ಶಬರಿಮಲೆ (ಹೊಸದಿಂಗಂತ)

ಧನುರ್ಮಾಸದ ದಿನಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ದೇವರ ದರ್ಶನ, ಪೂಜೆ ಮಾಡುವುದು ಪುಣ್ಯ ಸಂಪಾದನೆಗೆ ಇರುವ ಅತ್ಯುತ್ತಮ ಮಾರ್ಗ ಎನ್ನುವುದು ಬಹು ಪುರಾತನ ನಂಬಿಕೆ. ಅದಾಗಲೇ ಪ್ರವೇಶಿಸಿರುವ ಚಳಿರಾಯ ತನ್ನ ಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿನ ಮೇಲೆ ಪ್ರಯೋಗಿಸಿರುವ ಕಾಲವದು. ಕೊರೆಯುವ ಚಳಿ ತನ್ನ ಬಾಹುಗಳನ್ನು ಚಾಚಿ ಎಲ್ಲವನ್ನೂ ಅಪ್ಪಿಕೊಂಡು ನಡುಕು ಹುಟ್ಟಿಸುವ ಕಾಲ. ಅಂತ ಕಾಲದಲ್ಲಿ ಬೆಚ್ಚಗೆ ಹೊದ್ದು ಮಲಗುವ ಸಮಯದಲ್ಲಿ ಎದ್ದು ಸ್ನಾನ ಮುಗಿಸಿ ಸಾಧನೆ ಮಾಡುವುದು ಯಾರಿಗೆ ತಾನೇ ಪ್ರಿಯವಾದೀತು..

ಅಂತಹುದೊಂದು ಕಾಲದಲ್ಲಿ ನಿದ್ದೆಯ ಮಾಯದಲ್ಲಿ ಸ್ವಲ್ಪ ಚದುರಿ ಹೋಗಿರುವ ಹೊದಿಕೆಯ ಮರೆಯಿಂದ ನುಗ್ಗುವ ಚಳಿಗಾಳಿಗೆ ಎದ್ದು ಕಂಬಳಿ ಇನ್ನಷ್ಟು ಎಳೆದು ಮುದುರಿ ಮಲಗುವ ವೇಳೆಯಲ್ಲಿ ಕಿವಿಯೊಳಗೆ ತೂರಿ ಕೇಳಿಸುತ್ತಿದ್ದದ್ದು ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ದನಿ. ಬ್ರಾಹ್ಮಿ ಮಹೂರ್ತದ ಸಮಯದಲ್ಲಿ ಅಂದರೆ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲಾ ಎದ್ದು ಆ ನಡುಗುವ ಚಳಿಯಲ್ಲಿ ಕೇವಲ ಕಪ್ಪು ಪಂಚೆ ಉಟ್ಟು ನದಿಯಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಬರುತಿದ್ದ ಅವರನ್ನು ಬೆಚ್ಚಗಿಡುತಿದ್ದದ್ದು ಅದೊಂದೇ ಸಾಲು, ನಡೆಸುತಿದ್ದದ್ದು ಅದೊಂದೇ ವಾಕ್ಯ.. ಛಲ ಅರಳಿಸುತಿದ್ದದ್ದು ಅದೊಂದೇ ಮಂತ್ರ..

ದೇಹಕ್ಕೋ ಮನಸ್ಸಿಗೋ ಯಾವುದಾದರೊಂದು ಅಭ್ಯಾಸವನ್ನು ಇಪ್ಪತ್ತೊಂದು ದಿನಗಳ ಕಾಲ ಬಿಡದೆ ಕಲಿಸಿದರೆ ಅದು ಬದುಕಿನ ಭಾಗವಾಗುತ್ತದೆ ಅನ್ನೋದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ಈ ಅಯ್ಯಪ್ಪ ಭಕ್ತರದು 48 ದಿನಗಳ ಕಾಲದ ವ್ರತ. ಅಂದರೆ 21 ದಿನಕ್ಕೆ ಒಂದು ಚಕ್ರವಾದರೆ ಇದು ಎರಡು ಚಕ್ರ. ಎರಡು ಆವರ್ತ. 48 ದಿನಗಳ ಕಾಲ ಯಾವುದೋ ದೇವಸ್ಥಾನದ ಆವರಣದಲ್ಲೋ, ಇಲ್ಲಾ ಚಪ್ಪರದಲ್ಲೋ ಒಂದು ಮಂಟಪವನ್ನು ಮಾಡಿ ಅದರಲ್ಲಿ ಅಯ್ಯಪ್ಪನ ಫೋಟೋ ಇಟ್ಟು ಮಾಲೆ ಧರಿಸಿ ಕಪ್ಪು ವಸ್ತ್ರ ಧರಿಸಿ ವ್ರತ ಹಿಡಿಯುತ್ತಿದ್ದರು. ಅದು ಸುಲಭದ ದಾರಿಯೇನಲ್ಲ. ಆ 48 ದಿನಗಳು ಸುಳ್ಳು ಹೇಳುವ ಹಾಗಿಲ್ಲ, ಮದ್ಯ ಮಾಂಸ ಸೇವಿಸುವ ಹಾಗಿಲ್ಲ.  ಮನೆಯಲ್ಲಿ ಇರುವ ಹಾಗಿಲ್ಲ, ಬೆಳಗಿನ ಜಾವವೇ ಎದ್ದು ತಣ್ಣೀರು ಸ್ನಾನ ಮಾಡಬೇಕು, ಪುನ ಸಂಜೆ ಸ್ನಾನ ಮಾಡಿ ಭಜನೆ ಪೂಜೆ ಆಗಬೇಕು. ತಾವೇ ಅಡುಗೆಮಾಡಿ ಊಟ ಮಾಡಬೇಕು. ಸಾತ್ವಿಕ ಆಹಾರ, ಸಾತ್ವಿಕ ಜೀವನ.  ಹೆಣ್ಣು ಗಂಡು ಎನ್ನುವ ಭೇಧವಿಲ್ಲದೆ ಎಲ್ಲರಲ್ಲೂ ಆ ಅಯ್ಯಪ್ಪನನ್ನೇ ಕಾಣಬೇಕು. ಹಾಗಾಗಿ ಯಾರನ್ನೇ ಮಾತಾಡಿಸಿದರೂ ಸ್ವಾಮೀ ಎಂದೇ ಗೌರವದಿಂದ ಭಕ್ತಿಯಿಂದ ಕರೆಯುತ್ತಿದ್ದರು. ಅದು ಸ್ವರದಲ್ಲಿ ಮಾತ್ರ ಕಾಣಿಸದೆ ವರ್ತನೆಯಲ್ಲೂ ಪ್ರತಿಫಲನವಾಗುತಿತ್ತು.

ಗುರು ಸ್ವಾಮಿಯ ನೇತೃತ್ವದಲ್ಲಿ ಹಿರಿ ಕಿರಿಯರು ಎನ್ನದೆ ಎಲ್ಲರೂ ಒಂದಾಗಿ ಒಂದೇ ಎನ್ನುವ ರೀತಿಯಲ್ಲಿ ವ್ರತ ಆಚರಿಸುತ್ತಿದ್ದರು. ಎಳೆ ಮಕ್ಕಳು ಕೂಡಾ ಅಷ್ಟೇ ನಿಷ್ಠೆಯಿಂದ ವ್ರತದ ನಿಯಮಗಳನ್ನು ಪಾಲಿಸುತ್ತಿದ್ದರು. ಇರುಮುಡಿ ಹೊತ್ತು ಶಬರಿಮಲೆಗೆ ಸಾಗುವ ದಿನವಂತೂ ಎಲ್ಲರಲ್ಲೂ ಖುಷಿಯ ಜೊತೆಗೆ ಆತಂಕ ಸಹ. ಕಾಲ್ನಡಿಗೆಯಲ್ಲಿ ಮೈಲುಗಟ್ಟಲೆ ಕಾಡು, ಬೆಟ್ಟ ಹತ್ತಿ ಬರಿಗಾಲಿನಲ್ಲಿ ಸಾಗುವ ದುರ್ಗಮ ಪಯಣ. ದೇವರನ್ನು ನೋಡುವ ಖುಷಿ ಇವರದಾದರೆ ಸುಖವಾಗಿ ಮನೆಗೆ ಬರಲಿ ಎನ್ನುವುದು ಕುಟುಂಬದವರ ಆಶಯವಾಗಿರುತಿತ್ತು. ದುರ್ಗಮವಾದ ಬೆಟ್ಟದ ಮೇಲೆ ಕುಳಿತಿದ್ದ ಅಯ್ಯಪ್ಪನನ್ನು ನೋಡಲೂ ಅಷ್ಟೇ ಕಷ್ಟವಾದ ವ್ರತ ಹಿಡಿದೇ ಹೋಗುವ ಶ್ರದ್ಧೆ ಜನರಲ್ಲಿತ್ತು. ಯಾವುದೇ ದಾರಿ ದುರ್ಗಮವಾದಷ್ಟೂ ಗಮ್ಯ ಸುಂದರವಾಗಿರುತ್ತದೆ, ಉನ್ನತವಾಗಿರುತ್ತದೆ.

