ಪರ್ಯಾಯ ದ್ವೀಪದಂತಹ ಜಾಗ.. ಮೂರು ದಿಕ್ಕಿನಲ್ಲಿಯೂ ದೃಷ್ಟಿ ಹರಿಸಿದರೆ ತನ್ನಷ್ಟಕ್ಕೆ ಹರಿಯುತ್ತಿದ್ದ ಕೃಷ್ಣಾ ಒಮ್ಮೆ ಸೊರುಗುತ್ತಾ, ಒಂದೊಮ್ಮೆ ಮೈ ತುಂಬಿಕೊಳ್ಳುತ್ತಾ, ಕೆಲವೊಮ್ಮೆ ಸೊಕ್ಕಿ ಹರಿಯುವುದು ಕಾಣಿಸುತಿತ್ತು. ಇನ್ನೊಂದು ಕಡೆ ಬೋಳು ಬೋಳಾದ ದಾರಿ ಇತ್ತ ಊರು ಅತ್ತ ಕಾಡು. ಬೆಳಿಗ್ಗೆ ಆರಕ್ಕೆ ಹೋಗುವ ಕರೆಂಟ್ ಮತ್ತೆ ಬರುವುದು ಮಧ್ಯಾಹ್ನ ಹನ್ನೆರಡಕ್ಕೆ ಇಲ್ಲಾ ಮಧ್ಯಾಹ್ನ ಹನ್ನೆರಡಕ್ಕೆ ಹೋದರೆ ಸಂಜೆ ಆರಕ್ಕೆ ಬರುತ್ತದೆ ಎನ್ನುವುದು ಅಲ್ಲಿಯ ಜನರ ನಂಬಿಕೆ. ಹೋಗುವ ಸಮಯ ಒಂದು ಕ್ಷಣ ಅತ್ತ ಇತ್ತ ಆಗದಿದ್ದರೂ ಬರುವುದು ಮಾತ್ರ ಅದರ ಇಚ್ಚೆಗೆ ಬಿಟ್ಟ ವಿಷಯವಾಗಿತ್ತು. ಮಳೆ ಬಂದರೆ, ಮರ ಬಿದ್ದರೆ ಯಾವಾಗ ಬರುತ್ತಿತ್ತೋ ಹೇಳುವುದು ಕಷ್ಟ ದಿನ ವಾರಗಳು ಆದರೂ ಆಗುತಿತ್ತು. 

ಸುತ್ತಲೂ ಮರಗಿಡಗಳು ಇದ್ದರೂ ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯನ ಮುಂದೆ ಸೋತು ಶರಣಾಗಿ ಎಲೆ ಉದುರಿಸಿಕೊಂಡು ಮೌನವಾಗಿ ಬಿಡುತ್ತಿದ್ದವು. ಅವನ ಕೋಪಕ್ಕೆ ಉರಿಯುವ ಕಣ್ಣಿಗೆ ಸಿಲುಕಿದ ಮನೆಯ ಮಾಡು, ಗೋಡೆ, ನೆಲಕ್ಕೆ ಹಾಸಿದ ಕಪ್ಪು ಕಲ್ಲುಗಳು ಕಾದು ಬಸವಳಿದು ಅವನು ಹೋಗುತ್ತಿದ್ದ ಹಾಗೆ ನಿಟ್ಟುಸಿರು ಬಿಡಲು ತೊಡಗುತ್ತಿದ್ದರಿಂದ ಇಡೀ ಮನೆ ಉಬ್ಬೆ ಹಾಕಿದ ಹಾಗಾಗಿ ಬಿಡುತಿತ್ತು. ಅದರಲ್ಲೂ ಕರೆಂಟ್ ಬರಲಿಲ್ಲವೆಂದರೆ ಮುಗಿಯಿತು. ಬಿರು ಬೇಸಿಗೆಯಲ್ಲೂ ಒಂದು ತೆಳು ರಜಾಯಿ ಹೊದೆದು, ಬೆಳಗಿನ ಜಾವದ ಹೊತ್ತಿಗೆ ಅದನ್ನು ಇನ್ನಷ್ಟು ಸುತ್ತಿಕೊಂಡು ಮುದುರಿ ಬೆಚ್ಚಗೆ ಮಲಗುತ್ತಿದ್ದ ಮಲೆನಾಡಿನ ಹುಡುಗಿ ಆ ಧಗೆ, ಮನೆಯ ನಿಟ್ಟುಸಿರು ಸಹಿಸದೆ ಕಂಗಾಲಾಗಿ ಹೋಗಿದ್ದು ನಿಜ.

