Posts

Showing posts from April, 2018

ಕಡಗೋಲು ಕಂಬ

ಮನೆಯ ಕಟ್ಟಡ ಮುಗಿದು ನೆಲಕ್ಕೆ ಗಾರೆ ಹಾಕಬೇಕು ಅನ್ನುವ ಸಮಯದಲ್ಲಿ ಮುಷ್ಠಿಗಾತ್ರದ ಕಂಬದ ಅರಸುವಿಕೆ ಶುರುವಾಗುತ್ತಿತ್ತು. ಹದವಾಗಿ ಕೆತ್ತಿ ಅದನ್ನು ನಯಸ್ಸು ಮಾಡಿ ಅಡುಗೆ ಮನೆಯ ಮೂಲೆಯ ಪ್ರಶಸ್ತ ಜಾಗವೊಂದನ್ನು ಹುಡುಕಿ ಅದನ್ನು ಪ್ರತಿಷ್ಠಾಪಿಸಿದರೆ ಕಳೆ ತಂತಾನೇ ಅಡಿಯಿಡುತ್ತಾ ಅಡುಗೆಮನೆ ಪ್ರವೇಶಿಸಿ ಆವರಿಸಿಕೊಳ್ಳುತಿತ್ತು. ಕೃಷ್ಣ ಗೋಡೆಯ ಮರೆಯಲ್ಲಿ ಅಡಗಿ ನಿಂತಿದ್ದಾನೇನೋ ಅನ್ನುವಂತೆ ಭಾಸವಾಗುವ ಆ ಮಜ್ಜಿಗೆ ಕಡೆಯುವ ಕಂಬ ಮನಸ್ಸಿಗೆ ಉಲ್ಲಾಸ ಕೊಡುತಿದ್ದದಂತೂ ಸತ್ಯ. ಬೆಳಕು ಮೂಡುವ ಮುನ್ನ ಎದ್ದು ನಿತ್ಯಕರ್ಮ ಪೂರೈಸಿ ಒಳಗೆ ಬಂದು ಕಾಫಿ ಕುಡಿದು ಮೊದಲು ಮಾಡುವ ಕೆಲಸವೆಂದರೆ ಮಜ್ಜಿಗೆ ಕಡೆಯುವುದು. ಇದ್ದಿಲ ಒಲೆಯಲ್ಲಿ ಹದವಾಗಿ ಕಾಯ್ದು ಕೆನೆಗಟ್ಟಿದ ಹಾಲನ್ನು ಇಷ್ಟೇ ಚೂರು ಮೊಸರು ಹಾಕಿ  ಹೆಪ್ಪು ಹಾಕಿ ಗೂಡಲ್ಲಿ ಇಟ್ಟರೆ ನಸುಕು ಹರಿಯುವ ಮುನ್ನ ಹೆಪ್ಪಾಗಿರುತಿತ್ತು. ಹೆಪ್ಪು ಹಾಕುವುದು ಒಂದು ಹದವೇ. ಚೂರೇ ಚೂರು ಹಾಕಿದರೆ ಹೆಪ್ಪಾಗದೆ ವಾಸನೆ ಬರುತ್ತೆ, ಸ್ವಲ್ಪ ಜಾಸ್ತಿಯಾದರೂ ಹುಳಿಯಾಗುತ್ತೆ. ಹದ ತಪ್ಪಬಾರದು. ಇಷ್ಟಕ್ಕೂ ಬದುಕಿನಲ್ಲಿ ಪ್ರತಿಯೊಂದಕ್ಕೂ ಹದವಿದ್ದೆ ಇದೆ. ತಪ್ಪಿದ ಯಾವುದು ತಾನೇ ರುಚಿಕಟ್ಟಾಗಿರುತ್ತದೆ?   ರಾತ್ರಿಯೆಲ್ಲಾ ಅದರ ಜೊತೆಗೆ ಅದೆಷ್ಟು ಭಾವಗಳು ಅಲ್ಲೇ ಗಟ್ಟಿಯಾಗಿ ಹೆಪ್ಪುಗಟ್ಟಿರುತ್ತಿದ್ದವೋ ಯಾರಿಗೆ ಗೊತ್ತು. ಕತ್ತಲೆ ಅವೆಲ್ಲವನ್ನು ತನ್ನೊಳಗೆ ಅಡಗಿಸಿಕೊಂಡು ಏನೋ ಕಡು ಕಪ್ಪಾಗಿರುತಿದ್ದದ್ದು. ನಸುಕು ನೆ

ರೆಕ್ಕೆ ಬಿಚ್ಚಿದ ಚಿಟ್ಟೆ.

