ಚೌಡಿಯ ಹರಕೆ

ದನ ಕರು ಹಾಕಿದೆ ಎಂದರೆ ಹಾಲು ಕರೆದು ಬಳಸುವ ಮುನ್ನ ಚೌಡಿಗೆ ಕೊಡುವುದು ಮಲೆನಾಡಿನ ಹಳೆಯ ಕಾಲದಿಂದಲೂ ನಡೆದು ಬಂದ ಪದ್ದತಿ. ಮೇಯಲು ಹೋದ ದನವೊ, ಕರುವೋ ಬರಲಿಲ್ಲ ಎಂದರೂ ಚೌಡಿಗೊಂದು ಹರಕೆ ಹೊತ್ತುಕೊಂಡೆ ಹುಡುಕಲು ಹೋಗುವುದು ಸಾಮಾನ್ಯ. ಇಡೀ ಊರು ಕಾಯುವವಳು ಅವಳು ಎಂಬ ನಂಬಿಕೆ. ರಾತ್ರಿಯ ಹೊತ್ತು ಗೆಜ್ಜೆ ಸದ್ದು ಕೇಳಿದರೆ, ಕೋಲು ಕುಟ್ಟಿಕೊಂಡು ಯಾರೋ ಓಡಾಡುವ ಸದ್ದು ಕೇಳಿಸಿದರೆ ಯಾವ ಕಾರಣಕ್ಕೂ ಹೊರಗೆ ಬರಬಾರದು ಎನ್ನುವುದು ಗಾಢ ನಂಬಿಕೆ. ಸಂಪಗೋಡಿನಲ್ಲೂ ಹೀಗೊಂದು ನಂಬಿಕೆ ಇತ್ತು. ಆ ನಂಬಿಕೆ ಜೊತೆಜೊತೆಗೆ ಬೆಳೆದುಬಂದವಳು ನಾನು. ಮನೆಯಲ್ಲಿ ಒಬ್ಬರೇ ಇದ್ದರೆ ಅವತ್ತು ಹೆಜ್ಜೆಯ ಸದ್ದು ಜೋರಾಗಿ ಕೇಳಿಸುತ್ತೆ ಅನ್ನೋದು ದೊಡ್ಡವರ ಅನುಭವ. ಅವೆಲ್ಲಾ ಅರ್ಥವಾಗುವ ವಯಸ್ಸು ಅಲ್ಲದಿದ್ದರೂ ಭಯ ಕಾಡದೆ ಇರುವುದಕ್ಕೆ ಅದೊಂದು ನಂಬಿಕೆ ಸಾಕಾಗಿತ್ತು. ಉಳಿದೆಲ್ಲಾ ಹಾಗಾಗಿ ದೊಡ್ಡ ವಿಷಯವೇ ಆಗಿರಲಿಲ್ಲ. 

