ಕುತುಬ್ ಮಿನಾರ್.

ಇನ್ನೇನು ಡೆಲ್ಲಿ ಬಂತು ಲ್ಯಾಂಡ್ ಆಗೋ ಟೈಮ್ ಅನ್ನುವ ಹೊತ್ತಿಗೆ ಸ್ವಾಗತಿಸೋದು ಕುತುಬ್ ಮಿನಾರ್.  73 ಮೀಟರ್ ಗಳಷ್ಟು ಎತ್ತರದ ವಿಜಯ ಸ್ತಂಭ. ವಿದೇಶಿ ಮುಸ್ಲಿಂ ಆಕ್ರಮಣಕಾರರಿಂದ ಡೆಲ್ಲಿಯ ಹಿಂದೂ ರಾಜರನ್ನು ಸೋಲಿಸಿ ಮುಸ್ಲಿಂ ರಾಜ್ಯ ಸ್ಥಾಪನೆ ಮಾಡಿದ ನೆನಪಿಗಾಗಿ, ವಿಜಯೋತ್ಸವದ ಗುರುತಿಗಾಗಿ ನಿರ್ಮಿಸಿದ ಸ್ಥಂಭ. ಸೋಲು ಅವಮಾನದಿಂದ ತಲೆತಗ್ಗಿಸಿದರೆ ವಿಜಯ ಎತ್ತರೆತ್ತರಕ್ಕೆ ಹಾರಾಡುತ್ತದೆ. ಗರ್ವವನ್ನು ಹಂಚಿಕೊಳ್ಳದಿದ್ದ ಮೇಲೆ ಗೆದ್ದೇನು ಪ್ರಯೋಜನ.

ಅಷ್ಟು ಎತ್ತರದ ಈಗ ವರ್ಲ್ಡ್ ಹೆರಿಟೇಜ್  ಪಟ್ಟಿಗೆ ಸೇರಿದ ಅದನ್ನು ಹೇಗೆ ಕಟ್ಟಿದರು ಅನ್ನೋದು ತಿಳಿದುಕೊಳ್ಳಲೇ ಬೇಕಾದ ವಿಷಯ. 1192 ರಲ್ಲಿ ದೆಹಲಿಯ ರಾಜನ ಮೇಲೆ ಆಕ್ರಮಣ ಮಾಡಿ ಮೊದಲ ಡೆಲ್ಲಿ ಸುಲ್ತಾನೇಟ್ ಆಗಿದ್ದರ ಕುರುಹಿಗಾಗಿ ಕುತುಬ್ ಉದ್ ದೀನ್ ಐಬಕ್ 1200 ನೇ ಇಸವಿಯಲ್ಲಿ ಇದರ ನಿರ್ಮಾಣ ಆರಂಭ ಮಾಡುತ್ತಾನೆ. ಅದನ್ನು ಕಟ್ಟಲು ಬಳಸೋದು ಲಾಲ್ ಕೊಟ್ ದ ಅವಶೇಷಗಳಿಂದಲೇ. ಈ ಲಾಲ್ ಕೊಟ್ ಅನ್ನು ಕಟ್ಟಿದ್ದು ತೊಮುರ್ ಎಂಬ ಆನಂಗಪಾಲದ ರಾಜ. ನಂತರ ಅದನ್ನು ಇನ್ನಷ್ಟು ಅಭೇಧ್ಯವಾಗಿಸಿದ್ದು ಪೃಥ್ವಿರಾಜ್ ಚೌಹಾಣ್ ಎಂಬ ಮೈನವಿರೇಳಿಸುವ ವೀರ. ಅಂತ ಕೋಟೆಯನ್ನು ಕೆಡವಿ ಅದರ ಅವಶೇಷದಿಂದಲೇ ನಿರ್ಮಾಣ ಶುರುವಾಗಿದ್ದು ಈ ಕುತುಬ್ ಮಿನಾರ್ ಎಂಬ ವಿಜಯ ಸ್ಥಂಭ.

