ಮಾತಂಗ ಪರ್ವತ

ಬೆಳಿಗ್ಗೆ ಬೇಗ ಬನ್ನಿ ಮೇಡಂ ಮಾತಂಗ ಪರ್ವತ ಹತ್ತೋಣ. ಬಿಸಿಲು ಏರಿದರೆ ಆಮೇಲೆ ಸುಸ್ತಾಗುತ್ತೆ ಎಂದ ಗೈಡ್ ಮಾತು ಕೇಳಿ ದೃಷ್ಟಿ ಅತ್ತ ಹರಿಸಿದರೆ ಅದು ಬೆಟ್ಟವೋ ಇಲ್ಲಾ ಕಲ್ಲಿನ ಮೇಲೆ ಕಲ್ಲು ಪೇರಿಸಿಟ್ಟ ಆಕೃತಿಯೋ ಅನ್ನಿಸಿತ್ತು. ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತಬಹುದಾ ಅಂತ ಕೊಂಚ ಅನುಮಾನದಲ್ಲೇ ಪ್ರಶ್ನಿಸಿದ್ದೆ. ಅದಕ್ಕೆ ಎರಡು ದಾರಿ ಇದೆ ಒಂದು ಕಡಿದಾದ ಬೆಟ್ಟ ಹತ್ತಿಕೊಂಡು ಹೋಗುವುದು ಸ್ವಲ್ಪ ಬೇಗ ಹೋಗಬಹುದು ಆದ್ರೆ ಕಷ್ಟ, ಇನ್ನೊಂದು ಮೆಟ್ಟಿಲುಗಳಿರುವ ದಾರಿ ಅದೂ ಸಹ ಸುಲಭದ್ದೇನಲ್ಲ, ನೀವು ಯಾವುದು ಹೇಳ್ತಿರೋ ಅದರಲ್ಲಿ ಹೋಗೋಣ ಎಂದು ನಮ್ಮ ಮುಖವನ್ನೇ ದಿಟ್ಟಿಸಿ ಉತ್ತರಕ್ಕಾಗಿ ಕಾಯುತ್ತಿದ್ದರು. ಏರುವುದು ಯಾವತ್ತು ಸುಲಭವಿತ್ತು ಹೇಳಿ ಅನ್ನೋ ಮಾತು  ಗಂಟಲಲ್ಲೇ ಉಳಿಯಿತು.

ಹತ್ತೋದು ಪ್ರಯಾಸವಾದರೂ ಹಾಗೂ ಹೀಗೂ ಹತ್ತಬಹ್ದು ಆದರೆ ಇಳಿಯೋದೇ ಕಷ್ಟ ಅಮ್ಮಾ ಹಾಗಾಗಿ ಮೆಟ್ಟಿಲಿಂದ ಇಳಿಯೋದು ಬೇಡಾ, ಸುಲಭವಾಗಿ ಕಾಲು ಜಾರುತ್ತೆ, ಬೀಳೋ ಚಾನ್ಸ್ ಜಾಸ್ತಿ ಅಂದ್ಲು ಮಗಳು. ಬೆಟ್ಟ ಹತ್ತುವುದು, ಬದುಕು ಸಾಗುವುದು ಎರಡಕ್ಕೂ ವ್ಯತ್ಯಾಸ ಬಹಳ ಏನಿಲ್ಲ,  ಹತ್ತುವುದು ಪ್ರಯಾಸ ಆದರೆ ಒಂದು ಕ್ಷಣ ಮೈ ಮರೆತರೂ, ಅಹಂನ ಪೊರೆ ಕವಿದರೂ ಕಣ್ಣು ಮಂಜಾಗಿ ಕಾಲು ಜಾರುತ್ತದೆ. ಪ್ರಪಾತ ತಲುಪುವುದು ಒಂದು ಗಳಿಗೆಯ ಕೆಲಸ ಅಷ್ಟೇ. ಭೇಷ್ ಮಗಳೇ ಇಷ್ಟು ತಿಳುವಳಿಕೆ ಸಾಕು ಹೆಜ್ಜೆ ಜಾರದಿರಲು ಅಂತ ಮನಸ್ಸಿನಲ್ಲೇ ಅಂದುಕೊಂಡು ಮುಂದಕ್ಕೆ ಹೋದೆ.

