ದಹನ.

ಮೊನ್ನೆ ಪುಸ್ತಕ ಬಿಡುಗಡೆಯ ಸಮಯದಲ್ಲಿ ಮಾತಾಡ್ತಾ ಸೇತುರಾಂ ಸರ್ ಹೇಳ್ತಾ ಇದ್ರು. ಜನಕ್ಕೆ ಮಾತಾಡ್ತಾ ಏನಾದರೂ ವಿಷ್ಯ ಹೇಳಿದರೆ ಏನೋ ಕತೆ ಹೇಳ್ತಿಯಾ ಅಂತಾರೆ ನಂಬೋಲ್ಲ, ಅದೇ ಕತೆ ಬರೀರಿ ಇದು ನಿಮ್ಮದೇ ವಿಷಯವಾ ಕೇಳ್ತಾರೆ ಅಂತ. ನಗು ಉಕ್ಕಿ ಬಂದರೂ ಎಷ್ಟು ಸತ್ಯವಲ್ಲವಾ ಅನ್ನಿಸಿತು. ನಮಗೆ ಮಾತಲ್ಲಿ ಕತೆಯನ್ನ, ಕತೆಯಲ್ಲಿ ವೈಯುಕ್ತಿಕ ಬದುಕನ್ನ ಹುಡುಕುವ ಚಪಲ. ಅದ್ಯಾಕೆ ಅಂತ ಎಷ್ಟೋ ಸಲ ಯೋಚನೆ ಬಂದರೂ ಇನ್ನೂ ಉತ್ತರ ಸಿಗದೇ ಕಗ್ಗಂಟಾಗಿಯೇ ಉಳಿದಿದೆ. ವಾಸ್ತವದಲ್ಲಿ ಭ್ರಮೆಯನ್ನ, ಭ್ರಮೆಯಲ್ಲಿ ವಾಸ್ತವವನ್ನು ಹುಡುಕುವುದೇ ನಮಗೆ ಅಭ್ಯಾಸವಾಗಿದೆಯಾ... ಹಾಗಾಗಿಯೇ ನಮಗೆ ವಾಸ್ತವಕ್ಕಿಂತ ಕಲ್ಪನೆಯೇ ಪ್ರಿಯವಾಗುತ್ತದಾ... ಅಥವಾ ನಮಗೆ ವಾಸ್ತವದ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲವಾ ಹಾಗಾಗಿಯೇ ಕಲ್ಪನೆ ಪ್ರಿಯವಾಗುತ್ತದಾ... ಉಹೂ ಉತ್ತರ ಹುಡುಕಲು ಸಮಯವಿಲ್ಲ ಅನ್ನುವ ಸಮರ್ಥನೆ ಅಂತೂ ಎದುರಾಗಿ ಅಲ್ಲಿಂದ ಕರೆದೊಯ್ಯುತ್ತದೆ.

