಳಲ್ಲಡಗಿದ ಸತ್ಯ ಎಂಬ ಪುಸ್ತಕ ಓದುವಾಗ. ಯಾವುದನ್ನೂ ವೈಭವಿಕರಿಸದೆ, ರಂಜಿಸದೆ ದಾಖಲೆಗಳನ್ನು ಕೊಟ್ಟು ನಿರ್ಲಿಪ್ತವಾಗಿ ವಿಷಯವನ್ನು ಹೇಳುತ್ತಾ ಹೋಗಿದ್ದಾರೆ. ಸತ್ಯ ಯಾವತ್ತೂ ಅಡಿಗಿರುತ್ತದೆ. ಅದನ್ನು ಹುಡುಕಬೇಕು. ಸುಲಭಕ್ಕೆ ಸಿಗುವುದಿಲ್ಲ. ಹಾಗೆಂದು ಸಾಯುವುದೂ ಇಲ್ಲ. ಯಾಕೆಂದರೆ ಅದು ಅಡಗಿರುವುದು ಕಲ್ಲಿನಲ್ಲಿ. ಕಲ್ಲು ಸಬಲ ಹಾಗೂ ದುರ್ಗಮ. ಸತ್ಯವೂ ಹಾಗೆ ದುರ್ಗಮದ ಹಾದಿಯಲ್ಲಿನ ಸಂಗತಿ.

ಪ್ರತಿಯೊಂದನ್ನೂ ಹೋಲಿಸಿಕೊಳ್ಳುವುದು ನಮ್ಮ ಮೂಲಭೂತ ಗುಣವೇನೋ ಎಂಬುವಷ್ಟು ಅಭ್ಯಾಸವಾಗಿದೆ. ಜೊತೆಗೆ ಮಾಡಿದ ಪ್ರತಿ ಒಳ್ಳೆಯದನ್ನು ಬೇರೆಯಾರೋ ಮಾಡಿದ್ದು ಎನ್ನುವ ವಿಶಾಲ ಮನೋಭಾವವೂ ಅಷ್ಟೇ ಸಹಜವಾಗಿದೆ. ಈ ಪುಸ್ತಕದ ಬಗ್ಗೆ ಇನ್ನು ಏನೂ ಹೇಳಲು ಉಳಿಸಿಲ್ಲ ಅನ್ನುವ ಹಾಗೆ ಸೇತುರಾಂ ಸರ್ ಮುನ್ನಡಿ ಬರೆದಿದ್ದಾರೆ. ಕುತುಬ್ ಮಿನಾರ್ ನೋಡಿ ಅಬ್ಬಾ ಎಂದು ಉದ್ಘರಿಸುವ ನಮಗೆ ಅದರ ಎದುರು ಇರುವ ಶತ ಶತಮಾನಗಳು ಕಳೆದರೂ ತುಕ್ಕು ಹಿಡಿಯದ ಕಬ್ಬಿಣದ ಕಂಬ ಕಾಣಿಸುವುದೂ ಇಲ್ಲ, ಅಚ್ಚರಿ ಹುಟ್ಟಿಸುವುದೂ ಇಲ್ಲ. ಕುತುಬ್ ಮಿನಾರ್ ಹೇಗೆ ಕಟ್ಟಿದರು, ಅದನ್ನು ಕಟ್ಟಲು ಬಳಸಿಕೊಂಡ ವಸ್ತುಗಳು ಯಾವವು ಎಲ್ಲಿಂದ ಕೊಳ್ಳೆ ಹೊಡೆದಿದ್ದು, ಯಾವುದನ್ನು ನಾಶ ಮಾಡಿ ತಂದಿದ್ದು ಎಂದು ಯಾವ ಪಾಠವೂ ಬೋಧಿಸುವುದಿಲ್ಲ. ಇಲ್ಲಿರುವ ಬಹುತೇಕ ಸ್ಮಾರಕಗಳು ನಮ್ಮತನದ, ನಮ್ಮ ಆತ್ಮಾಭಿಮಾನದ ಮೇಲೆ ಕಟ್ಟಿದ ಪರಕೀಯರ ವಿಜಯ ಪತಾಕೆ. ಯಾವುದು ಅವಮಾನವೆನಿಸಬೇಕಿತ್ತೋ ಅದು ಸಮ್ಮಾನವೆನಿಸುವ ಹಾಗಾಗಿರೋದು ಈಗಿನ ದುರಂತ. ಅದೇ ಅವರಿಗೆ ಬೇಕಾಗಿದ್ದು. ನಮಗಿನ್ನೂ ತಿಳಿಯದೆ ಇರೋದು.