ಎಲ್ಲರೂ ದೂರವಾಗಿದ್ರು, ಹತ್ತಿರದವರು ಆಗಲೇ ಕೈ ಚೆಲ್ಲಿ ಆಗಿತ್ತು. ಬದುಕಲ್ಲಿ ಹಣ, ಗೌರವ ಇಲ್ಲದವರ ಸಹಾಯಕ್ಕೆ ಯಾರೂ ಬರೋಲ್ಲ, ಅದರಲ್ಲೂ ಬೇಜವಾಬ್ದಾರಿ ವ್ಯಕ್ತಿತ್ವವಾದರಂತೂ ಮುಗಿದೇ ಹೋಯಿತು. ಅಂತಹದೊಂದು ಪರಿಸ್ಥಿತಿಯಲ್ಲಿ ಇದ್ದ ಅವರನ್ನು ಹಾಗೆ ಬಿಟ್ಟು ಬಿಡಲು ಮನಸ್ಸಾಗಲಿಲ್ಲ  ಹಾಗಾಗಿ ಜೊತೆಗೆ ನಿಲ್ಲುವ ಮನಸ್ಸು ಮಾಡಿದೆ. ಅದು ಅಷ್ಟು ಸುಲಭವಲ್ಲ ಅನ್ನೋದು ಅರ್ಥವಾಗಿದ್ದು ಹೆಜ್ಜೆ ಮುಂದಿಟ್ಟಮೇಲೆಯೇ. ಅಘೋಷಿತ ಯುದ್ದ ಆರಂಭವಾಗಿದೆ ಅಂತ  ಅರ್ಥವಾಗಿದ್ದು ಟೀಕೆ, ಕುಹಕಗಳ ಬಾಣ ಎದೆಗೆ ನೆಟ್ಟಾಗಲೇ. ಆಮೇಲೆ ಯಾವುದರ ವಿರುದ್ಧ ಯುದ್ಧ ಮಾಡಿದೆ ನೆನಪಿಲ್ಲ,  ಅದು ಯಾರ ಯುದ್ಧ ನನ್ನದೋ ಅವರದೋ ಎನ್ನುವುದೂ ಮರೆತು ಹೋಗಿತ್ತು ನೋಡು, ಅನುಭವಿಸಿದ್ದು ಅವರಾ ನಾನಾ ಅನ್ನುವ ಭಿನ್ನತೆ ಗೊತ್ತಾಗದಷ್ಟೂ ಮಗ್ನಳಾಗಿ,  ಬಿದ್ದ ಅವರನ್ನು ಮೇಲೆತ್ತುವ ಭರದಲ್ಲಿ ನನಗಾದ ಗಾಯದ ತೀವ್ರತೆ ಗೊತ್ತಾಗಿದ್ದು, ಲೆಕ್ಕವಿಡದಷ್ಟು ಬಾಣಗಳು ನೆಟ್ಟಿವೆ ಅಂತ ಅರ್ಥವಾಗಿದ್ದು, ನೋವಿನ ಅರಿವಾಗಿದ್ದು ಅವರು ಗೆದ್ದು ತನ್ನವರೊಡನೆ ಸಂಭ್ರಮಿಸಿದಾಗಲೇ. ನಾನು ದೂರದಿಂದ ಅದನ್ನು ಗಮನಿಸುವಾಗಲೇ. ಸಹಾಯ ಅನ್ನೋದು ಇಷ್ಟೊಂದು ಅಗ್ಗವಾ.. ಗೆಲುವಿಗೆ ಎಷ್ಟೊಂದು ಜನ ನೆಂಟರು ಅಂತ ಗೊತ್ತಾಗಿದ್ದು ಆಗಲೇ ನೋಡು. ಅವನ ನಗುವಿನಲ್ಲಿ, ಸಂಭ್ರಮದಲ್ಲಿ, ಮಾತು ಕೇಕೆಗಳ ಅಬ್ಬರದಲ್ಲಿ ನಾನು ಕಳೆದೇ ಹೋದೆನಾ ಅನ್ನೋದೇ  ಎಲ್ಲಕ್ಕಿಂತ ಜಾಸ್ತಿ ನೋವು ಕೊಟ್ಟಿದ್ದು. ತಪ್ಪು ಮಾಡಿದೆನಾ, ಅನಗತ್ಯವಾ

ಕುತುಬ್ ಮಿನಾರ್.

