ಕಳಲೆ

ಮಳೆಗಾಲ ಅಡಿಯಿಡುವ ಹೊತ್ತಿಗೆ ಪ್ರಕೃತಿಯಲ್ಲೂ ನವಸಂಚಾರ. ಹೊಸ ಹುಟ್ಟು, ಹೊಸ ಚಿಗುರು, ಹೊಸತನ. ಹೀಗೆ ಇಳೆ ನೆನೆದು ಹದವಾಗಿ ಹೊಸತನ ಹೊಮ್ಮುವ ವೇಳೆಗೆ ಬಿದಿರು ಮೆಳೆಯಲ್ಲೂ ತೊಟ್ಟಿಲು ತೂಗುವ ಸಂಭ್ರಮ. ಬಿದಿರುಮೆಳೆಯ ಸಮೀಪ ಸುಳಿಯುವವರು ಕಡಿಮೆಯೇ.. ಎಷ್ಟು ಹರಡಿಕೊಂಡರೇನು, ಎಲೆ ಉದುರಿಸಿದರೇನು, ಸೊಂಪಾಗಿ ಹಸಿರು ಚಿಮ್ಮಿದರೇನು ಮುಳ್ಳುಗಳಿವೆಯಲ್ಲ. ಹಾಗಾಗಿ ಒಂದು ಅಂತರವಿದ್ದೇ ಇರುತ್ತದೆ. ಅಂತರವಿರುವ ಯಾವುದೇ ಆದರೂ ಚೆಂದವಾಗಿರುತ್ತದೆ.
ತನ್ನದೇ ಎಲೆಹಾಸಿನ ಮೆತ್ತನೆಯ ಜಾಗದಲ್ಲಿ ಮೊಳಕೆಯೊಡೆಯುವ ಬಿದಿರಿನ ಚಿಗುರಿಗೆ ಕಳಲೆ ಎಂದು ಹೆಸರು. ಮೆಳೆಗಳ ನಡುವೆ ಕಂದುಬಣ್ಣದ ಬಟ್ಟೆಯುಟ್ಟು ಎದ್ದು ನಿಲ್ಲುವ ಇದನ್ನ ಕಂಡರೆ ಮನುಷ್ಯರಿಗೆ ಎಲ್ಲಿಲ್ಲದ ಪ್ರೀತಿ. ಅಲ್ಲಿಯವರೆಗೂ ದೂರದಿಂದ ನೋಡಿ ಸಾಗುತ್ತಿದ್ದ ಬಿದಿರು ಈಗ ಮಾತ್ರ ಕೈ ಬೀಸಿ ಕರೆಯುವ ಹಾಗಾಗುತ್ತದೆ. ಸುಳಿಯುವ ಗಾಳಿಗೆ ತುಯ್ಯುವ ರೆಂಬೆ ಕೊಂಬೆಗಳಲ್ಲೂ ಕೊಳಲಿನ ನಾದ ಕೇಳಿದಂತಾಗುತ್ತದೆ. ಕೊಳಲಿನ ನಾದಕ್ಕೆ ಮರುಳಾದ ಗೋಪಿಕೆಯರು ಆ ಕಾಲದಲ್ಲಿ ಮನೆಯಿಂದ ಎದ್ದು ಹೊರಟರೆ ಕಳಲೆಯ ಮೋಹಕ್ಕೆ ಬಿದ್ದ ಗಂಡಸರು ಕೈಯಲ್ಲಿ ಕತ್ತಿ ಹಿಡಿದು ಹೊರಡುತ್ತಾರೆ. ಎಲ್ಲಾ ಬಿದಿರಿಗೂ ಕೊಳಲಾಗುವ ಪುಣ್ಯ ಎಲ್ಲಿದೆ ಹೇಳಿ... ಆ ಕೃಷ್ಣನೇ ಕೊಳಲು ಕೆಳಗಿಟ್ಟ ಮೇಲೆ ಈಗಿನ ಕೃಷ್ಣರನ್ನು ನಂಬುವುದಾದರೂ ಹೇಗೆ ಹೇಳಿ.
ಬಿದಿರು ಒಂದು ರೀತಿಯಲ್ಲಿ ಕಲ್ಪವೃಕ್ಷವೇ. ಚಿಗುರು ತರಕಾರಿಯಂತೆ, ಬೆಳೆದು ನಿಂತರೆ ಮನೆಯನ್ನು ಕಟ್ಟಲು ಗಳುವಾಗಿ, ಎಲೆ ದರಗಾಗಿ ಕೊಟ್ಟಿಗೆ ಸೇರಿ ಮತ್ತೆ ಗೊಬ್ಬರವಾಗಿ ಹೊಲಕ್ಕೆ ಹೋಗಿ ಮಣ್ಣಾಗಿ, ಕೆಲವು ಕೊಳಲಾಗಿ,  ಮುಳ್ಳುಗಳು ಬೇಲಿಯಾಗಿ ಹೀಗೆ ಬಗೆಬಗೆಯಾಗಿ ಉಪಯೋಗಕ್ಕೆ ಬರುತ್ತವೆ. ಮನುಷ್ಯನೊಬ್ಬನೆ ಅಪಕಾರಿಯಾ ಈ ಜಗತ್ತಿನಲ್ಲಿ ಅನ್ನಿಸಿ ಸಣ್ಣಗೆ ನಗುಬಂದಿತು. ಜಾಸ್ತಿ ನಾಗರಿಕರಾದಷ್ಟೂ ಅಪಾಯಕಾರಿಯಾಗುತ್ತಿವೇನೋ..
ಕಳಲೆಯನ್ನು ಕತ್ತರಿಸುವುದು ಸುಲಭವಲ್ಲ. ಬಿದಿರು ಮೆಳೆಗಳ ನಡುವೆ ಮುಳ್ಳುಗಳನ್ನು ಸರಿಸಿಕೊಂಡು ಹೋಗಬೇಕು. ಎಷ್ಟು ಸರಿಸಿದರೂ ಪಕ್ಕಕ್ಕೆ ಹೋದಂತೆ ಮಾಡಿ ಮತ್ತೆ ವಾಪಾಸ್ ಆಗುವ ಕಳ್ಳರಂತೆ ಮತ್ತೆ ಬಂದು ಮುತ್ತಿಕ್ಕುತ್ತವೆ. ತೆರೆದ ಚರ್ಮದಿಂದ ರಕ್ತವೂ ಇಣುಕಿ ನೋಡುತ್ತದೆ. ಅದಕ್ಕೂ ಮೋಹವಾ....  ದಪ್ಪವಾಗಿ ಬಿದ್ದ ತರಗೆಲೆಗಳ ಮೇಲೆ ನಾಗಪ್ಪ ಮಲಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಕಳಲೆ, ಕೇದಿಗೆ ಎರಡೂ ಅವನಿಗೆ ಅದ್ಯಾಕೆ ಪ್ರಿಯ ಇವತ್ತಿಗೂ ಗೊತ್ತಿಲ್ಲ. ಇಷ್ಟೆಲ್ಲಾ ಸಾಹಸ ಮಾಡಿದರೂ ಕೈಯಲ್ಲಿರುವ ಕತ್ತಿ ಚೂಪಾಗಿರಬೇಕಾಗಿದ್ದು ತುಂಬಾ ಮುಖ್ಯ. ಒಂದಕ್ಕೆ ಒಂದು ಉಚಿತ ಅನ್ನೋ ಹಾಗೆ ಈ ಚೂಪುತನಕ್ಕೆ ನಿರ್ದಯತೆ ಸೇರಿ ಬರುತ್ತದಾ....

