ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ.

ಕಣ್ಣೆದೆರು ನಡೆಯುವ ತೀರಾ ಸಹಜ ಅನ್ನೋ ಘಟನೆಗಳನ್ನು ಸಹ ಅದ್ಭುತ ಕಾವ್ಯವಾಗಿ ರಚಿಸುವ ಶಕ್ತಿ ಅವರದ್ದು. ಅದನು ಓದುತ್ತಾ ಓದುತ್ತಾ ಅವರ ಬಗ್ಗೆ ಗೌರವದ ಜೊತೆಗೆ ಪರಿಚಿತ ಭಾವ ಕೂಡಾ. ಯಾವುದೊ ಒಂದು ಕಾರ್ಯಕ್ರಮದಲ್ಲಿ ಅಚಾನಕ್ ಆಗಿ ಕಾಣ ಸಿಕ್ಕಾಗ ಉತ್ಸಾಹ ಮೇರೆ ಮೀರಿತ್ತು ಓಡಿ ಹೋಗಿ ಬಡಬಡನೆ ಮಾತಾಡಿಸಿದರೆ ಅವರದ್ದು ಕಿರು ನಗು. ಆಮೇಲೆ ಯಾಕೋ ಸಣ್ಣ ಕನ್ಫ್ಯೂಷನ್ ಆಗಿ ನಾನ್ಯಾರು ಗೊತ್ತಾಯ್ತಾ ಅಂದ್ರೆ ಹೂ ಗೊತ್ತಾಯ್ತು ಅಂತ ತಲೆ ಅಲ್ಲಾಡಿಸಿದರು. ಅಷ್ಟರೊಳಗೆ ಇನ್ಯಾರೋ ಬಂದು ಮಾತಾಡಿಸಲು ಅತ್ತ ತಿರುಗಿ ಮಾತಾಡಲು ಶುರು ಮಾಡಿದರು. ಅಲ್ಲಿಯವರೆಗೆ ಹಾರಾಡುತಿದ್ದ ಬಲೂನಿಗೆ ಸಣ್ಣ ಸೂಜಿ ಚುಚ್ಚಿದಂತಾಯ್ತು. ಚುಚ್ಚಿದ್ದು ಅಹಂ ಗಾದರೂ ಬುಸುಗುಟ್ಟಿದ್ದು ಮಾತ್ರ ಕೋಪ.

ಪ್ರತಿಯೊಬ್ಬರಿಗೂ ಈ ಗುರುತಿಸುಕೊಳ್ಳುವಿಕೆಯ ಹಪಾಹಪಿ ಇದ್ದೇ ಇರುತ್ತದೆ. ಹೇಗೆ ಗುರುತಿಸಿಕೊಳ್ಳಬೇಕು? ನಾನು ಹೇಗಿದ್ದೇನೋ  ಹಾಗೆ ಅಲ್ಲಾ ಜಗತ್ತು ಹೇಗೆ ಮೆಚ್ಚಿಕೊಳ್ಳುತ್ತದೋ ಹಾಗೇ. ಹಾಗಾಗಿ ನಾಟಕ ಕಟ್ಟುವುದನ್ನು ಶುರುಮಾಡುತ್ತೇವೆ. ನಟಿಸುತ್ತಾ ನಟಿಸುತ್ತಾ ನಮ್ಮ ಮೂಲ ಸ್ವರೂಪ ಮರತೇ ಹೋಗುವ ಸಂದರ್ಭಗಳೇ ಜಾಸ್ತಿ. ಮನಸ್ಸು ಮರೆತರೂ ದೇಹ, ಒಳಗಿರುವ ಸಂಸ್ಕಾರ ಮರೆಯುವುದೆಂತು. ಅದು ತನ್ನಷ್ಟಕ್ಕೆ ತಾನು ಪ್ರಕಟಗೊಳ್ಳುತ್ತಲೇ ಇರುತ್ತದೆ. ಇರುವುದನ್ನು ಒಪ್ಪಿಕೊಳ್ಳದೆ, ಇರದದುದನ್ನು ಪೂರ್ಣವಾಗಿ ನಟಿಸಲು ಸೋಲುತ್ತಲೇ ಹೋಗುತ್ತೇವೆ. ಆಗಲೇ ಗೊಂದಲ, ಭಾರ ಎರಡೂ ಹೆಚ್ಚಿ ಒಳಗೊಂದು ಬೆಟ್ಟ ರೂಪುಗೊಳ್ಳುತ್ತಾ ಹೋಗುತ್ತದೆ.

