ಕಡಗೋಲು ಕಂಬ

ಮನೆಯ ಕಟ್ಟಡ ಮುಗಿದು ನೆಲಕ್ಕೆ ಗಾರೆ ಹಾಕಬೇಕು ಅನ್ನುವ ಸಮಯದಲ್ಲಿ ಮುಷ್ಠಿಗಾತ್ರದ ಕಂಬದ ಅರಸುವಿಕೆ ಶುರುವಾಗುತ್ತಿತ್ತು. ಹದವಾಗಿ ಕೆತ್ತಿ ಅದನ್ನು ನಯಸ್ಸು ಮಾಡಿ ಅಡುಗೆ ಮನೆಯ ಮೂಲೆಯ ಪ್ರಶಸ್ತ ಜಾಗವೊಂದನ್ನು ಹುಡುಕಿ ಅದನ್ನು ಪ್ರತಿಷ್ಠಾಪಿಸಿದರೆ ಕಳೆ ತಂತಾನೇ ಅಡಿಯಿಡುತ್ತಾ ಅಡುಗೆಮನೆ ಪ್ರವೇಶಿಸಿ ಆವರಿಸಿಕೊಳ್ಳುತಿತ್ತು. ಕೃಷ್ಣ ಗೋಡೆಯ ಮರೆಯಲ್ಲಿ ಅಡಗಿ ನಿಂತಿದ್ದಾನೇನೋ ಅನ್ನುವಂತೆ ಭಾಸವಾಗುವ ಆ ಮಜ್ಜಿಗೆ ಕಡೆಯುವ ಕಂಬ ಮನಸ್ಸಿಗೆ ಉಲ್ಲಾಸ ಕೊಡುತಿದ್ದದಂತೂ ಸತ್ಯ.

ಬೆಳಕು ಮೂಡುವ ಮುನ್ನ ಎದ್ದು ನಿತ್ಯಕರ್ಮ ಪೂರೈಸಿ ಒಳಗೆ ಬಂದು ಕಾಫಿ ಕುಡಿದು ಮೊದಲು ಮಾಡುವ ಕೆಲಸವೆಂದರೆ ಮಜ್ಜಿಗೆ ಕಡೆಯುವುದು. ಇದ್ದಿಲ ಒಲೆಯಲ್ಲಿ ಹದವಾಗಿ ಕಾಯ್ದು ಕೆನೆಗಟ್ಟಿದ ಹಾಲನ್ನು ಇಷ್ಟೇ ಚೂರು ಮೊಸರು ಹಾಕಿ  ಹೆಪ್ಪು ಹಾಕಿ ಗೂಡಲ್ಲಿ ಇಟ್ಟರೆ ನಸುಕು ಹರಿಯುವ ಮುನ್ನ ಹೆಪ್ಪಾಗಿರುತಿತ್ತು. ಹೆಪ್ಪು ಹಾಕುವುದು ಒಂದು ಹದವೇ. ಚೂರೇ ಚೂರು ಹಾಕಿದರೆ ಹೆಪ್ಪಾಗದೆ ವಾಸನೆ ಬರುತ್ತೆ, ಸ್ವಲ್ಪ ಜಾಸ್ತಿಯಾದರೂ ಹುಳಿಯಾಗುತ್ತೆ. ಹದ ತಪ್ಪಬಾರದು. ಇಷ್ಟಕ್ಕೂ ಬದುಕಿನಲ್ಲಿ ಪ್ರತಿಯೊಂದಕ್ಕೂ ಹದವಿದ್ದೆ ಇದೆ. ತಪ್ಪಿದ ಯಾವುದು ತಾನೇ ರುಚಿಕಟ್ಟಾಗಿರುತ್ತದೆ?   ರಾತ್ರಿಯೆಲ್ಲಾ ಅದರ ಜೊತೆಗೆ ಅದೆಷ್ಟು ಭಾವಗಳು ಅಲ್ಲೇ ಗಟ್ಟಿಯಾಗಿ ಹೆಪ್ಪುಗಟ್ಟಿರುತ್ತಿದ್ದವೋ ಯಾರಿಗೆ ಗೊತ್ತು. ಕತ್ತಲೆ ಅವೆಲ್ಲವನ್ನು ತನ್ನೊಳಗೆ ಅಡಗಿಸಿಕೊಂಡು ಏನೋ ಕಡು ಕಪ್ಪಾಗಿರುತಿದ್ದದ್ದು.

