ಬರಿದೆ ಆಡುವ ಮಾತಿಗರ್ಥವಿಲ್ಲ...

ಮೊನ್ನೆ ಸ್ನೇಹಿತೆಯೊಬ್ಬರು ಶೇರ್ ಮಾಡಿದ ತೋಳ್ಪಾಡಿಯವರ ಭಾಷಣದ ತುಣುಕೊಂದು ಕೇಳುತ್ತಿದ್ದೆ. ಮಾತಿನ ಕುರಿತಾದ ಮಾತದು. ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನುವ ಬಸವಣ್ಣನವರ ವಚನವನ್ನು ಅವರು ಬಿಡಿಸಿಟ್ಟ ಪರಿಗೆ ದಂಗಾದೆ. ಮಾತು ಮುಗಿದರೂ ನನ್ನೊಳಿಗಿನ ಮೌನ ಮಾತಾಡುತಿತ್ತು.
ಒಮ್ಮೆ ನಾವು ಮಾತಾಡುವುದನ್ನ ಗಮನಿಸುತ್ತಾ ಹೋದರೆ ನಾವೇನು ಅನ್ನುವುದು ಅರ್ಥವಾಗುತ್ತಾ ಹೋಗುತ್ತೇವಾ ಅನ್ನೋದನ್ನ ಆಲೋಚಿಸುತ್ತಲೇ ಇದ್ದೆ. ಮಾತಿಗೊಂದು ಮಾತು, ಮೆಚ್ಚಿಸಲು ಮಾತು, ಕೆರಳಿಸಲು ಮಾತು, ಮನಸ್ಸಿನ ಮಾತು, ಬುದ್ಧಿಯಮಾತು, ರಂಜಿಸಲು ಮಾತು ಹೀಗೆ ಮಾತಿಗೆ ಅದೆಷ್ಟು ಭಾವಗಳು, ಅದೆಷ್ಟು ದಾರಿಗಳು.

ಮಾತಾಡಲು ಬರುತ್ತೆ ಅನ್ನೋ ಸಂಭ್ರಮದಲ್ಲಿ ಏನು ಮಾತಾಡ್ತೀವಿ, ಹೇಗೆ ಮಾತಾಡ್ತೀವಿ ಅಸಲಿಗೆ ಅಲ್ಲಿ ಮಾತಾಡುವ ಅವಶ್ಯಕತೆಯಿತ್ತಾ ಅದು ನಮ್ಮ ನಿಜವಾದ ಮಾತಾ ಉಹೂ ಯಾವುದನ್ನೂ ಆಲೋಚಿಸದೆ ಗಮನಿಸದೆ ಕೇವಲ ಮಾತಾಡುತ್ತೇವೆ ಹಲವು ಸಲ. ಈ ಬಾರಿ ಊರಿಗೆ ಹೋದಾಗ ಅಹಿ ಮತ್ತು ಅನೀಶನ ನಡುವೆ ಏನೋ ಮಾತುಕತೆ ನಡೆಯುತ್ತಿತ್ತು. ಯಾವುದೋ ಒಂದು ಹಂತದಲ್ಲಿ ನಡೆದ ಮಾತುಕತೆಯನ್ನು ತಂದು ಅವಳ ಮಾವನಿಗೆ ಹೇಳುವ ಆತುರದಲ್ಲಿ ಓಡಿ ಬಂದು ಹೇಳುತ್ತಿದ್ದವಳು ಪಕ್ಕಕ್ಕೆ ತಿರುಗಿದಾಗ ಅನೀಶನ ಮುಖದಲ್ಲಿ ಕಂಡ ಬದಲಾವಣೆ ಎಲ್ಲೋ ತಪ್ಪಿತಸ್ಥ ಮನೋಭಾವ ಹುಟ್ಟಿಹಾಕಿದರೂ ಅದನ್ನು ಮುಚ್ಚಿಕೊಳ್ಳುವ ಪ್ರಯತ್ನವೋ ಇಲ್ಲಾ ಸಮರ್ಥಿಸಿಕೊಳ್ಳುವ ಯತ್ನವೋ ಮಾಡುತ್ತಾ ನಾನು ನಿಜಾನೆ ಹೇಳಿದ್ದು ಕಣೋ ಅಂದ್ಲು. ತಕ್ಷಣವೇ ಅವನು ಸತ್ಯ ಹೇಳ್ಬೇಕು ಹೌದು ಆದ್ರೆ ಗೊತ್ತಿರೋ ಸತ್ಯವೆಲ್ಲಾ ಹೇಳಬೇಕು ಅಂತಿಲ್ಲ ಅಂದ.

