ರೆಕ್ಕೆ ಬಿಚ್ಚಿದ ಚಿಟ್ಟೆ.

ಎಲ್ಲರೂ ದೂರವಾಗಿದ್ರು, ಹತ್ತಿರದವರು ಆಗಲೇ ಕೈ ಚೆಲ್ಲಿ ಆಗಿತ್ತು. ಬದುಕಲ್ಲಿ ಹಣ, ಗೌರವ ಇಲ್ಲದವರ ಸಹಾಯಕ್ಕೆ ಯಾರೂ ಬರೋಲ್ಲ, ಅದರಲ್ಲೂ ಬೇಜವಾಬ್ದಾರಿ ವ್ಯಕ್ತಿತ್ವವಾದರಂತೂ ಮುಗಿದೇ ಹೋಯಿತು. ಅಂತಹದೊಂದು ಪರಿಸ್ಥಿತಿಯಲ್ಲಿ ಇದ್ದ ಅವರನ್ನು ಹಾಗೆ ಬಿಟ್ಟು ಬಿಡಲು ಮನಸ್ಸಾಗಲಿಲ್ಲ  ಹಾಗಾಗಿ ಜೊತೆಗೆ ನಿಲ್ಲುವ ಮನಸ್ಸು ಮಾಡಿದೆ. ಅದು ಅಷ್ಟು ಸುಲಭವಲ್ಲ ಅನ್ನೋದು ಅರ್ಥವಾಗಿದ್ದು ಹೆಜ್ಜೆ ಮುಂದಿಟ್ಟಮೇಲೆಯೇ. ಅಘೋಷಿತ ಯುದ್ದ ಆರಂಭವಾಗಿದೆ ಅಂತ  ಅರ್ಥವಾಗಿದ್ದು ಟೀಕೆ, ಕುಹಕಗಳ ಬಾಣ ಎದೆಗೆ ನೆಟ್ಟಾಗಲೇ.

ಆಮೇಲೆ ಯಾವುದರ ವಿರುದ್ಧ ಯುದ್ಧ ಮಾಡಿದೆ ನೆನಪಿಲ್ಲ,  ಅದು ಯಾರ ಯುದ್ಧ ನನ್ನದೋ ಅವರದೋ ಎನ್ನುವುದೂ ಮರೆತು ಹೋಗಿತ್ತು ನೋಡು, ಅನುಭವಿಸಿದ್ದು ಅವರಾ ನಾನಾ ಅನ್ನುವ ಭಿನ್ನತೆ ಗೊತ್ತಾಗದಷ್ಟೂ ಮಗ್ನಳಾಗಿ,  ಬಿದ್ದ ಅವರನ್ನು ಮೇಲೆತ್ತುವ ಭರದಲ್ಲಿ ನನಗಾದ ಗಾಯದ ತೀವ್ರತೆ ಗೊತ್ತಾಗಿದ್ದು, ಲೆಕ್ಕವಿಡದಷ್ಟು ಬಾಣಗಳು ನೆಟ್ಟಿವೆ ಅಂತ ಅರ್ಥವಾಗಿದ್ದು, ನೋವಿನ ಅರಿವಾಗಿದ್ದು ಅವರು ಗೆದ್ದು ತನ್ನವರೊಡನೆ ಸಂಭ್ರಮಿಸಿದಾಗಲೇ. ನಾನು ದೂರದಿಂದ ಅದನ್ನು ಗಮನಿಸುವಾಗಲೇ. ಸಹಾಯ ಅನ್ನೋದು ಇಷ್ಟೊಂದು ಅಗ್ಗವಾ..