ನಸುಕು ನೆರಿಗೆ ಹಾಕಿಕೊಂಡು ಅಡಿಯಿಡುವ ಮುನ್ನ ಕಡಗೋಲು ಸುಪ್ರಭಾತ ಹಾಡಲು ಶುರುಮಾಡಿರುತಿತ್ತು. ಮಜ್ಜಿಗೆ ಕಡೆಯುವ ಕಂಬದ ಎದುರು ಚಟ್ಟೆ ಮುಟ್ಟೆ ಹಾಕಿಕೊಂಡು ಅದರ ಮುಂದೆ ಸುತ್ತಿದ ಸಿಂಬೆಯನ್ನು ಇಟ್ಟು ಅದರ ಮೇಲೆ ದುಂಡಾದ ತಳವುಳ್ಳ ಚಿಕ್ಕ ಬಾಯಿಯ ದೊಡ್ಡಪಾತ್ರೆಯನ್ನು ಇಟ್ಟು ಹಗ್ಗ ಸಿಲುಕಿಸಿ ಕಡಗೋಲು ಇಳಿಬಿಟ್ಟರೆ ಸಮುದ್ರ ಮಥನಕ್ಕೆ ರೆಡಿಯಾದ ವಾಸುಕಿಯನ್ನು ನೆನಪಿಸುತ್ತಿತ್ತು. ಪಾತ್ರೆ ಅಲುಗಾಡದಂತೆ ಸಿಂಬೆ ಬೇಕೇ ಬೇಕು. ಬದುಕು ಅಲುಗಾಡದಂತೆ ಹೀಗೆ ಸದಾ ಕಾಯುವವರು ಒಬ್ಬರಿದ್ದರೆ ಎಷ್ಟು ಚೆಂದವಿತ್ತು ಅನ್ನಿಸುತ್ತದೆ ಈಗ. ಪಾತ್ರೆಯ ಬಾಯಿ ಚಿಕ್ಕದಾಗಿರಬೇಕು, ಮಥಿಸುವ ರಭಸಕ್ಕೆ, ಹೊಯ್ದಾಟಕ್ಕೆ ತುಳುಕಬಾರದು, ಚೆಲ್ಲಿದರಂತೂ ಮೂಗಿಗೆ ವಾಸನೆ ಅಡರುತ್ತದೆ. ಎಷ್ಟೇ ಘಾಸಿಯಾದರೂ ನೋವು ಹೊರಚೆಲ್ಲುವ ಹಾಗಿಲ್ಲ. ಅದು ಅಲ್ಲೇ ಮನದ ಗೋಡೆಗೆ ಬಡಿದು ಬಡಿದು ಸುಮ್ಮನಾಗಬೇಕು. ಬೇರೆ ದಾರಿಯಾದರೂ ಎಲ್ಲಿದೆ.

