ಜಿಗಣೆ

ಮೋಡ ಗರ್ಭ ಕಟ್ಟುತಿದ್ದ ಹಾಗೆ ಖುಷಿ ಪಡೋದು ಕೇವಲ ಇಳೆ ಮಾತ್ರವಲ್ಲ ಅವಳ ಒಡಲ ಮಕ್ಕಳೂ ಕೂಡಾ. ಇನ್ನೇನು ಮಳೆ ಸುರಿಯಬಹುದು ಎನ್ನುವ ಸೂಚನೆ ಸಿಕ್ಕುತ್ತಿದ್ದಂತೆ ಅಲ್ಲಿಯವರೆಗೂ ಸದ್ದಿಲ್ಲದೇ ನಿದ್ದೆ ಹೋಗುತಿದ್ದ ಇಂಬಳಗಳು ಮೆಲ್ಲಗೆ ಮೈ ಮುರಿದು ಏಳುವ ಹೊತ್ತು. ಬೇಸಿಗೆಯಲ್ಲಿ ಉದುರಿದ ಎಲೆಗಳನ್ನೇ ಹೊದ್ದು ಮಲಗಿರುವ ಅವು ಯಾರ ಕಣ್ಣಿಗೂ ಕಾಣದಂತೆ ಅಡಗಿರುತ್ತವೆ. ಒಂದು ಮಳೆ ಬಂದ ಕೂಡಲೇ ಅಲ್ಲೇ ಸಣ್ಣಗೆ ಹೊರಳಿ, ಮೈ ಕೊಡವಿಕೊಂಡು ತಯಾರಾಗುತ್ತವೆ. ಮೈಯೆಲ್ಲಾ ಕಣ್ಣಾಗಿ ಬೇಟೆಗಾಗಿ ಕಾಯುತ್ತವೆ.

ಕೆರೆ, ಕಾಡು, ತೋಟ ಹೀಗೆ ಜೌಗು ಪ್ರದೇಶದಲ್ಲೇ ಇವುಗಳ ವಾಸಸ್ಥಾನ. ಎಲೆಗಳೆಲ್ಲಾ ಉದುರಿ ಹಾಸಿಗೆಯಾಗಿ, ಮೃದುವಾದ ತುಪ್ಪಳವಾಗಿ, ಅವು ಕೊಳೆಯುವ ಪ್ರಕ್ರಿಯೆಯಲ್ಲಿ ಬೆಚ್ಚಗಾಗಿ ಒಳಗೊಂದು ತೇವ ಆವರಿಸಿಕೊಳ್ಳುವ ಜಾಗದಲ್ಲಿ ಇವು ಅಡಗಿರುತ್ತವೆ. ತೇವವಿಲ್ಲದ  ಬರಡು ಭೂಮಿ ಯಾರಿಗೆ ತಾನೇ ಪ್ರಿಯ ಹೇಳಿ?. ಹಸರು ಕಂಡ ಕಡೆಗೆ ದನ, ಹಣ್ಣು ಬಿಟ್ಟ ಮರಕ್ಕೆ ಕಲ್ಲು ಜಾಸ್ತಿ ಅನ್ನೋ ಹಾಗೆ ಸೊಂಪಾದ ಜಾಗಕ್ಕೆ ಬರುವವರು ಜಾಸ್ತಿ. ಬರುವವರು ಇದ್ದಾಗ ಮಾತ್ರ ಪಡೆಯುವವರಿಗೆ ಅವಕಾಶ. ಜಗತ್ತಿನಲ್ಲಿ ಸುಲಭವಾಗಿ ದಕ್ಕುವ ಕಡೆ ಜನಸಂದಣಿ ಅಧಿಕ. ಇದನ್ನ ಜಿಗಣೆಗಳಷ್ಟು ಚೆಂದವಾಗಿ ಅರ್ಥಮಾಡಿಕೊಂಡವರು ಬೇರೆ ಯಾರೂ ಇಲ್ಲವೇನೋ ಅನ್ನಿಸುತ್ತದೆ ಒಮ್ಮೊಮ್ಮೆ.

