ಮಳೆ ಹೊಳೆ

ಮಳೆಯಿಲ್ಲ ಅಂತ ಬೈಕೊಂಡಿದ್ದು ಕೆಳಿಸ್ತೇನೋ ಕಣೆ ಒಂದೇ ಸಮನೆ ಸುರಿದು ಸಿಟ್ಟು ತೀರಿಸಿಕೊಳ್ತಾ ಇದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈ ಗಾಳಿ ನೋಡು, ರಾಮಮಂಟಪ ಮುಳುಗಬಹುದೇನೋ  ಬರ್ತಿಯಾ ಮನೆಗೆ ಅಂತ ಚಿಕ್ಕಿ ಬೆಳ್ಬೆಳಿಗ್ಗೆ ಫೋನ್ ಮಾಡಿದ್ರೆ ರೆಕ್ಕೆ ಇರಬಾರದಿತ್ತ ಅನ್ನಿಸಿಬಿಡ್ತು. ಮಲೆನಾಡಿನ ಮಳೆ ಅನ್ನೋದು ಮರೆಯಾಗೆ ಬಿಡ್ತಾ ಅಂತ ಬೇಸರಿಸಿಕೊಳ್ಳುವ ವೇಳೆಗೆ ಸುರಿಯುತ್ತಿದೆ ಮಳೆ ಧಾರಾಕಾರವಾಗಿ. ಎಲ್ಲವನ್ನೂ ಕೊಚ್ಚಿ ಹೊಸತನ ತುಂಬಲು.

ಬಾಲ್ಯ ಅಂದ್ರೆ ಊರು, ಊರು ಅಂದ್ರೆ ಮಳೆ. ಬದುಕಿನಲ್ಲಿ ಮಳೆ ಬೆಸೆದುಕೊಂಡಷ್ಟು ಇನ್ಯಾವುದೂ ಬೆಸೆದುಕೊಂಡಿಲ್ಲ. ಎದೆಯನ್ನು ಹಸನುಗೊಳಿಸಿ ನಳನಳಿಸ ಹಾಗೆ ಮಾಡೋದು ಮಳೆ ಮಾತ್ರ. ತನ್ನೆಲ್ಲಾ ಒಲವನ್ನು ಸುರಿಸುವ ಆಕಾಶ ಸುಮ್ಮನಾಗುತ್ತಿದ್ದಂತೆ ಒಮ್ಮೆ ಇಳೆಯನ್ನು ನೋಡಿ. ಪ್ರಸವಿಸಿ ಬೀಗುತ್ತಿರುತ್ತಾಳೆ. ಮಕ್ಕಳೋ ಚಿನ್ನಾಟವಾಡುತ್ತಾ ಇಡಿ ಪ್ರಕೃತಿಗೆ ಬಣ್ಣ ತುಂಬಿ ಮನೋಹರವಾಗಿಸಿರುತ್ತಾರೆ.

ಅಲ್ಲಿಯವರೆಗೂ ಹರಿದು ಹರಿದು ಬೇಜಾರಾದ ಹಳ್ಳ ತೊರೆಗಳು ಸೋಮಾರಿಯಾಗಿ ಮೆಲ್ಲಗೆ ನಡೆಯುತ್ತಲೋ, ಕೆಲವೊಮ್ಮೆ ಒಣಗಿ ನಿದ್ದೆ ಮಾಡುತ್ತಲೋ ಕಾಲ ಕಳೆಯುವ ವೇಳೆಗೆ ಬರುವ ವರ್ಷಧಾರೆ ಅವನ್ನು ಬಡಿದೆಬ್ಬಿಸುವ ಪರಿ ನೋಡುವುದೇ  ಚೆಂದ. ಮನುಷ್ಯನ ದೌರ್ಜನ್ಯಕ್ಕೆ ಬಸವಳಿದ ಸೊರಗಿದ ನದಿಗಳಂತೂ ಮಳೆಯ ಭೇಷರತ್ ಬೆಂಬಲ ಸಿಕ್ಕಿದ ಕೂಡಲೇ ಕೊಬ್ಬುವ ಸೊಗಸು, ಸಂಭ್ರಮದಿಂದ ಉಕ್ಕಿ ಹರಿಯುವ ಪರಿ, ನನಗ್ಯಾರು ಸಾಟಿ ಎಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ರಭಸ, ಇನಿಯನನ್ನು ಸೇರುವ ಉತ್ಸಾಹದಲ್ಲಿ ಕಡಲಕಡೆಗೆ ಧಾವಿಸುವ ವೇಗ, ಅದಕ್ಕೆ ಹಿಮ್ಮೇಳ ಕೊಡುವ ಗಾಳಿ, ತಲೆದೂಗಿ ಹಾರೈಸುವ ಗಿಡ ಮರಗಳು, ನಾನೂ ಬರ್ತೀನಿ ಅಂತ ರಚ್ಚೆ ಹಿಡಿದು ಹೊರಡುವ ಮಕ್ಕಳಂತೆ ಜೊತೆಗೆ ಸಾಗುವ ಅದೆಷ್ಟೋ ವಸ್ತುಗಳು... ನೋಡಲು ಕಣ್ಣು ಎರಡೇ ಕೊಟ್ಟನಲ್ಲ ಇವನೆಂಥಾ ಸ್ವಾರ್ಥಿ ಅಂತ ಜಿನುಗುವ ಮಳೆಯಲ್ಲಿ ಗೊಣಗುವ ಹಾಗೆ ಮಾಡುತ್ತೆ.