ಉಳಿದ ಮತಗಳಂತೆ ನಮ್ಮಲ್ಲಿ ಧಾರ್ಮಿಕ ಆಚರಣೆಗಳಿಗೆ ಯಾವುದೇ ರೀತಿಯ ಬಲವಂತವಿಲ್ಲ. ಆಸ್ತಿಕರಷ್ಟೇ ನಾಸ್ತಿಕರಿಗೂ ಪ್ರಾಮುಖ್ಯತೆಯಿದೆ. ಯಾವುದನ್ನೂ ಅನುಭವಕ್ಕೆ ಬರದೆ ನಂಬದಿರುವ ಸ್ವಾತಂತ್ರ್ಯವಿದೆ. ಎಲ್ಲವನ್ನೂ ಪ್ರಶ್ನಿಸುತ್ತಲೇ, ಅನುಭವಕ್ಕೆ ದಕ್ಕಿಸಿಕೊಳ್ಳುವ, ಸತ್ಯವನ್ನು ಕಂಡುಕೊಳ್ಳುವ ವಿಫುಲ ಅವಕಾಶವಿದೆ. ಹಾಗಾಗಿಯೇ ಇಲ್ಲಿ ಯಾವುದೂ ಅಂತಿಮ ಸತ್ಯ ಅನ್ನುವುದೇ ಇಲ್ಲ. ಅವರವರ ಅನುಭವಕ್ಕೆ ತಕ್ಕಂತೆ ಸಾಧನೆಗೆ ತಕ್ಕಂತೆ. ಹಾಗಾಗಿಯೇ ಎಲ್ಲವನ್ನೂ ಗೌರವಿಸುತ್ತಲೇ ನಮ್ಮತನ ಉಳಿಸಿಕೊಳ್ಳುವ ಸ್ವಾಭಿಮಾನವೂ ಇಲ್ಲಿದೆ. ಒಂದೇ ಮನೆಯಲ್ಲಿ ಹಲವು ದೇವರ, ಶಕ್ತಿಯ ಉಪಾಸನೆ ಮಾಡುವ ಸ್ವಾತಂತ್ರ್ಯ ಇರುವುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ. ಹಾಗಾಗಿಯೇ ಇದು ಹಿಂದೂ ಎಂದರೆ ಜೀವನ ಪದ್ದತಿಯೇ ಹೊರತು ಮತವಲ್ಲ.. ಆಕಾಶದಿಂದ ಬಿದ್ದ ನೀರು ಅಂತಿಮವಾಗಿ ಸಾಗರವನ್ನು ಸೇರುವಂತೆ ಇಲ್ಲಿ ಹಿಡಿದ ಎಲ್ಲಾ ದಾರಿಗಳು ಅವನನ್ನೇ ಅಥವಾ ಶಕ್ತಿಯನ್ನೇ ತಲುಪುತ್ತದೆ ಎನ್ನುವುದು ನಂಬಿಕೆ. ಹಾಗಾಗಿಯೇ ನಮ್ಮ ನಂಬಿಕೆಗೆ ಇಂತಹುದೇ ನಿರ್ದಿಷ್ಟ ರೂಪು ಇರಬೇಕೆಂಬ ಬಲವಂತವಿಲ್ಲ, ನಿಯಮವಿಲ್ಲ. ಗಾಳಿ, ನೀರು, ಕಲ್ಲು ಹೀಗೆ ಪ್ರಕೃತಿಯ ಯಾವುದೇ ವಸ್ತುವಾದರೂ ಅದು ಆತ್ಮಸಾಕ್ಷಾತ್ಕಾರಕ್ಕೆ ಸಾಧನೆಗೆ ಇಟ್ಟುಕೊಳ್ಳಬಹುದು ನಂಬಬಹುದು.

