ನ್ಯಾಸ...

"ಅಹಂಕಾರ ಮಮಕಾರ ಕಳೆದುಕೊಳ್ಳದೆ ಸತ್ಯ ಗೊತ್ತಾಗೊಲ್ಲ".....

ಡೆಲ್ಲಿಯಿಂದ ವಾಪಾಸ್ ಬೆಂಗಳೂರಿಗೆ ಬರಲು ಏರ್ಪೋರ್ಟ್ ಕಡೆಗೆ ಹೊರಟಿದ್ದೆ. ಸಿಗ್ನಲ್ ಬಳಿ ಕಾರ್ ನಿಂತಾಗ ಸಹಜವಾಗಿಯೇ ದೃಷ್ಟಿ ಅತ್ತಿತ್ತ ಹೊರಳಿ ಒಂದು ಕಡೆ ಸ್ಥಿರವಾಯಿತು, ಮುಖದಲ್ಲಿ ಕೊಂಚ ಗೊಂದಲವೂ ಅದನ್ನೇ ಗಮನಿಸಿದ ಅಣ್ಣ ಅವರು ಇಸ್ಕಾನ್ ಬ್ರಹ್ಮಚಾರಿಗಳು, ಹೀಗೆ ಯಾವುದಾದರೂ ರಸ್ತೆಯ ಬದಿಯಲ್ಲಿ, ಸಿಗ್ನಲ್ ಸಮೀಪದಲ್ಲಿ ಪುಸ್ತಕ ಹಾಗೂ ಇತರ ಪ್ರಾಡಕ್ಟ್ ಮಾರ್ತಾರೆ. ಬೆಳಿಗ್ಗೆ ಅವರನ್ನು ಒಂದು ವಾಹನ ಬಂದು ಬಿಟ್ಟು ಹೋಗುತ್ತೆ ಸಂಜೆ ಬಂದು ಕರೆದುಕೊಂಡು ಹೋಗುತ್ತೆ ಎಂದ. ಸ್ವರದಲ್ಲಿನ ನಿರ್ವಿಕಾರಕ್ಕೆ ಬೆಚ್ಚಿ ಮುಖ ನೋಡಿದರೆ ಅದೂ ನಿರ್ಲಿಪ್ತವಾಗಿತ್ತು.

ನಾಲ್ಕು ವರ್ಣಗಳು ಇದ್ದ ಹಾಗೆ ನಾಲ್ಕು ಆಶ್ರಮಗಳು ಇದ್ದ ಮಣ್ಣಿದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಕೊನೆಯಲ್ಲಿ ಸನ್ಯಾಸ. ಅಧ್ಯಾತ್ಮ ಉಸಿರಾಗಿದ್ದ, ತನ್ನನ್ನು ತಾನು ಅರಿಯುವುದೇ ಗುರಿಯಾಗಿದ್ದ ಈ ನೆಲದಲ್ಲಿ ಬದುಕು ಹಾಗೂ ಅಧ್ಯಾತ್ಮ ಎಂದೂ ಬೇರೆ ಬೇರೆ ಆಗಿರಲೇ ಇಲ್ಲ. ಸನ್ಯಾಸ ಅನ್ನೋದು ಇಲ್ಲಿ ಹುಟ್ಟಿದ ಪ್ರತಿಯೊಬ್ಬರನ್ನೂ ಒಂದಾದರೂ ಒಂದು ಕ್ಷಣದಲ್ಲಿ ಕೈ ಬೀಸಿ ಕರೆದಿರುತ್ತದೆ. ವೈರಾಗ್ಯ ಕಾಡಿರುತ್ತದೆ,  ಆಸೆ ಬೆನ್ನು ಬಿದ್ದಿರುತ್ತದೆ. ಇದು ಪ್ರತಿಯೊಬ್ಬರ ಕನಸು. ಎಲ್ಲೋ ಕೆಲವರು ನನಸಾಗಿಸಿಕೊಂಡರೆ ಇನ್ನು ಕೆಲವರು ಅದರೊಳಗೆ ಕಾಲಿಟ್ಟು ಸುಟ್ಟುಕೊಳ್ಳುತ್ತಾರೆ, ಬೆಚ್ಚಿ ಹೊರಬೀಳುತ್ತಾರೆ. ಪತಂಗಕ್ಕೆ ಬೆಂಕಿಯ ಮೇಲಿರುವ ಮೋಹದಂತೆ ಮನುಷ್ಯನಿಗೆ ಸನ್ಯಾಸದ ಮೇಲೆ ವ್ಯಾಮೋಹ.

