ಕೃಷ್ಣಾವತಾರದ ಕೊನೆಯ ದಿನಗಳು
ಒಂದು ಕಾಲದಲ್ಲಿ ಕುಡಿತವೆಂದರೆ ಸಮಾಜದಲ್ಲಿ ಅಗೌರವ ತರುವಂತಹ ವಿಷಯವಾಗಿತ್ತು. ಕುಡಿಯುವವರನ್ನು ಕಂಡರೆ ಅವರಿಂದ ಮಾರು ದೂರ ಇರುವಂತೆ ಮಕ್ಕಳಿಗೆ ಹೇಳುತ್ತಿದ್ದರು. ರಾತ್ರಿ ಕುಡಿದು ತೂರಾಡುತ್ತಾ ಬರುವವರ ಬಗೆಗೆ ಒಂದು ಅನಾದರಣೆಯ ನೋಟದ ಜೊತೆಗೆ ಅಪಹಾಸ್ಯದ ನಗು ಜೊತೆ ಸೇರುತ್ತಿತ್ತು. ಎಲ್ಲಿಯಾದರೂ ರಾತ್ರಿ ಯಕ್ಷಗಾನವೋ, ಗಣಪತಿ ಹಬ್ಬದ ಕಾರ್ಯಕ್ರಮವೋ ಆದರೆ ಅವರಿಂದ ಒಂದು ಅಂತರ ಕಾಯ್ದುಕೊಂಡು ಹೋಗುವುದು ಮಾಡುತ್ತಿದ್ದರು.
ಕಾಲ ಬದಲಾದಂತೆ, ಅಭಿವೃದ್ಧಿಯ ಮಾನದಂಡ ಬೇರೆಯಾದಂತೆ, ಹೆಗ್ಗಳಿಕೆಯ, ಪ್ರತಿಷ್ಠೆಯ ಕುರುಹೂ ಬದಲಾಗಿ ಈಗ ಕುಡುಕ ಅನ್ನುವುದು ಸೋಶಿಯಲ್ ಡ್ರಿಂಕರ್ ಎನ್ನುವ ಹೊಸ ಹಣೆಪಟ್ಟಿ ಹೊತ್ತು ಅದರ ಭಾಷ್ಯವೇ ಬದಲಾಗಿದೆ. ಪಾರ್ಟಿ ಗಳಲ್ಲಿ ಕುಡಿಯದೆ ಇರುವವರು ಹಳ್ಳಿಯ ಗುಗ್ಗು ಎಂದೋ ಗಾಂಧೀ ಎಂದೋ ಅಪಹಾಸ್ಯಕ್ಕೆ ಈಡಾಗುವ ಪರಿಸ್ಥಿತಿ ಬಂದಿದೆ. ಒಂದೇ ವಿಷಯ ಎರಡು ನೋಟ... ಕಾಲಚಕ್ರದ ಬದಲಾವಣೆಯೋ ಮಾನಸಿಕ, ನೈತಿಕ ಅಧಃಪತನವೋ ಎಂದು ಗೊಂದಲ ಸದಾ ಕಾಡುತ್ತದೆ...
ಬದಲಾಗಿರುವ ಕಾಲಘಟ್ಟದಲ್ಲಿ ಯುವಜನತೆ ತಮ್ಮ ಸ್ಟ್ರೆಸ್ ಕಳೆದುಕೊಳ್ಳಲು ಕೆಮಿಕಲ್ ಮೊರೆ ಹೋಗಿದ್ದಾರೆ ಎನ್ನುವುದನ್ನ ಸದ್ಗುರುವಿನ ಮಾತಿನಲ್ಲಿ ಕೇಳುವಾಗ, ಕುಡಿತದ ಶೇಕಡವಾರು ಎಷ್ಟು ಹೆಚ್ಚಿದೆ ಎಂದು ಅವರು ಅಂಕಿ ಅಂಶಗಳಲ್ಲಿ ಹೇಳುವಾಗ ಅದರ ಪರಿಣಾಮ ಊಹಿಸುವಾಗ ಭಯ, ಸಂಕಟ ಎರಡೂ ಕಾಡಿ ಮತ್ತೆ ಅದೇ ಗೊಂದಲ ಕಾಡಿತ್ತು.
ಒಂದು ನಾಣ್ಯಕ್ಕೆ ಎರಡು ಮುಖ ಇದ್ದಂತೆ ಒಂದು ಸಮಸ್ಯೆಗೆ ಪರಿಹಾರವೂ ಎರಡು ತರಹವೇ. ಒಂದು ಪೊಸಿಟಿವ್ ಇನ್ನೊಂದು ನೆಗಟಿವ್... ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಸ್ವಾತಂತ್ರ್ಯ ನಮಗಿದೆ. ಆಯ್ಕೆ ನಮ್ಮ ಸಂಸ್ಕಾರ ಹಾಗೂ ಬುದ್ಧಿಯನ್ನು ಅವಲಂಬಿಸಿರುತ್ತದೆ ಅಷ್ಟೇ. ಈಗಿನ ಗೊಂದಲಕ್ಕೆ ಆಗಲೇ ಕೃಷ್ಣ ಎಷ್ಟು ಚೆಂದವಾಗಿ ಹೇಳಿದ್ದಾನೆ ನೋಡಿ...
"ಒಂದು ದುಷ್ಟಾಚಾರವು ಸಮಾಜಕ್ಕೆ ಅಂಟಿ ಅವರು ಅದರಿಂದ ವಿನಾಶವಾಗಬೇಕಾದರೆ ಅದು ಮೊದಲು ಶಿಷ್ಟರೆಂಬುವರ ವರ್ಗದಲ್ಲೇ ಹುಟ್ಟಿ ಬರಬೇಕಾದುದು ಇತಿಹಾಸದ ಧರ್ಮ."
ಕೃಷ್ಣ ಸದಾ ಕಾಲಕ್ಕೂ ಪ್ರಸ್ತುತ ಅನ್ನೋದು ಹೀಗೆ ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇರುತ್ತದೆ.