ಎಳೆಯದನ್ನು ಹುಡುಕಿ ಕತ್ತರಿಸಬೇಕು. ಬಲಿತ ಕಳಲೆ ಉಪಯೋಗಕ್ಕೆ ಬರುವುದಿಲ್ಲ. ಒಂದು ಮೆಳೆಯಲ್ಲಿ ನಾಲ್ಕೈದು ಚಿಗುರುಗಳು ಮೊಳಕೆ ಒಡೆದಿರುತ್ತದೆ. ಅವೆಲ್ಲವೂ ರಟ್ಟೆಗಾತ್ರದಲ್ಲಿರುತ್ತದೆ. ಕಡಿದ ಮೇಲೆ ಅದನ್ನೊಂದು ಕಟ್ಟಿಗೆಯ ಹೊರೆ ಕಟ್ಟಿದಂತೆ ಕಟ್ಟಿ ಹೆಗಲ ಮೇಲೆ ಹೇರಿಕೊಂಡು ಹೊರಟರೆ ನಾನ್ಯಾವ ವೀರನಿಗಿಂತ ಕಡಿಮೆ ಎನ್ನಿಸಿದರೂ ಬೀಗುವ ಹಾಗಿಲ್ಲ. ಕಳ್ಳನಂತೆ ಅರಣ್ಯಾಧಿಕಾರಿಗಳ ಕಣ್ಣಿಗೆ ಬೀಳದಂತೆ ಮನೆ ಸೇರಿಕೊಳ್ಳಬೇಕು. ಬಿದಿರು ಕಡಿಯುವುದು ಅಪರಾಧ ನೋಡಿ..ಆದರೂ ಬಿಡುವುದಿಲ್ಲ.  ಎಷ್ಟಂದರೂ ನಿಯಮಗಳಿರುವುದೇ ಮೀರಲು. ಪ್ರಕೃತಿ ಇರೋದೇ ಮನುಷ್ಯನ ಬಳಕೆಗೆ. ಮನುಷ್ಯ ಸಂತೋಷವಾಗಿದ್ದರೆ ಮಾತ್ರ ಉಳಿದೆಲ್ಲವೂ.

