ಲಾಕ್ ಡೌನ್

ಹೊರಡುವಾಗ ಪರಿಸ್ಥಿತಿ ಇಷ್ಟು ಕ್ಲಿಷ್ಟಕರವಾಗಬಹುದು ಎನ್ನುವ ಕಿಂಚಿತ್ತೂ ಊಹೆಯೂ ಇರಲಿಲ್ಲ. ಒಂದು ಕೇಸ್ ಗೆ ಇಷ್ಟೊಂದು ಪ್ಯಾನಿಕ್ ಆಗಬೇಕಾ ಎನ್ನುವ ಯೋಚನೆಯಲ್ಲಿಯೇ ಊರಿಗೆ ಹೊರಡಲು ತಯಾರಿರಲಿಲ್ಲ. ಯಾವಾಗ ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಅನ್ನುವ ಆದೇಶ ಬಂತೋ ಆಗ ಕೊಂಚ ಯೋಚಿಸುವ ಹಾಗಾಗಿತ್ತು. ನೋಡು ಹೋಗುವುದಾದರೆ ಎಲ್ಲರೂ ಹೋಗುವ, ಅಬ್ಬಬ್ಬಾ ಅಂದರೆ ಒಂದು ಹದಿನೈದು ದಿನ ಆಗಬಹುದು. ರಜೆಗೆ ಅಪ್ಲೈ ಮಾಡಿ ಬಾ ಇಲ್ಲಾಂದ್ರೆ ಎಲ್ಲರೂ ಒಟ್ಟಿಗೆ ಇಲ್ಲೇ ಇರುವ ಅಂದಿದ್ದೆ. ಅವನಾಗಲೇ ದೇಶ ವಿದೇಶಗಳ ಪರಿಸ್ಥಿತಿ ಅವಲೋಕಿಸುತ್ತಿದ್ದ. ಅಪಾಯದ ಅರಿವು ಕೊಂಚವಿತ್ತು. ಹಾಗಾಗಿ ಊರಿಗೆ ಹೋಗುವ ಎನ್ನುವ ಯೋಚನೆ ಮಾಡಿದ್ದೆವು. ಬಹುಶ ಅವನ ತಲೆಯಲ್ಲಿ ಹೋಗಿ ಬಿಟ್ಟು ಬರುವಾ ಅನ್ನುವ ಯೋಚನೆಯೂ ಇತ್ತೇನೋ. ಹೋಗಿ ಎರಡು ದಿನಕ್ಕೆ ಮೋದಿ ಜನತಾ ಕರ್ಪ್ಯೂ ಅಂದರು. ಮತ್ತೊಂದು ದಿನಕ್ಕೆ ಲಾಕ್ ಡೌನ್.

ಊರಿಗೆ ಬರುವಾಗಲೂ ಕೊಂಚ ಆತಂಕವೇ ಇತ್ತು. ದಾರಿಯಲ್ಲಿ ಎಲ್ಲೂ ನಿಲ್ಲಿಸದೆ ಬಂದು ಬಂದ ಕೂಡಲೇ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ತಲುಪಿಸಿ ನೆಮ್ಮದಿಯಾಗಿದ್ದೆವು. ಸದ್ಯ ಬಂದು ಒಳ್ಳೆಯದು ಮಾಡಿದ್ರಿ ಅಂತ ಗೆಳೆಯರು, ಆತ್ಮೀಯರು ಹೇಳುವಾಗ ಆತಂಕ ಕೊಂಚ ಕರಗಿತ್ತು. ಇನ್ನೇನು ಸಹಜಸ್ಥಿತಿಗೆ ಮರಳಬೇಕು ಅನ್ನುವಷ್ಟರ ಹೊತ್ತಿಗೆ ಯುಗಾದಿ ಬಂದು ನಮ್ಮ ಮು.