ಮಾತಂಗ ಮುನಿಯ ಆಶ್ರಮವಿದ್ದ ಜಾಗ ಅನ್ನೋದು ಅಲ್ಲಿಯ ಸ್ಥಳ ಇತಿಹಾಸ. ಎಲ್ಲಿಯ ರಾಮಾಯಣ, ಎಲ್ಲಿಯ ವಿಜಯನಗರದ ಕಾಲ, ಎಲ್ಲಿಯ ಇಪ್ಪತ್ತೊಂದನೇ ಶತಮಾನ. ಎಲ್ಲವನ್ನೂ ವೈಜ್ಞಾನಿಕವಾಗಿ ನೋಡುವ ಕಾಲದಲ್ಲೂ ಒಂದು ಬೆಟ್ಟ ಇವತ್ತಿಗೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿರುವುದು ಅಚ್ಚರಿಯೇ. ಸತ್ವ ತುಂಬಿದ ಯಾವುದೇ ಆದರೂ ಹೀಗೆ ಗಟ್ಟಿಯಾಗಿ ನಿಲ್ಲಬಹುದೇ ಅನ್ನುವ ಯೋಚನೆ ಸುಳಿದರೂ ರಾಮಾಯಣದಲ್ಲಿ ಇದರ ವರ್ಣನೆ ಹೇಗಿದೆ ನೋಡಬೇಕು ಅನ್ನುವ ಆಸೆ ಕಾಡಿ ವಾಲ್ಮೀಕಿ ರಾಮಾಯಣವನ್ನು ತಿರುವಿ ಹಾಕಿದರೆ ಸಿಕ್ಕ ಅಂಶಗಳನ್ನು ಗುರುತು ಹಾಕಿಕೊಂಡು ಬೆಳಿಗ್ಗೆ ಹೊರಡುವಾಗ ಸಣ್ಣ ಕುತೂಹಲವೂ ಜೊತೆಯಾಗಿತ್ತು.

ಮಹಾ ತಪಸ್ವಿ ಮತಂಗ ಮುನಿಯ ಪ್ರಿಯ ಶಿಷ್ಯೆ ಶಬರಿ. ಅವಳಾದರೂ ಎಂಥಹಾ ಶಿಷ್ಯೆ ಎಂದರೆ ಗುರುವಿನ ಒಂದು ಮಾತಿಗೋಸ್ಕರ ಜೀವಮಾನವಿಡೀ ಕಾದವಳು. ರಾಮನೆಂಬುವನೊಬ್ಬ ಎಂದೋ ಬರುವನೆಂದು ಹೇಳಿದ ಗುರುವಿನ ಮಾತನ್ನು ಶ್ರದ್ಧೆಯಿಂದ ನಂಬಿ ಬದುಕಿಡೀ ಕಾಯುವಿಕೆಯನ್ನೇ ತಪವನ್ನಾಗಿಸಿ ಕೊಂಡವಳು. ಅಲ್ಲಿಗೆ ತಪಸ್ಸು ಎಂದರೆ ಕೇವಲ ಕಣ್ಣು ಮುಚ್ಚಿ ಕೂತು ಧ್ಯಾನಮಗ್ನವಾಗುವುದು ಮಾತ್ರವಲ್ಲ, ಇಡೀ ಬದುಕಿನ ಗುರಿಯನ್ನು ಏಕಾಗ್ರವಾಗಿಸಿ ಮಾಡಿದ ಯಾವುದೇ ಆದರೂ ತಪಸ್ಸು ಎಂದು ನಿರೂಪಿಸಿದವಳು. ಬಂದ ರಾಮನಿಗೆ ಸುಗ್ರೀವನ ಬಗ್ಗೆ ಮಾಹಿತಿ ಕೊಡಲೆಂದೇ ಕಾದವಳು. ಅವಳಿಗೆ ರಾಮನ ಬಗ್ಗೆ ಪ್ರೀತಿಯೋ ಜಾಸ್ತಿಯೋ, ಗುರುವಿನ ಬಗ್ಗೆ ಭಕ್ತಿ ಜಾಸ್ತಿಯೋ......