ಗೆಲುವಿಗೆ ಎಷ್ಟೊಂದು ಜನ ನೆಂಟರು ಅಂತ ಗೊತ್ತಾಗಿದ್ದು ಆಗಲೇ ನೋಡು. ಅವನ ನಗುವಿನಲ್ಲಿ, ಸಂಭ್ರಮದಲ್ಲಿ, ಮಾತು ಕೇಕೆಗಳ ಅಬ್ಬರದಲ್ಲಿ ನಾನು ಕಳೆದೇ ಹೋದೆನಾ ಅನ್ನೋದೇ  ಎಲ್ಲಕ್ಕಿಂತ ಜಾಸ್ತಿ ನೋವು ಕೊಟ್ಟಿದ್ದು. ತಪ್ಪು ಮಾಡಿದೆನಾ, ಅನಗತ್ಯವಾಗಿ ನನ್ನನ್ನು ನಾನು ತೊಡಗಿಸಿಕೊಂಡೆನಾ, ನನ್ನದು ಅಪಾತ್ರ ದಾನವಾಯಿತಾ, ನೋವಿನಲ್ಲಿದ್ದವರಿಗೆ ಸಹಾಯ ಮಾಡುವ ಮುನ್ನ ಇವೆಲ್ಲಾ ಲೆಕ್ಕಾಚಾರ ಹಾಕಿ ತಕ್ಕಡಿ ಹಿಡಿದು ತೂಗಬೇಕಾ? ಇದೆಂಥಾ ಅಸಹಾಯಕತೆ .. ಸಹಾಯಕ್ಕೆ ಸಿಗುವುದು ನೋವಿನ ಬಹುಮಾನವಾ ತ್ಯಾಗಕ್ಕೆ ನಿರ್ಲಕ್ಷ್ಯವೇ ಬಳುವಳಿಯಾ ...ಪ್ರಶ್ನಿಸುತ್ತಿದ್ದವಳ ಮುಖವನ್ನೇ ನೋಡಿದೆ, ಕಣ್ಣಲ್ಲಿ ಚಕ್ರತೀರ್ಥ  ಸುಳಿ ಸುಳಿಯಾಗಿ ಸುತ್ತುತಿತ್ತು.

 ಕೆಲವು ಸಮಾಧಾನದ ಮಾತುಗಳು ಎಷ್ಟು ಸವಕಲಾಗಿ ಹೋಗಿವೆ ಅಂದರೆ ಏನು ಮಾತಾಡಿದರೂ ಅದು ಯಾಂತ್ರಿಕವಾಗುತ್ತೆ ಅನ್ನಿಸಿತು. ಮಾತುಗಳು ಎಲ್ಲರಿಗೂ ಗೊತ್ತಿರುತ್ತದೆ, ಬಹಳಷ್ಟು ಸಲ ಅದನ್ನು ನಾವೇ ಇನ್ನೊಬ್ಬರ ಎದುರು ಆಡಿರುತ್ತೇವೆ, ಸಮಾಧಾನ ಮಾಡಿದ್ದೇವೆ ಎಂದು ಬೀಗಿರುತ್ತೇವೆ, ನಾವು ಕೇಳುವ ಸಂದರ್ಭ ಬಂದಾಗಲೇ ಅದು ಎಷ್ಟು ಸವಕಲಾಗಿ ಏನೋ ಮಾತು ಆಡಬೇಕು ಅನ್ನೋ ಅನಿವಾರ್ಯಕ್ಕೆ ಆಡುತ್ತೇವೆ ಅನ್ನೋ ಸತ್ಯ ಅರ್ಥವಾಗಿಬಿಡುತ್ತದೆ. ಆಡುವವರಿಗೂ, ಕೇಳುವವರಿಗೂ ಅದೊಂದು ಅನಿವಾರ್ಯ ಕರ್ಮ ಅನ್ನಿಸಿ   ಒಂದು ಶುಷ್ಕ ನಗು ಮುಖದಲ್ಲಿ ಮೂಡುತ್ತದೆ.

