ಕಣ್ಣಿದ್ದೂ ಕುರುಡು

ಟಿ.ವಿ ಯಲ್ಲಿ ಯಾವುದೋ ಶೋ ನೋಡ್ತಾ ಇದ್ವಿ ನಾನು ಮತ್ತು ಅಹಿ. ಅಮ್ಮಾ ನಿಂದು ಯಾವ ಟೀಂ ಅಂದ್ಲು. ನಂದು ರೆಡ್ ಟೀಂ ಅಂತ ನೋಡಲು ಶುರುಮಾಡಿದಳು. ಗೆದ್ದಾಗ ಕುಣಿಯುತ್ತಾ, ಸೋತಾಗ ಬೇಜಾರು ಮಾಡಿಕೊಳ್ಳುತ್ತಾ, ಮುಖ ಸಣ್ಣಗೆ ಮಾಡುತ್ತಾ , ಸಲಹೆಗಳನ್ನು ಕೊಡುತ್ತಾ ಮಗ್ನಳಾಗಿದ್ದ ಅವಳನ್ನೇ ನೋಡುತಿದ್ದೆ.

ಬದುಕೇ ಹೀಗಾ... ನಾವು ಯಾವುದೋ ಒಂದರ ಜೊತೆಗೆ ಗುರುತಿಸಿಕೊಂಡು ಬಿಡುತ್ತೇವೆ. ಅವರು ಪರಿಚಯವಾ, ನಮಗೆ ಸಂಬಂದಿಸಿದ್ದಾ, ಅದರಿಂದ ಲಾಭವಾ, ನಷ್ಟವಾ, ಉಪಯೋಗವಾ ಉಹೂ ಯಾವುದನ್ನೂ ಯೋಚಿಸದೆ ನಮ್ಮನ್ನು ಹೀಗೆ ಕನೆಕ್ಟ್ ಮಾಡುವ ಆ ತಂತುವಾದರೂ ಯಾವುದು?

ಮೊನ್ನೆ ಹೀಗೆ ಸದ್ಗುರು ಮಾತು ಕೇಳ್ತಾ ಇದ್ದೆ. ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಅನ್ನೋದೇ ಇಲ್ಲಾ, ಇರುವುದನ್ನ ಇದ್ದ ಹಾಗೆ ನೋಡುವುದನ್ನು ಸ್ವೀಕರಿಸುವುದನ್ನು ಕಲಿಯಬೇಕು ಅಂತಿದ್ರು. ಮತ್ತದೇ ನೆನಪಾಯಿತು. ಮನುಷ್ಯನ ದೊಡ್ಡ ಬಲಹಿನತೆಯೇ ಇದಾ.. ಎಲ್ಲವನ್ನೂ ಪೂರ್ವಾಗ್ರಹದಿಂದ, ಅಥವಾ ಯಾವುದೋ ಒಂದರ ಜೊತೆ ಸಮೀಕರಿಸಿಕೊಂಡು ನೋಡುವುದು. ನೋಡುವ ನೋಟಕ್ಕೆ ಕನ್ನಡಕಗಳನ್ನು ಸಹಜವಾಗಿ ಹಾಕಿಬಿಟ್ಟಿದ್ದೇವಾ....

ಫೇಸ್ಬುಕ್ ನಲ್ಲಿ ನಡೆಯುವ ಇಬ್ಬರ ಜಗಳವೋ, ದ್ವೇಷವೋ, ವಿರೋಧವೋ ಏನೋ ಒಂದು ಸ್ಟೇಟಸ್ ಆದ ಕೂಡಲೇ  ಅಲ್ಲಿ ಪರ ವಿರೋಧಗಳ ಪ್ರವಾಹವೇ ಹರಿಯಲು ಆರಂಭವಾಗುತ್ತದೆ. ಅಸಲಿಗೆ ಏನು ನಡೆದಿದೆ ತಿಳಿಯುವ ತಾಳ್ಮೆ, ಅದನ್ನು ವಿಶ್ಲೇಷಿಸುವ ಆಸಕ್ತಿ ಯಾರಿಗೂ ಇಲ್ಲ. ಆದರೆ ಹಾಕಿದವರೊಂದಿಗೆ ನಮ್ಮ ಸಂಬಂಧ ಹೇಗಿದೆ ಅನ್ನೋದಷ್ಟೇ ಮುಖ್ಯ. ಅದೇ ನಮ್ಮ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಈ ಗುರುತಿಸಿಕೊಳ್ಳುವಿಕೆ ನಮ್ಮನ್ನು ಕಣ್ಣಿದ್ದೂ ಕುರುಡರನ್ನಾಗಿಸುತ್ತಿದೆಯೇ..

