Posts

Showing posts from 2022
 ನಾಳೆ ಬೆಂಗಳೂರಿಗೆ ಹೋಗು ವಿಜಯಕರ್ನಾಟಕ ಆಫೀಸ್ ಅಲ್ಲಿ ಇಂಟರ್ವ್ಯೂ ಇದೆ ಎಂದು ಫ್ರೆಂಡ್ ಫೋನ್ ಮಾಡಿದಾಗ ನಾಳೆಯಾ ಎಂದು ಕಂಗಲಾಗಿದ್ದೇ.  ಕಾಲೇಜ್ ಮುಗಿಸಿ ಸ್ವಲ್ಪ ದಿನ ಕಳೆಯುವ ಹೊತ್ತಿಗೆ ಅಣ್ಣನಿಗೆ ಕೆಲಸ ಸಿಕ್ಕಿ ದೂರದ ಆಂಧ್ರಕ್ಕೆ ಬಂದು ವರ್ಷ ಕಳೆಯುವ ಹೊತ್ತಿಗೆ ಅಪ್ಪಟ ಆಂಧ್ರದವಳಾಗಿ ಹೋಗಿದ್ದೆ.   ತಿರುಪತಿ ಸೇರಿದ ಮೇಲಂತೂ  ವಿದ್ಯಾಪೀಠ, ತಿರುಮಲ, ಫಿಲ್ಮ್ ಎಂದು ಆರಾಮಾಗಿ ಓಡಾಡಿಕೊಂಡು ಹೊತ್ತು ಹೊತ್ತಿಗೆ ತಿಂದು ಉಂಡಾಡಿ ಗುಂಡನ ಹಾಗಿದ್ದವಳಿಗೆ ಇದ್ದಕ್ಕಿದ್ದ ಹಾಗೆ ನಾಳೆಯೇ ಹೊರಡು ಎಂದರೆ ಹೇಗಾಗಬೇಡ? ಹೂ ನಾಳೇನೆ. ರಾತ್ರಿ ಹೊರಟರೆ ಬೆಳಿಗ್ಗೆ ಬೆಂಗಳೂರು ತಲುಪಬಹುದು,  ಬಿಟ್ಟರೆ ಹೀಗೆ ಇರ್ತಿ. ಸ್ವಲ್ಪ ಜವಾಬ್ದಾರಿ ಕಲಿ, 10 ಗಂಟೆಗೆ ಆಫೀಸ್ ಅಲ್ಲಿ ಇರಬೇಕು  ಎಂದವನೇ ಮುಂದೆ ಮಾತಿಗೆ ಅವಕಾಶ ಕೊಡದ ಹಾಗೆ ಫೋನ್ ಇಟ್ಟಿದ್ದ. ಆಕಾಶವೇ ತಲೆಯ ಮೇಲೆ ಬಿದ್ದ ಹಾಗಾದರೂ ಅಯ್ಯೋ ಬಿಡು ಬರೀ ಇಂಟರ್ವ್ಯೂ ತಾನೇ ಎಂದು ಸಮಾಧಾನ ಮಾಡಿಕೊಂಡು ಸಿದ್ಧಳಾಗಲು ಹೊರಟಿದ್ದೇ.  ಅಂತೂ ಬೆಂಗಳೂರು ಸೇರಿ ಆಫೀಸ್ ತಲುಪಿ ಕುಳಿತರೆ ಸರಿಯಾದ ಸಮಯಕ್ಕೆ ಕರೆ ಬಂದಿತ್ತು. ಎದುರಿಗೆ ಇದ್ದಿದ್ದು ಆನಂದ್ ಸಂಕೇಶ್ವರ್. ಅನೌಪಚಾರಿಕ ಮಾತುಕತೆಯ ನಂತರ ಮದುವೆ ಆದರೆ ಕೆಲಸ ಬಿಡ್ತೀನಿ ಅನ್ನೋದು ಏನಾದರೂ ಇದೆಯಾ ಎಂದು ಕೇಳಿದರು. ಇಂಟರ್ವ್ಯೂ ಅಲ್ಲಿ ಸೆಲೆಕ್ಟ್ ಆದ ಮೇಲೆ ತಾನೇ ಇವೆಲ್ಲಾ ಎನ್ನುವ ಧೈರ್ಯದಲ್ಲಿ ಇಲ್ಲ ಎಂದು ತಲೆ ಅಲ್ಲಾಡಿಸಿದ್ದೇ. ಸರಿ ನಾಡಿದ್ದು ಬಂದು ಜಾಯಿನ್

