ಕೇಪಿನ ಡಬ್ಬಿ.

ಕುಗ್ರಾಮವೆನ್ನಬಹುದಾದ ಎಲ್ಲಾ ಲಕ್ಷಣಗಳೂ ಇದ್ದ ಪುಟ್ಟ ಊರದು. ಎರಡು ಕೈ ಬೆರಳುಗಳ ಸಹಾಯದಿಂದ ಎಣಿಸಬಹುದಾದಷ್ಟು ಮನೆಗಳು. ಅವುಗಳ ಎದುರಿಗೆ ಹರಡಿದ ಗದ್ದೆಯ ಕೋಗು, ಅಂಚಿನ ಬದಿಯಲ್ಲಿ ವಯ್ಯಾರವಾಗಿ ಹರಿಯುತಿದ್ದ ಹೆಸರಿಲ್ಲದ ಹಳ್ಳ. ಬೇಸಿಗೆಯ ಧಗೆಗೆ ತಣ್ಣಗಿದ್ದರೂ ಮಳೆ ಬಂದ ಕೂಡಲೇ ಅಬ್ಬರಿಸುತಿತ್ತು. ಅಲ್ಲಿಯವರೆಗೂ ಅದರ ಎದೆಯ ಮೇಲೆ ಪಾದ ತೊಯ್ಯಿಸಿಕೊಂಡು ನಡೆಯುತಿದ್ದ ಎಲ್ಲರ ಮೇಲೂ ಮುನಿಸಿಕೊಂಡಿತೇನೋ ಎಂಬಂತೆ ಉಕ್ಕಿ ಹರಿಯುತಿತ್ತು. ಯಾರಿಗೂ ಆಚೆ ದಾಟಲಾಗದಂತೆ ನಿರ್ಬಂಧ ಹಾಕುತಿತ್ತು. ಒಂದು ಬೆಂಕಿ ಪೊಟ್ಟಣ ಬೇಕಾದರೂ ಐದು ಮೈಲಿ ಆಚೆ ಇರುವ ಪೇಟೆಗೆ ಒಂದು ಹಳ್ಳ ದಾಟಿ, ಕಾಡ ನಡುವಿನ ಮಣ್ಣ ಹಾದಿಯಲ್ಲಿ ನಡೆದು ಅದರ ಸೆರಗಿನಂಚಿನ ಬಯಲು ದಾಟಬೇಕಿತ್ತು.  ಹಾಗಾಗಿ ಯಾರಾದರೂ ಊರಿಗೆ ಬಂದರೆ ಸಂಭ್ರಮ. ಬರಲಿ ಎಂದು ಕಾಯುತಿದ್ದ ದಿನಗಳವು. ಅದರಲ್ಲೂ ದೀಪಾವಳಿಯ ಸಮಯದಲ್ಲಿ ಮಾಸ್ತಿಕಟ್ಟೆಯಿಂದ ಬರುತಿದ್ದ ಕಿಟ್ಟಣ್ಣ ಮಾವ ನಮ್ಮ ಪಾಲಿಗೆ ದೇವರ ಸ್ವರೂಪ.