ಕೊಡುವುದು ಯಾವಾಗಲೂ ಉತ್ತಮವಾಗಿರಬೇಕು ಅನ್ನೋದು ಸಂಪ್ರದಾಯ. ಕಾಡಿನ ಹಣ್ಣು ಹುಳಿಯೋ, ಒಗರೋ, ಸಿಹಿಯೋ ಗೊತ್ತಾಗುವುದು ಹೇಗೆ? ಚೂರು ತಿಂದು ಪರೀಕ್ಷಿಸಿದಾಗ ಮಾತ್ರವಲ್ಲವೇ. ಶಬರಿಯ ಮುಗ್ಧತೆ, ಎಂಜಲು ಹಣ್ಣನ್ನು ರಾಮನಿಗೆ ಅರ್ಪಿಸಿದಾಗ ಅದನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುವ ರಾಮ, ಗುರು ವಹಿಸಿದ ಕೆಲಸ ಮುಗಿದ ಕೂಡಲೇ ದೇಹತ್ಯಾಗ ಮಾಡುವ ಶಬರಿ..  ದೇವರಂತ ರಾಮನೇ ಎದುರಿಗಿದ್ದರೂ ಕೆಲಸ ಮುಗಿದ ಕೂಡಲೇ ಹೊರಡುವ ಅವಳ ನಿರ್ಲಿಪ್ತತೆ, ನಿರ್ವಿಕಾರ ಸ್ವಭಾವ ಮೈ ರೋಮಾಂಚನಗೊಳಿಸುವುದರ ಜೊತೆಗೆ ಬೆರಗೂ ಹುಟ್ಟಿಸಿತ್ತು. ಎಲ್ಲಿಯ ಬ್ರಾಹ್ಮಣ ಮತಂಗ ಮುನಿ, ಆದಿವಾಸಿ ಶಬರಿ, ಕ್ಷತ್ರಿಯ ರಾಮ... ಇವರೆಲ್ಲರನ್ನೂ ಯಾವ ಜಾತಿ ಸಂಪ್ರದಾಯವೂ ಬಾಧಿಸದೇ ಬಂಧಿಸಿದ್ದು ಯಾವುದು?

ವಾಲ್ಮೀಕಿ ಆ ಆಶ್ರಮವನ್ನು ವರ್ಣಿಸುವುದು ಹೀಗೆ... ಆನೆಯ ಕಾಟವಿಲ್ಲದ, ಎಲ್ಲರಿಗೂ ಸುಲಭಕ್ಕೆ ಗೋಚರವಾಗದ ಜಾಗದಲ್ಲಿದೆ ಮಾತಂಗ ಮುನಿಯ ಆಶ್ರಮ. ಲೆಕ್ಕವಿರದಷ್ಟು ಜಾತಿಯ ಹಕ್ಕಿ ಸಂಕುಲಗಳಿಂದ, ನವಿಲುಗಳಿಂದ, ಪ್ರಾಣಿಗಳಿಂದಕೂಡಿರುವ, ವಿವಿಧ ಜಾತಿಯ ಹಣ್ಣುಗಳ ವೃಕ್ಷಗಳಿರುವ, ಶ್ವೇತವರ್ಣದ ಕಾಂಡವನ್ನು ಹೊಂದಿರುವ ಮರಗಳಿಂದ ಆವೃತವಾಗಿದೆ ಆಶ್ರಮ. ಎದುರಿಗೆ ಋಷ್ಯಮೂಕ ಪರ್ವತ, ಬೆಟ್ಟದ ತಳಭಾಗದಲ್ಲಿ ಬ್ರಹ್ಮನಿಂದ ನಿರ್ಮಿಸಲ್ಪಟ್ಟ ಪಂಪಾಸರೋವರ.

ಹಂಪಿಯಲ್ಲಿ ವಿಪರೀತ ಮಂಗಗಳು. ವಾನರ ರಾಜ್ಯವಾಗಿದ್ದು ಇದೆ ಜಾಗವಲ್ಲವೇ? ಎಂದು ಕೊಂಡೆ. ಚಿರತೆಗಳೂ ಇವೆಯಂತೆ. ಅವು ಮನುಷ್ಯರ ಮೇಲೆ ಧಾಳಿ ಮಾಡುವುದಿಲ್ಲವಾ ಎಂದರೆ ಇಲ್ಲಾ ಮೇಡಂ, ಇಲ್ಲಿಯವರೆಗೆ ಅಂತಹ ಒಂದೇ ಒಂದು ಘಟನೆಯೂ ನಡೆದಿಲ್ಲ, ಅವು ಬರುವುದಾದರೂ ಹೇಗೆ ಹೇಳಿ ಕಾಡಲ್ಲಿ ಅವುಗಳಿಗೆ ಬೇಕಾದಷ್ಟು ಆಹಾರ ದೊರಕುತ್ತದೆ. ಮೊಲಗಳು, ನವಿಲುಗಳು, ಕಾಡು ಕೋಳಿಗಳು (ಒಂದೊಂದೂ ಮೂರು ಕೆ.ಜಿ ಯಷ್ಟು) ಹೇರಳವಾಗಿವೆ. ಹಾಗಾಗಿ ಅದರ ಹೊಟ್ಟೆ ತುಂಬುತ್ತದೆ. ತುಂಬಿದ ಮೇಲೂ ಇನ್ನಷ್ಟು ಬೇಕು ಎಂದು ಯೋಚಿಸಲು ಅವು ನಮ್ಮ ಹಾಗೆ ಇನ್ನೂ ಮನುಷ್ಯರಾಗಿಲ್ಲವಲ್ಲ ಎಂದರು. ತಕ್ಷಣ ಶ್ಲೋಕ  ನೆನಪಾಯಿತು ವಿಧ ವಿಧ ಪ್ರಾಣಿಸಂಕುಲಗಳಿಂದ ಕೂಡಿರುವ......