ದೇಹದ ತೂಕ ಶೇ 90 ಭಾಗ ಇಳಿದರೂ ಬದುಕಿರುವಷ್ಟು ದೃಢತೆ ಇವಕ್ಕೆ. ಬಿಸಿಲಿಗೆ ಬಾಡಿ ಕೆಳಗೆ ಬಿದ್ದ ಕಡ್ಡಿಯ ಹಾಗೆ ಒಣಗಿ ಕೃಶವಾಗಿ ಒಂದು ಕಡೆ ಬಿದ್ದಿರುವ ಇವು ಮಹಾ ಸೋಮಾರಿಗಳು. ಆಹಾರ ತಾವಾಗೆ ಬಂದಾಗ ಮಾತ್ರ ತಿನ್ನುತ್ತವೆಯೇ ಹೊರತು  ಅರಸಿಕೊಂಡು ಹೋಗುವುದಿಲ್ಲ. ಅಲ್ಲಿಯೇ ಉಸಿರು ಹಿಡಿದು ಕಾಯುತ್ತವೆ. ನೆತ್ತರಿನ ವಾಸನೆಗಾಗಿ ಪಸಿಕಟ್ಟುತ್ತವೆ. ಸೂರ್ಯನ ಕಿರಣಗಳು ಇವಕ್ಕೆ ಅಲರ್ಜಿ. ಕತ್ತಲೆ ತುಂಬಾ ಪ್ರಿಯ, ಅದರಲ್ಲೂ ಮೋಡಕಟ್ಟಿದ ಅತ್ತ ಕತ್ತಲೂ ಅಲ್ಲದ ಇತ್ತ ಬೆಳಕೂ ಅಲ್ಲದ ವಾತಾವರಣ ಎಂದರೆ ಇನ್ನೂ ಪ್ರಿಯ. ಇಂಥ ಹೊತ್ತಿನಲ್ಲೇ ಮನಸ್ಸು ಹೊದ್ದು ಮಲಗಲು ಬಯಸುತ್ತದೆ ನೋಡಿ. ಸೋಮಾರಿತನಕ್ಕೆ ಮನುಷ್ಯ, ಪ್ರಾಣಿ, ಕೀಟ ಅನ್ನೋ ಭೇಧವೇ ಇಲ್ಲವಲ್ಲ ಅನ್ನಿಸಿ ಸಣ್ಣ ನಗು..

ಜಿಗಣೆ ಅಥವಾ ಇಂಬಳ ಎಂದು ಕರೆಸಿಕೊಳ್ಳುವ ಇದು  ಪರತಂತ್ರ ಜೀವಿ. ಸೋಮಾರಿತನ ಹೊದ್ದ ಪ್ರತಿಯೊಂದು ಹಾಗೆ ಅಲ್ಲವೇ.. ಇನ್ನೊಬ್ಬರನ್ನು ಅವಲಂಬಿಸಿಯೇ ಬದುಕುವುದು. ಜಡತೆಯನ್ನು ಸುತ್ತಿಕೊಂಡು ಬಿದ್ದಿರುವ ಇವು ನೆತ್ತರ ವಾಸನೆ ಅಡರುತಿದ್ದ ಹಾಗೆ ಪೂರ್ಣವಾಗಿ ಚುರುಕುಗೊಳ್ಳುತ್ತದೆ. ಯಾವುದೋ ಅಮಾಯಕ ಮನುಷ್ಯ ಬಳಸಿಕೊಳ್ಳಲು ಸಿಕ್ಕಾಗ ತಯಾರಾಗುವ ಮನುಷ್ಯನಂತೆ.  ಇದರ ದೇಹದ ಎರಡೂ ತುದಿಯಲ್ಲಿ ಹೀರು ಕೊಳವೆ ಇರುತ್ತದೆ. ಪ್ರಾಣಿಯೋ, ಮನುಷ್ಯನೋ ಹತ್ತಿರ ಬರುತ್ತಿದ್ದ ಹಾಗೆ ಚಂಗನೆ ಸದ್ದಿಲ್ಲದೇ ಹತ್ತಿ ತನ್ನ ಕೊಳವೆಯನ್ನು ಸೂಕ್ತ ಜಾಗಕ್ಕೆ ಅಂಟಿಸಿ ನರವನ್ನು ಸರಿಯಾಗಿ ಹಿಡಿದು ರಕ್ತ ಹೀರಲು ಆರಂಭಿಸುತ್ತದೆ. ಇವು ಹೀಗೆ ರಕ್ತ ಹೀರುವಾಗ ನೋವಾಗುವುದಿಲ್ಲ, ಅಸಲಿಗೆ ಗೊತ್ತೇ ಆಗುವುದಿಲ್ಲ. ಹೀರಲು ಸರಿಯಾದ ಜಾಗ ಬೇಕು, ಹೊಡೆಯಲು ಆಯಕಟ್ಟಿನ ಜಾಗ ಬೇಕು. ಎಂಥಾ ಬುದ್ಧಿವಂತಿಕೆ....