ಯಾದವರು ತಮ್ಮ ತಮ್ಮಲ್ಲೇ ಯುದ್ಧ ಮಾಡಿ ಸತ್ತು ಸಮುದ್ರ ತೀರದಲ್ಲಿ ಎತ್ತ ನೋಡಿದರೂ ಹೆಣಗಳ ರಾಶಿಯೇ ಕಾಣುತಿತ್ತು. ಅವನ್ನು ದಾಟಿಕೊಂಡು ನಡೆಯುತ್ತಿದ್ದ ಕೃಷ್ಣ ಗಾಂಧಾರಿಯ ಶಾಪ ಸಫಲವಾಗಲು ಹೆಜ್ಜೆ ಹಾಕುತಿದ್ದ. ಜಗನ್ನಿಯಾಮಕನಿಗೆ ಶಾಪ... ಅದನ್ನು ನಿವಾರಿಸಿಕೊಳ್ಳುವ ಶಕ್ತಿ ಇದ್ದರೂ ಮಾನುಷ ಭಾವದಲ್ಲೇ ಅದನ್ನು ಸ್ವೀಕರಿಸಿ ತನ್ನ ನಿರ್ಗಮನಕ್ಕೆ ರಂಗವನ್ನು ಸಿದ್ಧಗೊಳಿಸಿಕೊಳ್ಳುತಿದ್ದ. ಅತ್ತ ಗಾಂಧಾರಿಯ ಶಾಪ, ಇತ್ತ ದೂರ್ವಾಸ ಮುನಿಗಳ ಶಾಪ ಯಾವುದೂ ಹುಸಿಯಾಗಬಾರದು, ಭಕ್ತ ಸೋಲಬಾರದು... ಎನ್ನುವ ವಿಶಾಲ ಮನೋಭಾವ ದೇವನಿಗಲ್ಲದೆ ಇನ್ಯಾರಿಗೆ ತಾನೇ ಬರಲು ಸಾಧ್ಯ.
ಆದರೂ ಅವನಿಗೆ ಗೊತ್ತಿತ್ತು. ಕಲಿಯ ಪ್ರವೇಶವಾದಮೇಲೆ ಜನ ಆಲೋಚಿಸುವುದು ಬಿಟ್ಟು ಗಾಂಧಾರಿಯ ಪಕ್ಷವನ್ನೇ ಹಿಡಿಯುತ್ತಾರೆ ಎಂದು. ಅದಕ್ಕಾಗಿಯೇ ಗಾಂಧಾರಿಯನ್ನು ನೆನಸಿಕೊಳ್ಳುತ್ತಾನೆ ಕೃಷ್ಣ. ಅಂದು ಹೆತ್ತ ಹೊಟ್ಟೆಯ ಸಂಕಟ ಹಾಗಿತ್ತು ಕೃಷ್ಣ ಎನ್ನುವ ಗಾಂಧಾರಿಗೆ ಯುದ್ಧದಲ್ಲಿ ಸತ್ತ ಸಾವಿರಾರು ಯೋಧರ ಹೆತ್ತವರ ಸಂಕಟ ತಿಳಿಯುವುದಿಲ್ಲವೇ. ಯುದ್ಧ ಅದರ ಪರಿಣಾಮ ಗೊತ್ತಿದ್ದೂ ಮಗನನ್ನು ತಡೆಯದ ಅವಳ ಪಾತ್ರವೂ ಅದರಲ್ಲಿ ಇರಲಿಲ್ಲವೇ?
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಂಡನಿಗಿಲ್ಲದ ಭಾಗ್ಯ ತನಗೂ ಬೇಡ ಎನ್ನುವ ತ್ಯಾಗ ಮಾಡುವ ಮುನ್ನ ಹುಟ್ಟುವ ಮಕ್ಕಳ ಗಮನಿಸದೆ ಇದ್ದರೇ ಅವರನನ್ನು ತಿದ್ದದೆ ಹೋದರೆ ಒಂದು ತಲೆಮಾರು ಅನುಭವಿಸುವ ಪರಿಣಾಮದ ಬಗ್ಗೆ ಯೋಚಿಸಲೇ ಇಲ್ಲ.. ಕಾಣಿಸದೆ ಇದ್ದರೆ ಅವಳಿಗೆ ತನ್ನ ಮಕ್ಕಳ ದುರ್ಗತಿ ಅಷ್ಟು ಸ್ಪಷ್ಟವಾಗಿ ಕಾಣಿಸುತಿತ್ತೆ? ಯುಧಿಷ್ಠಿರನ ಕಾಲು ಬೆರಳು ಸುಡುತಿತ್ತೆ? ಕಟ್ಟಿದ ಬಟ್ಟೆಯ ಕೆಳಗಿನಿಂದ ನೋಡದೇ ಹೋಗಿದ್ದರೆ ಕೃಷ್ಣನಿಗೆ ಶಾಪ ಕೊಡುವಷ್ಟು ಕೋಪ ಬರುತಿತ್ತೇ? ಹೊರ ಇಂದ್ರಿಯಗಳನ್ನು ಮುಚ್ಚಿ ಒಳ ಇಂದ್ರಿಯಗಳಿಂದ ಮಾಡುವ ಪಾಪ ಅಕ್ಷಮ್ಯ ಅನ್ನೋದು ಗಾಂಧಾರಿ ಅರಿಯಲೇ ಇಲ್ಲವಲ್ಲ. ತಾನು ಕರ್ತವ್ಯವಿಹೀನಳಾಗಿಯೂ ಕೃಷ್ಣನನ್ನು ಶಪಿಸುತ್ತಾಳೆ. ಕೃಷ್ಣ ಮರುಮಾತಿಲ್ಲದೆ ಒಪ್ಪಿಕೊಂಡು ಸ್ವೀಕರಿಸುತ್ತಾನೆ. ಅದು ಅವನು ಅವಳ ಸತ್ಯಶೀಲತೆಗೆ, ಪಾತಿವ್ರತ್ಯಕ್ಕೆ ಕೊಟ್ಟ ಗೌರವ. ದೇವ ಭಕ್ತನನ್ನು ಗೆಲ್ಲಿಸಿ ತಾನು ಸೋತು ಗೆಲ್ಲುತ್ತಾನೆ ಎನ್ನುವುದಕ್ಕೆ ಉದಾಹರಣೆ.