ಅವನು ತರುತಿದ್ದ ಸುರ್ ಸುರ್ ಬತ್ತಿ, ಹನುಮಂತನ ಬಾಲ, ಸಣ್ಣ ಪಟಾಕಿ ಹಾಗೂ ಕೇಪಿನ ಡಬ್ಬಿಗಳು ನಮ್ಮ ಪಾಲಿನ ವರಗಳು. ಅವನನ್ನು ಗೇಟಿನ ಒಳಗೂ ಬರಲು ಬಿಡದಂತೆ ಅಲ್ಲೇ ಕಾದು ಅವನ ಕೈಯಿಂದ ತೆಗೆದುಕೊಂಡು ಎನ್ನುವುದಕ್ಕಿಂತ ಕಸಿದುಕೊಂಡು ಅವನಿಗಿಂತ ಮೊದಲು ಓಡಿ ಬರುತಿದ್ದೆವು. ಅಂಗಳದಲ್ಲಿ ಬಿದ್ದುಕೊಂಡಿರುತಿದ್ದ ಬಿಸಿಲಿಗೆ ಹರಡಿ ಮತ್ತೆ ಮತ್ತೆ ಲೆಕ್ಕಮಾಡಿದರೂ ದಣಿವು ಎಂಬುದು ಹತ್ತಿರ ಸುಳಿಯುತ್ತಿರಲಿಲ್ಲ. ಅದೋ ಕುಚೇಲರ ಬೀದಿ. ಬದುಕಿಗೆ ಬಡತನವಿದ್ದ ಮಾತ್ರಕ್ಕೆ ಆಸೆಗೂ ಬಡತನವಿರಬೇಕು ಎಂದರೆ ಹೇಗೆ? ಹಾಗಾಗಿ ಬಿಟ್ಟ ಕಣ್ಣುಗಳಿಂದ ಉಳಿದವರ ಕೈಯಲ್ಲಿದ್ದ ಪಟಾಕಿಯನ್ನು ಕಣ್ಣು ನೋಡುತಿದ್ದ ಹಾಗೆ ಕೈ ಅದನ್ನು ತೆಗೆದುಕೊಳ್ಳಲು ಅಪ್ರಯತ್ನವಾಗಿ ಮುಂದಕ್ಕೆ ಹೋಗುತಿತ್ತು. ನಿಗ್ರಹ, ಇನ್ನೊಂದು ಮತ್ತೊಂದು ಅನ್ನು ಅದೇನು ಸನ್ಯಾಸವೇ? ಹೇಳಿ ಕೇಳಿ ಬಾಲ್ಯ ಅದೂ ಯಯಾತಿಯಲ್ಲಿ ಬರೆದಂತೆ ಕೇವಲ ವರ್ತಮಾನವಷ್ಟೇ ಗೊತ್ತಿರುವ ವಯಸ್ಸು. ಅವರ ತಿರಸ್ಕಾರ, ಮನೆಯವರ ತಲ್ಲಣ, ಬಡತನದ ಅವಮಾನ, ಸಿರಿತನದ ಅಹಂಕಾರ ಯಾವುದೂ ಅರ್ಥವಾಗುತ್ತಿರಲಿಲ್ಲ. ಗೊತ್ತೂ ಆಗುತ್ತಿರಲಿಲ್ಲ. ಅಪ್ಪನ ಮುಖ ಪಟಾಕಿಯ ಮಸಿಗೆ ಕಪ್ಪಿಟ್ಟಿದ್ದೆಯೇನೋ, ಅಮ್ಮನ ಮುಖ ಸದ್ದಿನ ಭಯಕ್ಕೆ ಮುದುಡಿದೆಯೇನೋ ಎಂದು ಇನ್ನಷ್ಟು ಉತ್ಸಾಹದಿಂದ ಪಟಾಕಿ ಹಚ್ಚುತಿದ್ದ ಕಾಲ.

ಮುಗ್ಧತೆಯೆನ್ನುವುದು ಗಾಳಿ ತುಂಬಿದ  ಬಲೂನಿನಂತೆ. ಅದಿರುವಷ್ಟು ಹೊತ್ತು ಎಲ್ಲವನ್ನೂ ಮರೆತು ಹಾರಾಡುತ್ತಿರುತ್ತೇವೆ. ಆದರೆ ಹಾಗೆ ಹಾರುವ ಬಲೂನ್ ಸಹ ಒಡೆಯುತ್ತದೆ, ಒಡೆಯಲೇ ಬೇಕು. ಹಾಗೆ ಒಡೆಯಲು ಯಾವುದೋ ದೊಡ್ಡ ಕಾರಣಗಳು ಬೇಕಂದೇನಿಲ್ಲ, ಸಣ್ಣ ಮರಳು ಕಣವೂ ಸಾಕು. ಮರೆಯಲ್ಲಿ ಸೆರಗಿನಿಂದ ಒರೆಸುವ ಅಮ್ಮನ ಒಂದು ಹನಿ ಕಣ್ಣೀರೂ ಸಾಕು. ಬೆಂಕಿಯ ಬಳಿ ಸುಳಿದರೂ ಪಟ್  ಎನ್ನುತ್ತದೆ. , ಮನೆಯಲ್ಲಿನ ಧಗೆ ಅರಿವಿಗೆ ಬಂದರೂ ಒಡೆಯುತ್ತದೆ. ಆದರೆ ಒಡೆಯುವ ಆ ಕ್ಷಣ ಇದೆಯಲ್ಲ ಅದು ಯಾವ ಭೂಕಂಪಕ್ಕೂ ಸಮನಲ್ಲ.. ತುಂಬಿದ ಗಾಳಿ ಹೊರಗೆ ಸಿಡಿದು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವ ಬಲೂನಿನ ಚೂರುಗಳಂತೆ ಬದುಕು ಭಾವ ಅಸ್ತವ್ಯಸ್ತವಾಗುತ್ತದೆ. ಅಲ್ಲಿಯವರೆಗೂ ಪರಿಚಿತವಾದ ಪ್ರಪಂಚದಲ್ಲಿ ಇನ್ನೇನೋ ಅಪರಿಚಿತತೆ ಇದೆ ಎನ್ನುವುದು ತಿಳಿದಾಗ ಮನಸ್ಸು ದುಗುಡಗೊಳ್ಳುತ್ತದೆ. ಬೆರಗು ಅಳಿದು ಅರಿವು ಮೂಡುವ ವೇಳೆಗೆ ಬದುಕು ಬಣ್ಣ ಬದಲಾಯಿಸುತ್ತದಾ ಇಲ್ಲಾ ಬಣ್ಣ ಬಳಿದುಕೊಳ್ಳುತ್ತದಾ? ಅಥವಾ ತೊಟ್ಟ ಬಣ್ಣವೂ ಇನ್ನೇನೋ ಹೇಳುತ್ತದಾ... ಮಧುವನ್ನು ಕೇಳಬೇಕು.