ಚಿಗುರಿ ನಿಂತಾಗ ಕಣ್ಮನ ಸೆಳೆಯುವ ರುಚಿಕರ ಕಳಲೆ ಕತ್ತಿ ಮೈ ತಾಗುತ್ತಿದ್ದಂತೆ ಕ್ರೋಧಗೊಳ್ಳುತ್ತದೆ. ಕೋಪವೆಂದರೆ ವಿಷವಂತೆ. ಹಾಗೆಯೇ ಇದು ವಿಷಪೂರಿತವಾಗುತ್ತದೆ. ಹಾಗಾಗಿ ಕತ್ತಿತಾಗಿದ ಕಳಲೆ ದನ ತಿನ್ನುವಂತಿಲ್ಲ. ಜಾಗ್ರತೆ ಮಾಡಬೇಕು. ಅಷ್ಟು ಸಾಹಸ ಮಾಡಿ ತಂದರೂ ತಂದಕೂಡಲೇ ಅದಕ್ಕೆ ಒಳಗೆ ಪ್ರವೇಶವಿಲ್ಲ. ಯಾರು ತಾನೇ ವಿಷವನ್ನು ಒಳಗೆ ಬಿಟ್ಟು ಕೊಳ್ಳುತ್ತಾರೆ. ಹೊರಗಿನ ಸೂರಂಕಣದಲ್ಲಿ ಕಾಯಬೇಕು. ಮನೆಯ ಅಜ್ಜಿ ಹೊರಗೆ ಬರಬೇಕು. ವಿಷವನ್ನು ತೆಗೆಯಲು ಅನುಭವ ಬೇಕಲ್ಲ. ಅವಳಾದರೋ ಹರಿತ ಮೆಟ್ಟುಗತ್ತಿಯ ಸಿಂಹಾಸನದಲ್ಲಿ ಕುಳಿತ ಅದರ ಕುಶಲ ವಿಚಾರಿಸಬೇಕು. ಕೈಯಲ್ಲಿ ಹಿಡಿದು ಪರೀಕ್ಷೆ ಮಾಡಬೇಕು.