ನಮ್ಮ ಪರಿಚಿತವಲಯದಲ್ಲಿ ನಮ್ಮ ಬಗ್ಗೆ ಬಹಳಷ್ಟು ಗೊತ್ತಿರುತ್ತದೆ. ಅಲ್ಲಿ ನಾವು ನಮಗನ್ನಿಸಿದ್ದನ್ನು ಮಾಡಲಾರೆವು. ಹಾಗಾಗಿ ಒಳಗೊಳಗೇ ಅದುಮಿಕೊಳ್ಳುತ್ತಾ, ಚಿತ್ರಿತವಾಗಿರುವ ಚಿತ್ರಣವನ್ನು ಕಾಪಾಡಿಕೊಳ್ಳಲು ಹೆಣಗಾಟ ನಡೆಯುತ್ತದೆ. ಹಾಗಾಗಿ ಅಪರಿಚಿತ ಊರು ಕೈ ಬೀಸಿ ಕರೆಯುತ್ತದೆ. ಅಲ್ಲಿ ನಾವ್ಯಾರು ಎಂದು ಯಾರಿಗೂ ಗೊತ್ತಿಲ್ಲ, ಅವರ ಅಭಿಪ್ರಾಯ ಕಟ್ಟಿಕೊಂಡು ನಮಗೆ ಏನೂ ಆಗಬೇಕಿಲ್ಲ. ಅಲ್ಲಿ ನಾವು ನಾವಾಗಿರಬಹುದು. ಸ್ವಚ್ಚಂದವಾಗಿ ಹಾರಾಡಬಹುದು. ಹಾಗೆ ಹಾರಾಡುವ ಹೊತ್ತಿಗೆ ಯಾರೂ ಪರಿಚಯದವರು ಕಾಣಬಾರದು. ಕಂಡರೆ ಮತ್ತೆ ಜೀವ ಚಡಪಡಿಸುತ್ತದೆ. ನಟಿಸುವುದೂ ಅದೆಷ್ಟು ಕಷ್ಟ. ಆದರೂ ಇಷ್ಟ. ಗುರುತಿಸಿಕೊಳ್ಳಬೇಕು ಅನ್ನೋ ತೀವ್ರತೆ ಇರುವಷ್ಟೇ ನಿರ್ಲಕ್ಷ್ಯವೂ ಬೇಕು ಬದುಕಿಗೆ. ಎಂಥಹಾ ವಿಪರ್ಯಾಸ.

ಬದುಕಿನ ಗಟ್ಟಿ ಅನುಭವಗಳು, ಅನೂಹ್ಯಭಾವಗಳು ಯಾವುದೂ ಗೊತ್ತಿದ್ದು ಆಗುವುದಿಲ್ಲ.ಹಾಗೆ ಗೊತ್ತಿದ್ದೂ ಆಗುವ ಅನುಭವ ಮನಸ್ಸಿನಲ್ಲಿ ಉಳಿಯುವುದೂ ಇಲ್ಲ. ಹೀಗೆ ಆಗುತ್ತೆ ಅಂದುಕೊಂಡು ಕಾಯುವಾಗ ನಿಜವಾಗಲೂ ಘಟಿಸಬೇಕಾದದ್ದು ಘಟಿಸುವುದಿಲ್ಲ. ಇದ್ದದ್ದನ್ನ ಇದ್ದ ಹಾಗೆ ನೋಡು, ಸ್ವೀಕರಿಸು ಅಂತ ಸದ್ಗುರು ಒಂದು ಕಡೆ ಹೇಳ್ತಾರೆ. ನಾವು ಯಾವುದನ್ನಾದರೂ ಇದ್ದ ಹಾಗೆಯೇ  ನೋಡುತ್ತೆವಾ ಅಂತ ಪ್ರಶ್ನಿಸಿಕೊಂಡರೆ ಉತ್ತರ ಬಹಳಷ್ಟು ಸಾರಿ ನಕಾರಾತ್ಮಕವಾಗಿಯೇ ಬರುತ್ತದೆ. ಸಂಗ್ರಹಗೊಂಡ ಪ್ರತಿ ಅನುಭವವೂ ಮನಸ್ಸಿನೊಳಗೆ ಕುಳಿತು ಪೂರ್ವಾಗ್ರಹವೆಂಬ ಕನ್ನಡಕವನ್ನು ತಯಾರಿಸಿರುತ್ತದೆ. ಪ್ರತಿಯೊಂದನ್ನೂ ಕಣ್ಣು ಅದನ್ನು ಧರಿಸಿಕೊಂಡೆ ನೋಡುತ್ತದೆ. ಹಾಗಾಗಿ ಬುದ್ಧಿವಂತಿಕೆಯಿಂದ ಅಂದುಕೊಂಡಿದ್ದನ್ನು ಪಡೆಯಬಹುದೇ ಹೊರತು ಹೊಸತನ್ನು ಪಡೆಯಲಾರೆವು.