ಅನಿವಾರ್ಯತೆ ಮತ್ತು ಅಸಹಾಯಕತೆ ಎಲ್ಲಾ ಅವಮಾನಗಳನ್ನು ಹಲ್ಲುಕಚ್ಚಿ ಸಹಿಸುವ ಹಾಗೆ ಮಾಡಿದರೂ ಸಾತ್ವಿಕ ರೋಷ ಮಾತ್ರ ಮನಸ್ಸಿನಾಳದಲ್ಲಿ ಕುದಿಯುತ್ತಲೇ ಇರುತ್ತದೆ. ಒಳಗೆ ಅಗ್ನಿಪರ್ವತವೇ ಇದ್ದರೂ ನಿಶ್ಚಲವಾಗಿ ಕಾಣುವ ಜ್ವಾಲಾಮುಖಿ ಪರ್ವತದಂತೆ ಬದುಕು ಸಮಯಕ್ಕಾಗಿ ಕಾಯುತ್ತದೆ. ಒಳಗಿನ ಕಾವಿಗೆ ನಾಲಿಗೆಯೂ ತನ್ನ ಜಿಡ್ಡು ಕಳೆದುಕೊಂಡು ಮೊನಚಾಗುತ್ತಿರುತ್ತದೆ. ಅಪರಿಚಿತ ವಲಯವೊಂದು ಸುತ್ತ ಆವರಿಸಿ ತನ್ನತನ ಕಳೆದುಹೋಗುತ್ತಿದೆ ಅನ್ನಿಸುವಾಗ ತನ್ನ ಅಸ್ತಿತ್ವವನ್ನು ಬಲವಾಗಿ ಸ್ಥಾಪಿಸುವ ಆಸೆ ಪಸಿಗಟ್ಟುತ್ತದೆ. ಅರ್ಥವಾಗದ ಪ್ರಶ್ನೆಗಳಿಗೆ ಉತ್ತರ ತಂತಾನೇ ದೊರಕುತ್ತಾ ಹೋದಾಗ, ಅವಮಾನ ಸಹಜವೆಂಬಂತೆ ದಿನನಿತ್ಯ ನಡೆಯುವಾಗ ಮುಗ್ಧತೆಯ ಮೊಟ್ಟೆ ಕಾವಿಗೆ ಒಡೆಯುತ್ತದೆ.