ಈ ಗುರುತಿಸಿಕೊಳ್ಳುವ ಕ್ರಿಯೆ (ಗೋಚರ) ಕಾರಣವಿಲ್ಲದೆ ಎಷ್ಟೋ ಸಂಗತಿಗಳನ್ನು ನಮ್ಮಿಂದ ದೂರ ಮಾಡಿದ ಹಾಗೆ ಇನ್ನಷ್ಟನ್ನು ಹತ್ತಿರಕ್ಕೆ ತರುತ್ತದೆ. ಆದರೆ ಇದ್ದಿದ್ದನ್ನು ಇದ್ದ ಹಾಗೆ ನೋಡುವ ನಮ್ಮ ಸಹಜ ನೋಟವನ್ನು ದುರ್ಬಲಗೊಳಿಸಿ ಅದಕ್ಕೊಂದು ಚಷ್ಮಾ ಹಾಕಿಬಿಡುತ್ತದೆ. ನೋಟಕ್ಕೆ ತಕ್ಕ ಹಾಗೆ ಭಾವ ನಮ್ಮ ಮನಸ್ಸಿನಲ್ಲಿ ಆ ವ್ಯಕ್ತಿಯ, ವಸ್ತುವಿನ, ವಿಷಯದ ಬಗ್ಗೆ ಒಂದು ಅಭಿಪ್ರಾಯವನ್ನು ರೂಪಿಸುತ್ತಾ ಹೋಗುತ್ತದೆ. ಮತ್ತು ಮುಂದಿನ ನಮ್ಮ ಭಾವ, ಕ್ರಿಯೆ ಎಲ್ಲವೂ ಆ ಅಭಿಪ್ರಾಯದ ಬುನಾದಿಯ ಮೇಲೆ ನಿರ್ಮಾಣವಾಗುತ್ತಾ ಹೋಗುತ್ತದೆ. ಹೀಗೆ ಕಣ್ಣಿದ್ದೂ ಕುರುಡರಾಗುವ ನಮ್ಮ ಕೆಲಸವೂ...

ಇದನ್ನೇ ಕೃಷ್ಣ ಹೇಳಿದ್ದಾ.. ವ್ಯಾಮೋಹದಿಂದ ಮಾಯೆಯಿಂದ ಹೊರಬಂದಾಗ ಅಲ್ಲಿ ಯಾವುದೇ ಭಾವ ವಿಕಾರವಿಲ್ಲ ಅಂತ. ಅಹಂ ಬ್ರಹ್ಮಾಸ್ಮಿ ಅನ್ನೋದೂ ಇದಕ್ಕೇನಾ.. ಯಾವುದೋ ಒಂದರ ಜೊತೆ ಸಮೀಕರಿಸಿಕೊಂಡಾಗ ಮಾತ್ರ ರಾಗ ದ್ವೇಷಗಳು. ಅದಿಲ್ಲದೆ ಹೋದರೆ ದ್ವೆಷಿಸುವುದಾದರೂ ಯಾವುದನ್ನ, ಯಾರನ್ನ... ಪ್ರತಿಯೊಂದು ಇದ್ದದ್ದನ್ನ ಇದ್ದ ಹಾಗೆ ಸ್ವೀಕರಿಸಿದಾಗ ನಿರೀಕ್ಷೆಗಳು ಇಲ್ಲದಾಗ ನೋವು ಉಂಟಾಗುವುದಾದರೂ ಹೇಗೆ.. ಪ್ರತಿಯೊಂದರ ಬಗ್ಗೆ ನಮ್ಮ ನಿರೀಕ್ಷೆಗಳು ಈಡೇರದಿದ್ದಾಗ ಮಾತ್ರ ಭಾವಾವೇಗಗಳಷ್ಟೇ.. ಇವೆಲ್ಲ ಇಲ್ಲವಾಗಬೇಕಾದರೆ ನೋಡುವ ನೋಟ ಸರಿಯಾಗಬೇಕು ಶುದ್ಧವಾಗಬೇಕು..

ಪ್ರತಿಯೊಂದರ ಜೊತೆ ನಮ್ಮನ್ನು ಬೆಸೆಯುವ ಇಲ್ಲಾ ಪ್ರತಿರೋಧಿಸುವ ಸಂಗತಿ ಯಾವುದು ಅನ್ನೋದು ಇನ್ನೂ ಅರ್ಥವಾಗಿಲ್ಲ. ಆದರೆ ನೋಡುವ ನೋಟಕ್ಕೆ ಕನ್ನಡಕದ ರಕ್ಷಣೆಯಿದೆ ಅನ್ನೋದು ಮಾತ್ರ ಸತ್ಯ. ಕಣ್ಣಿದ್ದೂ ಕುರುಡರಾಗೋದು ಮನುಷ್ಯರಿಗೆ ಮಾತ್ರ ಇರುವ ಬಲವೋ ಬಲಹೀನತೆಯೋ?  ಅದನ್ನು ತೆಗೆಯುವುದೇ ಇವೆಲ್ಲಾ ಗೊಂದಲಗಳಿಗೆ, ಪ್ರಶ್ನೆಗಳಿಗೆ ಇರುವ ಉತ್ತರ. ಕಣ್ಣಿಗೆ ಹಾಕಿದ ಕನ್ನಡಕ ತೆಗೆಯಬಹುದು ಆದರೆ ಮನಸ್ಸಿಗೆ ಹಾಕಿದ್ದು...
ಅಸಲಿಗೆ ಅಲ್ಲಿರುವ ಕನ್ನಡಕದ ಬಣ್ಣ, ಬ್ರಾಂಡ್ ಯಾವುದು ಅಂತ ಮೊದಲು ಅರಿತುಕೊಳ್ಳಬೇಕು, ಆದಷ್ಟು ಸುಲಭವೇ...

ಸುಲಭಕ್ಕೆ ಇಲ್ಲಿ ಯಾವುದೂ ದಕ್ಕುವುದಿಲ್ಲ...


Comments

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...