ಪ್ರಕೃತಿಯಲ್ಲಿ ಪ್ರತಿಯೊಂದು ಶ್ರುತಿ ಬದ್ಧವೇ.. ಸರ ಭರ ಅನ್ನುತ್ತಾ ಮಜ್ಜಿಗೆ ಕಡೆಯುವ ಶಬ್ದ ಸುಪ್ರಭಾತ ಹಾಡಿನಂತೆ ಕೇಳಿ ಮಲಗಿದ್ದ ರವಿಯೂ ಎದ್ದು ಬರುತಿದ್ದ. ಅವನ ಹಿಂದೆಯೇ ಸಿಂಗಾರಗೊಂಡ ನಸುಕು ನೆರಿಗೆ ಕಾಲುಗಳ ಚಿಮ್ಮಿಕೊಂಡು ನಸು ನಾಚಿಕೆಯಿಂದ ಅಡಿಯಿಡುತಿತ್ತು. ಕಡೆದು ಕಡೆದು ಉಕ್ಕಿಬಂದ, ನೊರೆ ದುಮ್ಮಾನದ ಪ್ರತೀಕವಾಗಿರುತ್ತಿತ್ತೇನೋ. ಬೆಣ್ಣೆ ತೇಲಲು ಅದೆಷ್ಟು ದುಗುಡಗಳ ನೊರೆ ಏಳಬೇಕು? ಒಂದು ಮನೆಯಲ್ಲಿ ನೆಮ್ಮದಿ ಹುಟ್ಟಲು ಅಷ್ಟೇ ತಾನೇ ಅದೆಷ್ಟು ಭಾವಗಳು ಕಡೆ ಕಡೆದು, ಒಳಗೊಳಗೇ  ಮಥಿಸಿ ನಿರ್ಧಾರ ಹುಟ್ಟಬೇಕಿತ್ತು. ಹಾಗೆ ಉಕ್ಕಿ ಬಂದ ನೊರೆ ನಿಧಾನಕ್ಕೆ ತನ್ನ ಉಬ್ಬರವನ್ನು ಕಳೆದುಕೊಂಡು ಕರಗುತ್ತಾ ಕರಗುತ್ತಾ ಹೋಗುವ ವೇಳೆಗೆ ಹಮ್ಮು ಕಳೆದುಕೊಂಡ, ಭಾರ ಇಳಿಸಿಕೊಂಡ ಪ್ರತೀಕವಾಗಿ ಬೆಣ್ಣೆ ಮೇಲಕ್ಕೇರಿ ನಗುತಿತ್ತು. ಅಬ್ವಾ ಬೆಣ್ಣೆ ಬಂತು ಅಂತ ನೋಡಿದರೆ ಅದ್ಯಾವ ಮಾಯದಲ್ಲೂ ಬೆಳಕು ಒಳಗೆ ಬಂದು ಸೇರಿಕೊಳ್ಳುತಿತ್ತು. ಯಾರ ಬಣ್ಣ ಯಾರಿಗೆ ಬಂದಿದೆ ಅನ್ನೋದನ್ನ ನಾವೂ ಎದ್ದು ಬಂದು ಕಣ್ಣುಜ್ಜಿಕೊಂಡು ನೋಡುತ್ತಿದ್ದೆವು.

ಅಷ್ಟೊತ್ತಿಗೆ ಒಲೆಯ ದಂಡೆಯ ಮೇಲಿದ್ದ ಪಾತ್ರೆಯಲ್ಲಿನ ನೀರು ಹದವಾಗಿ ಕಾದಿರುತಿತ್ತು. ಅದನ್ನು ತಂದು ಕಡಗೋಲಿಗೆ ಹಿಡಿದದ್ದ ಬೆಣ್ಣೆಯನ್ನು ನಾಜೂಕಾಗಿ ತೆಗೆದು  ಬಿಸಿ ನೀರಿಗೆ ಹಾಕಿದರೆ ಮೈಯೆಲ್ಲಾ ಜಿಡ್ಡು ಮೆತ್ತಿಕೊಂಡಿರುತಿದ್ದ ಅದು ಸಣ್ಣಗೆ ಬೆವರುತಿತ್ತು. ಜಿಡ್ಡು ಬೇಕು ಹಾಗೂ ಅದನ್ನು ಕಳೆದುಕೊಳ್ಳುವ ಮಾರ್ಗವೂ ಗೊತ್ತಿರಬೇಕು. ಜಿಡ್ಡು ಇದ್ದರೆ ಅಂಟುವುದು ಕಡಿಮೆ. ಎಲ್ಲವೂ ಸಣ್ಣಗೆ ಜಾರಿ ಹೋಗಿಬಿಡುತ್ತದೆ. ಅತಿ ಜಿಡ್ಡು ಆದರೂ ಕಷ್ಟವೇ . ಯಾವುದನ್ನೂ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಬದುಕೂ ಜಾರತೊಡಗುತ್ತದೆ. ಹಾಗಾಗಿ ಆ ಜಿಡ್ಡು ತೆಗೆಯಲು ಬಿಸಿ ಅಗತ್ಯ.