ಬದುಕಿನ ಸೂಕ್ಷ್ಮಗಳು ಅರ್ಥವಾದಷ್ಟೂ ಪ್ರತಿಕಾರದ ಜ್ವಾಲೆ ಉರಿಯತೊಡಗುತ್ತದೆ. ಆದರೆ ಆಡಿದ ಮಾತು ವ್ಯರ್ಥವಾಗಬಾರದು, ಬಿಟ್ಟ ಬಾಣ ಹುಸಿ ಹೋಗಬಾರದು ಅನ್ನುವ ಎಚ್ಚರಿಕೆ ಸುಳಿ ಸುಳಿ ತಿರುಗುವಾಗಲೇ ಮಹೇಶನಿಗೆ ಅವಕಾಶ ಸಿಗುತ್ತದೆ. ಜ್ವಾಲಾಮುಖಿ ಇನ್ನೇನು ಸಿಡಿಯಬೇಕು ಎನ್ನುವಾಗ ಎದುರಿನ ವ್ಯಕ್ತಿ ತಾನು ನಿಂತ ಜಾಗದಲ್ಲೇ ನಿಂತಿರುವುದು ಅರಿವಿಗೆ ಬಂದಾಗ ಮಾತ್ರ ಸಿಡಿಯುವ ಲಾವ ಹೆಪ್ಪುಗಟ್ಟುತ್ತದೆ. ಎಲ್ಲವನ್ನೂ ಆಡಿಯೇ ತೀರಿಸಬೇಕು ಎಂದೇನಿಲ್ಲ.. ಮೌನವೂ ಪಾಠ ಕಲಿಸುತ್ತದೆ. ಪಾಠ ಕಲಿಸದಿದ್ದರೂ ಕೊನೆಯ ಪಕ್ಷ ಮನಸ್ಸಿಗೆ ಪಾಪಪ್ರಜ್ಞೆ ಕಾಡದಂತೆ ಕಾಪಾಡುತ್ತದೆ. ಇದು ಮನುಷ್ಯರಾಗುವ ರೀತಿಯಾ? ಅಥವಾ ಮಾನವತ್ವ ಮತ್ತು ಮೃಗಿಯತೆಯ ನಡುವಿನ ಪರಿಕ್ಷೆಯಾ? ಮಾತು ಮುಗಿದ ಮೇಲೆ ಹುಟ್ಟುವ ಮೌನಕ್ಕಿಂತ ಮಾತಿನ ಮೊದಲ ಹುಟ್ಟುವ ಮೌನ ಹೆಚ್ಚು ಅರ್ಥಗರ್ಭಿತವಾ.... ಆ ಮೌನದ ಗರ್ಭದಲ್ಲೇ ಅರಿವಿನ ಜನ್ಮವಾ...


ಹರಿಯುವ ನದಿಯ ನೀರು ವ್ಯರ್ಥವೆನ್ನಿಸಿ ಅದಕ್ಕೊಂದು ಅಡ್ಡಗಟ್ಟಿ ಓಡುವ ನೀರನ್ನು ಹಿಡಿದಿಟ್ಟುಕೊಳ್ಳುತ್ತೇವೆ ಎಂದು ಬೀಗುತ್ತೇವೆ. ನಿಲ್ಲಿಸಿದ್ದೇವೆ ಎಂದು ಗರ್ವ ಪಡುತ್ತೇವೆ. ಆದರೆ ನಿಲ್ಲುವುದು ಕೇವಲ ನೀರು ಮಾತ್ರವಲ್ಲ ಹಲವು ಬದುಕು ಎನ್ನುವುದು ಅರ್ಥವಾಗುವುದೇ ಇಲ್ಲ. ನಿಂತ ನೀರು  ಕೇವಲ ಮನೆ ಮಠಗಳನ್ನ ಮುಳುಗಿಸಿದರೆ ಹತ್ತಿರದವರು ಬದುಕನ್ನೇ ಮುಳುಗಿಸುತ್ತಾರೆ. ಅಷ್ಟಷ್ಟೇ ಏರುವ ನೀರು ಗದ್ದೆ ತೋಟಗಳ ಜೀವ ನುಂಗಿದರೆ ಇತ್ತ ಅಸಹಾಯಕತೆ ಉಸಿರುಗಟ್ಟಿಸುತ್ತದೆ. ಅತ್ತ ಊರು ಮುಳುಗುತ್ತಿದ್ದಂತೆ ಇತ್ತ ನಂಬಿಕೆ, ಕನಸು ಎಲ್ಲವೂ ಮುಳುಗತೊಡಗುತ್ತದೆ. ಮುಳುಗಡೆ ಎಂದರೆ ಊರು, ಕೇರಿ, ಬದುಕು, ನಂಬಿಕೆ, ಸಂಬಂಧ, ಅಸ್ತಿತ್ವದ ಮುಳುಗಡೆ. ಇಂಥ ಸಂಕಷ್ಟ ಸಮಯದಲ್ಲೇ ಒಬ್ಬರಿಗೊಬ್ಬರು ದೂರವಾದಂತೆ ಹತ್ತಿರವೂ ಆಗುತ್ತಾರೆ. ಯಾವುದು ಗಟ್ಟಿ ಯಾವುದು ಜೊಳ್ಳು ಅದು ಊಹೆಗೂ ನಿಲುಕದ ಸಂಗತಿ, ಗಣಿತಕ್ಕೂ ಅರ್ಥವಾಗದ ಲೆಕ್ಕಾಚಾರ. ಏನೂ ಆಗುವುದಿಲ್ಲ ಬೆಳಗಾಗುತ್ತದೆ ಅನ್ನುವ ನಿರೀಕ್ಷೆಯೊಂದೇ ಬಂಧಿಸುವ, ದಡ ಸೇರಿಸುವ ನಾವೆ.