ಸಮಾಜ ಸರಿಯಿಲ್ಲ, ಕಾಲ ಕೆಟ್ಟಿದೆ ಇದು ನಾವು ಸಾಮಾನ್ಯವಾಗಿ ಕೇಳುವ ಬಳಸುವ ಮಾತು. ಇದು ನಿಜವಾ ಕೆಟ್ಟಿದ್ದು ಸಮಾಜವಾ.. ಹಾಗಾದರೆ ಸಮಾಜ ಅಂದರೆ ಏನು? ಅದು ನಿರ್ಮಾಣವಾಗಿದ್ದು ಹೇಗೆ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ನಮ್ಮ ಬುಡಕ್ಕೇ ಬರುತ್ತದೆ. ನಾವು ಸಹಜವಾಗಿ  ಜವಾಬ್ದಾರಿ, ಬಾಧ್ಯತೆಗಳಿಂದ ಹೊರಗೆ ಹೋಗಲು ಕಳಚಿಕೊಳ್ಳಲು ಸದಾ ಪ್ರಯತ್ನ ಪಡುತ್ತೇವೆ. ಹಾಗಾಗಿಯೇ ನಮಗೆ ಸ್ವಂತದವರು ದೂರ ಹಾಗೂ ದೂರದವರು ಹತ್ತಿರ ಅನ್ನಿಸೋದು. ಅದೊಂದು ಹೊರೆ. ಎಷ್ಟು ಬೇಗ ಕೆಳಗಿಳಿಸುತ್ತೆವೋ ಅಷ್ಟು ನಿರಾಳ, ಅಷ್ಟು ಹಗುರ. ಆದರೆ ಹಕ್ಕಿಗಾಗಿ ಹೋರಾಡುತ್ತೇವೆ. ನಮ್ಮ ಅಧಿಕಾರ ಸ್ಥಾಪಿಸಲು ಒದ್ದಾಡುತ್ತೇವೆ. ಅದಕ್ಕಾಗಿ ಏನಾದರೂ ಮಾಡಲು ತಯಾರಾಗುತ್ತೇವೆ. ಮಗಳು ಜವಾಬ್ದಾರಿ, ಮಗ ಹಕ್ಕು ಹಾಗಾಗಿಯೇ ಗಂಡು ಮಗ ಪ್ರಿಯ.. ಬದುಕು ಅವನಿದ್ದರೆ ಸಾರ್ಥಕ.

ಭ್ರಷ್ಟಾಚಾರ ಅನ್ನೋದು ಒಂದು ಚಕ್ರವ್ಯೂಹ ಇದ್ದ ಹಾಗೆ. ಒಳಗೆ ಹೋಗುವವರೆಗೂ ಸ್ವತಂತ್ರರು. ಒಮ್ಮೆ ಒಳಗೆ ಅಡಿಯಿಟ್ಟ ಮೇಲೆ ಹೊರಬರಲು ಸಾಧ್ಯವಿಲ್ಲ. ಅಲ್ಲಿಯೇ ಸುತ್ತಬೇಕು. ಒಳಗೊ ಹೊರಗೋ ತಿಳಿಯದೆ ಹೋಗುತ್ತಿರಬೇಕು. ಬದುಕಿಗೆ ಆಸೆ ಬೇಕು. ಆಸೆಯಿಲ್ಲದ ವಿರಕ್ತ ಬದುಕು ಸಾಧ್ಯವಿಲ್ಲ. ಆದರೆ ದುರಾಸೆ ಅದು ಬರುತಿದ್ದ ಹಾಗೆ ಚಕ್ರವ್ಯೂಹದ ಬಾಗಿಲು ತೆರೆದುಕೊಳ್ಳುತ್ತದೆ. ಆಮಿಷದ ಪ್ರಪಂಚ ತೋಳು ತೆರೆದು ಸ್ವಾಗತಿಸುತ್ತದೆ. ತೃಪ್ತಿ ಇರದ ಬದುಕು ಅತ್ತ ಓಡುವ ಹಾಗೆ ಮಾಡುತ್ತದೆ. ಒಮ್ಮೆ ಗೆರೆ ದಾಟಿ ಒಳಗೆ ಅಡಿಯಿಟ್ಟರೆ ಮುಗಿಯಿತು. ಹೊರಬರುವ ದಾರಿ ಗೊತ್ತಿರುವುದು ಕೇವಲ ಕೃಷ್ಣ ಹಾಗು ಅರ್ಜುನನಿಗೆ ಮಾತ್ರ. ಅಭಿಮನ್ಯವೂ ಸೋತು ಸಾಯಲೇಬೇಕಾಯ್ತು.