ಹಾಗಾದರೆ ನೋಡುವ ನೋಟ ಹೇಗಿರಬೇಕು? "ಇನ್ನೊಬ್ಬರ ಕಣ್ಣಿನಿಂದ,ಲೋಕದ ಕಣ್ಣಿನಿಂದ ನಮ್ಮನ್ನು ನಾವು ನೋಡೋದು,ಲೋಕ  ನಮ್ಮನ್ನು ಹೇಗೆ ಕಾಣಬೇಕೆಂದು ನಾವು ಬಯಸುವೇನೋ ಹಾಗೆ ಲೋಕಕ್ಕೆ ನಮ್ಮನ್ನು ತೋರಿಸೋದು; ತೋರಿಸುವ ಪ್ರಯತ್ನ ಮಾಡೋದು. ನಮ್ಮದೇ ಕಣ್ಣಿನಿಂದ ನಾವು ನಮ್ಮನ್ನು ನೋಡೋದೇ ಇಲ್ಲ ಅಲ್ಲವೇ" ಕೇಳಲು ಒರಟೆನಿಸಿದರೂ ಇದು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆ. ಲೋಕವೇ ಹೀಗಿದೆ ಅನ್ನೋದು ಅದನ್ನ ಸಮರ್ಥಿಸಿಕೊಳ್ಳುವ ಉತ್ತರ ಅಷ್ಟೇ. ನಮ್ಮ ಪ್ರತಿಯೊಂದು ನಡತೆಯೂ ಹೇಗಿರಬೇಕು ಅನ್ನುವುದರ ಬದಲಿಗೆ ಸಮಾಜ ಹೇಗಿದೆ ಅನ್ನುವುದರ ಮೇಲೆ ನಿರ್ಧಾರವಾಗುತ್ತಾ ಹೋಗುತ್ತದೆ. ಸತ್ಯ ಕಹಿ ಅದನ್ನು ಒಪ್ಪಿಕೊಳ್ಳುವುದು, ಅಪ್ಪಿಕೊಳ್ಳುವುದು ಅಷ್ಟು ಸುಲಭವೇ...

ಜಗತ್ತು ಪ್ರತಿಯೊಂದನ್ನೂ ಪ್ರಶ್ನಿಸುತ್ತದೆ. ಪ್ರಶ್ನಿಸುವುದು ಅದರ ಮೂಲಭೂತ ಹಕ್ಕೇನು ಅನ್ನುವ ಹಾಗೆ. ಜಗತ್ತು ಎಂದರೆ ಅದರಲ್ಲಿ ನಾನೂ ಇದ್ದೇನೆ ಅನ್ನೋದು ಮರೆಯುವ ನಾವು ಕೆಲವು ಪ್ರಶ್ನೆಗಳು ಎದುರಾದಾಗ ಬೆಚ್ಚಿ ಬೀಳುತ್ತೇವೆ, ಕೋಪಗೊಳ್ಳುತ್ತೇವೆ. ಆದರೆ ಉತ್ತರಿಸಲೇ ಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಯಾಕೆಂದರೆ ಅದನ್ನು ಮೀರಿ ನಾವು ಬದುಕಲಾರೆವು. ಲೋಕದ ಹಂಗು ತೊರೆದು ಬದುಕುವುದು ಭ್ರಮೆ ಹರಿಯದೆ, ಅರಿವು ಮೂಡದೆ ಸಾಧ್ಯವಿಲ್ಲ. ಆದರೆ ಸಮಾಜಕ್ಕೆ ತೃಪ್ತವಾಗುವಂತೆ ಬದುಕುವುದು, ಮತ್ತು ಉತ್ಕಟವಾಗಿ ಬದುಕುವುದು ಎರಡೂ ಪರಸ್ಪರ ಕೂಡುವುದಿಲ್ಲ. "ಲೋಕವನ್ನು ಒಪ್ಪಿ ಬದುಕಿದಷ್ಟೂ ಲೋಕದ ಪ್ರಭಾವಕ್ಕೆ ಒಳಗಾಗಿರುತ್ತಾನೆ. ಪ್ರಭಾವಕ್ಕೆ ಒಳಗಾದಷ್ಟೂ ಒಳಗಿನ ಸ್ವಂತಿಕೆ ಕುಗ್ಗಿರುತ್ತದೆ". ಲೋಕಕ್ಕೆ ಅಂಜುವವನು ಅಂದರೆ ಮತ್ತೇನಿಲ್ಲ ತನಗೆ ತಾನೇ ಅಂಜುವವನು ಎಂದರ್ಥ.

