ಹರ ಹರ ಯೋಗಿ.....

ಯಾವುದೇ ದೇಶದ ಪ್ರಾಣ ಇರೋದು ಅದರ ಸಂಸ್ಕೃತಿಯಲ್ಲಿ. ಆಧ್ಯಾತ್ಮ ಅದರ ಮೂಲ ಬೇರು. ಇವೆರಡನ್ನೂ ಧಿಕ್ಕರಿಸಿ ಬದುಕಲು ಹೊರಟರೆ ಅಲ್ಲಿಯೂ ಸಲ್ಲದ, ಇಲ್ಲಿಯೂ ನಿಲ್ಲದ  ನಾವು ತ್ರಿಶಂಕು ಸ್ವರ್ಗ ವಾಸಿಗಳಾಗುತ್ತೇವೆ. ನಮ್ಮತನ ನಮಗೆ ಹೆಮ್ಮೆ ಅನ್ನಿಸಬೇಕೆ ಹೊರತು ಅವಮಾನ ಎನ್ನಿಸಬಾರದು. ಹಾಗನ್ನಿಸಿದರೆ ನಮ್ಮನ್ನು ಯಾವುದೋ ಮಾನಸಿಕ ಕಾಯಿಲೆ ಕಾಡುತ್ತಿದ್ದೆ ಎಂದರ್ಥ. ತನ್ನ ಮೇಲಾದ ಎಲ್ಲಾ ಹೊರಗಿನ ಹಾಗೂ ಒಳಗಿನ ಆಕ್ರಮಣವನ್ನು ಎದುರಿಸಿಯೂ ಇಂದಿಗೂ ಜೀವಂತವಾಗಿರೋದು ಹಿಂದೂ ಧರ್ಮ. ಅದರ ಅಂತಃಸ್ವತ್ವವೇ ಹಾಗೆ.

ಇಂಥ ಸನಾತನ, ಪ್ರಖರ ಹಿಂದೂ ಧರ್ಮದ ಪ್ರಣತಿಯಾಗಿ ಮುಂಚೂಣಿಯಲ್ಲಿರುವ ಅನೇಕರಲ್ಲಿ ಎದ್ದು ಕಾಣುವ ಹೆಸರು ಯೋಗಿ ಆದಿತ್ಯನಾಥ್. ಯುಧಿಷ್ಠಿರ ಅವರು ಇವರ ಬಗ್ಗೆ ಲೇಖನ ಬರೆಯುವ ಹೊತ್ತಿನಲ್ಲಿ ನಾನು ಕಾಶಿಯ ಗಲ್ಲಿಯಲ್ಲಿ ಅಲೆಯುತ್ತಿದ್ದೆ. ಇವರ ಲೇಖನಗಳು ಒಂದು ಪುಸ್ತಕವಾಗಿ ಬಂದರೆ ಒಳ್ಳೆಯದಿತ್ತು ಅನ್ನೋ ಭಾವ ಕಾಡುತಿತ್ತು. ಅದಕ್ಕೂ ಒಂದು ಕಾರಣವಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅವರ ಹೆಸರು ಘೋಷಣೆಯಾಗುವ ಹೊತ್ತಿಗೆ ನನ್ನಲ್ಲೂ ಸಂದೇಹವಿತ್ತು. ಅನಂತರ ಅವರ ಬಗ್ಗೆ ತಿಳಿಯುತ್ತಾ ಹೋದ ಹಾಗೆ ಗೌರವ ಅಭಿಮಾನ ಬೆಳೆದಿದ್ದು. ಹಾಗಾಗಿ ಯೋಗಿಜಿ ಯ ಬಗ್ಗೆ ತಿಳಿಯಲು ಆಸಕ್ತಿ ಇರುವವರೆಗೆ ಹರ ಹರ ಯೋಗಿ ಒಂದೊಳ್ಳೆಯ ಪುಸ್ತಕ.

