ನಾಗರ ಪಂಚಮಿ.

ನಾಗರಪಂಚಮಿಯೆಂದರೆ ಹಬ್ಬಗಳ ಸಾಲಿನ ಹೆಬ್ಬಾಗಿಲು. ಆಚರಣೆ, ಪದ್ದತಿಯಲ್ಲಿ ಏನೇ  ವೈವಿಧ್ಯತೆ ಇದ್ದರೂ ನಾಗರ ಪಂಚಮಿ ನಾಡಿಗೆ ಹಬ್ಬ. ಕೃಷಿಪ್ರಧಾನವಾಗಿದ್ದ ದೇಶದಲ್ಲೇ ಅದೇ ಭೂಮಿಯಲ್ಲಿ ವಾಸಿಸುವ ನಾಗರಾಜನಿಗೆ ನಮಿಸುವ, ಅರಿಯದೆ ನಡೆದ ಅಪಚಾರಕ್ಕಾಗಿ ಕ್ಷಮೆ ಕೇಳುವ ಅವಕಾಶ. ಮದುವೆ ಮಾಡಿ ಕಳಿಸಿಕೊಟ್ಟ ಕರುಳಬಳ್ಳಿಯನ್ನು ಕರೆದು ತಂದು ಆರೈಕೆ ಮಾಡಿ ಬಂಧವನ್ನು ಚಿಗುರಿಸುವ, ಒಣಗದಂತೆ ಕಾಪಾಡಿಕೊಳ್ಳುವ ಸಮಯ. ಈ ನೆಲದ ವೈಶಿಷ್ಟ್ಯವೇ ಅದು. ಪ್ರತಿಯೊಂದು ಹಬ್ಬವೂ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸುವ, ಹಸಿರಿನಿಂದ ನಳನಳಿಸೋ ಹಾಗೆ ಮಾಡುವ ಪ್ರಕ್ರಿಯೆ.

ಜನಮೇಜಯ ತನ್ನ ತಂದೆಯ ಸಾವಿನಿಂದ ಕ್ರುದ್ಧನಾಗಿ ಸರ್ಪಯಾಗ ಮಾಡಿ ಅವುಗಳನ್ನು ನಾಶಮಾಡುವ ಸಂಕಲ್ಪ ಮಾಡುವಾಗ ಆಸ್ತಿಕ ಅವನನ್ನು ಪ್ರಾರ್ಥಿಸಿ ಯಾಗವನ್ನು ನಿಲ್ಲಿಸಲು ಕೇಳಿದ್ದು ಇದೇ ದಿನವೆಂದು, ಯಮುನೆಯ ಮಡುವಿನಲ್ಲಿ ಕುಳಿತು ಅದನ್ನು ವಿಷಯುಕ್ತವಾಗಿಸಿ ತೊಂದರೆ ಕೊಡುತಿದ್ದ ಕಾಳಿಯನನ್ನು ಶ್ರೀ ಕೃಷ್ಣ ಮರ್ದಿಸಿದ್ದು ಇದೇ ದಿನವೆಂದು ಪುರಾಣಗಳ ಹಿನ್ನಲೆ. ಭೂಮಿಯನ್ನು ಆದಿ ಶೇಷ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಹಾಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು ಅನ್ನೋದು ಇನ್ನೊಂದು ನಂಬಿಕೆ. ಶಿವ ಕೊರಳಲ್ಲಿ, ವಿಷ್ಣು ಹಾಸಿಗೆಯಾಗಿ, ಗಣಪತಿ ಹೊಟ್ಟೆಗೆ ಕಟ್ಟಿಕೊಂಡು ಹೀಗೆ ದೇವರಿಗೂ ಶೇಷ ಅತಿ ಪ್ರಿಯ. ಇನ್ನು ತಂಗಿಯ ಮೇಲೆ ಅಸೂಯೆಗೊಂಡು ಅವಳನ್ನು ಕೊಲ್ಲಲು ಯತ್ನಿಸಿದ ಅಣ್ಣಂದಿರನ್ನು ನಾಗನನ್ನು ಪ್ರಾರ್ಥಿಸುವುದರ ಮೂಲಕ ಉಳಿಸಿಕೊಂಡಳು ಹಾಗಾಗಿ ಇದು ಅಣ್ಣ ತಂಗಿಯರ ಹಬ್ಬ ಅನ್ನೋದು ಜನಪದ ನಂಬಿಕೆ.