ಮಳೆಗಾಲದ ತಯಾರಿ. (ಹನಿ ಕಡಿಯದ ಮಳೆ)

ಮೇ ತಿಂಗಳ ಕೊನೆಯ ಹೊತ್ತಿಗೆಲ್ಲಾ ಮಳೆಯ ದಿಬ್ಬಣ ಅಡಿಯಿಡುತಿತ್ತು. ದಿಬ್ಬಣವೆಂದರೆ ಗೌಜಿ ಗದ್ದಲ ಇಲ್ಲದೆ ಇದ್ದರೆ ಆಗುತ್ತದೆಯೇ? ಹಾಗಾಗಿ ಗುಡುಗು ಸಿಡಿಲುಗಳ ಆರ್ಭಟ, ಕೋರೈಸುವ ಮಿಂಚು, ಭೋರೆಂದು ಬೀಸುವ ಗಾಳಿ, ತನ್ನ ಆವೇಶವನ್ನೆಲ್ಲಾ  ಒಮ್ಮೆಗೆ ಹೊರ ಹಾಕುವಂತೆ ಧೋ ಎಂದು ಸುರಿಯುವ ಮಳೆ. ಒಂದಕ್ಕೊಂದು ಜೊತೆಯಾಗುತ್ತಾ, ಹಾಗೆ ಜೊತೆಯಾಗುತ್ತಲೇ ಜೊತೆಯಾಗಿಸುತ್ತಾ ಬರುತಿದ್ದ ಮಳೆರಾಯ ಥೇಟ್ ದಿಬ್ಬಣದ ಬೀಗರಂತೆ ಖುಷಿಯ ಜೊತೆ ಜೊತೆಗೆ ಆತಂಕ, ಏನಾಗಬಹುದು ಅನ್ನೋ ಅವ್ಯಕ್ತ ಭಯ, ಸುಸೂತ್ರವಾಗಿ ಜರುಗಿದರೆ ಸಾಕಪ್ಪ ಅನ್ನುವ ಆಸೆ ಎಲ್ಲವೂ ಮೂಡುವ ಹಾಗೆ ಮಾಡುತಿದ್ದ. ದಿಬ್ಬಣ ಬರುವ ಮುನ್ನ ಎಷ್ಟೆಲ್ಲಾ ತಯಾರಿಗಳು ಆಗಬೇಕು, ಎಷ್ಟೊಂದು ಕೆಲಸ. ಬೀಗರನ್ನು ಎದುರುಗೊಳ್ಳುವುದೆಂದರೆ ಅದೇನು ಅಷ್ಟು ಸುಲಭವೇ. ಅದೆಷ್ಟು ಜಾಗ್ರತೆ, ಅದೆಷ್ಟು ತಯಾರಿ ಮಾಡಲೇ ಬೇಕು. ಒಮ್ಮೆ ಬೀಗರು ಅಡಿಯಿಟ್ಟ ಮೇಲೆ ಮುಗಿಯಿತು. ಅವರನ್ನು ಉಪಚರಿಸಲು ಎಷ್ಟೊಂದು ಕೆಲಸ ಆಗಿರಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಲು ಇರುವಾಗಲೇ ಹಪ್ಪಳ ಸಂಡಿಗೆ ಮಾಡಿ ಅದನ್ನು ಡಬ್ಬದಲ್ಲಿ ತುಂಬಿಟ್ಟುಕೊಳ್ಳಬೇಕು. ಅದೂ ತರಾವರಿ ಹಪ್ಪಳಗಳು ಇದ್ದರೂ ಹಲಸಿನ ಹಪ್ಪಳಕ್ಕೆ ಅಗ್ರಸ್ಥಾನ. ರಾಜ ಅದು. ಉಳಿದ ಮಂತ್ರಿ ಮಂಡಲದಂತೆ ಅಕ್ಕಿ ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು ಹೀಗೆ ಉಳಿದವರು ಇರುತಿದ್ದರು. ಆಮೇಲೆ  ಉಪ್ಪಿನಕಾಯಿ ಅದೂ ಮಿಡಿ ಮಾವಿನ ಉಪ್ಪಿನಕಾಯಿ, ಸ್ವಲ್ಪ ನಿಂಬೆಕಾಯಿ ಉಪ್ಪಿನಕಾಯಿ, ತೋಟದಲ್ಲಿ