ಬದುಕಲ್ಲೂ ಹೀಗಾಗುವುದು ಎಷ್ಟೋ ಸಲ. ನಮ್ಮ ಸತ್ವವನ್ನು, ಸಂಪಾದನೆಯನ್ನು, ಜೀವಂತಿಕೆಯನ್ನು, ಶ್ರಮವನ್ನು ಹೀರಲು ಹೀಗೆ ಜಿಗಣೆಗಳು ಕಾದು ಕುಳಿತಿರುತ್ತವೆ. ಯಾವಾಗ ಎಲ್ಲಿ ಹತ್ತಿದವು ಎಂದು ಗೊತ್ತೇ ಆಗದ ಹಾಗೆ ಹೀರುತ್ತವೆ. ಆಯಕಟ್ಟಿನ ಜಾಗದಲ್ಲಿ ಕುಳಿತು ಕಾಣಿಸದೆ ಕಾಡುತ್ತವೆ. ಹೀಗೆ ಯಾರದ್ದೋ ಬದುಕಿನ ರಕ್ತವನ್ನು ಹೀರುವುದೇ ಕೆಲವರ ಕಸುಬು, ಧ್ಯೇಯವಾಗಿರುತ್ತದೆ. ಕಾಡಿನ ಜಿಗಣೆಗಳಾದರೋ ಕೇವಲ ರಕ್ತವನ್ನು ಮಾತ್ರ ಹೀರುತ್ತದೆ. ನಾಡಿನ ಜಿಗಣೆಗಳು ಬುದ್ಧಿವಂತರು ನೋಡಿ ಹಾಗಾಗಿ ಬದುಕನ್ನೇ ಹೀರುತ್ತವೆ. ಅವು ಹೊಟ್ಟೆ ತುಂಬಿದೊಡನೆ ಬಿದ್ದು ಹೋಗುತ್ತವೆ. ಇವೋ ಜೀವ ಹೋಗುವವರೆಗೂ ಹೀರುತ್ತವೆ.

ಸೋಮಾರಿಗಳಾದ್ದರಿಂದ ಸಿಕ್ಕಿದಾಗ ಹೀರಬೇಕು, ಹೊಟ್ಟೆ ತುಂಬಿಸಿಕೊಳ್ಳಬೇಕು. ಆದ್ದರಿಂದ ಇವು ಒಮ್ಮೆ ಹೀರಲು ಶುರುಮಾಡಿದರೆ ಪಕ್ಕನೆ ನಿಲ್ಲಿಸುವುದಿಲ್ಲ. ಸುಲಭಕ್ಕೆ ದೊರೆಯುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಮನುಷ್ಯರಿಗೂ ಗೊತ್ತಿಲ್ಲ. ಸಿಕ್ಕಿದಷ್ಟು ಹೀರಬೇಕು, ದೊರಕಿದಷ್ಟು ಬಾಚಿಕೊಳ್ಳಬೇಕು. ಎಂಥಾ ಸಾಮ್ಯತೆ. ಕಷ್ಟಪಟ್ಟಿದ್ದಕ್ಕಾದರೆ ಒಂದು ಮಿತಿಯಿದೆ. ತುಂಬಿದ್ದರ ಅರಿವಿದೆ. ಇದು ಹಾಗಲ್ಲವಲ್ಲ. ಹಾಗಾಗಿ ಹೀರುತ್ತಲೇ ಇರುತ್ತದೆ. ಎಲ್ಲಿಯವರೆಗೆ ಎಂದರೆ ಕಡ್ಡಿಯಂತಿದ್ದ ಅದು ಬಲೂನಿನಂತೆ ಊದಿ ತನ್ನ ಭಾರವನ್ನು ತಾನೇ ಹೊರಲಾಗದೆ ಉರುಳಿ ಬೀಳುವಷ್ಟು. ಕೆಲಸ ಮುಗಿದ ಮೇಲೆ ತಿರುಗಿಯೂ ನೋಡದೆ ಹೋಗುವ ಮನುಷ್ಯರಂತೆ ಜಾಗ ಖಾಲಿ ಮಾಡುತ್ತದೆ. ಉಂಡ ಬಾಳೆಎಲೆಯನ್ನು ಬಿಸಟು ಹೋಗುವಂತೆ ಬಿಟ್ಟು ಹೋಗುತ್ತದೆ.