ಮೊದಲ ಮೂರು ಅಂತಸ್ತಿನ ನಿರ್ಮಾಣವಾಗಿದ್ದು ಕೆಂಪು ಸ್ಯಾಂಡ್ ಸ್ಟೋನ್ ಗಳಿಂದ. ನಾಲ್ಕು ಮತ್ತು ಐದು ಅಂತಸ್ತುಗಳು ಮಾರ್ಬಲ್ ಮತ್ತು ರೆಡ್ ಸ್ಯಾಂಡ್ ಸ್ಟೋನ್ ಗಳಿಂದ. ಕೆಳಅಂತಸ್ತಿನಲ್ಲಿ ಮಸೀದಿಯಿದೆ. ಅದು ಭಾರತದಲ್ಲಿ ನಿರ್ಮಾಣವಾದ ಮೊತ್ತ ಮೊದಲ ಮಸೀದಿ. ಮತ್ತು ಇಲ್ಲಿಯ ಮತಾಂತರದ ಮುನ್ನುಡಿಯೂ ಹೌದೇನೋ.. ಯಾಕೆಂದರೆ ಇದರ ನಿರ್ಮಾಣಕ್ಕಾಗಿ 27 ಹಿಂದೂ ದೇವಾಲಯಗಳನ್ನು ನಾಶ ಮಾಡಿ ಅದರ ಅವಶೇಷಗಳನ್ನು ಬಳಸಲಾಗಿದೆ. ಮತ್ತು ಇವತ್ತಿಗೂ ಅದರ ಕುರುಹುಗಳನ್ನು ಕಾಣಬಹುದಾಗಿದೆ. ಹೋಗಲಿ ಅದನ್ನು ಕಟ್ಟಿದ್ದಾದರೂ ಎಲ್ಲಿ ಎಂದರೆ ದೇವಾಲಯದ ಸಮುಚ್ಚಯದಲ್ಲಿ. ಮಹಾವಿಷ್ಣುವಿನ ದೇವಸ್ಥಾನದಲ್ಲಿ. ಅಂದರೆ ದೇಗುಲದ ಸಮುಚ್ಚಯದಲ್ಲಿ ಕಟ್ಟಲಾದ ಕಾವಲು ಗೋಪುರವನ್ನೇ ಇವರು ಕುತುಬ್ ಮಿನಾರ್ ಆಗಿಸಿದರಾ..   ಕುತುಬ್ ಮಿನಾರ್ ನೋಡಿ ಅಲ್ಲಿಂದ ಮುಂದೆ ಉಕ್ಕಿನ ಸ್ತಂಭ ನೋಡಲು ಹೋದಾಗ ಅದರ ಕುರುಹುಗಳು ಕಣ್ಣಿಗೆ ಕಾಣಿಸುತ್ತವೆ. ಅಷ್ಟ್ಯಾಕೆ ನಾವು ತುಳಿದುಕೊಂಡು ಹತ್ತುವ ಮೆಟ್ಟಿಲುಗಳನ್ನು ಒಮ್ಮೆ ನೋಡಿದರೂ ಸಾಕು ನಾವು ಯಾವುದರ ಮೇಲೆ ಕಾಲಿಡುತ್ತಿದ್ದೇವೆ ಎನ್ನುವ ಅರಿವಾಗುತ್ತದೆ.

ಕೇವಲ ಅಡಿಪಾಯವನ್ನಷ್ಟೇ ನಿರ್ಮಿಸಿದ್ದ ಐಬಕ್. ಅವನ ನಂತರ ಬಂದ ಇಲ್ತುಮಿಶ್ ಅದರ ಮೂರು ಅಂತಸ್ತನ್ನು ನಿರ್ಮಾಣ ಮಾಡುತ್ತಾನೆ.1368 ರಲ್ಲಿ  ನಾಲ್ಕು ಮತ್ತು ಐದನೇ ಅಂತಸ್ತನ್ನು ಕಟ್ಟಿ ಅದನ್ನು ಪೂರ್ಣಗೊಳಿಸುವುದು ಫಿರೋಜ್ ಷಾ ತುಘಲಕ್.  ಹಾಗಾಗಿ ಒಂದು ಶತಮಾನದಲ್ಲಿಶಿಲ್ಪ ಕಲೆಯಲ್ಲಿ ಆದ ಬೆಳವಣಿಗೆ ಉಪಯೋಗಿಸಿದ ವಸ್ತುಗಳ ನಡುವಿನ  ವ್ಯತ್ಯಾಸವನ್ನು  ಗಮನಿಸಬಹುದು. ಈ ನಿರ್ಮಾಣದ ಕಾರ್ಯದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವೂ ಇದೆ. ಅನ್ನೋದು ಇತಿಹಾಸ ಹೇಳುತ್ತದೆ.