ಮ ಗಳು ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರೋ ಆಗ ಊರಿಗೆ ಬಂದ ನೂರಾರು ಜನರನ್ನು ಕ್ವಾರಂಟ್ವೈನ್ ಮಾಡುವ ಕೆಲಸ ಜರುಗತೊಡಗಿತು. ಮನೆಗೆ ಬಂದ ಆಶಾ ಕಾರ್ಯಕರ್ತೆಯರು, ನರ್ಸ್ ಆರೋಗ್ಯಾಧಿಕಾರಿ ಬಂದು ಯಾವಾಗ ಬಂದಿದ್ದು ಎಂದು ವಿಚಾರಿಸಿ ಒಂದು ನೋಟೀಸ್ ಬಾಗಿಲಿಗೆ ಅಂಟಿಸುವಾಗ ನೋಡಿದ ನೋಟ, ಅವರ ಸಂಕೋಚ ತುಸು ಹಿಂಜರಿಕೆಯಿಂದಲೇ ಹೊರಗೆಲ್ಲೂ ಹೋಗಬೇಡಿ ಆಯ್ತಾ ಎಂದು ಮೇಲು ಮಾತಿನಲ್ಲಿ ಹೇಳುವಾಗ ಇಲ್ಲಿಂದ ಹೋದವರಿಗೆ ಅದಕ್ಯಾಕೆ ಅಷ್ಟೊಂದು ಸಂಕೋಚ ನಿಮ್ಮ ಡ್ಯೂಟಿ ನೀವು ಮಾಡಿ ನಮ್ಮ ಡ್ಯೂಟಿ ನಾವು ಮಾಡ್ತಿವಿ ತೊಂದರೆಯಿಲ್ಲ ಎಂದು ನಕ್ಕಾಗ ತುಸು ನಿರಾಳವಾದರು. ಪರವಾಗಿಲ್ಲ ನಮ್ಮ ಸರ್ಕಾರ ಎಷ್ಟು ಕಟ್ಟು ನಿಟ್ಟಾಗಿದೆ ಅನ್ನೋ ಹೆಮ್ಮೆಯೂ ಇತ್ತು. ಆ ಹೆಮ್ಮೆ ಒಡೆಯಲು ಇನ್ನು ಒಂದು ಐದು ನಿಮಿಷ ಬಾಕಿಯಿದೆ ಎನ್ನುವ ಯಾವ ಸುಳಿವೂ ಇಲ್ಲದೆ ಒಳಗೆ ಬಂದವಳು ಅಕ್ಕಾ ಇದೇನು ಎನ್ನುವ ಆತಂಕದ ದನಿಗೆ ಬೆಚ್ಚಿ ಹೊರಗೆ ಓಡಿದ್ದೆ.

ಏನೋ ಬಂದಿದ್ದಾರೆ ಕೇಳ್ಕೊಂಡು ಹೋಗ್ತಾರೆ ಅಂತ ಅಡುಗೆಮನೆಯಲ್ಲಿ ಏನೋ ಮಾಡುತ್ತಿದ್ದ ತಂಗಿ ಹೊರಗೆ ಬಂದು ನೋಟೀಸ್ ನೋಡಿದವಳು ಯಾರೂ ಈ ಮನೆಯನ್ನು ಪ್ರವೇಶಿಸಬಾರದು ಅನ್ನುವ ಸಾಲು ನೋಡಿ ಬೆಚ್ಚಿ ಬಿದ್ದಿದ್ದಳು. ಸಹಜವಾಗಿ ಹಳ್ಳಿ ಮನೆ ಅಂದರೆ ಅಕ್ಕ ಪಕ್ಕದ ಮನೆಗಳಿಗೆ ಕೂಗಳತೆಯ ದೂರ. ಇನ್ನು ಅವರು ಇವರ ಮನೆಗೆ ಇವರು ಅವರ ಮನೆಗೆ ಹೋಗೋದು ತುಂಬಾ ಕಡಿಮೆ. ಅವರವರ ಪಾಡಿಗೆ ಅವರವರು.ತೋಟ ಗದ್ದೆ ಬಿಟ್ಟರೆ ಹೊರಗೆ ಅಥವಾ ಪೇಟೆಗೆ ಅನಿವಾರ್ಯವಾಗದ ಹೊರತು ಹೊರಡುವುದು ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ. ಹೀಗಿದ್ದೂ ಅವಳ ದನಿಯಲ್ಲಿನ ಗಾಬರಿಗಿಂತ ಬೇರ್ಯಾವುದೋ ಭಾವ ಕಾಣಿಸಿ ಒಂದು ಕ್ಷಣ ಪೆಚ್ಚಾದರೂ ಬಂದು ವಿವರಿಸಿದರೂ ಒಂದೆರೆಡು ದಿನ ಅವಳು ಚಡಪಡಿಸುತ್ತಿದ್ದಳು. ಆಗ ಆರೋಗ್ಯ ಅಧಿಕಾರಿಗಳ ಸಂಕೋಚದ ಕಾರಣ ಅರ್ಥವಾಗಿತ್ತು. ಊರು ಮನೆಯವರು ಆಗಿ ಹೀಗೆಲ್ಲಾ ನೋಟೀಸ್ ಅಂಟಿಸುತ್ತಿರಲ್ಲ ಎನ್ನುವ ಪ್ರಶ್ನೆಯನ್ನು ಅವರು ಎದುರಿಸಿ ಏನೂ ಮಾಡಲಾಗದ ಅಸಹಾಯಕತೆ ಎದುರು ಹಾಕಿಕೊಳ್ಳುವ ಅನಿವಾರ್ಯತೆ ಅರ್ಥವಾಗಿತ್ತು. ನೋಟೀಸ್ ಅಂಟಿಸುವುದು ಸುಲಭವಲ್ಲ ಅನ್ನೋದು ಗೊತ್ತಾಗಿತ್ತು.

 ಮೊದಲ ಲಾಕ್ ಡೌನ್ ಅತ್ಯಂತ ಸಫಲ  ಅಂತ ಹೇಳಬಹುದು. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ತುಂಬಾ ಬಿಗಿಯಾಗಿ ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸುತ್ತಿದ್ದರು. ಪರವಾಗಿಲ್ಲ ದೇಶ ಈ ಸಮಯದಲ್ಲಿ ಇಷ್ಟೊಂದು ಪ್ರಬುದ್ಧವಾಗಿ ವರ್ತಿಸುತ್ತಿದೆಯಲ್ಲ ಅನ್ನುವ ಹೆಮ್ಮೆ.  ತಿಂಗಳೆರೆಡು ಕಳೆದು ನಾವು ಗ್ರೀನ್ ಜೋನ್ ಅಂತ ಸಮಾಧಾನದಲ್ಲಿ ಉಸಿರುಬಿಡುತ್ತಾ ಬೇರೆ ಜಿಲ್ಲೆಗೆ ಮರುಗುತ್ತಾ ಇರುವಾಗ ಶಿವಮೊಗ್ಗಕ್ಕೆ ತಬ್ಲಿಘಿಗಳ ಆಗಮನ ಜೊತೆಗೆ ಕೊರೊನಾ. ಆದರೆ ಜಿಲ್ಲಾಧಿಕಾರಿ ಅವರನ್ನು ಬರುತ್ತಿದ್ದ ಹಾಗೆ ಕ್ವಾರಂಟ್ವೈನ್ ಮಾಡಿದ್ದರಿಂದ ಹರಡುವ ಭಯ ಇಲ್ಲದೆ ತುಸು ನಿರಾಳ ಅನುಭವಿಸುವ ಹೊತ್ತಿಗೆ ಲಾಕ್ ಡೌನ್ ಮೂರು ಶುರುವಾಗಿ ಬೇರೆ ರಾಜ್ಯಗಳಿಂದ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಿಂದ ಊರಿಗೆ ಮರಳುವವರ ಸಂಖ್ಯೆ ಜಾಸ್ತಿಯಾಗಿ ಜೊತೆಗೆ ಕರೋನಾ ಸಂಖ್ಯೆಯೂ ಏರತೊಡಗಿತು. ಗ್ರೀನ್ ಅನ್ನೋದು ರೆಡ್ ಆಗಿತ್ತು. ಆದರೆ ಬಂದವರ ಎಲ್ಲರೂ ಪ್ರತ್ಯೇಕವಾಗಿದ್ದರಿಂದ ಅಪಾಯದ ತೊಂದರೆ ಇರಲಿಲ್ಲ. ಈ ವಿಷಯದಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಮಾದರಿ ಅನ್ನಬಹುದು. ಜೊತೆಗೆ ಬಂದವರೂ ಅಷ್ಟೇ ಪ್ರಬುದ್ಧರು.