ಒಂದು ಕತೆ ಹೇಳಲಾ ಕೇಳಿದೆ, ವಿಚಿತ್ರವಾಗಿ ನನ್ನನ್ನೇ ದಿಟ್ಟಿಸಿದಳು. ನೋಡಿಯೂ ನೋಡದವಳಂತೆ ಮುಂದುವರಿಸಿದೆ.
ಒಂದು ಕೋತಿ ಮರಿಯನ್ನು ಎತ್ತಿಕೊಂಡು ನದಿಯನ್ನು ದಾಟುತಿತ್ತಂತೆ. ನೀರು ಸ್ವಲ್ಪ ಸ್ವಲ್ಪವೇ ಮೇಲೇರುತ್ತಿದ್ದಂತೆ ಅಲ್ಲಿಯವರೆಗೆ ಕಂಕುಳಲ್ಲಿ ಎತ್ತಿಕೊಂಡ ಮರಿಯನ್ನು ಹೆಗಲಲ್ಲಿ ಕೂರಿಸಿ ಕೊಂಡಿತಂತೆ. ಇನ್ನೂ ಸ್ವಲ್ಪ ನೀರು ಏರುತಿದ್ದ ಹಾಗೆ ತಲೆಯ ಮೇಲೆ ಕುಳ್ಳಿರಿಸಿ ಕೊಂಡಿತಂತೆ. ಮುಂದಕ್ಕೆ ಹೋಗುತ್ತಿದ್ದ ಹಾಗೆ ಮೇಲೆ ಮೇಲೆ ಏರುತಿದ್ದ ನೀರು ಕಣ್ಣನ್ನು ಮುಚ್ಚುವ ಪರಿಸ್ಥಿತಿ ಬಂದ ಕೂಡಲೇ ಅಲ್ಲಿಯವರೆಗೆ ಮಗುವನ್ನು ರಕ್ಷಿಸುತಿದ್ದ ಅದು ಮಗುವನ್ನು ಕೆಳಗೆ ಹಾಕಿ ಅದರ ಮೇಲೆ ಕಾಲಿಟ್ಟು ಆಚೆ ದಡಕ್ಕೆ ಸೇರಿತಂತೆ.

ಎಲ್ಲೋ ಓದಿದ ಈ ಕತೆ ಮರೆಯಬೇಕೆಂದರೂ ಬದುಕು ಪುನಃ ಪುನಃ ಅನೇಕ ಪರಿಸ್ಥಿತಿಗಳಲ್ಲಿ ಇದು ನೆನಪಾಗುವ ಹಾಗೆ ಮಾಡುತ್ತದೆ ಅನ್ನೋದಕ್ಕಿಂತ ಬದುಕಿನ ಮುಖ್ಯ ಕಹಿ ಸತ್ಯವೊಂದನ್ನು ಪರಿಚಯ ಮಾಡಿಕೊಡುತ್ತದೆ. ಎಲ್ಲಾ ಸಹಕಾರ, ತ್ಯಾಗ, ಹೆಗಲಾಗುವಿಕೆಗೂ ಒಂದು ಗೆರೆಯಿದೆ ಅನ್ನೋದು ಈ ಕತೆ ಪದೇ ಪದೇ ಮನದಟ್ಟು ಮಾಡಿಕೊಡುತ್ತದೆ. ಅಸಲಿಗೆ ನಡುವೆ ಒಂದು ಗೆರೆಯಿಲ್ಲದ ಒಂದೇ ಒಂದು ಸಂಗತಿಯಾದರೂ ಈ ಸೃಷ್ಟಿಯಲ್ಲಿದೆಯೇ. ಇಡೀ ಸೃಷ್ಟಿಯೇ ಒಂದು ತಂತುವಿನಿಂದ ಬೆಸೆದು ಕೊಂಡಿದೆ. ಇಲ್ಲಿ ಯಾರೂ ಸ್ವತಂತ್ರರಲ್ಲ ಅಂದೇ.  ಹಾಗಾದರೆ ನಾನು ಮಾಡಿದ ಸಹಾಯಕ್ಕೆ ಬೆಲೆಯೇ ಇಲ್ಲವಾ, ನಾನೇನು ಪ್ರತಿಯಾಗಿ ಏನೂ ಬಯಸಲಿಲ್ಲ ಕೊನೆಪಕ್ಷ ಕೃತಜ್ಞತೆಯನ್ನು ಬಯಸುವುದು ತಪ್ಪಾ ಅನ್ನೋ ಪ್ರಶ್ನೆ ರಭಸವಾಗಿ ತೂರಿ ಬಂತು.