ಇನ್ನೇನು ಡೆಲ್ಲಿ ಬಂತು ಲ್ಯಾಂಡ್ ಆಗೋ ಟೈಮ್ ಅನ್ನುವ ಹೊತ್ತಿಗೆ ಸ್ವಾಗತಿಸೋದು ಕುತುಬ್ ಮಿನಾರ್.  73 ಮೀಟರ್ ಗಳಷ್ಟು ಎತ್ತರದ ವಿಜಯ ಸ್ತಂಭ. ವಿದೇಶಿ ಮುಸ್ಲಿಂ ಆಕ್ರಮಣಕಾರರಿಂದ ಡೆಲ್ಲಿಯ ಹಿಂದೂ ರಾಜರನ್ನು ಸೋಲಿಸಿ ಮುಸ್ಲಿಂ ರಾಜ್ಯ ಸ್ಥಾಪನೆ ಮಾಡಿದ ನೆನಪಿಗಾಗಿ, ವಿಜಯೋತ್ಸವದ ಗುರುತಿಗಾಗಿ ನಿರ್ಮಿಸಿದ ಸ್ಥಂಭ. ಸೋಲು ಅವಮಾನದಿಂದ ತಲೆತಗ್ಗಿಸಿದರೆ ವಿಜಯ ಎತ್ತರೆತ್ತರಕ್ಕೆ ಹಾರಾಡುತ್ತದೆ. ಗರ್ವವನ್ನು ಹಂಚಿಕೊಳ್ಳದಿದ್ದ ಮೇಲೆ ಗೆದ್ದೇನು ಪ್ರಯೋಜನ. ಅಷ್ಟು ಎತ್ತರದ ಈಗ ವರ್ಲ್ಡ್ ಹೆರಿಟೇಜ್  ಪಟ್ಟಿಗೆ ಸೇರಿದ ಅದನ್ನು ಹೇಗೆ ಕಟ್ಟಿದರು ಅನ್ನೋದು ತಿಳಿದುಕೊಳ್ಳಲೇ ಬೇಕಾದ ವಿಷಯ. 1192 ರಲ್ಲಿ ದೆಹಲಿಯ ರಾಜನ ಮೇಲೆ ಆಕ್ರಮಣ ಮಾಡಿ ಮೊದಲ ಡೆಲ್ಲಿ ಸುಲ್ತಾನೇಟ್ ಆಗಿದ್ದರ ಕುರುಹಿಗಾಗಿ ಕುತುಬ್ ಉದ್ ದೀನ್ ಐಬಕ್ 1200 ನೇ ಇಸವಿಯಲ್ಲಿ ಇದರ ನಿರ್ಮಾಣ ಆರಂಭ ಮಾಡುತ್ತಾನೆ. ಅದನ್ನು ಕಟ್ಟಲು ಬಳಸೋದು ಲಾಲ್ ಕೊಟ್ ದ ಅವಶೇಷಗಳಿಂದಲೇ. ಈ ಲಾಲ್ ಕೊಟ್ ಅನ್ನು ಕಟ್ಟಿದ್ದು ತೊಮುರ್ ಎಂಬ ಆನಂಗಪಾಲದ ರಾಜ. ನಂತರ ಅದನ್ನು ಇನ್ನಷ್ಟು ಅಭೇಧ್ಯವಾಗಿಸಿದ್ದು ಪೃಥ್ವಿರಾಜ್ ಚೌಹಾಣ್ ಎಂಬ ಮೈನವಿರೇಳಿಸುವ ವೀರ. ಅಂತ ಕೋಟೆಯನ್ನು ಕೆಡವಿ ಅದರ ಅವಶೇಷದಿಂದಲೇ ನಿರ್ಮಾಣ ಶುರುವಾಗಿದ್ದು ಈ ಕುತುಬ್ ಮಿನಾರ್ ಎಂಬ ವಿಜಯ ಸ್ಥಂಭ. ಮೊದಲ ಮೂರು ಅಂತಸ್ತಿನ ನಿರ್ಮಾಣವಾಗಿದ್ದು ಕೆಂಪು ಸ್ಯಾಂಡ್ ಸ್ಟೋನ್ ಗಳಿಂದ. ನಾಲ್ಕು ಮತ್ತು ಐದು ಅಂತಸ್ತುಗಳು ಮಾರ್ಬಲ್ ಮತ್ತು ರೆಡ್ ಸ್

ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ.