 ಯಾವುದಾದರೂ ಘಟನೆ ಸಂಭವಿಸುವುದು ಒಂದು ಕ್ಷಣದಲ್ಲಿಯೇ ಆದರೂ ಅದಕ್ಕೆಷ್ಟು ಹಿನ್ನಲೆ ಸಿದ್ಧತೆ ನಡೆದಿರುತ್ತದೆ ಎನ್ನುವುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಯಾವುದೂ ಇಲ್ಲಿ ಅಕಾರಣವಾಗಿ ಸಂಭವಿಸುವುದಿಲ್ಲ. ಅರಿಯುವ ಬುದ್ಧಿ, ನೋಡುವ ಕಣ್ಣು ನಮಗೆ ಇರುವುದಿಲ್ಲ ಅಷ್ಟೇ. ಸದ್ಯಕ್ಕೆ ಕರ್ಣ ಅತ್ಯಂತ ಅನುಕಂಪಕ್ಕೆ ಪಾತ್ರನಾಗುವ ವ್ಯಕ್ತಿಯಾದರೆ ಕುಂತಿ ಅಷ್ಟೇ ದೂಷಣೆಗೆ ಪಾತ್ರಳಾಗುತ್ತಾಳೆ. ಯಾರದು ತಪ್ಪು ಯಾರದು ಸರಿ ನಮ್ಮ ಅನುಭವ ಆಲೋಚನೆಯ ಹಿನ್ನಲೆಯಲ್ಲಿ ತೀರ್ಪು ಕೊಡುತ್ತೇವೆ. ಆದರೆ ಅದು ಕುಂತಿಯ ತಪ್ಪಾ, ಆಕಸ್ಮಿಕವಾ, ಘಟಿಸಲೆ ಬೇಕಾಗಿದ್ದ ಘಟನೆಯ ಅವಳು ನಿಮಿತ್ತ ಮಾತ್ರವಾ ಊಹೂ ಯಾವುದೂ ಯೋಚಿಸುವುದಿಲ್ಲ. ಅದು ಆ ಕ್ಷಣಕ್ಕೆ ನಡೆದ ಘಟನೆಯ ಎಂದರೆ ಬಹು ಹಿಂದೆ ಹೋಗಿ ನೋಡಬೇಕಾಗುತ್ತದೆ.  ಚಿಕ್ಕ  ವಯಸ್ಸಿನಲ್ಲಿ ದತ್ತಕಕ್ಕೆ ಹೋದ ಕುಂತಿಯ ಮಾನಸಿಕತೆ ಬಾಲ್ಯ ಹೇಗಿತ್ತು ಎನ್ನುವ ವಿವರ ಎಲ್ಲಿಯೂ ದೊರಕುವುದಿಲ್ಲ. ಹಾಗೆ ಹೋದ ಕುಂತಿ ಸುಖವಾಗಿದ್ದಳಾ, ಖಾಲಿತನ ಕಾಡುತ್ತಿರಲಿಲ್ಲವಾ.. ಯಾವುದಕ್ಕಾಗಿ ಅವಳು ಹಂಬಲಿಸುತ್ತಿದ್ದಳು ಎಲ್ಲವೂ ಮುಂದೆ ನಡೆಯುವ ಘಟನೆಗೆ ಸೂತ್ರ ಹಣಿದಿರಬಹುದು. ಅವಳು ಹದಿಹರೆಯಕ್ಕೆ ಕಾಲಿಡುವ ಹೊತ್ತಿಗೆ ಬಂದಿದ್ದು ದೂರ್ವಾಸ ಮುನಿ. ಹೇಳಿ ಕೇಳಿ ಕೋಪಿಷ್ಟ. ಅವನ ಅನುಗ್ರಹ ಇರಲಿ ಕೋಪಕ್ಕೆ ತುತ್ತಾಗದೇ ಇದ್ದರೆ ಸಾಕು ಎಂದು ಹಂಬಲಿಸಿದವರೆ ಎಲ್ಲರೂ. ಅವನಿಗೆ ಎದುರಾದ, ಅವನು ಭೇಟಿ ಕೊಟ್ಟ ಪ್ರತಿ ಜೀವಿಯ ಎದೆಯಲ್ಲೂ ಭಯದ ರುದ್ರ ನರ್ತನ.