 ಹರೀಶ ಹಾಗಲವಾಡಿ ಅವರ ನ್ಯಾಸ ಇದನ್ನೇ ಬಿಡಿಸಿಡುತ್ತಾ ಹೋಗುತ್ತದೆ. ಸನ್ಯಾಸತ್ವದ ಬಯಕೆ, ಎಲ್ಲವನ್ನೂ ಬಿಟ್ಟು ಹೊರಟವರನ್ನೂ ಮತ್ತೆ ಸುತ್ತಿಕೊಳ್ಳುವ ಬಂಧಗಳು, ಯಾವುದೊ ಆಸೆ, ಇನ್ಯಾವುದೋ ಮೋಹ, ಬಯಲಿಗೆ ಬರಬೇಕು ಎಂದುಕೊಳ್ಳುತ್ತಲೇ ಕಟ್ಟಿಕೊಳ್ಳುವ ಬಂಧನ, ಮಾನಸಿಕ ತೊಳಲಾಟ, ಸತ್ಯದ ಹುಡುಕಾಟ, ಸಾಧನೆಯ ಕನಸು, ವಾಸ್ತವದ ಅಣಕು, ಕಾಡುವ ಲೆಕ್ಕಾಚಾರಗಳು, ಧಿಕ್ಕರಿಸಿದ್ದನ್ನೂ ಅಪ್ಪಿಕೊಳ್ಳುವ ಪರಿಸ್ಥಿತಿಗಳು.. ಸತ್ಯದ ಹುಡುಕಾಟ ಅನ್ನುವುದು ಸುಲಭವಲ್ಲ ಎಂದು ತಿಳಿಸುವ ದುರ್ಗಮ ಹಾದಿ, ಕ್ಷಣ ಕ್ಷಣಕ್ಕೂ, ಹೆಜ್ಜೆ ಹೆಜ್ಜೆಗೂ ಸಂಕಲ್ಪವನ್ನು ಪರೀಕ್ಷಿಸುವ ಸಂದರ್ಭಗಳು, ಮಾನಸಿಕ ಸ್ಥೈರ್ಯ ಹೀಗೆ ಕಾಡುವ ಪ್ರತಿ ತಲ್ಲಣಗಳನ್ನೂ ಬಹು ಸ್ಪಷ್ಟವಾಗಿ ಚೆಂದವಾಗಿ ಬರೆದಿದ್ದಾರೆ.

ಅರಿಷಡ್ವರ್ಗಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಅದರಲ್ಲೂ ಎಲ್ಲವನ್ನೂ ಕಳಚಿ ಹೊರಡುವವರು ಒಂದು ಕಡೆ ನೆಲೆಯಾಗಬಾರದು ಅನ್ನೋದು ನಿಯಮ. ಒಂದೇ ಕಡೆ ಬಹಳ ಕಾಲವಿದ್ದರೆ ಆ ಜಾಗದ ಮೋಹ, ಅಲ್ಲಿಯ ಜನರ ಅಂತಕರಃಣ ಕಟ್ಟಿ ಹಾಕುತ್ತೆ ಅನ್ನೋ ಎಚ್ಚರಿಕೆ. ತನ್ನನ್ನು ತಾನು ಉದ್ಧರಿಸಿಕೊಳ್ಳಲು ಹೊರಟವ ಇನ್ನೊಬ್ಬರನ್ನು ಉದ್ದರಿಸುತ್ತೇನೆ ಅನ್ನೋದು ಮೂರ್ಖತನ. ಆಹಾರ, ವಿಹಾರ, ಸಾಧನೆ ಎಲ್ಲವೂ ಸರಿಯಾಗಿ ನಡೆದರೂ ದೇಹ ಪ್ರತಿಭಟಿಸುತ್ತದೆ. ಗುರಿ ಮುಂದೆ ಇದ್ದರೆ ಗುರು ಹಿಂದಿರುತ್ತಾನೆ, ಇರಲೇಬೇಕು. ಗುರು ಸಮರ್ಥನಾಗಿದ್ದಲ್ಲಿ ಶಿಷ್ಯ ಎಡವದೇ ದಾರಿ ಸಾಗಬಲ್ಲ.