ಬೆಟ್ಟ ಹತ್ತಿ ಕಣ್ಣು ಹಾಯಿಸಿದರೆ ಬೆಟ್ಟದ ತಪ್ಪಲಿನ ಜಾಗದಲ್ಲಿ ಹರಡಿಕೊಂಡ ಬಾಳೆ ತೋಟ ಕಾಣಿಸಿತು. ಮೊದಲೇ ಕೋತಿಗಳಿಗೆ ಬಾಳೆಹಣ್ಣು ಎಂದರೆ ವಿಪರೀತ ಪ್ರೀತಿ. ಅವೋ ಅಲ್ಲಿ ಲೆಕ್ಕವಿಲ್ಲದಷ್ಟಿವೆ. ಆದರೂ ಬಾಳೆ ಬೆಳೆಯುವ ಧೈರ್ಯ ಹೇಗೆ ಎಂದರೆ ಅದೂ ತೊಂದರೆ ಇಲ್ಲಾ , ಅವು ಯಾವತ್ತೂ ಬಂದು ತೊಂದರೆ ಕೊಟ್ಟಿಲ್ಲ, ಕಾಡಲ್ಲೇ ಬೇಕಾದಷ್ಟು ಹಣ್ಣು ಅವುಗಳಿಗೆ ಸಿಗುತ್ತೆ , ಹೊಟ್ಟೆ ತುಂಬಿದರೆ ಅವು ಸುಮ್ಮನೆ ಬೇರೆಯದನ್ನು ಹಾಳು ಮಾಡುವುದಿಲ್ಲ, ಹಾಗಾಗಿ ಇಲ್ಲಿ ಬಾಳೆಯ ಬೆಳೆಗೆ ಯಾವುದೇ ತೊಂದರೆಯಿಲ್ಲ ಅಂದರು. ತಕ್ಷಣ ನೆನಪಾಯಿತು ವಾಲ್ಮಿಕೀಯ ವರ್ಣನೆ, ವಿಧವಿದವಾದ ಫಲಗಳನ್ನು ಹೊಂದಿರುವ ವೃಕ್ಷಗಳಿಂದ ....

ಕಡಿದಾದ ಬೆಟ್ಟವನ್ನು ಹತ್ತುವಾಗ ಅಂತಹ ಕಲ್ಲು ಬಂಡೆಗಳ ನಡುವೆಯೂ ಬೇರು ಬಿಟ್ಟು ನಗುವ ಮರಗಳು. ಇನ್ನೊಂದೆರೆಡು ಮಳೆ ಬಿದ್ದ ಮೇಲೆ ಇದರ ಕಾಂಡವೆಲ್ಲಾ ಬೆಳ್ಳಗೆ ಕಾಣುತ್ತವೆ ಇಲ್ಲಿ ನೋಡಿ ಈಗಾಗಲೇ ಮುಕ್ಕಾಲು ಭಾಗ ಬೆಳ್ಳಗಾಗಿದೆ ಎಂದು ಗೈಡ್ ಕರೆದು ಬೆರಳು ಮಾಡಿ ತೋರಿಸುತ್ತಿದ್ದರೆ ಶ್ವೇತವರ್ಣದ ಕಾಂಡಗಳುಳ್ಳ..... ಅನ್ನೋ ಅರ್ಥವುಳ್ಳ ಸಂಸ್ಕೃತ ಶ್ಲೋಕವನ್ನು ಹೇಳುತ್ತಾ ಅಣ್ಣ ಮುಗುಳು ನಗುತಿದ್ದ.  ಮೇಲಕ್ಕೆ ಹತ್ತಿ ಬಂದರೆ ಕರವೀರ, ಕಣಗಿಲೆಗಳು ತಲೆದೂಗಿ ಸ್ವಾಗತಿಸಿದವು. ಅಣ್ಣನ ಕಡೆ ನೋಡಿದರೆ ಅವನ ಕಣ್ಣಲ್ಲಿ ಮಿಂಚು. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಮುನಿಯೊಬ್ಬ ರಚಿಸಿದ ಕಾವ್ಯದಲ್ಲಿ ಇದ್ದ ಭೌಗೋಳಿಕ ಲಕ್ಷಣಗಳು ಇಷ್ಟು ಸರಿಯಾಗಿ ಇರಬೇಕಾದರೆ ಅವನ ಜ್ಞಾನ ಅದೆಷ್ಟಿರಬೇಕು. ಎಲ್ಲವೂ ಕಾಲ್ಪನಿಕ ಅನ್ನುವ ಕತೆಯೊಂದು ಹೀಗೆ ಕುರುಹುಗಳನ್ನು ಬಿಟ್ಟುಕೊಡುತ್ತಾ ಧುತ್ತೆಂದು ಎದುರಾದರೆ ಜೀವ ಹೇಗೆ ಸಹಿಸಿ ಕೊಳ್ಳಬೇಕು....