ಸಿಟ್ಟಿನಲ್ಲಿದ್ದಾಗ, ನಮ್ಮಿಂದ ಇದೇ ಉತ್ತರ ಬರುತ್ತೆ ಅಂತ ನಿರೀಕ್ಷೆ ಮಾಡಿ ಅದಕ್ಕೆ ಉತ್ತರ ರೆಡಿ ಮಾಡಿ ಇಟ್ಟುಕೊಳ್ಳುವವರ ಬಳಿ ಸಮರ್ಥನೆ ಮಾಡಬಾರದು. ಅಸಲಿಗೆ ಆ ವಿಷಯವನ್ನು ನೇರವಾಗಿಯೂ ಮಾತಾಡಬಾರದು. ಆವೇಶದಲ್ಲಿ ಅದು ಒಳಕ್ಕೆ ಇಳಿಯದೆ ಕೋಪದ ಕಾವಿಗೆ ಆವಿಯಾಗುತ್ತದೆ. ಅಲ್ಲಿಗೆ ಆಡಿದ ಮಾತು ವ್ಯರ್ಥ. ಇದು ಸಹಜವಾಗಿ ಲೋಕದಲ್ಲಿ ಏಳುವ ಪ್ರಶ್ನೆ. ಉತ್ತರ ಮಾತ್ರ ವ್ಯಕ್ತಿಯಿಂದ ವ್ಯಕ್ತಿಗೆ, ಪರಿಸ್ಥಿತಿಗೆ, ಪರಿಸರಕ್ಕೆ ತಕ್ಕಂತೆ ಬದಲಾಗಿರುತ್ತದೆ. ಪ್ರಶ್ನೆ ಒಂದೇ ಆದರೆ  ಉತ್ತರ ಮಾತ್ರ ಎಷ್ಟು ಜನರಿಗೆ ಎದುರಾಗಿರುತ್ತದೋ ಅಷ್ಟು. ಅವರವರ ಅನುಭವಕ್ಕೆ ತಕ್ಕಂತೆ, ಅರಿವಿಗೆ ದಕ್ಕಿದಂತೆ.

ಇಡೀ ಸೃಷ್ಟಿ ಒಂದು ಶಕ್ತಿಯ ನಿಯಂತ್ರಣಕ್ಕೆ ಒಳಪಟ್ಟೆ ನಡೆಯುತ್ತದೆ. ನಿಯಂತ್ರಣವಿಲ್ಲದೆ ಹೋದರೆ ಬದುಕು ಮಾತ್ರವಲ್ಲ ಸೃಷ್ಟಿಯೇ ಅಲ್ಲೋಲಕಲ್ಲೋಲ ವಾಗುತ್ತದೆ. ಹಾಗಾಗಿ ಯಾವುದು ಹೇಗೆ ನಡೆಯಬೇಕು ಅನ್ನೋದು ಸಹ ನಮ್ಮ ಕೈಯಲ್ಲಿ ಇಲ್ಲ. ಆ ಕ್ಷಣ ನೀನಿದ್ದಿ. ನೀನಿಲ್ಲವಾದರೆ ಇನ್ಯಾರೋ. ಜಗತ್ತು ನಿರಂತರ ಚಲಿಸುತ್ತಲೇ ಇರುತ್ತದೆ. ನಾವಿದ್ದರೂ, ನಾವಿರದಿದ್ದರೂ ಸೃಷ್ಟಿಯ ಚಲನೆ ಮಾತ್ರ ನಿಲ್ಲುವುದಿಲ್ಲ. ಹಾಗಾಗಿ ನಾನು ಅನ್ನೋದು ಬರಿಯ ನೆಪ ಮಾತ್ರ. ಜಗತ್ತು ನಿಂತಿರುವುದೇ ಋಣದ ಅಡಿಪಾಯದ ಮೇಲೆ, ಇಲ್ಲಿ ಒಂದಕ್ಕೊಂದರ ಸಹಾಯವಿಲ್ಲದೆ, ಸಖ್ಯವಿಲ್ಲದೆ ಯಾವುದೂ ಜರುಗುವುದಿಲ್ಲ.