ಆದರೆ ಯಾವುದನ್ನಾದರೂ ಬಹಳಷ್ಟು ಕಾಲ ಅದುಮಿಡಲು ಸಾದ್ಯವಿಲ್ಲ. ಅದು ಒಳಗೆ ಕುದಿಯುವ ಅಗ್ನಿಪರ್ವತದಂತೆ. ಒಮ್ಮೆ ಸ್ಪೋಟಿಸಲೇ ಬೇಕು. ಹಾಗಾಗಿ ಅರಿವು ಮೂಡಬೇಕೇ ಹೊರತು ಬಲವಂತದ ತುಳಿತವಾಗಬಾರದು. ಒಪ್ಪಿಕೊಳ್ಳುವ ಧೈರ್ಯವಿರುವಂತೆ ಧಿಕ್ಕರಿಸುವ ಧೈರ್ಯ ಕೂಡಾ ಇರಬೇಕು. ಜಗತ್ತಿನಲ್ಲಿ ಪರಸ್ಪರ ವಿರೋಧವೆನ್ನಿಸುವ ಎಲ್ಲಾ ಗುಣಗಳು ಬದುಕಿನಲ್ಲಿ ಎಷ್ಟೊಂದು ಪೂರಕ.  ಒಂದನ್ನೊಂದು ಬಿಟ್ಟು ಇರಲಾರದಷ್ಟು ಅನ್ಯೋನ್ಯ ಬಂಧ. ಹಾಗಾದರೆ ಯಾವುದನ್ನ ಅಪ್ಪಬೇಕು, ಯಾವುದನ್ನ ಬಿಡಬೇಕು. ಇಲ್ಲಿ ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವೂ ಅಲ್ಲ ಅನ್ನೋ ಸಾಲು ಹುಟ್ಟುವುದು ಇಂಥಹ ದಿವ್ಯ ಗಳಿಗೆಯಲ್ಲಿಯೇ ಏನೋ..

ಒಮ್ಮೆ ನಾವಾಡುವ ಮಾತುಗಳನ್ನು ಹಾಗೆ ದಿಟ್ಟಿಸಿದರೆ ಅಲ್ಲಿ ಸಮರ್ಥನೆಗಳೇ ಹೆಚ್ಚಾಗಿ ಕಾಣುತ್ತದೆ. ಬದುಕಿಗೆ ಇಷ್ಟೊಂದು ಸಮರ್ಥನೆಗಳು ಬೇಕೇ? "ನಿಜಕ್ಕಾದರೆ ಸಮರ್ಥನೆಯ ಭಾರ ಇಲ್ಲದೆ ಬದುಕು ಇರಬಲ್ಲದು. ಹಾಯಾಗಿ ಇರಬಲ್ಲದು. ಆದರೆ ಸಮರ್ಥನೆ ಇಲ್ಲದೆ ನಮಗೆ ಇರಲಾಗುವುದಿಲ್ಲ. ಹಾಯಾಗಿ ಇದ್ದರೂ ಅದಕ್ಕೊಂದು ಸಮರ್ಥನೆ ಬೇಕು , ಇಲ್ಲದಿದ್ದರೆ ಹೇಗೂ ಬೇಕೇ ಬೇಕಲ್ಲ." ಸಮರ್ಥನೆ ಯಾವಾಗ ಅನಿವಾರ್ಯ ಅನ್ನಿಸುತ್ತದೆ. ಇನ್ನೊಬ್ಬರು ನಮ್ಮನ್ನು ನಂಬದಿದ್ದಾಗ ಮಾತ್ರವೋ ಅಥವಾ ನಮ್ಮನ್ನು ನಾವು ನಂಬಿಸಿಕೊಳ್ಳಲೋ.. ಲೋಕ ಒಪ್ಪಬೇಕು ಅಂದುಕೊಳ್ಳುವ ಭ್ರಮೆಯಲ್ಲಿ ನಮ್ಮನ್ನು ನಾವು ನಿರಾಕರಿಸಿಕೊಳ್ಳುತ್ತಾ ಹೋಗುತ್ತೇವಾ. ಬೇರೆಯವರು ನಮ್ಮನ್ನು ನಿರಾಕರಿಸಿದಾಗ ಆಗುವ ಅವಮಾನ ನೋವು ನಮ್ಮನ್ನು ನಾವು ನಿರಾಕರಿಸಿಕೊಂಡಾಗ ಯಾಕಾಗುವುದಿಲ್ಲ, ಹಾಗಾದರೆ ನಾವು ಬದುಕುವುದು ಜಗತ್ತಿಗಾಗಿಯಾ ನಮಗಾಗಿಯಾ..
ಪ್ರಶ್ನೆ ಕೇಳಿಕೊಳ್ಳಲು ಭಯವಾಗಿ ನಾವು ನಮ್ಮನ್ನು ಪ್ರಶ್ನಿಸಿ ಕೊಳ್ಳುವುದನ್ನು ಬಿಟ್ಟು ಲೋಕವನ್ನು ಪ್ರಶ್ನಿಸುವುದೇನೋ..