 ನೀನು  ಇವತ್ತು ಅಡಿಗೆ ಮನೆಗೆ ಬರುವ ಹಾಗಿಲ್ಲ, ಮೆಟ್ಟಿಲು ಮೇಲೆ ಕೂತ್ಕೋಬೇಕು ಅಷ್ಟೇ ಅಜ್ಜಿ ಊಟ ಮುಗಿಸಿ ಕೈ ತೊಳೆದು ಬರುತ್ತಿದ್ದವಳನ್ನು ನೋಡಿ ಹೇಳಿದ್ದಳು. ಅವತ್ತು ಹೋಳಿಗೆ ಮಾಡುವ ಕಾರ್ಯಕ್ರಮವಿತ್ತು, ಮತ್ತದು ನೈವೈಧ್ಯಕ್ಕಾಗಿ ಇಡಬೇಕಾಗಿದ್ದರಿಂದ ಮಡಿಯಲ್ಲೇ ಮಾಡಬೇಕಿತ್ತು. ಈ ಹುಡುಗು ಬುದ್ಧಿಯ ಹುಡುಗಿಗೆ ತಿನ್ನೋದು ಇಷ್ಟವಿಲ್ಲದಿದ್ದರೂ  ಕೆಲಸ ಮಾಡುವುದು ನೋಡುವ ಸಂಭ್ರಮ. ನೋಡನೋಡುತ್ತಾ ಮುಂದಕ್ಕೆ ಜಾರಿ ತಾನೂ ಕೈ ಜೋಡಿಸುವುದು ಅಯಾಚಿತವಾಗಿ ನಡೆಯುತ್ತಿದ್ದರಿಂದ ಮೊದಲೇ ಎಚ್ಚರಿಕೆ ಹೇಳಿದ್ದಳು ಅವಳು. ಮನೆ ತುಂಬಾ ಜನ, ಅವರ ಮಾತು, ಸರಭರ ನಡೆಯುವ ಕೆಲಸ ಎಲ್ಲವನ್ನೂ ನೋಡುವುದು ಚಿಕ್ಕಂದಿನಿಂದಲೂ ಬಹಳ ಇಷ್ಟದ ಕೆಲಸ. ಕಷ್ಟದಿಂದಲೇ ಆಯ್ತು ಬರೋಲ್ಲ ಎಂದು  ಒಪ್ಪಿಕೊಂಡಿದ್ದೆ. ಅಡಿಗೆಮನೆಯಲ್ಲಿ ಮಧ್ಯಾಹ್ನವೇ ಗಬಿಡಿಡಿ ಕೆಲಸದ ಭರಾಟೆ ಜೋರಾಗಿತ್ತು. ಸುಮ್ಮನೆ ಕುಳಿತಿರಲಾಗದೆ ಹೇಗೆ ಮಾಡೋದೇ ಎಂದೇ. ಏನೋ ಅಪರೂಪಕ್ಕೆ ಅಡಿಗೆಗೆ ಸಂಬಂಧಿಸಿದ ವಿಷಯ ಕೇಳ್ತಾ ಇದಾಳೆ ಅನ್ನೋದು ಅವಳಿಗೆ ಆಶ್ಚರ್ಯ ಜೊತೆಗೆ ಈಗಲಾದರೂ ಈ ಕಡೆ ಮನಸ್ಸು ತಿರುಗಿತಲ್ಲ ಎನ್ನುವ ಸಮಾಧಾನ. ಅದೇ ಸಂಭ್ರಮದಲ್ಲೇ ಒಂದೊದಾಗಿ ಹೇಳುತ್ತಿದ್ದವಳಿಗೆ ಅದು ಗೊತ್ತು, ಅದು ಗೊತ್ತು ಆಮೇಲೆ ಎನ್ನುತ್ತಿದ್ದವಳ ನೋಡಿ ಕೋಪ ಉಕ್ಕಿ ನಿನ್ನ ತರಹದ್ದೇ ಒಬ್ಬಳು ಸೊಸೆ ಇದ್ದಳಂತೆ. ಹೀಗೆ ಎಲ್ಲಾ ನಂಗೊತ್ತು ಅಂತಿದ್ದಳಂತೆ ತಲೆ ಕೆಟ್ಟ ಅತ್ತೆ ಒಂದು ಮುಷ್ಠಿ ಉಪ್ಪು ಹಾಕಬೇಕು ಅಂದ್ರೆ ಅದೂ ಗೊತ್ತು

ಬಿಸಿಬೇಳೆ ಬಾತ್