ಇಲ್ಲಿ ಹೇಗೋ ಇರೋದು ಎಂದು ಕೇಳುತ್ತಾ ಹೊರಗೆ ತಲೆಯ ಮೇಲೆ ಕೈ ಹೊತ್ತಿ ಕುಳಿತವಳಿಗೆ ಪಕ್ಕದ ಮನೆಯವರು ಮಂಚ ತಂದು ಎದುರಿನ ಅಂಗಳದಲ್ಲಿ ಹಾಕುವುದು ಕಾಣಿಸಿ ಇದೇನು ವಿಚಿತ್ರ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಿ ಮರೆಯಾಗುವ ಮುನ್ನ ಮಾಡೋದೇನು ಹೊರಗೆ ಮಲಗೋದು ಅಷ್ಟೇ ಎಂದು ಹೇಳುತ್ತಾ ಅಣ್ಣ ದಿಂಬು ಹೊತ್ತು ತಂದಿದ್ದ. ಆಗಿನ್ನೂ ಹೋದ ಹೊಸತು, ನಾಳೆ ಒಂದೆರೆಡು ಮಂಚ ತರ್ಸೋದು ಇವತ್ತು ನೆಲದ ಮೇಲೆ ಎಂದು ನನಗೊಂದು ದಿಂಬು ಕೊಟ್ಟು ಆರಾಮಾಗಿ ಅಂಗಳದಲಿ ಮಲಗಿದ್ದು ನೋಡಿ ಇನ್ನಷ್ಟು ಕಂಗಾಲಾಗಿ ಒಳಗಿನ ಉಬ್ಬೆಯಲ್ಲಿ ಮಲಗುವುದಕ್ಕಿಂತ ಹೊರಗಿನ ಬಯಲು ಒಳ್ಳೆಯದು ಅನ್ನಿಸಿ ಮನಸ್ಸಿಲ್ಲದ ಮನಸ್ಸಿನಿಂದ  ಒರಗಿದ್ದೆ.

ಆಗಾಗ ಏನೋ ಕೃಪೆ ತೋರಿ ಬೀಸುವ ಗಾಳಿ ಬೆವರನ್ನು ಕೊಂಡೊಯ್ಯುವಾಗ ದೇಹ ತಂಪಾಗಿ ಹೆದರಿಕೆಯ ನಡುವೆಯೂ ಕಣ್ಣು ರೆಪ್ಪೆಗಳು ಒಂದಕ್ಕೊಂದು ಸಂಧಿಸಿ ನಿದ್ದೆ ಬಂದಿತ್ತು. ಬೆಳಗಿನ ಜಾವದಲ್ಲಿಇದ್ದಕ್ಕಿದ್ದ ಹಾಗೆ ಭರ್ರನೆ ಒಮ್ಮೆಗೆ ಗಾಳಿ ಬೀಸಿದ ಸದ್ದು , ಅದರ ಜೊತೆ ಜೊತೆಗೆ ಏನೋ ಸರ್ರನೆ ಹರಿದು ಹೋದ ಸದ್ದು, ಕಣ್ಣು ಬಿಡಲು ಭಯವಾಗಿ ಇನ್ನಷ್ಟು ಗಟ್ಟಿಯಾಗಿ ಕಣ್ಣು ಮುಚ್ಚಿ ನಡುಗುವ ಮೈಯನ್ನು ಸಾವರಿಸಿಕೊಳ್ಳುವ ಹೊತ್ತಿಗೆ ಮೂಗಿಗೆ ಅಡರಿದ ಮಲ್ಲಿಗೆಯ ಕಂಪು.. ಏನೋ ಬಿಸಿ ತಾಕಿದ ಹಾಗಾಗಿ ಕಣ್ಣು ಬಿಟ್ಟರೆ ಅದಾಗಲೇ ಡ್ಯೂಟಿ ಗೆ ಬಂದಿದ್ದ ಸೂರ್ಯ.. ಒಳಗೆ ಹೋಗಿ ಮಲಕ್ಕೋ ಪುಟ್ಟಿ ಏನು ಕಾಫಿ ಹಿಡಿದ ಅಮ್ಮ... ಕಣ್ಣುಜ್ಜಿಕೊಂಡು ಬೆಳಗಾಯ್ತಾ ಎನ್ನುವ ಹೊತ್ತಿಗೆ ನಿಂಗೊಂದು ಗುಡ್ ನ್ಯೂಸ್ ಎಂದು ಕಾಫಿ ಹೀರುತ್ತಾ ನಗುತಿದ್ದ ಅಣ್ಣ.