ಹಳಿ ತಪ್ಪಿದ ಬದುಕು ಹೇಗೆ ಬದುಕನ್ನ ಆಪೋಶನ ತೆಗೆದುಕೊಳ್ಳುತ್ತದೆ ಅನ್ನುವುದಕ್ಕೆ ಸೋಮಸುಂದರನ ಬದುಕು ಸಾಕ್ಷಿಯಾಗಿ ನಿರೂಪಿಸುತ್ತಾ ಹೋಗುತ್ತದೆ. ಒಂದನ್ನು ಪಡೆಯಲು, ಅದನ್ನು ಅನಿವಾರ್ಯವಾಗಿ ಉಳಿಸಿಕೊಳ್ಳಲು ಎಷ್ಟನ್ನು ಕಳೆದುಕೊಳ್ಳುತ್ತಾ ಹೋಗಬೇಕು, ಏನೆಲ್ಲಾ ಸಹಿಸಬೇಕು ಅನ್ನುವುದನ್ನ ಪ್ರತಿ ಘಟನೆಯೂ ವಿವರಿಸುತ್ತಾ ಹೋಗುತ್ತದೆ. ಬದುಕು ಕಟ್ಟಿಕೊಳ್ಳುವುದು ಬಲು ಕಷ್ಟ. ಒಂದೊಂದೇ ಇಟ್ಟಿಗೆಯನ್ನು ಇಟ್ಟು ಗಾರೆ ಮಾಡಿ ಪ್ರಮಾಣ ಅಳತೆ ಎಲ್ಲವೂ ಸರಿಯಾಗಿ ನೋಡಿಕೊಳ್ಳುತ್ತಾ, ಹದ ಕಾಪಾಡಿಕೊಳ್ಳುತ್ತಾ ಇದು ಅತ್ಯಧಿಕ ಶ್ರಮ, ಗಮನ ಎಲ್ಲವನ್ನೂ ಬೇಡುತ್ತದೆ. ಬೀಳಿಸುವುದು ತುಂಬಾ ಸುಲಭ. ಗಾರೆಯ ಹದ ತಪ್ಪಿಸಿದರೂ ಸಾಕು, ಇಲ್ಲ ಇಟ್ಟಿಗೆಯನ್ನು ತಪ್ಪಾಗಿ ಇಟ್ಟರೂ ಆದೀತು. ಹಾಗಾಗಿಯೇ ಸತ್ಯದ ಹಾದಿ ಕಡು ಕಷ್ಟದ್ದು, ಸುಳ್ಳಿನದು ಹೇಗೆ ಬೇಕಾದರೂ ನಡೆದೀತು.

ಜವಾಬ್ದಾರಿ ಇರದ ತನಕ ಎಲ್ಲವೂ ಚೆಂದ, ನೆಮ್ಮದಿ ಅನ್ನಿಸುವ ಹೊತ್ತಿಗೆ ಅಲ್ಲೊಂದು ಬಾಧ್ಯತೆ ಬಂದಿತು ಎಂದರೆ ಉಸಿರುಗಟ್ಟುವ ಹಾಗಾಗುತ್ತದೆ, ಬಂಧನವೆನಿಸಲು ತೊಡಗುತ್ತದೆ. ಮನಸ್ಸು ಬಯಲಿಗೆ ಬರಲು ಹಪಾಹಪಿಸುತ್ತದೆ. ಕಳಚಿಕೊಳ್ಳುವ ದಾರಿ ಹುಡುಕುತ್ತದೆ, ಅಲ್ಲಿಗೆ ಸಂಬಂಧವೊಂದು ಮಗ್ಗುಲು ಬದಲಾಯಿಸಿತು ಎಂದೇ ಅರ್ಥ. ಜವಾಬ್ದಾರಿ ಬಂಧನವಲ್ಲ, ಬಂಧಿಸುವ ತಂತು ಎಂದು ಅರ್ಥವಾದರೆ ಬದುಕು ಸಹ್ಯವಾಗುತ್ತದೆ. ಕೇಳುವ ತಾಳ್ಮೆ, ಅವರ ಜಾಗದಲ್ಲೂ ನಿಂತು ಯೋಚಿಸಲು ಕಲಿತರೆ ಗೋಡೆ ಕರಗುತ್ತದೆ. ಇಲ್ಲವಾದಲ್ಲಿ ಬಯಲಿಗೆ ಬಾರಲು ದಾರಿಯಲ್ಲದೆ, ಬಂಧನದಲ್ಲಿ ಬದುಕಲಾಗದೆ ಬದುಕು ಅತಂತ್ರವಾಗುತ್ತದೆ.