 ಇವತ್ತು ಬಿಸಿ ಬೇಳೆ ಬಾತ್ ಮಾಡ್ತೀನಿ ಆಯ್ತಾ ಮಗುವೇ ಎಂದರೆ ಅವತ್ತು ಮನೆಯಲ್ಲಿ ಯಾರೂ ಇಲ್ಲವೆಂದು ಅರ್ಥ. ಬಹುಶಃ ಅವತ್ತು ನಾವು ಮಾತ್ರವೇ ಎನ್ನುವುದು ಒಳಾರ್ಥ. ದಿಟ್ಟಿಸಿ ನೋಡಿದರೆ ಅವಳ ಕಣ್ಣುಗಳಲ್ಲಿ ಮಿಂಚು ಕಾಣಿಸುತ್ತಿತ್ತು. ಆದರೆ ನಾನು ನೋಡುತ್ತಿರಲಿಲ್ಲ ಅಷ್ಟೇ. ಈ ಬಿಸಿಬೇಳೆ ಬಾತ್ ಎಂದರೆ ಅವಳಿಗೆ ಅತ್ಯಂತ ಪ್ರಿಯವಾದ ತಿನಿಸು. ಈಗಿನ ಹಾಗೆ ಬಗೆಬಗೆಯ ತರಕಾರಿ ಹಾಕಿ ಅಲಂಕಾರ ಮಾಡುವ ಪರಿಸ್ಥಿತಿ, ಅನುಕೂಲ ಎರಡೂ ಇಲ್ಲದ ಕಾಲದಲ್ಲಿ ಅವಳ ಬಿಸಿಬೇಳೆ ಬಾತ್ ಎಂದರೆ ಸರಳ ಸುಂದರಿ ಬೇಳೆ ಅನ್ನ ಅಷ್ಟೇ. ಅದಕ್ಕೆ ಇಷ್ಟೊಂದು ಸಂಭ್ರಮವಾ ಎಂದರೆ ಹೌದು.  ಹುಟ್ಟಿದ್ದು ಆರ್ಥಿಕವಾಗಿ ಸಣ್ಣ ಆದರೆ ತಲೆಯ ಲೆಕ್ಕದಲ್ಲಿ ದೊಡ್ಡ ಕುಟುಂಬದಲ್ಲಿ. ಬಡತನಕ್ಕೆ ಅವಳ ಮೇಲೆ ಎಷ್ಟು ಪ್ರೀತಿ ಎಂದರೆ ಅದು ಅವಳನ್ನು ಬೆಂಬಿಡದೆ ಕೊಟ್ಟ ಮನೆಗೂ ಹಿಂಬಾಲಿಸಿ ಬಂದಿತ್ತು. ಬಡತನಕ್ಕೆ ಬೇಸರವಾಗಿ ಅವಳನ್ನು ಬಿಡುವ ಹೊತ್ತಿಗೆ ಅವಳು ಆ ಬಡತನಕ್ಕೆ ಎಷ್ಟು ಅಭ್ಯಾಸವಾಗಿ ಹೋಗಿದ್ದಳು ಎಂದರೆ ಸಿರಿವಂತಿಕೆ ಒಪ್ಪಲೂ ಇಲ್ಲ, ಅಪ್ಪಲೂ ಇಲ್ಲ. ನೀನು ಬಿಟ್ಟರೆನು ನಾನು ಬಿಡಲಾರೆ ಎಂದು ತನ್ನ ಬದುಕಿನ ಶೈಲಿ ಬದಲಾಯಿಸಿಕೊಳ್ಳಲೇ ಇಲ್ಲ. ಇಂತಿರ್ಪ ನನ್ನ ಅಜ್ಜಿಗೆ ಇದ್ದ ಒಂದೇ ಆಸೆ, ಒಂದೇ ಬಲಹೀನತೆ ಎಂದರೆ ಅದು ಬಿಸಿಬೇಳೆ ಬಾತ್ ಮಾತ್ರ.  ತೊಗರಿಬೇಳೆ ಶ್ರೀಮಂತರ ಮನೆಯಲ್ಲೂ ಅಪರೂಪದ ಅತಿಥಿಯಾಗಿದ್ದ ಮಲೆನಾಡಿನ ಆ ಕಾಲದಲ್ಲಿ ಇವಳ ಬಿಸಿಬೇಳೆ ಬಾತ್ ದುಬಾರಿಯಾದ ಬಯಕೆಯೆ ಆಗಿತ್ತು. ಹಾಗಾಗಿ ಅದ

ಕ್ಷಮಿಸುವುದು ಎಂದರೆ ಮರೆಯುವುದಲ್ಲ.