ಕೆಲವೊಮ್ಮೆ ಗಗನದ ಒಲವು ಭಯಂಕರ. ಒಂದು ಕ್ಷಣ ತಡೆದರೂ ಬದುಕೇ ಇಲ್ಲವೇನೋ ಎಂಬಂತೆ ಬರೆದಿರುವ ಅಷ್ಟೂ ಮೇಘ ಪತ್ರಗಳನ್ನು ಇಳೆಗೆ ಕಳಿಸುವ ಹಪಾಹಪಿಗೆ ಬೀಳುತ್ತದೆ. ಇವಳೋ ಅಷ್ಟನ್ನೂ ಮಡಿಲಲ್ಲಿ ಬಚ್ಚಿಟ್ಟುಕೊಳ್ಳುವೆ ಅಂತ ನಸುನಗು ಬೀರುತ್ತಾಳೆ. ಆಗ ಶುರುವಾಗುವ ಇವರಿಬ್ಬರ ಪ್ರೇಮ ಸಲ್ಲಾಪಕ್ಕೆ ಸುರಿಯವ ಮಳೆ ಸಾಥ್ ಕೊಡುತ್ತಾ ಅದೆಷ್ಟು ಮಗ್ನವಾಗುತ್ತದೆ ಎಂದರೆ ದಿನಗಟ್ಟಲೆ ಸುರಿದರೂ ಸುಸ್ತಾಗುವುದಿಲ್ಲ. ನಿಲ್ಲುವುದೂ ಇಲ್ಲ. ನಿಧಾನಕ್ಕೆ ಮೈ ತುಂಬಿಕೊಳ್ಳುವ ತೊರೆ, ಹಳ್ಳಗಳಿಗೂ ಮಿತಿಯನ್ನು ಮೀರುವ ತವಕ. ಉಕ್ಕುತ್ತಾ ಹರಡುತ್ತಾ ತನ್ನ ಸುತ್ತೆಲ್ಲವನ್ನೂ ಆವರಿಸುತ್ತಾ ಸಾಗುತ್ತಿದ್ದರೆ ಸಮೀಪದ ಗದ್ದೆ ಪಾತ್ರಗಳೆಲ್ಲಾ ನಾಚಿಕೆಯಿಂದ ಕೆಂಪಾಗಿ ರುದ್ರರಮಣಿಯ ಸೊಬಗನ್ನು ತುಂಬಿಕೊಂಡು ಕಂಗೊಳಿಸುತ್ತವೆ.

ಇಷ್ಟಕ್ಕೆ ನಿಲ್ಲೋಲ್ಲ ಇವರ ಆರ್ಭಟ. ತಣ್ಣಗೆ ಹಾವಿನಂತೆ ಮೈ ಚಾಚಿ ಮಲಗಿರುವ ರಸ್ತೆಗಳನ್ನೂ ಎದ್ದೆಳಿಸುವ ಹಂಬಲ. ಅವೋ ಹೊಟ್ಟೆ ತುಂಬಿಸಿಕೊಂಡ ಹೆಬ್ಬಾವಿನಂತೆ ನೀರನ್ನೇ ಹೊದ್ದು ಮಲಗಿ ಬಿಡುತ್ತದೆ. ಇಡಿ ಬದುಕೇ ಸ್ತಬ್ದವಾಗಿ, ಒಲವೇ ಉಸಿರಾಗಿ ಮಕ್ಕಳ ಕುಣಿದಾಟಕ್ಕೆ ಕಣ್ಣಾಗಿ , ಹೊಸತನಕ್ಕೆ, ನವಭಾವಕ್ಕೆ ತೆರೆದುಕೊಳ್ಳಲು ವೇದಿಕೆ ಸಿದ್ದವಾಗಿಬಿಡುತ್ತದೆ. ತುಂಬಿಸಿಕೊಳ್ಳುವ ಮನಸ್ಸು, ಆಸೆಬುರುಕತನ ನಮ್ಮಲ್ಲಿರಬೇಕು ಅಷ್ಟೇ.