ಬೆಣ್ಣೆಯನ್ನು ತೆಗೆದು  ಮೃದುವಾಗಿ ಕೈ ಆಡಿಸಿ ಉಂಡೆ ಕಟ್ಟಿ, ಹೂ ಇಲ್ಲೂ ಹದವೇ. ಕಟ್ಟುವಾಗ ರಭಸ ಇರಬಾರದು. ಎಳೆಯ ಮಗುವನ್ನು ತಟ್ಟುವ ರೀತಿ ಮೃದುವಾಗಿ ಕೈ ಆಡಿಸುತ್ತಾ ಹೋದರೆ ಚಂದ್ರನಂತ ಬೆಣ್ಣೆಯ ಉಂಡೆ ತಯಾರಾಗುತ್ತದೆ.  ಮೃದುತ್ವ ಯಾವ ಮಗುವಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ತಾಯಿಯ ಕೊರಳಿನಿಂದ ಹೆಪ್ಪುಗಟ್ಟಿದ  ಭಾವಗಳೆಲ್ಲಾ  ಕರಗಿ, ಭಾರವೆಲ್ಲಾ ಇಳಿದು ನವನೀತ ತೇಲುವಾಗ ಅದು ಕೈಯೊಡ್ಡಿ ಬರುತ್ತದೆ. ಕೃಷ್ಣನಿಗೂ ಇದೇ ಹೆಂಗರಳು ತಾನೇ. ನಿನ್ನೆಲ್ಲಾ ಭಾವ ಕರಗಿಸಿ ಬಿಡು ಅದನ್ನು ನಾನು ಸಂತೋಷವಾಗಿ ಸ್ವೀಕರಿಸುತ್ತೇನೆ, ಕೈ ನೀಡುತ್ತೇನೆ, ಜೋತೆಯಾಗುತ್ತೇನೆ ಅನ್ನೋದನ್ನ ಹೇಳೋದಕ್ಕೆ ಈ ಆಟವಾಡಿದನಾ....

ಅದಕ್ಕಾಗಿ ಗೋಕುಲದ ಮನೆ ಮನೆಗೂ ಹೋಗಿ ಅವರೆಲ್ಲರ ಭಾರ ಇಳಿಸಿದನಾ... ಹಾಗಾಗಿಯೇ ಯಾರು ದೂರು ತಂದರೂ ಯಶೋದೆ ನಸುನಕ್ಕು ಸುಮ್ಮನಾದಳಾ.. ದೂರು ಹೇಳುತ್ತಲೇ ಪ್ರತಿಯೊಬ್ಬರೂ ತಮ್ಮ ಮನೆಗೆ ಬರಲಿ ಎಂದು ಕಾದರಾ.. ಬೆಣ್ಣೆಯನ್ನು ಎತ್ತಿಟ್ಟು ಹಂಬಲಿಸಿದರಾ.. ಅಬ್ಬಾ ಕೃಷ್ಣನೆ ಇದೇನು ನಿನ್ನ ಮಾಯೆ. ನಿನ್ನಷ್ಟು ಹೆಂಗಸರನ್ನು ಅರ್ಥ ಮಾಡಿಕೊಂಡು ಇನ್ನೊಂದು ಗಂಡು ಜೀವ ಹುಟ್ಟಲೇ ಇಲ್ಲವಲ್ಲಪ್ಪ. ಕಡೆಯುತ್ತಾ ಕಡೆಯುತ್ತಾ ನವನೀತದ ಜೊತೆಗೆ ಮಾತೃತ್ವವೂ ಮತ್ತಷ್ಟು ತುಂಬಿಕೊಳ್ಳುತ್ತಿತ್ತಾ. ಮಜ್ಜಿಗೆ ಕಡೆಯದ ಒಂದು ಮನೆಯಾದರೂ ಎಲ್ಲಿತ್ತು ಹೇಳಿ?  ಕೃಷ್ಣ ಪ್ರತ್ಯಕ್ಷವಾಗಿ ಬಾರದ ಮೇಲೆ ಬೆಣ್ಣೆಯನ್ನು ಏನು ಮಾಡುವುದು?