ಮುಖ ತೊಳೆದು ಬರುವ ಹೊತ್ತಿಗೆ ದೇವುಡ ದಯಾ ಮೀಕೇಮು ಕಾಲೆದು ಕದಾ ಎಂದು ಕುಕ್ಕುರುಗಾಲಿನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಕುಳಿತಿದ್ದ ಭಾವನಾ ಮುಖದಲ್ಲಿ ಗಾಬರಿ. ಎಂದುಕರಾ ಎನ್ನುತ್ತಾ ನಾನೊಂದು ಕಾಫಿ ಲೋಟ ಹಿಡಿದು ಕುಳಿತರೆ ಅಣ್ಣ ನಗುತ್ತಾ ನೋಡಲ್ಲಿ ಎಂದು ಅವನು ಮಲಗಿದ ಜಾಗದ ಪಕ್ಕ ಕೈ ತೋರಿಸಿದ್ದ. ಅಂಗಳದ ಅಂಚಿನಲ್ಲಿ ಬೃಹತ್ ಗಾತ್ರದ ಹಾವೊಂದು ಹರಿದು ಹೋದ ಕುರುಹು. ಅಮ್ಮಾಯಿಗಾರು ಜೋರುಗಾ ಗಾಳಿ ವಸ್ತೆ  ಮಲ್ಲಿಗ ವಾಸನಾ ವಚ್ಚಿನಪ್ಪಡು ಬೈಠಿಕೆ ರಾಕಂಡಿ.. ಆದಿ  ದೇವನಾಗ, ಮನಮು ಚೂಡಕೂಡದು ಎಂದು ಮೀರು ಕೊತ್ತ ಕದಾ ಎಂದು ಬಿಟ್ಟಿದ್ದ. ನಾನು ಗಾಬರಿಯಲ್ಲಿ ಅಣ್ಣನ ಕಡೆ ನೋಡಿದರೆ ಅವ  ಅದೃಷ್ಟ ಗಟ್ಟಿಯಿತ್ತು ಕಣೆ, ನೀನಿದ್ದೆಯಲ್ಲ ಜೊತೆಗೆ ಎಂದು ನಗುತ್ತಲೇ ಇದ್ದ. ಕ್ಷಣಕಾಲ ಜೀವ ಝಲ್ ಎಂದು ಕಾಫಿ ಕುಡಿಯುವುದು ಮರೆತು ಕುಳಿತುಬಿಟ್ಟಿದ್ದೆ. ಇನ್ನು ಆಗಿದ್ದು ಆಗಲಿ ಯಾವ ಕಾರಣಕ್ಕೂ ಹೊರಗೆ ಮಾತ್ರ ಮಲಗುವುದಿಲ್ಲ ಎನ್ನುವ ಶಪಥ ಮನಸ್ಸಿನಲ್ಲಿ ಒಂದು ನೂರು ಸಾರಿ ಮಾಡುತ್ತಾ.