ಇನ್ನೂ ಆ ಮೂಡ್ ನಿಂದ ಹೊರ ಬರುವ ಮುನ್ನವೇ  ದೂರಕ್ಕೆ ಬೆರಳು ತೋರಿಸಿ ನೋಡಿ ಅದೇ ಪಂಪಾ ಸರೋವರ ಅನ್ನುತಿದ್ದರು ಗೈಡ್.. ಮೈ ನಡುಕ ಹುಟ್ಟಿಸಿದ್ದು ಅನಾವರಣ ಗೊಂಡ ಸತ್ಯವಾ ಇಲ್ಲಾ ಕಪ್ಪುಗಟ್ಟಿದ್ದ ಮೋಡಗಳಾ, ತಣ್ಣಗೆ ಬೀಸುತ್ತಿದ್ದ ಗಾಳಿಯಾ..,   ಧನ್ಯತೆಯಿಂದ ಆ ಬೆಟ್ಟದ ತುದಿಯಲ್ಲಿ ಕಣ್ಮುಚ್ಚಿ ಕುಳಿತರೆ ಸಣ್ಣಗೆ ಜಿನುಗುತ್ತಿದ್ದ ಮಳೆ ಸಂತೈಸುತಿತ್ತಾ.. ಹನಿ ಹನಿಯಾಗಿ ಸುರಿವ ಮಳೆ ಇಳೆಯ ಜೊತೆ ಮನಸ್ಸನ್ನೂ ತೇವಗೊಳಿಸಿ ಹದವಾಗಿಸುತಿತ್ತಾ... ಮೊಳಕೆಯೊಡೆಯಲು ಸಜ್ಜುಗೊಳಿಸುತಿತ್ತಾ....

ಇಡೀ ಹಂಪಿ ಅಲ್ಲಿಂದ ಅದ್ಭುತವಾಗಿ ಕಾಣಿಸುತ್ತದೆ. ರಾಜ ಮಂದಿರಗಳ ಆವರಣ, ಅಲ್ಲಿಂದ ವಿಜಯ ವಿಠಲ ದೇವಸ್ಥಾನಕ್ಕೆ ಬರುವ ದಾರಿ, ಅಲ್ಲಲ್ಲಿ ಕಟ್ಟಿದ ಕಾವಲು ಗೋಪುರಗಳು, ಇತ್ತಕಡೆ ಧಿಮಂತವಾಗಿ ನಿಂತ ವಿರುಪಾಕ್ಷ, ಅವನ ಬಳಿಯಲ್ಲಿ ಕಲ್ಲು ಬಂಡೆಗಳನ್ನು ಕೊರೆದುಕೊಂಡು ತಣ್ಣಗೆ ಹರಿದು ಹೋಗುವ ತುಂಗಭದ್ರೆ. ಅತ್ತ ಕಡೆ ಕಾಣುವ ಅಂಜನಾದ್ರಿ. ಹರಡಿಕೊಂಡು ಬಾಳೆಯ ತೋಟ. ಇಡೀ ಹಂಪಿಗೆ ನೀರಿನ ವ್ಯವಸ್ತೆ ಮಾಡಲು ತೋಡಿದ ಕಾಲುವೆಗಳು. ಅಲ್ಲಿಂದ ಸುಮಾರು ಮುನ್ನೂರು ಕಿಲೋ ಮೀಟರ್ ಗಳಗೆ ಹಬ್ಬಿರುವ ಕಲ್ಲು ಬಂಡೆಗಳನ್ನು ಗುಪ್ಪೆ ಹೊಡೆದಂತೆ ಕಾಣುವ ಕಲ್ಲಿನ ಗುಡ್ಡಗಳು.