ಅಕ್ಕಾ ಕಾಲೇಜ್ ಗೆ ರಜಾ ಕಣೆ. ರೋಡ್ ಬ್ಲಾಕ್ ಆಗಿದೆ ಅಂತ ಅಜ್ಜಿ ಮನೆಯಿಂದ ಫೋನ್ ಬರುತ್ತಿದ್ದ ಹಾಗೆ ನೋಟ್ ಪುಸ್ತಕ ಹರಿದು ದೋಣಿ ಮಾಡುವ ಮನಸ್ಸಾಗುತ್ತಿದೆ. ತೇಲಿಬಿಡುತ್ತಿದ್ದಿದ್ದು ದೋಣಿಯಾ ಇಲ್ಲಾ ಮನಸ್ಸಿನ ಭಾರವಾ ಅಂದು ಗೊತ್ತಿರಲಿಲ್ಲ. ಅದನ್ನು ಬಿಟ್ಟು ಅದು ಮುಂದೆ ಮುಂದೆ ಹೋಗುತ್ತಿದ್ದಂತೆ ನಿರಾಳವಾಗಿ ಕುಣಿದಾಡುತ್ತಿದ್ದದ್ದು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಹರಿಯುವ ರಭಸವನ್ನೇ ನೋಡುತ್ತಾ, ಕೈಯಲ್ಲೊಂದು ಛತ್ರಿ ಹಿಡಿದು ನದಿಯ ನೆರೆಯನ್ನೇ ಅಸ್ವಾದಿಸುತ್ತ, ಕೆಲವೊಮ್ಮೆ ಹೆದರುತ್ತಾ, ಹಲವೊಮ್ಮೆ ಇನ್ನಷ್ಟು ಏರಲಿ ಎಂದು ಕಾಯುತ್ತಾ ಅದರ ಜೊತೆ ಒಂದಾಗಿ ಹರಿಯುತ್ತಿದೇವೆ ಎಂದು ಭ್ರಮಿಸುತ್ತಾ ತನ್ನೊಂದಿಗೆ ನಮ್ಮ ದುಗುಡ, ನೋವುಗಳನ್ನೂ ಅರಿವಿಲ್ಲದೆ ಕೊಚ್ಚಿಕೊಂಡು ಹೋಗಿ ಹಗುರವಾಗಿಸುತ್ತಿದ್ದ ತುಂಗೆಯ ಮಡಿಲಲ್ಲಿ ಮತ್ತೊಮ್ಮೆ ಮೌನವಾಗಿ ಕೂರಬೇಕನಿಸುತ್ತಿದೆ.

ಒಣಗಿಸಿಟ್ಟ ಹಲಸಿನಬೀಜ, ಡಬ್ಬಿಯಲ್ಲಿಟ್ಟ ಹಲಸಿನ ಹಪ್ಪಳ ಮುರುವಿನ ಒಲೆಯ ಸಾಂಗತ್ಯಕ್ಕಾಗಿ ಹಾತೊರೆಯುತ್ತಿವೆ. ಬೇಯುವ ಹುರಳಿಯ ಘಮ ಕೈ ಬೀಸಿ ಕರೆಯುತ್ತಿವೆ. ನಾನೋ ಇಲ್ಲಿ  ಮೋಡಕಟ್ಟಿದ ಬಾನನ್ನೇ ದಿಟ್ಟಿಸುತ್ತ ಹನಿಯಲಾರದೆ ಕುಳಿತೇಇದ್ದೇನೆ.
 ಮಳೆ ಸುರಿಯುತ್ತಿದೆ ಅಲ್ಲಿ ಹೊರಗೆ ಇಲ್ಲಿ ಒಳಗೇ.... ಊಹೂಂ ಪ್ರಸವಿಸುವುದು ಅಷ್ಟು ಸುಲಭವಲ್ಲ.....

Comments

  1. ನನ್ನೂರಲ್ಲೂ ಭಾರೀ ಮಳೆಯಂತೆ... ❣️
    ಸುರಿವ ಆರ್ಭಟಕೆ ಬರಿ ಎಡೆಯೊಡ್ಡಿ ಕಾಲ ಎಷ್ಟಾಯಿತೋ... 😥

    ReplyDelete

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...