ಇಂಥ ಅನೇಕ ಉದಾಹರಣೆಗಳನ್ನು ದಾಖಲೆಯ ಸಹಿತ ಕೊಡುತ್ತಾ ಅವರು ಇತಿಹಾಸದ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತಾ ಹೋಗಿದ್ದಾರೆ. ನಾಸ್ತಿಕವಾದ ಎನ್ನುವುದು ಹೊಸತಲ್ಲ ಅಂದಿನಿಂದಲೂ ಇತ್ತು ಎನ್ನುವುದಕ್ಕೆ ಪುರಾವೆ ಕೊಟ್ಟಿದ್ದಾರೆ. ಒಂದು ತಲೆಮಾರಿನಿಂದ ಮರೆಮಾಚಲಾಗಿರುವ ಸತ್ಯವನ್ನು ಬಯಲಿಗೆ ತರುವ ಪ್ರಯತ್ನ ಮಾಡಿದ್ದಾರೆ. ಭಾರತ ಏನೂ ಬೇರೆಯವರ ಮೇಲೆ ಧಾಳಿ ಮಾಡಲು ಹೋಗಿಲ್ಲ ಎನ್ನುವುದು ನಮ್ಮ ಹೆಮ್ಮೆಯಾದರೂ ಯಾಕೆ ಮಾಡಿಲ್ಲ ಎನ್ನುವುದೂ ಅಷ್ಟೇ ಮುಖ್ಯ. ಯಾಕೆಂದರೆ ಇಲ್ಲಿ ಎಲ್ಲವೂ ಇತ್ತು. ಸಂಪತ್ತು, ಕಲೆ, ವಿದ್ಯೆ, ಪಾಂಡಿತ್ಯ. ಶಿಕ್ಷಣ. ಹಾಗಾಗಿಯೇ ಜನರಿಗೆ ಸಂತೃಪ್ತಿಯಿತ್ತು. ಯಾವಾಗ ಧಾಳಿ ಮಾಡುತ್ತೇವೆ ಎಂದರೆ ನಮ್ಮಲ್ಲಿ ಇಲ್ಲದ್ದು, ಮುಖ್ಯವಾದದ್ದು, ಬೆಲೆಬಾಳುವಂತದ್ದು ಮತ್ತೇನೋ ಇನ್ನೊಬ್ಬರ ಬಳಿ ಇದೆ ಎಂದಾಗ ಅದನ್ನು ಪಡೆಯುವ ಆಸೆ ಹುಟ್ಟುತ್ತದೆ. ಹಾಗಾಗಿಯೇ ಪರಕೀಯರು ಇಲ್ಲಿಗೆ ದಂಡೆತ್ತಿ ಬಂದರು, ಬೇಕಾದ್ದು ಕೊಂಡು ಹೋದರು. ಅಷ್ಟೇ ಆಗಿದ್ದರೆ ಚೆನ್ನಿತ್ತು ಮತ್ತೆ ಪುಟಿದೇಳುವ ಸಾಮರ್ಥ್ಯ ಈ ಮಣ್ಣಿಗಿತ್ತು. ಆದರೆ ಇವೆಲ್ಲದರ ಜೊತೆಗೆ ಅವರು ಕೊಂಡೊಯ್ದಿದ್ದು ನಮ್ಮ ಸ್ವಾಭಿಮಾನವನ್ನೂ ಕೂಡಾ...ಹಾಗಾಗಿಯೇ ಸ್ವಾತಂತ್ರ್ಯ ಬಂದ ದಶಕಗಳ ನಂತರವೂ ನಾವು ದಾಸ್ಯದಲ್ಲೇ ಮುಳುಗಿದ್ದೇವೆ ಅದನ್ನೇ ಬದುಕು ಎಂದುಕೊಂಡಿದ್ದೇವೆ ಎಂದು ಅರ್ಥವಾಗುವುದು ಈ ಪುಸ್ತಕದ ಓದುವಾಗಲೇ...

ಇತಿಹಾಸದ ಬಗ್ಗೆ ಆಸಕ್ತಿಯಿರುವವರು, ಈ ನೆಲದ ನಿಜ ಇತಿಹಾಸವನ್ನು, ತಮ್ಮ ಪೂರ್ವಜರ ಸಾಧನೆಯನ್ನು ಅರಿಯುವ ಮನಸ್ಸಿರುವರು ಓದಬಹುದಾದ ಉತ್ತಮ ಪುಸ್ತಕವಿದು.

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.