 ನುವ್ವು ನಾಗಪಾಮುಲಾಂಟಿದವಿ , ಏಮಿ ಮರ್ಚಿಪೊಲೆವು, ಸಮಯಕೋಸಂ ಚೂಸ್ತು ಉಂಟಾವು, ನನ್ನ ಅಂಗೈಯನ್ನು ಅವರ ಬೊಗಸೆಯಲ್ಲಿ ಇಟ್ಟುಕೊಂಡು ಹೇಳುವಾಗ ಮುಸ್ಸಂಜೆ. ಆಂಧ್ರದ ಕಾಡಿನ ಅಂಚಿನಲ್ಲಿ, ಕೃಷ್ಣಾ ನದಿಯ ತೀರದಲ್ಲಿ ಇದ್ದ ಆ ಪುಟ್ಟ ಗುರುಕುಲದಲ್ಲಿ ಆಗಷ್ಟೇ ಕತ್ತಲು ಹೊಸಿಲು ದಾಟಿ ಬಂದಿತ್ತು. ಕಾಣಿಸಿದರೂ ಕಾಣಿಸದ ಹಾಗಿನ ಬೆಳಕು. ಅಲ್ಲಿ  ಇದ್ದದ್ದೇ ಹತ್ತು ಮನೆಗಳು. ಒಂದಷ್ಟು ವಿದ್ಯಾರ್ಥಿಗಳು. ಸಣ್ಣಗೆ ನಕ್ಕಿದ್ದೆ. ಕತ್ತಲು ಅದಾಗಲೇ ಆವರಿಸುತ್ತಿದ್ದರಿಂದ ನನ್ನ ಮುಖಭಾವ ಅವರಿಗೆ ಕಾಣಿಸಿರಲಿಲ್ಲ. ಮೆಲ್ಲಗೆ ಕೈ ಬಿಡಿಸಿಕೊಂಡು ಕಾಯುತ್ತಿದ್ದ  ಕರುವಿನ ಹಿಂದೆ ಮನೆಗೆ ಹೊರಟೆ. ಅಣ್ಣನಿಗೆ ಮೊದಲ ಕೆಲಸ ಸಿಕ್ಕಿದಾಗ ಸಂಭ್ರಮ. ನಮ್ಮದೇ ಮನೆ, ನಮ್ಮದೇ ಬದುಕು ಅನ್ನುವುದಷ್ಟೇ ಮುಖ್ಯವಾಗಿತ್ತೇ ಹೊರತು ಯಾವ ಊರು, ಯಾವ ರಾಜ್ಯ ಅನ್ನೋದು ಅಲ್ಲವೇ ಅಲ್ಲ. ಸ್ವತಂತ್ರ ಬದುಕು ಬೇಕಾಗಿತ್ತು ಅಷ್ಟೇ.  ಕೃಷ್ಣಾ ನದಿ ದೋಣಿಯಲ್ಲಿ ದಾಟಿದರೆ ದಂಡೆಯ ಮೇಲೆ ಒಂದು ಪುಟ್ಟ ಊರು. ಕುಗ್ರಾಮ ಎನ್ನುವುದಕ್ಕೆ ಉದಾಹರಣೆ. ಬಡತನವೆನ್ನುವುದು ಅಲ್ಲಿ ಮರಳಿನ ಹಾಗೆ ಹಬ್ಬಿಕೊಂಡಿತ್ತು. ಅಲ್ಲಿಂದ ಒಂದು ಮೈಲಿ ನಡೆದರೆ ಒಂದು ಐವತ್ತು ಎಕರೆ ಜಾಗವನ್ನು ಖರೀದಿಸಿ ಅಲ್ಲೊಂದು ಪುಟ್ಟ ಗುರುಕುಲ ಕಟ್ಟಿದ್ದರು. ಹಳೆಯ ಕಾಲದ ಕಾನ್ಸೆಪ್ಟ್. ಗುರುವಿನ ಮನೆಯಲ್ಲಿ ಶಿಷ್ಯರ ವಾಸ. ಹೊಸಕಾಲದ ಗುರುಗಳು ಆಗಿದ್ದರಿಂದ  ಊಟಕ್ಕೆ ಮಾತ್ರ ವಿದ್ಯಾರ್ಥಿಗಳಿಗೆ ಬೇರೆಯ ವ್ಯವಸ್ಥೆ.  ಅದಷ್ಟು ಸ್ವಾವಲಂಬಿಯಾ

ಚೌಡಿಯ ಹರಕೆ