ಕಣ್ಣೆದೆರು ನಡೆಯುವ ತೀರಾ ಸಹಜ ಅನ್ನೋ ಘಟನೆಗಳನ್ನು ಸಹ ಅದ್ಭುತ ಕಾವ್ಯವಾಗಿ ರಚಿಸುವ ಶಕ್ತಿ ಅವರದ್ದು. ಅದನು ಓದುತ್ತಾ ಓದುತ್ತಾ ಅವರ ಬಗ್ಗೆ ಗೌರವದ ಜೊತೆಗೆ ಪರಿಚಿತ ಭಾವ ಕೂಡಾ. ಯಾವುದೊ ಒಂದು ಕಾರ್ಯಕ್ರಮದಲ್ಲಿ ಅಚಾನಕ್ ಆಗಿ ಕಾಣ ಸಿಕ್ಕಾಗ ಉತ್ಸಾಹ ಮೇರೆ ಮೀರಿತ್ತು ಓಡಿ ಹೋಗಿ ಬಡಬಡನೆ ಮಾತಾಡಿಸಿದರೆ ಅವರದ್ದು ಕಿರು ನಗು. ಆಮೇಲೆ ಯಾಕೋ ಸಣ್ಣ ಕನ್ಫ್ಯೂಷನ್ ಆಗಿ ನಾನ್ಯಾರು ಗೊತ್ತಾಯ್ತಾ ಅಂದ್ರೆ ಹೂ ಗೊತ್ತಾಯ್ತು ಅಂತ ತಲೆ ಅಲ್ಲಾಡಿಸಿದರು. ಅಷ್ಟರೊಳಗೆ ಇನ್ಯಾರೋ ಬಂದು ಮಾತಾಡಿಸಲು ಅತ್ತ ತಿರುಗಿ ಮಾತಾಡಲು ಶುರು ಮಾಡಿದರು. ಅಲ್ಲಿಯವರೆಗೆ ಹಾರಾಡುತಿದ್ದ ಬಲೂನಿಗೆ ಸಣ್ಣ ಸೂಜಿ ಚುಚ್ಚಿದಂತಾಯ್ತು. ಚುಚ್ಚಿದ್ದು ಅಹಂ ಗಾದರೂ ಬುಸುಗುಟ್ಟಿದ್ದು ಮಾತ್ರ ಕೋಪ. ಪ್ರತಿಯೊಬ್ಬರಿಗೂ ಈ ಗುರುತಿಸುಕೊಳ್ಳುವಿಕೆಯ ಹಪಾಹಪಿ ಇದ್ದೇ ಇರುತ್ತದೆ. ಹೇಗೆ ಗುರುತಿಸಿಕೊಳ್ಳಬೇಕು? ನಾನು ಹೇಗಿದ್ದೇನೋ  ಹಾಗೆ ಅಲ್ಲಾ ಜಗತ್ತು ಹೇಗೆ ಮೆಚ್ಚಿಕೊಳ್ಳುತ್ತದೋ ಹಾಗೇ. ಹಾಗಾಗಿ ನಾಟಕ ಕಟ್ಟುವುದನ್ನು ಶುರುಮಾಡುತ್ತೇವೆ. ನಟಿಸುತ್ತಾ ನಟಿಸುತ್ತಾ ನಮ್ಮ ಮೂಲ ಸ್ವರೂಪ ಮರತೇ ಹೋಗುವ ಸಂದರ್ಭಗಳೇ ಜಾಸ್ತಿ. ಮನಸ್ಸು ಮರೆತರೂ ದೇಹ, ಒಳಗಿರುವ ಸಂಸ್ಕಾರ ಮರೆಯುವುದೆಂತು. ಅದು ತನ್ನಷ್ಟಕ್ಕೆ ತಾನು ಪ್ರಕಟಗೊಳ್ಳುತ್ತಲೇ ಇರುತ್ತದೆ. ಇರುವುದನ್ನು ಒಪ್ಪಿಕೊಳ್ಳದೆ, ಇರದದುದನ್ನು ಪೂರ್ಣವಾಗಿ ನಟಿಸಲು ಸೋಲುತ್ತಲೇ ಹೋಗುತ್ತೇವೆ. ಆಗಲೇ ಗೊಂದಲ, ಭಾರ ಎರಡೂ ಹೆಚ್ಚಿ ಒಳಗೊಂದು ಬೆಟ್ಟ