ಒಳಗೆ ಹೋದರೆ ಆವರಣದಲ್ಲಿ ಕುತುಬ್ ಮಿನಾರ್ ಗಿಂತ ಹೆಚ್ಹಾಗಿ  ಆಕರ್ಷಿಸುವುದು ಅಲ್ಲಿ ನಿಂತಿರುವ ಕಬ್ಬಿಣದ ಸ್ಥಂಭ. ಶುದ್ಧ ಕಬ್ಬಿಣದಲ್ಲಿ ನಿರ್ಮಾಣವಾಗಿರುವ ಈ ಕಂಬ ಅದೆಷ್ಟು ಶತಮಾನಗಳಿಂದ ಮಳೆ ಬಿಸಿಲು ಗಾಳಿ ಚಳಿಗೆ ಮೈಯೊಡ್ಡಿ ನಿಂತರೂ ಒಂದಿನಿತೂ ಮುಕ್ಕಾಗಿಲ್ಲ. ತುಕ್ಕು ಹಿಡಿದಿಲ್ಲ. ಅದೇ ನಯ. ಅದೇ ಗಟ್ಟಿತನ. ಯಾವ ಆಕ್ರಮಣಕ್ಕೂ ಜಗ್ಗದೆ ತನ್ನತನ ಕಾಪಾಡಿಕೊಳ್ಳಬಲ್ಲೆ ಎನ್ನುವ ಆತ್ಮವಿಶ್ವಾಸವೋ ಆತ್ಮಗೌರವವೋ... ಗುಪ್ತರ ಕಾಲದಲ್ಲಿ ನಿರ್ಮಾಣವಾಗಿದ್ದೆನ್ನಲಾದ ಈ ಕಂಬ ಅವರ ದೈವವಾದ ವಿಷ್ಣುವಿಗಾಗಿ ಸಮರ್ಪಿಸಲಾಗಿತ್ತು ಎನ್ನಲಾಗುತ್ತದೆ. ಇಂದಿಗೂ ಅದರ ಮೇಲೆ ಕೆತ್ತಿದ ಶಾಸನ ಹಾಗೇ ಇದೆ. ಅಲ್ಲಿರುವ ದೇವಸ್ಥಾನಗಳನ್ನುನಾಶ ಮಾಡಿ ಆ ಕಂಬಗಳನ್ನೇ ಬಳಸಿಕೊಂಡು ಕುತುಬ್ ಮಿನಾರ್ ಆವರಣ ನಿರ್ಮಾಣವಾಗಿದೆ.