ದನ ಕರು ಹಾಕಿದೆ ಎಂದರೆ ಹಾಲು ಕರೆದು ಬಳಸುವ ಮುನ್ನ ಚೌಡಿಗೆ ಕೊಡುವುದು ಮಲೆನಾಡಿನ ಹಳೆಯ ಕಾಲದಿಂದಲೂ ನಡೆದು ಬಂದ ಪದ್ದತಿ. ಮೇಯಲು ಹೋದ ದನವೊ, ಕರುವೋ ಬರಲಿಲ್ಲ ಎಂದರೂ ಚೌಡಿಗೊಂದು ಹರಕೆ ಹೊತ್ತುಕೊಂಡೆ ಹುಡುಕಲು ಹೋಗುವುದು ಸಾಮಾನ್ಯ. ಇಡೀ ಊರು ಕಾಯುವವಳು ಅವಳು ಎಂಬ ನಂಬಿಕೆ. ರಾತ್ರಿಯ ಹೊತ್ತು ಗೆಜ್ಜೆ ಸದ್ದು ಕೇಳಿದರೆ, ಕೋಲು ಕುಟ್ಟಿಕೊಂಡು ಯಾರೋ ಓಡಾಡುವ ಸದ್ದು ಕೇಳಿಸಿದರೆ ಯಾವ ಕಾರಣಕ್ಕೂ ಹೊರಗೆ ಬರಬಾರದು ಎನ್ನುವುದು ಗಾಢ ನಂಬಿಕೆ. ಸಂಪಗೋಡಿನಲ್ಲೂ ಹೀಗೊಂದು ನಂಬಿಕೆ ಇತ್ತು. ಆ ನಂಬಿಕೆ ಜೊತೆಜೊತೆಗೆ ಬೆಳೆದುಬಂದವಳು ನಾನು. ಮನೆಯಲ್ಲಿ ಒಬ್ಬರೇ ಇದ್ದರೆ ಅವತ್ತು ಹೆಜ್ಜೆಯ ಸದ್ದು ಜೋರಾಗಿ ಕೇಳಿಸುತ್ತೆ ಅನ್ನೋದು ದೊಡ್ಡವರ ಅನುಭವ. ಅವೆಲ್ಲಾ ಅರ್ಥವಾಗುವ ವಯಸ್ಸು ಅಲ್ಲದಿದ್ದರೂ ಭಯ ಕಾಡದೆ ಇರುವುದಕ್ಕೆ ಅದೊಂದು ನಂಬಿಕೆ ಸಾಕಾಗಿತ್ತು. ಉಳಿದೆಲ್ಲಾ ಹಾಗಾಗಿ ದೊಡ್ಡ ವಿಷಯವೇ ಆಗಿರಲಿಲ್ಲ.  ಆ ಊರು ಮುಳುಗಿ ಇನ್ನೆಲ್ಲೋ ಹರಡಿ, ಬೆಂಗಳೂರಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಹೊತ್ತಿಗೆ ಚೌಡಿ ಅನ್ನೋದು ನೆನಪಿನ ಆಳದಲ್ಲಿ ಹೂತು ಹೋಗಿ ಮರೆತೇ ಹೋಗಿದೆ ಅನ್ನುವ ಹಾಗಾಗಿತ್ತು. ಅಹಿಗಿನ್ನೂ ಎರಡು ವರ್ಷವೂ ತುಂಬಿರಲಿಲ್ಲ. ಹೀಗೆ ಒಮ್ಮೆ ಊರಿಗೆ ಹೋಗಿದ್ದೆವು. ರಾತ್ರಿ ಎಂದೂ ಇಲ್ಲದ ವಿಪರೀತ ಹಟ. ಏನು ಸಮಾಧಾನಿಸಿದರೂ, ಹೊತ್ತು ತಿರುಗಿದರೂ ನಿದ್ದೆ ಬಂದಂತೆ ಆಗುವ ಮಗು ಹಾಸಿಗೆಯಲಿ ಮಲಗಿಸಿದ ತಕ್ಷಣ ಮತ್ತೆ ಜೋರು ಹಠ. ಬೆಳಿಗ್ಗೆ ಪ್ರಯಾಣ ಮಾಡಿದ ಸುಸ್ತು