ಇದೇ ಆಧಾರದ ಮೇಲೆಯೇ ಹಿಂದಿನ ಕಾಲದಲ್ಲಿ ದೇವಾಲಯಗ ನಿರ್ಮಾಣವಾಗುತ್ತಿದ್ದದ್ದು. ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ವಾಸ್ತುವಿದೆ, ಆಚರಣೆಯಿದೆ, ಸಾಧನಾ ಪದ್ದತಿಯಿದೆ. ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಇವೆಲ್ಲವೂ ಬೇರೆಯಾಗುತ್ತದೆ. ದೇವಸ್ಥಾನವೆಂದರೆ ಶ್ರದ್ಧಾ ಕೇಂದ್ರ, ಸಾಧನಾ ಕೇಂದ್ರವೇ ಹೊರತು ಬೇರೇನಲ್ಲ. ಆ ಸಾಧನೆಯಲ್ಲಿ ಯಾರಿಗೆ ಆಸಕ್ತಿಯಿದೆಯೋ ಯಾರು ಅರ್ಹರೋ ಅವರಿಗೆ ಮಾತ್ರ ಅವಕಾಶವಿರುವುದರಲ್ಲಿ ತಪ್ಪೇನಿದೇ. ಅದರಲ್ಲೂ ಉಳಿದ ಎಲ್ಲಾ ಕಡೆಯಲ್ಲೂ ಇರುವ ಅಯ್ಯಪ್ಪನ ದೇಗುಲಕ್ಕೆ ಪ್ರವೇಶ ಇರುವಾಗ ಅಲ್ಲೇ ಹೋಗಿ ದರ್ಶನ ಮಾಡಬೇಕು ಎನ್ನುವ ಜಿದ್ದಾದರೂ ಯಾಕೆ? ಅದೂ ಅಲ್ಲಿ ಪ್ರವೇಶವೇ ಇಲ್ಲವೆಂದಿಲ್ಲ. ಎಳೆಯ ವಯಸ್ಸಿನಲ್ಲಿ ಹಾಗೂ ಇಳಿಯ ವಯಸ್ಸಿನಲ್ಲಿ ಲಿಂಗಭೇಧವಿಲ್ಲದೆ ಪ್ರವೇಶಕ್ಕೆ ಅವಕಾಶವಿರುವಾಗ ತಾರುಣ್ಯದಲ್ಲೇ ಹೋಗಬೇಕು ಎನ್ನುವ ಹಠವಾದರೂ ಯಾಕೆ?