ವಜ್ರಾದಪಿ ಕಠರಾಣಿ ಮೃದೂನೀ ಕುಸುಮಾದಪಿ" ಅನ್ನೋದು ಒಬ್ಬ ಸಮರ್ಥ ನಾಯಕನಿಗಿರಬೇಕಾದ ಲಕ್ಷಣ. ಅದನ್ನು ಗೋವಿನಂತೆ ಸಾಧು, ಹುಲಿಯಂತೆ ಕ್ರೂರಿ ಅನ್ನೋ ಅಧ್ಯಾಯದಲ್ಲಿ ಚೆಂದವಾಗಿ ಹೇಳಿದ್ದಾರೆ. ಹೆಜ್ಜೆ ಮುಂದಿಡಬೇಕಾದರೆ ವಿಷಯವನ್ನು ಅರಿಯುವ ರೀತಿ, ಮುಂದಿಟ್ಟ ಮೇಲೆ ಹಿಂದೆಗೆಯದ ಧೈರ್ಯ ನಾಯಕನಿಗೆ ಬೇಕೇ ಬೇಕು. ಹೇಳಿ ಕೇಳಿ ಹಠಯೋಗಿ ಅವರು. ಹಾಗಾಗಿ ಧೈರ್ಯವೆನ್ನುವುದು ಅವರ ಉಸಿರಿನಲ್ಲೇ ಮಿಳಿತವಾಗಿರುತ್ತದೆ. ಇಂಥ ಯೋಗಿಯ ಹೃದಯದಲ್ಲಿ ಉರಿಯುತ್ತಿರುವುದು ಹಿಂದುತ್ವದ ಪ್ರಣತಿ. ಅದಕ್ಕೆ ತೈಲವಾಗಿರೋದು ರಾಷ್ಟ್ರೀಯತೆ. ಭವ್ಯ ಭಾರತದ ನಿರ್ಮಾಣದ ಹೋರಾಟದಲ್ಲಿ ಮೋದಿಯ ಕೈಯಲ್ಲಿರುವ  ಅತಿ ಪ್ರಬಲಾಸ್ತ್ರವೇ ಯೋಗಿ.

ಹಾಗೆಂದು ಇವರು ಧರ್ಮಾಂಧರಲ್ಲ. ಈ ನೆಲದ ಸಂಸ್ಕೃತಿಯನ್ನು ಗೌರವಿಸವ, ಅನುಸರಿಸುವ ಪ್ರತಿಯೊಬ್ಬರನ್ನೂ ಸಮಾನವಾಗಿ ಮನುಷ್ಯರೆಂದೇ ಗುರುತಿಸುವ ಕರ್ಮಯೋಗಿ. ಇಲ್ಲವಾದಲ್ಲಿ ತೊಲಗಿ ಅನ್ನೋ ಧಾರ್ಷ್ಟ ಇರೋ ಬೈರಾಗಿ. ತನ್ನ ಮನೆಯನ್ನೇ ಗೌರವಿಸದವನಿಗೆ ಅಲ್ಲಿ ಇರಲು ಹಕ್ಕಿಲ್ಲ ಅನ್ನೋದು ಅವರ ವಾದ. ಇಷ್ಟವಿಲ್ಲದ ಕಡೆ ಇರಲೇಬೇಕೆಂಬ ಬಂಧನವಿಲ್ಲದ ಕಾಲಘಟ್ಟದಲ್ಲಿ ನಾವಿರುವಾಗ ಉಂಡ ತಟ್ಟೆಯಲ್ಲೇ ಉಗಿಯುವವರ ಮಾನಸಿಕತೆಯ ಬಗ್ಗೆ ನನಗೂ ಅನುಕಂಪವಿದೆ. ಆದರೆ ಅದನ್ನು ನೇರವಾಗಿ ಹೇಳುವ ಧೈರ್ಯ ಯೋಗಿಯವರಿಗಿದೆ.

ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ತು ಪ್ರವೇಶಿಸಿ ಹಿಂದುತ್ವಕ್ಕಾಗಿ ಧ್ವನಿ ಎತ್ತುವುದು ಅಷ್ಟು ಸುಲಭವಲ್ಲ. ಗೊರಖನಾಥ ಸಂಸ್ಥಾನದ ಚುಕ್ಕಾಣಿ ಹಿಡಿದು ಅದನ್ನು ಸಮರ್ಥವಾಗಿ ನಿಭಾಯಿಸುತ್ತಲೇ ರಾಜಕೀಯಕ್ಕೆ ಪ್ರವೇಶ ಮಾಡಿ ಅಲ್ಲೂ ಸೈ ಅನ್ನಿಸಿಕೊಳ್ಳಬೇಕಾದರೆ ನಡೆದ ಹಾದಿ ಸುಗಮವಾದದ್ದೇನಲ್ಲ. ಅದರಲ್ಲೂ ಹಿಂದುತ್ವವನ್ನೇ ಉಸಿರಾಗಿಸಿಕೊಂಡು ಹೋರಾಡುವುದು ಇದೆಯಲ್ಲ ಅದಕ್ಕೆ ಎಂಟೆದೆ ಮಾತ್ರವಲ್ಲ ಅಪಾರ ಬುದ್ಧಿವಂತಿಕೆ, ಅಷ್ಟೇ ಪ್ರಾಮಾಣಿಕತೆ ಬೇಕು.


ನಾಯಕ ನಾದವನಿಗೆ ಜನರನ್ನು ಹೇಗೆ ಆಳಬೇಕು ಅನ್ನೋದೂ ಗೊತ್ತಿರಬೇಕು. ಒಬ್ಬೊಬ್ಬರೂ ಭಿನ್ನ, ಹಾಗಾಗಿ ಅವರಿಗೆ ಹೇಳಬೇಕಾದ ರೀತಿಯೂ ವಿಭಿನ್ನ. ಅದಕ್ಕೆ ಹೇಳಿದ್ದು ಮೃದು, ಕಟೋರ ಎರಡೂ ಗೊತ್ತಿರಬೇಕು. ಈ ಮಾತಿಗೆ ಉದಾಹರಣೆಯಾಗಿ ನಿಂತಿರುವುದು ಯೋಗಿ ಮಾತ್ರ.  ಇದಕ್ಕೆ ನಿದರ್ಶನವಾಗಿ ಈ ಮಾತು ನೋಡಿ.
"ಅಲ್ಪಸಂಖ್ಯಾತರು ಯಾರನ್ನೂ ಹತ್ಯೆಗೈಯಬಾರದು. ಅವರು ಇಲ್ಲಿ ಶಾಂತಿಯಿಂದ ಬದುಕಬೇಕು. ಹಾಗೆ ಬದುಕದಿದ್ದರೆ ನಾವು ಅವರಿಗೆ ಪಾಠ ಮಾಡುತ್ತೇವೆ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ.

ನಿಜವಾದ ಯೋಗಿಗಳ ಬದುಕು ನಿಂತಿರುವುದೇ ತ್ಯಾಗದ ಅಡಿಪಾಯದ ಮೇಲೆ. ಇದಕ್ಕೆ ಯೋಗಿಜಿ ಕೂಡಾ ಹೊರತಲ್ಲ. ಮುಖ್ಯ ಮಂತ್ರಿಯಾದರೂ ಅವರ ವೇಷ, ಭೂಷಣ, ಜೀವನ ಶೈಲಿ, ಆಚಾರ, ಪದ್ದತಿಗಳು ಯಾವುದೂ ಬದಲಾಗಿಲ್ಲ. ಇವು ಯಾವುದೂ ಹೇಳುವಷ್ಟು ಸುಲಭವೂ ಅಲ್ಲ.ನೆಹರೂವಿನ ಕಾಲದಲ್ಲಿ ಆರಂಭವಾದ ಸೈದ್ಧಾಂತಿಕ ಪಲ್ಲಟ, ಹಾಗೂ ಜಾತ್ಯಾತೀತ ರಾಜಕಾರಣದ ವಿಷದ ಬೇರುಗಳನ್ನು ಸರಿಮಾಡಿ, ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಯಜ್ಞ ಆರಂಭವಾಗಿದೆ. ಮುಖ್ಯ ಪುರೋಹಿತನ ಸ್ಥಾನವನ್ನು ಮೋದಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜೊತೆಗೆ ಅಮಿತ್ ಷಾ ನಂತಹ ಚಾಣಕ್ಯ ಮಂತ್ರಿ ಇದ್ದಾರೆ. ಯೋಗಿಯೆಂಬ ಅಶ್ವಮೇಧದ ಕುದುರೆ ತನ್ನ ಓಟ ಶುರುಮಾಡಿದೆ. ಬೆಂಬಲಿಸುವ ಮಹತ್ಕಾರ್ಯದ ಸಮಿಧೆ ನಾವಾಗಬೇಕು ಅಷ್ಟೇ..