ಹಳ್ಳಿಯ ಪ್ರತಿ ಮನೆಯಲ್ಲೂ ಅಡುಗೆಮನೆಯಲ್ಲಿ ಒಂದು ಮರದ ಬೀರು ಇರಲೇ ಬೇಕಿತ್ತು. ಅದು ಹಾಲು ಮಜ್ಜಿಗೆಗೆಂದೇ ಮೀಸಲಿಟ್ಟ ಜಾಗ. ಕಳ್ಳ ಬೆಕ್ಕು ಸದ್ದಿಲ್ಲದೇ ಬಾರದಂತೆ ಕಾಪಾಡಿಕೊಳ್ಳುವ ಜಾಗ ಕೂಡಾ. ಅಲ್ಲೊಂದು ಬೆಣ್ಣೆಯ ಬಟ್ಟಲು. ಅದರಲ್ಲಿ ಚೂರು ಆದರೂ ಬೆಣ್ಣೆ ತೇಲುತ್ತಲೇ ಇರುಬೇಕು. ಯಾವ ಕ್ಷಣದಲ್ಲಿ ಕೃಷ್ಣ ಬಂದರೂ ಅವನಿಗೆ ನಿರಾಸೆ ಆಗಬಾರದು, ಭಾರ ತನ್ನಲ್ಲೇ ಉಳಿಯಬಾರದು ಅನ್ನುವ ಎಚ್ಚರಿಕೆ. ಬೀರುವಿನ ಒಳಗಿದ್ದ ಬಟ್ಟಲು ತಂದು ಹಳೆಯ ನೀರು ಚೆಲ್ಲಿ ಇದನ್ನು ಹಾಕಿ ನೀರು ಸುರಿದರೆ ಮುಗಿಯಿತು. ಬೆಣ್ಣೆ ಕಾವಿಗೆ ಕರಗಬಾರದು. ಹಾಗೆ ಸಣ್ಣ ಬೇಗೆಗೂ ಕರಗಿದರೆ ವ್ಯರ್ಥವಾಗುತ್ತದೆ.

ಹಾಗೆ ಕರಗಬಾರದು ಎಂದರೆ ತಣ್ಣಗಿರಬೇಕು. ಹಾಗಾಗಿ ಆ ಬಟ್ಟಲಿನಲ್ಲಿ ನೀರು. ಆ ನೀರನ್ನೂ ದಿನವೂ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಸಣ್ಣಗೆ ವಾಸನೆ ಶುರುವಾಗುತ್ತದೆ. ಮನಸ್ಸೂ ಹಾಗೆಯೇ ಆಗಾಗ ಸ್ವಚ್ಛಗೊಳಿಸಬೇಕು, ಹಳೆಯದನ್ನು ಹೊರಹಾಕಿ ಹೊಸತನ್ನು ತುಂಬಿಕೊಳ್ಳಬೇಕು. ನವೀನತೆಗೆ ತೆರೆದುಕೊಳ್ಳಬೇಕು. ಇಲ್ಲವಾದಲ್ಲಿ ಕೊಳೆಯತೊಡಗುತ್ತದೆ. ಕಾವನ್ನು ಸಹಿಸಿಕೊಳ್ಳುಬೇಕು. ಸುಲಭಕ್ಕೆ ಕರಗಬಾರದು. ಹಾಗೆ ಕರಗುವ ಹಾಗಿದ್ದರೆ ಹೆಚ್ಚಿನ ತಾಪದಲ್ಲಿ ಕರಗಿ ಕುದಿದು ತುಪ್ಪವಾಗಬೇಕು.  ತುಪ್ಪವಾಗುವುದು ಅಷ್ಟು ಸುಲಭವಲ್ಲ. ಕುದಿಕುದಿದು ಎಲ್ಲವೂ ಆವಿಯಾಗಿ, ನೀರಿನ ಪಸೆಯೂ ಉಳಿಯದಂತೆ ಕಾದು, ಸದ್ದೆಲ್ಲವೂ ಅಡಗಿ ಮಾಗಿದಾಗ ಘಂ ಎನ್ನುವ ತುಪ್ಪ ರೆಡಿಯಾಗುತ್ತದೆ.