ದೇವರು, ದೇವಸ್ಥಾನ ನಮಗೆಂದೂ ಪ್ರವಾಸಿ ತಾಣವಾಗಿರಲೇ ಇಲ್ಲ. ದೇವರು, ನಂಬಿಕೆ ಎಲ್ಲವನ್ನೂ ಹಳಿಯುವವರೇ ಅಲ್ಲಿಯ ಪ್ರವೇಶಕ್ಕೆ ಹೋರಾಡುವುದು ನೋಡುವಾಗ ಇದು ಹಿಂದೂಗಳ ನಂಬಿಕೆಯ ನಾಶ ಮಾಡುವ ಪ್ರಯತ್ನವೇ ಹೊರತು ಬೇರೇನಲ್ಲ ಎನ್ನುವುದು ಯಾರಿಗಾದರೂ ಅರ್ಥವಾಗುವ ಹಾಗಿದೆ. ಮನುಷ್ಯನಿಗೆ ಅವನ ಆತ್ಮಸಾಕ್ಷಾತ್ಕಾರಕ್ಕೆ ದೇವರು ಬೇಕೇ ಹೊರತು ದೇವರಿಗೆ ದೇಗುಲವೂ ಬೇಕಿಲ್ಲ, ಮನುಷ್ಯರೂ ಬೇಕಿಲ್ಲ. ನಮ್ಮಿಂದ ಅವನ ಪಾವಿತ್ಯ್ರ ಧಕ್ಕೆ ಬರುವುದು ಇಲ್ಲ. ಆದರೆ ಪ್ರತಿ ಸ್ಥಳಕ್ಕೂ ಒಂದು ವಾಸ್ತು ಇರುತ್ತದೆ. ಅಲ್ಲಿ ಶಕ್ತಿ ಸಂಚಯನವಾಗುತ್ತದೆ. ಅದರಲ್ಲೂ ಪುರಾತನ ದೇವಸ್ಥಾನಗಳನ್ನು ಕಟ್ಟಿರುವ ರೀತಿ ಅಲ್ಲಿನ ಆಚರಣೆಗಳಿಂದ ಅಲ್ಲಿ ವಿಶೇಷ ಶಕ್ತಿ ಇರುವುದು ಅಂತೂ ಹೌದು. ಪೊಸಿಟಿವ್ ಯೋಚನೆಗಳಿಂದ ಬದುಕು ಬದಲಾಗಬಹುದು, ಇಪ್ಪತೊಂದು ದಿನ ಯಾವುದನ್ನೇ ಅಭ್ಯಾಸ ಮಾಡಿದರೆ ಅದು ಬದುಕಿನ ಭಾಗವಾಗಬಹುದು ಎನ್ನುವುದುನ್ನ ನಂಬುವವರು ಇದನ್ನು ಯಾಕೆ ನಂಬುವುದಿಲ್ಲ ಎಂದರೆ ಉದ್ದೇಶ ಸ್ಪಷ್ಟ. ಅದು ನಂಬಿಕೆಯ, ಶ್ರದ್ಧೆಯ ನಾಶವೇ ಹೊರತು ಬೇರೇನಲ್ಲ.

ಹಿಂದೂ ಧರ್ಮಕ್ಕೆ ಈ ರೀತಿಯ ಸಮಸ್ಯೆಗಳು ಇಂದು ಮಾತ್ರವಲ್ಲ ಅಂದು ಬೌದ್ಧ, ಜೈನ ಮತಗಳ ಉದಯವಾದಾಗಲೂ ಇತ್ತು. ಪ್ರತಿ ಹೊಸ ಮತ ಜನ್ಮ ತಾಳಿದಾಗಲೂ ಅದರ ಮೊದಲು ಟಾರ್ಗೆಟ್ ಹಿಂದೂ ಧರ್ಮವೇ. ಯಾಕೆಂದರೆ ಇಲ್ಲಿನ ಸ್ವಾತಂತ್ರ್ಯ, ವಿಶಾಲತೆ, ಯಾವುದೇ ನಿಯಂತ್ರಣವಿಲ್ಲದಿರುವುದು ಮೂಲ ಕಾರಣ. ಆಗೆಲ್ಲಾ ನಮಲ್ಲೂ ಉಳಿದ ಮತಗಳಂತೆ ನಿಯಂತ್ರಣ, ಬಲವಂತ ಎಲ್ಲದೂ ಇರಬೇಕಿತ್ತ್ತು ಅನ್ನಿಸಿದರೂ ಬಂಧನದಲ್ಲಿ ಯಾವುದೂ ಬಹುಕಾಲ ಬೆಳೆಯುವುದಿಲ್ಲ, ಬೆಳೆಯದ ಯಾವುದೂ ಉಳಿಯುವುದಿಲ್ಲ ಎನ್ನುವ ಸತ್ಯ ಅರಿವಾಗುತ್ತದೆ. ಬಯಲಷ್ಟೇ ಬೆಳೆಯಲು ಅನುವುಮಾಡಿಕೊಡುತ್ತದೆ. ಬೆಳೆದಿದ್ದು ಮಾತ್ರ ತನ್ನ ಬೇರನ್ನು ಆಳದಲ್ಲಿ ಊರುತ್ತದೆ. ಬೇರು ಗಟ್ಟಿಯಿದ್ದಾಗ ಯಾವುದೇ ಅಡೆತಡೆ ಬಂದರೂ, ಸ್ವಲ್ಪ ಅಲುಗಾಡಿದರೂ ಮತ್ತಷ್ಟು ಬಿಗಿಯಾಗಿ ನಿಲ್ಲಲು ಆಗುತ್ತದೆ.