ನಮಗೆ ನೋಯುವುದು ಬೇಕಿಲ್ಲ, ಇನ್ನೊಬ್ಬರು ನೊಂದರೆ ಪರವಾಗಿಲ್ಲ. ಹಾಗಾಗಿ ಅವರವರ ಪಾಡಿಗೆ ಅವರವರನ್ನು ಬಿಡಬೇಕು ಎನ್ನುವ ಲೋಕೋದ್ಧಾರದ ಮಾತಾಡುತ್ತಲೇ ನಮ್ಮನ್ನು ನಮ್ಮ ಪಾಡಿಗೆ ಬಿಡಿ ಎನ್ನುತ್ತೇವೆ. ನನ್ನ ಪಾಡಿಗೆ ನಾವಿರಬೇಕು ಎನ್ನುವ ಹಂಬಲದಲ್ಲಿ ಕೇವಲ ನಮ್ಮ ಬದುಕು ಮಾತ್ರಯೋಚಿಸುತ್ತೇವೆ. ಹಾಗಾದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುತ್ತೆವಾ... ಅದೂ ಇಲ್ಲ. ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲಾರೆವು, ಪ್ರಶ್ನೆ ಮಾಡದೆ ಉತ್ತರವೆಂತು.. ಉತ್ತರವಿಲ್ಲದೆ ನಾನು ಅರ್ಥವಾಗುವುದು ಹೇಗೆ? ಇಷ್ಟರ ಮಧ್ಯೆ ಲೋಕ ಪ್ರಿಯನಾಗುವ ಭ್ರಮೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳದೆ ಇನ್ನೊಬ್ಬರನ್ನು ಪ್ರೀತಿಸಲು ಸಾಧ್ಯವೇ...  ಒಳಗಿದ್ದದ್ದು ಮಾತ್ರ ಹೊರಗೆ ವ್ಯಕ್ತವಾಗೋದು ತಾನೇ.

ಹಾಗಾಗಿ ಇನ್ನೊಬ್ಬರ ಕೋಪ, ದ್ವೇಷ, ಪ್ರೀತಿ, ಸಂಕಟ ನೋವು ಯಾವುದೇ ಭಾವವಿರಲಿ ಅದು ನಮ್ಮೊಳಗೇ ಇದ್ದಾಗ ಮಾತ್ರ ಅರ್ಥವಾಗುತ್ತದೆ. ವ್ಯಕ್ತವಾಗಿದ್ದು ಮಾತ್ರ ಇದೆ ಅಂತಲ್ಲ. ಯಾವುದೆಲ್ಲಾ ಇದೆಯೋ ಅದರ ಪ್ರತಿಫಲನ ಮಾತ್ರ  ಆಗೇ ಆಗುತ್ತೆ. ಇದು ಅರ್ಥವಾಗಬೇಕಾದರೆ ನಾವು ಮೂರನೇಯವರಾಗಿ ನೋಡಬೇಕು. ಆಗ ಸರಿಯಾಗಿ ಅರ್ಥವಾಗುತ್ತದೆ. ಯಾವುದೇ ವಿಷಯವಾಗಲಿ, ವ್ಯಕ್ತಿಯಾಗಲಿ ನಾವು ಸಂಬಂಧಿತರಾಗಿದ್ದರೆ ಒಂದೋ ಪರವಾಗುತ್ತೇವೆ ಇಲ್ಲಾ ವಿರೋಧಿಯಾಗುತ್ತೇವೆ. ಮತ್ತದೇ ಕನ್ನಡಕದ ದೃಷ್ಟಿ. ಪರವೂ ವಿರೋಧವೂ ಇಲ್ಲದ ದೃಷ್ಟಿ ನಮ್ಮದಾಗಬೇಕೆಂದರೆ ಹೊರನಿಂತು ನೋಡಬೇಕು. ಹೊರನಿಂತಾಗ ನಾವು ಬೇರೆಯವರೇ ಅಲ್ಲವೇ. ಅರೆ ಎಷ್ಟು ಸುಲಭವಲ್ಲವಾ ಮೂರನೇ ವ್ಯಕ್ತಿಯಾಗುವುದು. ಹೊರಬಂದರೆ ಸಾಕು. ಆದರೆ ನಮಗೆ ಬಂಧನವೇ ಇಷ್ಟ. ಬಯಲು ಭಯ ಹುಟ್ಟಿಸುತ್ತದೆ. ಬಂಧನದಲ್ಲಿದ್ದು ಬಯಲಿನ, ಬಯಲಿನಲ್ಲಿ ನಿಂತು ಬಂಧನದ ಕನಸು ಕಾಣುವವರು ನಾವು. ಹಾಗಾದರೆ ಇರುವುದಕ್ಕಿಂತ ಇರದುದೆಡೆಗೆ ಅಂದರೆ ನಾವು ಕಂಡದ್ದಕ್ಕಿಂತ ಕಾಣದುದರೆಡೆಗೆ ಮನಸ್ಸು ತುಯ್ಯುತ್ತದೆಯೇ...

