ಸಂಕ್ರಾಂತಿ....

ಅಡಿಕೆ ಕೊಯ್ಲಿನ ಮೈ ಮುರಿಯುವ ಕೆಲಸ, ಹಲ್ಲು ಕಟ ಕಟಿಸುವ ಚಳಿ, ಹಗಲು ಕಡಿಮೆ ರಾತ್ರಿ ಜಾಸ್ತಿ ಆದರೂ ನಿದ್ದೆ ಕಡಿಮೆ ಕೆಲಸ ಜಾಸ್ತಿ ಅನ್ನುವ ಕಾಲ, ಔಷಧಿ ಹೊಡೆದ ಕೊನೆಯ ಬಣ್ಣಕ್ಕೆ ತಿರುಗಿದ ಮುಖ ಮೈ,  ಒಡೆದು ಚೂರು ಚೂರಾಗಿ ಚಳಿಗೆ ಇನ್ನಷ್ಟು ಮುದುರಿ ಉರಿಯುವ ದೇಹ.. ಶರಶಯ್ಯೆಯಲ್ಲಿ ಮಲಗಿದ ಭೀಷ್ಮ ತನ್ನ ಮೋಕ್ಷ ಕಾಲಕ್ಕಾಗಿ ಸಂಕ್ರಾತಿಯನ್ನು ಕಾಯುವ ಹಾಗೆ ನಾವೂ ಈ ಚಳಿಯಿಂದ, ಕೆಲಸದಿಂದ ಮುಕ್ತಿ ಹೊಂದಲು ಉಸಿರು ಬಿಗಿ ಹಿಡಿದು ಸಂಕ್ರಾತಿಯನ್ನೇ ಕಾಯುತ್ತಿದ್ದೆವು.

ಸೂರ್ಯ ತನ್ನ ಪಥ ಬದಲಿಸುವ ದಿನವದು. ಅಲ್ಲಿಂದ ಉತ್ತರಾಯಣ ಪುಣ್ಯ ಕಾಲ ಅನ್ನೋದು ಪುರಾತನ ನಂಬಿಕೆ. ಸತ್ತರೆ ಸ್ವರ್ಗಕ್ಕೆ ಹೋಗುತ್ತಿವೋ ಗೊತ್ತಿಲ್ಲದ ವಯಸ್ಸಿನಲ್ಲಿ  ಸಂಕ್ರಾಂತಿ ಬಂದರೆ ಅಲ್ಲಿಂದ ಸೂರ್ಯ ಸ್ವಲ್ಪ ಚುರುಕಾಗಿ ಚಳಿ ಕಡಿಮೆಯಾಗುತ್ತಾ ಹೋಗುತ್ತದೆ ಅನ್ನುವ ವಿಷಯವೇ  ಸ್ವರ್ಗ ಸುಖದ ಅನುಭವ ಕೊಡುತ್ತಿತ್ತು. ಅಲ್ಲಿಂದ ಸ್ವಲ್ಪ ಕಾಲ ಕೆಲಸಗಳ ನಡುವೆಯೂ ಬಿಡುವು ದೊರಕಿ ದೇಹಕ್ಕೂ ವಿಶ್ರಾಂತಿ ಸಿಗುತಿತ್ತು. ಹಾಗಾಗಿ ಈ ಹಬ್ಬದ ತಯಾರಿಯೂ ತುಸು ಜೋರಾಗಿ ಕ್ಯಾಲೆಂಡರ್ ಬದಲಾಯಿಸುವ ಜೊತೆಗೆ ಶುರುವಾಗುತ್ತಿತ್ತು.