ಆ ಊರು ಮುಳುಗಿ ಇನ್ನೆಲ್ಲೋ ಹರಡಿ, ಬೆಂಗಳೂರಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಹೊತ್ತಿಗೆ ಚೌಡಿ ಅನ್ನೋದು ನೆನಪಿನ ಆಳದಲ್ಲಿ ಹೂತು ಹೋಗಿ ಮರೆತೇ ಹೋಗಿದೆ ಅನ್ನುವ ಹಾಗಾಗಿತ್ತು. ಅಹಿಗಿನ್ನೂ ಎರಡು ವರ್ಷವೂ ತುಂಬಿರಲಿಲ್ಲ. ಹೀಗೆ ಒಮ್ಮೆ ಊರಿಗೆ ಹೋಗಿದ್ದೆವು. ರಾತ್ರಿ ಎಂದೂ ಇಲ್ಲದ ವಿಪರೀತ ಹಟ. ಏನು ಸಮಾಧಾನಿಸಿದರೂ, ಹೊತ್ತು ತಿರುಗಿದರೂ ನಿದ್ದೆ ಬಂದಂತೆ ಆಗುವ ಮಗು ಹಾಸಿಗೆಯಲಿ ಮಲಗಿಸಿದ ತಕ್ಷಣ ಮತ್ತೆ ಜೋರು ಹಠ. ಬೆಳಿಗ್ಗೆ ಪ್ರಯಾಣ ಮಾಡಿದ ಸುಸ್ತು, ಕಣ್ಣು ಎಳೆಯುವ ನಿದ್ದೆ ಕಿರಿಕಿರಿ ಮಾಡುತಿತ್ತು. ಉಳಿದವರು ಆದರೂ ಮಲಗಲಿ ಯಾಕೆ ಎಲ್ಲರಿಗೂ ತೊಂದರೆ ಎಂದು ನಿಧಾನಕ್ಕೆ ಬಾಗಿಲು ತೆರೆದು ಹೊರಗೆ ಬಂದು ಅಂಗಳದಲ್ಲಿ ನಿಲ್ಲಿಸಿದ್ದ ಕಾರ್ ಹತ್ತಿ ಕುಳಿತಿದ್ದೆ. ಕಾರ್ ಹತ್ತಿದ ಕೂಡಲೇ ಅದೇನು ಆಯಿತೋ ಸ್ವಿಚ್ ಆಫ್ ಮಾಡಿದ ಗೊಂಬೆಯ ಹಾಗೆ ಸುಮ್ಮನೆ ಆಗಿದ್ದಳು. ಹಾಗೆ ತಟ್ಟಿದರೆ ಸಣ್ಣಗ ನಿದ್ದೆ ಬರಲು ಶುರುವಾಗಿತ್ತು ಅವಳಿಗೆ. 

ನೀರವ ರಾತ್ರಿ, ಅಂಗಳ, ಕೀಟಗಳ ಸದ್ದು , ಒಬ್ಬಳೇ ಹೊರಗೆ ಅನ್ನುವ ಭಾವ ಯಾಕೋ ಒಳಗೆ ಸಣ್ಣ ಭಯ ಹುಟ್ಟಲು ಶುರುವಾಗಿ ನಿಧಾನಕ್ಕೆ ಮೈಮನಸ್ಸು ಆವರಿಸತೊಡಗಿತ್ತು. ಎದ್ದು ಒಳಗೆ ಹೋದರೆ ಇವಳು ರಗಳೆ ಮಾಡಿದರೆ ಅನ್ನುವ ಆತಂಕ, ಹೊರಗೆ ಉಳಿಯಲು ಭಯ ಗೊಂದಲಕ್ಕೆ ಬಿದ್ದ ಮನಸ್ಸು ಚಡಪಡಿಸುತಿತ್ತು. ಕವಲು ದಾರಿಯಲ್ಲಿ ನಿಂತು ಯಾವ ದಾರಿ ಈಗ ಎನ್ನುವ ಹಾಗಾಗಿತ್ತು ಮನಸ್ಸು. ಕೊನೆಗೆ ಅವಳ ನಿದ್ದೆಯೇ ನನ್ನ ಭಯಕ್ಕಿಂತ ಮುಖ್ಯ ಅನ್ನಿಸಿ ನಿದ್ದೆ ಹೋಗಿದ್ದ ಅವಳನ್ನು ನಿಧಾನಕ್ಕೆ ಸೀಟ್ ಅಲ್ಲಿ ಮಲಗಿಸಿ ಕಿಟಕಿ ಗಾಜು ಆದಷ್ಟು ಏರಿಸಿ ನಾನೂ ಗಟ್ಟಿಯಾಗಿ ಕಣ್ಣು ಮುಚ್ಚಿ ಮಲಗಿ ಬಿಡುತ್ತೇನೆ ಆದದ್ದು ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಿ ಇನ್ನೇನು ಕಣ್ಣು ಮುಚ್ಚಬೇಕು ಕರೆದ ಸದ್ದು. ಗಟ್ಟಿಯಾಗಿ ಮಾತಾಡಿದರೆ ಇವಳು ಮತ್ತೆ ಎದ್ದು ಅತ್ತರೇ ಎಂದು ಯೋಚಿಸುವಾಗ ಮತ್ತೆ ಕರೆದ ಸದ್ದು. ಮಗು ಮಲಗಿತಾ, ಹೆದರೋದು ಏನು ಬೇಡಾ ಅರಮಾಗಿ ಮಲಗಿಕೊ ಎಂಬ ಅತ್ತೆಯ ಸ್ವರ ಕೇಳಿ ಹೂ ಎಂದು ಕಣ್ಣು ಮುಚ್ಚುವ ಹೊತ್ತಿಗೆ ಹೆಜ್ಜೆಯ ಸದ್ದು ನಿಧಾನಕ್ಕೆ ಹತ್ತಿರ ಬಂದ ಹಾಗೆ ಆಗಿ ಮತ್ತೆ ಹೋದ ಹಾಗೆ ಅದು ಮನಸ್ಸಿಗೆ ಇಳಿದು ಅರ್ಥವಾಗುವ ಹೊತ್ತಿಗೆ ಜೋರು ನಿದ್ದೆ. 

ಮತ್ತೆ ಕಣ್ಣು ಬಿಟ್ಟಾಗ ಬೆಳ್ಳನೆ ಬೆಳಗು. ಅದಾಗಲೇ ಸುತ್ತಲಿನ ಪರಿಸರದಲ್ಲಿ ದಿನಚರಿ ಶುರುವಾಗಿ ಹೋಗಿತ್ತು. ಸುಮಾರು ಐದು ಗಂಟೆಗಳಿಗೂ ಹೆಚ್ಚು ಗಾಢ ನಿದ್ರೆ ಅಮ್ಮ ಮಗಳಿಗೆ. ಅವಳೂ ಎದ್ದಿದ್ದರಿಂದ ಎತ್ತಿಕೊಂಡು ಒಳಗೆ ಹೋದರೆ ಅರೆ ಹೊರಗೆ ಮಲಗಿದ್ದಾ ನೀವಿಬ್ಬರೂ ಎಂದು ಅತ್ತೆ ಕೇಳಿದಾಗ ಅರೆ ಇವರಿಗೆ ಏನಾಯ್ತು, ಮರೆವು ಶುರುವಾಯಿತಾ  ಎಂದು ಗೊಂದಲದಲ್ಲಿಯೇ ನೋಡಿದ್ದೆ. ಒಳಗೆ ಬಂದು ಮಲಗೋದು ಅಲ್ಲವಾ, ರಾತ್ರಿ ಆ ಎಳೆಮಗು ಮಲಗಿಸಿಕೊಂಡು ಹೊರಗೆ ಮಲಗಿದ್ದೆಯಲ್ಲ ದನಿಯಲ್ಲಿ ತುಸು ಗಾಬರಿ.  ಅಷ್ಟು ಹೊತ್ತಿಗೆ ಮನೆ ಮಂದಿಯೆಲ್ಲಾ ಎದ್ದು ಬಂದು ಕಾಫಿ ಕುಡಿಯಲು ಕುಳಿತಿದ್ದರು. ನೀವೇ ತಾನೇ ಬಂದು ಹೆದರಿಕೆ ಏನಿಲ್ಲ ಆರಾಮಾಗಿ ಮಲಗು ಎಂದಿದ್ದು ಎಂದರೆ ನಾನಾ ಎಂದರು.. ಇದೇನು ಹೀಗೆ ಎನ್ನುವ ಗೊಂದಲ ಶುರುವಾದರೂ ನೀವೇ ಎಂದು ಕಾಫಿ ಲೋಟ ತೆಗೆದುಕೊಂಡರೆ ಅವರ ಮುಖದಲ್ಲಿನ ಗೊಂದಲ ಮುಗಿದಿರಲಿಲ್ಲ. 

