ಬಿದಿರಿನ ಗಳ

ಎಲ್ಲ ಋಣನೂ ಹರ್ಕೋಬೇಕು ಕಣವ್ವ....

ಸುಲಭವಾ ಖಂಡಿತ ಅಲ್ಲ, ತೀರಾ ಕಷ್ಟವೂ ಅಲ್ಲ. ಒಂದು ರೀತಿಯಲ್ಲಿ ಇಲ್ಲಿ ಎಲ್ಲವೂ ಕ್ರಮಬದ್ಧ ಹಾಗೂ ನಿಯಮಬದ್ಧ. ಅದನ್ನು ಅರ್ಥಮಾಡಿಕೊಳ್ಳದೆ ದೂಷಿಸುತ್ತೇವೆ ಅಷ್ಟೇ. ಇದು ಇನ್ನಷ್ಟು ಅರ್ಥವಾಗೋದು ಬಿದಿರಿನ ಗಳ  ಓದುವಾಗ. ಮೊಮ್ಮಗನ ಮೇಲಿನ ಅಜ್ಜಿಯ ವ್ಯಾಮೋಹ, ಆ ಪ್ರೀತಿಗೆ ಓಗೊಟ್ಟು ಹೊರಡುವ ಮೊಮ್ಮಗ ದಾರಿಯಲ್ಲಿ ಅನಿರೀಕ್ಷಿತ(?) ಘಟನೆಯಲ್ಲಿ ಸಿಲುಕಿ ಮುಂದಿನ ಅಚ್ಚರಿಯ ಬೆಳವಣಿಗೆಗೆ ಕಾರಣನಾಗುತ್ತಾನೆ. ಅವನ ಆಗಮನ ಇನ್ನೊಂದು ಜೀವದ ಅಂತ್ಯಕ್ಕೆ ಕಾರಣವಾಗುವ ಸೂಚನೆ ಇಡೀ ಕಾದಂಬರಿ ಹೀಗೆ ಇಂಥ ಅನೂಹ್ಯ ತಿರುವುಗಳ ಸಂಗಮ. ಸೂಕ್ಷ್ಮವಾಗಿ ಕುರುಹು ಬಿಡುತ್ತಲೇ , ಹಾಗೆ ಬಿಡುತ್ತಲೇ ಮತ್ತೆ ಮುಚ್ಚಿಟ್ಟುಕೊಳ್ಳುತ್ತಾ ಒಂದು ಊರಿನ ಗ್ರಾಮೀಣ ಬದುಕಿನ ರೀತಿ ನೀತಿಗಳನ್ನು ತಿಳಿಸುತ್ತಾ ಹೋಗುತ್ತದೆ.

ತಾಂತ್ರಿಕ ಲೋಕದ  ಮೋಹ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡಿರುತ್ತದೆ . ಕೆಲವರು ಆ ಮಾರ್ಗದಲ್ಲಿ ಚಲಿಸಿದರೂ ದಕ್ಕಿಸಿಕೊಳ್ಳುವುದು ಎಲ್ಲೋ ಕೆಲವು ಮಂದಿ ಮಾತ್ರ. ಆ ಲೋಕದ ವ್ಯವಹಾರಗಳೇ ವಿಚಿತ್ರ. ಸ್ವಾತ್ವಿಕತೆ ಉಳಿಸಿಕೊಂಡ ಜೀವಗಳು ಆ ದಾರಿಯನ್ನು ಪೂರ್ಣ ಒಪ್ಪಿಕೊಳ್ಳಲಾಗದೆ ಮೋಹ ಬಿಡಲಾಗದೆ ಚಡಪಡಿಸುತ್ತವೆ. ನರಸಪ್ಪನವರದ್ದು ಇದೆ ತೊಳಲಾಟ. ಆದರೆ ಅವರಿಗೆ ಸಿಕ್ಕ ಗುರುಗಳು ಈ ತೊಳಲಾಟ ಅರ್ಥ ಮಾಡಿಕೊಂಡು ಕೋಟೆಯೊಳಗೆ ಇದ್ದು ಯುದ್ಧ ಮಾಡು ಎಂಬ ಸೂಚನೆ ಕೊಟ್ಟು ಅದಕ್ಕಾಗಿ ತಯಾರಿ ಮಾಡುತ್ತಾರೆ. ನಮ್ಮ ನಮ್ಮ ಮಿತಿಗೆ ತಕ್ಕ ಹಾಗೆ ಯುದ್ಧ ಮಾಡಬೇಕು...... ಎಂಥಾ ಸತ್ಯವಿದು ಅನ್ನಿಸಿ ಮೈ ಒಮ್ಮೆ ರೋಮಾಂಚನ.

