ಆಷಾಡದ ಮಳೆಯೂ ಹುರಳಿ ಸಾರೂ

ಆಷಾಡವೆಂದರೆ ಜಡಿಮಳೆ ಮಾತ್ರವಲ್ಲ, ಮೈ ಕೊರೆಯುವ ಗಾಳಿ ಚಳಿ ಕೂಡ. ನಿಧಾನಕ್ಕೆ ತನ್ನ ಅಬ್ಬರ ಹೆಚ್ಚಿಸಿಕೊಂಡ ಮಳೆ ಇಳೆಯೂಡಲನ್ನು ತುಂಬಿ ಸಂಭ್ರಮದಿಂದ ಉಕ್ಕಿ ಹರಿಯುವ ಕಾಲ. ಎಲ್ಲೆಲ್ಲೂ ಜಲವೊಡೆದ ಇಳೆ ಹರಿಯುತ್ತಾ ನಗುತ್ತಾ ಹಸಿರುಕ್ಕಿಸುತ್ತಾ ತನ್ನೊಡಲಲ್ಲಿ ಮೊಳಕೆಯೊಡೆಯುವ ಕಾಲ. ಹೊರುವುದು, ಹೇರುವುದು ಎಷ್ಟು ಸಂಭ್ರಮ, ಎಷ್ಟು ಸುಂದರ, ಭಾವದಲ್ಲಷ್ಟೇ ಅಲ್ಲಾ ನೋಟದಲ್ಲೂ ಅನ್ನೋದು ಇಳೆ ಹೆಜ್ಜೆ ಹೆಜ್ಜೆಗೂ ನಿರೂಪಿಸುವ ಕಾಲವದು.
ಈ ಮಳೆಯಲ್ಲಿ ಶಾಲೆಗೆ ಹೋಗುವುದೂ ಒಂದು ಆಟವೇ. ಹರಿವ ತೊರೆಗಳಲ್ಲಿ ನೀರಾಟವಾಡುತ್ತಾ, ಕಾಲ್ಬೆರಳುಗಳಲ್ಲಿ ನೀರು ಚಿಮ್ಮಿ ಒದ್ದೆಯಾಗುವುದಲ್ಲದೆ ಜೊತೆಯವರನ್ನೂ ಒದ್ದೆಯಾಗಿಸುತ್ತಾ ಅದೆಷ್ಟು ಭಾವಗಳು ಸದ್ದಿಲ್ಲದೇ ಗರ್ಭ ಕಟ್ಟುತ್ತಿದ್ದವೋ ಅನ್ನೋದು ಈಗ ನೆನಪಿನ ತೆರೆ ಸರಿಸಿದಾಗ ಮೂಡುವ ಭಾವದ ಮರಿಗಳನ್ನು ಗಮನಿಸಿದಾಗಲೇ ಅರ್ಥವಾಗೋದು.
ಗೊರಬನ್ನು ತಲೆಗೆ ಹಾಕಿಕೊಂಡು ಸಾಗುವ ಗುಂಪು, ಗದ್ದೆಯಲ್ಲಿ ಬೆನ್ನು ಬಾಗಿ ಮಳೆಯ ಸದ್ದನ್ನೂ ಮೀರಿ ಮಾತಾಡುತ್ತಾ, ಎಲೆಅಡಿಕೆ ಜಗೆಯುತ್ತಾ ನಾಟಿ ಮಾಡುವ ಗುಂಪು ಯಾವ ಬಿ ಬಿ ಸಿ ಗೆ ಕಡಿಮೆಯಿತ್ತು. ಸುತ್ತೆಲ್ಲಾ ಊರು ಮನೆಗಳ ಜನರೆಲ್ಲಾ ಬಂದು ಹೋಗುವ ಮಾತಿನಲ್ಲಿ ಕಾಳಜಿಯೂ ಮಳೆಯ ತುಂತುರಿನಂತೆ ಕೆಲವೊಮ್ಮೆ ಕಚಗುಳಿ, ಆಪ್ತ.. ಕಂಬಳಿ ಹೊದ್ದು ಎತ್ತುಗಳಿಗೆ ನೊಗ ಕಟ್ಟಿ ಹೂಟಿ ಮಾಡುವ ಅವುಗಳನ್ನು ಗದರುವ ಸದ್ದುಗಳ ನಡುವೆ, ಹೆಂಗಳೆಯರ ಕಲರವಗಳ ಕೇಳಲು ಮಳೆಯೂ ಕೆಲವೊಮ್ಮೆ ಮೌನವಾಗಿ ಬಿಡುತ್ತಿತ್ತು.