ಯಾವುದನ್ನೇ ಆಗಲಿ ಧಿಕ್ಕರಿಸುವುದು ತಕ್ಷಣಕ್ಕೆ ಸುಲಭ.. ಧಿಕ್ಕರಿಸಿ ದೊಡ್ದವರಾದೆವೆಂದು ಬೀಗುವುದು ಸುಲಭ. ಆದರೆ ಅದರಿಂದ ಸಾಧಿಸಿದ್ದು ಏನು ಎಂದರೆ ಶೂನ್ಯ ಅಷ್ಟೇ. ಬುರ್ಖಾ ಹಾಕದೆ ಹೊಸಿಲೂ ದಾಟದ ಹೆಂಗಸರು ನಮ್ಮ ನಂಬಿಕೆಗಳ ಬಗ್ಗೆ, ಸಮಾನತೆಯ ಬಗ್ಗೆ ಹೋರಾಟ ಮಾಡುವುದು ನೋಡಿದಾಗ ಮಾತ್ರ ನಗು ಬರುತ್ತದೆ. ಇಂದಿಗೂ ಒಂದೇ ಒಂದು ಪ್ರಾರ್ಥನಾ ಸ್ಥಳಗಳಿಗೂ ಹೋಗುವ ಅವಕಾಶವಿಲ್ಲದವರೂ ಒಂದೇ ಒಂದು ಜಾಗಕ್ಕೆ ಹೋಗಲು ಹೋರಾಟ ಮಾಡುವುದು ವಿಡಂಬನೆಯೇ ಹೊರತು ಬೇರೇನಲ್ಲ. ಇದೇ ಹೋರಾಟ ಮಸೀದಿಯ ಪ್ರವೇಶಕ್ಕೂ ನಡೆಸುತ್ತಾರ ಕೇಳಿದರೆ ಅದಕ್ಕೆ ಉತ್ತರವೇ ಇರುವುದಿಲ್ಲ.

 ಈ ನೆಲದಲ್ಲಿ ಅಂದಿನಿಂದಲೂ ಇಂದಿನವರೆಗೆ ಅವರವರ ಶ್ರದ್ಧೆಯೇ ಅವರವರದು. ಆದರೆ ಪದೇ ಪದೇ ಒಬ್ಬರ ನಂಬಿಕೆಗೆ ಘಾಸಿಯಾದಾಗ ಅದನ್ನು ವಿರೋಧಿಸುವುದು ಸ್ವಾಭಿಮಾನದ ಪ್ರಶ್ನೆ. ನಮ್ಮತನದ ಪ್ರಶ್ನೆ. ಕ್ಷಾತ್ರತ್ವ ಈ ನೆಲದ ಗುಣ. ಆದರೆ ನಾವು ತಾಳ್ಮೆಯ ಹೆಸರಿನಲ್ಲಿ, ವಿಶಾಲ ಮನೋಭಾವ ಎಂಬ ಒಳ್ಳೆಯತನದಲ್ಲಿ ಅದನ್ನು ಮರೆತುಬಿಟ್ಟಿದ್ದೇವೆ.ನಮ್ಮತನವನ್ನು ನಾವೇ ಹರಾಜು ಹಾಕಿಕೊಳ್ಳುವ ಮಟ್ಟಕ್ಕೆ ನಾವೇ ಇಳಿದಿದ್ದೇವೆ.  ನಮ್ಮ ಧರ್ಮ ಉದಾತ್ತವಾದದ್ದು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವಷ್ಟೇ ಅದನ್ನು ಉಳಿಸಿಕೊಳ್ಳಲೂ ಪ್ರಯತ್ನ ಪಡಬೇಕು. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಆ ಕಾಲದಲ್ಲೇ ಕೃಷ್ಣ ಹೇಳಿದ್ದು ಇದಕ್ಕೆ ಏನೋ?  ಇನ್ನಾದರೂ ನಮ್ಮ ನಂಬಿಕೆಗಳ ಮೇಲಿನ ಧಾಳಿಯನ್ನು ತಡೆಯಬೇಕಾಗಿದೆ. ನಮ್ಮಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವುದು ಬೇರೆ, ನಮ್ಮತನವನ್ನೇ ಅಡವಿಡುವುದು ಬೇರೆ..




Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.