ಚೌತಿಯಂದು ಶುರುವಾಗುವ ಸಂಭ್ರಮ ಇದು. ಅಂದು ಹೆಣ್ಮಕ್ಕಳು ಉಪವಾಸವಿದ್ದು ನಾಗಬನಕ್ಕೆ ತೆರಳಿ ತನಿ ಎರೆದು ಅವನನ್ನು ತಂಪಾಗಿಸುವ ಮೂಲಕ ತವರು ತಂಪಾಗಿರಲಿ ಎಂದು ಬೇಡಿಕೊಂಡು, ಫಲ, ಪತ್ರೆ ಗೆಜ್ಜೆವಸ್ತ್ರಗಳಿಂದ ಅಲಂಕರಿಸಿ ಪೂಜೆಮಾಡುತ್ತಾರೆ. ತವರಿನ ಮೋಹ ಹೆಣ್ಣನ್ನು ಎಂದೂ ಬಿಡುವುದಿಲ್ಲ.  ಹಾವನ್ನ ಬೆನ್ನ ಹುರಿಗೆ ಹೋಲಿಕೆ ಮಾಡ್ತಾರೆ. ಬೆನ್ನಹುರಿ ಗಟ್ಟಿಯಿದ್ದಾಗ ಮಾತ್ರ ಬದುಕು ನೇರ. ಹಾಗಾಗಿ ತನಿಯೆರೆದು ಬಂದು ಅದನ್ನು ಅಣ್ಣ, ತಮ್ಮಂದಿರ ಬೆನ್ನಿಗೆ ಹಚ್ಚಿ ಬದುಕು ಗಟ್ಟಿಯಾಗಿರಲಿ, ದೃಢವಾಗಿರಲಿ ಎಂದು ಹಾರೈಸುತ್ತಾರೆ. ತವರೆಂದರೆ ಹಾಗೆ ಪ್ರತಿ ಹೆಣ್ಣಿನ ಉಸಿರು. ಅದು ನಳನಳಿಸಲಿ ಅನ್ನೋದು ಅವಳ ಕನಸು.

ಪಂಚಮಿಯಂದು ಮನೆಯ ಮುಂದೆ ಸಾರಿಸಿ, ರಂಗವಲ್ಲಿ ಇಟ್ಟು ಬಾಗಿಲಿನ ಎದುರು ನಾಗರಾಜ ಒಳಗೆ ಬರುವ ಚಿತ್ರ ಬರೆದು ಅವನನ್ನು ಸ್ವಾಗತಿಸಲಾಗುತ್ತದೆ. ಅಥಿತಿ ಸತ್ಕಾರಕ್ಕೆ ಅಡುಗೆಮನೆಯಲ್ಲಿ ಗಡಿಬಿಡಿಯ ಸಂಭ್ರಮ. ಅವತ್ತು ಮನೆಯಲ್ಲಿ ಘಾಟು ನಿಷಿದ್ಧ. ಒಗ್ಗರಣೆ, ಎಣ್ಣೆಯಲ್ಲಿ ಕರಿಯುವ ತಿಂಡಿ ಮಾಡುವ ಹಾಗಿಲ್ಲ. ಎಲ್ಲವೂ ಮೃದುವಾಗಿರಬೇಕು.  ನಾಗನಿಗೋ ಮಡಿ ಅತಿ ಪ್ರೀತಿ. ಹಾಗಾಗಿ ಪ್ರತಿಯೊಂದು ಕಟ್ಟೆಚ್ಚರದಲ್ಲೇ ಸಾಗುತ್ತದೆ. ಎಳ್ಳುಂಡೆ, ಪಾಯಸ, ತಂಬಿಟ್ಟು, ನೆಲಗಡಲೆ ಉಂಡೆ, ಅರಿಸಿನದ ಎಲೆಯ ಮೃದು ಕಡುಬು  ಹೀಗೆ ಬಗೆಬಗೆಯ ತಯಾರಿ. ತನಿ ಎರೆಯಲು ಹಸುವಿನ ಹಾಲೇ ಶ್ರೇಷ್ಠ. ಅದು ಕಾಯಿಸದ ಆಗಷ್ಟೇ ಕರೆತಂದ ತಂಬಾಲು ಅವನಿಗೆ ಬಲುಪ್ರೀತಿ. ಎಲ್ಲವನ್ನೂ ತಯಾರಿಸಿ ಹಣ್ಣು ಕಾಯಿ ತಟ್ಟೆಯಲ್ಲಿ ಜೋಡಿಸಿಡುವ ವೇಳೆಗೆ ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ಬಂದು ನಾಗಬನಕ್ಕೆ ಹೊರಡಲು ತಯಾರಾಗುತ್ತಾನೆ.