ಅನಿವಾರ್ಯಕ್ಕೆ, ಅಸಹಾಯಕತೆಗೆ ಸಿಲುಕಿದ ಅಥ್ವಾ ಅದರಿಂದ ಹುಟ್ಟಿದ ಸಂಬಂಧ ಯಾವತ್ತೂ ಸುಖಿಯಾಗಿರಲಾರದು. ಅದೊಂದು ಬೆನ್ನ ಮೇಲೆ ಹೊತ್ತ ಹೊರೆ. ಹೊರಲಾರೆವು, ಇಳಿಸುವ ಅಘೋಷಿತ ಪ್ರಯತ್ನವೊಂದು ಸದಾ ಜಾರಿಯಲ್ಲಿರುತ್ತದೆ. ಬದುಕು ನಳನಳಿಸಲು ಮನೆಯ ಮಣ್ಣು ಹದವಾಗಿರಬೇಕು. ಅಲ್ಲೊಂದು ತೇವವಿರಬೇಕು. ಪ್ರೀತಿಯ ಫಲವತ್ತತೆ ಕಾಪಾಡಿಕೊಳ್ಳಬೇಕು. ಜವಾಬ್ದಾರಿಯೆಂಬ ಬೇಲಿಯಂತೂ ಬೇಕೇಬೇಕು. ಇಲ್ಲದಿದ್ದರೆ ಹಾದಿಯ ದನಗಳು ನುಗ್ಗುತ್ತವೆ. ಒಮ್ಮೆ ನುಗ್ಗಿದ ಮೇಲೆ ತುಳಿಸಿಕೊಳ್ಳುವುದರ ವಿನಃ  ಬೇರೆ ಮಾರ್ಗವಿಲ್ಲ. ತುಳಿದಾಡಿ ನುಜ್ಜುಗುಜ್ಜು ಮಾಡಲೇ ಬೇಕು ಅಂತೇನಿಲ್ಲ. ಆಯಕಟ್ಟಿನ ಜಾಗದಲ್ಲಿ ಕೊಡುವ ಒಂದು ಪೆಟ್ಟು ಸಾಕೂ ಬದುಕು ಬೋರಲು ಬೀಳಲು. ಬಿದ್ದ ಮೇಲೆ ಇನ್ನೇನಿದೆ.....

ಪ್ರಾಣಿಗಳು ತಮ್ಮ ಸಿಟ್ಟನ್ನು, ದ್ವೇಷವನ್ನು, ಅಯಿಷ್ಟವನ್ನು ದೈಹಿಕವಾಗಿ ಘಾಸಿಗೊಳಿಸುವುದರ ಮೂಲಕ ವ್ಯಕ್ತಪಡಿಸುತ್ತವೆ. ದೇಹಕ್ಕಾದ ನೋವು ಗುರುತಿಸಬಹುದು, ಬೇಗ ಮಾಯಲೂ ಬಹುದು. ಮತ್ತೆ ಅಲ್ಲೇ ಪೆಟ್ಟು ಬೀಳದಂತೆ ಎಚ್ಚರವಹಿಸಬಹುದು. ಔಷಧಿಯನ್ನೂ ಹಚ್ಚಬಹುದು. ಆದರೆ ಮನುಷ್ಯ ಬುದ್ಧಿವಂತ ಪ್ರಾಣಿ.  ಅವನದು ಮಾನಸಿಕ ಹೊಡೆತ. ನೋವಿನ ಅರಿವಾಗುತ್ತೆ, ಗಾಯ ಕಾಣಿಸುವುದೇ ಇಲ್ಲ. ಕಾಣಿಸದೆ ಇದ್ದ ಮೇಲೆ ಔಷಧಿ ಹಚ್ಚ್ಹುವುದಾದರೂ ಎಲ್ಲಿಗೆ? ಹಸಿ ಗಾಯ ಒಣಗುವುದು ಹೇಗೆ? ಒಣಗದಿದ್ದರೆ ವಾಸಿಯಾಗುವುದಾದರೂ ಹೇಗೆ? ಹಾಗಾಗಿಯೇ ಕೊಳೆಯುತ್ತದೆ. ಕೊಳೆತು ನಾರುತ್ತದೆ. ನಿಧಾನಕ್ಕೆ ಇಡೀ ದೇಹವೆಲ್ಲಾ ಆವರಿಸಿ ಕ್ಷೀಣಿಸುವ ಹಾಗೆ ಮಾಡುತ್ತದೆ. ಮನುಷ್ಯ ಬಂದಳಕಕ್ಕಿಂತ ಅಪಾಯಕಾರಿ ಅನ್ನೋದು ಶ್ಯಾಮಸುಂದರ ಪರಿಚಯಿಸುತ್ತಾನೆ.