ಆಗ ಶುರುವಾಗಿದ್ದು ಈ ಮಾಧ್ಯಮಗಳ ಹಾವಳಿ. ಮುಂಬೈ ಮಾರಿ ಅನ್ನುವ ಹೆಸರಿನಲ್ಲಿ. ದಿನಾಲು ನೋಡುತ್ತಿದ್ದ ಜನಗಳ ಮನಸ್ಥಿತಿಯೂ ಕೊಂಚ ಬದಲಾಗ ತೊಡಗಿತ್ತು. ಅಲ್ಲಿಯವರೆಗೆ ಪಾಪ ಅಲ್ಲಿದ್ದು ಏನು ಮಾಡ್ತಾರೆ ಊರಿಗೆ ಬರಲಿ ಎನ್ನುತ್ತಿದ್ದ ಉಳಿದವರು ಕೊಂಚ ಅಸಹನೆಯಿಂದ ವರ್ತಿಸತೊಡಗಿದ್ದರು. ಹಾಗೆ ಬಂದವರನ್ನು ವಿಚಿತ್ರವಾಗಿ ನೋಡಲು, ವರ್ತಿಸಲು ಶುರುಮಾಡಿದ್ದರು. ಹಾಗೆ ಬಂದವರ ಅನಿವಾರ್ಯ ಪರಿಸ್ಥ್ತಿತಿ, ಅವರಿಗಿದ್ದ ಸಂಕಷ್ಟ ಅವರಿಗಷ್ಟೇ ಗೊತ್ತಿರಲು ಸಾಧ್ಯ. ಹಲವರಲ್ಲಿ ಅದನ್ನು ಹಂಚಬೇಕು ಎನ್ನುವ ಮನೋಭಾವ ಖಂಡಿತ ಇರಲು ಸಾಧ್ಯವಿಲ್ಲ. ಇನ್ನು ಕೆಲವು ಯಾವಾಗಲೂ exception ಅನ್ನೋದೂ ಅಷ್ಟೇ ಸತ್ಯ. ಹಾಗೆ ಬಂದವರು ಅವರ ಮನೆಯವರು ಹೆದರಿದ್ದೆ ಈ ರೀತಿಯ ವರ್ತನೆಗೆ. ಅದೆಷ್ಟು ಹರ್ಟ್ ಮಾಡುತ್ತೆ ಅನ್ನೋದು ಅರ್ಥವಾಗೊಕೂ ಹೆಚ್ಚು ಸಮಯ ಹಿಡಿಯಲಿಲ್ಲ. ಕಾಫಿ ಕುಡಿಯುತ್ತಾ ಇನ್ನೇನು ವಾಪಾಸ್ ಹೊರಡಬೇಕು ಜೂನ್ ಬಂತಲ್ಲ ಅಂತ ಯೋಚಿಸುತ್ತಾ ಜಗುಲಿಯ ಮೆಟ್ಟಿಲ ಮೇಲೆ ಕುಳಿತಿದ್ದೆ. ಆಗ ಬೈಕ್ ಒಂದು ಬಂದು ನಿಂತಿತು. ಇಳಿದ ವ್ಯಕ್ತಿ ಮೀಟರ್ ಓದಿ ಕರೆಂಟ್ ಬಿಲ್ ಜನರೇಟ್ ಮಾಡಿ ಅಲ್ಲಿಯೇ ಇಟ್ಟರು. ವಾಪಾಸ್ ಹೊರಡಲು ತಯಾರಾಗುವಾಗ ನನ್ನ ಹಳ್ಳಿತನ ಜಾಗೃತವಾಗಿ ಬನ್ನಿ ಕಾಫಿ ಕುಡ್ಕೊಂಡು ಹೋಗಿ ಅಂತ ಕರೆದೆ ಬೈಕ್ ಸ್ಟಾರ್ಟ್ ಮಾಡಲು ಹೋಗುತ್ತಿದ್ದ ಆತ ಬರಲು ಆಲೋಚಿಸಿ ತಲೆಯಿತ್ತಿದವನು ಅರೆಕ್ಷಣವೂ ನಿಲ್ಲದೆ ಬೈಕ್ ಏರಿ ಮರೆಯಾಗಿದ್ದ. ಅವನ ಗಾಬರಿ ವಿಚಿತ್ರ ವರ್ತನೆಗೆ ಯಾಕಿರಬಹುದು ಎಂದು ಯೋಚಿಸುತ್ತಾ ಲೋಟ ಇಡಲು ಒಳಗೆ ಹೋಗಲು ತಿರುಗಿದರೆ ಎರಡು ತಿಂಗಳು ಕಳೆದರೂ ತೆಗೆಯಲು ಉದಾಸಿನ ಮಾಡಿದ್ದ ನೋಟೀಸ್ ಕಾಣಿಸಿ ಅವನ ಗಾಬರಿ ಅರ್ಥವಾಗಿತ್ತು.

