Posts

Showing posts from February, 2021
 ಪರ್ಯಾಯ ದ್ವೀಪದಂತಹ ಜಾಗ.. ಮೂರು ದಿಕ್ಕಿನಲ್ಲಿಯೂ ದೃಷ್ಟಿ ಹರಿಸಿದರೆ ತನ್ನಷ್ಟಕ್ಕೆ ಹರಿಯುತ್ತಿದ್ದ ಕೃಷ್ಣಾ ಒಮ್ಮೆ ಸೊರುಗುತ್ತಾ, ಒಂದೊಮ್ಮೆ ಮೈ ತುಂಬಿಕೊಳ್ಳುತ್ತಾ, ಕೆಲವೊಮ್ಮೆ ಸೊಕ್ಕಿ ಹರಿಯುವುದು ಕಾಣಿಸುತಿತ್ತು. ಇನ್ನೊಂದು ಕಡೆ ಬೋಳು ಬೋಳಾದ ದಾರಿ ಇತ್ತ ಊರು ಅತ್ತ ಕಾಡು. ಬೆಳಿಗ್ಗೆ ಆರಕ್ಕೆ ಹೋಗುವ ಕರೆಂಟ್ ಮತ್ತೆ ಬರುವುದು ಮಧ್ಯಾಹ್ನ ಹನ್ನೆರಡಕ್ಕೆ ಇಲ್ಲಾ ಮಧ್ಯಾಹ್ನ ಹನ್ನೆರಡಕ್ಕೆ ಹೋದರೆ ಸಂಜೆ ಆರಕ್ಕೆ ಬರುತ್ತದೆ ಎನ್ನುವುದು ಅಲ್ಲಿಯ ಜನರ ನಂಬಿಕೆ. ಹೋಗುವ ಸಮಯ ಒಂದು ಕ್ಷಣ ಅತ್ತ ಇತ್ತ ಆಗದಿದ್ದರೂ ಬರುವುದು ಮಾತ್ರ ಅದರ ಇಚ್ಚೆಗೆ ಬಿಟ್ಟ ವಿಷಯವಾಗಿತ್ತು. ಮಳೆ ಬಂದರೆ, ಮರ ಬಿದ್ದರೆ ಯಾವಾಗ ಬರುತ್ತಿತ್ತೋ ಹೇಳುವುದು ಕಷ್ಟ ದಿನ ವಾರಗಳು ಆದರೂ ಆಗುತಿತ್ತು.  ಸುತ್ತಲೂ ಮರಗಿಡಗಳು ಇದ್ದರೂ ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯನ ಮುಂದೆ ಸೋತು ಶರಣಾಗಿ ಎಲೆ ಉದುರಿಸಿಕೊಂಡು ಮೌನವಾಗಿ ಬಿಡುತ್ತಿದ್ದವು. ಅವನ ಕೋಪಕ್ಕೆ ಉರಿಯುವ ಕಣ್ಣಿಗೆ ಸಿಲುಕಿದ ಮನೆಯ ಮಾಡು, ಗೋಡೆ, ನೆಲಕ್ಕೆ ಹಾಸಿದ ಕಪ್ಪು ಕಲ್ಲುಗಳು ಕಾದು ಬಸವಳಿದು ಅವನು ಹೋಗುತ್ತಿದ್ದ ಹಾಗೆ ನಿಟ್ಟುಸಿರು ಬಿಡಲು ತೊಡಗುತ್ತಿದ್ದರಿಂದ ಇಡೀ ಮನೆ ಉಬ್ಬೆ ಹಾಕಿದ ಹಾಗಾಗಿ ಬಿಡುತಿತ್ತು. ಅದರಲ್ಲೂ ಕರೆಂಟ್ ಬರಲಿಲ್ಲವೆಂದರೆ ಮುಗಿಯಿತು. ಬಿರು ಬೇಸಿಗೆಯಲ್ಲೂ ಒಂದು ತೆಳು ರಜಾಯಿ ಹೊದೆದು, ಬೆಳಗಿನ ಜಾವದ ಹೊತ್ತಿಗೆ ಅದನ್ನು ಇನ್ನಷ್ಟು ಸುತ್ತಿಕೊಂಡು ಮುದುರಿ ಬೆಚ್ಚಗೆ ಮಲಗುತ್ತಿದ್ದ ಮಲ