ರುಚಿಗೆ, ಸೌಂದರ್ಯಕ್ಕೆ ಹೇಗೆ ಬೆಳೆದರೂ ಆದೀತು ಅನ್ನೋದಕ್ಕಿಂತ ಹೇಗೋ ಬೆಳೆದದ್ದೇ ಪ್ರಿಯ. ಆದರೆ ಪೂಜೆಗೆ ಮಾತ್ರ ಅರ್ಹತೆ ಬೇಕು. ಒಂದು ಕಟ್ಟುಪಾಡು ಇರಬೇಕು. ಶಿಸ್ತು ಅತ್ಯಗತ್ಯ. ಇವತ್ತಿಗೂ ಸೀತೆ ಹೆಂಡತಿಯಾಗಿ ಬೇಕು. ಪಕ್ಕದ ಮನೆಯವರು ಮಾತ್ರ ಆಧುನಿಕವಾಗಿರಬೇಕು. ಮನುಷ್ಯ ಎಷ್ಟೇ ಆಧುನಿಕತೆ, ಸ್ವಾತಂತ್ರ್ಯ, ನಾಗರಿಕತೆ ಅಂದರೂ ಅವೆಲ್ಲವೂ ಬಾಹ್ಯಕ್ಕೆ. ನೋಟದ ತೃಪ್ತಿಗೆ. ಕ್ಷಣದ ಸುಖಕ್ಕೆ. ಆದರೆ ಆಂತರ್ಯಕ್ಕೆ ಮಾತ್ರ ಸಾಂಪ್ರದಾಯಿಕತೆ ಬಯಸ್ತಾನೆ. ಮನೆ ದೇವಸ್ಥಾನ. ಮನೆಯವರು ಗರ್ಭಗುಡಿಯ ಮೂಲ ವಿಗ್ರಹಗಳು. ಬಂದವರು ಕೈ ಮುಗಿಯವಹಾಗಿರಬೇಕು. ಉತ್ಸವ ಮೂರ್ತಿ ಮಾತ್ರ ಎಲ್ಲಾ ಕಡೆ ಸುತ್ತಿ ಬಂದರೂ ಅದರ ಜಾಗ ಮಾತ್ರ ಹೊರಗೇ....