ಹಾಗೆ ಕಳೆದುಕೊಳ್ಳುತ್ತಾ ಪಡೆದುಕೊಳ್ಳುವುದನ್ನ, ಪಡೆದುಕೊಳ್ಳಲು ಯತ್ನಿಸುತ್ತಾ ಕಳೆದುಕೊಳ್ಳುತ್ತಾ ಹೊಗುವುದನ್ನ ನ್ಯಾಸ ವಿವರಿಸುತ್ತದೆ. ತನ್ನೊಳಗೆ ತಾನು ಇಳಿದಷ್ಟು ಮನುಷ್ಯ ತನಗೆ ತಾನು ಅರ್ಥವಾಗುತ್ತಾನೆ. ಪ್ರಾಪಂಚಿಕತೆಯಲ್ಲಿ ಇಳಿಯುತ್ತಾ ಹೋದಷ್ಟೂ ಕಳೆದು ಹೋಗುತ್ತಾನೆ. ಒಮ್ಮೆ ಆತ್ಮ ಸಾಕ್ಷಾತ್ಕಾರವಾದರೆ ಅಲ್ಲಿಗೆ ಭ್ರಮೆ ಹರಿದಂತೆ. ಹಾಗಾಗಿ ಕಾಮನೆಗಳೆಲ್ಲಾ ತೀರಿದ ಮೇಲೆ, ಪ್ರಾಪಂಚಿಕ ಸುಖ ದುಃಖ ಕಂಡ ಮೇಲಿನ ಸನ್ಯಾಸ ಹೆಚ್ಚು ಅರ್ಥಪೂರ್ಣ. ಸನ್ಯಾಸ ಎಂದರೆ ಬದುಕಿಗೆ ಬೆನ್ನು ತಿರುಗಿಸುವುದಲ್ಲ, ಸತ್ಯಕ್ಕೆ ಎದುರಾಗುವುದು. ಸತ್ಯವನ್ನು ಎದುರಿಸುವುದು ಜೀರ್ಣಿಸಿಕೊಳ್ಳುವುದು ಸುಲಭವಲ್ಲ.

ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಬದುಕಿನ ಸಮಸ್ಯೆಗಳಿಗೆ ಬೆನ್ನು ತೋರಲು ಸನ್ಯಾಸ ಒಂದು ಸುಲಭ ಮಾರ್ಗ ಅನ್ನೋದು ಇತ್ತೀಚಿಗೆ ಕಂಡು ಬರುವ ನಂಬಿಕೆ. ಆ ಮರೀಚಿಕೆ ಬೆನ್ನಟ್ಟಿ ಹೋಗಿ ಅಲ್ಲಿ ಮುಟ್ಟಲಾಗದೆ, ಇತ್ತ ಬರಲಾರದೆ ತೊಳಲಾಡುವ ಜೀವಗಳು ಹಲವು. ಸನ್ಯಾಸಕ್ಕೊಂದು ಘನತೆಯಿದೆ, ದುರ್ಗಮ ಹಾದಿಯಿದೆ. ಅದು ಸೋಮಾರಿಗಳ ಪಥವಲ್ಲ ಸಾಧಕರ ದಾರಿ. ಅಹಂಕಾರ, ಮಮಕಾರ ಕಳೆದುಕೊಂಡ ಮಾಡುವ ಪ್ರತಿ ಕೆಲಸವೂ ಪೂಜೆಯೇ...ಸಾಕ್ಷಾತ್ಕಾರದ ಮೆಟ್ಟಿಲೇ.. ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ನಂಬಿಕೆಯಿದ್ದರೆ ಎಲ್ಲವೂ ಸುಗಮವೇ. ಇದಕ್ಕಿಂತ ಮೋಕ್ಷಕ್ಕೆ ಬೇರ್ಯಾವ ದಾರಿಯಿದೆ...