ಆವೇಳೆಗೆ ಮಾವನಿಗೆ ಪರಿಸ್ಥಿತಿ ಅರ್ಥವಾಗಿತ್ತು. ಹೆಜ್ಜೆ ಸದ್ದು ಕೇಳಿಸಿತಾ ಅಂದ್ರು ಹೂ, ನಿದ್ದೆ ಬರ್ತಾ ಇತ್ತು ಹಾಗಾಗಿ ನೋಡಿಲ್ಲ, ಹತ್ತಿರ ಬಂದು ನೋಡಿಕೊಂಡ ಹೋದ ಹಾಗೆ ಅನ್ನಿಸಿತು ಆಮೇಲೆ ನಿದ್ದೆ ಎಂದೇ. ಸರಿ ಬಿಡು ಚೌಡಿ ಇರಬೇಕು. ಇವತ್ತೊಂದು ಎಡೆ ಇಟ್ಟರೆ ಆಯಿತು ಎಂದು ಎದ್ದು ಹೋದರು. ಧುತ್ತನೆ ಸಂಪಗೊಡು ನೆನಪಾಯಿತು. ತೋಟಕ್ಕೆ ಹೋಗುವ ದಾರಿಯಲ್ಲಿ ಕಾಡ ನಡುವಿನ ಅವಳ ಬನ, ಅಲ್ಲಿನ ಪ್ರಶಾಂತತೆ, ನೀರವ ಮೌನ ಎಲ್ಲವೂ ನೆನಪಾಯಿತು. ಕಳೆದು ಹೋದ ನೆನಪು ಮತ್ತೆ ಸಿಕ್ಕಿದ ಹಾಗಾಗಿ ಅವರ್ಚನೀಯ ಆನಂದ. 

ಮತ್ತೆ ದಶಕಗಳ ನಂತರ ಇಷ್ಟೇ ಹಸಿರಾಗಿ ನೆನಪಾಗಿದ್ದು ಅರ್ಜುನ್ ಅವರ ಅತೀತ ಓದಿದ ಮೇಲೆ. ಎಷ್ಟು ಉಸಿರು ಬಿಗಿ ಹಿಡಿದು, ಭಾವ ತಂತುಮೀಟಿ ಉದ್ವೇಗ, ಆನಂದ, ವಿಷಾದ ಇವೆಲ್ಲಗಳ ಸಂಗಮದಿಂದ ಓದಿಸಿಕೊಂಡು ಹೋಯಿತು ಎಂದರೆ ಓದಿ ಮುಗಿದ ಮೇಲೆ ನಾನಿನ್ನೂ ಸಂಪಗೋಡಿನಿಂದ ಹೊರಗೆ ಬಂದಿಲ್ಲ. ಈ ನೆನಪುಗಳ ಗರಿ ಬಿಚ್ಚಿಕೊಳ್ಳದೆ ಅದರ ಬಗ್ಗೆ ಬರೆಯಲು ಸಾಧ್ಯವಿಲ್ಲ ಅನ್ನಿಸಿ ಇದಷ್ಟೂ ಬರೆಯುವ ಹಾಗಾಯಿತು. ಇದು ತರ್ಕಕ್ಕೆ ನಿಲುಕದ ವಿಷಯ. ಬದುಕಿಗೆ ಎಲ್ಲದಕ್ಕಿಂತ ದೊಡ್ಡದು ನಂಬಿಕೆ ಅಷ್ಟೇ.. ಅದು ಭಾವಕ್ಕೆ ಆಗಲಿ ಬದುಕಿಗೆ ಆಗಲಿ. ನಂಬಿಕೆ ಕಳೆದುಕೊಂಡ ದಿನ ಬದುಕು ಬರಡು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...