ಹಾಗಾದರೆ ಪುತ್ರ ಶೋಕ ಕೇವಲ ಗಾಂಧಾರಿಯದ್ದಾ ಅಂದರೆ ಏಕೈಕ ಪುತ್ರನನ್ನು ಕಳೆದುಕೊಂಡ ಸುಭದ್ರೆ ಕಣ್ಣೆದೆರು ಕಾಣಿಸುತ್ತಾಳೆ. ಐದೂ ಪುತ್ರರನ್ನು ಕಳೆದುಕೊಂಡ ದ್ರೌಪದಿ ಎದುರಿಗೆ ಬರುತ್ತಾಳೆ. ಸತ್ತ ಲಕ್ಷ ಲಕ್ಷ ಯೋಧರ ಹೆತ್ತವರು ನೆನಪಾಗುತ್ತಾರೆ. ಹಾಗಾದರೆ ಅವರು ಶಪಿಸಲಿಲ್ಲ ಯಾಕೆ? ಅವರದು ಹೆತ್ತ ಹೊಟ್ಟೆಯ ಸಂಕಟ ಅಲ್ಲವೇ? ಅಲ್ಲಿ ಒಪ್ಪಿಕೊಳ್ಳುವ, ತಲೆಬಾಗುವ, ಇನ್ನೊಬ್ಬರ ನೋವನ್ನು ಅರಿಯುವ ಮಾತೃತ್ವ ಇತ್ತು ಎಂದಲ್ಲವೇ? ಮಾತೃತ್ವ ಎಂದರೆ ಕೇವಲ ತನ್ನ ಮಗುವಿನ ಬಗ್ಗೆ ಮಾತ್ರವಲ್ಲ ಜಗದ ಎಲ್ಲಾ ಮಕ್ಕಳ ಬಗ್ಗೆಯೂ ಇರುವ ವಾತ್ಸಲ್ಯ ತಾಯಿ ಎಂದರೆ ಜಗತ್ತಿಗೆ ತಾಯಿ ಅನ್ನೋದು ಕೃಷ್ಣ ಹೀಗೆ ಅರ್ಥಮಾಡಿಸಿದನಾ...
ಭೂ ಭಾರ ಇಳಿಸಲು ಕೃಷ್ಣ ಅವತಾರವೆತ್ತಿ ಬಂದಾಗ ಅವನಿಗೆ ಸಹಾಯ ಮಾಡಲು ದೇವಾನುದೇವತೆಗಳೂ ಭೂಮಿಯಲ್ಲಿ ಹುಟ್ಟುತ್ತಾರೆ. ಅದರಲ್ಲಿ ಸೂರ್ಯನ ಅಂಶವನ್ನು ಹೊತ್ತು ಬಂದವನು ಕರ್ಣ. ತನ್ನ ಕೊನೆಯ ದಿನಗಳಲ್ಲಿ ಕೃಷ್ಣ ಕರ್ಣನನ್ನು ಪ್ರಶ್ನಿಸುತ್ತಾನೆ. ನೀನು ಬಂದಿದ್ದು ನನ್ನ ಸೇವೆಗಾ ಅಥವಾ ಉಪದ್ರವ ಕೊಡಲಾ? ಇದನ್ನು ಕೇಳಿದ ಕರ್ಣ ಉತ್ತರಿಸುತ್ತಾನೆ. ನಿನ್ನ ಸೇವೆಗೆಂದೇ ಬಂದೆ ಆದರೆ ನನ್ನ ತಾಯಿ ನನ್ನನ್ನು ನೀನು ಕಲ್ಪಿಸಿದ ಮರ್ಯಾದೆಯಲ್ಲಿ ಹಡೆಯಲಿಲ್ಲ, ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯನಾಗಲಿಲ್ಲ, ಕಾನಿನಿಕ ಎನ್ನಿಸಿಕೊಂಡೆ. ಅಲ್ಲಿಂದಲೇ ನಾನು ದಾರಿತಪ್ಪಿದೆ ಎನ್ನಿಸುತ್ತದೆ ಎನ್ನುತ್ತಾನೆ.
ಕರ್ಣನ ವ್ಯಕ್ತಿತ್ವವನ್ನು ಹೊಗಳುವ ಪ್ರತಿಯೊಬ್ಬರೂ ಕುಂತಿಯನ್ನು ತೆಗಳುತ್ತಾರೆ. ಕುಂತಿಯ ಬಗ್ಗೆ, ಅವಳು ಮಗುವನ್ನು ತೇಲಿಬಿಟ್ಟ ಬಗ್ಗೆ, ಅವಳ ಮಾತೃತ್ವದ ಬಗ್ಗೆ ಅನೇಕ ಚರ್ಚೆಗಳು, ಕುಹಕಗಳೂ ಕರ್ಣನ ಬಗ್ಗೆ ಮರುಕವೂ ಹೇರಳವಾಗಿದೆ. ಕುಂತಿ ದೂರ್ವಾಸ ಮುನಿಯ ವರವನ್ನು ಪರೀಕ್ಷೆ ಮಾಡಲು ಸೂರ್ಯನನ್ನು ಕರೆದಾಗ ಬರುವ ಸೂರ್ಯ ಅವಳಿಗೆ ಮಗುವನ್ನು ದಯಪಾಲಿಸಲು ಬಂದಾಗ ಹೆದರಿದ ಕುಂತಿ ಬೇಡವೆನ್ನುತ್ತಾಳೆ. ಆದರೆ ವರ ವ್ಯರ್ಥವಾಗಬಾರದು ಎನ್ನುವ ಕಾರಣಕ್ಕೆ ಅವಳ ಪರಿಸ್ಥಿತಿ ಅರಿತೂ ಸೂರ್ಯ ಅವಳಿಗೆ ಮಗು ದಯಪಾಲಿಸುತ್ತಾನೆ. ಕುಂತಿಯೇನೋ ಬಾಲಿಕೆ ಆದರೆ ಸೂರ್ಯ ತನ್ನ ಜವಾಬ್ದಾರಿ ಮರೆತು ವರ್ತಿಸುತ್ತಾನೆ. ಕನ್ಯೆಗೆ ಮಗು ದಯಪಾಲಿಸುವುದರ ಜೊತೆಗೆ ಅವಳ ಸ್ಥಿತಿಗೆ ಮರುಗಿ ಅವಳಿಗೆ ಕನ್ಯತ್ವದ ವರವನ್ನೂ ಕೊಡುತ್ತಾನೆ. ಇದನ್ನು ಬಹು ಚೆಂದವಾಗಿ ತೋಳ್ಪಾಡಿಯವರು ಸಂಪಿಗೆ ಭಾಗವತದಲ್ಲಿ ವಿವರಿಸುತ್ತಾರೆ. ಕುಂತಿಯ ಕನ್ನೆತನ ಭಂಗವಾಗದೆ ಉಳಿದಿದ್ದಕ್ಕೆ ಅವಳಲ್ಲಿ ಮಾತೃತ್ವ ಜಾಗೃತವಾಗಲಿಲ್ಲ. ಹಾಗಾಗಿಯೇ ಬಂಗಾರದ ತುಂಡಿನಂತ ಮಗುವನ್ನು ನದಿಯಲ್ಲಿ ತೇಲಿಬಿಡುತ್ತಾಳೆ.