ಎಳ್ಳು ಬೆಲ್ಲ ಈ ಹಬ್ಬದ ವಿಶೇಷ. ಧನುರ್ಮಾಸದ ತಿಂಗಳಲ್ಲಿ ಕೊರೆಯುವ ಚಳಿಯನ್ನು ಸಹಿಸುವ ಶಕ್ತಿಗಾಗಿ ಹಾಗೂ ದೇಹವನ್ನು ಬೆಚ್ಚಗಿಡುವ ಉದ್ದೇಶದಿಂದ ಸ್ವಲ್ಪ ಖಾರ, ಕಾಳುಮೆಣಸು ಜಾಸ್ತಿಯೇ ಉಪಯೋಗಿಸಿ ದೇಹದ ಉಷ್ಣತೆ ಹೆಚ್ಚುವುದರ ಜೊತೆಗೆ ಕೊಬ್ಬು ಕರಗುತ್ತಿತ್ತು. ಅದಕ್ಕೆ ಸರಿಯಾಗಿ ಮೈ ಮುರಿಯುವಷ್ಟು ಬಿಡುವಿಲ್ಲದ ಕೆಲಸವೂ ಜೊತೆಯಾಗುತಿತ್ತು. ಸರಿಯಾಗಿ ವಿಶ್ರಾಂತಿ ದೊರಕದೆ ಮೈ ಮನಸ್ಸುಗಳೆರಡು ಬಳಲಿ ಹೋಗಿರುತಿದ್ದವು. ಎಷ್ಟೇ ಮನಶಕ್ತಿ ಇದ್ದರೂ ಅದಕ್ಕೆ ದೇಹ ಬೆಂಬಲಿಸಬೇಕು. ದೇಹ ಗಟ್ಟಿಯಾಗಿದ್ದರೆ ಮನಸ್ಸು, ಮನಸ್ಸು ಶಕ್ತಿಯುತವಾಗಿದ್ದರೆ ದೇಹ ಇವೆರೆಡು ಕೂಡಾ ಒಂದಕ್ಕೊಂದು ಪೂರಕ. ಹಾಗಾಗಿ ಎರಡನ್ನೂ ಚೈತ್ಯನ್ಯಗೊಳಿಸುವ ಕೆಲಸ ಆವಶ್ಯಕ.

ಪ್ರತಿ ಹಬ್ಬವೂ ಅದರ ಪದ್ದತಿಯೂ ಪ್ರಕೃತಿಯ, ದೇಹದ ಬದಲಾವಣೆಯನ್ನು ಅನುಸರಿಸಿ ಅದಕ್ಕೆ ತಕ್ಕ ಹಾಗೆ ರೂಪಿತವಾಗಿದೆ. ಹಾಗಾಗಿಯೇ ನಮಗೆ ಹಬ್ಬ ಕೇವಲ ಪದ್ದತಿಯಲ್ಲ ಬದುಕಿನ ಪದ್ಧತಿ, ನವೊತ್ಸಾಹದ ಟಾನಿಕ್. ಬೇಸಿಗೆಯಲ್ಲಿ ನೀರಿಲ್ಲದೆ ಬಿರುಕು ಬಿಟ್ಟ ನೆಲದ ಹಾಗಿರುವ ಬಿಗಿದ ಚರ್ಮವನ್ನು ಮೃದುಗೊಳಿಸಲು, ಮತ್ತೆ ಚೈತ್ಯನ್ಯ ಗೊಳಿಸಲು ಜಿಡ್ಡು ಬೇಕು. ಆ ಜಿಡ್ಡು ಎಳ್ಳಿನಲ್ಲಿ ಜಾಸ್ತಿಯಿರುತ್ತದೆ. ಜೊತೆಗೆ ನಿಶಕ್ತ ದೇಹಕ್ಕೆ ಶಕ್ತಿ ತುಂಬಲು ಪುಷ್ಟಿ ಗೊಳಿಸಲು ರಕ್ತ ಉತ್ಪಾದನೆ ಚೆನ್ನಾಗಿರಬೇಕು. ಅದಕ್ಕಾಗಿ ಕಬ್ಬಿಣದ ಅಂಶ ಬೇಕು. ಈ ಕಬ್ಬಿಣದ ಅಂಶ ಹೇರಳವಾಗಿರುವುದು ಬೆಲ್ಲದಲ್ಲಿ. ಹಾಗಾಗಿಯೇ ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದ ತಯಾರಿ.  ಇದನ್ನು ಸೇವಿಸುವುದರಿಂದ ಬಿಗಿ ಗೊಂಡ ಚರ್ಮ ದೇಹ ಎರಡೂ ಪುಷ್ಟಿಯನ್ನು ಪಡೆದುಕೊಂಡು ಸಹಜತೆ ಮರಳಿ ಆರೋಗ್ಯವನ್ನು ಪಡೆಯುತ್ತದೆ. ಬರೀ ದೇಹ ಮಾತ್ರವಾ... ಇಲ್ಲಾ ಮನಸ್ಸು ಕೂಡಾವಾ ಅದು ಹಬ್ಬ ಮುಗಿದ ಮಧ್ಯಾನದ ಮುಖ ಹೇಳುತ್ತದೆ.