ಎಲ್ಲವೂ ಆ ಪಾತ್ರೆಯ ಪಾತ್ರದೊಳಗೆ ಮುಗಿದು ಹೋಗಬೇಕು. ಸಕಲವೂ ಮನೆಯ ನಾಲ್ಕು ಗೋಡೆಗಳ ನಡುವೆಯೇ ಹುಗಿದು ಹೋಗಬೇಕು. ತುಪ್ಪದ ಘಮ ಮಾತ್ರ ಸುತ್ತೆಲ್ಲಾ ಹರಡಿ ಎಲ್ಲರೂ ಮೂಗರಳಿಸುವಹಾಗಿರಬೇಕು ಅಷ್ಟೇ. ಹಾಗಾಗಿಯೇ ಎಷ್ಟೋ ಮನೆಗಳು, ಮನಸ್ಸುಗಳು ನೆಮ್ಮದಿಯಾಗಿ ಬದುಕುತ್ತಿದ್ದವಾ ಈಗ ಊಹಿಸಿಕೊಂಡರೆ ಮೈಯೆಲ್ಲಾ ಝುಂ ಅನ್ನುತ್ತದೆ. ಅದೆಷ್ಟು ಮಾತುಗಳು, ಆಲೋಚನೆಗಳು, ಭಾವಗಳು ಸಂಕಟಗಳು ಅಲ್ಲೇ ಕಡೆದು ಹೊರಗೆ ಚೆಲ್ಲದಂತೆ ಮಥಿಸಿ ಮರೆಯಾಗುತ್ತಿದ್ದವೋ ಆ ಕಂಬಕ್ಕೆ ಅಲ್ಲದೆ ಇನ್ಯಾರಿಗೆ ತಾನೇ ಗೊತ್ತು. ಕಡೆಯುವವರ ಭಾವಕ್ಕೆ ಆ ಸಿಂಬೆ ಕೂರ್ಮನಂತೆ ಆಧಾರವಾಗಿತ್ತಾ.... ಕಂಬ ಎಲ್ಲವನ್ನೂ ಕೇಳಿಸಿಕೊಂಡು ಭಾರ ಇಳಿಯುವ ಹಾಗೆ ಮಾಡುತಿತ್ತಾ...  ಮಥಿಸಲು ಸಹಾಯ ಮಾಡುತಿದ್ದ ಹಗ್ಗಗಳು ಬಂಧಿಸುವ ಹಾಗೆ ಅನ್ನಿಸುತಿತ್ತಾ... ಬಂಧನದಲ್ಲೇ ಅವು ಬಯಲಿನ ದರ್ಶನ ಮಾಡಿಸುತ್ತಿದ್ದವಾ..  ತುಳುಕದಂತೆ ಮತ್ತೊಬ್ಬರಿಗೆ ವಾಸನೆ ಹರಡದಂತೆ ಅಷ್ಟೇ ಜಾಗದಲ್ಲಿ ಪಾತ್ರೆ  ಕಾಪಿಡುತಿತ್ತಾ... ಇವತ್ತು ಬರೀ ಪ್ರಶ್ನೆಗಳೇ ಉಳಿದು ಹೋಗಿವೆ.