ಆ ಕಾಲದ ಸಾಮಾಜಿಕ ಪರಿಸ್ಥಿತಿ ಹಾಗಿತ್ತು. ಅದು ಈಗಲೂ ಬದಲಾಗಿಲ್ಲ ಕೂಡ. ಭಯದಿಂದ ಮಗುವನ್ನು ನಿವಾರಿಸಿಕೊಳ್ಳುವ ಕುಂತಿಯದು ಮಾತ್ರ ತಪ್ಪು ಎನ್ನುವುದಕ್ಕಿಂತ ಜವಾಬ್ದಾರಿ ಮರೆತ ಸೂರ್ಯನದೂ ಅಷ್ಟೇ ತಪ್ಪಿದೆ. ವರ ವ್ಯರ್ಥವಾದರೂ ಅವಳು ಬದುಕು ನೆಮ್ಮದಿಯಾಗಿರುತಿತ್ತು. ಅದರಲ್ಲೂ ಸರ್ವದಕ್ಕೂ ಸಾಕ್ಷಿಯಾಗಿರುವ ಸೂರ್ಯನಿಗೆ ಅವಳು ಅದನ್ನು ಪರೀಕ್ಷೆ ಮಾಡಲು ಕರೆಯುತ್ತಿದ್ದಾಳೆ ಎನ್ನುವ ಅರಿವು ಇದ್ದೇ ಇತ್ತು. ಆ ಪರಿಸ್ಥಿತಿಯಲ್ಲಿ ವರ ಕೊಡುವುದು ಕುಂತಿಗೂ ಲೋಕಕ್ಕೂ ಒಳ್ಳೆಯದಲ್ಲ ಎನ್ನುವುದನ್ನು ಸೂರ್ಯ ಯಾಕೆ ಯೋಚಿಸಲಿಲ್ಲ. ಸೂರ್ಯನಂಥ ದಾತ್ರು ಬೇರೆ ಯಾರೂ ಇಲ್ಲ ಎನ್ನುವ ಹೆಮ್ಮೆ ಅವನಿಗೆ ಬೇಕಿತ್ತು. ಅದೇ ಹೆಮ್ಮೆ ಇಳಿದು ಕರ್ಣನಿಗೂ ಬಂದಿತಾ....
ಹಾಗೆ ನೋಡಿದರೆ ಕರ್ಣನಿಗೆ ಅಧಿರಥನ ಮನೆಯಲ್ಲಿ ವಾತ್ಸಲ್ಯ ದೊರಕಿತ್ತು. ಬೆಚ್ಚನೆಯ ಕುಟುಂಬ ಸಿಕ್ಕಿತ್ತು. ಕೃಷ್ಣನ ಬಾಲ್ಯಕ್ಕೆ ಹೋಲಿಸಿದರೆ ಅವನ ಬಾಲ್ಯ ನೆಮ್ಮದಿಯಾಗಿಯೇ ಸಾಗಿತ್ತು. ತಾಯಿಯ ಪ್ರೀತಿ ದೊರಕದೆ ಕರ್ಣ ಅಧರ್ಮದ ದಾರಿ ಹಿಡಿಯುವುದು ಸರಿ ಎಂದಾದರೆ ಕೃಷ್ಣನ ಬಾಲ್ಯ ಯಾವ ದಿಕ್ಕಿಗೆ ಹರಿಯಬೇಕಿತ್ತು ಎನ್ನುವ ಪ್ರಶ್ನೆ ಎದುರಾಗುವುದಿಲ್ಲವೇ. ದಾರಿ ಹಲವಿದ್ದರೂ ಆಯ್ಕೆ ಮಾತ್ರ ನಮ್ಮದೇ ಎನ್ನುವುದು ಕೃಷ್ಣ ಹೀಗೆ ತಿಳಿಸುತ್ತಾನಾ..... ಇನ್ನೊಬ್ಬರ ಮೇಲೆ ದೋಷ ಹೊರಿಸಿ ನಿರಾಳವಾಗುವ ಮುನ್ನ ನಮ್ಮ ಜವಾಬ್ದಾರಿ ಏನಿತ್ತು ಅನ್ನುವುದು ಅರ್ಥಮಾಡಿಸುತ್ತಾನೆ. ನಮ್ಮ ಮಹತ್ವಾಕಾಂಕ್ಷೆ ಪೂರೈಸಿ ಕೊಳ್ಳಲು ನಾವು ಹಿಡಿಯುವ ದಾರಿ ಮುಖ್ಯವಾಗುತ್ತದೆ. ಸಫಲವಾದರೆ ಅದು ನಮ್ಮ ಶಕ್ತಿ ಎನ್ನುವ ನಾವು ಸೋತರೆ ಪರಿಸ್ಥಿತಿ ಹಾಗೂ ಬೇರೆಯವರನ್ನು ಹೊಣೆಯಾಗಿಸುತ್ತೇವೆ. ಕರ್ಣ ಮಾಡಿದ್ದೂ ಅದನ್ನೇ..