ಮನುಷ್ಯರು ಹಾಗೆ ಅಲ್ಲವಾ... ತನ್ನ ಹೊಟ್ಟೆ ತುಂಬಿ, ಬದುಕಿರುವಷ್ಟು ದಿನ ನೆಮ್ಮದಿಯಾಗಿ ಉಣ್ಣಲು ಸಾಕಾಗಿ ಆದರೂ ಸಮಾಧಾನವಾಗದೇ ತನ್ನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹೀಗೆ ತಲೆ ತಲಾಂತರಗಳು ಕೂತು ಉಣ್ಣಲು ಸಾಕಾಗುವಷ್ಟು ಇದ್ದರೂ ಮತ್ತೂ ತುಂಬಿಸಿಕೊಳ್ಳುವ ಆಸೆ ನಿಲ್ಲುವುದಿಲ್ಲ. ಹೀಗೆಯೇ ಜಿಗಣೆಗಳು ಯೋಚಿಸಿದ್ದರೆ, ಕಾರ್ಯೋನ್ಮುಖರಾಗಿದ್ದರೆ ಅಬ್ಬಾ ಉಹಿಸಿಕೊಳ್ಳಲು ಎದೆ ನಡುಗುತ್ತದೆ. ಏನೇ ಹೇಳಿ ಈ ಮನುಷ್ಯನ ಹೊರತಾಗಿ ಉಳಿದೆಲ್ಲಾ ಜೀವ ಸಂಕುಲಗಳಿಗೆ ದುರಾಸೆ ಅನ್ನುವುದು ಗೊತ್ತೇ ಇಲ್ಲ. ಆದ್ದರಿಂದಲೇ ಪ್ರಕೃತಿ ಜೀವಂತವಾಗಿದೆ. ಹಾಗಾಗಿಯೇ ಮನುಷ್ಯನ ಅಟ್ಟಹಾಸ ತೊಡಕಿಲ್ಲದೆ ಮುಂದುವರಿಯುತ್ತಿದೆ.

ಹೀಗೆ ಒಮ್ಮೆ ರಕ್ತವನ್ನು ಹೀರಿದರೆ ಅದು ಆರು ತಿಂಗಳುಗಳ ವರೆಗೆ ಆಹಾರ ಸೇವಿಸದೆ ಇರಬಲ್ಲದಂತೆ. ಹೀಗೆ ಅರಿವಿಲ್ಲದೆ ಕಚ್ಚುವ ಇವುಗಳು ಅಕಸ್ಮಾತ್ ಏನಾದರೂ ಕಣ್ಣಿಗೆ ಬಿದ್ದರೂ ಅವನ್ನು ನಿವಾರಿಸಿಕೊಳ್ಳುವುದು ಅಷ್ಟು ಸುಲಭವೇನಲ್ಲ. ಸಣ್ಣಗೆ ಕಡ್ಡಿಯಂತಿರುವ ಇವು ಆಹಾರ ಒಳಗೆ ಹೋಗುತ್ತಿದ್ದಂತೆ ಬಲೂನಿನಂತೆ ಆಗುತ್ತವೆ. ಬಾಗಿ ಚಲಿಸುವ ಇವುಗಳಿಗೆ ಮೈಯಲ್ಲಿ ಮೂಳೆಗಳಿಲ್ಲ. ದೈನೇಸಿ ಬದುಕಿಗೂ ಬೆನ್ನು ಮೂಳೆಯಿಲ್ಲ. ಹಾಗಾಗಿಯೇ ಎರಡೂ  ಬಾಗುತ್ತದೆ, ಪಾದಕ್ಕೆ ಬೀಳುತ್ತದೆ. ಅಲ್ಲೇ ತೆವಳುತ್ತದೆ. ನೀರು ನೀರಾಗಿ ರಬ್ಬರಿನಂತೆ ಆಗುವ ಇವು ಎಳೆದಷ್ಟೂ ಹಿಗ್ಗುತ್ತದೆಯೇ ಹೊರತು ಕಚ್ಚಿ ಹಿಡಿದಿದ್ದನ್ನು ಬಿಡುವುದಿಲ್ಲ. ಎಳೆದಷ್ಟೂ ಬಲವಾಗಿ ಕಚ್ಚಿ ಕೊಳ್ಳುತ್ತದೆ. ಒದ್ದರೂ, ಅವಮಾನಿಸಿದರೂ ಮತ್ತೆ ಅಲ್ಲೇ ಹಲ್ಲುಗಿಂಜಿ ಹುಳಿನಗುನಗುತ್ತಾ ನಿಲ್ಲುವ ಮನುಷ್ಯರಂತೆ.