ಹೀಗೆ ಪರಿಚಯದವರೊಂದಿಗೆ ಮಾತಾಡುತ್ತಿದ್ದೆ. ಅವರ ಮಾತು ದುಡ್ಡು ಒಡವೆ, ಸುತ್ತಲಿರುವ ಪ್ರತಿಯೊಬ್ಬರ ಬಗ್ಗೆ ದೂಷಣೆಯಿಂದ ಆಚೆ ಬರುತ್ತಲೇ ಇರಲಿಲ್ಲ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಕೇಳುವ ಕರ್ಮ ತಂದುಕೊಂಡಿದ್ದಕ್ಕೆ ಶಪಿಸಿಕೊಳ್ಳುತ್ತಲೇ ಕೇಳುತ್ತಿದ್ದೆ. ಮಧ್ಯೆ ಮಧ್ಯೆ ಹೂ ಅನ್ನುತ್ತಿದ್ದೆ. ಸಮಾಧಾನ ಮಾಡುವಾಗಲೆಲ್ಲ ನನ್ನೊಳಗಿನ ಭಾವ ಚುಚ್ಚುತಿತ್ತು. ಎದುರಿನವರಿಗೆ ಹಿತವಾಗಲೆಂದು ನನ್ನದಲ್ಲದ ಮಾತನ್ನು ಆಡುತ್ತಿದ್ದೇನೆ ಅನ್ನೋ ಭಾವ ಹಿಂಸೆ ಕೊಡುತ್ತಿತ್ತು. ಎಷ್ಟೋ ಸಲ ಎದುರಿನವರಿಗೆ ಹಿತವಾಗಲೆಂದು, ಮೆಚ್ಚಲೆಂದು, ನೋವಾಗದಿರಲೆಂದೋ ಇನ್ಯಾವುದೋ ಭಾವದಿಂದ ನಮ್ಮದಲ್ಲದ ಮಾತನ್ನು ಆಡುತ್ತೆವಾ....

ಆಡುವ ಮಾತು ನನ್ನ ನಿಜವಾದ ಮಾತಾ ಅನ್ನೋದನ್ನ ಪ್ರಶ್ನಿಸಿಕೊಂಡಾಗ, ಅಷ್ಟನ್ನು ಮಾತ್ರ ಆಡುತ್ತೇನೆ ಅನ್ನೋದನ್ನ ನಿರ್ಧರಿಸಿಕೊಂಡಾಗ ಎಷ್ಟೋ ಮಾತುಗಳ ಸಮಾಧಿ ಆಗಬಹುದು.ನೆರವಾದ ಮಾತು ತೊಂದರೆ ಉಂಟುಮಾಡಬಹುದು ಅನ್ನುವ ಸಂದರ್ಭದಲ್ಲಿ ಮೌನ ಖಂಡಿತ ನಮ್ಮನ್ನು ಬಿಟ್ಟುಕೊಡಲಾರದು. ಹಾಗಿರುವಾಗ ಮಾತಾಡಲೇ ಬೇಕು ಅನ್ನುವ ಅನಿವಾರ್ಯತೆಯಾದರೂ ಏಕೆ? ಕೃತಿಮವಾದ ಮಾತು  ಎದುರಿನ ವ್ಯಕ್ತಿಗಿಂತಲೂ ಹೆಚ್ಚಾಗಿ ನಮ್ಮನ್ನು ಮೋಸಗೊಳಿಸುತ್ತದೆ. ನಮ್ಮೊಳಗೇ ಒಂದು ಫೇಕ್ ವ್ಯಕ್ತಿತ್ವವನ್ನು ಬೆಳೆಸುತ್ತಾ ಹೋಗುತ್ತದೆ. ಯಾರಿಗೆ ಹೆಚ್ಚು ಪುಷ್ಟಿ ಕೊಡುತ್ತೇವೆ ಅನ್ನುವುದರ ಮೇಲೆ ಅದು ನಮ್ಮನ್ನು ಡಾಮಿನೇಟ್ ಮಾಡುತ್ತಾ ಹೋಗುತ್ತದೆ. ನಮಗೆ ನಾವೇ ಮೋಸ ಮಾಡಿಕೊಳ್ಳುವುದಕ್ಕಿಂತ ದೊಡ್ಡ ದುರಂತ ಬದುಕಿನಲ್ಲಿ ಇನ್ನೇನಿದೆ..