ಇಡೀ ಪುಸ್ತಕದಲ್ಲಿ ಯೋಗಿಜಿಯ ಬಗ್ಗೆ ಪ್ರಸಕ್ತ ರಾಜಕಾರಣ ಎದುರಿಸುತ್ತಿರುವ ಸಂಕ್ರಮಣ ಕಾಲದ ಬಗ್ಗೆ ತುಂಬಾ ಸರಳವಾಗಿ ಅಷ್ಟೇ ಅರ್ಥಗರ್ಭಿತವಾಗಿ ವಿವರಿಸಿದ್ದಾರೆ ಯುಧಿಷ್ಠಿರಅವರು. ಯೋಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದ ನಾನು ಅಲ್ಲಿಯ ಆಟೋ ಚಾಲಕರು, ರಿಕ್ಷಾವಾಲರು, ಟೀ ಮಾರುವವರನ್ನು ಮಾತಾದಿಸುತ್ತಿದ್ದೆ. ಅವರೆಲ್ಲರ ಕಣ್ಣಿನಲ್ಲಿ ಒಂದು ಭರವಸೆಯ ಬೆಳಕು, ಅಭಿಮಾನ ಕಾಣುತಿತ್ತು. ಮೋದಿಯ ಸಮರ್ಥ ಉತ್ತಾರಾಧಿಕಾರಿ ಇದ್ದರೆ ಅದು ಯೋಗಿ ಮಾತ್ರ ಅನ್ನೋ ಹೆಮ್ಮೆ ಪ್ರತಿಫಲಿಸುತ್ತಿತ್ತು. ಈ ಪುಸ್ತಕವನ್ನು ಓದಿ ಕೆಳಗಿಡುವಾಗ ನಮ್ಮಲ್ಲೂ ಅದೇ ಭಾವ ಹೊಮ್ಮುತ್ತದೆ. ತನ್ನ ಉತ್ತಾರಧಿಕಾರಿಯನ್ನು ಸಮರ್ಥವಾಗಿ ಬೆಳೆಸುತ್ತಿರುವ ಮೋದಿಯ ಬಗ್ಗೆ ಪ್ರೀತಿಯೂ..

ಪುಸ್ತಕದ ಕೊನೆಯ ಪುಟ ಮಗುಚಿ ಪಕ್ಕಕ್ಕೆ ಎತ್ತಿಡುವ ಮುನ್ನ ನಮ್ಮ ಹೃದಯದಲ್ಲೂ ರಾಷ್ಟ್ರೀಯತೆಯ ಬೆಳಕು ಪ್ರಜ್ವಲಿಸುತ್ತಿರುತ್ತದೆ. ಸ್ವಾಭಿಮಾನದ ತೈಲಕ್ಕೆ ಯೋಗಿಯೆಂಬ ಹಣತೆ ಆಧಾರವಾಗಿರುತ್ತದೆ. ಕಿಡಿ ಹತ್ತಿಸುವ ಶಕ್ತಿಯಾಗಿ ಮೋದಿ ಕಂಗೊಳಿಸುತ್ತಾರೆ. ಮನಸ್ಸು ಹರ ಹರ ಯೋಗಿಯೆಂದು ಗುನುಗುತ್ತಿರುತ್ತದೆ.



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...