ಅಂಗಡಿಗೆ ಹೋಗಿ ಅಚ್ಚು ಬೆಲ್ಲವನ್ನು ಆರಿಸಿ ಅದರಲ್ಲೂ ಬಿಳಿ ಬೆಲ್ಲವನ್ನು, ಜೊತೆಗೆ ಒಣ ಕೊಬ್ಬರಿ, ಶೇಂಗಾ, ಎಳ್ಳು ಎಲ್ಲವನ್ನೂ ಮನೆಯ ಮನೆಯ ಯಜಮಾನ ಹೋಗಿ ತಂದರೆ ಅದನ್ನು ಬಿಸಿಲಲ್ಲಿ ಇಟ್ಟು ಒಣಗಿಸಿ ಹದವಾಗಿಸಿ ತಯಾರಿ ಮಾಡುವ ಕೆಲಸ ಅಮ್ಮ ಹಾಗೂ ಅಜ್ಜಿಯದು. ಒಣಗಿದ ಕೊಬ್ಬರಿಯನ್ನು ಕತ್ತಿಯಲ್ಲಿ ನಯವಾಗಿ ಹೆರೆದು ಸಿಪ್ಪೆ ತೆಗೆಯುವಾಗ ಕೈ ಸಿಪ್ಪೆ ಎಷ್ಟು ಹೋಗುತಿತ್ತೋ ಬಲ್ಲವರಾರು. ಅದಾದ ಮೇಲೆ ಆ ಕೊಬ್ಬರಿ ಮತ್ತು ಬೆಲ್ಲವನ್ನು ಸಣ್ಣಗೆ ಹೆಚ್ಚುವ ಕೆಲಸ ಶುರುವಾಗುತ್ತಿತ್ತು. ಎಳ್ಳನ್ನು  ಅದು ಹಸಿವಾಸನೆ ಬರದಂತೆ ಸುಟ್ಟೂ ಹೋಗದಂತೆ ಹದವಾಗಿ ಹುರಿದು ಮರಳಿನಲ್ಲಿ ಶೇಂಗಾವನ್ನು ಹುರಿದು ಅದರ ಸಿಪ್ಪೆ ತೆಗೆದು ಎಲ್ಲವನ್ನೂ ಒಂದು ಅಗಲವಾದ ಬಟ್ಟಲಿನಲ್ಲಿ ಸುರಿದು ಜೊತೆಗಿಷ್ಟು ಹುರಿಗಡಲೆ ಸೇರಿಸಿ ಮಿಶ್ರಣ ಮಾಡಿದರೆ ಹಬ್ಬಕ್ಕೆ ಎಳ್ಳು ಬೆಲ್ಲಾ ತಯಾರಾಗಿರುತಿತ್ತು.

ಹೀಗೆ ದೇಹಕ್ಕೆ ಜಿಡ್ಡು, ಫೋಷಕಾಂಶ, ವಿಟಮಿನ್ ಎಲ್ಲವೂ ಈ ಒಂದು ಮಿಶ್ರಣದಲ್ಲಿ ತಯಾರಾಗಿ ನಾಲಿಗೆಗೆ ರುಚಿ ಕೊಡುತ್ತಲೇ ದೇಹವನ್ನು ರಿಪೇರಿ ಮಾಡುತಿತ್ತು. ಒಂದು ರೀತಿಯಲ್ಲಿ ನಮ್ಮ ಹಬ್ಬಗಳು ಒಂದು ತರದಲ್ಲಿ ವೈದ್ಯರೇ ಆಗಿ ಕಾರ್ಯ ನಿರ್ವಹಿಸುತ್ತಿದ್ದವಾ... ಆದರೆ ಈ ಮಿಶ್ರಣ ಮಾಡುವುದಕ್ಕಿಂತ ಕ್ಲಿಷ್ಟವಾದ ಕೆಲಸವೆಂದರೆ ಅದನ್ನು ನಮ್ಮಂತ ಮಕ್ಕಳ ಕೈ ಬಾಯಿಯಿಂದ ಕಾಪಾಡುವುದು. ನೈವೇದ್ಯ ಆದ ಹೊರತು ತಿನ್ನುವ ಹಾಗಿಲ್ಲ ಎಂದರೂ ತಲೆ ಅಲ್ಲಾಡಿಸಿ ಅಷ್ಟೇ ವಿಧೇಯತೆಯಿಂದ ಒಪ್ಪಿದರೂ ಅಲಂಕಾರಗೊಂಡ ಎಳ್ಳು ಬೆಲ್ಲ ನಮ್ಮ ತಪಸ್ಸು ಕೆಡಿಸುವ ಎಲ್ಲಾ ಪ್ರಯತ್ನವನ್ನೂ ಮಾಡುತಿತ್ತು. ಅಂಥಾ ವಿಶ್ವಾಮಿತ್ರನ ತಪಸ್ಸೇ ಭಂಗವಾಗಿರುವಾಗ ನಮ್ಮಂತ ಹುಲುಮಾನವರ ಪಾಡೇನು ಎಂದು ನಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದೆವು. ಹಾಗಾಗಿ ನಮ್ಮಿಂದ ಅದನ್ನು ಕಾಪಾಡಿಕೊಳ್ಳುವುದು ಅವರ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು.