ಹೆಚ್ಚುವುದಕ್ಕೂ ಒಂದು ಕ್ರಮ ಉಂಟು. ಹಾಗಾಗಿ ಕಿರಿಯರಿಗೆ ಇದು ನೋಡು ಕಲಿ. ಕತ್ತಿಯ ಹರಿತವನ್ನೊಮ್ಮೆ ಬೆರಳುಗಳಿಂದ ಪರೀಕ್ಷೆ ಮಾಡಿ  ಒಂದೊಂದೇ ಕಳಲೆಯನ್ನು ತೆಗೆದುಕೊಂಡು ಅದನ್ನಿಷ್ಟೇಷ್ಟೇ ಬಿಡಿಸಿ ಕಂದುಬಣ್ಣದ ಬಟ್ಟೆ ತೆಗೆದು ದಬರಿಯೊಳಗೆ ನೀರು ತುಂಬಿ ಇದನ್ನು ಹೆಚ್ಚಬೇಕು ಅದರ ಬಿಳಿ ಮೃದುಭಾಗವನ್ನು ವೃತ್ತಾಕಾರಾವಾಗಿ ಕತ್ತರಿಸುತ್ತಲೇ ಅದನ್ನು ವಿಂಗಡಿಸಬೇಕು. ಪಲ್ಯಕ್ಕೆ ಬೇರೆ, ಹುಳಿಗೆ ಬೇರೆ, ಸಾಸುವೆಗೊಂದಿಷ್ಟು ಎತ್ತಿಡುತ್ತಲೇ ಉಪ್ಪಿನಕಾಯಿಗೆ ಚೆಂದವಾಗುತ್ತೆ ಇದು ಎಂದು ಸ್ವಲ್ಪ ಪಕ್ಕಕ್ಕಿಡಬೇಕು. ಹೆಚ್ಚುತ್ತಾ ಅದನ್ನು ನೀರಲ್ಲಿ ಮುಳುಗಿಸುತ್ತಾ ಎದುರಿಸಿ ಎದ್ದು ಬರುವ ಅವುಗಳನ್ನು ಅಂಗೈಯಲ್ಲಿ ಅದುಮಿ ಹಿಡಿಯುತ್ತಾ ಉಸಿರುಗಟ್ಟಿಸುವ ಜಾಣ್ಮೆ ಇರಬೇಕು.


ಹಾಗೆ ಕತ್ತರಿಸಿದ್ದನ್ನು ಕೂಡಲೇ ಉಪಯೋಗಿಸುವ ಹಾಗಿಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ ಅದರಲ್ಲಿರುವ ವಿಷದ ಹೆಸರು ಗ್ಲುಕೋಸೈಡ್. ಇದು ನೀರಿನಲ್ಲಿ ಕರಗುತ್ತದಂತೆ. ಇಂಗ್ಲಿಷ್ ಕಲಿಯದ ಅಜ್ಜಿಗೆ ಅದು ಕಬ್ಬಿಣ ತಾಗಿದರೆ ವಿಷ ಅನ್ನೋದಷ್ಟೇ ಗೊತ್ತು. ಹಾಗಾಗಿ ಅದನ್ನು ದೊಡ್ಡ ದಬರಿಗೆ ತುಂಬಿ ಅದು ಮುಳುಗುವಷ್ಟು ನೀರು ಸುರಿಯಬೇಕು. ಹಾಗೂ ಕತ್ತಿ ತಾಗಿದ ಕಳಲೆಯ ಚೂರೂ ಸಹ ದನದ ಬಾಯಿಗೆ ಸಿಗದಂತೆ  ಸಿಪ್ಪೆಯನ್ನೆಲ್ಲಾ ಜಾಗೃತೆಯಿಂದ ಒಟ್ಟು ಮಾಡಿ ಗೊಬ್ಬರದ ಗುಂಡಿಗೋ ಧರೆಯ ಕೆಳಗೋ ಎಸೆಯಬೇಕು.

 ಕಳಲೆಗೂ ಮೂರು ದಿನದ ಮುಟ್ಟು. ದಿನಾಲೂ ಆ ನೀರು ಬಸಿದು ಹೊಸ ನೀರು ತುಂಬಬೇಕು, ನೀರು ವಾಸನೆ ಬರಬಾರದು. ಕಳಲೆ ಕೊಳೆಯಬಾರದು. ದಿನದಿನವೂ ಶುಭ್ರವಾದಾಗ ಮಾತ್ರ ಬದುಕು ನಳನಳಿಸುತ್ತದೆ. ಬಸಿದ ನೀರನ್ನು ಹನಿಯೂ ಕೆಳಗೆ ಚೆಲ್ಲದಂತೆ ತೆಗೆದುಕೊಂಡು ಹೋಗಿ ಧರೆಯ ಬದಿ ಚೆಲ್ಲಬೇಕು. ಎಷ್ಟೇ ಸುಂದರವಾದರೂ, ಒಳ್ಳೆಯದಾದರೂ ಒಂದು ಸಣ್ಣ ವಸ್ತು ವಿಷವಾಗಿಸಬಲ್ಲದಲ್ಲಾ. ಹಾಗಾಗಿ ಅದನ್ನು ಹೆಚ್ಚುತ್ತಲೇ ಮನಸ್ಸೂ ಹೀಗೆ ವಿಷವಾಗಬಹ್ದು ಅದನ್ನು ತೊಳೆಯೋ ಕಲೆ ಗೊತ್ತಿರಬೇಕು ಎಂದು ಪಿಸುಗುಡುತ್ತಲೇ ನೀರನ್ನು ಒಯ್ದು ಎಸೆದು ಬರುತ್ತಿದ್ದಳು. ತೊಳೆಯಬಲ್ಲ ನೀರೂ ಸಹ ಬದಲಾಗುತ್ತಿರಬೇಕು. ಇಲ್ಲವಾದರೆ ಅದೂ ವಾಸನೆಯೇ.