ಬಾಲ್ಯಕ್ಕೆ ಭೂತದ ನೆನಪಿಲ್ಲ, ಭವಿಷ್ಯತ್ತಿನ ಹಂಗಿಲ್ಲ. ಆದರೆ ಆಗ ಕಾಡಿದ ನೋವೋ, ಕೋಪವೋ ದೀರ್ಘಕಾಲ ಬದುಕಲ್ಲಿ ಜೊತೆಯಾಗುತ್ತದೆ. ಅಪರಿಚಿತರ ನಡುವೆ ಒಂದೊಮ್ಮೆ ಬದುಕಬಹುದು ಆದರೆ ಪರಿಚಿತರೆ ಅಪರಿಚಿತರಾಗಿ ಕಾಡುವಾಗ, ಜೊತೆಯಾಗ ಬೇಕಾದವರೇ ಅಂತರ ಕಾದುಕೊಳ್ಳುವಾಗ, ಮಾತುಗಳು ಅರ್ಥಕಳೆದುಕೊಂಡು ಅವ್ಯಕ್ತ ಮೌನ ಆವರಿಸಿದಾಗ ಬದುಕು ಚಡಪಡಿಸುತ್ತದೆ. ಜೀವವೂ ನಿರ್ಜೀವವಾದಾಗ ಕುರುಹುಗಳಲ್ಲಿ ಜೀವಂತಿಕೆ ಅರಸಿ ಸೋತಾಗ, ಒಂಟಿತನ ಕಾಡಿದಾಗ ಬದುಕು ಒರಗುವ ಇನ್ನೊಂದು ಹೆಗಲಿಗಾಗಿ ಕಾತರಿಸುತ್ತದೆ.ಆದರೆ ಪ್ರೀತಿಯಷ್ಟೇ ತೀವ್ರವಾಗಿ ದ್ವೇಷದಲ್ಲೂ ವ್ಯಕ್ತಿಯ ಜೊತೆ ಬೆಸೆದುಕೊಂಡಿರುತ್ತೇವೆ ಎನ್ನುವುದು ಅರ್ಥವಾಗುವುದೇ ಇಲ್ಲ.

ಬದುಕು ಹೀಗೆಯೇ ಅದು ತನ್ನನ್ನು ತಾನು ತೆರೆದುಕೊಂಡಿರುತ್ತದೆ. ಆದರೆ ನಮ್ಮ ಕಣ್ಣೆ ತನಗೆ ಬೇಕಾದಷ್ಟು ಮಾತ್ರ ನೋಡಿಕೊಂಡು ಇಷ್ಟವಾದ ಹಾಗೆ ಅರ್ಥೈಸಿಕೊಂಡು ಬಿಡುತ್ತದೆ. ವಾಸ್ತವ, ಭ್ರಮೆಗಳ ನಡುವಿನ ಗಡಿಯಾರದ ಮುಳ್ಳು  ತೂಗುಯ್ಯಾಲೆ  ಆಡುತ್ತಲೇ ಇರುತ್ತದೆ. ನಾವು ನಮ್ಮ ವೈಫಲ್ಯತೆಗಳನ್ನ ಮುಚ್ಚಿಟ್ಟು ಆದರ ಮೇಲೆ ಹೊಣೆ ಹೊರಿಸುತ್ತಲೇ ಇರುತ್ತೇವೆ. ಒಂದು ಹೆಜ್ಜೆ ಮುಂದಿಟ್ಟರೆ ಸರಿಯಾಗಿ ಕಾಣಬಹುದು, ನಿಂತಲ್ಲಿಂದ ಚಲಿಸಬೇಕು, ಕಣ್ಣು ಹಿಗ್ಗಿಸಬೇಕು, ಪೂರ್ವಾಗ್ರಹಗಳನ್ನ ಬದಿಗಿಡಬೇಕು. ಅದು ಅಷ್ಟು ಸುಲಭವಾ... ಹೆಜ್ಜೆ ಕಿತ್ತಿಟ್ಟ ಮೇಲೆಯೇ ಅದು ಅರ್ಥವಾಗೋದು. ನಿರಂತರ ಹರಿಯುವಿಕೆಯೇ ಜೀವಂತಿಕೆಯ ಲಕ್ಷಣ.  ಆ ಹರಿಯುವಿಕೆಗೆ  ಮಳೆ ಆವಶ್ಯಕ.