ಬೆಳಿಗ್ಗೆಯೇ ಮುರುವಿನ ಒಲೆಗೆ ಬೆಂಕಿ ಹಾಕಿ ಒಂದು ಕುಂಟೆಯನ್ನಿಟ್ಟು ದೊಡ್ಡ ಪಾತ್ರೆಯಲ್ಲಿ ಬೇಯಲು ಹಾಕುವ ಹುರಳಿ ನಿಧಾನವಾಗಿ ಬೆಂದು ಬೆಂದು ಕಟ್ಟು ಬಿಟ್ಟು ಘಮ ಬಿಡುವ ಹೊತ್ತಿಗೆ ಸುಳಿವ ಗಾಳಿಗೂ ಮೂಗು ದೊಡ್ಡದಾಗಿ ಅದು ಆಘ್ರಾಣಿಸುವ ಪರಿಗೆ ಸುತ್ತಮುತ್ತಲಿನ ಎಲ್ಲರ ಮೂಗಿನ ಹೊರಳೆಯೂ ಅರಳುತಿತ್ತು. ಇದಿನ್ನು ಮನೆಗೆ ಹೊರಡುವ ಸಮಯ ಎಂದು ಅರಿತ ಎತ್ತುಗಳು ತಲೆ ಅಲ್ಲಾಡಿಸಿ ಹೊರಡುವ ಸೂಚನೆ ಕೊಡುತಿದ್ದವು. ದಿನವಿಡೀ ಉತ್ತು ಮನೆಗೆ ಬರುವ ವೇಳೆಗೆ ಪಾತ್ರೆಯಲ್ಲಿ ಹಬೆಯಾಡುವ ಹುರಳಿ ಅವುಗಳ ಮುಂದಿದ್ದರೆ ಘಮಗುಡುವ ಸಾರು ಗದ್ದೆ ಕೆಲಸ ಮುಗಿಸಿ, ಶಾಲೆ ಮುಗಿಸಿ ಬರುವ ನಮ್ಮಗಳನ್ನು ಕಾಯುತ್ತಾ ಕುಳಿತಿರುತ್ತಿತ್ತು.
ಪ್ರಶಾಂತ್ ವಾಲ್ ನಲ್ಲಿದ್ದ ಈ ಫೋಟೋ ನೋಡಿದ ಕೂಡಲೇ ಮನದಲ್ಲೂ ನೆನಪಿನ ಸುರಿಮಳೆ. ಊರಿಗೆ ಓಡಿ ಹೋಗುವ ಮನಸ್ಸು. ತಕ್ಷಣವೇ ವಾಸ್ತವ ಬಡಿದು ಎಬ್ಬಿಸುತ್ತೆ. ಈಗ ಮಳೆಯೂ ಇಲ್ಲ, ಎತ್ತುಗಳಂತೂ ಮೊದಲೇ ಇಲ್ಲಾ. ಕೇಜಿಗಟ್ಟಲೆ ಹುರುಳಿ ಬೇಯುಸುತ್ತಿದ್ದ ಮುರುವಿನ ಒಲೆಗಳು ಯಾವ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದಾವೋ ನೆನಪಿಟ್ಟುಕೊಂಡವರಾರು...
ಟಿಲ್ಲರ್, ಗ್ಯಾಸ್ ಗಳ ಭರಾಟೆಯಲ್ಲಿ ಕಳೆದಿದ್ದು ಎತ್ತಾ... ಮುರುವಿನ ಒಲೆಯಾ ಇಲ್ಲಾ ನಾವಾ..... ಮುಂದಕ್ಕೆ ಸಾಗುವ ಭರದಲ್ಲಿ ಅದೆಷ್ಟು ಸಂಗತಿಗಳಿಗೆ ಬೆನ್ನಾಗುತ್ತಿದ್ದೇವೆ...
ಹೇಳುವ ಮಳೆಯೂ ಮೌನವಾಗಿದೆ.....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...