ತಂದಿಟ್ಟ ಕಳಲೆಯನ್ನು ಬಿಡುವ ಹಾಗಿಲ್ಲ, ಅದು ಬಲಿತು ಬಿಡುತ್ತದೆ. ಬಲಿತದ್ದು ರುಚಿಯಲ್ಲ. ಹಾಗಾಗಿ ತಕ್ಷಣವೇ ಕತ್ತರಿಸಬೇಕು. ಯಾವುದೇ ವಿಷವಾದರೂ ಅಷ್ಟೇ ತಕ್ಷಣ ನಿವಾರಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಒಣಗುತ್ತದೆ. ಕಳಲೆ ಒಂದೇ ಆದರೂ ವಿಂಗಡಿಸ ಬೇಕು ಆಗಲೇ ಹದ ಸಿಕ್ಕೋದು. ಅಡುಗೆ ರುಚಿಯಾಗೋದು. ಬದುಕಲ್ಲೂ ಹಾಗೆ ವಿಂಗಡಿಸಿ ಬೇರ್ಪಡಿಸಿ ಯಾವುದು ಯಾವುದಕ್ಕೆ ಸೂಕ್ತವೋ ಎಂದು ನಿರ್ಧರಿಸಿ ಮುನ್ನಡೆದಾಗಲೇ ದಾರಿ ಸುಗಮವಾಗೋದು, ಗುರಿ ಸಿಕ್ಕೋದು.

ಪಲ್ಯ ಬರೀ ಕಳಲೆಯಲ್ಲೇ ಮಾಡಿದರೂ ಹುಳಿಗೆ ಮಾತ್ರ ಸವತೆ ಕಾಯಿಯೋ, ಹಲಸಿನ ಬೀಜವೋ ಜೊತೆಯಾದರೆ ಹೆಚ್ಚು ರುಚಿ, ಎರಡು ತುತ್ತು ಅನ್ನ ಜಾಸ್ತಿ ಇಳಿಯುತ್ತದೆ. ಇನ್ಯಾವುದೋ ಜೊತೆಯಾಗುವುದಿಲ್ಲ, ರುಚಿಸುವುದರ ಬದಲಾಗಿ ಕಳಲೆಯ ಮೂಲ ಗುಣವೇ ನಿಸ್ಸಾರವಾಗುತ್ತದೆ. ಬದುಕಲ್ಲೂ ಹಾಗೆ ಕೆಲವಷ್ಟು ಜೊತೆಯಾದರೆ ಮಾತ್ರ ಹಿತ ಇಲ್ಲಾ ವಿಷ. ನೀರಿನಲ್ಲಿ ಮುಳುಗಿದಷ್ಟೂ ಕಳಲೆ ವಿಷವನ್ನು ಕಳೆದು ಕೊಳ್ಳುತ್ತಾ ಹೋಗುತ್ತದೆ. ಸಂಕಷ್ಟದಲ್ಲಿ ಮಿಂದಷ್ಟೂ ಬದುಕು ಪುಟಕ್ಕಿಟ್ಟ ಚಿನ್ನವಾಗುತ್ತದೆ. ಹಾಗೆ ವಿಷ ಕಳೆದ ನೀರನ್ನು ಎಸೆದು ಬಿಡಬೇಕು, ಸಂಕಷ್ಟಕ್ಕೆ ಕಾರಣರಾದವರನ್ನು ಮರೆತು ಬಿಡಬೇಕು. ಆಗಲೇ ಕಳಲೆಗೂ ರುಚಿ, ಬದುಕು ಸಾರ್ಥಕ್ಯ.