ಹಬ್ಬದ ದಿನ ಅಭ್ಯಂಜನ ಮಾಡಿ ದೇಹಕ್ಕೆ ಹೊಸ ಚೈತನ್ಯ ಸಿಕ್ಕಿ ಅದಕ್ಕೆ ಸರಿಯಾಗಿ ಹಬ್ಬದಡುಗೆ ಉಂಡು ಸುಧಾರಿಸಿಕೊಳ್ಳುವ ವೇಳೆಗೆ ಆಚೆಮನೆಯಲ್ಲಿ ಪಂಚಾಗ ಶ್ರವಣ ಶುರುವಾಗುತ್ತಿತ್ತು. ಅದರ ನಂತರ ಸಿಗುವ ಎಳ್ಳು ಬೆಲ್ಲಕ್ಕಾಗಿ ನಾವು ಆಸಕ್ತಿಯಿರುವವರ ಹಾಗೆ ಹೋಗಿ ಕುಳಿತು ಕೇಳುತ್ತಿದ್ದರೂ ಕಣ್ಣೆಲ್ಲಾ ಒಳಗಿಟ್ಟ ಎಳ್ಳು ಬೆಲ್ಲದ ಮೇಲೆಯೇ.. ಅಂತೂ ಮಂಗಳಾರತಿ ಆದ ಮೇಲೆ ಎಳ್ಳು ಬೆಲ್ಲ ಕೈ ಸಿಕ್ಕ ಮೇಲೆಯೇ ನೆಮ್ಮದಿ. ನಂತರ ಮನೆ ಮನೆಗೆ ಹಂಚುವ ಕೆಲಸ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂದು ಹೇಳಿ ಗಡಿಬಿಡಿಯಲ್ಲಿ ಅವರು ಕೊಟ್ಟ ಎಳ್ಳನ್ನು ತೆಗೆದುಕೊಂಡು ಬ್ಯಾಗ್ ನಲ್ಲಿ ಹಾಕಿಕೊಂಡು ಬರುವಾಗ ನಮಗೆ ಏನು ಹೇಳಿದ್ವಿ ಅನ್ನೋದಕ್ಕಿಂತ ಕೈಯಲ್ಲಿದ್ದ ಎಳ್ಳಿನ ಮೇಲೆಯೇ ಗಮನವಿರುತಿತ್ತು...

ದೇಹಕ್ಕೆ ಎಷ್ಟೇ ಪುಷ್ಟಿ ಕೊಡುವ ಆಹಾರ ತಯಾರಿಸಿದರೂ ಅದರ ಜೊತೆಗೆ ಮನಸ್ಸಿಗೂ ಸಂತೋಷ ಕೊಡುವ ಕೆಲಸ ಆಗಬೇಕು. ಜಗತ್ತಿನ ಅತ್ಯಂತ ಹರಿತವಾದ ಆಯುಧ ಯಾವುದು ಎಂದರೆ ತಕ್ಷಣಕ್ಕೆ ಆಲೋಚನೆ ಬರುವುದು ಮಾತು ಎಂದೇ. ಅದರ ಚೂಪು, ಹರಿತ, ಇಳಿಯುವ ಆಳವನ್ನು ಮೀರಿಸುವ ಇನ್ಯಾವ ಆಯುಧವೂ ಜಗತ್ತಿನಲ್ಲಿ ಈವರೆಗೆ ತಯಾರಿಸಲಾಗಲಿಲ್ಲ. ಅದಕ್ಕೆ ಏನೋ ಒಳ್ಳೆ ಮಾತಾಡು ಎಂದು ಸಿಹಿಯನ್ನು ಹಂಚುತಿದ್ದದ್ದು. ಆ ಸಿಹಿಯಷ್ಟೇ ಮಾತು ಸಿಹಿಯಾಗಿರಲಿ ಎನ್ನುವುದು ಅದರ ಉದ್ದೆಶವಾಗಿತ್ತೇನೋ. ಮನುಷ್ಯನಿಗೆ ಮರೆವು ಅತ್ಯಂತ ಸಹಜವಾಗಿ ಬಂದಿರುವುದರಿಂದ ಅದನ್ನು ಆಗಾಗ ನೆನಪು ಮಾಡಲೆಂದೇ ಈ ಹಬ್ಬ ಬರುತಿತ್ತೇನೋ..