ಕಾಡು ಕಡಿದು ನಾಡು ಮಾಡಲು, ವ್ಯವಸಾಯ ಮಾಡಲು ಹೊರಟಾಗ ಜೀವ ಹಾಗೂ ನೆಲೆ ಕಳೆದುಕೊಳ್ಳುವ ಜೀವಿಗಳಲ್ಲಿ ಹಾವುಗಳದ್ದು ಪ್ರಮುಖ ಸ್ಥಾನ.  ಹಾಗಾಗಿ ಅಲ್ಲಿ ವಾಸಿಸುವ ನಾಗಸಂತತಿಗಾಗಿ ಒಂದಷ್ಟು ಜಾಗವನ್ನು ಬಿಟ್ಟು ಅದರ ಪವಿತ್ರತೆ ಕಾಪಾಡುವ ಸಲುವಾಗಿ ಅಲ್ಲೊಂದು ನಾಗನಕಲ್ಲು ಪ್ರತಿಷ್ಟಾಪನೆ ಮಾಡಿ ಅದನ್ನೊಂದು ಪೂಜ್ಯ ಸ್ಥಾನವಾಗಿ ಮಾಡುತ್ತಿದ್ದರು. ಅಲ್ಲಿ ಕಾಡು ಕಡಿಯುವುದು, ಇನ್ನೇನೋ ಮಾಡುವುದು ನಿಷಿದ್ದ. ಹತ್ತಿರ ಸುಳಿಯಲೂ ಬಾರದು ಅನ್ನೋ ಕಟ್ಟಪ್ಪಣೆ. ಅವುಗಳ ಬದುಕಿನ ನೆಮ್ಮದಿಗೆ ಭಂಗಬಾರದಂತೆ ಇವೆಲ್ಲಾ ಮುನ್ನೆಚರಿಕೆ ತೆಗೆದುಕೊಂಡು ತನ್ನ ಬದುಕಿಗಾಗಿ ಜಾಗ ಕೊಟ್ಟ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವರ್ಷಕ್ಕೊಮ್ಮೆ ಅವುಗಳಿಗೆ ಪೂಜೆ ಸಲ್ಲಿಸಿ ಧನ್ಯವಾದ ಸಮರ್ಪಣೆ ಮಾಡುತ್ತಿದ್ದ. ಹೀಗಾಗಿ ಅವುಗಳಿಗೆ ನೆಮ್ಮದಿಯ ತಾವು, ಒಂದಿಷ್ಟು ಹಸಿರಿನ ರಕ್ಷಣೆಯ ಜೊತೆಜೊತೆಗೇ ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು.