ಹೀಗೆ ಶುದ್ಧವಾದ ಕಳಲೇ ರಕ್ತವನ್ನು ಶುದ್ಧಿಗೊಳಿಸುವ ಶಕ್ತಿ ಹೊಂದಿದೆಯಂತೆ, ದೇಹದ ಕಲ್ಮಷವನ್ನೆಲ್ಲಾ ನಿವಾರಿಸುವ ಗುಣವಿದೆಯಂತೆ. ಇದು ಉಷ್ಣ ಜಾಸ್ತಿ.  ಬಿಸಿಗೆ ಮಾತ್ರ ಕರಗಿಸುವ ಶಕ್ತಿ ಇರುವುದು ಅಲ್ವಾ. ಹಾಗಂತ ಜಾಸ್ತಿ ತಿಂದರೆ ನಮ್ಮನ್ನೂ ಕರಗಿಸುತ್ತೆ. ಒಳ್ಳೆಯತನಕ್ಕೂ ಒಂದು ಮಿತಿ ಇರುತ್ತೆ ನೋಡು. ಜಗತ್ತಿನಲ್ಲಿ ಎಲ್ಲವಕ್ಕೂ ಮಿತಿಯಿದೆ, ಅದರೊಳಗಿನ ಬದುಕಿಗೆ ನೆಮ್ಮದಿಯಿದೆ. ಅದರಾಚೆ ಹೋದರೆ ನೋಡು ಎಲ್ಲ್ಲಾ ಸಮಸ್ಯೆಗಳೇ. ಆದರೆ ಮನುಷ್ಯನಿಗೆ ಮಾತ್ರ ಎಲ್ಲಾ ಮಿತಿಯನ್ನು ಮೀರುವ ಆಸೆ, ಅದಕ್ಕಾಗಿಯೇ ಗೋಳು.. ಎನ್ನುತ್ತಾ ಪಕ್ಕಕ್ಕಿಟ್ಟ ಕಳಲೆಗೆ ಉಪ್ಪು ಖಾರ ಬೆರೆಸಿ ಜಾಡಿಗೆ ಹಾಕಿ ಅಜ್ಜನ ಹಳೇ ಪಂಚೆಯೊಂದನ್ನು ಬಿಗಿಯಾಗಿ ಕಟ್ಟುತ್ತಿದ್ದಳು ಅಜ್ಜಿ.

