ಸ್ವಾಪಿಂಗ್

ಮೋಡ ಕೆಲವೊಮ್ಮೆ ಮನಸ್ಸಿಗೂ ಕವಿಯುತ್ತೆ. ಅದರಲ್ಲೂ ಬಾನಲ್ಲಿ ಮೋಡ ಕಟ್ಟಿದಾಗ ಇಡಿ ವಾತಾವರಣದಲ್ಲಿ ಒಂದು ಬದಲಾವಣೆ ಆಗುತ್ತೆ. ಆಲಸ್ಯತನದ ಪರದೆಯೊಂದು ನಿಧಾನವಾಗಿ ಆವರಿಸುತ್ತೆ. ಮೊನ್ನೆ ಇಂಥಹುದೇ ಸೋಮಾರಿದಿನದಲ್ಲಿ ಏನೂ ಮಾಡಲು ಮನಸ್ಸಿಲ್ಲದ ಗಳಿಗೆಯಲ್ಲಿ ಶೆಲ್ಫ್ ಬಳಿ ಕೈ ಚಾಚಿದಾಗ ಸಿಕ್ಕಿದ್ದು "ಸ್ವಾಪಿಂಗ್."

ತರ್ಕ ಕೊಟ್ಟಾಗಲೇ ಸುಪ್ರೀತ್ ಇದನ್ನೂ ಕೊಟ್ಟಿದ್ದ. ಓದದೇ ಹಾಗೆ ಇಟ್ಟಿದ್ದೆ. ಯಾವ ಪುಸ್ತಕವನ್ನೂ ಓದದೆ ಕಾಯಿಸದ ನಾನು ಇದನ್ಯಾಕೆ ಹಾಗೆ ಇಟ್ಟಿದ್ದೆ ಅನ್ನೋದು ಗೊತ್ತಿಲ್ಲ. ಮೊನ್ನೆ ಅದನ್ನು ಹಿಡಿದವಳು ಕೆಳಗೆ ಇಟ್ಟಿದ್ದು ಮುಗಿದ ಮೇಲೆಯೇ. ಮೊದಲೇ ಮೋಡ ಕವಿದಿದ್ದ ಮನಸ್ಸಿಗೆ ವಿಷಾದದ ಹೊದ್ದಿಕೆಯನ್ನು ಹೊಚ್ಚಿದ್ದು ಈ ಪುಸ್ತಕವೇ...

ಓದಿಕೊಂಡಿದ್ದರೂ, ಅಧುನಿಕ ಮನೋಭಾವ ಎಂದರೂ ಕೆಲವಷ್ಟು ಗೆರೆಗಳನ್ನು ಎಳೆದುಕೊಂಡೇ ಬದುಕುವ, ನನಗೆ ಈ ಪದದ ಮೊದಲು ಕೇಳಿದಾಗ ಶಾಕ್ ಆಗಿತ್ತು. ಕಲ್ಪನೆಯಲ್ಲೂ ಚಿತ್ರಿಸಿಕೊಳ್ಳಲು ಭಯವಾಗಿತ್ತು. ಅಂತಹುದು ಎಲ್ಲೋ ಸೊಫಿಸ್ಟಿಕೇಟೆಡ್ ಅನ್ನೋ ಹೆಸರಿನಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ನಡೆಯುತ್ತದೆ ಅಂತ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದರೊಳಗೆ ಹತ್ತಿರದ ಒಂದು ನಗರದ ಹೆಸರು ಹೇಳಿ ಅಲ್ಲೂ ಈಗ ಶುರುವಾಗಿದೆ ಎಂದಾಗ ಬೆಚ್ಚಿಬಿದ್ದಿದ್ದೆ.