ಪೂಜೆ ಮುಗಿಸಿ ಬಂದ ಮೇಲೆ ಊಟ.  ಮರುದಿನ ಅದು ಹೊರಗೆ ಹೋಗುವ ರಂಗವಲ್ಲಿ ಬಿಡಿಸುತ್ತಾರೆ. ಬಂದ ಅತಿಥಿ ಸಂತೃಪ್ತಿಯಾಗಿ ಹೊರಡಲಿ, ಆಶೀರ್ವಾದ ಜೊತೆಗಿರಲಿ ಅನ್ನೋ ಭಾವ. ಈ ಅತಿಥಿಯನ್ನು ಸುಧಾರಿಸುವುದು ಅಷ್ಟು ಸುಲಭವಲ್ಲ.ಹಾಗಾಗಿ ಬಿಳ್ಕೊಟ್ಟ ಮೇಲೆ ಒಂದು ನಿರಾಳತೆಯ ಉಸಿರು. ಪೂಜೆ, ಪ್ರಸಾದ, ಊಟದ ಸಂಭ್ರಮಗಳೆಲ್ಲಾ ಮುಗಿದ ಮೇಲೆ ಮಾವಿನಮರಕ್ಕೋ, ಹಲಸಿನ ಮರಕ್ಕೋ ಕಟ್ಟಿದ ಉಯ್ಯಾಲೆ ಜೀಕುವ ಸಡಗರ. ಎತ್ತರೆತ್ತರಕ್ಕೆ ಏರುವ ಹಂಬಲ, ಪ್ರಯತ್ನಗಳ ಜೊತೆಜೊತೆಗೆ ಅಲ್ಲೊಂದು ಆರೋಗ್ಯಕರ ಸ್ಪರ್ಧೆ ಕೂಡಾ. ಏರುವುದು ನಿಲ್ಲಿಸಬಾರದು ಅನ್ನೋದು ನಾಗರಾಜ ಸೂಚ್ಯವಾಗಿ ತಿಳಿಸಿಹೋಗುತ್ತಿದ್ದ ಹಾಗೆ ಚಲಿಸುವುದು ನಿಲ್ಲಬೇಡವೆಂದು ತನ್ನದೇ ಉದಾಹರಣೆಯ ಮೂಲಕ ತಿಳಿಸುತ್ತಿದ್ದ.

ಬದುಕಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ವಿಷವೆಂಬ ಆಯುಧ ಎಷ್ಟು ಮುಖ್ಯವೋ , ಹಾಗೆಯೇ ಅವಮಾನ ಸೋಲನ್ನು ಉಸಿರಾಗಿಸಿಕೊಂಡು ಬೆಳೆದು ಅದನ್ನು ಮೀರಿ ನಿಲ್ಲುವ ಛಲ, ಹಠವೂ ಮುಖ್ಯ ಎಂದು  ಹೋಗುವ ಮುನ್ನ ನಾಗರಾಜ  ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಿದ್ದ. ದ್ವೇಷದ ತೀವ್ರತೆಯನ್ನು, ಸಮಯ ಕಾದು ಪಸಿಗಟ್ಟಿ ತೀರಿಸಿಕೊಳ್ಳುವ ಛಲವನ್ನು ನಾಗರ ಹಾವಿಗೆ ಹೋಲಿಸುತ್ತಾರೆ. ಯಾವ ಅವಮಾನವೂ ಹುಸಿಯಾಗಿ ಹೋಗಬಾರದು. ತುಳಿಸಿಕೊಂಡು ಬದುಕಬಾರದು. ಪ್ರತಿಯೊಬ್ಬರಲ್ಲೂ ಸಾಧಿಸುವ ಗುಣ ಇದ್ದೆ ಇರುತ್ತದೆ. ಪ್ರಯತ್ನ ಮಾಡಬೇಕು ಅಷ್ಟೇ.