ಸ್ನೇಹಕ್ಕೆ ಬದ್ಧ ಎನ್ನುವ ಕರ್ಣ ಆ ಸ್ನೇಹಿತನನ್ನು ತಿದ್ದುವ, ಅವನ ತಪ್ಪನ್ನು ಘಟ್ಟಿಸಿ ಹೇಳುವ ಪ್ರಯತ್ನವನ್ನು ಮಾಡದೆ ಅದಕ್ಕೆ ತನ್ನ ಬೆಂಬಲ ಕೊಡುತ್ತಾನೆ. ಅವನ ಪಾಂಡವ ದ್ವೇಷಕ್ಕೆ ನೀರೆರಿಯುವ ಮೂಲಕ ತನ್ನ ಕೋಪವನ್ನು ತೀರಿಸಿಕೊಳ್ಳುವ ಸಮಯ ಕಾಯುತ್ತಾನೆ. ಸ್ನೇಹವೆಂದರೆ ಎಲ್ಲವನ್ನೂ ಒಪ್ಪಿಕೊಂಡು ಕುರುಡಾಗಿ ಬೆಂಬಲಿಸುವುದಲ್ಲ. ತಪ್ಪನ್ನು ಎತ್ತಿ ಹೇಳುವ, ತಪ್ಪು ಹಾದಿ ಹಿಡಿಯದಂತೆ ನೋಡಿಕೊಳ್ಳುವುದೂ ಕೂಡ. ಸ್ನೇಹದ ಹೆಸರಿನಲ್ಲಿ ಕರ್ಣ ತನ್ನ ದ್ವೇಷ ತೀರಿಸಿಕೊಳ್ಳಲು ಯತ್ನಿಸಿದನಾ ಅನ್ನಿಸಿದ್ದು ಸುಳ್ಳಲ್ಲ. ಪಾಂಡವರು ಕೌರವರು ಇಬ್ಬರನ್ನು ಉಳಿಸುವ ಅವಕಾಶ ದೊರಕಿದಾಗ ಮಿತ್ರ ಪ್ರೇಮ ಎಂದು ನಿರಾಕರಿಸುವ ಕರ್ಣ ಹಲವರಿಗೆ ಆದರ್ಶವಾದರೆ ಅದನ್ನು ಒಪ್ಪಿಕೊಂಡು ಎರಡೂ ಕುಲವನ್ನು ಉಳಿಸಬಹುದಾಗಿದ್ದ ಸಂದರ್ಭ ತಪ್ಪಿಸುವುದು ಆ ಮೂಲಕ ಅವನೂ ಯುದ್ಧಕ್ಕೆ ಕಾರಣವಾಗುವುದು ಮರೆತೇ ಹೋಗುತ್ತದೆ. ಅದು ಸಮಯ ಸಾಧಕತನ ಎನ್ನುವ ಕರ್ಣನ ಮಾತಿಗೆ ಕೃಷ್ಣ ಉತ್ತರಿಸುತ್ತಾನೆ. ಸ್ವಾರ್ಥವಿದ್ದಲ್ಲಿ ಮಾತ್ರ ಅದು ಸಮಯ ಸಾಧಕತನವಾಗುತ್ತದೆ. ಒಂದು ಉತ್ತರ ಕರ್ಣನಿಗೆ ಕೊಡುವ ಉತ್ತರ ಅದೆಷ್ಟು ಜನರ ಸಮಸ್ಯೆಗಳಿಗೆ ಉತ್ತರವಾಗಬಹುದು, ಅದೆಷ್ಟು ಜನರ ಗೊಂದಲ ಪರಿಹರಿಸಬಹುದು ಎಂದು ಆಲೋಚಿಸಿದರೆ ಮೈ ಝುಂ ಎನ್ನುತ್ತದೆ. ಕರ್ಣನ, ಕರ್ಣನ ಮನಸ್ಥಿತಿಯ ಎಲ್ಲರಿಗೂ ಅವನು ಉತ್ತರಿಸುವ ಇನ್ನೊಂದು ಮಾತು ಕೇಳಿ,
"ತಂತ್ರ ಮಾಡುವುದು ಕುತಂತ್ರಿಗಳ ಹಕ್ಕಾದರೆ ಈಶ್ವರನಿಗೆ ಲೋಕತಂತ್ರದ ಹಕ್ಕಿಲ್ಲವೇ"
ಬಿಸಿಲು ಏರುತ್ತಾ ಬಂದ ಹಾಗೆ ಕೃಷ್ಣ ದಣಿಯುತ್ತಾನೆ. ಸಂಕಟ, ಹತಾಶೆಗಳಲ್ಲಿ ಬೇಯುತ್ತಾ ಒಂದು ಮರದಡಿಯಲ್ಲಿ ಮಲಗಿ ಅರ್ಜುನನಿಗಾಗಿ ದಾರಿ ಕಾಯುತ್ತಾ ವಿಶ್ರಮಿಸಲು ಪ್ರಯತ್ನಿಸುತ್ತಾನೆ. ಆಗ ಅಂಗಾಲಿಗೆ ಏನೋ ಚುಚ್ಚಿದಂತಾಗಿ ಕಣ್ಣು ತೆರೆದರೆ ತುಸು ದೂರದಲ್ಲಿ ಬಿಲ್ಲು ಹಿಡಿದ ವ್ಯಾಧನೊಬ್ಬ ಕಾಣಿಸುತ್ತಾನೆ. ಜಗನ್ನಿಯಾಮಕನಿಗೆ ಎಲ್ಲವೂ ಅರ್ಥವಾಗುತ್ತದೆ. ಬೆದರಿ ನಿಂತ ಆ ವ್ಯಾಧನನ್ನು ಹತ್ತಿರಕ್ಕೆ ಕರೆಯುತ್ತಾನೆ. ಅವನೋ ನಡುಗುತ್ತಾ ಹತ್ತಿರ ಬಂದರೆ ಕಾಲಿಗೆ ಚುಚ್ಚಿಕೊಂಡಿದ್ದ ಬಾಣವನ್ನು ತೆಗೆಯುತ್ತಾ ನಿನ್ನ ಹೆಸರೇನು ಅನ್ನುತ್ತಾನೆ. ಅವನು ಭಯದಿಂದಲೇ ಜರಾ ಅನ್ನುತ್ತಾನೆ. ಆ ಕ್ಷಣದಲ್ಲೂ ಕೃಷ್ಣನ ಮುಖದಲ್ಲಿ ಒಂದು ಮಂದಹಾಸ ಮಿನುಗುತ್ತದೆ. ಭೂ ಲೋಕಕ್ಕೆ ಬಂದ ಮೇಲೆ ಇಲ್ಲಿಯ ನಿಯಮದಂತೆ ಮುಪ್ಪಿನಲ್ಲಿ ಸಾವು. ತನಗಿನ್ನೂ ಮುಪ್ಪು ಆವರಿಸಿಲ್ಲ ಹಾಗಾಗಿಯೇ ಜರ ನಿಂದ ಸಾವು. ಸಸುನಗುತ್ತಲೇ ಬಾಣವನ್ನು ದಿಟ್ಟಿಸುವ ಅವನಿಗೆ ಆ ಬಾಣದ ಕೊನೆಯಲ್ಲಿ ಅಲುಗು ಕಾಣಿಸುತ್ತದೆ. ಅದು ಒನಕೆಯ ಚೂರು. ಪೂರ್ಣ ತೇಯದೆ ಯಾದವರು ಉಳಿದ ಅಲುಗನ್ನ ಸಮುದ್ರಕ್ಕೆ ಎಸೆದಿರುತ್ತಾರೆ. ಅದು ಈ ವ್ಯಾಧನಿಗೆ ಸಿಕ್ಕು ಅವನ್ನು ಅದನ್ನು ಮಸೆದು ಬಾಣಕ್ಕೆ ಸೇರಿಸಿರುತ್ತಾನೆ. ಅಲ್ಲಿಗೆ ದೂರ್ವಾಸ ಶಾಪವೂ ಹುಸಿಹೋಗಲಿಲ್ಲ.
ಜರನನ್ನೇ ದ್ರುಷ್ಟಿಸುವ ಶ್ರೀ ಹರಿಗೆ ಅವನು ಯಾವ ಶಿಕ್ಷೆಗೂ ತಯಾರಾಗಿ ನಿಂತ ಭಂಗಿ ಕಾಣುತ್ತದೆ. ಕೃಷ್ಣ ದೃಷ್ಟಿ ಹರಿದೊಡನೆ ಅವನು ಅಳುತ್ತಾನೆ , ಪಕ್ಷಿಯೆಂದು ತಿಳಿದು ಭ್ರಾಂತಿಯಿಂದ ಬಾಣ ಬಿಟ್ಟೆ ಎಂದು ಗೋಳಾಡುತ್ತಾನೆ. ತನ್ನ ಅಜ್ಞಾನಕ್ಕಾಗಿ ಹಳಹಳಿಸುತ್ತಾನೆ. ಆಗ ಕೃಷ್ಣ ಅವನಿಗೆ ಕರ್ಮದ ಚಕ್ರದ ಪರಿಚಯ ಮಾಡುತ್ತಾನೆ. ತ್ರೇತಾಯುಗದಲ್ಲಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ಬಾಣದಿಂದ ಸಂಹರಿಸುವಾಗ ಅವನಿಗೆ ರಾಮನ ಮೇಲೆ ಕೋಪವಿರುತ್ತದೆ. ಇಂದ್ರಾಂಶ ಸಂಭೂತನಾದರೂ ಮನುಷ್ಯ ಭಾವ ಅಳಿಯದೆ ಆ ಕೋಪ ಹಾಗೆಯೇ ಉಳಿದಿರುತ್ತದೆ. ಎಲ್ಲಾ ಭಾವಗಳು ಶೂನ್ಯವಾದಾಗಲೇ ಮುಕ್ತಿ. ಅಲ್ಲಿ ಒಳಿತು ಕೆಡುಕುಗಳ ಲೆಕ್ಕಾಚಾರವಿರುವುದಿಲ್ಲ. ಹಾಗಾಗಿಯೇ ಆ ಲೆಕ್ಕ ಸರಿಯಾಗಲೆಂದೇ ಇಲ್ಲಿ ಕೃಷ್ಣನನ್ನೇ ಕೊಲ್ಲುವ ಪಾತ್ರ. ಶೇಷ ಉಳಿಯಬಾರದು. ಪರಿಶುದ್ಧನಾಗಬೇಕು. ಎಂಥಾ ದಯೆ.. ಎಂಥಾ ಕರುಣೆ... ಅದೆಂಥಾ ಪ್ರೇಮ..
ಪ್ರತಿಯೊಬ್ಬರೂ ನೋವಿನಲ್ಲಿ, ಸಂಕಟದಲ್ಲಿ ಮೊದಲು ನೆನೆಯುವುದು ತಾಯಿಯನ್ನ.... ಕೃಷ್ಣಾ ಅಮ್ಮಾ ಎಂದ ಕೂಡಲೇ ಮೂರು ಮುಖಗಳು ಮನಃ ಪಟಲದಲ್ಲಿ ಮೂಡಿದವಂತೆ. ಒಂದು ದೇವಕಿ ಇನ್ನೊಂದು ಯಶೋದೆ....
ಮತ್ತೊಂದು.....