ಮೈ ಮನಸ್ಸೆಲ್ಲಾ ಒಡೆದು, ಚಳಿಗೆ ದೇಹ ಉರಿಯುವಾಗ ನಮ್ಮ ಚೂಪು ಮಾತು ಇಷ್ಟೇ ಉರಿಸುತ್ತದೆ ಅನ್ನುವುದನ್ನು ಪ್ರಕೃತಿ ಒಂದು ತಿಂಗಳು ಇಡೀ ಅರ್ಥ ಮಾಡಿಸುತಿತ್ತಾ... ದೇಹದ ಉಷ್ಣ ಕಾಪಾಡಿಕೊಳ್ಳುವ ಏನೇ ಪ್ರಯತ್ನ ಮಾಡಿದರೂ ಕರಗುತಿದ್ದ ಕೊಬ್ಬು ಅಹಂ ಅನ್ನೂ ಕರಗಿಸುತಿತ್ತಾ.... ಹಾಗಾಗಿಯೇ ಕಬ್ಬಿಣ ಕಾದಾಗಲೇ ಬಡಿಯಬೇಕು ಎಂದು ಅರ್ಥ ಮಾಡಿಸಲು ಈ ಹಬ್ಬ ಬರುತಿತ್ತಾ... ಕೊನೆಯ ಪಕ್ಷ ಐದು ಮನೆಗಾದರೂ ಎಳ್ಳು ಬೆಲ್ಲ ಹಂಚಬೇಕು ಎನ್ನುವ ಆಚರಣೆ ಜನರನ್ನು ಬೆಸೆಯುವ ಹಾಗೆ, ಸಿಹಿ ಕೊಟ್ಟು ಸಿಹಿ ತೆಗೆದುಕೊಂಡು ಸಿಹಿಯಾಗಿ ಬಾಳುವ ಹಾಗೆ ಸ್ಪೂರ್ತಿ ಕೊಡುತಿತ್ತಾ.. ಬಳಲಿದ ದೇಹವನ್ನು ಪುಷ್ಟಿಗೊಳಿಸುವ ಜೊತೆ ಜೊತೆಗೆ ಮನಸ್ಸನ್ನೂ ಬಾಂಧವ್ಯವನ್ನೂ ಗಟ್ಟಿಗೊಳಿಸುತಿತ್ತಾ..

ಜಿಡ್ಡಿಗೆ ಅಂಟಿಕೊಳ್ಳುವ ಗುಣವಿದೆ. ಬದುಕು ಹೀಗೆ ಪ್ರಕೃತಿಯೊಡನೆ ಅಂಟಿಕೊಂಡು ಸಾಗಲಿ ಎಂದು ಅದು ಹೇಳುತಿತ್ತಾ..  ಇಲ್ಲಿ ಪ್ರತಿಯೊಂದೂ ಹೊಂದಿಕೊಂಡು, ಒಂದರೊಳಗೆ ಒಂದು ಬೆರೆತುಕೊಂಡೆ ಬಾಳುವುದು ಎಂದು ಅರ್ಥಮಾಡಿಸಲೇ ಎಳ್ಳು ಬೆಲ್ಲದ ಜೊತೆ ಜೊತೆಗೆ ಶೇಂಗಾ, ಕೊಬ್ಬರಿ ಹುರಿಗಡಲೆ ಎಲ್ಲವೂ ಒಂದಾಗುತಿತ್ತೇನೋ. ನಾವು ಮಾತ್ರ ಬೇರೆಯಾಗಿ ಬದುಕುವುದು ಹೆಮ್ಮೆ ಎಂದುಕೊಂಡು ಸಿಡಿದು ಹೊರಬರುವುದು ಕಲಿಯುತ್ತಿದ್ದೇವೆ. ಹಾಗೆ ಸಿಡಿಯಬಾರದು, ಕರಕಲಾಗಬಾರದು ಆದರೆ ಕಾದು ಸಿಪ್ಪೆಯನ್ನು ಅಂದರೆ ಅಹಂ ಅನ್ನು ಕಳೆದುಕೊಳ್ಳಬೇಕು ಎನ್ನುವುದಕ್ಕೆನೋ ಶೇಂಗಾವನ್ನು ಮರಳಿನಲ್ಲಿ ಹುರಿಯುತ್ತಿದ್ದದ್ದು.