ಹೌದು ಯಾಕೆಂದರೆ ನಮಗೆ ಕೇವಲ ಪ್ರತಿಫಲ ಅಷ್ಟೇ ಮುಖ್ಯ, ಪ್ರತಿಫಲನವಲ್ಲ.  ಪ್ರತಿಫಲ ಎಂದರೆ ನಾವು ಏನು ಬಯಸಿದೆವೋ ಅದು, ಪ್ರತಿಫಲನವೆಂದರೆ ನಮ್ಮಲ್ಲಿ ಏನಿದೆಯೋ ಅದು. ಮತ್ತಲ್ಲಿಗೆ ಬಂದು ನಿಂತ ಹಾಗಾಯಿತು. ನಾವು ಏನಿದ್ದೆವೋ ಅನ್ನುವುದಕ್ಕಿಂತ ಜಗತ್ತು ಯಾವುದನ್ನು ಗೌರವಿಸುತ್ತದೆಯೋ ಹಾಗೆ ಬದುಕುವುದು. ಅಲ್ಲಿಗೆ ನಾವು ಮೋಸ ಮಾಡುತ್ತಿರುವುದು ಜಗತ್ತಿಗೋ ಅಥವಾ ನಮಗೋ.. ಮೋಸ ಅಂದ ಕೂಡಲೇ ನೆನಪಾಗುವುದು ನಾವು ಮೋಸ ಹೋದ ಕತೆ, ವ್ಯಥೆ. ಯಾರನ್ನೋ ನಂಬಿದ್ದೇವೆ ಅವರು ನಮ್ಮನ್ನು ಅರ್ಥಮಾಡಿಕೊಳ್ಳಲೇ ಇಲ್ಲ ಅನ್ನುವ ನೋವು, ಸಂಕಟ. ಅವರು ಅರ್ಥ ಮಾಡಿಕೊಳ್ಳಲಿಲ್ಲವೋ ಅಪಾರ್ಥ ಮಾಡಿಕೊಂಡರೋ... ಎರಡೂ ಬೇರೆ ಬೇರೆಯೇ.. ಅರ್ಥವಾಗದಿದ್ದರೂ ಪರವಾಗಿಲ್ಲ ಅಪಾರ್ಥ ಮಾಡಿಕೊಳ್ಳದಿದ್ದರೆ ಸಾಕು ಅನ್ನೋದೂ ಸಹ ನಮ್ಮ ದೈನ್ಯ ಕೊರಿಕೆಯೇ.

ಹಾಗಾದರೆ ಅರ್ಥ ಮಾಡಿಕೊಳ್ಳುವುದು ಅಂದರೆ ಏನು? ಮತ್ತೆ ಅದೇ ಉತ್ತರ ಸಿಗುತ್ತದೆ. ನಾನು ಹೇಗಿದ್ದೇನೋ ಹಾಗೆ ಅರ್ಥ ಮಾಡಿಕೊಳ್ಳಬೇಕು ಅನ್ನುವುದಕ್ಕಿಂತ ನೀನು ನನ್ನನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನಾನು ಬಯಸಿದ್ದೇನೋ ಹಾಗೆ ನೀನು ಅರ್ಥಮಾಡಿಕೊಳ್ಳಲಿಲ್ಲ ಅನ್ನುವ ಕೋಪ.  ಹಾಗಾದರೆ ಹೇಗೆ ಅರ್ಥಮಾಡಿಕೊಳ್ಳಬೇಕಿತ್ತು ಅಂದರೆ ಮತ್ತೆ ಅಲ್ಲಿಗೆ ಬರುತ್ತೇವೆ ಪ್ರತಿಫಲ. ನನ್ನಲ್ಲಿ ಏನಿದೆಯೋ ಅದಲ್ಲ ಏನಿಲ್ಲವೋ ಅದರ ಹಾಗೆ. ಅಂದರೆ ಲೋಕ ಮೆಚ್ಚುವ ಹಾಗೆ. ಹಾಗಾದರೆ ನಾವು ಇನ್ನೊಬ್ಬರನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ? ನಮಗೆ ಅವರು ವ್ಯಕ್ತವಾದ ಹಾಗೋ ಇಲ್ಲಾ ಅವರು ಭಾವಿಸಿದ ಹಾಗೋ..