  ಹನಿಕಡಿಯದ ಮಳೆ  ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ ಎಂಬ ಹಾಡು ಕೇಳುವಾಗ ಪಕ್ಕನೆ ನೆನಪಾಗಿದ್ದು ಸಂಪಗೋಡು  ಎಂಬ ನನ್ನೂರು. ಪ್ರತಿಯೊಬ್ಬರಿಗೂ ತಮ್ಮ ಹುಟ್ಟಿದ ಊರಿನ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ. ಆಗಾಗ ಅಲ್ಲಿಗೆ ಹೋಗಿ ಹಳೆಯ ಹೆಜ್ಜೆ ಗುರುತು ಹುಡುಕುವುದು, ಬೇರು ಅರಸುವುದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಅದೇ ಊರು ಮುಳುಗಿ ಹೋದರೆ ಬರೀ ನೆನಪುಗಳಲ್ಲಿ ಅದನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅಂತಹದೊಂದು ಹುಡುಕಿಕೊಳ್ಳುವ ಪ್ರಕ್ರಿಯೆಯೇ ಇಲ್ಲಿರುವ ಪ್ರಬಂಧಗಳು. ಹುಡುಕಿದ್ದು, ಹುಡುಕುತ್ತಿರುವುದು ಬರೀ ಊರು ಮಾತ್ರವಾ.. ಓದಿದ ಮೇಲೆ ನೀವು ಅದನ್ನು ಹೇಳಬೇಕು.  ಬೆಂಗಳೂರಿನಲ್ಲಿ ಕುಳಿತು ಊರು ಕಾಡಿದಾಗಲೆಲ್ಲಾ ಹೀಗೆ ಏನಾದರೂ ಬರೆದು ಫೇಸ್ಬುಕ್ ಅಲ್ಲಿ ಹಾಕಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಬರೆಯುವುದು ನೆನಪಿಸಿಕೊಳ್ಳುವ, ಹಗುರಾಗುವ ಕ್ರಿಯೆಯಾಗಿತ್ತು ಅಷ್ಟೇ. ಇವುಗಳನ್ನು ನೋಡಿ ಇವೆಲ್ಲಾ ಸೇರಿ ಒಂದು ಬುಕ್ ಮಾಡೋಣವಾ ಅಂತ ಕೇಳಿದ್ದು ಚೈತನ್ಯ ಅವರು. ಆ ಕ್ಷಣಕ್ಕೆ ಅಚ್ಚರಿ, ನಗು, ಅನುಮಾನ ಎಲ್ಲವೂ ಏಕಕಾಲಕ್ಕೆ ಆವಿರ್ಭವಿಸಿತ್ತು. ಒಂದು ಪುಸ್ತಕ ಬರಲಿ ಅನ್ನುವ ಆಸೆ ಹುಟ್ಟಿ ತಲೆ ಅಲ್ಲಾಡಿಸಿದ್ದೇ. ಕಾರಣಗಳಿಂದ ಇದು ಮುಂದೆ ಹೋಗಿ ಎರಡು ಪುಸ್ತಕಗಳು ಬಂದರೂ ಇದು ನನ್ನ ಮೊದಲ ಪುಸ್ತಕ. ನನ್ನ ಶಕ್ತಿ,  ಸ್ವಂತಿಕೆ ಇರುವುದು ಈ ಬರಹಗಳಲ್ಲಿ. ಚೈತ್ಯನ್ಯ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು.  ಈ ಪುಸ್ತ