ಸಂಜೆಯ ಹೊತ್ತಿಗೆ ಭಾವನಾ ಹಗ್ಗದ ಮಂಚಗಳನ್ನು ತಂದಿಟ್ಟು ಇಡೀ ಆಕಾಶ ಕಾಣುವ ಹಾಗೆ ಬಯಲಿನಲ್ಲಿ ಹಾಕಿಟ್ಟಾಗ ಶಪಥ ಕರಾಗತೊಡಗಿತ್ತು. ರಾತ್ರಿಯಾದರೂ ಬಾರದ ಕರೆಂಟ್ ಅದಕ್ಕೆ ಇನ್ನಷ್ಟು ಜೊತೆಕೊಟ್ಟು ಹೇಗಿದ್ರೂ ಅದು ಬರುವ ಹೊತ್ತಿಗೆ ಮುನ್ಸೂಚನೆ ಕೊಡುತ್ತಲ್ಲ ಬಿಡು ಎಂದು ಸಮಜಾಯಿಸಿ ಕೊಡಲು ಶುರುಮಾಡಿಕೊಂಡು ಅರ್ಧ ಭಯ, ಅರ್ಧ ಅನಿವಾರ್ಯದಿಂದ ಹೊರಗೆ ಬಂದು ಮಂಚಕ್ಕೆ ಬೆನ್ನು ಒಡ್ಡಿದರೆ ಸುತ್ತಲಿನ ಬಯಲು, ಹರಡಿಕೊಂಡ ಆಕಾಶ, ನಗುವ ಚಂದ್ರ, ಮಿನುಗುವ ನಕ್ಷತ್ರಗಳು ಹೊಸ ಲೋಕವನ್ನೇ ಸೃಷ್ಟಿಸಿಬಿಟ್ಟವು. ಬಂಧನದಿಂದ ಬಯಲಿಗೆ ಬರಲು ಆತಂಕ, ಭಯ ಸಹಜ. ಒಮ್ಮೆ ಬಂದು ಬಿಟ್ಟರೆ ಅದೆಷ್ಟು ನಿರಾಳ.... ಅದೆಂತಾ ಸುಂದರ ಲೋಕ..

ನಿದ್ದೆ ಬರುವ ತನಕ ಚುಕ್ಕಿಗಳ ಎಣಿಸುತ್ತಾ, ಅವುಗಳ ನಡುವೆ ರಂಗೋಲಿ ಬಿಡಿಸುತ್ತಾ ಬೆಳಂದಿಗಳಲಿ ಒಂದು ತರಹ, ಕಗ್ಗತ್ತಲಿನಲ್ಲಿ ಒಂದು ತರಹ ಕಾಣುವ ಆಕಾಶ ದಿಟ್ಟಿಸುತ್ತಾ ಮಲಗಿದರೆ ನಿದ್ದೆ ಯಾವಾಗ ಅವರಿಸುತ್ತಿತ್ತೋ ಬಲ್ಲವರಾರು. ಬೆಳಿಗ್ಗೆ ಏಳುವ ಹೊತ್ತಿಗೆ ಕಗ್ಗಂಟಾಗಿರುತಿದ್ದ ಆಲೋಚನೆಗಳೆಲ್ಲಾ ಒಂದಕ್ಕೊಂದು ಸೇರಿ ಸುಂದರ ರಂಗೋಲಿಯಾಗಿರುತ್ತಿದ್ದದ್ದು ಮಾತ್ರ ಸತ್ಯ. ಮಿನುಮಿನುಗತ್ತಲೇ  ಥಟ್ಟನೆ ಸುಳಿವೂ ಕೊಡದೆ ಬಿದ್ದು ಹೋಗುತ್ತಿದ್ದ ನಕ್ಷತ್ರ.. ಕೊಂಚ ಸಂಕಟದಲ್ಲಿ ಅದಿದ್ದ ಜಾಗ ನೋಡಿದರೆ ಅಲ್ಲಿದ್ದದ್ದೇ ಸುಳ್ಳು ಎನ್ನುವ ಹಾಗಿನ ಆಕಾಶ, ಕಲ್ಪನೆಗಳನ್ನೆಲ್ಲಾ ಬಿಚ್ಚಿ ಹರಡಲು ಅನಂತ ಅವಕಾಶ, ಆಗಾಗ ಬೀಸಿ ಬೆವರ ಕುರುಹೂ  ಇಲ್ಲದಂತೆ ಕೊಂಡೊಯ್ಯುವ ಸುಳಿಗಾಳಿ ಪಿಸುಗುಟ್ಟವ ರಹಸ್ಯ, ಎತ್ತ ತಿರುಗಿದರು ಆವರಿಸಿರುವ ಬೆಳಂದಿಗಳು ಇಲ್ಲಾ ಕತ್ತಲು  ಅರೆ ಏಕಾಂಗಿ ಅನ್ನುವುದು ಎಂಥಾ ಭ್ರಮೆ ಎಂದು ಪಿಸುಗುಡುವ ಮನಸ್ಸು ಮಾಡಿಕೊಳ್ಳುವ ಸಾಂಗತ್ಯಕ್ಕೆ ಎಷ್ಟೊಂದು ಜೊತೆಗಾರರು.