ಬದುಕು ಪ್ರಾಮಾಣಿಕವಾಗಿದ್ದಾಗ ಬರಹವೂ ಪ್ರಾಮಾಣಿಕವಾಗಿರುತ್ತದೆ. ಅಲ್ಲೊಂದು ಅವ್ಯಕ್ತ ಶಕ್ತಿ ಇರುತ್ತೆ. ಅದು ಸೆಳೆಯುತ್ತದೆ. ಆದರೆ ಎರಡೂ ಬೇರೆ ಬೇರೆಯಾದಾಗ, ಮುಖವಾಡಗಳ ಬದುಕು ಆದಾಗ ಜಾತ್ರೆ ಕ್ಷಣಕಾಲ ಮೆರೆದರೂ ಆಮೇಲೆ ಬಣ್ಣ ಬೆವರಲ್ಲಿ ಕರಗತೊಡುಗುತ್ತದೆ. ಬಣ್ಣ ಕಳಚಿಟ್ಟ ಮುಖ, ಬಣ್ಣ ತೊಟ್ಟ ಮುಖ ಎರಡೂ ಸುಂದರವೇ, ನೋಡಲು ಸಹ್ಯವೇ. ಆದರೆ ಬೆವರಿನಲ್ಲಿ ಬಣ್ಣ ಕರಗುವ ಮುಖ ಮಾತ್ರ ನೋಡಲು ಅಸಹ್ಯತರುತ್ತದೆ. ಜುಗುಪ್ಸೆ ಬರುವ ಹಾಗೆ ಮಾಡುತ್ತದೆ. ಇದ್ದ ನಮ್ಮನ್ನು ಬಿಟ್ಟು ಇನ್ನೇನೋ ನಾವು ಎಂದು ತೋರಿಸಿಕೊಳ್ಳುವ ಪ್ರಯತ್ನದ ಆಯಸ್ಸು ತುಂಬಾ ಕಡಿಮೆ. ಆದರೆ ಅದರ ಸಾವು ಮಾತ್ರ ಭಯಂಕರ. ಅದು ಸುಡುತ್ತದೆ. ಹೇಗೆ ಸುಡುತ್ತದೆ ಅನ್ನೋದನ್ನ ದಹನ ಚೆನ್ನಾಗಿ ವಿವರಿಸುತ್ತದೆ.

ಹಾಗಾದರೆ ಸುಖ ಅಂದರೆ ಯಾವುದಕ್ಕೆ ಸಂಬಂಧ ಪಟ್ಟಿದ್ದು ಮನಸ್ಸಿಗಾ, ದೇಹಕ್ಕಾ? ಯಾವುದೇ ಒಂದಕ್ಕೆ ಆದರೂ ಅದು ಪೂರ್ಣವಲ್ಲ.  ದೇಹ ಮನಸ್ಸು ಏಕವಾಗಿ ಅನುಭವಿಸಿದಾಗ ಮಾತ್ರ ಅದು ಸತ್ಯ, ನಿತ್ಯ. ಭಾವ ಬೇರೆ, ವರ್ತನಯೇ ಬೇರೆ ಆದಾಗ ಅದು ನಟನೆಯಾಗುತ್ತದೆ. ಹಾಗೆ ನಟನೆಯಾದಾಗ ಒಂದೋ ಸಹಜತೆಯೇ ಮರೆತು ಹೋಗಬಹುದು. ಇಲ್ಲವೇ ಸುಸ್ತಾಗಿ ಬೇಗ ಬಿದ್ದು ಹೋಗಲೂ ಬಹುದು. ಚಲನೆಯಲ್ಲಿ ಎಡವುವುದು ತೀರಾ ಸಹಜ, ಆದರೆ ಮತ್ತೆ ಎದ್ದು ಹೆಜ್ಜೆ ತಪ್ಪದಂತೆ ಜಾಗೃತೆ ವಹಿಸುವುದು ಮಾತ್ರ ನಮ್ಮ ಕರ್ತವ್ಯ.

ಸೇತುರಾಂ ಈ ಕಥಾಸಂಕಲನ ತುಂಬಾ ವಾಚ್ಯ, ಕಟು ಹಾಗೂ ನಾಟಕದ ಹಾಗಿದೆ ಅನ್ನೋದು ಸತ್ಯ. ಇಲ್ಲಿ ನವಿರುತನವಿಲ್ಲ. ಕಾಲ್ಪನಿಕ ಕಥೆ ಅಂದರೂ ಓದುವಷ್ಟು ಹೊತ್ತು, ಓದು ಮುಗಿದ ಮೇಲೂ ಇದು ಕೇವಲ ಕಲ್ಪನೆ ಮಾತ್ರ ಅನ್ನಿಸೋದೂ ಇಲ್ಲ. ಅವರು ಎದುರಿಗೆ ಕುಳಿತು ಹೇಳುತ್ತಿದ್ದಾರೇನೋ, ಕೆಲವೊಮ್ಮೆ ತಮಗೆ ತಾವೇ ಮಾತಾಡಿಕೊಳ್ಳುತ್ತಿದ್ದಾರೆನೋ ಅನ್ನಿಸುವುದು ಹೌದು. ಆದರೆ ಅವರು ತೆಗೆದುಕೊಂಡ ವಿಷಯವೇ ಹಾಗಿದೆ. ಅಲ್ಲಿ ನೋವಿದೆ, ಆಕ್ರೋಶವಿದೆ, ಹೊಲಸು ವ್ಯವಸ್ಥೆಯನ್ನು ಪ್ರಶ್ನಿಸುವ ಗಟ್ಟಿ ದನಿಯಿದೆ. ವಾಸ್ತವದಲ್ಲಿ ನಿಂತು ಅನುಭವಿಸಿದ ಅವಮಾನವಿದೆ. ಗದ್ದಲದ ನಡುವೆ ದನಿ ಎತ್ತರಿಸದಿದ್ದರೆ ಅದು ಕೇಳದೇ ಹೋಗಬಹುದು, ಅಥವಾ ನಿರೀಕ್ಷಿತ ರೀತಿಯಲ್ಲಿ ಮುಟ್ಟದೇ ಇರಬಹುದು.

ಆಳಕ್ಕಿಳಿಯಬೇಕಾದರೆ ಚೂಪಾಗಿರಬೇಕು. ಹರಿತವಾದದ್ದು ಮಾತ್ರ ಸೀಳಿಕೊಂಡು ಒಳಕ್ಕೆ ಇಳಿಯುತ್ತದೆ. ಹಾಗೆ ಅಗೆದಾಗ ಮಾತ್ರ ಅಲ್ಲೊಂದು ಭಾವದ ಬೀಜ ಮೊಳಕೆ ಒಡೆಯುತ್ತದೆ. ಹಾಗಾಗಿ ಅವರು ಈ ಮಾರ್ಗವನ್ನು ಆಯ್ದುಕೊಂಡರೇನೋ.. ಇದನ್ನು ಹೀಗಲ್ಲದೆ ಬೇರೆ ಹೇಗೆ ಹೇಳಿದರೂ ಅರ್ಥವಾಗದಷ್ಟು ನಾವು ಜಡ್ಡುಗಟ್ಟಿಹೋಗಿದ್ದೆವೇನೋ. ಆ ಜಿಡ್ಡು ತೊಳೆಯಲು ಬಿಸಿ ಅಗತ್ಯ. ಇಲ್ಲಿರುವ ಮೂರು ಕತೆಗಳು ಹೆಣ್ಣಿನ ನೋವಿನ, ಅವಳು ಅನುಭವಿಸಿದ ಅವಮಾನದ ಕತೆಗಳು. ಅದರಿಂದ ಅವಳು ಗಟ್ಟಿಯಾಗಿ ಹೊರಬಂದ ಕತೆಗಳು. ಎಷ್ಟೋ ಆಡದೆ ಉಳಿದ ಹೋದ ಮಾತುಗಳಿಗೆ ಇವರು ದನಿಯಾಗಿದ್ದರೆನೋ ಅನ್ನುವ ಹಾಗಿದೆ. ಹಾಗೆ ಇನ್ಯಾರೋ ಆಡಿದ್ರಲ್ಲ ಸದ್ಯ ಅನ್ನೋ ನಿರಾಳತೆ ಕೊಡುವ ಹಾಗಿದೆ.