ನಾವು ಸಂಪಾದಿಸಿ ತಿನ್ನುತ್ತೇವೆ ಎಂದು ಬೀಗುತ್ತೆವಲ್ಲ ಆ ಅನ್ನವೂ ಎಷ್ಟೊಂದು ಜನರ ಶ್ರಮದ, ಸಹಾಯದ, ಕೊಡುಗೆಯ ಋಣದ ಮೇಲೆ ನಿಂತಿದೆ ಎಂದು ಒಮ್ಮೆಯಾದರೂ ಯೋಚಿಸಿದ್ದೆವಾ? ಇಲ್ಲಿ ಯಾವುದು ಒಬ್ಬರ ಸಹಾಯದಿಂದ ಸೃಷ್ಟಿಸಲು ಸಾದ್ಯ ಹೇಳು. ಯಾರ ಹಂಗಿಲ್ಲದೆ ಸಹಾಯವಿಲ್ಲದೆ ಬದುಕಬಲ್ಲೆ ಅನ್ನೋದೇ ಭ್ರಮೆ. ಒಂದರ ಹೊರತಾಗಿ ಇನ್ನೊಂದು ಇಲ್ಲ  ಇದು ಅರ್ಥವಾದಾಗ ಪಡೆಯುವ ಪ್ರತಿಯೊಂದು ಸಂಗತಿಯ ಮೇಲೂ ಗೌರವ ಹುಟ್ಟುತ್ತದೆ, ನೋಡುವ ನೋಟವೇ ಬದಲಾಗುತ್ತದೆ. ಬೆನ್ನ ಮೇಲೆ ಹೊತ್ತ ಭಾರದ ಅರಿವಾಗುತ್ತದೆ.

ನಮ್ಮ ಬದುಕಿನ ಪ್ರತಿ ಕ್ಷಣವೂ ಇನ್ಯಾರದೋ ಶ್ರಮ, ನೋವು,  ತ್ಯಾಗ, ಪ್ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದರ ಮೇಲೆ ಬದುಕು ಬೆಳೆಯಬೇಕು, ಬೆಳೆಯುತ್ತದೆ ಕೂಡಾ. ಯಾವುದರಿಂದಲೂ ಕಳಚಿಕೊಂಡು ಬದುಕಲಾರೆವು. ಹಾಗಾಗಿ ಸಹಾಯ ಮಾಡ್ತಿವಿ ಅನ್ನೋದು ನಮ್ಮ ಅಹಂ ಅಷ್ಟೇ.  ಅಸಲಿಗೆ ಅದು ಸಹಾಯವೇ ಅಲ್ಲ,  ಋಣ ಕಳೆದುಕೊಳ್ಳುವ ಪ್ರಕ್ರಿಯೆ. ಇನ್ನೊಬ್ಬರಿಗೆ ಸಹಾಯ ಮಾಡ್ತಿವಿ ಅಂತ ಬೀಗ್ತಿವಲ್ಲ ಅದು ಬೇರೇನಲ್ಲ, ಸೃಷ್ಟಿ ಬದುಕಿನ ಋಣ ತೀರಿಸಿಕೊಳ್ಳಲು  ಕೊಟ್ಟ ಅವಕಾಶ, ಭಾರ ಇಳಿಸಿಕೊಳ್ಳುವ ಪ್ರಕ್ರಿಯೆ  ಅಷ್ಟೇ. ಹೀಗಿರುವಾಗ  ನಾನಿಲ್ಲದಿದ್ದರೆ ಏನಾಗುತಿತ್ತೋ ಅನ್ನೋದು  ಭ್ರಮೆ. ನಾವಲ್ಲದಿದ್ದರೆ ಅದನ್ನು ಇನ್ಯಾರೋ ಉಪಯೋಗಿಸಿಕೊಳ್ಳುತ್ತಾರೆ.