ರಕ್ತ ಹೀರುವುದೇ ಇದರ ಸ್ವಾಭಾವಿಕ ಗುಣವಾದರೂ, ಸೋಮಾರಿಯಾದರೂ ಇದರದ್ದು ಜಿಗುಟು ಸ್ವಭಾವ. ಹಿಡಿದ ಕೆಲಸವನ್ನು ಸುಲಭಕ್ಕೆ ಬಿಡುವುದಿಲ್ಲ, ಕೆಲಸ ಮುಗಿಸದೆ ಹೋಗುವುದಿಲ್ಲ. ಯಾವ ಅಡೆತಡೆಯನ್ನು ಪರಿಗಣಿಸುವುದಿಲ್ಲ. ಹಾಗಾಗಿ ಇವುಗಳಿಂದ ಕಳಚಿಕೊಳ್ಳುವುದು ಅಷ್ಟು ಸರಳವಲ್ಲ. ಇಂಥ ಮನುಷ್ಯರಿಂದ ಬಚಾವಾಗುವುದೂ ಸಹ ಸುಲಭವಲ್ಲ. ಇದನ್ನು ಕೊಲ್ಲುವುದೂ ಸರಳವಲ್ಲ, ತುಳಿದಷ್ಟೂ ಪುಟಿಯುತ್ತದೆ, ತಿಂದದ್ದನ್ನು ಕಕ್ಕುತ್ತದೆಯೇ ಹೊರತು ಸಾಯುವುದಿಲ್ಲ.ಮತ್ತೆ ರಕ್ತಕ್ಕಾಗಿ ಕಾಯುತ್ತದೆ. ಎಳೆದಷ್ಟೂ ಹಿಗ್ಗುತ್ತದೆ. ಕಾವಿಗೆ ಇದು ಹೆದರುತ್ತದೆ. ಬಿಸಿಗೆ ಬೆದರುತ್ತದೆ.ಹಾಗಾಗಿ ಮಲೆನಾಡಿಗರು ತೋಟದಿಂದಲೋ, ಕಾಡಿನಿಂದಲೋ ಬಂದಾಗ ಮೊದಲು ಬಚ್ಚಲು ಒಲೆಯ ಬಳಿಗೆ ಹೋಗುತ್ತಾರೆ. ಉರಿವ ಸೌದೆಯನ್ನು ತೆಗೆದುಕೊಂಡು ಕಾಲಿಗೆ ಹತ್ತಿದ ಇವುಗಳನ್ನು ತೊಡೆದುಕೊಳ್ಳುತ್ತಾರೆ. ಎತ್ತಿ ಒಲೆಗೆ ಎಸೆಯುತ್ತಾರೆ. ಇಲ್ಲವಾದರೆ ಸುಣ್ಣವೂ ಸಹಾಯ ಮಾಡುತ್ತದೆ. ಹೊಗೆಸೊಪ್ಪಿನ ಘಾಟಿಗೂ ಇವು ಜಾಗ ಖಾಲಿ ಮಾಡುತ್ತವೆ ಅನ್ನೋದು ಕವಳಪ್ರಿಯರ ಮಾತು. ಸ್ವಲ್ಪ ಮಟ್ಟಿನ ನಿರ್ದಯತೆ ಬದುಕಿಗೆ ಅನಿವಾರ್ಯ ಅನ್ನೋ ಪಾಠ ಇವುಗಳನ್ನು ನೋಡಿದಾಗಲೆಲ್ಲಾ ನೆನಪಾಗುತ್ತದೆ.