ಒಂದು ಸುತ್ತು ಹಾಕಿ ನೋಡಿದರೆ ಸಾಕು ಅಳಿದುಳಿದ ಪಳೆಯುಳಿಕೆಯಲ್ಲಿರುವ ಕಂಬಗಳು, ಅಲ್ಲಿನ ಕೆತ್ತನೆ, ಮುರಿದುಹೋದ ಅವಶೇಷಗಳ ನಡುವೆ ಕಾಣುವ ದೇವಾನುದೇವತೆಗಳ ವಿಗ್ರಹಗಳು ಅದೊಂದು ದೇಗುಲ ಸಮುಚ್ಚಯ ಎಂದು ಯಾರೂ ಹೇಳದೆ ಸಾರುತ್ತವೆ. ಭವ್ಯವಾದ ದೇಗುಲವನ್ನು ನಾಶಮಾಡಿ ಕಟ್ಟಿದ ವಿಜಯ ಸ್ತಂಭ ಬೋಳು ಬೋಳಾಗಿ ಕಾಣಿಸುತ್ತದೆ. ಬರೀ ಸ್ತಂಭವನ್ನು ನೋಡಿದಾಗ ಅಷ್ಟೇನೂ ಮನಸೆಳೆಯದ ಕೇವಲ ಎತ್ತರದಿಂದ ಮಾತ್ರ ಗುರುತಿಸಿಕೊಳ್ಳುವ ಅದು ಒಳಗಿನ ಆವರಣ ಅಲ್ಲಿನ ಭವ್ಯತೆ ನೋಡಿದಾಗ ಮಾತ್ರ ವಿಷಾದ ಕವಿಯುತ್ತದೆ. ಅಷ್ಟು ದೊಡ್ಡ ಸಾಮ್ರಾಜ್ಯದಲ್ಲಿ ವಿಜಯ ಸ್ತಂಭ ಸ್ಥಾಪಿಸಲು ಬೇರೆಲ್ಲೂ ಜಾಗವೇ ಸಿಗಲಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ.  ಅಧಿಕಾರ ಸ್ಥಾಪನೆ ಎಂದರೆ ನಿನ್ನತನವನ್ನು ಅಳಿಸಿ ಅದರ ಮೇಲೆ ನನ್ನ ಛಾಪು ಮೂಡಿಸುವುದು ಎನ್ನುವ ಮನಸ್ಥಿತಿ ಅಷ್ಟೆಯೇನೋ..

ಮುಸ್ಲಿಂ ರ ಧಾಳಿಗೆ ಸಿಕ್ಕ ದೆಹಲಿ ಹೇಗೆ ತುಳಿತಕ್ಕೆ ಸಿಲುಕಿ ತನ್ನತನ ಕಳೆದುಕೊಂಡಿದೆ ಎನ್ನುವುದು ಊಹೆಗೆ ಸ್ವಲ್ಪವಾದರೂ ದಕ್ಕಬೇಕಾದರೆ ಮೆಹರುಲಿಯನ್ನು ನೋಡಬೇಕು.  200 ಎಕರೆಗಳ ಆರ್ಕಿಲಾಜಿಕಲ್ ಪಾರ್ಕ್ ನಲ್ಲಿ ಮಾರುದ್ದಕ್ಕೆ ಒಂದರಂತೆ ಮಸೀದಿಗಳು, ಅವರ ಕಟ್ಟಡಗಳು ಕಾಣಸಿಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ನಿರ್ಮಾಣ ಯಾವುದರ ಮೇಲೆ ಆಗಿದೆ ಅನ್ನೋದರ ಕುರುಹೂ ಕಾಣಿಸುತ್ತದೆ. ತಾಳ್ಮೆ ಎನ್ನುವ ನಮ್ಮ ಸಮರ್ಥನೆಗಳೂ  ನಿಷ್ಕ್ರಿಯತೆಗೆ ಸಾಕ್ಷಿಯಾಗಿ ನಿಂತಿವೆ. ಇಷ್ಟರ ನಡುವೆಯೂ  ಪಾಂಡವರು ಸ್ಥಾಪಿಸಿದರು ಎನ್ನಲಾದ ಯೋಗಮಾಯೆಯ ಗುಡಿ ಇದೆ. ಮತ್ತು ಅಂದಿನಿಂದಲೂ ಇಂದಿನತನಕ ಪೂಜೆ ಒಂದು ಕುಟುಂಬದವರೇ ನಡೆಸಿಕೊಂಡು ಬರುತಿದ್ದಾರೆ. ಹಿಂದೂ ಧರ್ಮ ನಿರಂತರ ಹಾಗೂ ಸಂಪ್ರದಾಯ ಅನ್ನೋದು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತದೆಯೇ ಹೊರತು ಬರೆದು ಬರುವುದಲ್ಲ ಅನ್ನೋದರ ನಿದರ್ಶನವಾಗಿ.