ಲೈಂಗಿಕತೆ ವೈಯುಕ್ತಿಕ ವಿಷಯವಾದರೂ ಅದಕ್ಕೂ ಒಂದು ಲಕ್ಷ್ಮಣ ರೇಖೆಯಿದೆ. ಇದರ ಬಗ್ಗೆ ಭಾರತೀಯರಿಗೆ ಒಂದು ಪವಿತ್ರ ಭಾವನೆಯಿದೆ. ಅದು ಎಗ್ಗಿಲ್ಲದೆ ಹೀಗೆ ಬಿಕರಿಯಾಗುತ್ತೆ, ನೈತಿಕತೆ ಅನ್ನೋ ಗೆರೆಯನ್ನು ಅಳಿಸಿ ಅನೈತಿಕತೆಯನ್ನೂ ಅದರ ವ್ಯಾಪ್ತಿಯೊಳಗೆ ತರುತ್ತೆ ಅನ್ನೋದು ಸಾಮಾನ್ಯರಿಗೆ ಜೀರ್ಣವಾಗದ ವಿಷಯ.ಪ್ರಕೃತಿಯೇ ವಿಕೃತಿಯಾದಾಗ ಹೇಗೆ ಸ್ವೀಕರಿಸಬೇಕು, ಯಾವುದು ಸರಿ ಯಾಕೆ ತಪ್ಪು ಅನ್ನೋ ಜಿಜ್ಞಾಸೆ ಕಾಡುತ್ತಲೇ ಹೋಗುತ್ತೆ. ಒಬ್ಬರ ತಪ್ಪು ಇನ್ನೊಬ್ಬರ ಸರಿಯಾಗುವ ಕಾಲಘಟ್ಟದಲ್ಲಿ ನಾನೇ ಅಪ್ಡೇಟ್ ಆಗಿಲ್ಲವೇನೋ ಅನ್ನೋ ಸಂದೇಹ ಕಾಡುತ್ತದೆ.

ಅರಿಷಡ್ವರ್ಗ ಗಳಿಂದ ಮುಕ್ತರಾದವರು ಯಾರೂ ಇಲ್ಲ ನಿಜ ಆದರೆ ಪ್ರತಿಯೊಂದಕ್ಕೂ ಒಂದು ಮಿತಿಯಿದೆ. ಆ ಮಿತಿಯನ್ನು ಮೀರಿದಾಗ ಅದು ಪ್ರವಾಹದಂತೆ. ನಾಶವಾಗೋದು ಮೀರಿದವರು ಮಾತ್ರವಲ್ಲ ಪ್ರವಾಹದ ರಭಸಕ್ಕೆ ಎದುರಾದದ್ದೆಲ್ಲಾ ಕೊಚ್ಚಿ ಹೋಗುವಂತೆ ಜೊತೆಗಿದ್ದವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರವಾಹಕ್ಕೆ ಮಾನವೀಯತೆ ಅರ್ಥವಾಗಲಾರದು.ಕೊಚ್ಚಿಕೊಂಡು ಹೋಗುವುದಷ್ಟೇ ಅದರ ಕೆಲಸ. ಇಲ್ಲೂ ಕೊಚ್ಚಿ ಹೋದವರು ಹಲವರಾದರೂ ಬಲಿಯಾಗಿದ್ದು ತಾನು ನಂಬಿದ ಮೌಲ್ಯಗಳನ್ನು ಉಳಿಸಿಕೊಳ್ಳಲಾಗದ ಅಸಹಾಯಕ ರಶ್ಮಿ.

ಪ್ರವಾಹಕ್ಕೆ ಸಿಲುಕಿಯೂ ಬದುಕುವ ಛಲ ಹೊತ್ತ ಅನುರಾಧ, ಸ್ವಾತಿ ಇಷ್ಟವಾದರೂ ಅವರು ಅನುಭವಿಸುವ ತಲ್ಲಣ ನೋವುಗಳು ಮನಸ್ಸನ್ನು ಘಾಸಿಗೊಳಿಸುತ್ತದೆ. ಪಶ್ಚಿಮದಿಂದ ಬಂದ ಎಲ್ಲವೂ ಸೊಫಿಸ್ಟಿಕೇಟೆಡ್ ಅನ್ನೋ ನಮ್ಮ ದೌರ್ಬಲ್ಯ ಹೇಗೆ ಇಂಚು ಇಂಚಾಗಿ ನಮ್ಮತನವನ್ನು ಕೊಳ್ಳುವುದರ ಜೊತೆಗೆ ನೆಮ್ಮದಿಯನ್ನೂ ಕಸಿಯುತ್ತಿದೆ ಅನ್ನೋದು ಬಲೆಗೆ ಬಿದ್ದಾಗಲೇ ಅರ್ಥವಾಗೋದು. ಆ ಚಕ್ರವ್ಯೂಹದಿಂದ ಹೊರಬರುವ ಅರ್ಜುನರ ಸಂಖ್ಯೆ ತುಂಬಾ ವಿರಳ ಅನ್ನೋದೇ ದುರಂತ.