ಎಷ್ಟೇ ಕಾದು, ಸದ್ದಿಲ್ಲದಂತೆ ಎಕ್ಕಿ, ಗೊತ್ತಾಗದಂತೆ ಬಂದರೂ ಇವು ಕೇವಲ ರಕ್ತವನ್ನು ಮಾತ್ರ ಹೀರುತ್ತದೆ. ಎಷ್ಟೋ ಸಲ ಹೀಗೆ ಹೀರುವುದರಿಂದ ದೇಹದ ಕಲುಷಿತ ರಕ್ತ ಹೊರಗೆ ಹೋಗಿ ದೇಹ ಶುದ್ಧಿಯಾಗುತ್ತದೆ. ಈಗೀಗ ಥೆರಪಿಗಳಲ್ಲೂ ಇದನ್ನು ಉಪಯೋಗಿಸಿಕೊಂಡು ಹಲವಾರು ಕಾಯಿಲೆಗಳನ್ನ ಉಪಶಮನಗೊಳಿಸುವ ಕಾರ್ಯವೂ ನಡೆಯುತ್ತಿದೆ. ಬಂದಷ್ಟೇ ಸಹಜವಾಗಿ ಹೊರಟುಹೋಗುವ ಅವು ಅಪಾಯಕಾರಿಯೆಂದು ಯಾವತ್ತೂ ಯಾರಿಗೂ ಅನ್ನಿಸಿಲ್ಲ. ತೊಡೆದುಕೂಳ್ಳುವ ಮಾರ್ಗವೂ ಇರುವುದರಿಂದ ತೀರಾ ಆತಂಕಕಾರಿಯೆಂದು ಯಾರೂ ಭಾವಿಸಿಲ್ಲ. ಆದರೆ ಹೀಗೆ ಹೀರುವ ಮನುಷ್ಯರಿಂದ ಮಾತ್ರ ಸುಲಭಕ್ಕೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆತಂಕ ತಪ್ಪಿದ್ದಲ್ಲ.

 ಮಳೆಗಾಲ ಮುಗಿಯುತ್ತಿದ್ದಂತೆ ಮತ್ತೆ ನಿದ್ದೆಗೆ ಜಾರುವ ಇವು ಏಳುವುದು ಮುಂದಿನ ಮಳೆಗಾಲದ ಸಮಯದಲ್ಲಿಯೇ, ಕಪ್ಪು ಮೋಡ ದಟ್ಟಿಸುವ ಸಮಯದಲ್ಲೇ. ಇಂಥ ಸಮಯವನ್ನೇ ನೋಡಿದ ಗಂಡು ನವಿಲು ಕೇಕೆ ಹಾಕುತ್ತದೆಯಂತೆ. ನವಿಲಿನ ಕೂಗು ಕೇಳಿ ಮಳೆ ಸುರಿಯಬಹುದೇನೋ ಎನ್ನುವ ಆಸೆಗೆ ಮಲಗಿದ್ದ ಇಂಬಳಗಳು ಮೈ ಮುರಿದು  ಎದ್ದು ತಲೆ ಹೊರಗೆ ಹಾಕಿದರೆ ಅದಕ್ಕಾಗಿಯೇ ಕಾಯುತಿದ್ದ ಹೆಣ್ಣು ನವಿಲು ಅವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆಯಂತೆ.  ಹೀಗೆ ಅವಕಾಶವಾದಿತನದಿಂದ ಬದುಕುವ ಜೀವಿಯೊಂದು ಅವಕಾಶವಾದಿತನಕ್ಕೆ ಬಲಿಯಾಗುವುದು ಪ್ರಕೃತಿಯ ಸೋಜಿಗ. ಏನನ್ನು ಕೊಡುತ್ತೆವೆಯೋ ಅಂತಿಮವಾಗಿ ಅದನ್ನೇ ಪಡೆಯುತ್ತೆವೇಯಾ? ಯೋಚಿಸಿದರೆ ಒಂದು ಕ್ಷಣ ಮೈ ನಡುಗುತ್ತದೆ, ಬದುಕನ್ನು ಒಮ್ಮೆ ತಿರುಗಿ ನೋಡಬೇಕು ಎನ್ನಿಸುತ್ತದೆ.

ಆದರೆ ಅದೆಲ್ಲವನ್ನೂ ಮೀರಿ ಭಯವಾಗುವುದು, ನಡುಕ ಹುಟ್ಟುವುದು
ಮನುಷ್ಯ ರೂಪದ ಜಿಗಣೆಗಳನ್ನು ನೋಡಿದಾಗ...
ಆತಂಕವಾಗುವುದು  ಅವನ್ನು ನಿವಾರಿಸಿಕೊಳ್ಳುವ ಮಾರ್ಗ ಗೊತ್ತಾಗದಿದ್ದಾಗ....


Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಸಿದ್ಧಾರ್ಥ್..(ಹೊಸದಿಗಂತ 02.08.19)