ನಡು  ರಾತ್ರಿಯ ನೀರವತೆಯ ನಡುವೆಯೂ ಜೀವಂತಿಕೆ, ಮೌನದಲ್ಲೊಂದು ಮಾತು, ನಿಶಬ್ದದ ನಡುವಿನ ಶಬ್ದ, ಏಕಾಂತಕ್ಕೊಂದು ಸಾಂಗತ್ಯ, ಎಲ್ಲಾ ಗೊಂದಲಗಳನ್ನೂ ಬಿಡಿಸುವ ಆಕಾಶದ ಕ್ಯಾನ್ವಾಸ್, ಹಿಡಿದಷ್ಟೂ ಮಿಕ್ಕುವ ಚುಕ್ಕಿಗಳು, ಹೇಗೆ ಬೇಕಾದರೂ ಎಳೆಯಬಹುದಾದ ಗೆರೆಗಳು, ಮೂಡುವ ಚಿತ್ತಾರ, ಸಿಗುವ ಉತ್ತರ, ಆಗಾಗ ನಗುವ, ಜೊತೆಗಿರುವ ಚಂದ್ರಮ .. ಮನಸ್ಸೇ ಆಕಾಶವಾಗಿ, ಇಡೀ ಆಕಾಶವೇ ಮನಸ್ಸಾಗಿ ಎಷ್ಟೆಲ್ಲಾ ಜರುಗುತ್ತಿದೆ ಎನ್ನುವುದರ ಅರಿವಾಗಿ ಸಣ್ಣದೊಂದು ನಗು ನಿದ್ದೆ ಎರಡೂ ಆವರಿಸಿ ಏಳುವ ಹೊತ್ತಿಗೆ ಎದುರುಗೊಳ್ಳುವ ಬೆಳ್ಳಂಬೆಳಗು. ಆಲಯವೇ ಬಯಲಾಗುವ ಪರಿ ಅರ್ಥವಾಗಬೇಕಾದರೆ, ದಾರಿ ತಿಳಿಯಬೇಕಾದರೆ ಹೀಗೆ ಮಲಗಬೇಕು.... ತೆರೆದಷ್ಟು ತೆರೆದುಕೊಳ್ಳುವ ಆಕಾಶಕ್ಕೆ ಮುಖವೊಡ್ಡಬೇಕು...

ಮಲಗುವುದೆಂದರೆ ಬರೀ ಮಲಗುವುದಾ ಕೇಳಿದರೆ ಎಂದರೆ ಆಕಾಶ ನಗುತ್ತದೆ...ಚುಕ್ಕಿ ಲೆಕ್ಕ ತಪ್ಪಿಸುತ್ತದೆ. ಕಣ್ಣು ತೆರೆದು ನೋಡಿದರೆ ರಂಗೋಲಿ ನಗುತ್ತಿರುತ್ತದೆ.   

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...