ಯಾವುದೋ ನೋವಿಗೆ, ಇನ್ಯಾವುದೋ ವ್ಯಥೆಗೆ  ತಮ್ಮ ದುಶ್ಚಟಗಳನ್ನೂ ಸಮರ್ಥಿಸಿಕೊಳ್ಳುವ ಪ್ರಶಾಂತ್ ಅಂಥವರು ಹೇಗೆ ಮೃದು ಮನಸ್ಸಿನವರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಾರೆ ಅನ್ನೋದು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆ ಇನ್ನೊಬ್ಬರಿಗೆ ಸಮರ್ಥನೆ ಕೊಡುತ್ತಾ ಇನ್ನಷ್ಟು ಪಾತಾಳಕ್ಕೆ ಇಳಿಯುವ ಅವರು ತಮ್ಮೊಂದಿಗೆ ಇತರರನ್ನು ಅರಿವಿಲ್ಲದೆ ಕರೆದೊಯ್ಯುವುದೇ ದುರಂತದ ಸಂಗತಿ. ನೋ ಹೇಳುವುದು ಕಷ್ಟವಾದರೂ ಬದುಕಲ್ಲಿ ಕಲಿಯಲೇ ಬೇಕಾದ ಮುಖ್ಯ ಪದ ಅನ್ನಿಸಿಬಿಡ್ತು.

ಕಾಮವೆಂಬುದು ನಮ್ಮ ಮಿತಿಯಲ್ಲಿದ್ದರೆ ಅದು ಪ್ರಕೃತಿ, ಅದೇ ನಮ್ಮನ್ನು ನಿಯಂತ್ರಿಸಲು ಶುರುಮಾಡಿದರೆ ಅದು ವಿಕೃತಿ. ಹಾಗಾಗಿಯೇ ಹಿರಿಯರು ಅದನ್ನು ಮದುವೆಯೆಂಬ ಬಂಧನದಲ್ಲಿ ಇಟ್ಟಿದ್ದು, ಹಲವು ಆಚರಣೆ, ನಿಷಿದ್ಧಗಳ ಮೂಲಕ ಅದನ್ನು ಮೀರದಂತೆ ಕಟ್ಟುಪಾಡು ಮಾಡಿದ್ದು ಅನ್ನಿಸುತ್ತೆ. ಜಗತ್ತಿನಲ್ಲಿ ಪ್ರತಿಯೊಂದು ಸಂಗತಿಗೂ ಒಂದು ಮಿತಿಯಿದೆ. ಕೆಲವನ್ನು ಮೀರಬಾರದು ಅನ್ನೋ ಅಪ್ಪಣೆಯೂ ಇದೆ.

ಓದಿ ಮುಗಿಸುವ ಹೊತ್ತಿಗೆ ಗಾಢವಿಷಾದವೊಂದು ಸುತ್ತಲೂ ಆವರಿಸಿದೆ.ಕಳಚಿಕೊಳ್ಳಲೂ ಆಗದಷ್ಟು ನಿತ್ರಾಣ ಆವರಿಸಿದೆ.
ಮಿತಿಯನ್ನು ಮೀರುವ ನೆಪದಲ್ಲಿ, ಅಧುನಿಕರಾಗುವ ಭರದಲ್ಲಿ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಲೆಕ್ಕವಿಡುತ್ತಿಲ್ಲ.
ಲೆಕ್ಕವಿಡುವ ಸಮಯದಲ್ಲಿ ಬದುಕು ಮಿತಿಯಲ್ಲಿ ಇರುವುದಿಲ್ಲ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...