ನಾಲ್ಕು ಆಶ್ರಮಗಳನ್ನು ಸೃಷ್ಟಿಸಿಯೂ ಪ್ರತಿ ಆಶ್ರಮದಲ್ಲೂ ಮೋಕ್ಷ ಕಂಡು ಕೊಳ್ಳುವ ಸ್ವಾತಂತ್ರ್ಯವನ್ನು ಕೊಟ್ಟ, ಪ್ರತಿ ಆಚರಣೆ, ಕೆಲಸವನ್ನು ಶ್ರದ್ದೆ ಸಮರ್ಪಣಾ ಭಾವದಿಂದ ಮಾಡಿದರೆ ಅದೇ ಸಾಕ್ಷಾತ್ಕಾರಕ್ಕೆ ದಾರಿಯಾಗುವ ಹಾಗೆ ಮಾಡಿದ, ಅಧ್ಯಾತ್ಮವೆಂದರೆ ಬೇರೇನಲ್ಲ  ಬದುಕಿನ ರೀತಿ ಎಂದು ತೋರಿಸಿದ್ದು ಇಲ್ಲಿನ ನೆಲ. ಆದರೆ ಪ್ರತಿಯೊಂದಕ್ಕೂ ಎರಡು ಮುಖವಿರುವಂತೆ ಅದನ್ನು ಉನ್ನತಿಗೋ ಇಲ್ಲಾ ಅವನತಿಗೋ ಬಳಸಿಕೊಳ್ಳುವ ಹಕ್ಕೂ ನಮಗೆ ಬಿಟ್ಟಿದ್ದು. ಬುದ್ಧಿ ಹಾಗೂ ಭಾವಗಳ ಸಂಘರ್ಷ ಇದರಲ್ಲಿದೆ. ದಾರಿಯ ಆಯ್ಕೆ, ನಡೆಯುವ ಕ್ಷಮತೆ ನಮ್ಮದೇ ಎನ್ನುವ ಅರಿವೂ ಇದೆ. ಗಟ್ಟಿಯಾಗಿ ನಿಲ್ಲದೆ ಹೋದರೆ ಬದುಕು ಗಾಳಿಪಟದಂತಾಗುತ್ತದೆ ಎನ್ನುವ ಎಚ್ಚರಿಕೆಯೂ ಇದೆ.

ಸನ್ಯಾಸದ ಮೇಲಿನ ಮೋಹಕ್ಕೆ ಹೋಗಿ ಅಲ್ಲಿ ತಲ್ಲಣಗಳನ್ನು ಅನುಭವಿಸಿ ಕೊನೆಗೆ ಯಾವುದಕ್ಕೋ ಜೋತುಬಿದ್ದು, ಸೆಕ್ಯೂರಿಟಿ ಅನ್ನುವ ಕಾರಣಕ್ಕೆ ರಾಜಿಯಾಗಿ ಹೊರಟಿದ್ದ ಮೂಲ ಉದ್ದೇಶವನ್ನೇ ಮರೆತು ಬದುಕುವವರ, ಗುರಿ ಇಲ್ಲದವರ ಗೊಂದಲಗಳ ನಡುವೆಯೇ ಶ್ರದ್ಧೆಯಿಟ್ಟು ಯಾವುದೂ ತಮ್ಮದಲ್ಲ ಅಂತ ಸುಮ್ಮನೆ ಬಂದ ಕರ್ಮ ಮಾಡಿಕೊಂಡು ಹೋಗಬೇಕು ಅನ್ನುವ ಸಾಲು ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

ಬದುಕಿನಲ್ಲಿ ಶ್ರದ್ಧೆ ಮೂಲಭೂತ ಗುಣ. ನಂಬಿಕೆ ಹಾಗೂ ಶ್ರದ್ಧೆ ಇದ್ದರೆ ಅಹಂಕಾರ ಮಮಕಾರ ಎರಡೂ ಕಳೆದುಕೊಳ್ಳಬಹುದು.



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...