ಮಳೆ, ನೆನಪು ಎರಡರದ್ದೂ ಅನೂಹ್ಯ ಸಂಬಂಧ. ಅಂಗಳದಲ್ಲಿ  ಬೀಳುವ ಪ್ರತಿ ಹನಿಯೂ ಬುದ್ಬುದ ಉಂಟುಮಾಡುವಂತೆ ಮನದಂಗಳದಲ್ಲೂ ನೆನಪಿನ ಗುಳ್ಳೆ ಏಳುತ್ತದೆ. ಒಂದು ಒಡೆದು ಇನ್ನೊಂದು, ಮತ್ತೊಂದು ಹೀಗೆ ಏಳುತ್ತಲೇ ಇರುತ್ತದೆ. ಮಳೆ ಕಾದ ನೆಲವನ್ನು ಹದವಾಗಿಸುತ್ತದೆ, ನೆನಪು ಆರ್ದ್ರಗೊಳಿಸುತ್ತದೆ. ಅಲ್ಲಿಯವರೆಗೂ ನೆಲದಾಳದಲ್ಲಿ ಮರೆಯಾಗಿದ್ದ ಎಷ್ಟೋ ಬೀಜಗಳು ಮೊಳಕೆ ಒಡೆಯುತ್ತವೆ. ಒಡಲಾಳದಲ್ಲೂ ಹೊಸಭಾವ ಆವಿರ್ಭವಿಸುತ್ತದೆ.ಪ್ರಕೃತಿ ಹಸಿರುಟ್ಟು ನಲಿಯುತ್ತದೆ. ಮನಸ್ಸು ವರ್ಣ ಚಿತ್ತಾರದಲ್ಲಿ ಮುಳುಗೇಳುತ್ತದೆ. ನೆನಪುಗಳಲ್ಲಿ ಅಗ್ರಸ್ಥಾನ ಬಾಲ್ಯ ಪಡೆದಿರುತ್ತದೆ. ಮಳೆಯೆಂದರೆ ನೆನಪು, ನೆನಪೆಂದರೆ ಮತ್ತೇನಲ್ಲ ಬಾಲ್ಯ.

ಎಷ್ಟೇ ಎತ್ತರಕ್ಕೆ ಏರಿದರೂ, ಹರಡಿಕೊಂಡರೂ, ಚೆಂದವಾಗಿ ಸಿಂಗರಿಸಿ ಒಪ್ಪ ಓರಣಗಳನ್ನು ಮಾಡಿದರೂ ಬದುಕೆಂಬ ಮಹಲಿನ ಅಡಿಪಾಯ ಬಾಲ್ಯ. ಅದು ಕಾಣಿಸದೇ ಹೋದರೂ ಇಡೀ ಮಹಲಿನ ಅಸ್ತಿತ್ವ ಕಾಪಾಡುತ್ತದೆ. ಯಾವುದೇ ಕಂಪನ, ಅಪಘಾತಗಳಿಂದ ಬೀಳದಂತೆ ಕಾಪಾಡುತ್ತದೆ. ವರ್ತಮಾನದಲ್ಲಿ ಬದುಕುವುದು ಕಲಿಸುತ್ತದೆ. ಭೂತದ ಭಾರವನ್ನು, ಭವಿಷ್ಯದ ಭಯವನ್ನು ದೂರ ಮಾಡುತ್ತದೆ. ಬಾಲ್ಯ ಶ್ರೀಮಂತವಾದಷ್ಟೂ ಬದುಕು ಮಾಗುತ್ತದೆ. ಅಲ್ಲಿ ಕಲಿತದ್ದು ಕೊನೆಯತನಕ ಕಾಪಾಡುತ್ತದೆ.