ಅವರೇ ಹೇಳಿದಂತೆ ಒಂದು ಹೆಣ್ಣು ಇದನ್ನು ಬರೆದರೆ ಸಮಾಜದ ಪ್ರಶ್ನೆಗಳೇ ಬೇರೆಯಾಗುತ್ತವೆ. ಅದನ್ನು ಎಲ್ಲರೂ ದಕ್ಕಿಸಿಕೊಳ್ಳಲಾರರು. ಹಾಗಾಗಿಯೇ ಇವರು ಬರೆದಿದ್ದಾರೆ. ಬರೆಯುವ ಮೂಲಕ ಹೂತುಹೋಗಬಹುದಾಗಿದ್ದ ಒಂದಷ್ಟು ದನಿಗಳಿಗೆ ಜೀವ ಕೊಟ್ಟಿದ್ದಾರೆ. ಒಳಗೆ ಜಡ್ಡು ಕಟ್ಟಿ ಭಾರವಾಗಿದ್ದ ಭಾವಗಳನ್ನು ದಹಿಸುವ ಹಾಗೆ ಮಾಡಿ ನಿರಾಳತೆಯನ್ನು ಅನುಭವಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಹೆಸರೇ ದಹನ. ದಹಿಸುತ್ತದೆ. ಸ್ವಲ್ಪ ಕಾವು ತಡೆದುಕೊಳ್ಳಬೇಕು ಅಷ್ಟೇ... ಆಮೇಲಿನ ನಿರಾಳತೆ ಅನುಭವಿಸಲು, ಜಾಗ ಖಾಲಿ ಮಾಡಿ ಮತ್ಯಾವುದೋ ಹೊಸತರ ಜನ್ಮಕ್ಕೆ ಕಾರಣವಾಗಲು ಇಷ್ಟಾದರೂ ಕಷ್ಟ ಪಡಲೇಬೇಕಲ್ಲವೇ...

Comments

  1. ಪ್ರೀತಿಯ ಶೋಭಾರಾವ್ ಅವರಿಗೆ,
    ಇವತ್ತು ಅಕಸ್ಮಾತ್ ಆಗಿ ನಿಮ್ಮ ಈ ಬ್ಲಾಗ್ ನೋಡಿದೆ.
    ಪುಸ್ತಕಗಳ ಪರಿಚಯಾತ್ಮಕ ಲೇಖನಗಳಿಂದ ಹಿಡಿದು
    ವೈಚಾರಿಕ ಮತ್ತು ಅಲೌಕಿಕದಂಥ ಸುಮಾರು ಬರಹಗಳನ್ನು ಓದಿದೆ.
    ಒಂದಿಷ್ಟು ತುಂಬ ಮನ ಸೆಳೆದವು. ಯಾವುದೋ ಒಂದು ಲೇಖನದಲ್ಲಿ
    ಕಂಡು ಬಂದ 'ಒಪ್ಪಿಕೊಳ್ಳುವ ಧೈರ್ಯವಿರುವಂತೆ ಧಿಕ್ಕರಿಸುವ ಧೈರ್ಯ
    ಕೂಡ ಇರಬೇಕು' ಅಂತನ್ನುವ ಮಾತು ತೀವ್ರ ಮನ ಸೆಳೆಯಿತು.
    ಇದೊಂದು ಕಠಿಣ ಕಲೆ. ಏಕಕಾಲಕ್ಕೆ ಅಪಾಯವನ್ನೂ ಅಭಯವನ್ನೂ ನೀಡಬಲ್ಲ ಕಲೆ.
    ಯಾವುದಾದರೂ ಕವಿತೆಯ ಸುತ್ತ ಸುತ್ತಬಹುದಾದ ನಿಮ್ಮ ಲಹರಿಗಳನ್ನು ಎದುರು ನೋಡುತ್ತಿದ್ದೇನೆ.
    ಪ್ರೀತಿಯಿಂದ,

    ReplyDelete
    Replies
    1. joshi ಸರ್ ನಿಮ್ಮ ಮೇಲೆ ನಂಗೆ ತುಂಬಾ ಸಿಟ್ಟಿದೆ. ಒಮ್ಮೆ ನಿಮ್ಮ ತಲುಪುವ ಮಾರ್ಗ ಹೇಳಿ ಸಾಕು. ಉಳಿದದ್ದು ನಂಗೆ ಬಿಡಿ.

      Delete

Post a Comment

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.