ಕೃಷ್ಣನ ಬಾಲ್ಯವಾದರೂ ಹೇಗಿತ್ತು. ದೇವಾಧಿದೇವ, ಅರಸು ಮನೆತನ ಆದರೆ ಹುಟ್ಟಿದ್ದು ಸೆರೆಮನೆಯಲ್ಲಿ , ಸುತ್ತಲು ಒಂದು ಬೆಚ್ಚಗಿನ ಬಟ್ಟೆಯೂ ಇಲ್ಲದ ಜಾಗದಲ್ಲಿ. ಅಪಾಯವನ್ನೇ ಸುತ್ತಿಕೊಂಡು ಬಂದವನಿಗೆ ಉಳಿದರ ಹಂಗ್ಯಾಕೆ .... ಹುಟ್ಟಿದ ಕೂಡಲೇ ತಾಯಿಯಿಂದ ಬೇರಾಗ ಬೇಕಾದ ಸ್ಥಿತಿ. ಸುರಿವ ಮಳೆಯಲ್ಲಿ ಅಲ್ಲಿಂದ ಪಾರಾಗಿ ಗೋಕುಲ ಸೇರಿ ಗೊಲ್ಲ ಬಾಲನಾಗಿ ಬೆಳೆಯಬೇಕಾಯಿತು. ಇಲ್ಲಿಂದ ಅಲ್ಲಿಗೆ ಹೋದರೂ ಸಂಕಷ್ಟಗಳು ಮುಗಿದವಾ ಉಹೂ ಮತ್ತಷ್ಟು ಹೆಚ್ಚೇ ಆಯಿತೇನೋ ಅನ್ನುವಷ್ಟು ಎದುರಾದವು. ಮೊದಲಿಗೆ ಬಂದಿದ್ದೇ ಪೂತನಿ. ಸುಂದರ ಯುವತಿಯ ರೂಪ ಹೊತ್ತ ರಾಕ್ಷಸಿ. ಒಳಗಿನ ಕುರೂಪ ಕಾಣಿಸುವುದಿಲ್ಲ ಅದು ಕೇವಲ ಅನುಭವಕ್ಕೆ ಮಾತ್ರ ನಿಲುಕುವುದು. ಎಲ್ಲರೂ ಎತ್ತಿ ಮುದ್ದಾಡುತ್ತಿದ್ದ, ತನಗೆ ಇಂತ ಮಗು ಇರಬಾರದೇ ಎಂದು ಹಂಬಲಿಸುತಿದ್ದ ಅಷ್ಟು ಸುಂದರ ಕೂಸನ್ನ ಕೊಲ್ಲಲು ಬರುವ ಅವಳೊಳಗೆ ಅದೆಂಥಾ ರಾಕ್ಷಸತ್ವ ...
ಹಿಂದೆ ರಾಜರು ತಮ್ಮ ಶತ್ರುಗಳನ್ನು ನಿವಾರಿಸಿಕೊಳ್ಳಲು ಚಿತ್ರವಿಚಿತ್ರವಾದ ಸಂಚು, ಉಪಾಯ ಮಾಡುತ್ತಿದ್ದರಂತೆ. ಅದರಲ್ಲೊಂದು ಉಪಾಯ ವಿಷಕನ್ಯೆ. ಚೆಂದದ ಹೆಣ್ಣು ಮಗುವಿಗೆ ಬಾಲ್ಯದಿಂದಲೇ ಊಟದ ಜೊತೆಗೆ ವಿಷದ ಪುಡಿಯನ್ನು ಬೆರೆಸಿ ತಿನ್ನಿಸಿ ಅವಳನ್ನು ವಿಷಕನ್ಯೆಯಾಗಿ ರೂಪಿಸುತ್ತಿದ್ದರಂತೆ. ಅವಳ ಸಂಪರ್ಕಕ್ಕೆ ಬಂದವರು ಆ ವಿಷದ ಪ್ರಭಾವದಿಂದ ನಾಶವಾಗುತ್ತಿದ್ದರಂತೆ. ಹನಿ ಟ್ರ್ಯಾಪ್ ಅನ್ನೋದು ಆ ಕಾಲದಲ್ಲೇ ಹೇಗೆ ಬಳಕೆಯಾಗುತ್ತಿತ್ತು ಎನ್ನಿಸಿ ಆಶ್ಚರ್ಯವಾದರೂ ಅಂದು ಇಲ್ಲದ್ದು ಇಂದು ಇರುವುದು ಏನು ಎಂದೂ ಅರ್ಥವಾಗತೊಡಗಿತ್ತು. ಹಾಗೆ ಬೆಳೆದವಳು ಪೂತನಿ. ವಿಷಕನ್ಯೆ. ಕಂಸನ ಆಜ್ಞಾನುವರ್ತಿ. ಕೊಲ್ಲುವುದರ ಹೊರತು ಬೇರೇನೂ ಶಕ್ತಿ ಇಲ್ಲದ ಅಸಹಾಯಕ ಹೆಣ್ಣು.