ಈಗೀಗ ಕಂಬ ಅಡುಗೆಯ ಮನೆಗೆ ಕುರೂಪ ಅನ್ನಿಸಲು ಶುರುವಾಗಿ, ಮಜ್ಜಿಗೆ ಕಡೆಯಲು ಸಮಯದ ಅಭಾವವಾಗಿ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದೆ. ಹೆಪ್ಪುಗಟ್ಟಿದ್ದು ಬಹಳಕಾಲ ಇಟ್ಟರೆ ಒಳಗೊಳಗೇ ಕೊಳೆಯಲು ಶುರುವಾಗುತ್ತದೆ. ಭಾವಗಳೂ ಅಷ್ಟೇ.  ಅದೆಷ್ಟು ಕ್ರಿಮಿ ಕೀಟಗಳು ಹುಟ್ಟುತ್ತವೋ ಯಾರಿಗೆ ಗೊತ್ತು. ಬೆನ್ನು ಎಷ್ಟು ಭಾರವನ್ನು ಹೊರಬಲ್ಲದು ಅನ್ನುವ ಲೆಕ್ಕಾಚಾರ ಯಾವ ಕ್ಯಾಲ್ಕುಲೇಟರ್ ಗೆ ತಿಳಿದಿದೆ. ಕೊಳೆತ ಮೇಲೆ ವಾಸನೆ ತೀರಾ ಸಹಜ. ಮೂಗು ಅರಳಿಸಿದರೆ ಸುತ್ತ ನಾಲ್ಕು ದಿಕ್ಕುಗಳಿಂದಲೂ ತುಪ್ಪದ ಘಮದ ಬದಲಾಗಿ  ಕೊಳೆತ  ವಾಸನೆ ಹಬ್ಬುತ್ತದೆ.

 ಕೃಷ್ಣ ಬರುವುದಾದರೂ ಎಲ್ಲಿಗೆ ಈಗ, ಕರೆಯುವವರು ಇಲ್ಲದ ಮೇಲೆ ಬರುವವರಾದರೂ ಯಾರು? ಯಾರಿಗೆ ಯಾರೂ ಬೇಕಿಲ್ಲ, ಎಲ್ಲವೂ ಬಂಧನವೇ ಆದರೆ ಬಯಲಿಗೆ ದಾರಿ ಗೊತ್ತಿಲ್ಲ, ಬಯಲು ಭಯ ಹುಟ್ಟಿಸುವುದು ನಿಂತಿಲ್ಲ. ಹಾಗಾಗಿ ಮತ್ತೆ ಹೆಪ್ಪಾಗುತ್ತೇವೆ. ಮತ್ತೆ ಕೊಳೆಯುತ್ತೇವೆ. ಸಂಬಂಧಗಳು ಉಸಿರುಗಟ್ಟುತ್ತವೆ. ದೂರ ಓಡಲು ಹಾತೊರೆಯುತ್ತವೆ.  ಕೊಳೆಯುವುದು ಸುಲಭ, ಕಾಪಿಡುವುದೇ ಕಷ್ಟ ಕಷ್ಟ. ಮಥಿಸುವ ಕಷ್ಟಕ್ಕೆ ಹೆದರಿ ನವನೀತದಿಂದ ದೂರ ದೂರ ಹೋಗುತ್ತಿದ್ದೇವೆ ಅಂದುಕೊಳ್ಳುತ್ತಲೇ ನೆಮ್ಮದಿಯ ಬದುಕಿಗೆ ದೂರ ಹೋಗುತ್ತಿದ್ದೆವಾ. ಒಮ್ಮೆ ಕಡಗೋಲಿಗೆ ಕಿವಿಗೊಟ್ಟರೆ ಸಲಹೆ ಸಿಗಬಹುದಾ. ಮತ್ತೆಲ್ಲವೂ ಸರಿಯಾಗಬಹುದಾ......  ಕಳೆದುಕೊಂಡಾಗಲೇ ಬೆಲೆ ಅರ್ಥವಾಗುವುದಾ...


ಒಂದು ಕಡೆಯುವಿಕೆಗೆ ಇಷ್ಟೊಂದು ಅರ್ಥವಿತ್ತಾ.......





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...