ಅತಿ ಪುರಾತನ ರಾಜಧಾನಿಯಾಗಿದ್ದು ದೆಹಲಿಯ ಮೆಹರುಲಿ ಪಟ್ಟಣ. ಇವತ್ತಿಗೂ ಮೆಹರುಲಿಯ ಯಾವುದೇ ಮೂಲೆಗೆ ಹೋದರೂ ಯಾವುದೋ ಪಳೆಯುಳಿಕೆ ಕಣ್ಣಿಗೆ ಕಾಣುತ್ತದೆ. ಎಡವಿದ ಕಲ್ಲು ಯಾವುದೋ ಅವಶೇಷದ ಭಾಗವೇನೋ ಅನ್ನಿಸುತ್ತದೆ. ಅದೇ ಅವಶೇಷಗಳ ನಡುವೆ ಅವನ್ನು ಬಳಸಿಕೊಂಡು ಅಂಗಡಿ ಮುಗ್ಗಟ್ಟುಗಳು, ವಸತಿಗಳು ಕಟ್ಟಲ್ಪಟ್ಟಿವೆ. ಅತಿ ಪುರಾತನ ಚಾರಿತ್ರಿಕ ಹಿನ್ನಲೆ ಇರುವ ಈ ಪಟ್ಟಣ ಇವತ್ತು ಸಂದು ಗೊಂದಿಗಳ, ತೆರೆದ ಚರಂಡಿಗಳ, ಎಲ್ಲೆಂದರಲ್ಲಿ ಎಸೆದ ಕಸದ ರಾಶಿಗಳ ನಡುವೆ ಉಸಿರಾಡಲು ಏದುಸಿರು ಬಿಡುವ ಹಾಗೆ ಕಾಣುತ್ತದೆ. ಕಾಲಚಕ್ರದ ತಿರುಗುವಿಕೆಗೆ ನಿದರ್ಶನವಾಗಿ, ಏರಿದ್ದು ಇಳಿಯಬೇಕು ಅನ್ನುವುದಕ್ಕೆ ಉದಾಹರಣೆಯಾಗಿ, ಎಲ್ಲಕ್ಕಿಂತ ಯಾವುದನ್ನ ಉಳಿಸಿಕೊಳ್ಳಲು ಬಾರದ ನಮ್ಮ ನಿಷ್ಕ್ರಿಯತೆಗೆ ಸಂಕೇತವಾಗಿ.

ಇವತ್ತಿಗೂ ಹೇಗೆ ಒಂದು ಜಾಗ ಇನ್ನೊಬ್ಬರ ವಶವಾಗುತ್ತದೆ, ನಂತರ ಅದು ಅವರದೇ ಆಗುತ್ತದೆ ಅನ್ನೋದರ ಜೀವಂತ ಪ್ರಾತ್ಯಕ್ಷಿಕೆ ಹಾಗೂ ನಮ್ಮನಿಷ್ಕ್ರಿಯತೆಗೆ ನಿದರ್ಶನ ಬೇಕಾದರೆ ಒಮ್ಮೆ ಆ ಪಾರ್ಕ್ ನತ್ತ ದೃಷ್ಟಿ ಹರಿಸಿದರೆ ಸಾಕು. ಅಲ್ಲಲ್ಲಿ ಗೋಡೆ ಒಡೆದು ಒಳಗೆ ಆರಾಮಾಗಿ ಒಳಗೆ  ನುಗ್ಗಲು ಸಾಧ್ಯವಾಗುವ ಪರಿಸ್ಥಿತಿಯಿರುವ ನಮ್ಮ ದೇಶದಲ್ಲಿ ಆ ಪಾರ್ಕ್ ನ ಒಳಗೆ ಜೋಪಡಿ ಕಟ್ಟಿಕೊಂಡು ಇರುವವರು ಯಾರು ಎಲ್ಲಿಂದ ಬಂದವರು ಎಂದು ಒಮ್ಮೆ ಗಮನಿಸಿದರೆ ಸಾಕು. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

ಒಂದು ಕಾಲದಲ್ಲಿ ಕ್ಷಾತ್ರ ತೇಜಸ್ಸಿಗೆ ಹೆಸರುವಾಸಿಯಾಗಿದ್ದು ನನ್ನ ದೇಶವೇನಾ......

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...