ಎಲ್ಲವನ್ನೂ ಹೊರಜಗತ್ತಿಗೆ ಸಮೀಕರಿಸಿಕೊಂಡು ನೋಡುವ ಅದಕ್ಕೆ ತಕ್ಕ ಹಾಗೆ ಬದಲಾಗುತ್ತಾ ಸಾಗುವ ನಾವು ಮುಖ್ಯವಾಗಿ ನಮ್ಮೊಳಗನ್ನು ನೋಡಿಕೊಳ್ಳುವುದು ಮರತೇಬಿಡುತ್ತೇವೆ. ಹೊರಗಿನ ಜಗತ್ತನ್ನು ನೀವು ಬದಲಾಯಿಸಲಾರಿರಿ ಆದರೆ ನಿಮ್ಮೊಳಗನ್ನು ನೀವು ಅಂದುಕೊಂಡ ಹಾಗೆ ಬದಲಾಯಿಸುವ ಶಕ್ತಿ ನಿಮ್ಮಲಿದೆ ಅಂತಾರೆ ಸದ್ಗುರು. ಹೊರಜಗತ್ತಿನ ಯಾವುದೇ ತಲ್ಲಣಗಳು ಪರಿಣಾಮಬೀರಬೇಕಾದರೂ ಅದು ನಮ್ಮೊಳಗೇ ಇಳಿಯಬೇಕು. ಒಳಗಿರುವುದೇ ಹೊರಗೂ ಇರುವುದು ಅನ್ನೋದು ನಮ್ಮನ್ನು ನಾವು ಗಮನಿಸುತ್ತಾ ಹೋದಂತೆ ಅರ್ಥವಾಗುತ್ತಾ ಹೋಗುತ್ತದೆ.

ಹೀಗಿರುವಾಗ ನನ್ನೊಳಗಿನ ಮಾತುಗಳಿಗೆ ಬಣ್ಣ ಹಚ್ಚುವ ತನ್ಮೂಲಕ ನಮ್ಮನ್ನು ನಾವೇ ಮೋಸಗೊಳಿಸುವ ಪ್ರಕ್ರಿಯೆಯಾದರೂ ಯಾಕೆ ಬೇಕು. ಅಭಿವ್ಯಕ್ತಿ ಮಾಧ್ಯಮ ಒಂದು ಶುದ್ಧವಾದರೆ ಬದುಕು ಅದೆಷ್ಟು ಶುದ್ಧವಾಗಬಹುದು ಅನ್ನುವುದನ್ನು ಆಲೋಚಿಸಿದಾಗ ಬದುಕನ್ನ ವಿರೂಪಗೊಳಿಸುವ ಕ್ರಿಯೆಯ ಮುಖ್ಯ ಪಾತ್ರಧಾರಿ ನಾವೇ ಅನ್ನೋದು ಅರ್ಥವಾಗುತ್ತೆ. ಅರ್ಥವಾದ ದಿನ ಬದಲಾವಣೆ ಆರಂಭವಾಗುತ್ತೆ. ಆಡುವ ಮಾತಿನ ಮೇಲೆ ಒಂದು ಎಚ್ಚರ ಮೂಡುತ್ತದೆ. ಮಾತು ಅಂದ ಕೂಡಲೇ ನೆನಪಾಗಿದ್ದು ಕೆ.ಎಸ್ ಎನ್...

ಮಾತು ಬರುವುದು ಎಂದು ಮಾತಾಡುವುದು ಬೇಡ ;
ಒಂದು ಮಾತಿಗೆ ಎರಡು ಅರ್ಥವುಂಟು.
ಎದುರಿಗಿರುವವ ಕೂಡ ಮಾತುಬಲ್ಲ ಗೆಳೆಯ
ಬರಿದೆ ಆಡುವ ಮಾತಿಗರ್ಥವಿಲ್ಲ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