ಪ್ರತಿ ಹೆಣ್ಣಿನಲ್ಲೂ ಹುಟ್ಟುವಾಗಲೇ ಮಾತೃತ್ವ ಜೊತೆಯಾಗುತ್ತದಂತೆ. ಅಂಥಾ ಹೆಣ್ಣು ರಾಕ್ಷಸಿಯಾಗುವುದು ಹೇಗೆ? ಆದರೆ ರಾಜಾಶ್ರಯದ ದಾಸಿಯಾಗಿದ್ದ ಅವಳಿಗೆ ರಾಜನ ಆಜ್ಞೆ ಪಾಲಿಸುವುದರ ವಿನಃ ಬೇರ್ಯಾವ ದಾರಿಯೂ ಇರಲಿಲ್ಲ. ಹಾಗಾಗಿಯೇ ಅವನ ಆಜ್ಞೆಯಂತೆ ಗೋಕುಲಕ್ಕೆ ಬರುತ್ತಾಳೆ. ಕಂಡ ಎಳೆಯ ಮಕ್ಕಳನ್ನು ಹಾಲೂಡಿಸುತ್ತಾ ಕೊಲ್ಲುತ್ತಾ ಕೊನೆಗೆ ನಂದಗೋಪನ ಮನೆಗೆ ಬರುತ್ತಾಳೆ. ನಿರಪರಾಧಿಗಳು ಸತ್ತರೂ ದೇವನನ್ನು ಅವಳ ಬಿಡುಗಡೆಯ ರಕ್ಷಕನನ್ನು ಅರಸುತ್ತಾ ಹೃದಯವನ್ನು ಕಲ್ಲು ಮಾಡಿಕೊಳ್ಳುತ್ತಾ ಹೋಗುತ್ತಾಳೆ. ಅವಳ ನಿರೀಕ್ಷೆಗೆ ಫಲ ಸಿಕ್ಕಿ ನಂದಗೋಪನ ಮನೆಗೆ ಪ್ರವೇಶ ಸಿಗುತ್ತದೆ. ಅಂದವಾಗಿ ಅಲಂಕರಿಸಿಕೊಂಡ ಪೂತನಿ ಒಳಗೆ ಪ್ರವೇಶಿಸುತ್ತಾಳೆ. ಎಲ್ಲರನ್ನು ಸ್ವಾಗತಿಸಿದ ಹಾಗೆ ಯಶೋದೆ ಒಳ ಕರೆಯುತ್ತಾಳೆ, ಬಾಗಿನ ಕೊಡುತ್ತಾಳೆ. ಮೊತ್ತ ಮೊದಲ ಬಾರಿಗೆ ತಾನೂ ಉಳಿದವರಂತೆ ಸ್ವೀಕರಿಸಿದ ಕ್ಷಣ ಅವಳ ಹೃದಯ ಮೆದುಗೊಳ್ಳುತ್ತದೆ. ಕರಗುವುದು ಅಲ್ಲಿಂದ ಶುರುವಾಯಿತಾ....
ತೊಟ್ಟಿಲಲ್ಲಿ ಕೈಕಾಲು ಆಡಿಸುತ್ತಾ ಮಗುವನ್ನು ಕಂಡ ಕೂಡಲೇ ಅದನ್ನು ಬಾಚಿ ಎತ್ತಿಕೊಳ್ಳುತ್ತಾಳೆ. ಒಂದು ಮೂಲೆಯಲ್ಲಿ ಕುಳಿತು ಹಾಲು ಕುಡಿಸಲು ಶುರುಮಾಡುತ್ತಾಳೆ.ಹಾಲು ಕುಡಿಸುವ ನೆಪದಲ್ಲಿ ವಿಷ ಉಣಿಸಲು ಯತ್ನಿಸಿದರೂ ಕೃಷ್ಣ ಹಾಲನ್ನು ಕುಡಿದೇ ಕುಡಿದ. ಕೇವಲ ಹಾಲನ್ನು ಕುಡಿದನಾ ಉಹೂ ಅವಳ ರಾಕ್ಷಸತ್ವವನ್ನೇ ಹೀರಿದ. ತಣಿದಳು ಪೂತನಿ. ದಣಿಯಲಿಲ್ಲ. ಇನ್ನಷ್ಟು ಎದೆಗೊತ್ತಿಕೊಂಡಳು. ಜೀವ ರಸವನ್ನೇ ಹೀರಿ ಮುಕ್ತಗೊಳಿಸೋ ಎಂದು ಕೇಳಿಕೊಂಡಳು. ಪೂರ್ಣವಾಗಿ ಸಮರ್ಪಿಸಿಕೊಂಡಳು. ನಮ್ಮ ಕಣ್ಣಿಗೆ ಜೀವವನ್ನು ಕಳೆದುಕೊಂಡ ಹಾಗೆ ಕಾಣಿಸಿದಳು. ವಾಸ್ತವದಲ್ಲಿ ಪಾಪವನ್ನು ಕಳೆದುಕೊಂಡಳು, ರಾಕ್ಷಸತ್ವವನ್ನು ಕಳೆದುಕೊಂಡಳು. ಶಾಪ ಮುಕ್ತಳಾದಳು. ತನ್ನಡೆಗೆ ಬಂದವರು ಯಾರನ್ನೂ ಕೃಷ್ಣ ಬರಿಗೈಯಲ್ಲಿ ವಾಪಾಸು ಕಳಿಸಲೇ ಇಲ್ಲ. ಅವರು ಯಾರೇ ಆದರೂ. ಕೊಲ್ಲಲು ಬಂದವರನ್ನೂ ಕಾಪಾಡುವವನು ದೇವರಲ್ಲದೆ ಮತ್ತೇನು ಆದಾನು.. ಪೂತನಿ ಪುನೀತಳಾದಳು, ತಾಯಿಯಾದಳು.
ಒಂದು ಪರಿಪೂರ್ಣ ಪುಸ್ತಕದ ಬಗ್ಗೆ,ಅಷ್ಟೇ ಪರಿಪೂರ್ಣ ವಾಗಿ ಕೃಷ್ಣ ಪಾತ್ರದ ಮೂಲಕ ಗಾಂಧಾರಿ, ಕುಂತಿ,ಕರ್ಣ ವ್ಯಕ್ತಿಗಳ ಆಲೋಚನೆ ಕುರಿತು ನೇರವಾಗಿ ಸರಳವಾಗಿ ಹೇಳಿದ್ದೀರಿ......
ReplyDeleteಈ ಪುಸ್ತಕ ಇನ್ನು ಓದಿಲ್ಲ...ಓದಿ ಮತ್ತೆ ತಿಳಿಸುವೆ...
ಮತ್ತೊಮ್ಮೆ ನಿಮ್ಮ ಸುಂದರವಾದ ಬರಹಕ್ಕೆ🙏🙏🙏🙏
ಇಂದು ಈ ಪುಸ್ತಕ ಓದಿದೆ..ಎಲ್ಲರೂ ಓದಬಹುದಾದ,ಓದಲೇ ಬೇಕಾದ ಪುಸ್ತಕ🙏🙏🙏
ReplyDelete