ಮಾಡದಿದ್ದರೆ ಏನಾಗುತ್ತದೆ, ಬದುಕು ಋಣ ತೀರಿಸಿಕೊಳ್ಳಲು ಕೊಟ್ಟ ದಿವ್ಯ ಅವಕಾಶವೊಂದು ಮರೆಯಾಗುತ್ತದೆ. ಬೆನ್ನಿನ ಭಾರ ಹಾಗೆ ಉಳಿಯುತ್ತದೆ. ಹಾಗಾಗಿ ಗಮನ ಋಣ ತೀರಿಸಿಕೊಂಡು ಹಗುರವಾಗುದರ ಕಡೆಗೆ ಇರಬೇಕೇ ಹೊರತು ಭಾರ ಇನ್ನಷ್ಟು ಹೆಚ್ಚಿಸಿಕೊಳ್ಳುವುದರ ಕಡೆಗಲ್ಲ. ಬದುಕು ಹಗುರಾದಷ್ಟು ಹೆಜ್ಜೆ ದೃಢವಾಗುತ್ತದೆ. ಕಾಲಿನ ಕಸುವು ಮತ್ತಷ್ಟು ದೂರವನ್ನ ಕ್ರಮಿಸುವ ಹಾಗೆ ಮಾಡುತ್ತದೆ.ಅಹಂ ನ ಪೊರೆ ಕಳಚಿದಾಗ ಮಾತ್ರ ಚಿಟ್ಟೆ ಮೇಲಕ್ಕೆ ಹಾರುತ್ತದೆ. ಇಲ್ಲವಾದಲ್ಲಿ ಅಲ್ಲೇ ತೆವಳಿ ಯಾರದೋ ಕಾಲಡಿ ಸಿಕ್ಕು ನಾಶವಾಗುತ್ತದೆ. ಈಗ ಹೇಳು ಯಾರು ಯಾರಿಗೆ ಕೃತಜ್ಞರಾಗಿರಬೇಕು ?

ಮುಳುಗುವುದು ಯಾವಾಗ, ಕಟ್ಟಿಕೊಂಡ ಭಾರ ಹೆಚ್ಚಾದಾಗ. ಹಗುರವಾದಾಗ ಮಾತ್ರ ತೇಲಲು ಸಾಧ್ಯ. ಸಂಸಾರ ಅನ್ನೋದು ಸಾಗರವೆಂದಾಗ ಹಗುರಾದಷ್ಟು ಬದುಕು ನಿರಾಳ. ನಿರೀಕ್ಷೆಗಳು ಹೆಚ್ಚಿದಷ್ಟೂ ಲೆಕ್ಕಾಚಾರ ಹೆಚ್ಚುತ್ತದೆ. ಲೆಕ್ಕಾಚಾರ ಹೆಚ್ಚಿದಂತೆ ರಾಗದ್ವೇಷಗಳು ಹೆಚ್ಚುತ್ತದೆ. ಅವು ಹೆಚ್ಚಾದಷ್ಟು ಭ್ರಮೆ ಆವರಿಸಿಕೊಳ್ಳುತ್ತದೆ. ಭ್ರಮೆ ಕಣ್ಣು ತುಂಬಿಕೊಂಡಾಗ ದಾರಿ ಮಸುಕಾಗುತ್ತದೆ. ಹಾಗಾಗಿ ನಾವು ಇನ್ನೊಬ್ಬರಿಗೆ ಮಾಡುವುದು ಸಹಾಯವಲ್ಲ , ಅವರಿಗೆ ಉಪಕಾರ ಮಾಡುವ ಹೆಸರಲ್ಲಿ ಕಳೆದುಕೊಳ್ಳುವುದು ನಮ್ಮ ಋಣ, ಇಳಿಸಿ ಕೊಳ್ಳುವುದು ಬೆನ್ನ ಮೇಲಿನ ಭಾರ. ಆಗ ಎದುರಿನವರಿಂದ ನಮ್ಮ ನಿರೀಕ್ಷೆ ಕಡಿಮೆಯಾಗುತ್ತದೆ.

ಅಹಂ ನ ಪೊರೆ ಕಳಚಿದರೆ ಬದುಕು ರೆಕ್ಕೆ ಬಿಚ್ಚಿದ ಚಿಟ್ಟೆಯಾಗುತ್ತದೆ. ಭ್ರಮೆ ರೆಕ್ಕೆಯ ಬಡಿತಕ್ಕೆ ಹಾರಿ ಹೋಗುತ್ತದೆ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...