ಬೆಟ್ಟದ ತುದಿಯಲ್ಲಿರುವ ಮತಂಗ ಮುನಿಗೆ ನಮಸ್ಕರಿಸಿ ಹೊರಗೆ ಬರುವಾಗ ಆಕಾಶ ಭೂಮಿ ಒಂದು ಮಾಡಿ ಧೋ ಎಂದು ಸುರಿವ ಮಳೆ ಯಾರಿಗೂ ಅವರ ಪ್ರೇಮಾಲಾಪ ಕಾಣದಂತೆ ಶ್ವೇತ ವಸ್ತ್ರವನ್ನು ಹೊಚ್ಚಿ ಮರೆ ಮಾಡಿತ್ತು. ಇನ್ನಷ್ಟು ಪ್ರೈವಸಿ ಬೇಕೇನೋ ಎಂಬಂತೆ ಆಕಾಶ ಕಪ್ಪು ಮೋಡಗಳನ್ನು ತುಂಬಿಕೊಂಡು ಕತ್ತಲು ಆವರಿಸಿಕೊಂಡಿತೇನೋ ಎಂಬ ಭ್ರಮೆ ಹುಟ್ಟಿಸಿತ್ತು. ಸುರಿಯುವ ಮಳೆಯಲ್ಲಿ, ತುಂಗೆಯ ಶ್ರುತಿ ಹಿಡಿದು, ಹೊರಗಿದ್ದ ನೀರವತೆಯನ್ನು ಆವಾಹಿಸಿಕೊಂಡು ಕಣ್ಣು ಮುಚ್ಚಿ ಕುಳಿತು ಏಳುವಾಗ ಸೂರ್ಯ ನಸು ನಗುತಿದ್ದ.

ಜಾರುವ ಕಲ್ಲುಗಳ ಮೇಲೆ ಹೆಜ್ಜೆಯಿಡುತ್ತಾ ಮನಸ್ಸಿಲ್ಲದ ಮನಸ್ಸಿನಿಂದ ಬೆಟ್ಟ ಇಳಿಯುತ್ತಿದ್ದರೆ ಮರಗಿಡಗಳು ಹನಿಯುದರಿಸಿ ಆಶೀರ್ವಾದ ಮಾಡುತ್ತಿದ್ದವು. ಚಂಗನೆ ಚಿಮ್ಮಿಹೋದ ಕಾಡುಕೋಳಿ, ನಮ್ಮ ಪರಿವೆಯೇ ಇಲ್ಲದಂತೆ ವಯ್ಯಾರವಾಗಿ ಹೋಗುತಿದ್ದ ನವಿಲು, ಯಾವುದೋ ಹಣ್ಣನ್ನು ಎರಡೂ ಕೈಯಲ್ಲಿ ಹಿಡಿದು ತಿನ್ನುತಿದ್ದ ವಾನರ ಕುಟುಂಬ,  ಕಾಲಬಳಿ ಇರುವ ಸಹಸ್ರ ಕಾಲುಗಳೂ ಸಾಲದೇನೋ ಎಂಬಂತೆ ಸಾಗಿ ಹೋಗುತಿದ್ದ ಸಹಸ್ರಪದಿ,  ಕಲ್ಲು ಪೊಟರೆಯ ಸಂದಿನಲ್ಲಿ ತಲೆಯಿತ್ತಿ ನಿಂತಿದ್ದ ಬೆಳ್ಳಗಿನ ಕಾಂಡದ ಮರ ಇವುಗಳ ಜೀವಂತಿಕೆಯ ಎದುರು ನಮ್ಮ ಸೋತ ಕಾಲುಗಳು...

ಹೋಗಿದ್ದು ರಾಯನನ್ನು ನೋಡಲು ಸಿಕ್ಕಿದ್ದು ಮಾತ್ರ ರಾಮ....

Comments

Popular posts from this blog

ಮೃಗವಧೆ

ನನ್ನಿ