ಮರುದಿನ ಮನೆಗೆ ಏನನ್ನೋ ಕೇಳಲು ಬಂದವರು ಒಳಗೆ ಬನ್ನಿ ಎಂದರೂ ಒಂದಾರು ಮೀಟರ್ ದೂರದಲ್ಲಿ ನಿಂತು ಮೀನಾ ಮೇಷ ಎಣಿಸುತ್ತಾ ನಿಂತಾಗ ಹಿಂದಿನ ದಿನದ ಅನುಭವ ನೆನಪಿದ್ದವಳು ಅದು ಮುಗಿದು ಎರಡು ತಿಂಗಳು ಆಗಿದೆ ಎಂದಾಗ ನಿರಾಳವಾಗಿ ಒಳಗೆ ಬಂದಿದ್ದರು. ಒಂದೇ ಊರು, ಗೊತ್ತಿರುವ ಜನ ಆದರೂ ಅವರ ಹಿಂಜರಿಕೆ ನೋಡುವಾಗ ಬಂದು ಇಷ್ಟು ದಿನವಾದರೂ ಅವರ ಆತಂಕದ ವರ್ತನೆ ಕಾಣಿಸುವಾಗ ಮನಸ್ಸಿಗೆ ಕೊಂಚ ಹಿಂಸೆ ಆಗುತ್ತಿದ್ದದ್ದು ಸುಳ್ಳಲ್ಲ.  ಏನನ್ನಾದರೂ ಎದುರಿಸಬಹುದು ಈ ಬೇಡದವರು ಅನ್ನುವ ಭಾವ ಅನುಭವಿಸುವುದು ಆ ಕ್ಷಣಕ್ಕೆ ತುಂಬಾ ಕಷ್ಟ ಎಂದು ಅನ್ನಿಸುವಾಗಲೇ ಅಜ್ಜಿ ಹೇಳಿದ ಕತೆಯೊಂದು ಪಕ್ಕನೆ ನೆನಪಾಯಿತು.

ಭೋರು ಮಳೆ ಕೋತಿಯೊಂದು ತನ್ನ ಮರಿಯನ್ನು ಎತ್ತುಕೊಂಡು ನದಿ ದಾಟುತಿತ್ತು. ನೀರು ಕಾಲಿನ ಹತ್ತಿರ ಬರುತ್ತಿದ್ದ ಹಾಗೆ ಮಗುವನ್ನು ಹೆಗಲ ಮೇಲೆ ಇರಿಸಿಕೊಂಡಿತು. ಇನ್ನು ಕೊಂಚ ಮುಂದಕ್ಕೆ ಹೋದಾಗ ನೀರು ಹೆಗಲಿನ ಮಟ್ಟಕ್ಕೆ ಬಂದಾಗ ಮರಿಯನ್ನು ತಲೆಯ ಮೇಲೆ ಹೊತ್ತು ಕೊಂಡಿತಂತೆ. ಮಧ್ಯಭಾಗ ಸೇರುವಾಗ ನೀರು ತಲೆಯ ಮಟ್ಟಕ್ಕೆ ಏರಿದಾಗ ಅದನ್ನು ಕಾಲ ಕೆಳಗೆ ಹಾಕಿ ಮುಂದಕ್ಕೆ ಜಿಗಿಯಿತಂತೆ. ಬದುಕೂ ಇಷ್ಟೇ.....



Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.