ತಂತ್ರದ ಒಳ ಹೊರಗೂ ಬಿಚ್ಚಿಡುತ್ತಲೇ ನಮ್ಮ ಒಳಗನ್ನೂ ನೋಡಿಕೊಳ್ಳುವ ಹಾಗೆ ಸಾಗುವ ಕತೆ ಅಲ್ಲಲ್ಲಿ ಉಸಿರುಬಿಗಿ ಹಿಡಿಯುವ ಹಾಗೆ, ಕಣ್ಣಂಚು ಒದ್ದೆಯಾಗುವ ಹಾಗೆ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗೆ ಮಾಡುತ್ತಲೇ ನಮ್ಮನ್ನು ಕತೆಯ ಪಾತ್ರವಾಗಿಸಿಬಿಡುತ್ತದೆ. ಹಳ್ಳಿಯ ಸೌಂದರ್ಯ ಸಹಜತೆಗಳ ನಡುವೆಯೇ ಅಲ್ಲಿರುವ ರಾಜಕೀಯ, ವೈಮನಸ್ಯ, ಪ್ರೀತಿ, ಸೇಡು ಎಲ್ಲವನ್ನೂ ಪರಿಚಯಿಸುತ್ತಾ ಹೋಗುವುದರಿಂದ ಕತೆ ಅನ್ನಿಸದೆ ಇಲ್ಲೇ ಎಲ್ಲೋ ಘಟಿಸಿದ ಘಟನೆಯಂತೆ ಅನ್ನಿಸುತ್ತದೆ. ಇದು ಬಿಡುಗಡೆಯಾಗಿ ಬಹಳ ದಿನಗಳು ಆಗಿದ್ದರೂ ಓದಿರಲಿಲ್ಲ. ಯಾವುದೇ ಆದರೂ ಹೋಗಿ ಕೈಯಲ್ಲಿ ಹಿಡಿದು ಆಮೇಲೆ ಖರೀದಿಸುವ ಸ್ವಭಾವ ಇರುವ ನಾನು ಆನ್ಲೈನ್ ಮಾರಾಟದಿಂದ ಸ್ವಲ್ಪ ದೂರವೇ. ಹೋಗಿ ತರಬೇಕು ಅಂದುಕೊಳ್ಳುವಾಗ ವಕ್ಕರಿಸಿದ ಚೈನಾ ವೈರಸ್, ನಂತರದ ಲೊಕ್ಡೌನ್ ಎಲ್ಲವೂ ನನ್ನ ಈ ಸ್ವಭಾವಕ್ಕೆ ತಡೆ ಹಾಕಿ ಕೊನೆಗೂ ಪೋಸ್ಟ್ ಮೂಲಕವೇ ಸೇರುವ ಹಾಗೆ ಮಾಡಿತಲ್ಲ ಅನ್ನಿಸಿ ಸಣ್ಣ ನಗು ಮೂಡುವಾಗ ಎಲ್ಲಾ ತಾಯಿಯ ಇಚ್ಛೆ, ನಾವು ನಿಮಿತ್ತ ಮಾತ್ರ ಅನ್ನುವ ಸಾಲು ಹಿಡಿದು ನಿಲ್ಲಿಸಿತು.

ಪ್ರತಿಯೊಂದಕ್ಕೂ ಸಮಯ ಕೂಡಿ  ಬರಬೇಕು. ಅಭಿ ನಹಿ ಅನ್ನುವ ಕಾಶಿಯ ಬೈರಾಗಿ ಯ ಮಾತು ಕೇವಲ ಕೃಷ್ಣಪ್ಪ ನಿಗೆ ಮಾತ್ರ ಸಂಬಂಧಿಸಿದ್ದಾ... ಪ್ರತಿಯೊಂದು ಜೀವದ ಅಂತ್ಯವೂ ಸಾಧನೆಯ ಮಾರ್ಗದ ಒಂದು ಪಲ್ಲಟ ಅಷ್ಟೇ ಅನ್ನುವ ಮಾತು ಇದು ಬರೀ ಕಾದಂಬರಿ ಮಾತ್ರ ಅಲ್ಲವೇ ಅಲ್ಲ ಅನ್ನಿಸುತ್ತದೆ. ಕತೆಯ ಆರಂಭದಲ್ಲೇ ಬರುವ ಬಿದಿರು ಬದುಕಿನ ಆರಂಭಕ್ಕೆ ತೊಟ್ಟಿಲಾಗಿ ಕೊನೆಗೆ ಚಟ್ಟವಾಗಿ ಇಡೀ ಬದುಕನ್ನು ಕಂಡೂ ಕಾಣದ ಹಾಗೆ ಆವರಿಸಿಕೊಳ್ಳುತ್ತದೆ.ಕೊನೆಯ ಪುಟ ಮಗುಚಿ ಇಡುವಾಗ ಅದು ಬೇರೆಯದೇ ಅರ್ಥ ಸ್ಫುರಿಸುತ್ತದೆ. ಬದುಕೂ ಬಿದಿರನಂತೆ ಎಂದು ಮನಸ್ಸು ಅರ್ಥಮಾಡಿಕೊಂಡ ಕ್ಷಣ ಒಂದು ನಿರಾಳತೆ.. ಮುಂದಿನ ದಾರಿ ನೋಟ ಎರಡೂ ಸ್ಪಷ್ಟ. ಆಗ ಋಣ ಹರಿದುಕೊಳ್ಳುವುದು ಹೇಗೆ ಎನ್ನುವುದು ಅರ್ಥವಾಗುತ್ತೇನೋ... ಅಥವಾ ತಾಯಿ ಅರ್ಥಮಾಡಿಸುತ್ತಾಳೇನೋ.... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...