 ಅಧಿಕಾರ ಚಲಾಯಿಸೋದು ನಮ್ಮ  ಮೂಲಭೂತ ಗುಣಗಳಲ್ಲಿ  ಒಂದು. ಒಂದು ಸಂಬಂಧ ಸ್ಥಾಪಿತವಾಗುತಿದ್ದ ಹಾಗೆ ಅಲ್ಲೊಂದು ಅಧಿಕಾರವೂ ಸ್ಥಾಪಿತವಾಗುತ್ತದೆ. ಹೀಗೆ ಅರ್ಥ ಮಾಡಿಕೊಳ್ಳಬೇಕು, ಹೀಗೆ ನಡೆದುಕೊಳ್ಳಬೇಕು, ಹೀಗೆ ವರ್ತಿಸಬೇಕು. ನನ್ನ ಇಚ್ಚೆಗೆ ತಕ್ಕಂತೆ ಆಕಡೆಯಿಂದ ವರ್ತನೆ ಇಲ್ಲವಾದರೆ ತಕ್ಷಣ ಗೊತ್ತಾಗುತ್ತದೆ. ತಕ್ಕಡಿ ಕೈಯಲ್ಲೇ ಇರುತ್ತದಲ್ಲ. ಆಗ ಶುರುವಾಗೋದೇ ನಂಬಿಕೆ, ದ್ರೋಹ, ವಿಶ್ವಾಸ ಘಾತುಕತನ ಅನ್ನೋ ಭಾವಗಳು. ನನ್ನ ಅಧಿಕಾರ ಇದ್ದ ಹಾಗೆ ಅವರಿಗೂ ಅಧಿಕಾರ ಮನೋಭಾವನೆ ಇರುತ್ತದಲ್ಲ ಅನ್ನೋ ಸಣ್ಣ ಯೋಚನೆ ಕಾಡುವುದಿಲ್ಲವಾ ಅಂದರೆ ಉಹೂ ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಅಷ್ಟೇ. ಒಪ್ಪಿಕೊಂಡಾಗ ದಾಸ ಭಾವ. ದಾಸನಾಗಬೇಕೆಂದರೆ ಒಪ್ಪಿಕೊಳ್ಳಬೇಕು, ಬಿಟ್ಟುಕೊಡಬೇಕು. ಬದುಕು ಅದಿದ್ದಂತೆ ಅರ್ಥವಾಗಬೇಕು. ಇವೆಲ್ಲಕ್ಕೂ ಧೈರ್ಯ ಬೇಕು. ಹಾಗಾದರೆ ನಾವು ಹೇಡಿಗಳೇ.. ಖಂಡಿತ ಹೌದು ಧೈರ್ಯದ ಮುಸುಕು ಹೊದೆಯುತ್ತೇವೆ ಅಷ್ಟೇ... ಯಾಕೀ ನಾಟಕ ಮತ್ತದೇ ಸಮರ್ಥನೆ ಈ ಜಗತ್ತಿಗಾಗಿ.

ಹಾಗಾದರೆ ಬದುಕು ಅರ್ಥವಾಗುವುದು ಯಾವಾಗ ಲಕ್ಷ್ಯ ದಟ್ಟವಾದಾಗ, ಹಾಗೆ ಲಕ್ಷ್ಯ ದಟ್ಟವಾಗುವುದು ಯಾವಾಗ ಎಂದರೆ ದಿವ್ಯ ನಿರ್ಲಕ್ಷ್ಯ ನಮ್ಮನ್ನು ಆವರಿಸಿಕೊಂಡಾಗ. ಹಾಗಾದಾಗ ಸತ್ಯ ಹೊಳೆಯುತ್ತದೆ. ಅದು ತಾನಾಗಿ ಹೊಳೆಯಬೇಕು ನಮ್ಮ ಬಲವಂತಕ್ಕೆ ಅದು ದಕ್ಕುವುದಿಲ್ಲ. ಅದು ಹೊಳೆಯಬೇಕಾದರೆ ನಾವು ಬಯಲಾಗಬೇಕು. ಸುತ್ತ ಗೋಡೆಗಳನ್ನು ಕಟ್ಟಿಕೊಂಡು ರಕ್ಷಣೆಯ ಭಾವದಲ್ಲಿರುವ ನಾವು ಈ ಗೋಡೆಗಳನ್ನು ಕೆಡವಿ ಬಯಲಿಗೆ ಬರಬಲ್ಲೆವಾ.. ಅಷ್ಟು ಧೈರ್ಯವಿದೆಯಾ.. ಆ ಧೈರ್ಯ ಎಲ್ಲಿಂದ ಕೇಳಿದರೆ ಅದು ಇಲ್ಲೇ ಇದೆ ಒಳಗಿದೆ. ಅದು ಕಾಣಬೇಕಾದರೆ ಪೂರ್ವಾಗ್ರಹದ ಕನ್ನಡಕ ಕಳಚಬೇಕು. ನಾನು ನಾನಾಗಬೇಕು. ಆಗ ಅನುಭವವಾಗುತ್ತದೆ. ಮಾತು ಸ್ತಬ್ಧವಾಗಿ ಮೌನ ರಾಜ್ಯವಾಳುತ್ತದೆ. ಹುಟ್ಟುವುದು ಮೌನದಲ್ಲಿ ಸಾಯಲಷ್ಟೇ ಶಬ್ದ. ನಾನು ಅಳಿಯುವುದು ಅಷ್ಟು ಸುಲಭವೇ... ಹಾಗಾದರೆ ನಾನು ಅಳಿದ ಮೇಲೆ ಅಸ್ತಿತ್ವವಿದೆಯೇ..