ಇಡೀ ಕಥಾಸಂಕಲನ ಹೀಗೆ ಮಳೆ ಹೊಯ್ದಂತೆ ಇದೆ. ಆರ್ದತೆ, ಆಪ್ತತೆ, ಬಾಲ್ಯ, ಬೆರಗು, ಅರಿವು, ವಾಸ್ತವ, ಬಂಧನ, ಭಾಂಧವ್ಯ.  ಅದು ಎಷ್ಟು ತೊಯ್ಯುತ್ತಿರಿ, ಹೇಗೆ ತೊಯ್ಯುತ್ತಿರಿ ಅನ್ನುವುದರ ಮೇಲೆ ಒಳಗೆ ಮೊಳಕೆ ಒಡೆಯುತ್ತಾ ಹೋಗುತ್ತದೆ. ಎದುರಿನಲ್ಲಿ ಕುಳಿತು ಯಾರೋ ಮಾತಾಡುತ್ತಿದ್ದಾರೆನೋ ಅನ್ನಿಸುವಾಗಲೇ ಅವರು ತನಗೆ ತಾನೇ ಹೇಳಿಕೊಳ್ಳುತ್ತಿದ್ದಾರ ಅನ್ನುವ ಭಾವವೂ ಕಾಡುತ್ತದೆ. ಕೇಳುತ್ತಾ ಕೇಳುತ್ತಾ ನಾವೂ ಭಾಗವಾಗುತ್ತಿವಾ, ಹಾಗೆ ಭಾಗವಾಗಿದ್ದಕ್ಕೆ ಇದು ನನ್ನದೂ ಕತೆ ಅನ್ನಿಸುತ್ತದಾ, ನನ್ನ ಕುರುಹು ಅಲ್ಲೆಲ್ಲೋ ಕಾಣುತ್ತದಾ... ಎಲ್ಲೋ ಅರಳಿದ ಮಲ್ಲಿಗೆಯ ಘಮವನ್ನು ಇಲ್ಲಿ ತಂದು ಹಾಕಿದ ಗಾಳಿ ಅನಾಮತ್ತಾಗಿ ನಮ್ಮನ್ನು ಮತ್ತೆಲ್ಲಿಗೋ ಒಯ್ಯುತ್ತದಾ... ಬಾಲ್ಯವೆಂಬ ಪಾರಿಜಾತ ಒಮ್ಮೆ ಮೈ ಕೊಡವಿ ಹೂವೆಲ್ಲಾ ಉದುರಿಸಿ ನಗುತ್ತದಾ... ಹಾಗೆ ಉದುರಿಬಿದ್ದ ಪಾರಿಜಾತ ಇನ್ಯಾರದೋ ಕೈಯಲ್ಲಿ ಮೃದುವಾಗಿ ಹಿಡಿಯಲ್ಪಡುತ್ತದಾ.... ಮೃದಲ ಸ್ಪರ್ಶವೊಂದು ತಾಕುತ್ತದಾ....

ಉತ್ತರ ಸಿಗಬೇಕಾದರೆ ಕೇಪಿನ ಡಬ್ಬಿ ಓದಬೇಕು.



Comments

  1. This comment has been removed by the author.

    ReplyDelete
  2. ತುಂಬಾ ಚೆನ್ನಾಗ್ ಬರ್ದಿದ್ದಿರಿ ಶೋಭಕ್ಕ ಓದಿನ ಮಿಳಿತ ನಿಮ್ಮೊಳಗೆ ಬರಹವಾದಾಗ ಓದುಗನ ಆಂತರ್ಯಕ್ಕೆ ನದಿಯಂತೆ ಅಕ್ಷರಗಳು‌ ಹರಿಯುತ್ತವೆ ಇಂಥದೊಂದು ಬರಹಕ್ಕೆ ಧನ್ಯವಾದಗಳು ‌ನಿಮಗೆ

    ReplyDelete

Post a Comment

Popular posts from this blog

ಮಾತಂಗ ಪರ್ವತ

ಮೃಗವಧೆ

ನನ್ನಿ