ನಾವು ಕಣ್ಣರಳಿಸಿ ಯಾಕೆಂದು ನೋಡಿದರೆ ಕೆಲವಷ್ಟು ಬಿಗಿಯಾಗಿದ್ದರೆ ಮಾತ್ರ ಚೆಂದ, ಇಲ್ಲವಾದರೆ ಹುಳು ಹಿಡಿಯುತ್ತೆ. ಯಾವುದಕ್ಕೆ ಗಾಳಿ ಬೇಕು, ಯಾವುದಕ್ಕೆ ಬೇಡಾ ಅಂತ ಗೊತ್ತಿರಬೇಕು, ಒಬ್ಬರಿಗೆ ಒಳ್ಳೆಯದು ಇನ್ನೊಬ್ಬರಿಗೂ ಒಳ್ಳೆಯದೇ ಆಗಬೇಕು ಅಂತೇನಿಲ್ಲ ನೋಡು ಅನ್ನುತ್ತಲೇ ಗಂಟು ಹಾಕುತ್ತಿದ್ದಳು. ಹೆಚ್ಚಿಟ್ಟ ಕಳಲೆಯನ್ನು ಯಾರು ಯಾರಿಗೆ ಕೊಡಬೇಕು ಅನ್ನೋದನ್ನ ಮನಸ್ಸಿನಲ್ಲೇ ಲೆಕ್ಕಹಾಕಿಕೊಂಡು ಕಳಿಸಲು ಹೋಗುತ್ತಿದ್ದಳು. ಅದೇನೂ ಅರ್ಥವಾಗದ ನಾವು ಬೆಳೆದ ಕಳಲೆಯ ಎರಡು  ತುಂಡುಗಳನ್ನು ಒಂದು ಕೋಲಿನಿಂದ ಸೇರಿಸಿ ಗಾಡಿಮಾಡಿ ಓಡಿಸುತ್ತಿದ್ದೆವು. ಅವಳು ನಿಟ್ಟುಸಿರು ಬಿಟ್ಟು ಒಳಗೆ ಹೋಗುತ್ತಿದ್ದಳು.
 ಈಗ ಕಾಂಕ್ರಿಟ್ ಕಾಡಿಗೆ ಬದುಕು ಕಟ್ಟಿಕೊಳ್ಳಲು ಬಂದ ಮೇಲೆ ಕಳಲೆ ಅನ್ನೋದು ದೂರ ಆಗಿದೆ. ಅದರ ಜೊತೆಗೆ ಏನೇನು ದೂರ ಆಗಿದೆ ಅಂತ ಲೆಕ್ಕ ಹಾಕಲು ಹೋದರೆ ಕೈ ನಡುಗುತ್ತದೆ, ಲೆಕ್ಕಾಚಾರವೇ ಏರುಪೇರಾಗುತ್ತದೆ. ಹಾಳಾದ್ದು ಈ ಲೆಕ್ಕ ಅನ್ನೋದು ಅವತ್ತಿನಿಂದ ಇವತ್ತಿನವರೆಗೆ ಅರ್ಥವಾಗದ ಕಗ್ಗಂಟು.ಕಸಿನ್ ಫೋನ್ ಮಾಡಿದವನು ಹೀಗೆ ಲೋಕಾಭಿರಾಮ ಮಾತಾಡುವಾಗ ಇವತ್ತು ಕಳಲೆ ಹುಳಿ ಅಂದ ಕೂಡಲೇ ಮನಸ್ಸು ಚಿಕ್ಕದಾಗಿತ್ತು. ಹೌದೇನೋ ಎಂದು ಎಳೆದ ರಾಗದಲ್ಲೇ ಅರ್ಥಮಾಡಿಕೊಂಡ ಅವನು ಮುಂದೆ ಮಾತಾಡಿರಲಿಲ್ಲ. ಮರುದಿನ ಬಂದವನೇ ಒಂದು ಚಿಕ್ಕದೊಂದು ಬಾಕ್ಸ್ ಕೈಲಿಟ್ಟ ನೋಡಿದರೆ ಕಳಲೆ... ಅವರಮ್ಮ ಊರಿನಿಂದ ತಂದ ಸ್ವಲ್ಪದರಲ್ಲೇ ನನಗೂ ಉಳಿಸಿ ತಂದು ಕೊಟ್ಟು ನಕ್ಕಿದ್ದ.

ಒಂದು ಕಳಲೆ ಅಡುಗೆಯಾಗಿ ಹೊಟ್ಟೆ ತುಂಬುವುದರ ಜೊತೆಗೆ ಹೀಗೆ ಬಾಂಧವ್ಯವನ್ನು ಗಟ್ಟಿಗೊಳಿಸಿ ಮನಸ್ಸನ್ನೂ ತುಂಬುತ್ತದಲ್ಲ ಅಂತ ಒಳಗೆ ಹೋದರೆ ಅಜ್ಜಿಯ ಒಂದೊಂದು ಮಾತೂ, ಕೃತಿ ಅರ್ಥವಾಗ ತೊಡಗಿತು. ಅಯ್ಯೋ ಈಗ ಗೊತ್ತಾಯ್ತು ಕಣೆ ಅಂತ ಹೇಳೋಣ ಅಂತ ಫೋನ್ ತೆಗೆದರೆ ಅವಳು ವ್ಯಾಪ್ತಿ ಪ್ರದೇಶದ ಹೊರಗೆ ಹೋಗಿದ್ದಾಳೆ,  ಬಿದಿರಿಗೆ ಕೊಳೆ ಬಂದಿದೆ.



Comments

Popular posts from this blog

ಮಾತಂಗ ಪರ್ವತ

ಮೃಗವಧೆ

ನನ್ನಿ