ನಾನು ಅಳಿದಾಗ ಮಾತ್ರ ಈ ದೇಹ ಹಾಗೂ ಪ್ರಕೃತಿ ಬೇರೆಯಲ್ಲ ಅನ್ನೋ ಸತ್ಯ ಅರಿವಾಗುತ್ತೆ. ಬೇರೆಯಲ್ಲ ಅಂದಾಗ ಮಾತ್ರ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳ ಜೊತೆಗೂ ನಮಗೊಂದು ಅನುಬಂಧ ಇದೆ ಅನ್ನೋದರ ಅರಿವಾಗುತ್ತೆ. ಎಲ್ಲರೂ ಒಂದೇ ಅಂದ ಮೇಲೆ ಮೇಲು ಕೀಳು, ಮನುಷ್ಯ ಪ್ರಾಣಿ ಅನ್ನೋ ಭೇಧವೆಲ್ಲಿ? ಇದನ್ನೇ ಅಲ್ಲವೇ ಶಂಕರರು ಅಹಂ ಬ್ರಹ್ಮಾಸ್ಮಿ ಅಂದಿದ್ದು. ಹಾಗಾದಾಗ ಮಾನವ ಧರ್ಮ, ಆ ಧರ್ಮ, ಈ ಧರ್ಮ ಅನ್ನೋ ವಿಂಗಡಣೆ ಯಾಕೆ? ಯಾಕೆಂದರೆ ನಾವು ಯಾವುದನ್ನೂ ನಂಬಲಾರೆವು. ನಮ್ಮ ನಂಬಿಕೆ ಅಡಿಯಲ್ಲಿ ಒಂದು ಅಪನಂಬಿಕೆಯ ಸುಳಿ ಸುತ್ತತ್ತಲೇ ಇರುತ್ತದೆ. ನಾವೂ ದೇವರನ್ನೇ ಪೂರ್ಣವಾಗಿ ನಂಬುವುದಿಲ್ಲ, ಇನ್ನುಳಿದವರು ಯಾವ ಲೆಕ್ಕ.

ಲೋಕ ನಮ್ಮನ್ನು ಒಪ್ಪಬೇಕು ಎನ್ನುವ ಹಂಬಲದಲ್ಲಿ ನಮ್ಮನ್ನು ನಾವು ಕಳೆದುಕೊಂಡಿದ್ದು ನಿಜವೇ ಆದರೂ ನಿಸರ್ಗದ ಸನ್ನಿಧಿಯಲ್ಲಿ ನಿಂತಾಗ ಎಲ್ಲ ಭಾರಗಳಿಂದ ಕಳಚಿಕೊಂಡ ಅನುಭವವಾಗುವುದು ಅಷ್ಟೇ ನಿಜ. ಯಾಕೆ ಹೀಗಾಗುತ್ತೆ ಅಂದರೆ ಅದಕ್ಕೆ ನಮ್ಮಿಂದ ಯಾವ ನಿರೀಕ್ಷೆಯೂ ಇರುವುದಿಲ್ಲ, ನೀರಿಕ್ಷಿಸಲು ಅದು ನಮ್ಮಿಂದ ಬೇರೆಯಾಗಿಲ್ಲ. ಹಾಗಾಗಿ ಅದರ ಎದುರು ನಮ್ಮ ಪಾಡಿಗೆ ನಾವಿದ್ದಂತೆ ಇನ್ನೂ ನೇರವಾಗಿ ಹೇಳಬೇಕಾದರೆ ನನ್ನನ್ನೂ ನಾನು ಮರೆತಂತೆ. ನನ್ನನ್ನು ನಾನು ಮರೆತಾಗ ಮಾತ್ರ ಇನ್ನೊಂದರ ಅನುಭವವಾಗೋದು ತಾನೇ.

ತೋಳ್ಪಾಡಿಯವರ  ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಓದಿ ಕೆಳಗಿಡುವಾಗ ಸಹ ಇದೇ ಅನುಭವವಾಗುತ್ತದೆ. ಒಳಗಿನ ಬೆಟ್ಟ ಇಂಚಿಂಚೆ ಸರಿದು ಮನಸ್ಸು ಹಗುರವಾಗುತ್ತದೆ. ಕಣ್ಣಿನ ಭ್ರಮೆ ಕಿಂಚಿತ್ತಾದರೂ ಹರಿದು ದಾರಿ ಮೊದಲಿಗಿಂತ ಸ್ಪಷ್ಟವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಜಗತ್ತಿನ ಬಗೆಗಿನ ದೂರು ಕಡಿಮೆಯಾಗುತ್ತದೆ. ಸಂಗ್ರಹ ಕಡಿಮೆಯಾದಷ್ಟೂ ಹೊಸತನ ಕೂಡಿಕೊಳ್ಳಬಹುದೇನೋ ಅನ್ನುವ ಯೋಚನೆ ಸುಳಿಯುವಾಗ ಮರೆಯಾಗಿದ್ದ ನೆನಪಿಗೆ ಬಾರದಿದ್ದ  ಹದಿವಯಸ್ಸು ಮರೆಯಾಗುವ ಹೊತ್ತಿನಲ್ಲಿ ಕಾಣ ಸಿಕ್ಕಿದ್ದ ಪುತ್ತೂರು ಅಜ್ಜನ ಮುಖ ಎದುರಿಗೆ ಬಂದು ಅವರ ನಗು ಪ್ರತಿಫಲಿಸಿದಂತಾಯಿತು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...