ತನ್ನ ಬಣ್ಣ ಕಳೆದುಕೊಳ್ಳದೆ, ಸುಟ್ಟು ಕರಕಲಾಗಿ ರುಚಿ ಕೆಡಿಸದೆ ಸ್ವತಂತ್ರವಾಗಿ ಉಳಿದುಕೊಂಡೆ ಬೆರೆತುಹೋಗುವ ಶೇಂಗಾ, ಸಿಹಿಯನ್ನು ನಾಲಿಗೆಯ ಮೇಲೆ ಉಳಿಸುತ್ತಲೇ ದೇಹವನ್ನು ಪುಷ್ಟಿಯಾಗಿಸುವ ಬೆಲ್ಲ, ತನ್ನ ಜಿಡ್ಡಿನಿಂದ ಬಿರುಕು ಬಿಟ್ಟು ಬೇರೆಯಾಗ ಹೊರಟ ಚರ್ಮವನ್ನು ಮೃದುಗೊಳಿಸುತಿದ್ದ ಎಳ್ಳು, ಮೃದುವಾಗುತ್ತಿದ್ದ ಹಾಗೆಯೇ ಕಾದು ಬೆಸೆಯುತಿದ್ದ ಕೊಬ್ಬರಿ, ಕೊಂಚ ಬಿಸುಪು ಕೊಡುವ ಹುರಿಗಡಲೆ, ಇವರೆಲ್ಲರ ಅಂದ ಹೆಚ್ಚಿಸುವ ಜೀರಿಗೆ ಮಿಠಾಯಿ ಹೀಗೆ ಎಲ್ಲವೂ ಒಂದಾಗಿ ಒಂದೇ ಉದ್ದೇಶಕ್ಕೆ ಒಟ್ಟಾಗಿ ಹೇಗೆ ಕಾರ್ಯನಿರ್ವಹಿಸಬೇಕು , ಹೇಗೆ ಹಮ್ಮು ಕಳೆದುಕೊಳ್ಳಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದವೇನೋ.. ಹಾಗಾಗಿಯೇ ಭೀಷ್ಮನಿಗೆ ಮೋಕ್ಷವನ್ನು ಕೊಟ್ಟ ಸಂಕ್ರಾಂತಿ ನಮಗೆ ಮೋಕ್ಷದ ದಾರಿಯನ್ನು ಹೇಳಿಕೊಡುತಿತ್ತೇನೋ...

ಏನೇ ಆದರೂ ಅಂತಿಮವಾಗಿ ಅವರವರ ದಾರಿ ಅವರವರೆ ನಡೆದು ಸಾಗಬೇಕು ಎನ್ನುವ ಹಾಗೆ ಮತ್ತೊಮ್ಮೆ ಸಂಕ್ರಾತಿ ಬಂದಿದೆ. ಬಿಡುಗಡೆಯ ದಾರಿಯನ್ನು ಕಣ್ಣೆದೆರು ತೆರೆದಿಡುತ್ತಿದೆ. ನಡೆಯುವ ಮನಸ್ಸು ನಮ್ಮದಾದರೆ ನಡೆದಷ್ಟೂ ದಾರಿಯಿದೆ. ದಕ್ಕಿಸಿಕೊಂಡಷ್ಟೂ ಬಾಂಧವ್ಯಗಳಿವೆ. ಮೃದುವಾದಷ್ಟು ಹರಿಯುವ ಚೈತ್ಯನ್ಯವಿದೆ. ಆಯ್ಕೆ ನಮ್ಮ ಕೈಯಲ್ಲೇ ಇದೆ...    

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...