ಆದರೆ  ತನ್ನ ಪಾಡಿಗೆ ತಾನು ಬದುಕುವುದು ಸುಲಭವಲ್ಲ ಎಂದು ಹೇಳುತ್ತಲೇ ಸಾದ್ಯ ಅನ್ನೋದನ್ನೂ ನಾಗರಾಜ  ಉಸುರುತ್ತಿದ್ದ. ಸಹಾಯ ಮಾಡಿದವರನ್ನು, ಬದುಕಲು ಬಿಟ್ಟವರನ್ನು ಆಗಾಗ ನೆನಪಿಸಿಕೊಳ್ಳುವುದನ್ನು ಮರೆಯಬೇಡಾ ಎನ್ನುತ್ತಲೇ ಋಣ ತೀರಿಸಿಕೊಳ್ಳುವ ದಾರಿಯನ್ನು ತೋರಿಸಿ ಹಗುರಾಗಲು ಸಹಾಯ ಮಾಡುತ್ತಿದ್ದ. ಕಚ್ಚಲೇ ಬೇಕು ಅಂತೇನಿಲ್ಲ ಆದರೆ ಬುಸುಗುಡುವುದು ಮಾತ್ರ ಮರೆಯಬೇಡ ಎನ್ನುತ್ತಿದ್ದ. ಮನಮೋಹಕ ರೂಪ, ಚುರುಕುತನ ಇದ್ದರೂ ಬದುಕಲು ಚೂರು ನಿರ್ದಯತೆಯೂ ಬೇಕು ಅನ್ನೋದನ್ನ ದವಡೆಯ ವಿಷದ ಮೂಲಕ ಪಿಸುಗುಡುತ್ತಿದ್ದ. ಯಾರದೇ ಅತಿಕ್ರಮ ಪ್ರವೇಶವನ್ನು ಒಪ್ಪಿಕೊಳ್ಳಬೇಡ ಎಂದು ಉಸುರುತಿದ್ದ.  ಯಾವುದೇ ಆದರೂ ಕಳಚಿಕೊಳ್ಳುವ ಸಮಯ ಬಂದಾಗ ನಿರ್ಲಿಪ್ತತೆಯಿಂದ ಕಳಚಿಕೊಳ್ಳ ಬೇಕು ಅನ್ನೋದನ್ನ ಪೊರೆ ಕಳಚಿ ಹೋಗುವಾಗ ಹೇಳುತಿದ್ದ.

ಈ ನೆಲದ ಪ್ರತಿ ಹಬ್ಬಕ್ಕೂ ತನ್ನದೇ ಆದ ಹಿನ್ನಲೆಯಿದೆ. ಪ್ರಕೃತಿಗೆ ನಮಿಸಿ ತಲೆಬಾಗಿ ಕೃತಜ್ಞತೆ ಸಲ್ಲಿಸುವ ಪ್ರಕ್ರಿಯೆ ಹಾಸು ಹೊಕ್ಕಾಗಿದೆ. ಈ ನೆಲದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ ಅನ್ನೋದು ತಿಳಿಸುವುದರ ಜೊತೆಗೆ ಹೊಂದಿಕೊಂಡು ಹೇಗೆ ಬೆಳೆಯಬೇಕು ಅನ್ನುವ ಪಾಠವಿದೆ.ಹಾಗಾಗಿ ಪ್ರತಿ ಹಬ್ಬವೂ ಮನುಷ್ಯನ ಬೆಳವಣಿಗೆ ಪೂರಕ. ಬೇಸತ್ತ ಬದುಕಿನ ಬೆಳಕು. ಹಸಿರಾಗಿಸುವ ಮಳೆಹನಿ. ಸಂಬಂಧಗಳನ್ನು ಬೆಸೆಯುವ ಮಾಯಾವಿ. ನಾಗರಾಜ ಚಲಿಸುವ ಬದುಕಿನ ಮುನ್ನುಡಿ. ಹಾಗೂ ನಮ್ಮನ್ನು ನಾವು ನೋಡಿಕೊಳ್ಳಬೇಕಾದ ಕನ್ನಡಿ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...